ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 4 ಮಾರ್ಚ್ 2024, 0:20 IST
Last Updated 4 ಮಾರ್ಚ್ 2024, 0:20 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಜಾತಿ ಜನಗಣತಿ ವರದಿ: ಅಪಹಾಸ್ಯ ಸಲ್ಲ

ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಖರ್ಚು ಮಾಡಿ, ಸಾವಿರಾರು ಶಿಕ್ಷಕರನ್ನು ಒಳಗೊಂಡು, ವಿವಿಧ ಹಂತದ ಅಧಿಕಾರಿಗಳು ಮತ್ತು ದೇಶದ ಪ್ರತಿಷ್ಠಿತ ಬಿಇಎಲ್‌ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಜಾತಿ ಜನಗಣತಿ ವರದಿ ಸಿದ್ಧಪಡಿಸಿದೆ. ರಾಜ್ಯದ ಸರ್ವಜನರ ಅಭ್ಯುದಯಕ್ಕಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಕೆಲವು ಪಟ್ಟಭದ್ರರಿಗೆ ನುಂಗಲಾರದ ತುತ್ತಾಗಿದೆ.

ADVERTISEMENT

ಜಾತಿ, ಮತ, ಪಂಥಗಳ ಹೆಸರಿನಲ್ಲಿ ವರದಿಯನ್ನು ಅನುಮಾನಿಸುತ್ತಿರುವುದು ಇಷ್ಟೊಂದು ಶಿಕ್ಷಕರು, ಅಧಿಕಾರಿಗಳು ಹಾಗೂ ಪ್ರತಿಷ್ಠಿತ ಸಂಸ್ಥೆಯೊಂದನ್ನು ಅಪಹಾಸ್ಯ ಮಾಡಿದಂತೆಯೇ ಸರಿ. ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಷ್ಠಾನ ಮಾಡುವ ಮೂಲಕ, ಒಕ್ಕಲಿಗರು– ಲಿಂಗಾಯತರಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಹಿಂದುಳಿದ, ಒಳಪಂಗಡಗಳ ಅಭಿವೃದ್ಧಿಗೆ ಮತ್ತು ಅತಿಹೆಚ್ಚು ಹಿಂದುಳಿದ ವರ್ಗಗಳಿಗೆ  ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಸವಲತ್ತುಗಳು ಸಿಗುವಂತೆ ಕಾರ್ಯಯೋಜನೆ ರೂಪಿಸಬೇಕಾಗಿದೆ.

⇒ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು

ಕನ್ನಡ ಫಲಕ: ವೆಬ್‌ಸೈಟ್ ಬೇಕಾಗಿದೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (ಬಿಬಿಎಂಪಿ) ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಅದರ ಜಾರಿಗೆ ಕ್ರಮ ಕೈಗೊಂಡಿರುವುದು ಸರಿಯಷ್ಟೆ. ಈ ಸಂದರ್ಭದಲ್ಲಿ, ಕೆಲವು ಜಾತಿಸೂಚಕ ಫಲಕಗಳನ್ನು ತೆಗೆದು ಪ್ರಜಾಪ್ರಭುತ್ವದ ಚೌಕಟ್ಟಿಗೆ ಅವುಗಳನ್ನು ತರಬೇಕಾದುದು ಸೂಕ್ತ. ಉದಾಹರಣೆಗೆ, ಕೆಲವು ಹೋಟೆಲ್ ಹಾಗೂ ತಿಂಡಿ ತಿನಿಸುಗಳ ವಾಣಿಜ್ಯ ಮಳಿಗೆಗಳ ಮೇಲೆ ನಿರ್ದಿಷ್ಟ ಜಾತಿಸೂಚಕ ಫಲಕಗಳಿದ್ದು, ಅವುಗಳನ್ನು ಸರಿಪಡಿಸಬೇಕು. ಹಾಗೆಯೇ ಕೆಲವು ಬಡಾವಣೆಗಳ ವಿಳಾಸ ಬರೆಯುವಾಗ ಹೆಸರನ್ನು ಸಂಕ್ಷಿಪ್ತ ಮಾಡಿ ಬರೆಯಲಾಗುತ್ತಿದೆ. ಉದಾಹರಣೆಗೆ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ... ಇಂತಹ ಸಂಕ್ಷಿಪ್ತಗಳಿಂದ, ಮುಂದಿನ ಪೀಳಿಗೆಯ ಜನರು ಅವುಗಳ ಮೂಲ ಸ್ವರೂಪವನ್ನೇ ಮರೆತರೆ ಆಶ್ಚರ್ಯಪಡಬೇಕಾಗಿಲ್ಲ. ಅವನ್ನು ಸಂಕ್ಷಿಪ್ತ ಮಾಡದೆ ಪೂರ್ತಿ ಅರ್ಥ ಬರುವಂತೆ ಕಾಡುಗೊಂಡನಹಳ್ಳಿ, ದೇವರಜೀವನಹಳ್ಳಿ ಎಂದು ಸ್ಪಷ್ಟವಾಗಿ ಬರೆಸಬೇಕು.

ಇನ್ನು ಕೆಲವು ಕಡೆಗಳಲ್ಲಿ ಅರ್ಥ ವ್ಯತ್ಯಾಸ ಆಗಿರುವ ನಾಮಫಲಕಗಳಿವೆ. ಕೆಲವು ಫಲಕಗಳಲ್ಲಿ ‘ಳ’ಕಾರ ಬರುವ ಕಡೆಗಳಲ್ಲಿ ‘ಲ’ಕಾರ ಬಂದು ಶಬ್ದಗಳು ಅಪಾರ್ಥಗಳಾಗುತ್ತಿವೆ. ಉದಾಹರಣೆಗೆ, ಕಲಾಮಾಧ್ಯಮ ಹೋಗಿ, ಕಳಾ ಮಾಧ್ಯಮ ಆಗಿದೆ. ಸರ್ಕಾರ ‘ಕನ್ನಡ ಫಲಕ ಕಡ್ಡಾಯ’ದ ಹೆಸರಿನಲ್ಲಿ ಒಂದು ವೆಬ್‌ಸೈಟ್ ತೆರೆದು, ಅದರಲ್ಲಿ ರಾಜ್ಯದ ಯಾರೇ ಆಗಲಿ ನಾಮಫಲಕ ಹಾಕುವ ಮೊದಲು, ಸರ್ಕಾರದ ವೆಬ್‌ಸೈಟ್‌ನಲ್ಲಿ ಬರೆದುಕೊಳ್ಳುವಂತೆ ತಿಳಿಸಬೇಕು. ಆಗ ಅದರಲ್ಲಿ ಇರಬಹುದಾದ ಕಾಗುಣಿತದ ತಪ್ಪನ್ನು ಸರಿಪಡಿಸಿ, ಅದೇ ವೆಬ್‌ನಲ್ಲಿ ಮರು ಪ್ರಕಟಿಸಿದಾಗ, ಸಂಬಂಧಿಸಿದವರು ಡೌನ್‌ಲೋಡ್ ಮಾಡಿಕೊಂಡು ನಾಮಫಲಕಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತಪ್ಪಾಗಿ ಬರೆದ ಫಲಕಗಳನ್ನು ಬೀದಿ ಬೀದಿಗಳಿಗೆ ಹೋಗಿ ಸರಿಪಡಿಸುವ ವ್ಯರ್ಥ ಕಸರತ್ತನ್ನು ತಪ್ಪಿಸಬಹುದು.

ಈ ಕೆಲಸಕ್ಕಾಗಿ ಒಂದು ಸಮಿತಿ ರಚಿಸಬೇಕು, ಭಾಷಾತಜ್ಞರ ನೆರವು ಪಡೆಯಬಹುದು. ಹೀಗೆ ಮಾಡುವುದರಿಂದ, ಸಾರ್ವಜನಿಕವಾಗಿ ಪ್ರದರ್ಶನ ಆಗುವ ನಾಮಫಲಕಗಳಲ್ಲಿ ತಪ್ಪು ನುಸುಳದಂತೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ.

⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಎಂಆರ್‌ಪಿ ನೆಪದಲ್ಲಿ ಸುಲಿಗೆ

ಕಿರಾಣಿ ಅಂಗಡಿಗಳಲ್ಲಿ ಕಂಪನಿಗಳಿಗೆ ಸೇರಿದ ದಿನಸಿ ಪ್ಯಾಕೆಟ್‌ಗಳ ಮೇಲೆ ಎಂಆರ್‌ಪಿ (ಗರಿಷ್ಠ ಚಿಲ್ಲರೆ ದರ) ನಮೂದಿಸಲ್ಪಟ್ಟಿರುತ್ತದಷ್ಟೆ. ಇದನ್ನೇ ಗುರಾಣಿಯಾಗಿಸಿಕೊಂಡು ಹೆಚ್ಚಿನ ವ್ಯಾಪಾರಿಗಳು ದುಪ್ಪಟ್ಟು ಲಾಭ ಗಿಟ್ಟಿಸುವ ಪರಿ ಖೇದ ತರುತ್ತದೆ. ಉದಾಹರಣೆಗೆ, ಚಹಾಪುಡಿ, ಅಡುಗೆ ಎಣ್ಣೆಯಂತಹ ವಸ್ತುಗಳ ಪ್ಯಾಕೆಟ್‌ ಮೇಲೆ ತಯಾರಿಕಾ ಕಂಪನಿಗಳು ಗರಿಷ್ಠ ಬೆಲೆ ನಮೂದಿಸಿರುತ್ತವೆ. ಉದಾಹರಣೆಗೆ, ಒಂದು ವಸ್ತುವಿಗೆ ಗರಿಷ್ಠ ಬೆಲೆ ₹ 140 ಎಂದು ನಮೂದಿಸಿದ್ದರೆ, ಅದು ಭಾರತದ ಕೊನೆಯ ಹಳ್ಳಿಯವರೆಗೂ ಅದೇ ಬೆಲೆಗೆ ಮಾರಲ್ಪಡಬೇಕು ಎಂದರ್ಥ. ಆದರೆ, ಬೆಂಗಳೂರಿನಲ್ಲೇ ಪ್ಯಾಕ್‌ ಮಾಡಿರುವಂತಹ ಮಾಲು, ಬೆಂಗಳೂರಿನಲ್ಲೇ ₹ 140ಕ್ಕೆ ಮಾರಾಟವಾದರೆ? ಸ್ಥಳೀಯವಾಗಿ ₹ 70-80ಕ್ಕೆ ಖರೀದಿಯಾದ ವಸ್ತುಗಳನ್ನು ₹ 140ಕ್ಕೆ ಮಾರುವ ಅನ್ಯಾಯ ಅವ್ಯಾಹತವಾಗಿ ನಡೆದಿದೆ.

ಇದಕ್ಕೆ ಸೂಕ್ತ ಪರಿಹಾರ ಎಂದರೆ, ಪ್ರತಿ ವಸ್ತುವಿನ ಪ್ಯಾಕೆಟ್ ಮೇಲೆ, ‘ಇಂಥಿಂಥ ರಾಜ್ಯಗಳಲ್ಲಿ ಇಷ್ಟಿಷ್ಟೇ ಬೆಲೆ’ ಎಂದು ಕಡ್ಡಾಯವಾಗಿ ಮುದ್ರಿಸಬೇಕು. ಆಗ ಈ ಪಿಡುಗಿಗೆ ಕಡಿವಾಣ ಹಾಕಬಹುದು. ಈ ಪ್ರಕ್ರಿಯೆಯನ್ನು ಉದ್ದಿಮೆಗಳು ರೂಢಿಗೆ ತಂದಲ್ಲಿ, ತಮ್ಮ ಉತ್ಪನ್ನಗಳು ಯೋಗ್ಯ ಬೆಲೆಗೆ ಲಭ್ಯವಾಗಿ, ಮಾರಾಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

⇒ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.