ADVERTISEMENT

ಪ್ರಜಾವಾಣಿ@75: ಪ್ರಜಾವಾಣಿ ಅಮೃತ ಮಹೋತ್ಸವ- ಓದುಗರಿಂದ ಅಭಿನಂದನಾ ಸಂದೇಶಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 15:43 IST
Last Updated 18 ಅಕ್ಟೋಬರ್ 2022, 15:43 IST
   

ಮನ ಸೆಳೆಯುವ ಪತ್ರಿಕೆ...
ನಾನು ಹುಟ್ಟಿದಾರಭ್ಯದಿಂದ ಓದುತ್ತಿರುವ ಪತ್ರಿಕೆ, ಪ್ರಜಾವಾಣಿ. ಅಕಸ್ಮಾತ್ ಪತ್ರಿಕೆ ಒಂದು ದಿನ ಬರಲಿಲ್ಲ ಎಂದರೆ ಅಂದು ಮನಸ್ಸು ಏನನ್ನೋ ಕಳೆದುಕೊಂಡತೆ ಇರುತ್ತೆ. ಅದರ ವಿನ್ಯಾಸ, ಕರಾರುವಾಕ್ಕಾದ ವಿಷಯಗಳು ಮತ್ತು ಹತ್ತು ಹಲವು ಅಂಕಣಗಳು, ಮನ ಸೆಳೆಯುತ್ತಾ ಬಂದಿದೆ.

ನನಗೆ ವೈಯುಕ್ತಿಕವಾಗಿ, ಕೊವಿಡ್ ಸಮಯದಲ್ಲಿ, ಬಡಮಕ್ಕಳಿಗೆ ಪಾಠ ಮಾಡುವ ಅವಕಾಶವು, ಪ್ರಜಾವಾಣಿಯು ಬದರಿನಾಥ್ ಅವರ ಈ ನಿಟ್ಟಿನ ನಿಸ್ವಾರ್ಥ ಸೇವೆಯ ಬಗ್ಗೆ ಪ್ರಕಟಿಸಿದ್ದರಿಂದಲೇ ಒದಗಿಬಂತು.

ಈಗ ಅಮೃತ ಮಹೋತ್ಸವವನ್ನು ಪ್ರಜಾವಾಣಿ ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಅದರ ಸಂಸ್ಥಾಪಕ, ಸಂಪಾದಕ, ವರದಿಗಾರರ, ಮುದ್ರಣ, ಸಾರಿಗೆ ಹಾಗೂ ವಿತರಣಾ ವೃಂದವರೆಲ್ಲರಿಗೂ ಮತ್ತು ಮುಖ್ಯವಾಗಿ ಆಭಿಮಾನಿ ಓದುಗರಿಗೆ, ಜಾರಿರಾತುಗರಿಗೂ, ಈ ಶುಭ ಸಂದರ್ಭದಲ್ಲಿ ಮನಃ ಪೂರ್ವಕ ಆಭಿನಂದನೆಗಳು
– ವೇ ಸುರೇಶ್

ADVERTISEMENT

*
ಯಶಸ್ಸಿಗೆ ದಾರಿ...
ದಿನನಿತ್ಯ ಈ ಪತ್ರಿಕೆ ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಬೇಗ ಯಶಸ್ಸು ಕಾಣಬಹುದು,, ಪ್ರಾದೇಶಿಕ, ರಾಜ್ಯ, ರಾಷ್ಟೀಯ, ಅಂತಾರಾಷ್ಟ್ರೀಯ ಬಿಸಿ ಬಿಸಿ ಸುದ್ದಿಗಳು,, ನಾನು ಈ ಪತ್ರಿಕೆ ಮುಗಿಸಿ ನಂತರ ಉಳಿದ ಅಭ್ಯಾಸ ಮಾಡುತ್ತೇನೆ, ಒಟ್ಟಾರೆ ವಿದ್ಯಾರ್ಥಿಗಳ ದ್ರಷ್ಟಿಯಿಂದ ಬಾರಿ ಉತ್ತಮವಾದ ಪತ್ರಿಕೆ ಈ ಪತ್ರಿಕೆಯ 75 ನೆ ಅಮೃತ ಮಹೋತ್ಸವಕ್ಕೆ ಶುಭಾಶಯಗಳು
-ಮಹೇಶ್ ತೇಲಿ, ಮುಧೋಳ, ವಿದ್ಯಾರ್ಥಿ

*
4 ದಶಕಗಳ ಒಡನಾಟ...
‘ಪ್ರಜಾವಾಣಿ’ಗೆ 75, ನನಗೂ 75 ವರ್ಷ. ಮೂರು ತಿಂಗಳು. ನಾಲ್ಕು ದಶಕಗಳಿಂದ ಈ ಪತ್ರಿಕೆಯೊಡನೆ ನನ್ನ ಒಡನಾಟ ಓದಿಗೆ ಬೆಳವಣಿಗೆಗೆ. ನಾಡಿನ ಪ್ರಮುಖ ಕತೆಗಾರರು ಅಂಕಣಕಾರರು ರೂಪುಗೊಂಡದ್ದು ಇಲ್ಲಿ. ಸಮಕಾಲೀನ ಎಲ್ಲಾ ತಲ್ಲಣಗಳು ವೈಚಾರಿಕ ವಿಶ್ಲೇಷಣೆಗೆ ಇಲ್ಲಿ ಒಳಗಾಗುತ್ತವೆ. ನಾನು ಒಂದು ವಾರ ಈ ಪತ್ರಿಕೆ ದೊರಕದ ಊರಿಗೆ ಹೋಗಿ ಬಂದರೂ ಕ್ರಮವಾಗಿ ಜೋಡಿಸಿಟ್ಟಿರುತ್ತಾರೆ ಮನೆಯಲ್ಲಿ. ಎಲ್ಲಾ ಓದಿದ ಮೇಲೆಯೇ ಊಟ ತಿಂಡಿ. ನನ್ನ ವಿಶೇಷ ಖುಷಿ ಎಂದರೆ ನಾನಿದಕ್ಕೆ ಐದಾರು ವರ್ಷಗಳ ವರೆಗೆ ವರದಿಗಾರನಾಗಿ ಸೇವಿಸಿದ್ದು. ಆ ಥ್ರಿಲ್ ಅನುಭವ ವರ್ಣಿಸಲಾಗದ್ದು.

ಒಂದು ಪ್ರಸಂಗ ಹೇಳಲೇಬೇಕು: ನನ್ನ ಕಾಲೇಜಿನ ಉಪನ್ಯಾಸಕ ಹುದ್ದೆಯ ಜಾಹೀರಾತು ಪತ್ರಿಕೆಗೆ ಕಳಿಸಿದ್ದೆ. ಅದು ಪ್ರಕಟವಾಗಲೇ ಇಲ್ಲ. ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಲೇಬೇಕಂತೆ. ಬೇಜಾರಾಗಿ ಪತ್ರಿಕೆ ಕಾರ್ಯಾಲಯಕ್ಕೆ ನುಗ್ಗಿ ಕೇಳಿದೆ. ಹೇಳಿದರು: ಉಪನ್ಯಾಸಕ ಹುದ್ದೆಯ ಅಭ್ಯರ್ಥಿಗಳಿಗೆ ಅರ್ಜಿಯೊಡನೆ ಸಲ್ಲಿಸಬೇಕಾದ ಡಿಡಿ ಹಣ ಬಹಳ ಇದೆ. ಇದು ನಿರುದ್ಯೋಗಿಗಳ ಶೋಷಣೆ. ಕಾರಣ ಜಾಹೀರಾತು ಪ್ರಕಟಿಸಲು ಆಗದು. ಡಿಡಿ ಹಣ ಕಡಿತಗೊಳಿಸಿ ಪ್ರಕಟಣೆಗೆ ಕೊಡಬೇಕಾಯಿತು. ಪ್ರಜಾವಾಣಿಗೆ ತಿದ್ದುಪಡಿ ಹಾಕಬೇಕಾಯಿತು. ಇದು ಜನವಾಣಿಯಾದ ಪ್ರಜಾವಾಣಿ. ನನ್ನ ಕವಿತೆಗಳು , ಸಂಕಲನಗಳ ವಿಮರ್ಶೆಗಳು ಇಲ್ಲಿ ಪ್ರಕಟವಾಗಿವೆ. ದೀಪಾವಳಿ ವಿಶೇಷಾಂಕ ಕಾದಿರಿಸಿ ಖರೀದಿಸುತ್ತಿದ್ದೆ. ಇದರ ಆಯುರಾರೋಗ್ಯ ಹಾರೈಸುವೆ. ಇದರ ಆರೋಗ್ಯ ನಾಡಿನ ಸಾಂಸ್ಕ್ರತಿಕ ಆರೋಗ್ಯ ಕೂಡ ಹೌದೆಂದು ಎಲ್ಲರೂ ಬಲ್ಲರು..
-ಪ್ರೊ.ಕಾಶಿನಾಥ ಅಂಬಲಗೆ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.