ADVERTISEMENT

ಯುವಜನೋತ್ಸವ: ಪಸರಿಸಲಿ ಕನ್ನಡದ ಘಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:31 IST
Last Updated 24 ಡಿಸೆಂಬರ್ 2020, 19:31 IST

ಯುವಕ, ಯುವತಿಯರಲ್ಲಿ ಹುದುಗಿರುವ ಹತ್ತು ಹಲವು ಬಗೆ ಪ್ರತಿಭೆಯ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಲು ಜಿಲ್ಲಾ, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಪ್ರತೀ ವರ್ಷ ಸರ್ಕಾರದ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಯುವಜನೋತ್ಸವವನ್ನು ನಡೆಸಿಕೊಂಡು‌ ಬರಲಾಗುತ್ತಿದೆ. ಇದು ನಾಡಿನ ಎಷ್ಟೋ ಯುವಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿರುವುದು ಸ್ವಾಗತಾರ್ಹ.

ಇದೇ 28ರಂದು ಜಿಲ್ಲಾ ಮಟ್ಟದ ಉತ್ಸವ ನಡೆಯುತ್ತಿದೆ. ಈ ಉತ್ಸವದಲ್ಲಿ ವಿವಿಧ ಗಾಯನ, ವಾದ್ಯ, ನೃತ್ಯ, ಏಕಾಂಕ ನಾಟಕ, ಆಶುಭಾಷಣ ಸ್ಪರ್ಧೆಗಳು ನಡೆಯುತ್ತವೆ. ಯುವಜನ ನಮ್ಮ ಸಂಸ್ಕೃತಿ, ಪರಂಪರೆಗಳ ಹರಿಕಾರರು ಎನ್ನುವ ಹೊನ್ನುಡಿಗೆ ಸಾಕ್ಷಿಗಳಾಗಲು ಪ್ರೇರೇಪಿಸುವುದು ಈ ಯುವಜನೋತ್ಸವಗಳ ಉದ್ದೇಶವಾಗಿದೆ. ಹೀಗಿರುವಾಗ ಉಳಿದೆಲ್ಲ ಸ್ಪರ್ಧೆಗಳಲ್ಲಿ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಅವಕಾಶವಿರುವಾಗ, ಏಕಾಂಕ ನಾಟಕ ಮತ್ತು‌ ಆಶುಭಾಷಣ ಸ್ಪರ್ಧೆಗಳನ್ನು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ‌ ಮಾತ್ರ ಅಭಿವ್ಯಕ್ತಿಸಬೇಕಾಗಿದೆ. ಇದರಿಂದ ಈ ಎರಡು ವಿಭಾಗಗಳಲ್ಲಿ ಕನ್ನಡ ಮಾತ್ರ ಬರುವ ಪ್ರತಿಭಾನ್ವಿತರು ಸ್ಪರ್ಧೆಯಿಂದ ವಂಚಿತರಾಗುತ್ತಾರೆ. ಅಷ್ಟೇ ಅಲ್ಲ, ಮಾತೃಭಾಷೆಯಲ್ಲಿ ಅಭಿವ್ಯಕ್ತಿಯ ರೀತಿಯೇ ಬೇರೆ, ಇತರ ಭಾಷೆಗಳಲ್ಲಿನ ರೀತಿಯೇ ಬೇರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಇದರಿಂದ ಬಹುದೊಡ್ಡ ಅನ್ಯಾಯ.

ಮೊದಲಿನಿಂದಲೂ ಈ ಯುವಜನೋತ್ಸವದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಅನುಕೂಲವಾಗುವ ಕಾರಣಕ್ಕೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಅವಕಾಶ ಇದೆಯಂತೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡದಲ್ಲೂ ಈ ಸ್ಪರ್ಧೆಗಳನ್ನು ಏರ್ಪಡಿಸಿ ಅವನ್ನು ರಾಜ್ಯ ಮಟ್ಟದವರೆಗೂ ನಡೆಸಿದರೆ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗುವುದಿಲ್ಲ. ಸಾಧ್ಯವಾದರೆ ಅಂತರರಾಜ್ಯ ಮಟ್ಟದಲ್ಲೂ ನಡೆಸಿದರೆ ಅಲ್ಲಿ ಕೂಡ ಕನ್ನಡದ ಘಮ ಪಸರಿಸಬಹುದು.

ADVERTISEMENT

ಈ ಬಗ್ಗೆ ಇಲಾಖೆ ಕೂಡಲೇ ಕ್ರಮ ಕೈಗೊಂಡು, ಈ ಎರಡೂ ಸ್ಪರ್ಧೆಗಳಲ್ಲಿ ಈ ಬಾರಿಯಿಂದಲೇ ಕನ್ನಡದ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡಬೇಕು.
-ದೀಪಾ ಹಿರೇಗುತ್ತಿ,ಕೊಪ್ಪ,ಅಕ್ಷತಾ ಹುಂಚದಕಟ್ಟೆ,ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.