ADVERTISEMENT

ಪ್ರಜಾವಾಣಿ@75: ಪ್ರಜಾವಾಣಿ ಅಮೃತ ಮಹೋತ್ಸವ- ಓದುಗರಿಂದ ಅಭಿನಂದನಾ ಸಂದೇಶಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 16:16 IST
Last Updated 18 ಅಕ್ಟೋಬರ್ 2022, 16:16 IST
   

ನನ್ನ ಬೆಳೆಸಿದ್ದೇ ಪ್ರಜಾವಾಣಿ!
ಪ್ರಜಾವಾಣಿ ಯಾವತ್ತೂ ಜನರ ದನಿಯಾದ ಏಕೈಕ ದೈನಿಕ. ಒಂದು ಪ್ರಸಂಗ ಪ್ರಸ್ತಾಪಿಸುತ್ತಿದ್ದೇನೆ. ಎಸ್.ಎಮ್.ಕೃಷ್ಣ ಅವರ ಆಡಳಿತವಿತ್ತು. ಆಗ ಸರಕಾರ ಖಾಸಗಿ ಅನುದಾನಿತ ಕಾಲೇಜುಗಳ ಪ್ರತಿಶತ ೧೫ ರಷ್ಟು ಅನುದಾನವನ್ನು ಕಡಿತ ಮಾಡಲು ಹೊರಟಿತ್ತು. ಸರಕಾರದ ಅಂದಿನ ಆ ಯೋಜಿತ ನೀತಿಯನ್ನು ಖಂಡಿಸಿದ್ದೇ ನಮ್ಮ ಹೆಮ್ಮೆಯ ಪ್ರಜಾವಾಣಿ! ಈ ನೀತಿ ಮಾನವ ವಿರೋಧಿ ಹಾಗು ಕಾಲೇಜು ಮತ್ತು ಇತರ ಅನುದಾನಿತ ಶಾಲೆಗಳ ಶಿಕ್ಷಕರ, ಸಿಬ್ಬಂದಿಗಳ ಅನ್ನ ಕಸಿಯುವ ಅನಿಷ್ಟ ಯೋಜನೆ ಎಂದು ಸರಕಾರಕ್ಕೆ ಚಾಟಿ ಬೀಸಿತು. ಒಂದು ಅಭಿಯಾನ ಸ್ವರೂಪದಲ್ಲಿ ಅನುದಾನಿತ ಶಿಕ್ಷಕಕರ ಬೆನ್ನಿಗೆ ನಿಂತು ಪ್ರಜಾವಾಣಿ ಅದರಲ್ಲಿ ಯಶಸ್ಸು ಕಂಡಿತು. ಶಿಕ್ಷಕರ ಸಂಬಳಕ್ಕೆ ಬೀಳಲಿದ್ದ ಕತ್ತರಿಯನ್ನು ಕಿತ್ತು ಬಿಸಾಕಿತು. ಸರಕಾರ ಆ ಯೋಜನೆಯನ್ನು ಕೈಬಿಟ್ಟಿತು.

ಸದ್ಯದ ದುರಿತ ಕಾಲದಲ್ಲೂ ಸಹ ಜನಪರ ವಾಣಿಯಾಗಿ ಪ್ರಭುತ್ವಗಳ ದುರಾಡಳಿತ, ಜನವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿ, ವಿಮರ್ಶಿಸಿಸುತ್ತ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತ ಬಂದಿದೆ.

ಇದಷ್ಟೆ ಅಲ್ಲ, ನನ್ನನ್ನು ಬೆಳಿಸಿದ್ದೇ ಪ್ರಜಾವಾಣಿ. ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಕುರಿತ ಬರಹಗಳನ್ನು ಎರಡು ದಶಕಗಳಿಗೂ ಮೀರಿದ ಅವಧಿಯಲ್ಲಿ ಪ್ರಕಟಿಸುತ್ತ ಬಂದಿದೆ. ಆ ನಿಟ್ಟಿನಲ್ಲಿ ನನ್ನೊಳಗೆ ಆತ್ಮವಿಶ್ವಾಸ ಹೆಚ್ಚಿಸಿದ್ದೂ ನಮ್ಮ ಪ್ರಜಾವಾಣಿಯೇ! ಈ ಪತ್ರಿಕೆಯಿಂದ ಒಬ್ಬ ನಾಟಕಕಾರ, ಕತೆಗಾರ ಮತ್ತು ಚಿತ್ರಕಲಾವಿದನಾಗಿ ರೂಪುಗೊಂಡಿರುವುದಕ್ಕೆ ನನಗೆ ಅತೀವ ಸಂತೋಷವೂ ಇದೆ.
ಪ್ರಜಾವಾಣಿಗೆ ತುಂಬು ಹೃದಯದ ಶುಭಾಶಯಗಳು.
–ಡಾ.ಡಿ.ಎಸ್.ಚೌಗಲೆ ಕತೆಗಾರ ಮತ್ತು ಚಿತ್ರ ಕಲಾವಿದ-ಬೆಳಗಾವಿ

*
ನಾಲ್ಕು ದಶಕಗಳಿಂದ ಒಡನಾಡಿ!
1975 ರಿಂದ ಪ್ರಜಾವಾಣಿ ಓದುಗನಾದ ನಾನು ಇಂದಿನವರೆಗೂ ಪ್ರಜಾವಾಣಿಯನ್ನು ಪ್ರೀತಿ ಮತ್ತು ಗೌರವದಿಂದ ಓದುತ್ತಿದ್ದೇನೆ. ನನ್ನ ಜೀವನದ ದಿಕ್ಕು ಬದಲಾವಣೆಗೆ ಪ್ರಜಾವಾಣಿಯೂ ಒಂದು ಕಾರಣ. ಯಾವುದೇ ಸಮಯದಲ್ಲಿಯೂ ತನ್ನ ನಿಲುವು, ತತ್ವ, ಸಿದ್ದಾಂತಗಳೊಂದಿಗೆ ರಾಜಿಮಾಡಿಕೊಳ್ಳದೇ, ಪಕ್ಷಾತೀತವಾಗಿ ಮುನ್ನುಗ್ಗಿದ ಪತ್ರಿಕೆ ಪ್ರಜಾವಾಣಿ. ಕಾಸಿಗಾಗಿ ಸುದ್ದಿ ಎನ್ನುವ ಅಸಹ್ಯಕರ ವಾತಾವರಣದಲ್ಲಿ ಓದುಗರ ನಂಬಿಕೆಗೆ ದ್ರೋಹ ಬಗೆಯದ ಪತ್ರಿಕೆ ಪ್ರಜಾವಾಣಿ. ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಸುದ್ದಿ ನಂಬಬಹುದು ಎನ್ನುವಷ್ಡರ ಮಟ್ಟಿಗೆ ಓದುಗರ ವಿಶ್ವಾಸಗಳಿಸಿ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿ ನಾನೊಬ್ಬ ಲೇಖಕನಾಗಿ ಬೆಳೆಯಲು ಕಾರಣಿಕರ್ತವಾದ ಪತ್ರಿಕೆ, ಅಮೃತ ಮಹೋತ್ಸವದಿಂದ ಶತಮಾನೋತ್ಸವದ ವರೆಗೆ ಬೆಳಯಲಿ ಎಂಬುದು ನಮ್ಮೆಲ್ಲರ ಹಾರೈಯ್ಕೆ.
-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ.

*
ಜನರ ದನಿ..
ನನ್ನ ತಂದೆ ಗಮಕಿ ಎಂ. ರಾಘವೇಂದ್ರರಾವ್ ನಾಡಿನ ಪ್ರಸಿದ್ಧ ಗಮಕಿಗಳು. ಅವರ ಅಚ್ಚುಮೆಚ್ಚಿನ ಪತ್ರಿಕೆ ಎಂದರೆ ಪ್ರಜಾವಾಣಿ. 1999ರವರೆಗೆ ಜೀವಿಸಿದ್ದ ಅವರು ತಮ್ಮ ಪ್ರತಿಕ್ರಿಯೆಗಳನ್ನು ವಾಚಕರ ವಾಣಿ ವಿಭಾಗಕ್ಕೆ ಆಗಾಗ ಬರೆಯುತ್ತಿದ್ದರು. ಅವರ ಯಾವ ಬರಹವು ಪ್ರಜಾವಾಣಿಯಲ್ಲಿ ಪ್ರಕಟವಾಗದೇ ಇರುತ್ತಿರಲಿಲ್ಲ. ಪ್ರಜಾವಾಣಿ ನಾನು ತಿಳಿದ ಮಟ್ಟಿಗೆ ಜನರ ದನಿಯಾಗಿ ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಯಾವುದೇ ವಿಷಯಗಳಾದರೂ ಇದಮಿತ್ಥಂ ಎಂದು ಹೇಳುವ ಪತ್ರಿಕೆ. ಭಾನುವಾರದ ಪತ್ರಿಕೆ ಅಕಸ್ಮಾತ್ ಬಾರದೇ ಹೋದರೆ ಅಂದು ನಾವು ಏನನ್ನೊ ಕಳೆದುಕೊಂಡೆವು ಎಂಬ ಭಾವನೆ ನನ್ನದು.

–ಕರ್ನಾಟಕ ಕಲಾಶ್ರೀ ಡಾ.ಎಂ.ಆರ್.ಸತ್ಯನಾರಾಯಣ

ADVERTISEMENT

*
ನನ್ನ ಆಪ್ತಮಿತ್ರ - ಪ್ರಜಾವಾಣಿ. ನನಗೆ ಈಗ 83 ವರ್ಷ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಾಗಿ 1967ರಲ್ಲಿ ಸೇವೆಗೆ ಸೇರಿದ್ದು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದನಿಂದಲೂ (ಎಸ್ಎಸ್ಎಲ್‌ಸಿ 1957-58) ಇಂದಿನವರೆಗೂ 'ಪ್ರಜಾವಾಣಿ ದಿನ ಪತ್ರಿಕೆ' ನನ್ನ ನೆಚ್ಚಿನ ಪತ್ರಿಕೆಯಾಗಿದೆ. ಶೈಕ್ಷಣಿಕ ಅಭಿವೃದ್ಧಿಗೆ, ಸಾಮಾನ್ಯ ಜ್ಞಾನದ ಬೆಳವಣಿಗೆಗೆ ನಿತ್ಯ ಭವಿಷ್ಯ, ಛೂಬಾಣ, ಸಂಪಾದಕೀಯ, ವಾರದ ಕತೆ, ಕ್ರೀಡಾ ಸುದ್ದಿ ಮುಂತಾದ ಎಲ್ಲಾ ವಿಷಯಗಳನ್ನು ಓದಿ, ಶಾಲೆಯಲ್ಲಿ ಪ್ರಾರ್ಥನೆಗೆ ಮೊದಲು ದಿನ ಪತ್ರಿಕೆಯನ್ನು (ಮುಖ್ಯಾಂಶಗಳನ್ನು) ಓದುವ ಅಭ್ಯಾಸ ಮಾಡಿಸಿದ್ದೆ.

ನನ್ನ 35 ವರ್ಷ ಸೇವೆಯಲ್ಲಿ 'ಪ್ರಜಾವಾಣಿ ಪತ್ರಿಕೆಯು ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರಿದೆ ಎಂದು ಹೇಳಲು ಸಂತೋಷವಾಗುತ್ತದೆ.

ಕರ್ನಾಟಕದ ಪ್ರಮುಖ ಪತ್ರಿಕೆಯಾಗಿ ಈಗ 75 ವರ್ಷಕ್ಕೆ ಕಾಲಿಟ್ಟಿರುವ, ಕ್ಷಣವನ್ನು ನೆನೆಪಿಸಿಕೊಳ್ಳುವುದೇ ಒಂದು ಅದೃಷ್ಟ, ಈ ಪತ್ರಿಕೆಯು ಮುಂದೆಯೂ ಬೆಳೆದು ಮಕ್ಕಳ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲೆಂದು ಹಾರೈಸುತ್ತೇನೆ.

ಈ ಸುದ್ದಿಯ ಜೊತೆಗೆ ಚಿತ್ರಗಳು, ವ್ಯಕ್ತಿಗಳ ಪರಿಚಯ, ವಾಚಕರವಾಣಿ, ಸುಭಾಷಿತಗಳು ನಾನು ಸಂಗ್ರಹಿಸಿ ವಿದ್ಯಾರ್ಥಿಗಳಿಗೂ ಪ್ರತಿದಿನದ ಸುಭಾಷಿತ ಬರೆದಿಟ್ಟುಕೊಳ್ಳಲು ಹೇಳುತ್ತಿದ್ದೆ. ಓದುಗರ ಪ್ರತಿಕ್ರಿಯೆಗಳು ಕರ್ನಾಟಕದ ಅದ್ಯಂತ ಬರುತ್ತಿರುವುದನ್ನು ನೋಡಿ, ನನಗೂ ನನ್ನ ಅನುಭವ ತಿಳಿಸಲು ಅವಕಾಶವಾಯಿತು.

–ಎಸ್.ಎನ್. ಮೂರ್ತಿ (ನಿ), ಶಿಕ್ಷಣಾಧಿಕಾರಿ, ವಸಂತಪುರ, ಬೆಂಗಳೂರು

*
ಪ್ರಜಾವಾಣಿ ಅಮೃತ ಮಹೋತ್ಸವಕ್ಕೆ ಒಂದು ಅಭಿನಂದನೆ
ಎಪ್ಪತೈದು ವಸಂತಗಳನ್ನು ಪೂರೈಸಿದ ಪ್ರಜಾವಾಣಿಗೆ ಅಭಿನಂದನೆಗಳು. ಪ್ರಜಾವಾಣಿ ಸದಾ ಉತ್ಕೃಷ್ಟ ಪತ್ರಿಕೆಯಾಗಿ ಉಳಿದಿದೆ. ನಮ್ಮ ತಂದೆ ಶಿಕ್ಷಕ ಹಾಗೂ ನಾಟಕಕಾರ ಟಿ.ವೀರಭದ್ರ ರಾಜು ಅವರು ಪ್ರಜಾವಾಣಿ ಹಾಗೂ ಸುಧಾ ಪತ್ರಿಕೆಗಳನ್ನು ತರಿಸುತ್ತಿದ್ದರು. ಇಡೀ ಹಳ್ಳಿಗೆ ಒಂದೇ ಪತ್ರಿಕೆ. ಅದು ಹೋಬಳಿ ಕೇಂದ್ರದಿಂದ ಬೆಳಿಗ್ಗೆ ಸುಮಾರು 10 ಗಂಟೆಗೆ ಬರುವ ಬಸ್ಸಿನಲ್ಲಿ ಬರುತ್ತಿತ್ತು. ನಾವೆಲ್ಲಾ ಬಸ್ಸಿನ ಹತ್ತಿರ ಕಾಯುತ್ತಿದೆವು. ನಮ್ಮ ತಂದೆ ಒಂದೂ ಅಕ್ಷರ ಬಿಡದ ಹಾಗೆ ಪತ್ರಿಕೆಯನ್ನು ಓದುತ್ತಿದ್ದರು. ನಮಗೆ, ಅಮ್ಮನಿಗೆ ಸುದ್ದಿ ಹೇಳುತ್ತಿದ್ದರು, ಅದಲ್ಲದೆ ನಮಗೆ ಓದಲು ಹೇಳುತ್ತಿದ್ದರು. ಅವರ ಶಾಲೆಯಲ್ಲಿ ಮೊದಲ ಬಾರಿಗೆ, ಪ್ರಾರ್ಥನೆಯ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿನ ಪ್ರಮುಖ ಸುದ್ದಿ ಓದುವ ಪದ್ದತಿ ಜಾರಿಗೆ ತಂದರು. ಶಾಲೆಯ ಮಕ್ಕಳು ಸರದಿಯಂತೆ ದಿನಾ ಓದಬೇಕಾಗಿತ್ತು. ಎಷ್ಟೋ ಸಲ ಪತ್ರಿಕೆ ಊರಿನ ಆಸಕ್ತರು ಓದಿದ ಮೇಲೆ ನಮ್ಮ ಮನೆ ಸೇರುತ್ತಿತ್ತು.

ಪ್ರಜಾವಾಣಿ ಬಾಲ್ಯದ ಆಟದಂತೆ ನೆನೆಪಿನಂಗಳದಲ್ಲಿ ಉಳಿದಿದೆ. ಪತ್ರಿಕೆಯನ್ನು ಓದದ ದಿನವೇ ಇಲ್ಲ. ಅಮೆರಿಕೆಗೆ ಬಂದಮೇಲೆ ಪತ್ರಿಕೆಯನ್ನು ಆನ್-ಲೈನ್ ನಲ್ಲಿ ಓದುತ್ತಿದ್ದೇನೆ. ಮೊದಲಬಾರಿಗೆ ನನ್ನ ಕವನ ಹಾಗೂ ಕಥೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದಾಗ ನನ್ನ ಹರ್ಷಕ್ಕೆ ಪಾರವೇ ಇರಲಿಲ್ಲ, ಎಲ್ಲರೊಡನೆ ಹೆಮ್ಮೆಯಿಂದ ಹಂಚಿಕೊಂಡಿದ್ದೆ. ಪತ್ರಿಕೆಯನ್ನು ಓದುತ್ತಿರುವಾಗ ತಂದೆಯ, ಮನೆಯವರ, ಊರಿನವರ ಜೊತೆ ಇದ್ದಂತೆ ಭಾಸವಾಗುತ್ತದೆ. ಪ್ರಜಾವಾಣಿಯೊಂದಿಗಿನ ಒಡನಾಟದ ಬಗ್ಗೆ ಪೂರ್ತಿ ಬರೆಯಲು ದಿನಗಳು ಸಾಕಾಗುವುದಿಲ್ಲ.

ಸದಾ ಹೀಗೆ ಪತ್ರಿಕೆಯು ಸಮಾಜದ ಸೌಹಾರ್ದತೆಗೆ, ಸಾಮರಸ್ಯಕ್ಕೆ, ಸಮಾನತೆಗೆ ಬೆಳಕಾಗಲಿ. ಪತ್ರಿಕೆ ಇನ್ನೂ ಎತ್ತರಕ್ಕೆ ಬೆಳೆದು ಇಡೀ ಪ್ರಪಂಚದ ಕನ್ನಡಿಗರ ಮನೆ, ಮನ ತುಂಬಲಿ.

-ಎಂ.ವಿ.ಶಶಿಭೂಷಣ ರಾಜು, ಸಾಹಿತಿ, ಯುಎಸ್ಎ

*
ಜನಸ್ನೇಹಿ ಪತ್ರಿಕೆ....

ಪ್ರೀತಿಯ ಪತ್ರಿಕೆ ಪ್ರಜಾವಾಣಿಗೆ 75 ವರ್ಷಗಳಾಗಿರುವುದು ಹೆಮ್ಮೆಯ ಸಂಗತಿ. ಹಾಗೆಯೇ ನನ್ನ ಮೊದಲ ನೆನಪು ಹಿಂದಕ್ಕೆ ಸರಿದು, 1955ಕ್ಕೆ ಬಂದು ತಲುಪುತ್ತದೆ. ಅಗ ನಾನು ಗುಮಡ್ಲುಪೇಟೆ ತಾಲ್ಲೂಕಿನ ಹೊರೆಯಾಲದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದೆ. ನಮ್ಮ ತಾತ ಗುಂಡ್ಲುಪೇಟೆಗೆ ಹೋದಾಗಲೆಲ್ಲ ಪ್ರಜಾವಾಣಿ ಪತ್ರಿಕೆ ತರುತ್ತಿದ್ದರು. ಪತ್ರಿಕೆಯ ಶೀರ್ಷಿಕೆಯ ಅಕ್ಷರಗಳನ್ನು ಕೂಡಿಸಿ ಓದುವುದರ ಮೂಲಕ ನಾನು ಓದುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಮಾತ್ರವಲ್ಲ, ನಮ್ಮ ತಂದೆಯೂ ಮೈಸೂರಿಗೆ ಹೋದಾಗಲೆಲ್ಲ ತರುತ್ತಿದ್ದ ಪತ್ರಿಕೆ ಪ್ರಜಾವಾಣಿ. ಆಗಲೂ ಕನ್ನಡದ ಓದನ್ನು ಮುಂದುವರೆಸಿದ್ದು ಈ ಪತ್ರಿಕೆಯ ಮೂಲಕವೇ. ಆ ದಿನಗಳಲ್ಲಿ ಯಾವುದಾದರೊಂದು ಆಕರ್ಷಕ ಸುದ್ದಿ ಬೇರೆ ಪತ್ರಿಕೆಗಳಲ್ಲಿ ಬಂತೆಂದರೆ ನಮ್ಮೂರಿನ ಗೋಪಾಲಶೆಟ್ಟರು ಅದು ಪ್ರಜಾವಾಣಿಲಿ ಬಂದಿದ್ದದ ನೋಡಿ ಅಂತ ಹೇಳುತ್ತಿದ್ದುದು ನನಗೆ ಈಗ ಕೇಳಿಸಿದಂತಿದೆ. ಈಗ ಮೂವರೂ ಇಲ್ಲ. ಆದರೆ, ಪ್ರಜಾವಾಣಿ ಅಂದಿನಿಂದ ಇಂದಿನವರೆಗೆ ಬೆಳಗಿನ ಅಷ್ಟೊತ್ತಿಗೇ ಬಂದು ನನ್ನ ಮಗ್ಗುಲಲ್ಲಿ ಕೂತುಬಿಡುತ್ತದೆ. ಕರ್ನಾಟಕದ ಜನಜೀವನವನ್ನು ರೂಪಿಸುವುದರಲ್ಲಿ
ಮುಖ್ಯವಾಗಿ ಜನಪರವಾಗಿ, ಜನಸ್ನೇಹಿಯಾಗಿ ಬೆಳೆದುಕೊಂಡು ಬಂದಿರುವ ಪತ್ರಿಕೆ ತಾನೂ ಬೆಳೆದಿದೆ, ಜನರನ್ನೂ ಬೆಳೆಸಿದೆ, ಅದು ಮುಂದೆಯೂ ಬೆಳೆಯುತ್ತಲೇ ಹೋಗುತ್ತದೆ, ನಾಡಿನ ಜನತೆಯನ್ನೂ ಬೆಳೆಸುತ್ತಾ ಹೋಗುತ್ತದೆ ಎಂಬುದು ನನ್ನ ಅಚಲ ವಿಶ್ವಾಸ.

-ಹೊರೆಯಾಲ ದೊರೆಸ್ವಾಮಿ, 7ನೆಯ ಮೇನ್, 9ಯ ಕ್ರಾಸ್, ವಿವೇಕಾನಂದನಗರ ಮೈಸೂರು

*

ನನ್ನ ಅಚ್ಚುಮೆಚ್ಚಿನ ಪ್ರಜಾವಾಣಿಗೆ 75 ಆದರೆ, ನನ್ನ ಮತ್ತು ಪ್ರಜಾವಾಣಿಯ ಅವಿನಾಭಾವ ಸಂಬಂಧಕ್ಕೆ ಭರ್ತಿ 45 ನನಗೀಗ 69ರ ಪ್ರಾಯ. ಆ ಕಾಲದಲ್ಲಿ ಕಲಬುರಗಿಗೆ ಮಧ್ಯಾಹ್ನದ ವೇಳೆಗೆ ಬರುತ್ತಿದ್ದ ಪ್ರಜಾವಾಣಿ ಕಾಲ ಕ್ರಮೇಣ ಹುಬ್ಬಳ್ಳಿಯಲ್ಲಿ, ಹೈದರಾಬಾದ್‌ನಲ್ಲಿ , ಈಗಂತೂ ಕಲಬುರಗಿ ಯಲ್ಲೆ ಮುದ್ರಣಗೊಂಡು ನಿದ್ರೆಯಿಂದೆದ್ದು ಬಾಗಿಲು ತೇರೆದಾಗ ಅಗುವ ಪ್ರಜಾವಾಣಿಯ ದರ್ಶನದಿಂದ ನಮ್ಮ ದಿನ ಆರಂಭಗೊಳ್ಳುತ್ತದೆ.

ಬಿಸಿ ಕಾಫಿ ಹೀರುತ್ತಾ ಪತ್ರಿಕೆಯಲ್ಲಿ ಕಣ್ಣಾಡಿಸುವ ಆನಂದ ಅನುಭವಿಸಿದರಿಗೆ ಗೊತ್ತು. ನನಗೆ ಅರಿವು ಮೂಡಿದಾಗಿನಿಂದ ನಾನು ಪ್ರಜಾವಾಣಿಯ ಅಭಿಮಾನಿ. ನಾನು ಸಮಾಜಮುಖಿ ಕೆಲಸಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಆಯ್ದುಕೊಂಡದ್ದು ಪ್ರಜಾವಾಣಿಯ 'ವಾಚಕವಾಣಿ' ವೇದಿಕೆ. ನನ್ಮ ಸುಮಾರು ನಾಲ್ಕು ನೂರಕ್ಕೂ ಮಿಕ್ಕಿ ಓಲೆಗಳು ಈ ಅಂಕಣದಲ್ಲಿ ಪ್ರಕಟವಾಗಿವೆ. ಹಲವಾರು ಪ್ರಕರಣಗಳಲ್ಲಿ ಸರ್ಕಾರದಿಂದ ಧನಾತ್ಮಕ ಪ್ರತಿಕ್ರಿಯೆಯ ಕಾರಣ ಸಮಸ್ಯೆಗಳು ತಾರ್ಕಿಕ ಅಂತ್ಯ ಕಂಡಿವೆ. ಇಲ್ಲಿ ಪ್ರಕಟವಾಗುವ ನಿರ್ಭಿಡೆಯ ವಿಶೇಷ ವರದಿಗಳು/ ಲೇಖನಗಳು/ ಓಲೆಗಳು ಅಧಿಕಾರಸ್ಥರಿಗೆ ಚಾಟಿ ಬೀಸಿವೆ. ಆದರೆ, ಕೋವಿಡ್ ಕಾರಣವೋ ಏನೋ, ನನ್ನ ಅಚ್ಚುಮೆಚ್ಚಿನ 'ಪ್ರವಾಸ' ಅಂಕಣ ನಿಂತು ಹೋಗಿದೆ. ದೇಶ ಈಗ ಕೋವಿಡ್ ಪೂರ್ವದ ಕಾಲಘಟ್ಟಕ್ಕೆ ಮರಳಿರುವುದರಿಂದ, ಈ 'ಪ್ರವಾಸ' ಅಂಕಣ ಎಂದಿನಂತೆ ಪ್ರತಿ ಗುರುವಾರ ಆರಂಭವಾಗಲಿ ಎಂದು ಆಶಿಸುವೆ. ಹಾಗೇಯೆ, ಈ ಪರ್ತಿಕೆ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂಬ ಹಾರೈಕೆ ನನ್ನದು.
-ವೆಂಕಟೇಶ್ ಮುದಗಲ್, ‘ಸ್ವಾತಿ’, ಸಂಖ್ಯೆ ೩೮೨, ಜಿಡಿಎ ಬಡಾವಣೆ, ಕುಸನೂರ ರಸ್ತೆ, ಕಲಬುರಗಿ

*
ಪ್ರಜಾವಾಣಿ ಓದುವುದು ಒಂದು ಸಂಸ್ಕೃತಿ
ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸವುಳ್ಳ ಹಲವು ಪತ್ರಿಕೆಗಳು ಸಿಗುತ್ತವೆ. ಆದರೆ, ದಿನಪತ್ರಿಕೆ ಎಂದರೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಮಾತ್ರ ಎನ್ನುವಷ್ಟು ಹೆಚ್ಚು ಪ್ರಚಲಿತವಾಗಿವೆ. ಸುಮಾರು ಮೂವತ್ತು ವರ್ಷಗಳಿಂದ ಈ ಎರಡೂ ಪತ್ರಿಕೆಗಳನ್ನು ಮನೆಗೆ ತರಿಸುತ್ತೇನೆ. ಆದರೆ, ಮೊದಲು ಓದುವುದು ಮಾತ್ರ ಪ್ರಜಾವಾಣಿ. ನನಗಷ್ಟೇ ಅಲ್ಲ ಮನೆಯವರೆಲ್ಲರಿಗೂ ಪ್ರಜಾವಾಣಿಯೇ ಮೊದಲ ಆದ್ಯತೆ. ಪ್ರತಿ ನಿತ್ಯ ಮುಂಜಾನೆ ಬಾಗಿಲು ತೆರೆದರೆ ನೆನಪಾಗುವುದು ಪ್ರಜಾವಾಣಿ, ಡೆಕನ್ ಹೆರಾಲ್ಡ್ ಪತ್ರಿಕೆಗಳು ಬಂದಿವೆಯೇ ಎಂದು.

ಹೀಗೆ, ನಿತ್ಯ ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ಓದುವ ಸಂಸ್ಕೃತಿಯೇ ಬೆಳೆದು ಬಂದಿದೆ. ಒಮ್ಮೊಮ್ಮೆ ಪ್ರಜಾವಾಣಿ ಬದಲು ಬೇರೆ ಕನ್ನಡ ಪತ್ರಿಕೆ ಹಾಕಿ ಹೋಗುವುದು ಉಂಟು. ಅಂದು ಪ್ರಜಾವಾಣಿ ಓದದೇ ಇರಲು ಮನಸ್ಸು ಒಪ್ಪುವುದಿಲ್ಲ. ಅಂದು ಪತ್ರಿಕೆಯನ್ನು ಕೊಂಡು ತಂದು ಓದುವ ಅಭ್ಯಾಸ. ಹಬ್ಬದ ದಿನಗಳಲ್ಲಿ ಮನೆಗೆ ಪತ್ರಿಕೆ ಬರದೇ ಇದ್ದಾಗ ಮಾತ್ರ ಬೇಜಾರು. ಇನ್ನು ರೈಲು, ಬಸ್ಸಿನಲ್ಲಿ ಸಂಚಾರ ಮಾಡಬೇಕಾದರೆ ಪ್ರಜಾವಾಣಿ ಪತ್ರಿಕೆ ಜೊತೆಯಲ್ಲಿಯೇ ಇರಬೇಕು. ಕೆಲವೊಮ್ಮೆ ಹೊರ ರಾಜ್ಯದಲ್ಲಿ ಇರಬೇಕಾದ ಸಂದರ್ಭದಲ್ಲಿ ದಿನ ಪತ್ರಿಕೆ ಮಾರುವ ಅಂಗಡಿ ಹುಡುಕಿ ಕನ್ನಡ ಪತ್ರಿಕೆ ಹುಡುಕುವ ಅಭ್ಯಾಸ. ಅಲ್ಲಿ ಸಿಗುವುದಿಲ್ಲ ಎಂದು ತಿಳಿದರೂ ಕೂಡ ಒಮ್ಮೆ ಕೇಳಿಬಿಡೋಣ ಎನ್ನುವ ಮನೋಭಾವದಿಂದ ಪ್ರಜಾವಾಣಿ ಸಿಗುವುದೇ ಎಂದು ಕೇಳುವುದು ಉಂಟು. ಅಕಸ್ಮಾತ್ ಪತ್ರಿಕೆ ಸಿಕ್ಕರೆ ಖುಷಿ ಅಷ್ಟಿಷ್ಟಲ್ಲ. ಈಗ ಪ್ರಜಾವಾಣಿ ಆನ್‌ಲೈನ್‌ನಲ್ಲಿ ಸಿಗುವುದರಿಂದ ಹೊರ ರಾಜ್ಯಕ್ಕೆ ಭೇಟಿ ಕೊಟ್ಟಾಗ ಕೂಡ ಕನ್ನಡ ಪತ್ರಿಕೆ ಓದುವುದು ಸುಲಭವಾಗಿದೆ.

ಅಭಿಮತ, ಪುರವಣಿ, ಸಾಮಾನ್ಯ ಜ್ಞಾನ ಆರೋಗ್ಯದ ಬಗ್ಗೆ ಲೇಖನಗಳು ಉಪಯುಕ್ತವಾಗಿರುತ್ತವೆ. ಪತ್ರಿಕೆಯ ವಿನ್ಯಾಸ, ಭಾಷಾ ಪ್ರೌಡಿಮೆ ಅತ್ಯುತ್ತಮವಾದದ್ದು. ಸುದ್ಧಿ, ಅಭಿಮತ ವಿಭಾಗಗಳು ನಿಷ್ಪಕ್ಷಪಾತ ನಿಲುವಿನಿಂದ ಕೂಡಿರುತ್ತವೆ.

-ಡಾ. ಜಿ. ಬೈರೇಗೌಡ, ನಂ. 98, ಡಿಫೆನ್ಸ್ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು -97

*
ಕರ್ನಾಟಕದ ವೈಚಾರಿಕಾ ಪ್ರಜ್ಞೆ
ಕಳೆದ ಮೂರೂವರೆ ದಶಕಗಳಿಂದ ನನಗೂ ಪ್ರಜಾವಾಣಿಗೂ ಬಿಡಿಸಲಾಗದ ನಂಟು. ಮುಂದೆಯೂ ನನ್ನ ಹಾಗೂ ಕುಟುಂಬದೊಂದಿಗೆ ಅದು ಹಾಗೆಯೇ ಸಾಗಲಿದೆ ಕೂಡ. ಮಾರುಕಟ್ಟೆಯಲ್ಲಿ ಸೃಷ್ಡಿಸಿದ ಅನಾರೋಗ್ಯ ಪೈಪೋಟಿಯು ಇವತ್ತು ಒಂದು ಕನ್ನಡನಾಡಿದ ವೈಚಾರಿಕ ಸಾಕ್ಷೀ ಪ್ರಜ್ಞೆಯ ಪ್ರತ್ರಿಕೆಯು ಓದುಗರ ಕೈಗೆ ಸಿಗದಂತೆ ನೋಡಿಕೊಳ್ಳುವ ಯತ್ನಗಳು ನೇರವಾಗಿಯೇ ನಡೆಯುತ್ತಿವೆ.

ಆದರೆ ಪ್ರಜಾವಾಣಿ ಉಳಿದಿರುವುದು, ಬೆಳೆದಿರುವುದು ಹಾಗೂ‌ ಭವಿಷ್ಯದಲ್ಲಿ ಉಳಿಯುವುದು ಅದು ಮೂಲದಲ್ಲಿ ಅಳವಡಿಸಿಕೊಂಡಿರುವ ನಿಷ್ಪಕ್ಷಪಾತ ಹಾಗೂ ವೈಚಾರಿಕತೆಯ ನೆಲಗಟ್ಟೆ ಪ್ರಮುಖ ಕಾರಣ. ಈ ಕಾರಣದಿಂದಾಗಿ ನಾಡಿನ ಕಾರ್ಮಿಕ, ರೈತ, ದಲಿತ, ಸಾಂಸ್ಕೃತಿಕ, ವೈಚಾರಿಕ,ವೈಜ್ಞಾನಿಕ ಹಾಗೂ ಪ್ರಗತಿಪರ ಮನಸ್ಸುಗಳಿಗೆಲ್ಲ ಪ್ರಜಾವಾಣಿ‌ ದಿನನಿತ್ಯ ಅರಿವನ್ನು ಮೂಡಿಸುವ ಸಂಗಾತಿಯಾಗಿದೆ. ಇಂತಹ ಪ್ರಜಾವಾಣಿಗೆ 75 ರ ಶುಭಾಶಯಗಳು. ಇನ್ನೂ ನೂರಾರು ವರ್ಷಗಳಕಾಲಅಸ್ತಿತ್ವವನ್ನು ಉಳಿಸಿಕೊಂಡು ಜನರನ್ನು ಎಚ್ಚರಿಸುವ ದೀವಿಗೆಯಾಗಿ ಪ್ರಜ್ವಲಿಸಲಿ....

- ಕೆ.ಮಹಾಂತೇಶ್, ರಾಜ್ಯ ಕಾರ್ಯದರ್ಶಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)

*
ಕನ್ನಡದ ಸಾಕ್ಷಿಪ್ರಜ್ಞೆ ಪ್ರಜಾವಾಣಿ
1956ರ ನನ್ನ ಹೈಸ್ಕೂಲ್ ದಿನಗಳಿಂದಲೂ ನಾನು ಪ್ರಜಾವಾಣಿಯ ಓದುಗ. ನಾನು ಪದವಿ ವಿದ್ಯಾರ್ಥಿಯಾಗಿದ್ದಾಗ 1962ರಲ್ಲಿ ಹಳ್ಳಿಯಲ್ಲಿ ನಡೆದ ನಮ್ಮ ವಾಲಿಬಾಲ್ ಪಂದ್ಯದ ಸುದ್ದಿ ಕಳಿಸಿದಾಗ ಅದರಲ್ಲಿ ಪ್ರಕಟವಾದಾಗಿನಿಂದ ನಾನು ಅದರ ತೀವ್ರ ವ್ಯಾಮೋಹಕ್ಕೆ ಒಳಗಾಗಿದ್ದೇನೆ‌.

ನಾನು ಕಾಲೇಜು ಶಿಕ್ಷಕ ವೃತ್ತಿಗೆ ಸೇರಿದ ನಂತರ, 1970ರ ದಶಕದಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಗಳ ಅರೆಕಾಲಿಕ ವರದಿಗಾರನಾಗಿ ಕೆಲಸ ಮಾಡಲು ಅವಕಾಶವಾಗಿತ್ತು. ಪತ್ರಿಕೆ ಮಾಲೀಕ ಕೆ.ಎನ್. ಗುರುಸ್ವಾಮಿಯವರ ನಿಕಟ ಸಂಬಂಧಿಯೊಬ್ಬರ ಪ್ರಭಾವ ಬಳಸಿಕೊಂಡು ಚಿತ್ರದುರ್ಗ ಜಿಲ್ಲೆಯ ಚಿಕ್ಕ ಹಳ್ಳಿ ಸಿರಿಗೆರೆಗೆ ನೇಮಕಗೊಂಡಿದ್ದೆ.(ಆಗ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ವರದಿ ಗಾರರಿದ್ದರು).

ನನ್ನಲ್ಲಿ ಸಾಹಿತ್ಯದ ಒಲವು ಮೂಡಿಸಿದ ಪ್ರಭಾವಗಳಲ್ಲಿ ಪ್ರಜಾವಾಣಿಯ ಪಾತ್ರ ದೊಡ್ಡದು. ಪ್ರಕಟವಾಗಿರುವ ನನ್ನ ಎರಡು ಅನುವಾದಿತ ಸಂಕಲನಗಳ ಬಹುಪಾಲು ಕಥೆಗಳು ಪ್ರಕಟವಾಗಿರುವುದು ಪ್ರಜಾವಾಣಿಯಲ್ಲೇ. ಈ ಪತ್ರಿಕೆಯ ಸಾಪ್ತಾಹಿಕ/ ಭಾನುವಾರದ ಪುರವಣಿಗಳು ಹಾಗೂ ಸಂಪಾದಕೀಯ ಪುಟಗಳಲ್ಲಿ ಬಂದ ನನ್ನ ಹಾಸ್ಯ ಲೇಖನಗಳು ಮತ್ತು ಕಿರುನಗೆ ಬರಹಗಳನ್ನು ಸಂಕಲಿಸಿದ ಎರಡು ಕೃತಿಗಳು ಬಂದಿವೆ.

ಪ್ರಜಾವಾಣಿ ಪ್ರಾರಂಭದಿಂದಲೂ ನಿಷ್ಠುರ, ನಿಷ್ಪಕ್ಷಪಾತ ದೃಷ್ಟಿಯಿಂದ ಪತ್ರಿಕಾಧರ್ಮದ ಘನತೆಯನ್ನು ಕಾಪಾಡಿಕೊಂಡು ಬಂದಿರುವ ಧೀಮಂತ ಪತ್ರಿಕೆ.

ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದು ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ನನ್ನ ನೆಚ್ಚಿನ ಪ್ರಜಾವಾಣಿಗೆ ಹಾರ್ದಿಕ ಅಭಿನಂದನೆಗಳು.

– ಎಸ್‌.ಬಿ.ರಂಗನಾಥ್

*
ಜ್ಞಾನದೀವಿಗೆ....
ಪ್ರಜಾವಾಣಿ ಪತ್ರಿಕೆಗೆ 75ನೇ ಅಮೃತ ಮಹೋತ್ಸವದ ಶುಭಾಶಯಗಳು.. ಪತ್ರಿಕೆಯಿಲ್ಲದ ವ್ಯಕ್ತಿ ರೆಕ್ಕೆಗಳಿದ ಹಕ್ಕಿ ಎಂಬ ಅಂಬೇಡ್ಕರ್ ಅವರ ಮಾತಿನಂತೆ, ಇಂದಿನ ವಿದ್ಯಮಾನಗಳಲ್ಲಿ ಪತ್ರಿಕೆ ಓದದಿದ್ದರೆ ಆ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಜಾವಾಣಿ ಪತ್ರಿಕೆಯನ್ನು ನನ್ನ ವಿದ್ಯಾರ್ಥಿ ಜೀವನದ ಎಂಟನೇ ತರಗತಿಯಿಂದ ಓದುತ್ತಿದ್ದೇನೆ. ಅದರಲ್ಲಿ ಬರುವ ಪ್ರಮುಖ ಲೇಖನಗಳು ಹಾಗೂ ಪ್ರಚಲಿತ ಘಟನೆಗಳಿಂದ ಜಗತ್ತಿನ ಸಾಕಷ್ಟು ಜ್ಞಾನವನ್ನು ಪಡೆಯಲು ಅನುಕೂಲವಾಗಿದೆ.

- ವಿ.ಎನ್.ಮೌರ್ಯ ಮರ್ಚಟಹಾಳ್, ತಾ.ಜಿ.ರಾಯಚೂರು

*

ಪ್ರಜಾವಾಣಿಯೇ ಸಾಟಿ
ನಾನು ಕಳೆದ ಅರುವತ್ತು ವರ್ಷಗಳಿಂದ ಪ್ರಜಾವಾಣಿಯನ್ನು ಓದುತ್ತ ಬಂದಿದ್ದೇನೆ. ಅಕಸ್ಮಾತ್ ಎಂದಾದರೂ ಪ್ರಜಾವಾಣಿಯನ್ನು ಓದಲು
ಸಾಧ್ಯವಾಗದೆ ಇದ್ದ ದಿನ ಏನೋ ಚಡಪಡಿಕೆ. ಕೊನೆಗೆ ಮರುದಿನವಾದರೂ ಅದನ್ನು ಸಂಪಾದಿಸಿಕೊಂಡು ಓದದ ಹೊರತು ಮನಸ್ಸಿಗೆ ಸಮಾಧನವಿರುವುದಿಲ್ಲ. ಬೇರೆ ಪತ್ರಿಕೆಗಳಲ್ಲಿ ಐದು ನಿಮಿಷಕ್ಕಿಂತ ಹೆಚ್ಚು ಓದುವಂಥದು ಏನೂ ಇರುವುದಿಲ್ಲ ಎಂಬುದೇ ನನ್ನ
ಅನುಭವ.

ಆದರೆ ಪ್ರಜಾವಾಣಿ ಹಾಗಲ್ಲ. ಜನಾಭಿಪ್ರಾಯವನ್ನು ರೂಪಿಸುವಲ್ಲಷ್ಟೇ ಅಲ್ಲ, ಸಾಪ್ತಾಹಿಕ ಪುರವಣಿಗಳಲ್ಲಿ ಬರುವ ಸಾಹಿತ್ಯ
ಸಂಬಂಧೀ ಲೇಖನಗಳು, ಕಥೆ ಕವನ, ದೀಪಾವಳಿ ವಿಶೇಷಾಂಕಗಳಿಂದ ಕನ್ನಡಸಾಹಿತ್ಯಕ್ಕೂ ಅದು ನೀಡುತ್ತ ಬಂದಿರುವ ಒತ್ತಾಸೆ ಅಷ್ಟಿಷ್ಟಲ್ಲ.

ಅದರಲ್ಲಿ ಪ್ರಕಟವಾಗುವ ತನಿ ಖಾವರದಿಗಳು ಇಲಾಖೆಗಳ, ಸರ್ಕಾರದ ಕಣ್ಣು ತೆರೆಸುವಲ್ಲೂ ಶ್ಲಾಘನೀಯ ಕಾರ್ಯ ಮಾಡುತ್ತ ಬಂದಿವೆ. ಈಚಿನ ದಿನಗಳಲ್ಲಿ ಒಮ್ಮೊಮ್ಮೆ ಅದರ ನೀತಿ ಬೇಸರ ತರಿಸಿದರೂ ಅದನ್ನು ಮರೆಸುವಂತೆ ಇನ್ನೊಂದು ಯಾವುದೋ ನಿಷ್ಪಕ್ಷಪಾತ ಬರಹ
ಇರುತ್ತದೆ. ಸಂಪಾದಕೀಯಗಳು ಸರ್ಕಾರ ಮುಟ್ಟಿನೋಡಿಕೊಳ್ಳುವಂತಿರುತ್ತವೆ. ನಮ್ಮ ನೆಚ್ಚಿನ ಪ್ರಜಾವಾಣಿ ಶತಮಾನದತ್ತ ದಾಪುಗಾಲು ಹಾಕುತ್ತ ಸಾಗಲೆಂದು ಹಾರೈಸುತ್ತೇನೆ.
– ಡಾ. ಆರ್. ಲಕ್ಷ್ಮೀನಾರಾಯಣ. ನಂ 12, 2ನೇ ಕ್ರಾಸ್, ಶಿವಾನಂದನಗರ, ಮೂಡಲಪಾಳ್ಯ, ಬೆಂಗಳೂರು

*
ದೀರ್ಘ ಒಡನಾಟ...
ಎಪ್ಪತ್ತರ ದಶಕದಲ್ಲಿ ಫ್ಯಾಂಟಮ್, ಮಾಡೆಸ್ಟಿ ಬ್ಲೆಸ್ ಮತ್ತು ಮೊದ್ದುಮಣಿ ನೋಡುವುದರ ಮೂಲಕ ಪ್ರಾರಂಭವಾದ ಪ್ರಜಾವಾಣಿಯೊಂದಿಗಿನ ಒಡನಾಟ ವಯಸ್ಸಿನೊಂದಿಗೆ ಮುಂದುವರೆಯುತ್ತಾ ಛೂಬಾಣ, ಸಾಪ್ತಾಹಿಕ ಪುರವಣಿಯ ಜೊತೆ ಬೇರೆ ಬೇರೆ ದಿನದಂದು ಬೇರೆ ಬೇರೆ ಪುರವಣಿಗೆ ಕಾಯುತ್ತಿದ್ದೆ. ಪ್ರಜಾವಾಣಿಯ ನಂಟಿನೊಂದಿಗೆ ಹಿಂದಿ ಮಾತೃಭಾಷೆಯವನಾದ ನನ್ನ ಕನ್ನಡ ಕೂಡ ಪತ್ರಿಕೆಗಳಲ್ಲಿ ಬರೆಯುವುದಷ್ಟೇ ಅಲ್ಲದೇ ಸ್ಥಳೀಯ ವೇದಿಕೆಗಳಲ್ಲಿ ಕೂಡ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ಮಟ್ಟಕ್ಕೂ ಬೆಳೆಯಿತು.

ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳ ಪ್ರಜಾವಾಣಿಯೊಂದಿನ ಒಡನಾಟ ಈಗ ಹೇಗಿದೆ ಎಂದರೆ ಆಯುಧಪೂಜೆಯಂತಹ ದಿನದ ಮಾರನೇ ದಿನ ಪತ್ರಿಕೆ ಇಲ್ಲಿದೆ ಚಡಪಡಿಸುವಂತಾಗುತ್ತದೆ.

ಈ ತರಹ ನನ್ನ ಭಾಷೆ ಮತ್ತು ಙ್ಞಾನವರ್ಧನೆಗೆ ಹೆಗಲು ಕೊಟ್ಟು ಪರೋಕ್ಷವಾಗಿ ಬೆಳೆಯಲು ಸಹಕಾರಿ ಆಗಿರುವ ನೆಚ್ಚಿನ ಪ್ರಜಾವಾಣಿಗೆ ಧನ್ಯವಾದ ಹಾಗೂ ಶುಭಾಶಯಗಳು

-ಜಯಚಂದ್ ಜೈನ್, ‘ಪಾಯಿಂಟ್’ ಬಿಲ್ಡಿಂಗ್, ನಂ. 440, 7ನೇ ಕ್ರಾಸ್, 7ನೇ ಮೇನ್ ಪಿ.ಜೆ. ಬಡಾವಣೆ, ದಾವಣಗೆರೆ

*

ವಿಶ್ವಾಸಾರ್ಹ...

ಪ್ರಜಾವಾಣಿ ತನ್ನ ಅಡಿ ಬರಹಕ್ಕೆ ತಕ್ಕಂತೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದೇ ಹೇಳಬಹುದು.ಪತ್ರಿಕೆಯು ಆಳುವ ಸರ್ಕಾರಕ್ಕೆ ಎಂದೂ ಹೆದರದೇ ಅದರ ತಪ್ಪು ನಿಧಾ೯ರಗಳನ್ನು ಖಂಡಿಸಿ, ತಿದ್ದುವ ಮಹತ್ವದ ಕೆಲಸ ಮಾಡುತ್ತ ಒಂದು ಬಹು ದೊಡ್ಡ ಶಕ್ತಿಯಾಗಿದೆ.

ಜನರ ಧ್ವನಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆ. 75ನೇ ವರ್ಷ ತಲುಪುತ್ತಿರುವುದಕ್ಕೆ ಅಭಿನಂದನೆ ಪತ್ರಿಕೆ ಇದೇ ರೀತಿ ಇನ್ನೂ ಹೆಚ್ಚಿನ ಸಾದನೆ ಮಾಡಲಿ ಎಂದು ಶುಭ ಹಾರೈಕೆ.

-ಡಾ. ಸುಭಾಷ್ ಪಾಟೀಲ, ಕಲಬುರಗಿ.

*
ಮುದನೀಡುವ ಪತ್ರಿಕೆ..
ನನಗೆ ಬುದ್ದಿ ಬಂದಾಗಿನಿಂದಲೂ ಪ್ರಜಾವಾಣಿ ಓದಿಕೊಂಡು ಬಂದವನು ನಾನು. ರಾಜಕೀಯ,ಸಾಂಸ್ಕೃತಿಕ, ಕ್ರೀಡೆ ,ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ವಿಚಾರಗಳನ್ನು ಎಲ್ಲಿಯೂ ಅತಿಯಾಗಿ ವಿಜೃಂಭಿಸದೆ ಓದುಗರ ಮನಸ್ಸಿಗೆ ಮುದ ನೀಡುತ್ತಾ ಬರುತ್ತಿದೆ. ನನಗೆ ಬಹಳ ಇಷ್ಟವಾದ ಪತ್ರಿಕೆ. ಆರು ದಶಕದಿಂದ ಪ್ರಜಾವಾಣಿ ಪತ್ರಿಕೆಗೆ ಮಾರುಹೋಗಿದ್ದೇನೆ.

ನನ್ನ ಬರವಣಿಗೆ ಸುಧಾರಿಸಿದ್ದೇ ಈ ಪತ್ರಿಕೆಯಿಂದ. ಸುಮಾರು ಮೂರು ವರ್ಷಗಳು ಮೈಸೂರಿನ ಮೆಟ್ರೋ ವಿಭಾಗದಲ್ಲಿ ಇಲ್ಲಿನ ರಂಗಕಲಾವಿದರ ಬಗ್ಗೆ ದಾಖಲಿಸಿದೆ. ಆಮೇಲೆ ಪುಸ್ತಕರೂಪದಲ್ಲೂ ಹೊರತಂದೆ. ಇದಕ್ಕೆ ನಾಟಕ ಅಕಾಡೆಮಿಯ ಪ್ರಶಸ್ತಿಯು ಲಭಿಸಿತು. ಇನ್ನೇನು ಬೇಕು ಇದಕ್ಕಿಂತ ಮನ್ನಣೆ. ಇಂದಿಗೂ ನನ್ನ ಅಚ್ಚುಮೆಚ್ಚಿನ ಪತ್ರಿಕೆ 'ಪ್ರಜಾವಾಣಿ'.
– ರಾಜಶೇಖರ ಕದಂಬ, ರಂಗಕರ್ಮಿ,ಮೈಸೂರು

*
ಜಾಗೃತಿಯ ಕಾರ್ಯ
ಪತ್ರಿಕೆಯ ಗುಣಮಟ್ಟವನ್ನು ನಿರಂತರವಾಗಿ 75ನೆ ವರ್ಷದವರೆಗೆ ಮುಂದುವರೆಸಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ. ಹಾಗೂ ಅಭಿನಂದನೀಯ. ಕನ್ನಡಿಗರ ಹೆಮ್ಮೆಯ ಪತ್ರಿಕೆಯಾಗಿ ಇಂದಿಗೂ ಕನ್ನಡ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಹೊರನಾಡಿನ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಯನ್ನು ನೀಡುತ್ತಿರುವ ಕನ್ನಡದ ಏಕೈಕ ಪತ್ರಿಕೆ ಎಂಬುದರಲ್ಲಿ ಸಂಶಯವಿಲ್ಲ. ಸಂಪಾದಕ ಮಂಡಳಿಯ ಸರ್ವಸದಸ್ಯರಿಗೆ ಅಭಿನಂದನೆಗಳು.
– ಧರ್ಮೇಂದ್ರ ಪೂಜಾರಿ ಬಗ್ದೂರಿ, ಅಧ್ಯಕ್ಷರು ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ, ಹೈದರಾಬಾದ್, ತೆಲಂಗಾಣ

*
ಹಲವಾರು ಪತ್ರಿಕೆಗಳನ್ನು ಓದಿ ಬಿಟ್ಟವನಿಗೆ ಪ್ರಜಾವಾಣಿಯು ಅನೇಕ ವರ್ಷಗಳಿಂದ ದಿನಚರಿಯ ಒಂದು ಭಾಗವಾಗಿದೆ. ಪತ್ರಿಕೆಯ ವಸ್ತುನಿಷ್ಠ ವರದಿಗಳು ಮತ್ತು ಗುಣಾತ್ಮಕವಾದ ವಿಶ್ಲೇಷಣೆಗಳು, ವೈವಿಧ್ಯಮಯ ಪುರವಣಿಗಳು, ಅಂಕಣಗಳು ಮತ್ತು ಸತ್ವಯುತ ಸಂಪಾದಕೀಯಗಳು ಪ್ರಜಾವಾಣಿಯ ಮೌಲ್ಯವನ್ನು ಎತ್ತಿಹಿಡಿಯುತ್ತವೆ.

ವಾಚಕರ ಅಭಿಪ್ರಾಯಕ್ಕೂ ವಿಶೇಷವಾದ ಮಹತ್ವವನ್ನು ಪತ್ರಿಕೆಯು ನೀಡುವುದನ್ನು ಮೆಚ್ಚಿದ್ದೇನೆ. ಇತ್ತೀಚೆಗಿನ ದಿನಗಳಲ್ಲಿ ಜನಸಾಮಾನ್ಯರ ಪರಿಭವಗಳನ್ನು, ಸಮಾಜದ ಅಂಕುಡೊಂಕುಗಳನ್ನು ಮತ್ತು ಆಡಳಿತಗಳ ಲೋಪಗಳನ್ನು ತಳಮಟ್ಟದ ಅಧ್ಯಯನಗಳ ಮೂಲಕ ಮುನ್ನೆಲೆಗೆ ತರುತ್ತಿರುವುದು ಒಂದು ಜವಾಬ್ದಾರಿಯುತ ಪತ್ರಿಕೆಯ ಉತ್ತಮ ಗುಣಗಳಲ್ಲಿ ಒಂದು.

ಈ ಗುಣಗಳೂ ಅಲ್ಲದೆ ವರದಿಗಳು ಮತ್ತು ಲೇಖನಗಳಲ್ಲಿ ಉಪಯೋಗಿಸಲಾಗುವ ಭಾಷೆಯೂ ಗುಣಮಟ್ಟದ್ದು; ಇದರಿಂದಾಗಿ ಕನ್ನಡ ಭಾಷೆಯ ತನ್ನತನವನ್ನು ಸದಾ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಜಾವಾಣಿಯು ಅನನ್ಯವಾದ ಕೆಲಸಮಾಡುತ್ತಿದೆ. ಸ್ವತಂತ್ರ ಮಾಧ್ಯಮಗಳು ಮರೆಯಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಪ್ರಜಾವಾಣಿಯು ತನ್ನತನವನ್ನು ಉಳಿಸಿಕೊಂಡು ಪ್ರಜಾತಂತ್ರದ ಆಧಾರಸ್ತಂಭವಾಗಿ ಮುಂದುವರಿಯುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆ ನೀಡುವ ವಿಷಯ ಕೂಡ.

– ಟಿ.ಆರ್.ಭಟ್, ಅಶೋಕನಗರ ಮಂಗಳೂರು, ಅಖಿಲ ಭಾರತ ಬ್ಯಾಂಕು ಅಧಿಕಾರಿಗಳ ಮಹಾಸಂಘದ ನಿವೃತ್ತ ನಾಯಕ

*
ಸಾಹಿತ್ಯ ಸಂಗಾತಿ ಪತ್ರಿಕೆ
ಪ್ರಜಾವಾಣಿ ಪತ್ರಿಕೆ ಓದದೆ ನನಗೆ ದಿನ ಪೂರ್ಣವಾಗದು. ಯಾವುದೇ ಪೂರ್ವಗ್ರಹವಿಲ್ಲದೆ ವಸ್ತುನಿಷ್ಠ ನೆಲೆಯಲ್ಲಿ ಹೊರಬರುವ ಪತ್ರಿಕೆ ಇದು. ಸಾಮಾಜಿಕ ಅಸಮಾನತೆ ತೊಡೆದುಹಾಕುವ ಮತ್ತು ಸೌಹಾರ್ದತೆಯನ್ನು ಸಾರುವಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದಾಗಿದೆ. ನನ್ನಂತ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿಗಳಿಗೆ ಪುರವಣಿಯ ಭಾಗ ಓದಿನ ಅನೇಕ ಆಯಾಮಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಹಾಗೆಯೇ ಕಾಲಕಾಲಕ್ಕೆ ಓದುಗರ ಅಭಿರುಚಿಗೆ ಸ್ಪಂದಿಸುವ ಜೀವಂತಿಕೆಯ ಲಕ್ಷಣವನ್ನೂ ಉಳಿಸಿಕೊಂಡು ಬಂದಿರವ ಪತ್ರಿಕೆ ಪ್ರಜಾವಾಣಿ.

-ಪಿ. ನಂದಕುಮಾರ್, ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

*
ಬಿಸಿ ಕಾಫಿ ಜೊತೆ ಪ್ರಜಾವಾಣಿ....
ಇಲ್ಲಿನ ಅಷ್ಟಿಷ್ಟು ಬರಹಗಳು ನನ್ನ ಸ್ಥಾಪಿತ ಮನೋಧರ್ಮ ಮತ್ತು ನಂಬಿಕೆಗಳಿಗೆ ಅಷ್ಟೇನೂ ಹಿತವಾಗದಿದ್ದರೂ ಈ ಪತ್ರಿಕೆಯನ್ನು ವಿದ್ಯಾರ್ಥಿ ದೆಸೆಯಿಂದಲೂ ಕಟ್ಟಿಕೊಂಡು ಬಿಟ್ಟಿರುವುದರಿಂದ ಕಳೆದ ಅರವತ್ತು ವರ್ಷಗಳ ಅನುಬಂಧವನ್ನು ಈಗ ಬಿಟ್ಟು ಬಿಡುವಂತಿಲ್ಲ.
ಬೆಳಗಿನ ಬಿಸಿ ಕಾಫಿ ಜೊತೆ ಈ 'ಬಸವ' ನನ್ನು ನೋಡದಿರುವುದಾದರೂ ಹೇಗೆ ! ನನ್ನ ಭಾವಕೋಶದಲ್ಲಿ ಇಂದಿಗೂ ಸ್ಥಿರವಾಗಿರುವ ನಿಂತಿರುವ ಈ ಪತ್ರಿಕೆಯಲ್ಲಿನ 1970 ರ ಒಂದು ವ್ಯಂಗ್ಯ ಚಿತ್ರ ಇಂದಿರಾಗಾಂಧಿ ಯನ್ನು ಹೊತ್ತ ಪಲ್ಲಕ್ಕಿಯ 'ಅರಸುಗಳಿಗಿದು ವೀರ' ಅನ್ನುವ ಶೀರ್ಷಿಕೆ.
– ಡಾ. ಹೆಚ್ ಎಸ್ ಸುರೇಶ್(73), ಅಕ್ಷಯನಗರ, ಬೆಂಗಳೂರು

*
ಹೆಮ್ಮೆಯ ವಾಣಿಗೆ 75ರ ಪ್ರವೇಶ
ಸುದ್ದಿ ಪತ್ರಿಕೆಯನ್ನು ಓದಲಾರಂಭಿಸಿದ ಓರಿಗೆಯಿಂದಲೂ, ಅಂದರೆ 1968 ರಿಂದ 2022ರವರೆಗೆ, ನಿರಂತರವಾಗಿ ನಾನು ಓದುತ್ತಿರುವ ಏಕೈಕ ರಾಜ್ಯಮಟ್ಟದ ಪತ್ರಿಕೆ ಅಂದರೆ ಕನ್ನಡಿಗರ ಹೆಮ್ಮೆಯ ಪ್ರಜಾವಾಣಿ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೊಸ ರೂಪಾಂತರಗಳೊಂದಿಗೆ, ನೂತನ ವಿನ್ಯಾಸಗಳೊಂದಿಗೆ, ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ಪತ್ರಿಕೆ ಬದಲಾಗುತ್ತಲೇ ಬಂದಿದ್ದರೂ, ಪ್ರಜಾವಾಣಿಯ ಮೂಲ ಧ್ವನಿ ಶೇ 90ಕ್ಕಿಂತಲೂ ಹೆಚ್ಚು ಹಾಗೆಯೇ ಉಳಿದುಕೊಂಡಿದೆ.

ಕಾಲದ ಅನಿವಾರ್ಯತೆಗಳಿಂದ ಇನ್ನುಳಿದ ಶೇ 10 ಬದಲಾವಣೆ ಕಂಡಿರಬಹುದು. ಜನಪರ ಮತ್ತು ಸಮಾಜಮುಖಿ ವಿಚಾರಗಳನ್ನು, ಪುರವಣಿಗಳ ಮೂಲಕ ಜ್ಞಾನ ವಿಸ್ತರಣೆಗೆ ನೆರವಾಗುವ ವಿಚಾರಗಳನ್ನು ಪಸರಿಸುತ್ತಲೇ ಇಂದಿಗೂ ಗಂಭೀರ ಓದುಗರಲ್ಲಿ ವಿಶ್ವಾಸ ಉಳಿಸಿಕೊಂಡು ಬಂದಿರುವ ಹೆಮ್ಮೆಯ ಪ್ರಜಾವಾಣಿ 75ನೆಯ ವಸಂತಕ್ಕೆ ಕಾಲಿರಿಸುತ್ತಿರುವುದು ನಾಡಿನ, ಸಮಸ್ತ ಕನ್ನಡಿಗರ ಪಾಲಿಗೆ ಅಭಿಮಾನ ಮತ್ತು ಹೆಮ್ಮೆಯ ವಿಚಾರ. ಪ್ರಜಾವಾಣಿಯ ಓದುಗನಾಗಿ, ಈಗ ಲೇಖಕನ ರೂಪದಲ್ಲಿ ಬಳಗದ ಒಂದು ಭಾಗವಾಗಿ ಹೆಮ್ಮೆಪಡುತ್ತಲೇ 75ಕ್ಕೆ ಕಾಲಿಟ್ಟು, ಶತಮಾನದತ್ತ ಸಾಗುತ್ತಿರುವ ನಮ್ಮ ಪ್ರಜಾವಾಣಿ ಶತಮಾನದತ್ತ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸುತ್ತೇನೆ.

– ನಾ ದಿವಾಕರ, ಮೈಸೂರು

*

ಬದ್ಧತೆಯಿಂದ ದೂರಸರಿಯದ ಪತ್ರಿಕೆ...
ಹೆಸರಿಗೆ ತಕ್ಕ ಹಾಗೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿ. ಸಾಮಾಜಿಕ ನ್ಯಾಯದ ಅಡಿಗಲ್ಲಿನ ಮೇಲೆ ನಿಂತಿರುವ ಪತ್ರಿಕೆ ತನ್ನ ಬದ್ಧತೆಯಿಂದ ದೂರ ಸರಿದಿಲ್ಲ.

ವಾಚಕರ ವಾಣಿಯಲ್ಲಿ ಪ್ರಕಟವಾಗುವ ಪತ್ರಗಳು ಸಹ ಸರ್ಕಾರದ ಗಮನಸೆಳೆದು ಆಗಬೇಕಾದ ಕೆಲಸ ಆಗಿದ್ದಿದೆ. ತನ್ನ ವಿನ್ಯಾಸದಲ್ಲಿ ಬದಲು ಮಾಡಿಕೊಂಡಾಗ ಅದು ಸರಿ ಇಲ್ಲವೆಂಬ ಓದುಗರು ಅಭಿಪ್ರಾಯದ ಮೇರೆಗೆ ಅದನ್ನು ಗೌರವಿಸಿ ತನ್ನ ಹಿಂದಿನ ವಿನ್ಯಾಸವನ್ನೇ ಉಳಿಸಿಕೊಂಡದ್ದು ನಿಜಕ್ಕೂ ಸಂತೋಷದ ವಿಚಾರ. ಇದೇ ಬದ್ಧತೆಯಿಂದ ಪತ್ರಿಕೆ ಮುಂದುವರೆಯಲಿ. ಸಾಧ್ಯವಾದರೆ ಪ್ರಜಾವಾಣಿ ಜನಸಾಮಾನ್ಯರಿಗಾಗಿ ನ್ಯೂಸ್ ಚಾನೆಲ್ ಆರಂಭಿಸಲಿ ಎಂದು ಆಶಿಸುತ್ತೇನೆ.

– ಮಧುಕುಮಾರ ಸಿ.ಎಚ್., ಮುಖ್ಯೋಪಾಧ್ಯಾಯರು, ಮೌಲಾನಾ ಆಜಾದ್ ಮಾದರಿ ಶಾಲೆ, ಮಂಡ್ಯ.

*

ಹಿತಕರ ಸುದ್ದಿಗಳು...

ನಾನು ಪ್ರಜಾವಾಣಿ ಪತ್ರಿಕೆಯನ್ನು ಸುಮಾರು ನಾಲ್ಕು ದಶಕಗಳಿಂದ ಓದುತ್ತಿದ್ದೇನೆ. ಇದು ನನಗೆ ಬೆಳಿಗ್ಗೆಯ ಕಾಫಿ ಇದ್ದಂತೆ. ಇದರಲ್ಲಿ ಬರುವ ಸುದ್ದಿಗಳು ಕಾಫಿ ಕುಡಿದಷ್ಟು ಹಿತವನ್ನು ನೀಡುತ್ತದೆ. ಅಮೃತ ಮಹೋತ್ಸವ ವರ್ಷ ಪ್ರಜಾವಾಣಿಗೆ ಶುಭವಾಗಲಿ ಹಾಗೂ ಮತ್ತಷ್ಟು ಜನರ ಕೈಸೇರಲಿ ಎಂದು ಆಶಿಸುವೆನು.

ಎನ್.ನರಸಿಂಹ ರಾವ್, ನಿವೃತ್ತ ಬ್ಯಾಂಕ್ ಅಧಿಕಾರಿ, ಬೆಂಗಳೂರು.

*

ಪ್ರಜಾವಾಣಿಯ ತಾಯ್ತನ ದೊಡ್ಡದು...

ನನ್ನ ದಿನ ಆರಂಭವಾಗುವುದು ಪ್ರಜಾವಾಣಿ ಪತ್ರಿಕೆ ಓದುವ ಮೂಲಕ. ನಾನು 2006ರಿಂದ ಪ್ರಜಾವಾಣಿಯ ಸಹೃದಯ ಮಿತ್ರನಾಗಿರುವೆ. ಪತ್ರಿಕೆಯಲ್ಲಿ ಈ ನೆಲದ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ,ಸಾಹಿತ್ಯಿಕ ಇನ್ನೂ ಮೊದಲಾದ ಹೊಸ ಹೊಸ ಜ್ಞಾನ ಜಿಜ್ಞಾಸುಗಳನ್ನು ಪೋಷಿಸಿಕೊಂಡು ಬರಲಾಗುತ್ತಿದೆ.

ಪ್ರಜಾವಾಣಿಯ ತಾಯ್ತನ ದೊಡ್ಡದು. ಎಲ್ಲಾ ಹಿರಿ ಕಿರಿಯ ಲೇಖಕರನ್ನು,ಓದುಗರನ್ನು ತನ್ನ ತೋಳ ತೆಕ್ಕೆಯಲಿ ಪೋಷಿಸಿಕೊಂಡು ಬರಲಾಗುತ್ತಿದೆ. ಸಾಹಿತ್ಯ ಸಂಸ್ಕೃತಿ ಬೆಳೆಸುವಲ್ಲಿ ಪ್ರಜಾವಾಣಿಯ ಪಾತ್ರ ದೊಡ್ಡದು.ಈಗ ಪ್ರಜಾವಾಣಿಗೆ 75ರ ಅಮೃತ ಮಹೋತ್ಸವ. ಈ ವಿಶೇಷ ಗೌರವವನ್ನು ಹೀಗೇ ಕಾಪಿಟ್ಟುಕೊಂಡು ಮುಂದುವರೆಯಲಿ, ಕನ್ನಡದ ಅಸ್ಮಿತೆಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.

ದಾವಲಸಾಬ ನರಗುಂದ, ಸಂಶೋಧನ ವಿದ್ಯಾರ್ಥಿ, ಕನ್ನಡ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

*

ಬಾಲ್ಯದ ಗೆಳೆಯ....

ನಮಗೆ ಬಾಲ್ಯದಿಂದಲೂ ಪ್ರಜಾವಾಣಿ ಪತ್ರಿಕೆ ಓದುವುದು ರೂಢಿ. ಅದೇನೋ ಅವಿನಾಭಾವ ಸಂಬಂಧ. ನಮ್ಮ ತಂದೆ ಬಿ.ಮಹಾದೇವಪ್ಪ ಅವರು 1965ರಲ್ಲಿ ಬೆಂಗಳೂರಿನ ಪ್ರಜಾವಾಣಿ ಪತ್ರಿಕಾ ಕಚೇರಿಯಲ್ಲಿ ಟಿ.ಎಸ್.ರಾಮಚಂದ್ರರಾಯರು ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಭಾಗ್ಯ ನಮ್ಮ ತಂದೆಯದಾಗಿತ್ತು. ನಂತರ ಯಾದಗಿರಿಯಲ್ಲಿ ಇದ್ದಾಗ ಸುಮಾರು ವರ್ಷಗಳ ಕಾಲ ಅಲ್ಲಿಯ ಬಾತ್ಮಿದಾರರಾಗಿ ಕೆಲಸ ಮಾಡಿದ್ದರು. ಆವಾಗಿನಿಂದಲೂ ಪ್ರಜಾವಾಣಿ ನಮ್ಮ ಮನೆಯ , ಅಪ್ಪ ವಿಶ್ವ ಕಲ್ಯಾಣ ವಾರ ಪತ್ರಿಕೆಯ ಸಂಪಾದಕರಾದ ಆ ಕಚೇರಿಯ ಭಾಗವಾಗಿ ನಿಂತಿತ್ತು. ಮುಂಚೆ ಸಂಜೆ ಬರುತ್ತಿದ್ದ ಪ್ರಜಾವಾಣಿ ದಿನೇ ದಿನೇ ಹತ್ತಿರವಾಗಿ ಬೆಳಗಿನ ಚಹಾದ ವೇಳೆಗೆ ಬಂದು ನಿಂತಿದೆ.

ಪ್ರಜಾವಾಣಿ ಯಾವತ್ತೂ ತನ್ನ ಮೌಲ್ಯಗಳಿಗೆ ಎತ್ತಿ ಹಿಡಿಯುತ್ತಾ ಓದುಗರ ಮನದ ಮಿಡಿತವನ್ನು ಅರಿತು ನಡೆಯುತ್ತಿದೆ. ಸುದ್ದಿ ಸಮಾಚಾರ ಅಲ್ಲದೆ ಸಾಹಿತ್ಯಿಕ, ಸಂಶೋಧನಾತ್ಮಕ ಲೇಖನ ಪಸರಿಸುವಲ್ಲಿ ಅಗ್ರಗಣ್ಯವಾಗಿದೆ. ಅಂತೆಯೇ ಅಮೃತ ಮಹೋತ್ಸವದ ಹೆಬ್ಬಾಗಿಲಿಗೆ ಬಂದು ನಿಂತಿದೆ. ಶುಭಾಶಯಗಳು.

– ಬಿ.ವೀರಬಸವಂತ, ಕಲಬುರ್ಗಿ

*

ಮೊದಲ ಆದ್ಯತೆ...

ಬೆಳಗ್ಗೆ ಪ್ರತಿದಿನ 5 ಗಂಟೆಗೆ ಏಳುತ್ತೇನೆ. ಎದ್ದಕೂಡಲೇ ಬಾಗಿಲು ತೆರೆದು ಪ್ರಜಾವಾಣಿ ಪತ್ರಿಕೆ ಬಂದಿದೆಯೇ ಎಂದು ಒಂದು ಬಾರಿ ಪರಿಶೀಲಿಸಿ ನಂತರವೇ ಬೇರೇ ಕಾರ್ಯಗಳಲ್ಲಿ ತೊಡಗುವುದು ನನ್ನ ನಿತ್ಯ ವಿಧಾನ. ಅದು ಬರದಿದ್ದಲ್ಲಿ ಪತ್ರಿಕಾ ವಿತರಕನಿಗೆ ಸಹಸ್ರನಾಮ. ಮಳೆ ಬಂದರಂತೂ ನನ್ನ ತುಡಿತ ಅಧಿಕ . ಮಳೆಬಂದಾಗ ವಿತರಕ 8,9 ಗಂಟೆ ಪತ್ರ ವಿತರಿಸುತ್ತಾನೆ. ಆಗಂತೂ ಹೆಚ್ಚಿನ ಬೈಗಳವು. ನನಗೆ ಪ್ರಜಾವಾಣಿ ಒಂದು ಅಂಗ. ಹಬ್ಬ ಹರಿದಿನದಂದು ತಲೆ ಮಂಕುಹಿಡಿದಂತಾಗುತ್ತದೆ ಪ್ರಜಾವಾಣಿ ಇಲ್ಲದೆ!

– ಬಾಲಕೃಷ್ಣ ಎಂ ಅರ್., ಸೀತಪ್ಪ ಲೇಔಟ್, ಆರ್.ಟಿ. ನಗರ, ಬೆಂಗಳೂರು

*

ಪ್ರಥಮ ಓದು ಪ್ರಜಾವಾಣಿ...

ಪ್ರಜಾವಾಣಿ ಆರಂಭವಾದಾಗ ನನಗಿನ್ನೂ 7 ವರ್ಷ. ನಮ್ಮ ತಂದೆ ನಮ್ಮ ಸಣ್ಣ ಹೋಟೆಲಿನಲ್ಲಿ ಅದನ್ನು ತರಿಸುತ್ತಿದ್ದರು. ನಾನು ಯಾವಾಗ ಅದನ್ನು ಓದಲಾರಂಭಿಸಿದೆ ಎಂದು ನೆನಪಿಲ್ಲ. ಆದರೂ, ನನ್ನ ಪ್ರಥಮ ಪತ್ರಿಕಾ ಓದು ಪ್ರಜಾವಾಣಿ. ಆಗ ಕೇವಲ 6 ಅಥವ 8 ಪುಟಗಳಷ್ಟೆ. ಒಬ್ಬರು ಓದುವಾಗ ಮತ್ತೊಬ್ಬ ಗಿರಾಕಿ, ‘ಒಂದು ಶೀಟ್ ಕೊಡಿ’ ಎಂದು ಕೇಳಿ ಪಡೆದುಕೊಂಡು ಓದುವುದು ದಿನನಿತ್ಯದ ಪರಿಪಾಠ. ದುಡ್ಡು ಕೊಟ್ಟು ಕೊಳ್ಳುವವರು ಅಪರೂಪವಾಗಿದ್ದರು. ಹಾಗೆ ಶುರುವಾದ ನನ್ನ-ಪ್ರಜಾವಾಣಿಯ ಸಂಬಂಧ ಇಂದಿಗೂ ಮುಂದುವರಿದಿದೆ.

–ಎಸ್.ವೆಂಕಟ ಕೃಷ್ಣ, 'ವಿನಯ' 1283, 8ನೇ ಕ್ರಾಸ್, 1ನೇ ಫೇಸ್, ಜೆ.ಪಿ. ನಗರ, ಬೆಂಗಳೂರು 560078

*

ನಂಬಿಕೆ ಉಳಿಸಿಕೊಂಡ ಪತ್ರಿಕೆ....

ನಾಡಿನ ಜನತೆಯ ನೆಚ್ಚಿನ ದಿನಪತ್ರಿಕೆ ‘ಪ್ರಜಾವಾಣಿ’ 74 ವರ್ಷಗಳನ್ನು ಪೂರೈಸಿ ಇದೀಗ ಅಮೃತ ಮಹೋತ್ಸವ ಸಂಭ್ರಮವನ್ನು ಆಚರಿಸುವ ಸಂದರ್ಭಕ್ಕೆ ಬಂದು ನಿಂತಿಗೆ. ಕೆ.ಎನ್.‌ ಗುರುಸ್ವಾಮಿ ಅವರ ದೂರದೃಷ್ಟಿ-ನೇತೃತ್ವದಿಂದ ಆರಂಭಗೊಂಡು ಓದುಗರ ನಂಬಿಕೆ ಉಳಿಸಿಕೊಂಡು ಬಂದಿರುವುದು ಸಂತೋಷದ ವಿಚಾರ.

ನಾನು ಮೂಲತಃ ಪತ್ರಿಕೋದ್ಯಮ ವಿದ್ಯಾರ್ಥಿ. ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಆಸೆ ನನ್ನಲ್ಲಿಯೂ ಇತ್ತು; 2019ರಲ್ಲಿ ಅರ್ಜಿ ಹಾಕಿ, ಪರೀಕ್ಷೆ ಬರೆದು ಪಾಸಾಗಿ, ಸಂದರ್ಶನವನ್ನೂ ಎದುರಿಸಿದ್ದೆ, ಕಾರಣ ಗೊತ್ತಿಲ್ಲ ನಾನು ಆಯ್ಕೆ ಆಗಲಿಲ್ಲ. ಆದರೆ ಚಿಕ್ಕ ವಯಸ್ಸಿನಿಂದಲೂ ಪ್ರಜಾವಾಣಿ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೇನೆ, ಇದರ ಫಲವಾಗಿ ನಾನು ಮೈಸೂರು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

ನಾನು ಎಂದೆಂದಿಗೂ ಪ್ರಜಾವಾಣಿಯ ಓದುಗನಾಗಿಯೇ ಇರುತ್ತೇನೆ. ಸಮಾಜಕ್ಕೆ, ಜನರಿಗೆ ಬೇಕಾಗಿರುವ ಸುದ್ದಿಗಳನ್ನು ನೀಡುತ್ತಿದ್ದೀರಿ. ಪ್ರಜಾವಾಣಿಯಲ್ಲಿ ಪ್ರಕಟವಾಗುವ ಸಂಪಾದಕೀಯ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ಕೃಷ್ಟ ಬರವಣಿಗೆ ಶೈಲಿಯನ್ನು ಒದಗಿಸಿಕೊಡುತ್ತಿದೆ. ಸಂಗತ ಕಾಲಮ್‌, ಸುದ್ದಿ ವಿಶ್ಲೇಷಣೆ, ಪುರವಣಿ, ವಾಚಕರ ವಾಣಿ ಹೀಗೆ ಮುಂತಾದವು ಶ್ರೀಸಾಮಾನ್ಯರ ಮೆಚ್ಚುಗೆ ಗಳಿಸಿದೆ.

– ಪ್ರಸಾದ್‌ ಜಿ.ಎಂ., ಮೈಸೂರು.

*
ಬರಹಕ್ಕೆ ಬೆಲೆ ತಂದ ಪತ್ರಿಕೆ...

1980–89ರ ಅವಧಿಯಲ್ಲಿ ನಾನು ಹುನಗುಂದದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಣೆ ಸಂದರ್ಭದಲ್ಲಿ 1982ರಿಂದ 86ರವರೆಗೆ ನಮ್ಮ ನೆಚ್ಚಿನ ‘ಪ್ರಜಾವಾಣಿ’ ದೈನಿಕದ ಬಿಡಿವರದಿಗಾರನಾಗಿ ಕಾರ್ಯ ನಿರ್ವಹಿಸುವ ಸುಯೋಗ ದೊರೆತಿತ್ತು.
ವೃತ್ತಿ ಪ್ರವೃತ್ತಿಯ ಸಂದರ್ಭದಲ್ಲಿ ಬರಹಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೆ. ಪತ್ರಿಕೆಗೆ ಸುದ್ದಿಯ ವರದಿಯನ್ನು ಅಂಚೆ ಇಲಾಖೆಯ ಟೆಲಿಗ್ರಾಂ ಮೂಲಕ ಆಂಗ್ಲ ಭಾಷೆಯಲ್ಲಿ ಕಳಸಬೇಕಾಗಿತ್ತು. ನಾನು ತಯಾರಿಸಿದ ಕನ್ನಡ ವರದಿಗಳನ್ನು ಆಂಗ್ಲ ಅಕ್ಷರಗಳನ್ನು ಬಳಸಿ(ಕಂಗ್ಲೀಷ್) ವರದಿಯನ್ನು ಬರೆದು ಕಳಿಸುತ್ತಿದ್ದೆ. ಅವುಗಳನ್ನು ಸಂಪಾದಕೀಯ ಸಿಬ್ಬಂದಿ ಸ್ವೀಕರಿಸಿ ಅದರಲ್ಲಿಯ ಭಾವನಾತ್ಮಕ ಅಂಶಗಳನ್ನು ಯಥಾವತ್ತಾಗಿ ಪ್ರಕಟಿಸುವ ಮೂಲಕ ನನ್ನ ಬರಹಕ್ಕೆ ಬೆಲೆ ಬರುವಂತೆ ಮಾಡಿದುದನ್ನು ಮರೆಯಲಾಗದು.
ಪತ್ರಿಕೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಸಂಪಾದಕರಿಗೆ ಮನಃಪೂರ್ವಕ ನಮನಗಳನ್ನರ್ಪಿಸುವೆ.

–ಬಸವರಾಜ ಹುಡೇದಗಡ್ಡಿ, ವಕೀಲರು, ೧೭೩೧/೧,೧ಇ ಮುಖ್ಯ ರಸ್ತೆ ಡ ಬ್ಲಾಕ್‌, ರಾಜಾಜಿನಗರ 2ನೆ ಹಂತ, ಬೆಂಗಳೂರು

*

ಪ್ರಜಾವಾಣಿಯ ಆಕರ್ಷಣೆ...

ಪ್ರಜಾವಾಣಿ - ಎಂದರೆ ಮೊದಲಿನಿಂದಲೂ ಏನೋ ಒಂದು ಬಗೆಯ ಆಕರ್ಷಣೆ. ಆ ಬಗೆಯನ್ನೇ ಇಂದು ಉಳಿಸಿಕೊಂಡಿದೆ. ಪತ್ರಿಕೆ ಕಾಲಕ್ಕನುಗುಣವಾಗಿ ಹೆಜ್ಜೆ ಹಾಕುವುದರೊಂದಿಗೆ ನನ್ನನ್ನು ಸುಮಾರು 40 ವರ್ಷಗಳಿಂದಲೂ ಹಾಗೆಯೇ ಹಿಡಿದಿಟ್ಟುಕೊಂಡಿದೆ .
ನಾನು, ಪತ್ರಿಕೆಯಲ್ಲಿ ಮೊದಲಿನಿಂದಲೂ ಗಮನಿಸುತ್ತಾ ಬರುತ್ತಿರುವುದು , ಅನೇಕ ಶ್ರೇಷ್ಠ ಬರಹಗಾರರು ಇಲ್ಲಿ ಬರೆಯುತ್ತಾ ಇರುವುದು , ಹಾಗೆಯೇ ಕೆಲ ಬರಹಗಾರರು ರೂಪುಗೊಂಡದ್ದು. ಒಂದು ಪತ್ರಿಕೆ ಇಷ್ಟೆಲ್ಲವನ್ನು ಸಾಧ್ಯ ಮಾಡಿದೆ ಎಂದ ಮೇಲೆ ನಾವೆಲ್ಲ ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ, ಹಾಗೆಯೇ ಪತ್ರಿಕೆಯನ್ನು ಇನ್ನಷ್ಟು ಬೆಳೆಸಲು ಕೈ ಜೋಡಿಸಲು ಮುಂದಾಗುವ ಸಮಯ ಕೂಡ!

-ಶಂಕರೇಗೌಡ ತುಂಬಕೆರೆ. ಅಂಜನಾದ್ರಿ ನಿಲಯ, ಅನ್ನಪೂರ್ಣೇಶ್ವರಿ ನಗರ, ನಾಲೆ ರಸ್ತೆ, ಮಂಡ್ಯ -571401
*

ಅಭಿನಂದನೆ...

ನನ್ನ ಮೆಚ್ಚಿದ ದಿನಪತ್ರಿಕೆ ಪ್ರಜಾವಾಣಿಗೆ ನಾನು ವಿದ್ಯಾರ್ಥಿ ದೆಸೆಯಿಂದಲೂ ಚಂದದಾರ. ಈಗ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅಭಿನಂದಿಸುವೆ. ಈ ಪತ್ರಿಕೆಯಲ್ಲಿ ಅಕ್ಷರ ವಿನ್ಯಾಸ ಹಾಗೂ ಬಾಷೆ ಸರಳವಾಗಿದ್ದು ಎಲ್ಲಾ ವಯಸ್ಸಿನವರು ಓದಿ ಅರ್ಥಮಾಡಿ ಕೊಳ್ಳುವ ಹಾಗೆ ಇದೆ. ವಿದ್ಯಾರ್ಥಿ ಹಾಗೂ ಉದ್ಯೋಗ ಮಾರ್ಗದರ್ಶಿಯಾಗಿದ್ದು, ಸಾವಿರಾರು ಜನರು ಇದರ ಸದುಪಯೋಗ ಪಡೆಯುತ್ತಿರುವುದು ಸಂತಸ ತಂದಿದೆ.

– ವಿಶ್ವನಾಥ ಸಿಂಗ್‌

*

ನಿಷ್ಪಕ್ಷಪಾತ ನಿಲುವು...

ಪ್ರಜಾವಾಣಿಗೆ ಅಮೃತ ಮಹೋತ್ಸವದ ಸುಸಮಯ ಬಂದಿರುವುದು ಅತೀವ ಸಂತಸ ತಂದಿದೆ. ನಾನು ಸುಮಾರು ಆರು ದಶಕಗಳಿಂದಲೂ ಪ್ರಜಾವಾಣಿಯ ಅಭಿಮಾನಿ. ಪ್ರಜಾವಾಣಿ ಯಾವಾಗಲೂ ಯಾವುದೇ ರಾಜಕೀಯ ಪಕ್ಷ ಅಥವಾ ಆಳುವ ಸರ್ಕಾರದ ಮುಖವಾಣಿಯಾಗದೆ ಜನಾಭಿಪ್ರಾಯದ ಪ್ರತಿಬಿಂಬವಾಗುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯೆನಿಸುತ್ತದೆ.

ನಿಷ್ಪಕ್ಷಪಾತ ಮತ್ತು ನಿಖರ ಸುದ್ಧಿಗಳನ್ನು ಸದಾ ತನ್ನ ಓದುಗರಿಗೆ ಉಣಬಡಿಸುತ್ತಾ ಬಂದಿರುವ ನಮ್ಮ ಈ ಪತ್ರಿಕೆ ತನ್ನ ಜೀವಿತಾವಧಿಯಲ್ಲಿ ಹಲವು ಪ್ರಜ್ಞಾವಂತ ಲೇಖಕರನ್ನು ನಾಡಿಗೆ ಕಾಣಿಕೆಯಾಗಿ ನೀಡಿದೆ. ಭಾನುವಾರದ ಸಾಪ್ತಾಹಿಕ ಪುರವಣಿ ಎಂದಿನಿಂದಲೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬರುತ್ತಿದ್ದು ಕನ್ನಡದ ಪತ್ರಿಕೋದ್ಯಮದಲ್ಲಿ ಇಂದಿಗೂ ತನ್ನ ಸೋಪಜ್ಞತೆಯನ್ನು ಕಾಪಾಡಿಕೊಂಡಿದೆ.ಪ್ರಜಾವಾಣಿ ಇನ್ನೂ ಹಲವು ಶತಮಾನಗಳಕಾಲ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯನಿರ್ವಹಿಸಲೆಂದು ಆಶಿಸುತ್ತೇನೆ.

– ಮೋದೂರು ಮಹೇಶಾರಾಧ್ಯ, ವಿಶ್ರಾಂತ ಪ್ರಾಚಾರ್ಯ. ಕಲ್ಕುಣಿಕೆ, ಹುಣಸೂರು ನಗರ. ಮೈಸೂರು ಜಿಲ್ಲೆ.

*

ಸಮಾಜದ ಕೈಗನ್ನಡಿ...
ನಾನು ಗುರುತಿಸಿಕೊಂಡಿದ್ದೇ ‘ಪ್ರಜಾವಾಣಿಯ’ ವಾಚಕರ ವಾಣಿ ವಿಭಾಗಕ್ಕೆ ಸುಮಾರು 40 ವರ್ಷಗಳ ಹಿಂದೆ ನಮ್ಮೂರಿನ ( ಬೂಕನಕೆರೆ) ಸಮಸ್ಯೆಯೊಂದನ್ನು ಬರೆಯುವ ಮೂಲಕ, ಅಂದು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟವಾದುದ್ದು ಇಂದಿಗೂ ಮರೆಯಲಾಗದ ಅನುಭವ. ಅದೊಂದು ಹೆಮ್ಮೆಯ ಕ್ಷಣ.
ನನ್ನ ದಿನಚರಿ ಪ್ರಾರಂಭವಾಗುವುದೇ ಪ್ರಜಾವಾಣಿಯ 50 ವರ್ಷಗಳ ಹಿಂದೆ ಮತ್ತು 25 ವರ್ಷ ಗಳ ಹಿಂದೆ ನೆಡುದು ಹೋದ ಘಟನೆಗಳ ಸಿಂಹವಲೋಕನದ ನೆನಪಿನೊಂದಿಗೆ, ವಾಚಕರ ವಾಣಿ ಯಲ್ಲಿ ಪ್ರತಿ ದಿನ ಪ್ರಕಟವಾಗುವ ಲೇಖಕರ ಪತ್ರಗಳು ಸಮಾಜಕ್ಕೆ ಹಿಡಿದ ಕೈಗನ್ನಡಿ.

–ಬೂಕನಕೆರೆ ವಿಜೇಂದ್ರ. ಮೈಸೂರು. ನಂ.55, ಎನ್-ಬ್ಲಾಕ್. ಕುವೆಂಪು ನಗರ, ಮೈಸೂರು

*

ಸ್ಫೂರ್ತಿ ಮೂಡಿಸಿದ ಪತ್ರಿಕೆ...

ಪತ್ರಿಕೆ ಓದುಗರನ್ನು ಸೆಳೆಯುವುದು ಎಂದರೆ, ಅದು ಪತ್ರಿಕೆಯಲ್ಲಿ ಬಳಸುವ ಸರಳ ಭಾಷಾ ಶೈಲಿಯಿಂದ. ಅದರ ಜೊತೆಗೆ ಕರಾರುವಾಕ್ಕು ಸುದ್ಧಿಗಳ ಸಂಕ್ಷಿಪ್ತ ಪ್ರಕಟಣೆಯಿಂದ. ನಾನು ಕಂಡಂತೆ, ಎಷ್ಟೋ ಪತ್ರಿಕೆಗಳು ಆರಂಭದಲ್ಲಿ ಭಿರುಸಾಗಿ ನಡೆದು ನಂತರ ಕ್ಷೀಣಿಸುತ್ತ, ಸೊರಗುತ್ತ ಪ್ರಕಟಣೆ ನಿಂತು ಹೋಗಿರುವುದನ್ನು ಕಂಡಿದ್ದೇನೆ. ಆದರೆ ಪ್ರಜಾವಾಣಿ ಪತ್ರಿಕೆ ಇದಕ್ಕೆ ಹೊರತಾಗಿದೆ. ಜನರ ಮೆಚ್ಚುಗೆ ಗಳಿಸಿ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದೊಂದು ಸಾಧನೆಯ ಮೈಲಿಗಲ್ಲು. ಇದು ನಮ್ಮಂತಹ ಓದುಗರಿಗೆ ಸ್ಪೂರ್ತಿ ನೀಡುವ, ಸಡಗರ ತರು ಸಂದರ್ಭ. ನಾನೀಗ 77ನೇ ಸಂವತ್ಸರದಲ್ಲಿದ್ದೇನೆ. 1960ರ ದಶಕದಿಂದಲೂ ನಾನು ಓದುತ್ತಿರುವುದು ಪ್ರಜಾವಾಣಿ ಪತ್ರಿಕೆಯನ್ನೇ. ನಾನು ವಿದ್ಯೆಗೂ ಮಿಗಿಲಾಗಿ ಸಫಲತೆ-ವಿಫಲತೆಗಳ ಅರಿವನ್ನು ಗಳಿಸಿಕೊಂಡಿದ್ದು ಪ್ರತಿ ದಿನವೂ ತಪ್ಪದೆ ಪತ್ರಿಕೆ ಓದುವುದರಿಂದ. ಪತ್ರಿಕೆ ನನ್ನಲ್ಲಿನ ಕನ್ನಡ ಜ್ಞಾನವನ್ನೂ ಹೆಚ್ಚಿಸಿದೆ, ಪ್ರಚಲಿತ ವಿದ್ಯಮಾನಗಳ ಕುರಿತು ಜಾಗೃತಿ ಮೂಡಿಸಿದೆ. ಮನದಲ್ಲಿ ವೈಚಾರಿಕ ಅರಿವನ್ನು ಮೂಡಿಸುವ ಗುಣಮಟ್ಟದ ಲೇಖನಗಳಿಂದ ಪ್ರಭಾವಿತನಾಗಿ ಒಂದಿಷ್ಟು ಸಾಹಿತ್ಯದ ಅಭಿರುಚಿಯನ್ನೂ ಬೆಳೆಸಿಕೊಂಡಿದ್ದೇನೆ. ಪತ್ರಿಕೆ ನನ್ನ ಅನೇಕ ಲೇಖನಗಳನ್ನು ಪ್ರಕಟಿಸಿ ಬರವಣಿಗೆಗೆ ಸ್ಪೂರ್ತಿಯನ್ನು ನೀಡಿದೆ.
–ಎಲ್.ಚಿನ್ನಪ್ಪ, ಬೆಂಗಳೂರು.

*

ಉತ್ಸಾಹ ಮೂಡಿಸುವ ಪತ್ರಿಕೆ...

1959ರ ಸಾಲಿನಲ್ಲಿ ನಾನು ಎಳನೇ ತರಗತಿಯಲ್ಲಿ ಓದುತ್ತಿದ್ದೆ. ಪ್ರಜಾವಾಣಿ ಪತ್ರಿಕೆಯನ್ನು ನಮ್ಮ ಹಳ್ಳಿಯಲ್ಲಿ ಯಾರೂ ತರಿಸುತ್ತಿರಲಿಲ್ಲ. ಓದುವ ತವಕದಿಂದ ಐದು ಕಿಲೋ ಮೀಟರ್ ದೂರದ ತುರುವೇಕೆರೆಗೆ ನಡೆದು ಹೋಗಿ ತರುತ್ತಿದ್ದದ್ದುಂಟು.

ಇಂದಿಗೂ ನನಗೆ ಪ್ರಜಾವಾಣಿ ಓದದಿದ್ದರೆ ಇಡೀ ದಿನ ಮನಸಿಗೆ ಕಸಿವಿಸಿ ಆಗುತ್ತದೆ. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ನನ್ನ 47 ದೊಡ್ಡ ಸಕಾಲಿಕ ವೈಜ್ಞಾನಿಕ ಲೇಖನ ಪ್ರಕಟಿಸಿದೆ. ಸುದ್ಧಿ ಮಾಧ್ಯಮದಲ್ಲಿ ಪ್ರಕಟವಾಗಿರುವ ಸಣ್ಣ ಪುಟ್ಟ ಬರಹಗಳು ಬಹಳಷ್ಟಿದೆ. ಪ್ರಜಾವಾಣಿ ಓದಲು ಕೈನಲ್ಲಿ ಹಿಡಿದರೆ ಪೂರ್ತಿ ಓದುವ ಉತ್ಸಾಹ ಕ್ಷೀಣಿಸುವುದಿಲ್ಲ. ಪ್ರಜಾವಾಣಿ ಬಳಸುವ ಕಾಗದ, ಮುದ್ದಾದ ಅಕ್ಷರ, ಮುದ್ರಣದ ವೈಖರಿ, ತಪ್ಪಿಲ್ಲದ ಮುದ್ರಣ ಪ್ರಜಾವಾಣಿ ಓದುಗರನ್ನು ಮರಳು ಮಾಡಿದೆ. ಶುಭಾಶಯಗಳು.

ಟಿ.ಎಂ.ಶಿವಶಂಕರ್, ಹಿರಿಯ ಭೂವಿಜ್ಞಾನಿ

*

ಕಣ್ಣುತೆರೆಸುವ ಕೆಲಸ...

ಪ್ರಜಾವಾಣಿಯ ಪತ್ರಿಕೆಯ ಅಮೃತಮಹೋತ್ಸವ ಆಚರಿಸುವುದು ಬಹಳಸಂತೋಷ ತಂದಿದೆ. ಪ್ರಜಾವಾಣಿಯನ್ನು ನಾನು 40– 50 ವರ್ಷಗಳಿಂದ ಓದುತ್ತ ಬಂದಿದ್ದೇನೆ. ನಮ್ಮಊರು ಚಿಕ್ಕಹಳ್ಳಿಯಲ್ಲಿನಾನು ಪ್ರಜಾವಾಣಿ ಪತ್ರಿಕೆಯನ್ನು ತರಿಸಿ ಓದುತ್ತಾ ಬಂದಿದ್ದೇನೆ.

ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ.ನನಗೆ ಈಗ 78 ವರುಷ. ನಾನು ಹೆಚ್ಚು ಕಲಿಯದಿದ್ದರೂ ಇದನ್ನು ಓದುತ್ತಾ ನಾನು ಚಿಕ್ಕ ಚಿಕ್ಕ ಬರವಣಿಗೆಯನ್ನು ಪತ್ರಿಕೆಯಲ್ಲಿ ಬರೆಯಲು ನನಗೆ ಸ್ಪೂರ್ತಿಯಾಗಿದೆ. ನನ್ನ ನೆಚ್ಚಿನ ಪ್ರಜಾವಾಣಿ ಪತ್ರಿಕೆ ಸದಾಕಾಲ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತ ಹೋಗಲಿ. ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ.

– ಬಸಪ್ಪ ಎಸ್ ಮುಳ್ಳೂರ, ನಿವೃತ್ತ ಅಂಚೆ ಇಲಾಖೆಯ ನೌಕರ, ಹಲಗತ್ತಿ ತಾಲೂಕ ರಾಮದುರ್ಗ ಜಿಲ್ಲಾ ಬೆಳಗಾವಿ.

*

ದೈನಂದಿನ ಭಾಗ....

ನನಗೀಗ 59. ಪ್ರಜಾವಾಣಿ 1977ರಿಂದ ನನ್ನ ದೈನಂದಿನ ಭಾಗವಾಗಿದೆ. ಅಂದಿನ ದಿನಗಳಲ್ಲಿ ನಮ್ಮ ಕಲಬುರಗಿಗೆ ಪ್ರಜಾವಾಣಿ ಸಿಗುತ್ತಿದ್ದುದು ಸಂಜೆ 4 ಗಂಟೆಗೆ... ಶಾಲೆಯಿಂದ ಬಂದು ಚೀಲ ಎಸೆದು ಮೊದಲು ಪ್ರಜಾವಾಣಿಗೆ ಕೈ ಹಾಕಲು ನನ್ನ ಹಾಗೂ ತಮ್ಮನ ನಡುವೆ ಪೈಪೋಟಿ... ಫ್ಯಾoಟಮ್, ಮಾಂಡ್ರೆಕ್, ಮಾಡೆಸ್ಟಿ ಬ್ಲೇಸ್ ಕಾಮಿಕ್ ಗಳು, ಕೊನೆಯ ಪುಟದ ಕ್ರೀಡಾ ಸುದ್ದಿ, ಆಗಿನ ನಮ್ಮ ಆಕರ್ಷಣೆ.. ಪ್ರಬುದ್ಧರಾದಂತೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ, ನಿಷ್ಪಕ್ಷಪಾತ ಸುದ್ದಿ ವಿಶ್ಲೇಷಣೆ, ಮೌಲ್ಯಯುತ ಅಂಕಣಗಳು, ದೀಪಾವಳಿ ವಿಶೇಷಾಂಕ... ಇವುಗಳ ಜೊತೆಗೆ ಪಯಣ ಇನ್ನೂ ಸಾಗಿದೆ...

ಓದುಗರ ಸಲಹೆಗಳಿಗೆ,ಅಭಿರುಚಿಗೆ ಸದಾ ಸ್ಪಂದಿಸುವ ಪ್ರಜಾವಾಣಿ ಒಳ್ಳೆಯದನ್ನು ಎಲ್ಲರಿಂದಲೂ ಸ್ವೀಕಾರ ಮಾಡುವ ಅಪರೂಪದ ಗುಣ ಹೊಂದಿದೆ.. ದೂರದ ಕಲಬುರಗಿಯಿಂದ ನಾನು ತಯಾರಿಸಿ ಕಳಿಸುತ್ತಿದ್ದ "ಪದಕ್ರೀಡೆ "ಯನ್ನು ಸತತ 24 ವಾರ ಕ್ರೀಡಾ ಪುರವಣಿಯಲ್ಲಿ ಪ್ರಕಟಿಸಿ ಉತ್ತೇಜಸಿದ ಪತ್ರಿಕೆಗೆ ನಾನು ಋಣಿ.... ಕನ್ನಡ ಭಾಷೆಯ ತನ್ನದೇ ಆದ ಲಯ, ಹದ, ಅಶ್ಲೀಲದ ಗಡಿ ಮೀರದ ತಲೆಬರಹಗಳು ಪ್ರಜಾವಾಣಿಯ ಹುಟ್ಟುಗುಣಗಳು. ನಡುವೆ ಅಬ್ಬರದಿಂದ ಶುರುವಾದ ಎಷ್ಟೋ ದಿನ ಪತ್ರಿಕೆಗಳು ಬಂದು ಹೋದರೂ ಪ್ರಜಾವಾಣಿಯಿಂದ ನನ್ನಂತಹ ಓದುಗರು ವಿಮುಖರಾಗಲು ಸಾಧ್ಯವಾಗಿಲ್ಲ. ಗಟ್ಟಿ ಕಾಳಿನಂತೆ ಇನ್ನೂ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಾ ನಡೆದಿದೆ.. ತಾಂತ್ರಿಕತೆ ಬೆಳೆದಂತೆಲ್ಲ ಅಳವಡಿಸಿಕೊಂಡು ಸಾಗಿದೆ...

ನನ್ನ ಪ್ರಜಾವಾಣಿಯ ನೂರರ ಸಂಭ್ರಮಕ್ಕೂ ನನ್ನ ಅನಿಸಿಕೆ ಹಂಚಿಕೊಳ್ಳುವ ಆಸೆ ನನ್ನದು ಹಾಗೂ ನನ್ನಂಥ ಸಹಸ್ರಾರು ಸಾಮಾನ್ಯ ಓದುಗರದು...

– ಆರ್. ಟಿ. ಶರಣ್, ಕಲಬುರಗಿ

*

ಕನ್ನಡಿಗರ ಆಯ್ಕೆಯ ಪತ್ರಿಕೆ...

ಕರ್ನಾಟಕದಲ್ಲಿ ಕನ್ನಡಿಗರ ಮೊದಲ ಆಯ್ಕೆ ಪ್ರಜಾವಾಣಿ ಪತ್ರಿಕೆ. ಪರೀಕ್ಷೆಗಳಿಗೆ ಅನೂಕೂಲಕಾರಿಯಾಗಿರುವ ಏಕೈಕ ಕನ್ನಡ ಪತ್ರಿಕೆ. ವಿದ್ಯಾರ್ಥಿ ಗಳ ಜೀವನದಲ್ಲಿ ಅತೀ ಹೆಚ್ಚು ಪರಿಣಾಮಕಾರಿಯಾಗಿದೆ. ಸಾಹಿತ್ಯ, ಕ್ರೀಡೆ, ರಾಷ್ಟ್ರಿಯ, ಅಂತರಾಷ್ಟ್ರೀಯ ಸುದ್ದಿಗಳನ್ನು ಅಚ್ಚುಕಟ್ಟಾಗಿ ವಿವರಿಸುವ ಒಂದು ಉತ್ತಮ ಪತ್ರಿಕಾ ಮಾಧ್ಯಮವಾಗಿದೆ. ಪ್ರಜಾವಾಣಿ ಪತ್ರಿಕೆ ಇದೇ ರೀತಿ ಮುಂದುವರಿದಲ್ಲಿ ಸಮಾಜದಲ್ಲಿ ಹಲವಾರು ಬದಲಾವಣೆ ಕಾಣಬಹುದು. ಪ್ರಜಾವಾಣಿ ಪತ್ರಿಕೆಗೆ ನನ್ನ ಶುಭ ಹಾರೈಕೆಗಳು.

- ಶ್ರವಣ. ಸದಾಶಿವ. ಪೂಜಾರಿ, ಬಿಎಸ್ಸಿ ಪ್ರಥಮ ವರ್ಷ ಧಾರವಾಡ.

*

ಪ್ರಜಾವಾಣಿ—ನಮ್ಮ ಅಭಿಮಾನ, ನಮ್ಮ ಹೆಮ್ಮೆ

'ಪ್ರಜಾವಾಣಿ' ಕನ್ನಡಿಗರ ಹೆಮ್ಮೆ ಮತ್ತು ಅಭಿಮಾನದ ಸಂಕೇತ. ಕಾಲೇಜು ವಿದ್ಯಾರ್ಥಿ ದೆಸೆಯಿಂದ ಪ್ರಜಾವಾಣಿ ಓದುತ್ತಿರುವೆ. ಗುಣಮಟ್ಟ ˌ ವೈವಿಧ್ಯತೆ ಮತ್ತು ನಿಷ್ಟುರತೆಯಲ್ಲಿ ರಾಜೀಮಾಡಿಕೊಳ್ಳದೇ ತನ್ನತನ ಕಾಪಾಡಿಕೊಂಡಿರುವ ಕನ್ನಡದ ಹೆಮ್ಮೆಯ ಪತ್ರಿಕೆಯಿದು. ದಿನನಿತ್ಯದ ಸುದ್ಧಿಯ ಜೊತೆಗೆ ಲೇಖನˌ ಕತೆˌ ಕವನಗಳನ್ನು ಪ್ರಕಟಿಸಿ ನಾಡಿನ ಸಮಸ್ತ ಕನ್ನಡಿಗರ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸಿದೆ. ಪತ್ರಿಕೆಯ ಯಾವ ಅಂಕಣದ ಲೇಖನಗಳನ್ನು ಅಭಿಮಾನದಿಂದ ಓದುತ್ತಿದ್ದೇನೋ ಅದೇ ಅಂಕಣಕ್ಕೆ ಲೇಖನ ಬರೆಯುವ ಲೇಖಕನಾಗಿ ನನ್ನನ್ನು ಪ್ರಜಾವಾಣಿ ರೂಪಿಸಿದೆ. ಅಮೃತಮಹೋತ್ಸವದ ಸಂಭ್ರಮದ ಈ ಸಂದರ್ಭ ದಮನಿತರ ಧ್ವನಿಯಾಗಿˌ ಮಾರ್ಗತೋರುವ ಗುರುವಾಗಿˌ ಕೈಹಿಡಿದು ನಡೆಸುವ ಕಾರುಣ್ಯವಾಗಿ ಪತ್ರಿಕೆಯ ಪಯಣ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸುತ್ತೇನೆ.

—ರಾಜಕುಮಾರ ಕುಲಕರ್ಣಿˌ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.