ADVERTISEMENT

ವಾಚಕರ ವಾಣಿ | ವಕ್ಫ್ ವಿವಾದ: ರಾಜಕೀಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 23:53 IST
Last Updated 1 ನವೆಂಬರ್ 2024, 23:53 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಕನ್ನಡದ ಶಾಲು...

ದಿನವೂ ಬಳಸುತ್ತಿದ್ದರೆ 
ಸರಾಗವಾಗಿ ಬಾಯಿಗೆ ಬರುವವು 
ಕನ್ನಡದ ಪದಗಳು...
ಇಲ್ಲದಿದ್ದರೆ, ಹುಡುಕಿದಂತೆ 
ವರ್ಷಕ್ಕೊಮ್ಮೆ ಹಾಕಿಕೊಳ್ಳುವ 
ಕನ್ನಡದ ಶಾಲು!

ADVERTISEMENT

ವಿಜಯಮಹಾಂತೇಶ್ ಬಂಗಾರಗುಂಡ್
ಬಾಗಲಕೋಟೆ
 

ವಕ್ಫ್ ವಿವಾದ: ರಾಜಕೀಯ ಸಲ್ಲದು

ಇಬ್ಬರ ಜಗಳದಲ್ಲಿ‌ ಕೂಸು ಬಡವಾಯಿತು ಎಂಬ ಮಾತಿನಂತೆ, ರಾಜ್ಯದಲ್ಲಿ ಇಷ್ಟು ದಿನ ಮುಡಾ ಹಗರಣ, ಈಗ ವಕ್ಫ್ ಆಸ್ತಿ ಗೊಂದಲ. ಇದರಿಂದ ನೂರಾರು ರೈತರು, ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದಾರೆ. ರಾಜಕಾರಣಿಗಳು ಅವರ ಸಮಸ್ಯೆಗಳನ್ನು ಪರಿಹರಿಸುವುದರ ಬದಲು ಇದನ್ನೇ ಉಪಚುನಾವಣೆಯ‌ ಅಸ್ತ್ರವನ್ನಾಗಿ ಬಳಸಿಕೊಂಡು ಒಬ್ಬರ‌ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಹೀಗೆ ರಾಜಕೀಯ ಹಿತಾಸಕ್ತಿಗಾಗಿ ಜನರಲ್ಲಿ ಗೊಂದಲ ಸೃಷ್ಟಿಸಿ ಸಾಮಾಜಿಕ ವಾತಾವರಣ ಕೆಡಿಸುವುದು‌ ಸರಿಯಲ್ಲ.

ಜನರ ಪಹಣಿಯಲ್ಲಿ ಏಕಾಏಕಿ ‘ವಕ್ಫ್ ಆಸ್ತಿ’ ಎಂದು ಹೇಗೆ ಬಂತು ಎಂಬುದರ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಶೇಕಡ 99ರಷ್ಟು ನಾಗರಿಕರಿಗೆ ವಕ್ಫ್ ಕಾನೂನು ಎಂದರೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ‌. ಹಾಗಾಗಿ, ಇನ್ನು ಮುಂದೆ ಆಸ್ತಿ‌ ಖರೀದಿಸುವ ಮುನ್ನ‌ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಬೇಕು. ಜೊತೆಗೆ ಆಸ್ತಿ ನೋಂದಣಿ ಸಮಯದಲ್ಲಿ ಆ ಆಸ್ತಿಯು ವಕ್ಫ್ ಹೆಸರಿನಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಸಬ್ ರಿಜಿಸ್ಟ್ರಾರ್ ‌ಸೂಕ್ತವಾಗಿ ಪರಿಶೀಲಿಸಿ ನೋಂದಣಿ‌ ಮಾಡಿಸಬೇಕು.

ಸುರೇಂದ್ರ ಪೈ, ಭಟ್ಕಳ

ಉಕ್ಕಿಹರಿದ ಕನ್ನಡಪ್ರೇಮ!

ಕರ್ನಾಟಕ ರಾಜ್ಯೋತ್ಸವದ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ವಾಟ್ಸ್‌ಆ್ಯಪ್ ಸ್ಟೇಟಸ್ ವಿಭಾಗವು ಕನ್ನಡ ಧ್ವಜ, ಕನ್ನಡ ಗೀತೆ, ಕನ್ನಡ ಸಿನಿಮಾ ಕ್ಲಿಪ್‌ಗಳಿಂದ ಹಾಗೂ ಕನ್ನಡ ಅಭಿಮಾನ ವ್ಯಕ್ತಪ‍ಡಿಸುವ ತರಹೇವಾರಿ ಸಂದೇಶಗಳಿಂದ ತುಂಬಿಹೋಗಿತ್ತು. ಕನ್ನಡಪ್ರೇಮ ಉಕ್ಕಿ ಹರಿದಿತ್ತು.

ನಂತರ ಸೂಕ್ಷ್ಮವಾಗಿ ಗಮನಿಸಿದೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಿದವರು, ಸದಾ ಕಾಲ ಹಿಂದಿ ಸೇರಿ ಅನ್ಯ ಭಾಷೆಗಳ ಸಿನಿಮಾಗಳನ್ನೇ ನೋಡುತ್ತಾ, ಅವುಗಳನ್ನು ಹಾಡಿ ಹೊಗಳುತ್ತಾ, ಕನ್ನಡ ಸಿನಿಮಾಗಳನ್ನು ಕಡೆಗಣಿಸುವ ಮಂದಿ, ಕನ್ನಡವನ್ನು ಅಲ್ಪ ಸ್ವಲ್ಪವಾದರೂ ಮಾತನಾಡುವ ಹೊರ ರಾಜ್ಯದ ವ್ಯಾಪಾರಿಯೊಂದಿಗೆ ಹಿಂದಿಯಲ್ಲಿಯೇ ಮಾತನಾಡುವ ಧಿಮಾಕಿನ ಮಂದಿಯೆಲ್ಲ ‘ಕನ್ನಡ’ದ ಬಗ್ಗೆ  ಸ್ಟೇಟಸ್ ಹಾಕಿಕೊಂಡಿದ್ದರು. ದುರಂತವೆಂದರೆ ಇದೇ ಅಲ್ಲವೆ?

ಇಂದಿನ ಬಹುತೇಕ ದಿನಾಚರಣೆಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಸ್ಟೇಟಸ್‌ಗಳಿಗೆ ಮಾತ್ರ ಸೀಮಿತವಾಗಿವೆ. ಅವುಗಳ ನಿಜವಾದ ಮಹತ್ವ ಅರಿತು ಪಾಲಿಸುವಲ್ಲಿ ನಾವು ವಿಫಲರಾಗಿದ್ದೇವೆ.

ಬಸನಗೌಡ ಪಾಟೀಲ, ಯರಗುಪ್ಪಿ  

ವೇಗದ ಬೌಲಿಂಗ್‌ಗೆ ನೆರವಾಗುವ ಪಿಚ್‌ ಬೇಡವೇಕೆ?

ತವರಿನ ಟೆಸ್ಟ್ ಪಂದ್ಯಗಳಲ್ಲಿ ನಿಧಾನಗತಿಯ ಸ್ಪಿನ್ ಬೌಲಿಂಗ್‌ ಪಿಚ್‌ಗಳಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ತಡವರಿಸುತ್ತಿದೆ. ನೆನಪಿರಲಿ, ಮುಂಬರುವ ಆಸ್ಟ್ರೇಲಿಯಾ ಪ್ರವಾಸವು ವೇಗದ, ಬೌನ್ಸಿ ಪಿಚ್‌ಗಳಲ್ಲಿ ನಡೆಯುತ್ತದೆ. ಹೀಗಾದರೆ ತಂಡ ಅಲ್ಲಿಯೂ ಬೆಲೆ ತೆರಬೇಕಾಗಬಹುದು. ನಮ್ಮಲ್ಲಿಯೂ ವೇಗದ ಬೌಲರ್‌ಗಳಿದ್ದಾರೆ. ಆದರೆ ವೇಗದ ಬೌಲಿಂಗ್‌ಗೆ ನೆರವಾಗುವ ಪಿಚ್‌ಗಳು ಏಕೆ ಬೇಡ?

 ಗುರು ಜಗಳೂರು, ಹರಿಹರ

ಪಟಾಕಿ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ

ಪಟಾಕಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡು ದೀಪಾವಳಿಯಂದು ಬಹಳಷ್ಟು ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿ, ಮಾಲಿನ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ತಮಿಳುನಾಡಿನ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರು ಹೇಳಿರುವುದನ್ನು (ಪ್ರ.ವಾ., ಅ. 29) ಓದಿ ನಗಬೇಕೋ‌ ಅಳಬೇಕೋ ತಿಳಿಯದಾಯಿತು. ಮಾಲಿನ್ಯವನ್ನು ಹಗುರವಾಗಿ ಪರಿಗಣಿಸಿ, ಪಟಾಕಿ ಕಾರ್ಮಿಕರು ಮತ್ತು ಮಾರಾಟಗಾರರ ಕಲ್ಯಾಣದ ಹೆಸರಿನಲ್ಲಿ ಹೆಚ್ಚು ಹೆಚ್ಚು ಪಟಾಕಿಗಳನ್ನು ಸುಡುವಂತೆ ಕರೆ ನೀಡಿರುವ ಅಣ್ಣಾಮಲೈ ಅವರು ಪಟಾಕಿ ಸುಡುವಾಗ ಇತರರಿಗೆ ತೊಂದರೆ ಆಗದಂತೆ ಪಟಾಕಿ ಸುಡಬೇಕೆಂದಿರುವುದು ಹಾಸ್ಯಾಸ್ಪದವಾಗಿದೆ. ಬಹುಶಃ ಹಸಿರು ಪಟಾಕಿಗಳಿರುವಂತೆ ನಿಶ್ಶಬ್ದವಾಗಿ ಸಿಡಿಯುವ ಪಟಾಕಿಗಳಿವೆಯೋ‌ ಏನೋ ಎಂದು ಚಿಂತಿಸುವಂತಾಗಿದೆ. ಪಟಾಕಿ ನಿಷೇಧಿಸಿದರೆ ಕಾರ್ಮಿಕರು ಹೊಟ್ಟೆಗಿಲ್ಲದೇ ಸಾಯಬೇಕೆ ಎಂದು ಹಲವರು ಪ್ರಶ್ನಿಸಬಹುದು. ಆದರೆ ದೇಹವೆಲ್ಲಾ ವಿವಿಧ ರಾಸಾಯನಿಕಗಳ ಲೇಪನವಾಗಿರುವಂತೆ‌ ಕಾಣುವ ಪಟಾಕಿ ಕಾರ್ಮಿಕರ ಆರೋಗ್ಯದ ಬಗ್ಗೆ ಹಾಗೂ ಇದುವರೆಗೆ ಪಟಾಕಿ ತಯಾರಿಕೆ ಅಥವಾ ದಾಸ್ತಾನು ಮಾಡುವ ವೇಳೆ ದುರಂತ ಸಂಭವಿಸಿ ಸಜೀವ ದಹನಗೊಂಡವರನ್ನು ಒಮ್ಮೆ ನೆನೆದಾಗ,‌ ನಮ್ಮ ಕ್ಷಣಿಕ ಸಂತಸಕ್ಕಾಗಿ ಎಷ್ಟೋ ಜನರ ಜೀವ-ಜೀವನವನ‌್ನೇ ಬಲಿಕೊಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

ಪಟಾಕಿ ಕಾರ್ಮಿಕರ ಬಗ್ಗೆ ನಿಜವಾದ ಕಾಳಜಿ ಇರುವವರು ಮೊದಲು ಅವರಿಗೆ ಪುನರ್ವಸತಿ ಕಲ್ಪಿಸಿ, ಉತ್ತಮ ಶಿಕ್ಷಣ ಅಥವಾ ಇತರ ಉದ್ಯೋಗದ ತರಬೇತಿ ನೀಡುವ ಮಾರ್ಗೋಪಾಯಗಳನ್ನು ಒದಗಿಸಬೇಕು. ನಾವು ಪಟಾಕಿ ಸಿಡಿಸಿ ಖುಷಿಪಡುತ್ತೇವೆ, ನೀವು ನಮಗಾಗಿ ನಿಮ್ಮ ಆರೋಗ್ಯ, ಆಯುಷ್ಯ ಕಳೆದುಕೊಳ್ಳಿ ಎನ್ನುವುದು ಯಾವ ರೀತಿಯಲ್ಲೂ ನಮ್ಮ ಸಂಸ್ಕೃತಿಯಾಗಬಾರದು. ದೀಪಾವಳಿಯಂದು ಪಟಾಕಿ ಸುಡುವ ಸಂಸ್ಕೃತಿಯಿಂದ ಸಸಿ ನೆಡುವ ಸಂಸ್ಕೃತಿಯ ಕಡೆಗೆ ನಾವೆಲ್ಲ ಸಾಗಬೇಕಿದೆ. ಪ್ರತಿವರ್ಷ ಪಟಾಕಿ ಸುಡಲು ಹೋಗಿ ಎಷ್ಟೋ ಮಕ್ಕಳು ದೃಷ್ಟಿ ಕಳೆದುಕೊಳ್ಳುತ್ತಲೇ ಇದ್ದಾರೆ‌. ಇನ್ನಾದರೂ ಈ ಅವಾಂತರಕಾರಿ ಆಚರಣಾ ವಿಧಾನಗಳನ್ನು ಬಿಡಬೇಕಾಗಿದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.