ಕರ್ನಾಟಕ ವಿಧಾನಸಭೆಯಲ್ಲಿ ದುರ್ಯೋಧನ, ಕರ್ಣ ಆದಿಯಾಗಿ ಅನೇಕ ಪುರಾಣ ಪುರುಷರ ಹೆಸರುಗಳು ಈಚೆಗೆ ಪ್ರಸ್ತಾಪವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಆ ಬಗ್ಗೆ ನನ್ನ ತಕರಾರು ಅಲ್ಲ. ಬದಲಿಗೆ, ಜುಲೈ 10ರಂದು ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರವಾದ ಗೇಮ್ ಷೋ ಒಂದರಲ್ಲಿ ಕೇಳಲಾದ ಒಂದು ಪ್ರಶ್ನೆಯ ಬಗ್ಗೆ ನನ್ನ ತಕರಾರು.
ಪ್ರಶ್ನೆ– ಮಹಾಭಾರತದ ಪ್ರಕಾರ ಪಾಂಡವರ ರಾಜಧಾನಿ ಯಾವುದು? ಅದಕ್ಕೆ ಕೊಟ್ಟಿದ್ದ ನಾಲ್ಕು ಆಯ್ಕೆಗಳಲ್ಲಿ ಹಸ್ತಿನಾವತಿ ಹಾಗೂ ಇಂದ್ರಪ್ರಸ್ಥ ಎರಡೂ ಇದ್ದವು. ಅಭ್ಯರ್ಥಿ ‘ಹಸ್ತಿನಾವತಿ’ ಎಂದು ಉತ್ತರ ಕೊಟ್ಟದ್ದರಿಂದ ಉತ್ತರ ಸರಿ ಇಲ್ಲ ಎಂದು ನಿರ್ಧರಿಸಲಾಯಿತು. ಇಂದ್ರಪ್ರಸ್ಥ ಸರಿ ಉತ್ತರ ಎಂದು ಹೇಳಿ ಮುಂದಿನ ಆಟಕ್ಕೆ ಅವಕಾಶವನ್ನು ನಿರಾಕರಿಸಲಾಯಿತು.
ಪಾಂಡುರಾಜ ಹಸ್ತಿನಾವತಿಯ ಅಭಿಷಿಕ್ತ ರಾಜ. ಅವನು ವಾನಪ್ರಸ್ಥಕ್ಕೆ ಹೋದಾಗ ಹುಟ್ಟಿದ ಮಕ್ಕಳೆಲ್ಲರೂ ಹಸ್ತಿನಾವತಿಯ ಉತ್ತರಾಧಿಕಾರಿಗಳು. ಮಧ್ಯಂತರದಲ್ಲಿ ಪಾಂಡವರು ಇಂದ್ರಪ್ರಸ್ಥವನ್ನು ರಾಜಧಾನಿಯನ್ನಾಗಿ ಹೊಂದಿದ್ದು, ಜೂಜಿನಲ್ಲಿ ಸೋತ ಮೇಲೆ ಹಸ್ತಿನಾವತಿಯ ಅಡಿಯಾಳಾಗಿದ್ದರು. ಮಹಾಭಾರತದ ಯುದ್ಧದಲ್ಲಿ ಹಸ್ತಿನಾವತಿಯನ್ನು ಗೆದ್ದಮೇಲೆ ಪಾಂಡವರು ಇಂದ್ರಪಸ್ಥಕ್ಕೆ ಹೋಗದೆ ಹಸ್ತಿನಾವತಿಯಿಂದಲೇ ರಾಜ್ಯಭಾರ ಮಾಡಿದ್ದಾರೆ.
ಈಗ ಹೇಳಿ, ಪಾಂಡವರ ರಾಜಧಾನಿ ಇಂದಪ್ರಸ್ಥವೋ? ಹಸ್ತಿನಾವತಿಯೋ?
–ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.