ADVERTISEMENT

ಕರಾವಳಿಯ ಪ್ರಗತಿಯೂ, ಹೋರಾಟದ ಹಾದಿಯೂ...

ಬಾಲಕೃಷ್ಣ ಪುತ್ತಿಗೆ
Published 24 ಆಗಸ್ಟ್ 2013, 19:59 IST
Last Updated 24 ಆಗಸ್ಟ್ 2013, 19:59 IST

ಅಭಿವೃದ್ಧಿಯ ಹೂರಂಗವಲ್ಲಿ ಬಿಡಿಸುವ ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲವೂ ಕರಾವಳಿಯಲ್ಲಿ ಕೊಳ್ಳಿ ಇಡುತ್ತಲೇ ಬಂದಿವೆ. ಈ ಭಾಗದ ನೈಸರ್ಗಿಕ ಧಾರಣಾ ಶಕ್ತಿಯನ್ನು ಲೆಕ್ಕಿಸದೆ ಹಾಗೂ ಪರಿಸರ ಪರ ಕಾಳಜಿ ಮರೆತು ಅಭಿವೃದ್ಧಿಯ ನೆಪದಲ್ಲಿ ಒಂದರ ಮೇಲೊಂದು ಬೃಹತ್ ಉದ್ದಿಮೆಗಳನ್ನು ತರುವ ಧಾವಂತದಲ್ಲಿ ಇವೆ.

ಇಲ್ಲಿನ ಹಸಿರು ವಲಯ, ಅನ್ನದ ಬಟ್ಟಲು ವರ್ಷ ಕಳೆದಂತೆ ಕುಗ್ಗುತ್ತಲೇ ಬಂದಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಹೋಗಿದೆ. ನದಿ, ಜಲ ಮೂಲಗಳು, ಸಮುದ್ರ ತೀರ ಕೂಡ ಕಲುಷಿತಗೊಳ್ಳುತ್ತಿದೆ. ಕಿರು ಜಲ ವಿದ್ಯುತ್ ಯೋಜನೆಗಳಲ್ಲದೆ, ಗಣಿಗಾರಿಕೆಯಂತಹ ಚಟುವಟಿಕೆಗಳ ಮೂಲಕ ಪಶ್ಚಿಮ ಘಟ್ಟಕ್ಕೂ ಕನ್ನ ಹಾಕುವ ಯೋಜನೆಗಳ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಇದು ಕರಾವಳಿ ಜನರನ್ನು ಕೆರಳಿಸಿದೆ. ರಾಜಕಾರಣಿಗಳ ಬಣ್ಣದ ಮಾತುಗಳಿಗೆ ಮರುಳಾಗುವಷ್ಟು ದಡ್ಡರಲ್ಲ ಇಲ್ಲಿನ ಜನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪ್ರತಿರೋಧದ ರೋಷ ಇಲ್ಲಿ ದಿನ ಕಳೆದಂತೆ ಹೆಪ್ಪುಗಟ್ಟುತ್ತಿದೆ. ಈ ಹಿಂದೆ ಬಹುರಾಷ್ಟ್ರೀಯ ಕಂಪೆನಿಯಾದ ಕೊಜೆಂಟ್ರಿಕ್ಸ್ ಇಲ್ಲಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾದಾಗ ಸಾಲುಸಾಲು ಪ್ರತಿಭಟನೆಗಳು ಮೊಳಗಿದವು. ಕೊನೆಗೂ ಆ ಯೋಜನೆ ಮೂಲೆಗುಂಪಾಯಿತು. ಇದಾದ ಬಳಿಕ ನಾಗಾರ್ಜುನ, ನಂದಿಕೂರು ಹೆಸರಿನಲ್ಲಿ ಮತ್ತೆ ಬೃಹತ್ ವಿದ್ಯುತ್ ಸ್ಥಾವರ ಯೋಜನೆ ಗರಿಗೆದರಿತು. ಭಾರಿ ಪ್ರತಿಭಟನೆಗಳ ನಡುವೆಯೂ ಇದು `ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್' ಹೆಸರಲ್ಲಿ ಜಾರಿಗೆ ಬಂತು.

ಇದರಿಂದ ಉಂಟಾಗಿರುವ ಪರಿಸರ, ಜಲ ಮಾಲಿನ್ಯ ವಿರುದ್ಧದ ಆಕ್ರೋಶ ಈಗಲೂ ಇದ್ದೇ ಇದೆ. ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥರೇ ಇದರ ವಿರುದ್ಧ ಹಲವು ಬಾರಿ ನಿರಶನ ಸತ್ಯಾಗ್ರಹ ಕೈಗೊಂಡಿದ್ದಾರೆ. ಪ್ರತಿಭಟನೆ ನಿರತರನ್ನು ಹಾಗೂ ಹೀಗೂ ಸುಧಾರಿಸಿಕೊಂಡೇ ಬಂದ ಯುಪಿಸಿಎಲ್ ಕೊನೆಗೂ ವಿದ್ಯುತ್ ಉತ್ಪಾದನೆ ಮಾಡತೊಡಗಿದೆ. ಈ ಕಂಪೆನಿ ಸಮುದ್ರದ ನೀರನ್ನು ನೇರವಾಗಿ ಬಳಸಿಕೊಳ್ಳಲು ಹಾಕಿರುವ ಪೈಪ್‌ಲೈನ್‌ಗಳು ಈಗಲೂ ವಿವಾದ ಮತ್ತು ಸಮಸ್ಯೆಯ ಮೂಲವಾಗಿದೆ. ಆ ಭಾಗದಲ್ಲಿ ಸಮುದ್ರ ಕೊರೆತ ವಿಪರೀತವಾಗಲು ಅದೂ ಕಾರಣ ಎಂಬ ದೂರುಗಳು ಬಂದ ಬಳಿಕ ಕಂಪೆನಿ ಎಚ್ಚೆತ್ತುಕೊಂಡಿದೆ.

ಮಂಗಳೂರಿನ ಎಂಆರ್‌ಪಿಎಲ್ ಕಂಪೆನಿ ಸ್ಥಾಪನೆ ಆದಾಗಲೂ ಇದೇ ಬಗೆಯ ವಿರೋಧಗಳಿದ್ದವು. ಆದರೆ ಅದರ ಕಾರ್ಯಾಚರಣೆಯೂ ಯಶಸ್ವಿಯಾಯಿತು. ಅದಕ್ಕಾಗಿ ಸೂರು, ಭೂಮಿ ಕಳೆದುಕೊಂಡ ಅನೇಕರ ಗೋಳು ಈಗಲೂ ಮುಗಿದಿಲ್ಲ. ಇದೀಗ ಪ್ರತಿಷ್ಠಿತ ತೈಲೋತ್ಪನ್ನ ಕಂಪೆನಿಯಾಗಿ ಎಂಆರ್‌ಪಿಎಲ್ ಹೆಸರು ಪಡೆದಿದೆ. ಲಾಭದ ಹಾದಿಯಲ್ಲಿ ಮುಂಚೂಣಿಯಲ್ಲಿದೆ. ಕೊಚ್ಚಿಯಿಂದ ಮಂಗಳೂರು, ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಿಸುವ ಕೊಳವೆ ಮಾರ್ಗ `ಗೇಲ್' ಯೋಜನೆ ಅತ್ತ ಕೇರಳದಲ್ಲಿ ವಿರೋಧದ ನಡುವೆಯೂ ಪ್ರಗತಿಯಲ್ಲಿದ್ದು, ಕರ್ನಾಟಕದತ್ತ ದಾಪುಗಾಲಿಡಲು ಸಜ್ಜಾಗಿದೆ. ಇದರ ವಿರುದ್ಧವೂ ಕೂಗೆದ್ದಿದೆ.

ಗಣಿಗಾರಿಕೆ ಸ್ಥಗಿತ
ಪರಿಸರವಾದಿಗಳ ಪ್ರಬಲ ವಿರೋಧ ಹಾಗೂ ಅರಣ್ಯ ನೀತಿಯ ಪರಿಣಾಮವಾಗಿ ಕುದುರೆಮುಖದ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್) ಯೋಜನೆಯು ಮರ್ಮಾಘಾತ ಎದುರಿಸಬೇಕಾಯಿತು. ಕುದುರೆಮುಖದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಸಂಪೂರ್ಣ ನಿಂತುಹೋಗಿ ವರ್ಷಗಳೇ ಸಂದಿವೆ. ದೇಶದ ಪ್ರತಿಷ್ಠಿತ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿದ್ದ ಕೆಐಒಸಿಎಲ್ ಈಗ ಬಿಕ್ಕಟ್ಟಿನ ದಿನಗಳನ್ನು ಎದುರಿಸುತ್ತಿದೆ. ಪರ್ಯಾಯ ಗಣಿಗಾರಿಕೆ ವಲಯ ಮಂಜೂರಾಗದೇ ಹೋದಲ್ಲಿ ಕಂಪೆನಿಗೇ ತುಕ್ಕು ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ.

ಪರಿಸರ ಪರವಾದ ಹೋರಾಟ ಉತ್ತುಂಗದಲ್ಲಿ ಇರುವಾಗಲೇ ಮಂಗಳೂರಿಗೆ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ಮಂಜೂರಾಯಿತು. ಅದರ ವಿರುದ್ಧವೂ ಬಹಳಷ್ಟು ವಿರೋಧ ವ್ಯಕ್ತವಾಯಿತು. ನೂರಾರು ಎಕರೆ ಕೃಷಿ ಭೂಮಿಯನ್ನು ನುಂಗಿದ ಎಸ್‌ಇಜೆಡ್ ಕಾರ್ಯಾಚರಣೆ ಮುಂದುವರಿಯಿತು. ಕೈಗಾರಿಕಾ ರಂಗದಲ್ಲಿ ಪ್ರಗತಿಯ ಸಂಕೇತವಾಗಿ ಇದು ಮುನ್ನಡೆಯಿತು. ಇದರ ಆಶ್ರಯದಲ್ಲಿ ಈಗ ಹಲವಾರು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಪ್ರಾರಂಭಗೊಳ್ಳುವ ಹಂತದಲ್ಲಿವೆ.

ನದಿ ತಿರುವು
ಈ ನಡುವೆ ರಾಜ್ಯದ ಬರಪೀಡಿತ ಬಯಲುಸೀಮೆಯ ಆರೇಳು ಜಿಲ್ಲೆಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆಯ `ನೇತ್ರಾವತಿ ತಿರುವು' ಯೋಜನೆ ಗರಿಗೆದರಿತು. ಇದರ ವಿರುದ್ಧ ಪಕ್ಷಭೇದ ಮರೆತು ಇಲ್ಲಿನ ಜನಪ್ರತಿನಿಧಿಗಳು ಹೋರಾಡಿದರು. ಸದನದ ಒಳಗೂ ಹೊರಗೂ ಇದರ ಕೂಗು ಎದ್ದಿತು. ನೇತ್ರಾವತಿಯಲ್ಲಿ ಹರಿದು ಸಮುದ್ರ ಸೇರುವ ನೀರನ್ನು ತಿರುಗಿಸಿ ಬಯಲುಸೀಮೆಗೆ ಹರಿಸಬಹುದು ಎಂಬುದಾಗಿ ನಿವೃತ್ತ ನೀರಾವರಿ ಎಂಜಿನಿಯರ್ ಜಿ.ಎಸ್.ಪರಮಶಿವಯ್ಯ ಅವರು ನೀಡಿದ್ದ ವರದಿಯ ಶಿಫಾರಸಿನ ಆಧಾರದಲ್ಲಿ ಯೋಜನೆ ರೂಪುಗೊಂಡಿತು. ಆದರೆ ಈ ಯೋಜನೆಯೇ ಅವೈಜ್ಞಾನಿಕ, ಕಾರ್ಯಸಾಧುವಲ್ಲ ಎಂಬುದಾಗಿ ವಾದ-ಪ್ರತಿವಾದಗಳು ಜೋರಾದವು. ರಾಜ್ಯದ ಬಹುಜನರ ಬೇಡಿಕೆ ಮೇರೆಗೆ ಸರ್ಕಾರಗಳು ಇದಕ್ಕೆ ಪೂರಕವಾಗಿ ಸ್ಪಂದಿಸಿದರೂ ಅದನ್ನು ಕಾರ್ಯಗತಗೊಳಿಸಲಾಗಲಿಲ್ಲ.

ಅಷ್ಟರಲ್ಲೇ `ಎತ್ತಿನ ಹೊಳೆ' ಯೋಜನೆ ಎಂಬ ಇನ್ನೊಂದು ರೂಪದಲ್ಲಿ ಇದು ಮತ್ತೆ ಚಾಲನೆಗೆ ಬಂತು. ಪರಿಸರಕ್ಕೆ ಹೆಚ್ಚಿನ ಹಾನಿ ಮಾಡದೆ ನೇತ್ರಾವತಿಯ ಉಗಮ ಸ್ಥಾನ ಹಾಗೂ ಉಪ ನದಿಯಾದ ಎತ್ತಿನ ಹೊಳೆಯಿಂದ ನೀರನ್ನು ಎತ್ತಿ ಹಾಗೂ ಇತರ ಮೂಲಗಳ ನೀರನ್ನೂ ಸೇರಿಸಿಕೊಂಡು ಒಟ್ಟು 24.05 ಟಿಎಂಸಿ ನೀರನ್ನು ಬಯಲುಸೀಮೆಗೆ ಹರಿಸಬಹುದು ಎಂದು ನೀರಾವರಿ ನಿಗಮವೂ ಶಿಫಾರಸು ಮಾಡಿತು. ಅದೀಗ ವಿವಾದದ ಕೇಂದ್ರ ಬಿಂದುವಾಗಿದೆ.

`ಪಶ್ಚಿಮ ಘಟ್ಟದ ಹೃದಯ ಭಾಗದಲ್ಲೇ ಅಣೆಕಟ್ಟು ನಿರ್ಮಿಸಿ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸುವುದರಿಂದ ನಿಶ್ಚಿತವಾಗಿಯೂ ಪರಿಸರಕ್ಕೆ ಹಾನಿ ಆಗಿಯೇ ಆಗುತ್ತದೆ. ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರದ ನಡುವೆ ನೇತ್ರಾವತಿ ನೈಸರ್ಗಿಕ ಸಂಬಂಧ ಹೊಂದಿದ್ದು ಮಳೆಗೆ ಮೂಲ ಆಧಾರವಾಗಿದೆ. ಮಳೆ ಮತ್ತು ಹೊಳೆಯ ಸಂಬಂಧವೇ ಕಡಿದು ಹೋಗುತ್ತದೆ. ಅಡವಿಯಲ್ಲಿ ಅಣೆಕಟ್ಟೆ ಕಟ್ಟಿದಾಗ ಭೂಕುಸಿತ ಸಂಭವಿಸಬಹುದು. ಮೊದಲೇ ಇದು ಭೂಕಂಪನ ಸಂಭವಿಸಬಹುದಾದ ಅಪಾಯದ ವಲಯವಾಗಿದೆ.

ಉತ್ತರಾಖಂಡದಂತಹ ದುರಂತಕ್ಕೆ ಎಡೆ ಆಗಬಹುದು. ಈ ಯೋಜನೆ ವಿಫಲವಾದರೆ ಅತ್ತ ಬಯಲುಸೀಮೆಗೂ ನೀರೂ ಲಭಿಸದೆ, ಇತ್ತ ನದಿ ಮೂಲಕ್ಕೂ ಕುತ್ತು ಬರಬಹುದು. ಒಮ್ಮೆ ಬತ್ತಿ ಹೋದರೆ ನದಿಯ ಮರುಸೃಷ್ಟಿ ಸಾಧ್ಯವಿಲ್ಲ. ನದಿಯ ನೀರು ಸಮುದ್ರ ಸೇರುವುದು ಜಲಚರ ಜೀವಿಗಳಿಗೂ ಅಗತ್ಯ' ಎಂದು ಪರಿಸರವಾದಿಗಳು ಬಲವಾಗಿ ಪ್ರತಿಪಾದಿಸಿ ಯೋಜನೆಯನ್ನು ವಿರೋಧಿಸಿದ್ದಾರೆ.

ಇದೇ ವೇಳೆ ಈ ಯೋಜನೆಗೆ ಚಾಲನೆ ಕೊಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು, ಈಚೆಗೆ ಇಲ್ಲಿ ಮಾಧ್ಯಮದವರ ಮುಂದೆ ಮಾತನಾಡುತ್ತ `ಎತ್ತಿನ ಹೊಳೆ ಯೋಜನೆಯಿಂದ ಒಂದೇ ಒಂದು ಮರ ಕೂಡ ನಾಶ ಆಗದು. ಈ ಕುರಿತ ದಾಖಲೆಗಳನ್ನು ಬಹಿರಂಗಗೊಳಿಸುತ್ತೇನೆ' ಎಂದು ಹೇಳಿ ಹೋದವರು ಮತ್ತೆ ಇತ್ತ ತಲೆ ಹಾಕಿಲ್ಲ. ಹೊಸ ಸರ್ಕಾರ ಹಿಂದಿನ ಸರ್ಕಾರದ ಮೇಲೆ ಭಾರ ಹಾಕಿ ಅದನ್ನೇ ಮುಂದುವರಿಸುವ ಚಿಂತನೆ ನಡೆಸಿದೆ.

ನಿದ್ದೆಗೆಡಿಸಿದ ನಿಡ್ಡೋಡಿ
ಎತ್ತಿನ ಹೊಳೆಯ ಕಾವು ಆರುವ ಮುನ್ನವೇ ಕರಾವಳಿಯ ನಿದ್ದೆಗೆಡಿಸುವ ಮತ್ತೊಂದು ಯೋಜನೆ ಸುದ್ದಿ ಮಾಡಿದೆ. ಮಂಗಳೂರು ತಾಲ್ಲೂಕಿನ ನಿಡ್ಡೋಡಿಯಲ್ಲಿ 4,000 ಮೆಗಾವಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಗುಲ್ಲು ಎದ್ದಿದೆ. ಮೂಡುಬಿದಿರೆ ಸಮೀಪದ ನಿಡ್ಡೋಡಿ ಸುತ್ತಮುತ್ತ 8000 ಎಕರೆ ಜಾಗದಲ್ಲಿ ಈ ಸ್ಥಾವರ ಯೋಜನೆ ಬರಲಿದೆ ಎಂಬ ಮಾಹಿತಿ ಹಾಗೂ ಅದಕ್ಕೆ ಪೂರಕವಾದ ಸಮೀಕ್ಷೆಗಳು ಪ್ರತಿಭಟನೆಗೆ ಕಾರಣವಾಗಿದೆ. ಈ ಯೋಜನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಹೋದ ಕಾಂಗ್ರೆಸ್ ಮುಖಂಡರ ನಿಯೋಗಕ್ಕೆ ಈಚೆಗೆ ಸ್ಥಳೀಯರು ಚಪ್ಪಲಿ, ಪೊರಕೆ ಹಿಡಿದು ಬಿಸಿ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತ ಜನಪ್ರತಿನಿಧಿಗಳು ಯೋಜನೆಗೆ ತಮ್ಮ ವಿರೋಧ ಇದೆ ಎಂದು ಘೋಷಿಸಿದ್ದಾರೆ. ಆದರೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು `ಹೊಸ ವಿದ್ಯುತ್ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಅಭಿವೃದ್ಧಿಗೆ ಪೂರಕವಾಗಿ ನಾವು ಸ್ಪಂದಿಸಲೇಬೇಕು' ಎಂದಿದ್ದಾರೆ. ಇದು ಮತ್ತೆ ಜನರನ್ನು ಕೆರಳಿಸಿದೆ. `ಕರಾವಳಿ ಉಳಿಸಿ' ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹೋರಾಟದ ಹಾದಿಗಳು ಮತ್ತೆ ಸಾಗರೋಪಾದಿಯಲ್ಲಿ ತೆರೆದುಕೊಂಡಿವೆ.

ಕೊಟ್ಟದ್ದರಲ್ಲಿ ತೃಪ್ತಿ ಹೊಂದುವ ಜನರು
ಕರಾವಳಿಯ ಅಭಿವೃದ್ಧಿ ವಿಚಾರದಲ್ಲಿ ಶ್ರಮ ಮತ್ತು ಬುದ್ಧಿವಂತಿಕೆಯಲ್ಲಿ ನಂಬಿಕೆ ಇರಿಸಿದ ಈ ಭಾಗದ ಜನರ ಕೊಡುಗೆ ದೊಡ್ಡದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 60-70ರ ದಶಕದಲ್ಲಿ ಮುಂಬೈಗೆ ಹೋಗಿ ಕಾಸು ಮಾಡಿದವರ ಸಾಹಸ, ದುಬೈ, ಸೌದಿಗೆ ಹೋದವರು ಕಳುಹಿಸಿದ ದುಡ್ಡನ್ನು ಇಲ್ಲಿ ಚೆಲ್ಲಿದ್ದರಿಂದ ಇಲ್ಲಿ ಒಂದಿಷ್ಟು ಪ್ರಗತಿ ಸಾಧ್ಯವಾಗಿದೆ. ಸರ್ಕಾರ ಮೂಲಸೌಕರ್ಯಕ್ಕೆ ಒತ್ತು ನೀಡದಿದ್ದರೂ ಜನ ಇಲ್ಲಿ ಪ್ರತಿಭಟಿಸಿದ್ದಿಲ್ಲ. ಕೊಟ್ಟದ್ದರಲ್ಲಿ ತೃಪ್ತಿ ಹೊಂದುವ ಸ್ವಭಾವ ಇವರದ್ದು. ಪ್ರಗತಿಯಲ್ಲಿ ಬೃಹತ್ ಉದ್ಯಮಗಳು, ಸ್ಥಾವರಗಳೂ ಪ್ರಮುಖ ಪಾತ್ರ ವಹಿಸಿವೆ ಎಂಬ ಮಾತೂ ಸುಳ್ಳಲ್ಲ.

ಬೃಹತ್ ಬಂದರನ್ನು ಒಳಗೊಂಡಿರುವ ಮಂಗಳೂರು ರಾಜ್ಯದ ವಾಣಿಜ್ಯ ಹೆಬ್ಬಾಗಿಲೂ ಹೌದು. ಸಹಜವಾಗಿಯೇ ಇಲ್ಲಿಂದಲೇ ಅಭಿವೃದ್ಧಿಯ ಮಹಾನದಿ ಉಗಮವಾಗಬೇಕು ಎಂಬ ನಿರೀಕ್ಷೆಯೂ ತಪ್ಪಲ್ಲ. ಆದರೆ ಪಶ್ಚಿಮ ಘಟ್ಟವನ್ನೂ ಸೆರಗಲ್ಲಿ ಕಟ್ಟಿಕೊಂಡಿರುವ ಕರಾವಳಿಗೆ ಎಷ್ಟರಮಟ್ಟಿಗೆ ಬೃಹತ್ ಯೋಜನೆಗಳನ್ನು ತಡೆದುಕೊಳ್ಳುವ ಶಕ್ತಿ ಇದೆ ಎಂಬುದರ ಕೂಲಂಕಷ ಅಧ್ಯಯನ ನಡೆಸದೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದೇ ಎಂಬ ಪ್ರಮುಖ ಪ್ರಶ್ನೆಯೊಂದಿಗೆ, ಲಕ್ಷಾಂತರ ಮೀನುಗಾರರ ಬದುಕಿನ ಪ್ರಶ್ನೆಯೂ ಸಹ ಎತ್ತಿನ ಹೊಳೆ ತಿರುವು ಯೋಜನೆಯೊಂದಿಗೆ ತಳಕು ಹಾಕಿಕೊಂಡಿದೆ.

ಬಯಲುಸೀಮೆಯ ಬರಡು ನೆಲಕ್ಕೆ ನೀರು ಹರಿಸುವ ಧಾವಂತದಲ್ಲಿ ಕರಾವಳಿಯ ಬದುಕು ಬರಡಾಗಿ ಬಿಡುವ ಪ್ರಶ್ನೆಗೆ ಉತ್ತರ ನೀಡುವ ಮೊದಲೇ ಅವಸರದಲ್ಲಿ ಯೋಜನೆಗೆ ಬಜೆಟ್‌ನಲ್ಲಿ ಹಣ ತೆಗೆದಿರಿಸಿದ್ದು ನ್ಯಾಯವೇ ಎಂಬ ಪ್ರಶ್ನೆಯನ್ನು ಈ ಭಾಗದವರು ಕೇಳುತ್ತಿದ್ದಾರೆ. ಅಭಿವೃದ್ಧಿಗೆ ಜನರು ವಿರೋಧಿಗಳಲ್ಲ ಎಂಬುದಕ್ಕೆ ಇಲ್ಲಿ ತಲೆ ಎತ್ತಿರುವ ಯೋಜನೆಗಳೇ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT