ADVERTISEMENT

ಸಂಕಷ್ಟದಲ್ಲಿ ಸಂತ್ರಸ್ತರು: ಸಾರ್ವಜನಿಕರು ಮನೆ ನಿರ್ಮಿಸಿಕೊಡಲಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:01 IST
Last Updated 19 ಆಗಸ್ಟ್ 2019, 20:01 IST

ಕಳೆದ ಹತ್ತು– ಹದಿನೈದು ದಿನಗಳ ಮಳೆ ನಾಡಿನಾದ್ಯಂತ ನಷ್ಟವನ್ನುಂಟು ಮಾಡಿದೆ, ಸಂತ್ರಸ್ತರು ಸಂಕಷ್ಟದಲ್ಲಿ ನರಳುವಂತೆ ಮಾಡಿದೆ. ಹತ್ತು ವರ್ಷಗಳ ಹಿಂದೆಯೂ ಇಂಥದ್ದೇ ಮಹಾಮಳೆ ಬಂದು, ಅಂದು ಸರ್ಕಾರ ಕಟ್ಟಿಸಿಕೊಟ್ಟ ‘ಆಸರೆ’ ಮನೆಗಳು ಇಂದು ಗುತ್ತಿಗೆದಾರರು, ಪ್ರಭಾವಿಗಳ ‘ಅರಮನೆ’ಗಳಿಗೆ ಆಸರೆಯಾಗಿವೆ. ಸಹೃದಯಿ ದಾನಿಗಳು ಸಾಕಷ್ಟು ಧನ-ಧಾನ್ಯಗಳನ್ನು ನೆರೆಪೀಡಿತರಿಗೆ ನೀಡಿದ್ದಾರೆ. ಇವೆಲ್ಲ ತತ್ಕಾಲೀನ ಪರಿಹಾರ. ನೆರೆಹಾವಳಿಯಿಂದ ನಲುಗಿರುವ ಜನರಿಗೆ ಶಾಶ್ವತ ಪರಿಹಾರವಾಗಿ ವಾಸದ ಮನೆಗಳನ್ನು ನಿರ್ಮಿಸಿಕೊಡುವುದು ಸೂಕ್ತ. ಇದಕ್ಕಾಗಿ ಸರ್ಕಾರವನ್ನು ನೆಚ್ಚಿಕೊಳ್ಳದೆ, ವಿವಿಧ ಪ್ರಾಮಾಣಿಕ ಸಂಘ ಸಂಸ್ಥೆಗಳ ಮೂಲಕವೇ ಸಾರ್ವಜನಿಕರು ನೇರವಾಗಿ ಸಹಾಯ ಮಾಡುವುದು ಸಮರ್ಪಕ. ಇಲ್ಲದಿದ್ದರೆ ಮತ್ತೆ ಅದೇ ಕೆಂಪುಪಟ್ಟಿ, ಗುತ್ತಿಗೆದಾರರು, ರಾಜಕಾರಣಿಗಳು ಪ್ರಾಣಿಗಳಿಗೂ ವಾಸಯೋಗ್ಯವಲ್ಲದ ಮನೆ ನಿರ್ಮಿಸಿ, ಸರ್ಕಾರದ ಹಣ ಕೊಳ್ಳೆ ಹೊಡೆಯಲು ದಾರಿಯಾಗುತ್ತದೆ.

-ಡಾ. ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT