ಮುಂದಿನ ದಿನಗಳಲ್ಲಿ ಜಲಕ್ಷಾಮ ತಲೆದೋರುವ ಭೀತಿಯನ್ನು ಮನಗಂಡು, ಅದನ್ನು ಎದುರಿಸಲು ರಾಜ್ಯದಲ್ಲಿಯೇ ಮೊತ್ತಮೊದಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಜಲಚಳವಳಿ ಮುಂಚೂಣಿಯಲ್ಲಿದೆ. ಇದು ಹೆಮ್ಮೆಯ ಸಂಗತಿ.
ಕುಷ್ಟಗಿಯ ನಿಡಶೇಷಿ ಕೆರೆಯಿಂದ ಪ್ರಾರಂಭವಾದ ಜಲಚಳವಳಿ, ಯಲಬುರ್ಗಾ ತಾಲ್ಲೂಕಿನ ಕಲ್ಲಭಾವಿ ಕೆರೆ, ಕೊಪ್ಪಳದ ಹಿರೇಹಳ್ಳ, ತಾವರಗೆರೆಯ ಅಯ್ಯನಕೆರೆ, ಗಂಗಾವತಿಯ ದುರ್ಗಮ್ಮನ ಹಳ್ಳದ ಹೂಳೆತ್ತುವ ಕ್ರಿಯೆಯ ಮೂಲಕ ರಾಜ್ಯದ ಜನರ ಗಮನ ಸೆಳೆದಿದೆ.ಕೊಪ್ಪಳದ ಈ ಜಲ ಕಾರ್ಯವು ರಾಜ್ಯದ ಇತರ ಜಿಲ್ಲೆಗಳ ಜನರಿಗೂ ಮಾದರಿಯಾಗಿದೆ.
ಕಳೆದ ವರ್ಷ ತುಂಗಾಭದ್ರಾ ನದಿಯಲ್ಲಿ ಒಂದಷ್ಟು ಹೂಳನ್ನು ರೈತರು ತೆಗೆದರು. ಆದರೂ ಸರ್ಕಾರ ಮಾತ್ರ ಕಣ್ಣು ತೆರೆಯುತ್ತಿಲ್ಲ. ಜಲಮೂಲಗಳು ಹೂಳಿನಿಂದ ತುಂಬಿದರೆ ಅಂತರ್ಜಲ ಪಾತಾಳ ಕಾಣುತ್ತದೆ. ತುಂಗಭದ್ರಾ ನದಿಯಲ್ಲಿ ಬಹಳಷ್ಟು ಹೂಳು ತುಂಬಿ, ನದಿಯಿಂದ ದೂರ ಇರುವ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ರೈತರ ಹೊಲಗಳಿಗೆ ನೀರು ತಲುಪದೆ ಹಾಹಾಕಾರ ಉಂಟಾಗಿದೆ.
ಸಮಾಂತರ ಜಲಾಶಯಗಳನ್ನು ಆಂಧ್ರ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ತಡಮಾಡದೆ ಕೈಗೆತ್ತಿಕೊಳ್ಳಬೇಕು. ಇಲ್ಲವೇ ಪ್ರತಿವರ್ಷ ತುಂಗಭದ್ರಾ ಅಣೆಕಟ್ಟಿನ ಹೂಳು ತೆಗೆಸಬೇಕು.
ಎಚ್.ಎಸ್.ಪಾಟೀಲ, ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.