ADVERTISEMENT

ಪಶ್ಚಿಮಘಟ್ಟಗಳಲ್ಲಿ ಕಾಮಗಾರಿ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 19:30 IST
Last Updated 29 ಆಗಸ್ಟ್ 2018, 19:30 IST
   

ಕರ್ನಾಟಕದ ಜೀವನಾಡಿಯಂತಿರುವ ಪಶ್ಚಿಮಘಟ್ಟಗಳ ಬಗ್ಗೆ ನಮ್ಮ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಇಷ್ಟೊಂದು ಅಸಡ್ಡೆಯೇಕೆ? ಅಲ್ಲಿಯ ಪರಿಸರ ಸೂಕ್ಷ್ಮತೆ ಮತ್ತು ಜೀವವೈವಿಧ್ಯದ ಉಳಿವಿಗಾಗಿ ನೀಡಿರುವ ಡಾ. ಕೆ. ಕಸ್ತೂರಿರಂಗನ್ ವರದಿಗೆ ಪದೇಪದೇ ನಮ್ಮ ರಾಜ್ಯದ ಜನಪ್ರತಿನಿಧಿಗಳಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ನಮ್ಮ ಮನೆಗೆ ನಾವೇ ಕಿಚ್ಚಿಟ್ಟಂತಿದೆ. ಇದರ ಹಿಂದಿನ ಉದ್ದೇಶವಾದರೂ ಏನು? ಒಂದುವೇಳೆ ಅಭಿವೃದ್ಧಿಯ ಹೆಸರಿನಲ್ಲಿ ವೈಯಕ್ತಿಕ ಲಾಭದ ವಾಸನೆಯಿದ್ದಲ್ಲಿ ಅದು ಖಂಡಿತ ಕ್ಷಮಾರ್ಹವಲ್ಲ. ಇಂತಹ ನಡೆಯನ್ನು ಎಲ್ಲರೂ ವಿರೋಧಿಸಬೇಕು. ಅಲ್ಲದೆ ಪಶ್ಚಿಮಘಟ್ಟಗಳ ಜೊತೆಗೆ ನಾಡಿನ ಇನ್ನುಳಿದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಉಳಿಸುವಲ್ಲಿ ನಮ್ಮ ಆಂದೋಲನದ ಧ್ವನಿ ಇನ್ನಷ್ಟು ಗಟ್ಟಿಗೊಳ್ಳಬೇಕು.

ಮೊನ್ನೆ ಮೊನ್ನೆ ನಮ್ಮ ಕಣ್ಣೆದುರೇ ನಡೆದ ಕೊಡಗು ಮತ್ತು ಕೇರಳದ ದುರಂತಗಳಿಂದ ನಾವು ಪಾಠ ಕಲಿತಂತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಅನುಭವಿಸುವ ಕಷ್ಟದ ಪರಿವೆಯೂ ನಮ್ಮ ರಾಜಕಾರಣಿಗಳನ್ನು ಎಚ್ಚರಿಸಿಲ್ಲ. ಪ್ರಕೃತಿ, ಪರಿಸರದಂತಹ ಸೂಕ್ಷ್ಮ ವಿಚಾರಗಳಲ್ಲಿ ಸರ್ಕಾರವು ವಿಜ್ಞಾನಿಗಳ ಮತ್ತು ಪರಿಸರವಾದಿಗಳ ಸಲಹೆಗಳನ್ನು, ಅಧ್ಯಯನ ವರದಿಗಳನ್ನು ನಿಷ್ಪಕ್ಷಪಾತವಾಗಿ ಪರಿಗಣಿಸಬೇಕು. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಈಗ ನಡೆ
ಯುತ್ತಿರುವ ಪ್ರಯೋಜನಕಾರಿಯಲ್ಲದ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸಿ, ಅಲ್ಲಿಯ ಜೀವಂತಿಕೆಯನ್ನು ಅದರಷ್ಟಕ್ಕೆ ಬಿಟ್ಟರೆ ಘಟ್ಟ ಉಳಿದೀತು. ಇಲ್ಲವಾದರೆ ಕೊಡಗಿನ ಗುಡ್ಡಗಳು ಕರಗಿದಂತೆ ಪಶ್ಚಿಮಘಟ್ಟಗಳು ಸರಿದರೆ ಆಗಬಹುದಾದ ಅನಾಹುತ, ಮುಂದಿನ ಪರಿಣಾಮಗಳನ್ನು ಊಹಿಸುವುದೂ ಕಷ್ಟವಾದೀತು.

ಧರ್ಮಾನಂದ ಶಿರ್ವ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.