ನವದೆಹಲಿ: ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿ ಎರಡು ತಾಸು ಕಳೆದಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುನ್ನಡೆ, ಹಿನ್ನಡೆ, ಗೆಲುವಿನ ದಿಕ್ಕು ಬೆಳಕಿಗೆ ಬರುತ್ತಿದೆ. 2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾದ ಚುನಾವಣಾ ನಾಟಕದ ಅಂತಿಮ ದೃಶ್ಯವನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಭವಿಷ್ಯದ ದಿಕ್ಕು ಎಂದು ಪರಿಗಣಿಸಿರುವ ಈ ಚುನಾವಣೆಯ ಫಲಿತಾಂಶ ನಿಜಕ್ಕೂ 2019ರ ಚುನಾವಣೆಗೆ ದಿಕ್ಸೂಚಿಯೇ?
ಈ ಪ್ರಶ್ನೆಗೆ ‘ದಿ ಪ್ರಿಂಟ್’ ಜಾಲತಾಣದರುಹಿ ತಿವಾರಿ ‘ಇಲ್ಲ’ ಎಂದೇ ಉತ್ತರಿಸುತ್ತಾರೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆಗಳಿಗೆ ನಡೆದ ಚುನಾವಣೆಯು ಪ್ರಾದೇಶಿಕವಾಗಿ ಮತದಾರರ ರಾಜಕೀಯ ಒಲವುಗಳನ್ನು ಪ್ರತಿಬಿಂಬಿಸಬಹುದು. ಆದರೆ ಈ ಚುನಾವಣೆಗಳಿಗೆ ಅನೇಕ ಮಿತಿಗಳಿವೆ. ಇದೇ ಕಾರಣಕ್ಕೆ ಇದು 2019ರ ಚುನಾವಣೆಯ ಸೆಮಿಫೈನಲ್ ಎನಿಸಿಕೊಳ್ಳುವುದಿಲ್ಲ.
ಮೋದಿ ಎದುರು ಗಾಂಧಿ
ನಾಯಕತ್ವದ ಪ್ರಶ್ನೆಯಲ್ಲಿರುವ ವೈವಿಧ್ಯತೆಯೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಇರುವ ಮುಖ್ಯ ವ್ಯತ್ಯಾಸ. ಮಧ್ಯಪ್ರದೇಶದಲ್ಲಿ ಶಿವರಾಜ್‌ಸಿಂಗ್ ಚೌಹಾಣ್, ರಾಜಸ್ಥಾನದಲ್ಲಿ ವಸುಂಧರ ರಾಜೆ ಮತ್ತು ಛತ್ತೀಸಗಡದಲ್ಲಿ ರಮಣ್‌ಸಿಂಗ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಇವರ ಪರವಾಗಿ ಮತ ಚಲಾಯಿಸಬೇಕೇ ಅಥವಾ ವಿರುದ್ಧವಾಗಿ ಮತ ಚಲಾಯಿಸಬೇಕೆ ಎನ್ನುವುದು ಆಯಾ ರಾಜ್ಯಗಳಲ್ಲಿ ಚರ್ಚೆಯಾದ ಬಹುಮುಖ್ಯ ಅಂಶವಾಗಿತ್ತು. ನರೇಂದ್ರ ಮೋದಿ ಬಗ್ಗೆ ಜನರು ಹೆಚ್ಚು ಮಾತನಾಡಲೇ ಇಲ್ಲ.
ಆದರೆ ಈಚೆಗಷ್ಟೇ ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಉತ್ತರ ಪ್ರದೇಶ ಮತ್ತು ತ್ರಿಪುರಾಗಳಲ್ಲಿ ಇಂಥ ವಾತಾವರಣ ಇರಲಿಲ್ಲ. ಈ ಎರಡೂ ರಾಜ್ಯಗಳಲ್ಲಿ ಮೋದಿ ಬಿಜೆಪಿಯ ಮುಖವಾಗಿದ್ದರು. ಅವರನ್ನು ಮುಂದಿಟ್ಟುಕೊಂಡೇ ಪಕ್ಷ ಚುನಾವಣೆ ಎದುರಿಸಿತ್ತು.
ಈ ಮೂರೂ ರಾಜ್ಯಗಳಲ್ಲಿಯೂ ಬಿಜೆಪಿ ಮುಖ್ಯಮಂತ್ರಿಗಳು ಪ್ರಭಾವಿಗಳೇ ಆಗಿದ್ದರು. ಒಳಿತಿಗೋ ಕೆಡುಕಿಗೋ, ಸಾಧನೆಗೋ ದೌರ್ಬಲ್ಯಕ್ಕೋ ಇವರೇ ಮುಖ್ಯ ಎನಿಸಿದ್ದರು. ಜನರ ಮನಸ್ಸಿನಲ್ಲಿ ಮೋದಿ ಎರಡನೇ ಪಂಕ್ತಿಯ ನಾಯಕ ಎಂದಷ್ಟೇ ಅನ್ನಿಸಿಕೊಂಡಿದ್ದರು. ಆದರೆ 2019ರ ಚುನಾವಣೆಯಲ್ಲಿ ಪರಿಸ್ಥಿತಿ ಹೀಗಿರುವುದಿಲ್ಲ. ಬಿಜೆಪಿ ಪ್ರಚಾರ ಸಂಪೂರ್ಣವಾಗಿ ಮೋದಿ ಅವರನ್ನೇ ಕೇಂದ್ರೀಕರಿಸಿರುತ್ತದೆ
ಈ ವಿಶ್ಲೇಷಣೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ. ಆಯಾ ಪಕ್ಷಗಳ ರಾಜ್ಯ ನಾಯಕತ್ವದ ಸುತ್ತಲೇ ಚುನಾವಣಾ ಪ್ರಚಾರ ಕೇಂದ್ರೀಕರಿಸಿತ್ತು. ಈ ನಾಯಕರು ಸ್ಥಳೀಯವಾಗಿ ಹೇಗೆ ಬೆಂಬಲ ಗಳಿಸಿಕೊಂಡರು ಮತ್ತು ಪ್ರಚಾರ ತಂತ್ರಗಳನ್ನು ಹೆಣೆದರು ಎನ್ನುವುದೇ ಪಕ್ಷದ ಅಳಿವು–ಉಳಿವಿನ ಪ್ರಶ್ನೆಯನ್ನು ನಿರ್ಧರಿಸಿತು. ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ರಾಹುಲ್‌ಗಾಂಧಿ ಕಾಂಗ್ರೆಸ್ ಪಾಲಿಗೆ ಹೆಚ್ಚುವರಿ ಬಲ ಎಂದಷ್ಟೇ ಎನಿಸಿದ್ದರು. ಅವರು ಮತ ತಂದುಕೊಡುವ ಮ್ಯಾಜಿಕ್ ಮಾಡಬಲ್ಲರು ಎಂದು ಸ್ಥಳೀಯ ನಾಯಕರು ಅಂದುಕೊಂಡಿರಲಿಲ್ಲ.
ಆದರೆ ಲೋಕಸಭೆ ಚುನಾವಣೆ ಹೀಗಾಗದು. ಬಿಜೆಪಿಯ ಮೋದಿ ಎದುರು ಕಾಂಗ್ರೆಸ್ ರಾಹುಲ್‌ಗಾಂಧಿಯನ್ನು ಮುಂದಿಡಲಿದೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ ನಾಯಕತ್ವದ ವಿಚಾದಲ್ಲಿಯೂ ಈಗಿನ ಚುನಾವಣೆಗಿಂತ 2019ರ ಲೋಕಸಭೆ ಚುನಾವಣೆ ಸಂಪೂರ್ಣ ಭಿನ್ನ.
ಆಡಳಿತ ವಿರೋಧಿ ಅಲೆ
ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಸತತ ಮೂರು ಅವಧಿ ಅಧಿಕಾರ ನಡೆಸಿರುವ ಬಿಜೆಪಿಗೆ ಈ ರಾಜ್ಯಗಳನ್ನು ಮತ್ತೆ ಗೆಲ್ಲುವುದು ದೊಡ್ಡ ಸವಾಲು. ರಾಜಸ್ಥಾನದಲ್ಲಿ ವಸುಂಧರ ರಾಜೆ ಜನಪ್ರಿಯತೆ ಕುಸಿದಿರುವುದು ಪಕ್ಷಕ್ಕೆ ತಿಳಿಯದ ಸಂಗತಿ ಆಗಿರಲಿಲ್ಲ. ಈ ಅಂಶವನ್ನು ಗಮನದಲ್ಲಿರಿಸಿಕೊಂಡೇ ಬಿಜೆಪಿ ಚುನಾವಣಾ ತಂತ್ರಗಳನ್ನು ಹೆಣೆದಿತ್ತು. ಈ ಮೂರೂ ರಾಜ್ಯಗಳಲ್ಲಿ ಜನರ ಮನಸ್ಸಿನಲ್ಲಿದ್ದ ಆಡಳಿತ ವಿರೋಧಿ ಧೋರಣೆಯನ್ನೇ ಕಾಂಗ್ರೆಸ್ ಚುನಾವಣಾ ಪ್ರಚಾರದ ಬಂಡವಾಳವಾಗಿಸಿಕೊಂಡಿತು.
ಈ ಹಿನ್ನೆಲೆಯಲ್ಲಿ ನೋಡಿದರೆ ಲೋಕಸಭೆ ಚುನಾವಣೆಯ ವೇಳೆಗೆ ದೇಶದಲ್ಲಿ ಏಳಬಹುದಾದ ಮೋದಿ ಪರ ಅಥವಾ ವಿರುದ್ಧ ಅಲೆಯೇ ಕಾಂಗ್ರೆಸ್‌ನ ಚುನಾವಣಾ ತಂತ್ರಗಳನ್ನು ನಿರ್ಧರಿಸುವುದು ಸಹಜ ಎನಿಸುತ್ತದೆ. ಮೋದಿ ಅವರನ್ನು ಟೀಕಿಸುವುದು ಅಥವಾ ವ್ಯಂಗ್ಯವಾಡುವುದಕ್ಕಿಂತ ದೇಶ ಮುನ್ನಡೆಸುವ ವಿಚಾರದಲ್ಲಿ ಕಾಂಗ್ರೆಸ್ ಏನೆಲ್ಲಾ ಯೋಜನೆಗಳನ್ನು ಜನರ ಮುಂದೆ ಇರಿಸಲಿದೆ ಎನ್ನುವುದು ಚುನಾವಣೆಯ ದಿಕ್ಕು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.
ಮೈತ್ರಿಕೂಟದ ಪ್ರಶ್ನೆ
2019ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಮಹಾಮೈತ್ರಿಕೂಟ ರಚನೆಗೆ ಮುಂದಾಗಿವೆ. ಆದರೆ ಈ ಮೈತ್ರಿಕೂಟ ಜನ್ಮತಾಳುವ ಮೊದಲೇ ಅಪಸ್ವರ ಕೇಳಿಬರುತ್ತಿದೆ. ಬಿರುಕುಗಳು ಎದ್ದು ಕಾಣುತ್ತಿವೆ. ಈ ವಿಧಾನಸಭಾ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜ್‌ವಾದಿ ಪಕ್ಷಗಳನ್ನು (ಎಸ್‌ಪಿ) ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ವಿಫಲವಾಯಿತು. ಛತ್ತೀಸಗಡ ಮತ್ತು ಮಧ್ಯಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಇದು ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗಬಹುದು.
ತೆಲಂಗಾಣದಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಎಡಪಕ್ಷಗಳೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸ್ವಂತ ಬಲದ ಮೇಲೆ ಹೋರಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಯಗಳಿಸುವುದು ಬಹುತೇಕ ಖಚಿತ ಎನ್ನುವ ಮಟ್ಟಕ್ಕೆ ಮುಟ್ಟಿದೆ. ಟಿಡಿಪಿಯಿಂದ ದೂರವಾಗಿರುವ ಬಿಜೆಪಿಗೆ ಆಂಧ್ರ ಮತ್ತು ತೆಲಂಗಾಣದ ಬಗ್ಗೆ ಭಾರೀ ಲೆಕ್ಕಾಚಾರಗಳಿವೆ. ಸ್ವಂತ ಬಲವನ್ನು ವೃದ್ಧಿಸಿಕೊಳ್ಳುವುದು, ಹೊಸ ಮೈತ್ರಿ ಪಕ್ಷವನ್ನು ಹುಡುಕಿಕೊಳ್ಳುವ ಆಶಯ ಪಕ್ಷಯ ವಲಯದಲ್ಲಿ ವ್ಯಕ್ತವಾಗಿದೆ. ಈ ಕನಸು 2019ರ ವೇಳೆಗೆ ನಿಜವಾದರೂ ಅಚ್ಚರಿಯಿಲ್ಲ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಸ್ವಲ್ಪಮಟ್ಟಿಗೆ ಭವಿಷ್ಯದ ಹಾದಿ ಹೇಗಿರಬಹುದು ಎಂಬುದನ್ನು ಬಿಂಬಿಸಿದರೂ, ಮುಂದಿನ ರಾಜಕೀಯ ಲೆಕ್ಕಾಚಾರಗಳನ್ನು ಪ್ರಭಾವಿಸಿದರೂ 2019ರ ಲೋಕಸಭೆ ಚುನಾವಣೆಯ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ. ಈ ಫಲಿತಾಂಶ ಒಂದು ರೀತಿ ಅರೆಬೆಂದ ಮದುವೆಗಳಿದ್ದಂತೆ. 2019ರ ವೇಳೆಗೆ ಸಾಕಷ್ಟು ಬದಲಾವಣೆಗಳು ಅಗಬಹುದು. ಮೈತ್ರಿಪಕ್ಷಗಳನ್ನು ಆರಿಸಿಕೊಳ್ಳುವುದು ಮತ್ತು ನಿರ್ವಹಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ತೋರುವ ಜಾಣತನ, ಮಹಾಮೈತ್ರಿಕೂಟದ ಸಾಧ್ಯತೆಗಳು ಮಾತ್ರ ನಿಚ್ಚಳವಾಗಿ ಭವಿಷ್ಯವನ್ನು ನಿರ್ಧರಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.