ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಅತಿವೃಷ್ಟಿ ಹಾಗೂ ಪ್ರವಾಹದಿಂದ ತತ್ತರಿಸಿವೆ. ಜೀವ, ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಪ್ರಕೃತಿ ನಾಶದೊಂದಿಗೆ ಮಾನವ ನಿರ್ಮಿತ ಮನೆ– ಮಠ, ಸಂಕ, ಸೇತುವೆ, ರಸ್ತೆ... ಇತ್ಯಾದಿಗಳಿಗೂ ಹಾನಿಯಾಗಿದೆ. ಸರ್ಕಾರದ ಪರಿಹಾರ ಕಾರ್ಯಗಳೊಂದಿಗೆ ನಾಡಿನ ಮೂಲೆಮೂಲೆಗಳಿಂದಲೂ ಸಹಾಯಹರಿದು ಬರುತ್ತಿದೆ. ಇಂಥ ಸಂದರ್ಭದಲ್ಲಿ ಜನಸಾಮಾನ್ಯರು ಒಂದು ಪ್ರಶ್ನೆ ಕೇಳುತ್ತಿದ್ದಾರೆ:
ಸಂಸತ್ ಸದಸ್ಯರಿಗೆ ಲಕ್ಷ ರೂಪಾಯಿ ಮೌಲ್ಯದ ಐ ಫೋನ್‌ಗಳನ್ನು ಉಡುಗೊರೆಯಾಗಿ ಕೊಟ್ಟ ಸಚಿವರೇ,ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕಾರನ್ನು ಬಳಕೆಗೆ ಕೊಟ್ಟ ಸಚಿವರೇ, ಮುಖ್ಯಮಂತ್ರಿಯ ಹತ್ತು ನಿಮಿಷದ ಪ್ರಮಾಣವಚನಕ್ಕೆ ಗಣ್ಯ ಅತಿಥಿಗಳ ಒಂದೆರಡು ಗಂಟೆ ಹಾಜರಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದವರೇ, ಗಣಿಗಾರಿಕೆ ಮೂಲಕ ಇಡೀ ನಿಸರ್ಗವನ್ನು ಹಾಳುಗೆಡವಿದ, ಮಗಳ ಮದುವೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಿದವರೇ, ಪಕ್ಷಗಳ, ಜಾತಿ–ಮತಗಳ ಸಮಾವೇಶಗಳನ್ನು ನಡೆಸಿ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡುವ ನಾಯಕರೇ, ಸಂಘಸಂಸ್ಥೆಗಳೇ, ಚುನಾವಣೆಗಳಲ್ಲಿ ಸ್ಪರ್ಧಿಸಿ ಅಕ್ರಮವಾಗಿ ಅಪಾರ ಹಣವನ್ನು ಖರ್ಚು ಮಾಡುವ ಉಮೇದುವಾರರೇ, ಸೇವಾಸಂಸ್ಥೆಗಳ ಹಾಗೂ ದೈವ ಧರ್ಮದ ಹೆಸರಿನಲ್ಲಿ ಅಪಾರ ಪ್ರಮಾಣದ ತೆರಿಗೆಮುಕ್ತ ದೇಣಿಗೆ ಪಡೆಯುವ ಮಠಮಂದಿರಗಳೇ... ಹೇಳಿ, ಮಳೆ ಮತ್ತು ಪ್ರವಾಹಗಳಿಂದ ಸಂತ್ರಸ್ತರಾಗಿರುವ ನಮ್ಮ ಜನರಿಗಾಗಿ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಅಥವಾ ಸಹಾಯ ಏನು?
-ಎನ್. ನರಹರಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.