ಒಂಬತ್ತು ತಿಂಗಳ ಹಿಂದಷ್ಟೇ ಭಾರಿ ನಿರೀಕ್ಷೆಯೊಂದಿಗೆ ಸಾರ್ವಜನಿಕ ಸಂಚಾರಕ್ಕೆ ತೆರವಾದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಬಹುತೇಕ ಪ್ರತಿದಿನವೂ ಅಪಘಾತಗಳು ಸಂಭವಿಸುತ್ತಿವೆ. ಈ ಅಪಘಾತಗಳಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ಅಪಘಾತಗಳು ಚನ್ನಪಟ್ಟಣ- ರಾಮನಗರದ ನಡುವಿನ ಬೈಪಾಸ್ ರಸ್ತೆಯಲ್ಲಿ ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ವೇಗದ ಮಿತಿಯ ಫಲಕಗಳನ್ನು ಆಳವಡಿಸದೇ ಇರುವುದು, ರಸ್ತೆಬದಿಯಲ್ಲಿ ಸೂಚನಾ ಫಲಕಗಳು ಇಲ್ಲದೇ ಇರುವುದು, ಒಂದು ವೇಳೆ ಅಪಘಾತವಾಗಿ ಬದುಕುಳಿಯುವ ಸಾಧ್ಯತೆ ಇದ್ದರೂ ರಸ್ತೆಯಲ್ಲಿ ಎಲ್ಲೂ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಇಲ್ಲದೇ ಇರುವುದು, ವಾಹನ ಚಾಲಕರು ಆಗಿಂದಾಗ್ಗೆ ಟ್ರ್ಯಾಕ್ ಬದಲಿಸುವುದು...
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಮಾರ್ಗೋಪಾಯಗಳನ್ನು ಶೋಧಿಸಬೇಕು.
ಬೂಕನಕೆರೆ ವಿಜೇಂದ್ರ, ಮೈಸೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾಲ್ಕು ಇಲಾಖೆಗಳಿಗೆ ಸೇರಿದ 650 ಹುದ್ದೆಗಳಿಗೆ ಬಹಳ ದಿನಗಳ ನಂತರ ಅಧಿಸೂಚನೆ ಹೊರಡಿಸಿರುವುದು ಉದ್ಯೋಗ ಆಕಾಂಕ್ಷಿಗಳಲ್ಲಿ ಹರ್ಷ ಮೂಡಿಸಿದೆ. ಆದರೆ ಅದರೊಟ್ಟಿಗೆ ಬೇಸರವನ್ನೂ ಉಂಟುಮಾಡಿದೆ. ಕಾರಣ, ಪ್ರತಿಯೊಂದು ಇಲಾಖೆಯ ಪ್ರತಿಯೊಂದು ಹುದ್ದೆಗೂ ಪ್ರತ್ಯೇಕವಾಗಿ ಏಳುನೂರಾ ಐವತ್ತರಿಂದ ಸಾವಿರದವರೆಗೆ ಶುಲ್ಕ ನಿಗದಿಪಡಿಸಿರುವುದು. ಇದು ಬಡ ಉದ್ಯೋಗಾಕಾಂಕ್ಷಿಗಳಿಗೆ ತುಂಬಾ ಹೊರೆಯಾಗಿದೆ. ಒಂದು ಇಲಾಖೆಯ ಎಲ್ಲಾ ಹುದ್ದೆಗಳಿಗೆ ಹೀಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವ ಪರಿಪಾಟವನ್ನು ಬಿಡಬೇಕು. ಎಲ್ಲ ಹುದ್ದೆಗಳಿಗೂ ಒಂದೇ ಶುಲ್ಕ ಅನ್ವಯವಾಗುವಂತಿರಲಿ. ಈ ಮೂಲಕ ಬಡ ಉದ್ಯೋಗಾಕಾಂಕ್ಷಿಗಳು ಅರ್ಹರಾದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು.
ಬಸವರಾಜ ಚಂದಪ್ಪ ಕರೇಕಲ್, ಮಾವಿನ ಇಟಗಿ, ಕುಷ್ಟಗಿ
ದಲಿತರಿಗೆ ದೇವಾಲಯಗಳಿಗೆ ಮುಕ್ತ ಪ್ರವೇಶ ನೀಡುವಂತೆ ಕೋಲಾರ ಜಿಲ್ಲೆಯಲ್ಲಿ ಅಭಿಯಾನ ಪ್ರಾರಂಭಿಸಿರುವುದು ಶ್ಲಾಘನೀಯ. ಆದರೆ ಡಾ. ಬಿ.ಆರ್.ಅಂಬೇಡ್ಕರ್ ಅವರು ನಾಸಿಕ್‌ನಲ್ಲಿ ನಡೆಸಿದ ‘ಕಾಳಾರಾಮ ದೇವಾಲಯ ಪ್ರವೇಶ’ ಹೋರಾಟದ ತಾತ್ವಿಕತೆಯನ್ನು ಗಮನಿಸಬೇಕು. ಅವರು ಹಾಗೆ ಮಾಡಿದ್ದು, ಇನ್ನುಮುಂದೆ ದಲಿತರೆಲ್ಲರೂ ದೇವಾಲಯಕ್ಕೆ ಹೋಗಿ ಅಜ್ಞಾನದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎಂದಲ್ಲ. ಬದಲಿಗೆ, ಮಾನವರೆಲ್ಲರೂ ಸಮಾನರು ಹಾಗೂ ಈ ಕಟ್ಟುಪಾಡುಗಳೆಲ್ಲವನ್ನೂ ಮೀರದ ವಿನಾ ಸಮಸಮಾಜದ ಪರಿಕಲ್ಪನೆ ಅಪೂರ್ಣ ಎಂಬ ಆಶಯ ಅದರ ಹಿಂದೆ ಇತ್ತು. ‘ದೇವಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವ ಬದಲು ಗ್ರಂಥಾಲಯಗಳ ಮುಂದೆ ಸಾಲುಗಟ್ಟಿ ನಿಂತ ದಿನ ಭಾರತವು ವಿಶ್ವಕ್ಕೆ ಮಾದರಿಯಾಗುತ್ತದೆ’ ಎಂಬ ಅಂಬೇಡ್ಕರ್ ಅವರ ಮಾತು ಅವಶ್ಯವಾಗಿ ಉಲ್ಲೇಖಾರ್ಹ. ಹಾಗಾಗಿ ತಳಸಮುದಾಯಗಳು ಶಿಕ್ಷಣದ ಮೂಲಕ ಶಕ್ತಿ ಪಡೆಯುವ ಕಡೆ ಗಮನಹರಿಸಬೇಕು.
ಡಾ. ಅಭಿಲಾಷ ಎಚ್.ಕೆ., ಮಂಡ್ಯ
‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಬೆಂಗಳೂರು- ಧಾರವಾಡ ಮಧ್ಯೆ ಆರಂಭವಾಗುತ್ತಿರುವುದು ಸಂತಸದ ವಿಚಾರ. ಆದರೆ ಈ ರೈಲು ಬೆಳಿಗ್ಗೆ ಧಾರವಾಡವನ್ನು ಹಾಗೂ ಮಧ್ಯಾಹ್ನ ಬೆಂಗಳೂರನ್ನು ಬಿಡುವಂತೆ ಆಗಬೇಕು. ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹೆಚ್ಚು ಜನರು ಬೆಂಗಳೂರಿಗೆ ಕಾರ್ಯನಿಮಿತ್ತ ಹೋಗಬೇಕಾಗುತ್ತದೆಯೇ ವಿನಾ ಬೆಂಗಳೂರು ಜನರಿಗೆ ಕಚೇರಿ ಕಾರ್ಯಗಳಿಗೆ ಉತ್ತರ ಕರ್ನಾಟಕಕ್ಕೆ ಬರುವ ಅವಶ್ಯಕತೆ ವ್ಯಾಪಕ ಪ್ರಮಾಣದಲ್ಲಿ ಇರುವುದಿಲ್ಲ. ಬೆಂಗಳೂರಿನಲ್ಲಿ ದೂರದ ಬಡಾವಣೆಗಳಿಂದ ಬೆಳಿಗ್ಗೆ 5 ಗಂಟೆ ಹೊತ್ತಿಗೆ ರೈಲು ನಿಲ್ದಾಣ ತಲುಪುವುದು ಕಷ್ಟಕರವಾದ ಕೆಲಸ. ಈ ಕಾರಣಗಳಿಂದ ವಂದೇ ಭಾರತ್ ರೈಲಿನ ನಿಯೋಜಿತ ವೇಳಾಪಟ್ಟಿಯಲ್ಲಿನ ಸಮಯ ಅದಲು ಬದಲಾಗಲಿ.
ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ
ಶಿವಮೊಗ್ಗದಲ್ಲಿ ಗಾಂಜಾ ಬೆಳೆದು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಸುದ್ದಿ (ಪ್ರ.ವಾ., ಜೂನ್ 25) ಓದಿ ದಿಗ್ಭ್ರಾಂತನಾದೆ. ಒಂದು ಉತ್ತಮ ಸಮಾಜ ಸೇವೆಯಲ್ಲಿ ತೊಡಗಿ ಪ್ರಜ್ಞಾವಂತ ನಾಗರಿಕರಾಗಿ ಸ್ವಸ್ಥ ಸಮಾಜವನ್ನು ನಿರ್ಮಿಸಬೇಕಾದ ವೈದ್ಯಕೀಯ ವಿದ್ಯಾರ್ಥಿಗಳು ಮಾದಕವಸ್ತು ಜಾಲದಲ್ಲಿ ಸಿಲುಕಿರುವುದು ತುಂಬಾ ಕಳವಳಕಾರಿ. ಇಂತಹ ಪ್ರಕರಣಗಳು ಆಗಾಗ ಮರುಕಳಿಸುತ್ತಿವೆ. ಅಪರಾಧಿಗಳ ವಿರುದ್ಧ ಕಠಿಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು. ಆಗಮಾತ್ರ ಮಾದಕವಸ್ತು ಬಳಕೆ ನಿಯಂತ್ರಣಕ್ಕೆ ಬರುತ್ತದೆ.
ಡಾ. ದೌಲಸಾಬ ಮುದ್ದಾಪೂರ, ಮಸ್ಕಿ
ತಾವು ಆಯೋಜಿಸುವ ಪಾರ್ಟಿಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ಪೂರೈಸಲು ಬೆಂಗಳೂರಿನ ಕೆಲವು ಪಬ್‌ಗಳು ಮುಂದಾಗಿರುವ ಸುದ್ದಿ (ಪ್ರ.ವಾ., ಜೂನ್ 24) ಓದಿ ಗಾಬರಿಯಾಯಿತು. ಈ ಉಚಿತ ಅವಕಾಶದ ಮೂಲಕ ಮಹಿಳೆಯರಿಗೆ ಕುಡಿತದ ಬಗ್ಗೆ ಕುತೂಹಲ, ಆಸೆ ಉಂಟುಮಾಡಿ ನಂತರ ಅವರನ್ನು ವ್ಯಸನಿಗಳನ್ನಾಗಿಸುವ ಹುನ್ನಾರ ಇದರ ಹಿಂದೆ ಅಡಗಿದಂತಿದೆ. ಸಮಾಜ ವಿದ್ರೋಹಿ ಕೃತ್ಯಗಳ ಕುರಿತಾಗಿ ಹೆಣ್ಣುಮಕ್ಕಳ ಪೋಷಕರು ಆತಂಕದಲ್ಲಿ ಇರುವಾಗಲೇ ಪಬ್ ಪಾರ್ಟಿಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ಎಂದು ಹೇಳುವ ಈ ಮಾಲೀಕರ ನಡೆ ಅವರನ್ನು ಮತ್ತಷ್ಟು ಚಿಂತೆಗೆ ಈಡುಮಾಡಿದರೆ ಆಶ್ಚರ್ಯವಿಲ್ಲ.
ರಮೇಶ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.