ಕನ್ನಡ ಕಡೆಗಣನೆ: ರಾಜ್ಯದ ಪಾಲೂ ಇದೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಗ್ರಾಮ ಆಡಳಿತ ಅಧಿಕಾರಿಗಳ ‘ಸಿ’ ಗುಂಪಿನ ಪರೀಕ್ಷೆಯಲ್ಲಿ ಸಂವಹನಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ 35 ಪ್ರಶ್ನೆಗಳು ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ್ದವು. ಇದು ನೇರವಾಗಿ ಇಂಗ್ಲಿಷ್ ಮಾಧ್ಯಮವನ್ನು ಬೆಂಬಲಿಸಿದೆ. ಇದೇನು ಇಂಗ್ಲಿಷ್ ಭಾಷಾ ಶಿಕ್ಷಕರ ನೇಮಕವಲ್ಲ. ಕನ್ನಡವನ್ನು, ಕನ್ನಡ ಮಾಧ್ಯಮವನ್ನು ಉಳಿಸಿ ಬೆಳೆಸುವ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತೇವೆ. ಆದರೆ ಬೇವನ್ನು ಬಿತ್ತಿ ಮಾವನ್ನು ಬಯಸಿದರೆ ಅದು ಸಾಧ್ಯವಾಗುವುದಿಲ್ಲ.
ಒಕ್ಕೂಟ ಭಾರತ ನಡೆಸುವ ಎಲ್ಲಾ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಹಿಂದಿಯಲ್ಲಿ ನಡೆಸುವಂತೆ ಕನ್ನಡದಲ್ಲಿಯೂ ನಡೆಸಬೇಕು ಎಂದು ಕನ್ನಡಿಗರು ಹಲವಾರು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಯಶಸ್ಸು ಇನ್ನೂ ಸಿಕ್ಕಿಲ್ಲ. ಹೀಗೆ ಕನ್ನಡಿಗರ ಮೇಲೆ ಒಕ್ಕೂಟ ಭಾರತವು ಹಿಂದಿ ಹೇರಿಕೆಯ ಮೂಲಕ ಬೆನ್ನಿನ ಮೇಲೆ ಹೊಡೆದರೆ, ಕರ್ನಾಟಕ ಸರ್ಕಾರ ಎದೆಗೇ ಹೊಡೆದಂತಿದೆ.
ಗಿರೀಶ್ ಮತ್ತೇರ, ಹೊದಿಗೆರೆ, ಚನ್ನಗಿರಿ
ಚಿತ್ರ ಪ್ರದರ್ಶನ ತಪ್ಪಲ್ಲ, ಆದರೆ...
ಗೋವಾದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಇಫಿ) ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಉದ್ಘಾಟನಾ ಚಿತ್ರವಾಗಿ ಇರಲಿದೆ ಎಂಬ ಸುದ್ದಿ (ಪ್ರ.ವಾ., ಅ. 27) ಓದಿ ತುಸು ಆಶ್ಚರ್ಯ
ವಾಯಿತು. ಇಫಿಯಲ್ಲಿ ಓಪನಿಂಗ್ ಮತ್ತು ಕ್ಲೋಸಿಂಗ್ ಚಿತ್ರಗಳಿರುತ್ತವೆ (ಕೆಲವೊಮ್ಮೆ ಮಿಡ್ ಫೆಸ್ಟ್ ಫಿಲ್ಮ್ ಕೂಡ). ಸಾವರ್ಕರ್ ಅವರ ಕುರಿತ ಚಿತ್ರವು ಇಂಡಿಯನ್ ಪನೋರಮಾ ವಿಭಾಗದ ಮೊದಲ ಚಿತ್ರ ಆಗಿರಬಹುದು. ಈ ವಿಭಾಗದ ಆಯ್ಕೆ ಸಮಿತಿ ಅಧ್ಯಕ್ಷರು ‘ಚಾಣಕ್ಯ’ ಟಿ.ವಿ. ಧಾರಾವಾಹಿಗಾಗಿ ಹೆಸರು ಪಡೆದವರು.
ವ್ಯಕ್ತಿಯಾಗಿ ವಿನಾಯಕ ದಾಮೋದರ ಸಾವರ್ಕರ್ ಈಗ ವಿವಾದಾಸ್ಪದ. ತೀವ್ರ ಸೆಕ್ಯುಲಿಸ್ಟರು ಅವರನ್ನು ಕಟುವಾಗಿ ಟೀಕಿಸುತ್ತಾರೆ. ಸಂಘ ಪರಿವಾರದವರು ಹಾಡಿ ಹೊಗಳುತ್ತಾರೆ. ಅವರ ಕಾರ್ಯ ಒಂದು ಹಂತದವರೆಗೆ ಸರಿ ಎನ್ನುವ ವರ್ಗವೂ ಇದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವವೊಂದರಲ್ಲಿ ಅದರ ಪ್ರದರ್ಶನ ಏರ್ಪಡಿಸುವುದು ತಪ್ಪಲ್ಲ (ಚಿತ್ರವು ವಾಣಿಜ್ಯದ ದೃಷ್ಟಿಯಿಂದಲೂ ಯಶಸ್ವಿಯಾಗಿದೆ). ಆದರೆ ಕೊಟ್ಟಿರುವ ಮಹತ್ವಕ್ಕೆ ಯಾರು ಕಾರಣ?
ಪನೋರಮಾ ಚಿತ್ರಗಳು ವಿವಿಧ ಭಾರತೀಯ ಭಾಷೆಗಳಲ್ಲಿ ತಯಾರಾದ ಉತ್ಕೃಷ್ಟ, ಪ್ರಾತಿನಿಧಿಕ ಚಿತ್ರಗಳಾಗಿದ್ದರೆ ಬೇರೆ ದೇಶದ ಪ್ರತಿನಿಧಿಗಳೂ ನೋಡುತ್ತಾರೆ. ಪ್ರಸ್ತುತ ಅಧಿಕಾರದಲ್ಲಿರುವವರ ಮೇರು ಆಸಕ್ತಿಯನ್ನಷ್ಟೇ ಬಿಂಬಿಸುವ ಚಿತ್ರಗಳನ್ನು ಅವರು ಅನುಮಾನದಿಂದ ನೋಡಲೂಬಹುದು. ‘...ಸಾವರ್ಕರ್’ ಚಿತ್ರವನ್ನು ನಿರ್ದೇಶಿಸಿ ನಟಿಸಿರುವ ರಣದೀಪ್ ಹೂಡಾ ಉತ್ತಮ ನಟರಿರಬಹುದು, ಆದರೆ ‘ಪ್ರಭಾವ’ ವಲಯ ಅವರಿಗೆ ಅಪಕೀರ್ತಿ ತರಬಹುದು. ಕಲಾವಿದರು ಕಲಾವಿದರಾಗೇ ಉಳಿದರೆ ಒಳ್ಳೆಯದು.
ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಇ– ಆಸ್ತಿ ಸೇರ್ಪಡೆ: ಪ್ರಕ್ರಿಯೆ ಸರಳವಾಗಲಿ
ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಅನೇಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಇತ್ತೀಚಿನ ಇ– ಖಾತೆ ಸಹ ಒಂದು. ಆದರೆ ಇ– ಆಸ್ತಿ ಪೋರ್ಟಲ್‌ನ ಪಟ್ಟಿಯಲ್ಲಿ ಇನ್ನೂ ಲಕ್ಷಾಂತರ ಆಸ್ತಿಗಳು ಸೇರ್ಪಡೆ ಆಗಬೇಕಾಗಿದೆ. ಪಟ್ಟಿಯಲ್ಲಿರುವ ಆಸ್ತಿಗಳಿಗೆ ಇ– ಖಾತೆಯಡಿ ಅರ್ಜಿ ಹಾಕಲು ಆನ್‌ಲೈನ್‌ನಲ್ಲಿ ಕಾರ್ಯವಿಧಾನ ಸರಳವಾಗಿಲ್ಲ. ಆದ್ದರಿಂದ ಬಹಳಷ್ಟು ಜನ ಈ ಸೌಲಭ್ಯವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ತಾಂತ್ರಿಕ ಜ್ಞಾನ ಇರುವವರು ಸಹ ಸೈಬರ್ ಕೆಫೆ ಅಥವಾ ಬೆಂಗಳೂರು ಒನ್‌ನಂತಹ ಕೇಂದ್ರಗಳಿಗೆ ಭೇಟಿ ನೀಡಿ ದಿನಗಟ್ಟಲೆ ಸಮಯ ವ್ಯಯಿಸಬೇಕಾಗುತ್ತದೆ. ಹೀಗಾಗಿ, ಈ ಸೌಲಭ್ಯವನ್ನು ಖಾತೆಯ ಪಿಐಡಿ ಸಂಖ್ಯೆ, ಇಪಿಐಡಿ ಸಂಖ್ಯೆ ಅಥವಾ ಎಸ್‌ಎಎಸ್ ಸಂಖ್ಯೆಯನ್ನು ನಮೂದಿಸಿದರೆ ಎಲ್ಲಾ ವಿವರಗಳು ಸ್ವಯಂ ಭರ್ತಿಯಾಗುವಂತೆ ಮಾಡಬೇಕು. ಆಗ ಹೆಚ್ಚಿನ ಜನ ಕಡಿಮೆ ಅವಧಿಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು. ಅನೇಕ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಸಂಕೀರ್ಣವಾದ ಪ್ರಕ್ರಿಯೆ.
ಇ– ಖಾತೆಗೆ ಅರ್ಜಿ ಹಾಕಲು ಇ.ಸಿ. ಕಡ್ಡಾಯವಲ್ಲ ಎಂದು ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಆದರೆ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಿಲ್ಲದಿರುವುದರಿಂದ ಇದರ ಪ್ರಯೋಜನ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಸರ್ಕಾರ ಹೇಗೆ ಕಾಲಮಿತಿಯಲ್ಲಿ ಸಾರ್ವಜನಿಕರು ಕಾನೂನು ಪರಿಪಾಲನೆ ಮಾಡಬೇಕೆಂದು ಬಯಸುತ್ತದೆಯೋ, ಅದೇ ರೀತಿ ಸಾರ್ವಜನಿಕರು ಸಹ ಕನಿಷ್ಠ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕೆಂದು ಸರ್ಕಾರದಿಂದ
ಬಯಸುತ್ತಾರೆ.
⇒ಟಿ.ವಿ.ಬಿ.ರಾಜನ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.