ADVERTISEMENT

ಹೊಸ ಪಂಥ ಯಾಕೆ ಬೇಕು?

ಡಾ.ನಿಂಗಪ್ಪ ಮುದೇನೂರು
Published 22 ಫೆಬ್ರುವರಿ 2019, 20:00 IST
Last Updated 22 ಫೆಬ್ರುವರಿ 2019, 20:00 IST

‘ಬನ್ನಿ, ಸಂವಿಧಾನ ಪಂಥೀಯರಾಗೋಣ...’ ಎಂಬ ಅರುಣ್ ಜೋಳದಕೂಡ್ಲಿಗಿ ಅವರ ಕರೆ (ಸಂಗತ, ಫೆ.22) ಓದುವುದಕ್ಕೆ ಹಿತವಾಗಿದೆ. ಆದರೆ, ನಾವೆಲ್ಲಾ ಸಂವಿಧಾನದ ಆಶಯ, ನೆರಳಿನೊಳಗೇ ಬದುಕುತ್ತಾ ಇರುವವರು. ಮತ್ಯಾಕೆ ಈ ಪಂಥ, ಪಂಥೀಯತೆ? ಈಗಿರುವ ‘ಪಂಥ’ಗಳಿಂದಲೇ ರೇಜಿಗೆಯಾಗಿದ್ದು ಸಾಕು.

ಕುವೆಂಪು ಹೇಳಿದ್ದು ‘ಮನುಜಮತ ವಿಶ್ವಪಥ’ವೆಂದು. ಸಮಷ್ಟಿಪ್ರಜ್ಞೆಯ ಮೂಲಕವೇ ಲೋಕದ ದಾರಿಯನ್ನು ಮುಟ್ಟುವ ಸಾಮರಸ್ಯದ ನಡಿಗೆಯನ್ನೇ ಅವರು ಪ್ರತಿಪಾದಿಸಿದರು. ಕುವೆಂಪು ಅವರ ‘ಮತ’ದ ಪರಿಕಲ್ಪನೆಯಲ್ಲಿಯೇ ಪ್ರಜಾತಾಂತ್ರಿಕವಾದ, ಸಾಂವಿಧಾನಿಕ ಆಶಯಗಳೆಲ್ಲಾ ಜೀವಸೆಲೆ ಪಡೆದು ನಿಂತಿವೆ. ಪಂಥಗಳು ಮತ್ತೆ ಹೊರಳುದಾರಿಗಳನ್ನು ಸೃಷ್ಟಿಸುತ್ತವೆ. ಭಿನ್ನವಾದ ರಾಜಕಾರಣವೊಂದು ಹುಟ್ಟಿಕೊಂಡು ಇಲ್ಲಿಯೂ ಒಂದು ಸಾಂಸ್ಕೃತಿಕವಾದ ಯಾಜಮಾನ್ಯ ವ್ಯವಸ್ಥೆ ರೂಪು ಪಡೆಯುತ್ತದಷ್ಟೇ.

ಸಂವಿಧಾನಬದ್ಧವಾಗಿ ಆಳುವುದಕ್ಕೆ, ಬದುಕುವುದಕ್ಕೆ, ನುಡಿದಂತೆ ನಡೆಯುವುದಕ್ಕೆ ಹೇಳಿಕೊಟ್ಟ, ಓದಿಸಿಟ್ಟ ಪಾಠಗಳನ್ನೇ ನಾವು ಸರಿಯಾಗಿ ಕಲಿತಿಲ್ಲ. ನಾವು ಮಾಡಬಹುದಾದ ಮಹತ್ಕಾರ್ಯವೆಂದರೆ, ನಾವೂ ನಮ್ಮ ಮಕ್ಕಳೆಲ್ಲಾ ಸಂವಿಧಾನವನ್ನು ನಿತ್ಯವೂ ಧ್ಯಾನಿಸುವಂತಿರಬೇಕು. ಅದು ನಮ್ಮೆಲ್ಲರ ಪ್ರಾರ್ಥನೆ ಮತ್ತು ವಿವೇಕವೂ ಆಗಬೇಕು. ಹಾಗೆಯೇ ನಮ್ಮೆಲ್ಲಾ ಮಾನವಿಕ ಪಠ್ಯಗಳಲ್ಲಿ ಸಂವಿಧಾನದ ಹೃದಯ ಸಂವಾದವಿರಬೇಕು.

ADVERTISEMENT

- ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.