ಭಾಷೆಯಿಂದಾಗುವ ಅನುಕೂಲ ಮನದಟ್ಟು ಮಾಡಲಿ
‘ಸಂಸ್ಕೃತ ಕಲಿತವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು’ ಎಂದು ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇತ್ತೀಚೆಗೆ ಹೇಳಿರುವುದಾಗಿ ವರದಿಯಾಗಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಬಹಳ ಸರಳವಾಗಿ ‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಜನರಲ್ಲಿ ಅರಿವು ಮೂಡಿಸಿದ್ದರು.‘ಸ್ವರ್ಗ, ನರಕವೆಲ್ಲ ಮೇಲಿಲ್ಲ ಕೇಳು ಜನಕ, ಇಲ್ಲೇ ಕಾಣಬೇಕು, ಉಸಿರಿರೋ ಕೊನೇತನಕ’ ಎಂದು ಜನಪದರು ಇನ್ನಷ್ಟು ಸರಳವಾಗಿ ಹಾಡಿದರು. ಆದರೆ, 21ನೇ ಶತಮಾನದ ಈ ಆಧುನಿಕ ಕಾಲಘಟ್ಟದಲ್ಲಿ ಹಲವರು ಭಾಷೆಯ ಹೆಸರಿನಲ್ಲಿ ಸ್ವರ್ಗ, ನರಕವನ್ನು ಸೃಷ್ಟಿಸಿ, ಜನರಲ್ಲಿ ಭಯಭೀತಿ ಮೂಡಿಸಿ ಮೌಢ್ಯವನ್ನು ಬಿತ್ತಲು ಯತ್ನಿಸುತ್ತಿದ್ದಾರೆ ಎನಿಸುತ್ತದೆ.
ಅವರಿಗೆ ಸಂಸ್ಕೃತದ ಬಗ್ಗೆ ಅಷ್ಟೊಂದು ಒಲವಿದ್ದರೆ, ಅದನ್ನು ಕಲಿತರೆ ದೊರಕಬಹುದಾದ ಅನುಕೂಲಗಳನ್ನು
ಜನರಿಗೆ ಮನದಟ್ಟು ಮಾಡಿಕೊಡಲಿ. ಅದರಿಂದ ಪ್ರಭಾವಿತರಾಗಿ, ಆ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡವರು ಕಲಿಯುತ್ತಾರೆ, ಇಲ್ಲದಿದ್ದವರು ಬಿಡುತ್ತಾರೆ. ಮಠಾಧೀಶರು ಅಸಂಬದ್ಧ ಎನಿಸುವ ಇಂತಹ ಹೇಳಿಕೆಗಳನ್ನು ನೀಡಬಾರದು. ಸಮಾಜದಲ್ಲಿ ಇನ್ನೂ ತಾಂಡವವಾಡುತ್ತಿರುವ ಅಸ್ಪೃಶ್ಯತೆ, ಜಾತೀಯತೆ, ಮೌಢ್ಯದಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವುದರತ್ತ ತಮ್ಮ ಚಿತ್ತ ಹರಿಸುವುದು ಒಳ್ಳೆಯದು.
-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಮನುಷ್ಯತ್ವವನ್ನೇ ಮುಳುಗಿಸಿದ ಮುಳುಗುತಜ್ಞ
ಉತ್ತರಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಕಾನ್ಪುರದಲ್ಲಿ ಸ್ನಾನಕ್ಕೆ ತೆರಳಿದಾಗ ಗಂಗಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದು ವರದಿಯಾಗಿದೆ (ಪ್ರ.ವಾ., ಸೆ. 2). ಸ್ಥಳದಲ್ಲಿದ್ದ ಮುಳುಗುತಜ್ಞನೊಬ್ಬ ಹತ್ತು ಸಾವಿರ ರೂಪಾಯಿ ನೀಡಿದರೆ ಮಾತ್ರ ನದಿಗಿಳಿಯುವುದಾಗಿ ತಿಳಿಸಿ, ಆನ್‍ಲೈನ್‍ನಲ್ಲಿ ಹಣ ಪಾವತಿಯಾಗುವವರೆಗೆ ಕಾಯುತ್ತಿದ್ದು, ಅಷ್ಟರಲ್ಲಿ ಅಧಿಕಾರಿ ಶವವಾದ ಸಂಗತಿ ತೀವ್ರ ನೋವನ್ನು ಉಂಟುಮಾಡಿತು.
ಎಷ್ಟೋ ಕಡೆ ಜೀವರಕ್ಷಕರು ತಮ್ಮ ಜೀವವನ್ನು ಪಣಕ್ಕಿಟ್ಟು, ಸಾವಿನ ಸುಳಿಯಿಂದ ಪಾರು ಮಾಡುತ್ತಿರುವ ಹೆಮ್ಮೆಯ ಮಧ್ಯೆ ಇಂತಹ ‘ದುಡಿಮೆ’ ಮಾಡುವ ಜನರೂ ಇದ್ದಾರೆ! ನಾಗರಿಕ ಸಮಾಜದಲ್ಲಿನ ಇಂತಹ ಅಪಸವ್ಯಗಳಿಗೆ ಹೇಗೆ ಕೊನೆ ಹಾಡಬೇಕು? ಹಣವೇ ಆದ್ಯತೆಯಾದರೆ ಜೀವಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಮುಳುಗುತಜ್ಞ ಒಂದು ಜೀವವನ್ನಷ್ಟೇ ಅಲ್ಲ ಮನುಷ್ಯತ್ವವನ್ನೇ ಮುಳುಗಿಸಿದ್ದಾನೆ.
-ಚನ್ನು ಅ. ಹಿರೇಮಠ, ರಾಣೆಬೆನ್ನೂರು
ಪುಸ್ತಕ ಲೋಕದ ರಾಜಕೀಯ...
‘ಬಿಕರಿಗಿರುವುದು ಪುಸ್ತಕ; ಕೇಕ್ ಅಲ್ಲ’ ಎಂಬ ಸೃಷ್ಟಿ ನಾಗೇಶ್ ಅವರ ಲೇಖನ (ಚರ್ಚೆ, ಸೆ. 3) ನಾಡಿನ ಸಾರಸ್ವತ ಲೋಕಕ್ಕೆ ಸಂಬಂಧಿಸಿದಂತೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪುಸ್ತಕ ಪ್ರಕಟಣೆಯನ್ನು ಒಮ್ಮೆ ‘ಪುಸ್ತಕ ಉದ್ಯಮ’ ಎಂದು ಪರಿಗಣಿಸಿದ ಮೇಲೆ, ಅದು ಒಂದು ವ್ಯವಹಾರ. ಹಾಕಿದ ಬಂಡವಾಳ ವಾಪಸ್ ಬರುತ್ತಿಲ್ಲ ಎಂದ ಮೇಲೆ ಪ್ರಕಾಶಕರು ಯಾವ ಧೈರ್ಯದ ಮೇಲೆ ಬಂಡವಾಳ ಹೂಡಬೇಕು? ಜನ ಪುಸ್ತಕ ಗಳನ್ನು ಓದುತ್ತಿಲ್ಲ, ಪುಸ್ತಕಗಳು ಮಾರಾಟವಾಗುತ್ತಿಲ್ಲ ಎಂಬಂಥ ವಿಚಾರಗಳನ್ನು ಬದಿಗಿಡೋಣ. ನಾಗೇಶ್ ಅವರೇ ಹೇಳುವ ಹಾಗೆ, 7,000 ಗ್ರಂಥಾಲಯಗಳಿಗೆ ಸರ್ಕಾರ ಪುಸ್ತಕ ಖರೀದಿ ಮಾಡಿದರೆ ಇಡೀ ಚಿತ್ರಣವೇ ಬದಲಾಗಿಬಿಡುತ್ತದೆ. ಆದರೆ ಬರೀ ಮುನ್ನೂರು ಪುಸ್ತಕಗಳನ್ನು ಖರೀದಿ ಮಾಡಬೇಕು ಎಂಬುದು ಯಾವ ಮಾನದಂಡ?
ಮೂರ್ನಾಲ್ಕು ವರ್ಷಗಳಿಂದ ಖರೀದಿಸಿದ ಪುಸ್ತಕಗಳ ಹಣವನ್ನೇ ಸರ್ಕಾರ ಕೊಟ್ಟಿಲ್ಲ ಎಂದರೆ ಪ್ರಕಾಶಕರು ಎಲ್ಲಿಗೆ ಹೋಗಬೇಕು? ಬೆಂಗಳೂರಿನ ರಸ್ತೆಯ ಎಲ್ಲಾ ಗುಂಡಿಗಳನ್ನು ಇನ್ನು 15 ದಿನಗಳಲ್ಲಿ ಸರಿ ಮಾಡಬೇಕು ಎಂದು ಮಂತ್ರಿಗಳು ಫರ್ಮಾನು ಹೊರಡಿಸುತ್ತಿದ್ದಂತೆ, ‘ಮೊದಲು ಹಳೆಯ ಬಾಕಿ ಕೊಡಿ, ನಂತರ ಗುಂಡಿ ಮುಚ್ಚಿಸುವ ಮಾತಾಡಿ’ ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಪುಸ್ತಕ ಲೋಕದಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಪ್ರಕಾಶಕರ ಸಂಘ ಏನು ಮಾಡುತ್ತಿದೆ? ಗುತ್ತಿಗೆದಾರರ ಸಂಘದಂತೆ ಇವರು ಕೂಡ ಪಟ್ಟು ಹಿಡಿಯಬಹುದಲ್ಲವೇ?
ಪ್ರಕಾಶಕರು ಯಾರು ಎಂಬ ಬಗ್ಗೆ ಒಂದು ನಿಯಮ ರೂಪಿಸಲಿ. ತಮಗೆ ಬೇಕಾದವರ ಒಂದೋ ಎರಡೋ ಪುಸ್ತಕಗಳನ್ನು ಪ್ರಕಟಿಸಿದವರೆಲ್ಲ ಪ್ರಕಾಶಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಪಟ್ಟಭದ್ರರು ಎಲ್ಲ ರಂಗದಲ್ಲಿಯೂ ಇರುತ್ತಾರೆ. ಅಂತಹವರ ಬಗ್ಗೆ ಸಂಘ ಕ್ರಮ ತೆಗೆದುಕೊಳ್ಳಬೇಕು.
ಎಚ್.ಎಸ್.ನಾಗಭೂಷಣ, ಶಿವಮೊಗ್ಗ
ಅನುವಾದಕರನ್ನು ಶಿಕ್ಷೆಗೆ ಗುರಿಪಡಿಸಿ
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಉಂಟಾದ ತಪ್ಪಿನಿಂದಾಗಿ ಸರ್ಕಾರ ಮರುಪರೀಕ್ಷೆಗೆ ಆದೇಶ ಮಾಡಿರುವುದು ಸರಿಯಷ್ಟೆ. ಕೆಪಿಎಸ್‌ಸಿ ನಡೆಸಿದ ಪರೀಕ್ಷೆಗೆ ₹ 4 ಕೋಟಿಯಿಂದ ₹ 5 ಕೋಟಿಯಷ್ಟು ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಈ ವೆಚ್ಚವನ್ನು ಭರಿಸುವವರಾರು? ಸಾರ್ವಜನಿಕರ ಹಣವನ್ನಲ್ಲವೇ ಇಂತಹ ಕಾರ್ಯಕ್ಕೆ ಉಪಯೋಗಿಸುವುದು. ಸರ್ಕಾರದ ಬೊಕ್ಕಸಕ್ಕೆ ಹೊರೆಯಾದಾಗ ಜನಸಾಮಾನ್ಯರಿಂದ ತೆರಿಗೆ ರೂಪದಲ್ಲಿ ಸರ್ಕಾರ ಹಣವನ್ನು ಪಡೆಯುತ್ತದೆ. ಈಗ ಇಂತಹ ದುರ್ಗತಿ ತಂದ ಅನುವಾದಕರನ್ನು ತಕ್ಕ ಶಿಕ್ಷೆಗೆ ಗುರಿಪಡಿಸಬೇಕಾಗಿದೆ.
ಬಾಲಕೃಷ್ಣ ಆರ್., ಬೆಂಗಳೂರು
ತೆರೆಯ ಹಿಂದೆ...
ಸಿ.ಎಂ. ಬದಲಾವಣೆ ಅಸಾಧ್ಯ
ಕೈ ಪಕ್ಷದವರು ವಿರೋಧಿಗಳಿಗೆ
ಹೇಳುತ್ತಾರೆ ‘ಸುಮ್ಮನಿರಿ ತಾವೆಲ್ಲ’
ತೆರೆಯ ಹಿಂದೆ ಹತ್ತು ಜನ
ಹಾಕಿದ್ದಾರೆ ಸಿ.ಎಂ. ಗಾದಿಗೆ ಟವೆಲ್ಲ!
ಮಹಾಂತೇಶ ಮಾಗನೂರ
ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.