ಅದು 70ರ ದಶಕ. ಬೆಂಗಳೂರಿನಲ್ಲಿರುವ ಸ್ಮಶಾನಭೂಮಿ ಹರಿಶ್ಚಂದ್ರಘಾಟ್ ಸುತ್ತಮುತ್ತ ಈಗಿನಂತೆ ಜನಜಂಗುಳಿಯಿಂದ ಕೂಡಿರಲಿಲ್ಲ. ಸ್ಮಶಾನ ಎಂದರೆ ಅದು ಅಕ್ಷರಶಃ ಸ್ಮಶಾನವೇ. ನೀರವ ಮೌನ. ಆಸುಪಾಸು ಎಲ್ಲಿಯೂ ಜನವಸತಿ ಇರಲಿಲ್ಲ. ಇಂಥ ಸ್ಮಶಾನದ ಮೂಲೆಯಲ್ಲೊಂದು ಗುಡಿಸಲು. ಅಲ್ಲಿ ವಾಸವಾಗಿದ್ದರು ಒಬ್ಬ ಸ್ವಾಮೀಜಿ, ಅವರ ಶಿಷ್ಯ ಹಾಗೂ ಒಬ್ಬ ಮಹಿಳೆ. ಗುಡಿಸಲಿನ ಒಳಗೆ ಕಾಳಿಯ ಫೋಟೊ, ತ್ರಿಶೂಲ, ರುಂಡಗಳ ಸರಮಾಲೆ, ಅಲ್ಲಲ್ಲಿ ಮೂಳೆಗಳು, ಚೆಲ್ಲಾಡಿದ ರಕ್ತ, ಹರಿತ ಆಯುಧ, ಎಲ್ಲೆಲ್ಲೂ ಚೆಲ್ಲಿದ ಅರಿಶಿಣ–ಕುಂಕುಮ...
ಯಾರ ಕಣ್ಣಿಗೂ ಕಾಣಿಸದೆ ಬಹಳ ವರ್ಷಗಳಿಂದ ಗುಟ್ಟುಗುಟ್ಟಾಗಿ ಏನೋ ನಡೆಸಿಕೊಂಡಿದ್ದ ಈ ಮೂವರು ಇದ್ದಕ್ಕಿದ್ದಂತೆಯೇ ರಾಜ್ಯ ಮಾತ್ರವಲ್ಲದೆ ರಾಷ್ಟ್ರದ ಗಮನವನ್ನೂ ಸೆಳೆದರು. ಕೆಲವು ಪ್ರತಿಷ್ಠಿತ ವ್ಯಕ್ತಿಗಳಿಗಷ್ಟೇ ಕಾಣಿಸಿಕೊಳ್ಳುತ್ತಿದ್ದ, ಸಾಮಾನ್ಯ ಜನರಿಗೆ ತಮ್ಮ ಇರುವಿಕೆಯ ಕುರಿತು ಸಣ್ಣ ಸುಳಿವನ್ನೂ ನೀಡದ ಈ ‘ಸ್ಮಶಾನವಾಸಿಗಳು’ ಜಗಜ್ಜಾಹೀರಾದದ್ದು ಹೇಗೆ ಎಂಬ ರೋಚಕ ಘಟನೆಯಿದು... ಅಂದು 8–10 ವರ್ಷದ ಬಾಲೆಯೊಬ್ಬಳು ಶಾಲೆಗೆ ಹೋದಾಕೆ ವಾಪಸ್ ಮನೆಗೆ ಬರಲಿಲ್ಲ. ಪೊಲೀಸರು ಹುಡುಕಾಟ ನಡೆಸಿದಾಗ ಅವಳ ಶವ ಸಿಕ್ಕಿತು. ಆಕೆಯ ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತು ಇತ್ತು.
ಇದಾದ ಕೆಲವು ತಿಂಗಳಲ್ಲೇ ಇನ್ನೊಬ್ಬ ಬಾಲಕಿ ಹೀಗೆಯೇ ನಾಪತ್ತೆಯಾದಳು. ಆಕೆ ಕೂಡ ಕುತ್ತಿಗೆ ಕತ್ತರಿಸಿದ ಸ್ಥಿತಿಯಲ್ಲಿ ಸಿಕ್ಕಳು. ಕುತ್ತಿಗೆ ಕತ್ತರಿಸುತ್ತಿರುವವರು ಯಾರು, ಏಕೆ ಎಂಬ ಬಗ್ಗೆ ಪೊಲೀಸರಿಗೆ ಸ್ವಲ್ಪವೂ ಸುಳಿವು ಸಿಗಲಿಲ್ಲ. ಈ ಘಟನೆಗಳು ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿ ಪೋಷಕರಲ್ಲಿ ಆತಂಕ ಸೃಷ್ಟಿಸಿದವು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು, ಹೊರಗೆ ಆಟಕ್ಕೆ ಬಿಡಲು ಹೆದರುವ ಪರಿಸ್ಥಿತಿ ಉಂಟಾಯಿತು. ಅದಾದ ಕೆಲವೇ ದಿನಗಳಲ್ಲಿ ರಕ್ತಸಿಕ್ತವಾದ ಇನ್ನೊಬ್ಬ ಬಾಲಕಿ ಪೊಲೀಸರ ಕೈಗೆ ಸಿಕ್ಕಳು. ಆಕೆಯ ಕುತ್ತಿಗೆಯ ಬಳಿಯೂ ಕತ್ತರಿಸಲಾಗಿತ್ತು. ಮಾತನಾಡುವ ಸ್ಥಿತಿಯಲ್ಲಿ ಅವಳು ಇರಲಿಲ್ಲ. ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆಕೆಯ ಅನ್ನನಾಳ ತುಂಡಾಗಿದ್ದರಿಂದ ಅಲ್ಲಿ ಹೊಲಿಗೆ ಹಾಕಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಬೇರೊಂದು ಪೈಪ್ ಅಳವಡಿಸಿ ಆಕೆಗೆ ಆಹಾರ ಸೇವನೆಗೆ ಅವಕಾಶ ಮಾಡಿಕೊಡಲಾಯಿತು. ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಆ ಬಾಲೆ ತನಗಾದ ಅನುಭವವನ್ನು ಹೇಳಿದಾಗ ವೈದ್ಯರು, ಪೊಲೀಸರು ಬೆಚ್ಚಿ ಬಿದ್ದರು. ‘ನನ್ನ ಬಳಿ ಯಾರೋ ಬಂದು ಕುತ್ತಿಗೆಯನ್ನು ಕತ್ತರಿಸಲು ಶುರು ಮಾಡಿದರು. ಅವರು ಯಾರು, ಹೇಗೆ ಬಂದರು, ಹೇಗೆ ನನ್ನನ್ನು ಹಿಡಿದುಕೊಂಡರು ಎಂಬುದು ನನಗೆ ಗೊತ್ತಿಲ್ಲ. ನಾನು ಜೋರಾಗಿ ಕೂಗಿಕೊಂಡು ತಪ್ಪಿಸಿಕೊಂಡು ಓಡಿ ಬಂದೆ’ ಎಂದಳು.
ಬಾಲಕಿಯರನ್ನು ವಾಮಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂದೇಹ ಪೊಲೀಸರಲ್ಲಿ ಹುಟ್ಟಿತು. ಆದರೆ ಒಬ್ಬಾತ ಬಂದು ತನ್ನ ಕುತ್ತಿಗೆ ಕತ್ತರಿಸಿದ ಎಂದು ಬಾಲಕಿ ಹೇಳಿದುದು ಬಿಟ್ಟರೆ ಬೇರೇನೂ ಸುಳಿವು ಪೊಲೀಸರಿಗೆ ಸಿಗಲಿಲ್ಲ. ಇದರಿಂದ ಅವರಿಗೆ ಅಪರಾಧಿಗಳನ್ನು ಕಂಡುಹಿಡಿಯುವುದು ಕಷ್ಟವಾಯಿತು. ಇದರ ಹಿಂದಿದ್ದ ಕೈಗಳನ್ನು ಪತ್ತೆ ಹಚ್ಚಲು ಅವರ ಬಳಿ ಇದ್ದದ್ದು ಒಂದೇ ಮಾರ್ಗ. ಅದು ‘ಅಂಜನ ನೋಡುವ ಪದ್ಧತಿ’. ಅಂಜನ ನೋಡುವಲ್ಲಿ ಪ್ರಸಿದ್ಧಿ ಹೊಂದಿದ್ದ ಜ್ಯೋತಿಷಿ ಒಬ್ಬರನ್ನು ಹುಡುಕಿ ಉಪ್ಪಾರಪೇಟೆ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಶಾಂತಪ್ಪ ಕೇರಳಕ್ಕೆ ಹೋದರು.
ಅಂಜನ ನೋಡಿದ ಜ್ಯೋತಿಷಿ ‘ಬೆಂಗಳೂರಿನ ಸ್ಮಶಾನ ಒಂದರಲ್ಲಿ ಉದ್ದ ಕೂದಲಿನ ಸ್ವಾಮೀಜಿ, ಅವನ ಶಿಷ್ಯ ಹಾಗೂ ಒಬ್ಬ ಮಹಿಳೆ ವಾಸವಾಗಿದ್ದು ಅವರು ಬಾಲಕಿಯರ ಕುತ್ತಿಗೆಯನ್ನು ಕತ್ತರಿಸಿ ರಕ್ತ ಸಂಗ್ರಹಿಸಿ ಕಾಳಿದೇವಿಗೆ ಸಮರ್ಪಣೆ ಮಾಡುತ್ತಿದ್ದಾರೆ’ ಎಂದು ಹೇಳಿದರು. ಇವರು ಹೇಳಿದ ವಿಷಯಕ್ಕೂ ಬಾಲಕಿ ಹೇಳಿದ್ದಕ್ಕೂ ಸಾಮ್ಯ ಇರುವುದನ್ನು ಕಂಡ ಪೊಲೀಸರು ಇವರು ನೆಲೆಸಿದ್ದ ಸ್ಮಶಾನದ ಹುಡುಕಾಟದಲ್ಲಿ ತೊಡಗಿದರು. ಬೆಂಗಳೂರಿನಲ್ಲಿ ಇರುವ ಎಲ್ಲಾ ಸ್ಮಶಾನಗಳಲ್ಲೂ ಹುಡುಕಾಟ ನಡೆಯಿತು. ಮಾಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಎಚ್.ಬಿ.ಶಿವಸ್ವಾಮಿ ಅವರ ಕಣ್ಣಿಗೆ ಕೊನೆಗೂ ಈ ‘ಸ್ಮಶಾನವಾಸಿ’ಗಳು ಸಿಕ್ಕೇಬಿಟ್ಟರು.
ಹರಿಶ್ಚಂದ್ರಘಾಟ್‌ನಲ್ಲಿದ್ದ ಇವರ ಗುಡಿಸಲಿನ ಮೇಲೆ ದಾಳಿ ನಡೆಸಿದಾಗ ‘ಅಂಜನ’ದಲ್ಲಿ ಹೇಳಿದಂತೆ ಕಾಲವರೆಗೆ ಉದ್ದ ಕೂದಲಿದ್ದ ಸ್ವಾಮೀಜಿ ಹರಿಶ್ಚಂದ್ರ ಸಾಧು ಲಕ್ಷ್ಮಣಸಿಂಗ್ ಗಿರಿ, ಅವನ ಶಿಷ್ಯ ಷಣ್ಮುಗಂ ಹಾಗೂ ಮಹಿಳೆ ಲಕ್ಷ್ಮಮ್ಮ ಎಲ್ಲರೂ ಅಲ್ಲಿದ್ದರು. ಎಲ್ಲರನ್ನೂ ಪೊಲೀಸರು ಬಂಧಿಸಿ ಕೊಲೆ ಹಾಗೂ ಕೊಲೆ ಪ್ರಯತ್ನದ ಅಡಿ ಅವರ ಮೇಲೆ ಆರೋಪಪಟ್ಟಿ ತಯಾರಿಸಿದರು. ಆಸ್ತಮಾ ರೋಗಿಯಾಗಿದ್ದ ಸಾಧು ಲಕ್ಷ್ಮಣಸಿಂಗ್ ಗಿರಿ ಪೊಲೀಸರು ಬಂಧಿಸಿದ ಮೂರನೆಯ ದಿನವೇ ಜೈಲಿನಲ್ಲಿ ಸಾವನ್ನಪ್ಪಿದ. ಷಣ್ಮುಗಂನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ‘ನಾನು ಮೊದಲು ಚಿಂದಿ ಆಯುತ್ತಿದ್ದೆ. ಸ್ವಾಮೀಜಿಯ ಪರಿಚಯವಾಗಿ ಅವರ ಜೊತೆಗೇ ನೆಲೆಸುತ್ತಿದ್ದೇನೆ.
ಅವರು ನನ್ನ ತಲೆಯ ಮೇಲೆ ಮಂತ್ರಿಸಿದ ನಿಂಬೆಹಣ್ಣು ಇಟ್ಟಾಗ ನಾನು ಯಾರ ಕಣ್ಣಿಗೂ ಕಾಣಿಸದ ಹಾಗೆ ಅದೃಶ್ಯವಾಗಿಬಿಡುತ್ತೇನೆ. ನಂತರ ಚಿಕ್ಕ ಹೆಣ್ಣು ಮಕ್ಕಳ ಕುತ್ತಿಗೆಯಿಂದ ರಕ್ತವನ್ನು ಸಂಗ್ರಹಿಸಿ ಸ್ವಾಮೀಜಿಗೆ ಕೊಡುತ್ತೇನೆ. ಕಾಳಿದೇವಿಯನ್ನು ಒಲಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ’ ಎಂದು ಹೇಳಿದ. ಅಷ್ಟೇ ಅಲ್ಲದೆ ಪ್ರತಿಷ್ಠಿತ ವ್ಯಕ್ತಿಗಳು, ರಾಜಕಾರಣಿಗಳು ತಮ್ಮ ಕೆಲಸ ಪೂರೈಸಿಕೊಳ್ಳಲು ಸ್ವಾಮೀಜಿಯ ಬಳಿ ಬರುವ ವಿಷಯವನ್ನೂ ಹೇಳಿದ. ಎರಡು ಮಕ್ಕಳ ಕುತ್ತಿಗೆ ಕತ್ತರಿಸಿದ್ದು, ಮೂರನೇ ಬಾಲಕಿ ತಪ್ಪಿಸಿಕೊಂಡದ್ದು ಎಲ್ಲವನ್ನೂ ಬಾಯಿಬಿಟ್ಟ. ಪ್ರಕರಣ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿತು.
ಮೂವರು ಆರೋಪಿಗಳ ಪೈಕಿ ಸ್ವಾಮೀಜಿ ಅದಾಗಲೇ ಮೃತಪಟ್ಟಿದರಿಂದ ಇಬ್ಬರೇ ಉಳಿದುಕೊಂಡರು. ಸಂಪೂರ್ಣ ಘಟನೆ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನಿಂತಿತ್ತೇ ವಿನಾ ಕೊಲೆ ನಡೆದ ಬಗ್ಗೆ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಆದ್ದರಿಂದ ಪೊಲೀಸರು ಆರೋಪಿಯಲ್ಲಿ ಒಬ್ಬರಾದ ಲಕ್ಷ್ಮಮ್ಮನನ್ನು ಪುಸಲಾಯಿಸಿ ‘ಮಾಫಿ ಸಾಕ್ಷಿ’ಯನ್ನಾಗಿ ಮಾಡಿದರು (ಘಟನೆಯ ಪ್ರತ್ಯಕ್ಷದರ್ಶಿಗಳು ಇಲ್ಲದ ಸಂದರ್ಭದಲ್ಲಿ ಆರೋಪಿಗಳ ಪೈಕಿ ಒಬ್ಬರು ಅಥವಾ ಕೆಲವರು ಘಟನೆ ಕುರಿತು ಸತ್ಯ ನುಡಿಯಲು ಮುಂದೆ ಬರುವುದೇ ಮಾಫಿ ಸಾಕ್ಷಿ. ಅಂಥವರು ಸಂಪೂರ್ಣ ಸತ್ಯ ನುಡಿದರು ಎಂದು ಕೋರ್ಟ್‌ಗೆ ಮನವರಿಕೆಯಾದರೆ ಅವರನ್ನು ಆರೋಪಮುಕ್ತಗೊಳಿಸಲಾಗುವುದು.
ಒಂದು ವೇಳೆ ಅವರು ಅಸತ್ಯ ನುಡಿದರೆ ಪುನಃ ಆರೋಪಿಯಂತೆ ವಿಚಾರಣೆಗೆ ಒಳಪಡಿಸಲಾಗುವುದು). ಈಗ ಉಳಿದ ಏಕೈಕ ಆರೋಪಿ ಷಣ್ಮುಗಂ. ಅವನ ಪರವಾಗಿ ನಾನು ವಕಾಲತ್ತು ವಹಿಸಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಧೀಶ ತಿಳಿಗೋಳ ಅವರ ಮುಂದೆ ಬಂತು. ಇವರ ಮುಂದೆ ಕೊಲೆ ಪ್ರಕರಣ ಬಂತೆಂದರೆ ಶಿಕ್ಷೆ ಕಟ್ಟಿಟ್ಟದ್ದೇ ಎಂಬಂಥ ಪರಿಸ್ಥಿತಿ ಇತ್ತು. ಇವರು ಇದಕ್ಕೂ ಮುನ್ನ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿಯ ಜೈಲು ಅಪರಾಧಿಗಳಿಂದ ತುಂಬಿಹೋಗಿತ್ತು! ಆದ್ದರಿಂದ ಈ ಪ್ರಕರಣದ ಕುರಿತು ನನಗೂ ಅಳುಕು ಇತ್ತು. ಜೊತೆಗೆ ಮಾಫಿ ಸಾಕ್ಷಿಯಾಗಿ ಲಕ್ಷ್ಮಮ್ಮ ಬೇರೆ ಇದ್ದರು.
ಬಾಲಕಿ ಕೂಡ ಅದೇ ವ್ಯಕ್ತಿ (ಷಣ್ಮುಗಂ) ತನ್ನ ಕುತ್ತಿಗೆ ಕೊಯ್ಯಲು ಬಂದಿದ್ದ ಎಂದೂ ಹೇಳಿಕೆ ನೀಡಿದ್ದಳು. ಮೈಸೂರಿನಿಂದ ಸಂಸ್ಕೃತ ಉಪನ್ಯಾಸಕರೊಬ್ಬರನ್ನು ಕರೆಸಿ ಕಾಳಿ, ಆಕೆಗೆ ಬಲಿ ನೀಡುವ ಸಂಬಂಧ ಬೆಳೆದುಬಂದ ಪದ್ಧತಿ ಕುರಿತು ಕೋರ್ಟ್‌ನಲ್ಲಿ ಮಾಹಿತಿಯನ್ನೂ ಪಡೆದುಕೊಳ್ಳಲಾಯಿತು. ಇಂಥ ನರಬಲಿ ಮೊದಲಿನಿಂದಲೂ ನಡೆದುಬಂದಿರುವ ಬಗ್ಗೆ ಅವರು ವಿವರಿಸಿದರು. ಇವೆಲ್ಲಾ ಸಾಕ್ಷ್ಯಾಧಾರಗಳ ನಡುವೆ ವಕೀಲನಾಗಿ ಷಣ್ಮುಗಂನನ್ನು ಕಾಪಾಡುವುದು ಅಷ್ಟು ಸುಲಭ ಆಗಿರಲಿಲ್ಲ. ಈ ಪ್ರಕರಣ ರಾಷ್ಟ್ರದ ಗಮನವನ್ನೂ ಸೆಳೆದಿದ್ದರಿಂದ ತುಂಬಾ ನಾಜೂಕಿನಿಂದ ನಿರ್ವಹಿಸಬೇಕಿತ್ತು.
ಇದರ ನಡುವೆಯೂ ಎಲ್ಲ ಪರಿಸ್ಥಿತಿಗಳನ್ನು ಅನುಕೂಲಕರವಾಗಿಯೇ ಬಳಸಿಕೊಂಡೆ. ಕೇರಳದ ‘ಅಂಜನ’ ಜ್ಯೋತಿಷಿ ಕೋರ್ಟ್‌ವರೆಗೆ ಬಂದು ಸಾಕ್ಷ್ಯ ನುಡಿಯುವುದಿಲ್ಲ. ಒಂದು ವೇಳೆ ಅವರು ಹೇಳಿಕೆ ನೀಡಿದರೂ ಅವೆಲ್ಲಾ ಕಾನೂನಿನ ವ್ಯಾಪ್ತಿಗೆ ಒಳಪಡದ ಕಾರಣ, ಅವನ್ನೆಲ್ಲಾ ಕೋರ್ಟ್ ಮಾನ್ಯವೂ ಮಾಡುವುದಿಲ್ಲ. ಇದು ಮೊದಲನೆಯದಾಗಿ ನನ್ನ ಪರವಾಗಿತ್ತು. ಈ ಪ್ರಕರಣದಲ್ಲಿ ಮೊದಲ ಸಾಕ್ಷಿದಾರರಾಗಿ ಕಟಕಟೆ ಏರಿದ್ದು ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರಾದ ಡಾ. ಡಿ.ಬಿ.ಚಂದ್ರೇಗೌಡ ಮತ್ತು ಡಾ. ಸೋಮಣ್ಣ. ಬಾಲಕಿಯ ಕುತ್ತಿಗೆಯನ್ನು ಕತ್ತರಿಸಲು ಭಾರವಾಗಿರುವ ಆಯುಧ ಬಳಸಲಾಗಿತ್ತು ಎಂದು ಡಾ. ಚಂದ್ರೇಗೌಡ ಹೇಳಿದರೆ, ತುಂಬಾ ಲಘು ಆಯುಧ ಬಳಸಲಾಗಿತ್ತು ಎಂದು ಡಾ. ಸೋಮಣ್ಣ ವರದಿ ನೀಡಿದರು.
ಅಂದರೆ ಇಬ್ಬರ ವರದಿಯೂ ತದ್ವಿರುದ್ಧವಾಗಿತ್ತು. ನಾನು ನಡೆಸಿದ ಪಾಟಿ ಸವಾಲಿನಲ್ಲಿ ಈ ತದ್ವಿರುದ್ಧ ಹೇಳಿಕೆ ಬಂದದ್ದು ನನಗೆ ಉಪಯೋಗವಾಯಿತು. ಈ ರೀತಿಯ ಬಲಿ ಪ್ರಕರಣಗಳಲ್ಲಿ ಕುತ್ತಿಗೆಯ ಒಂದು ಭಾಗದಿಂದ ರಕ್ತ ತೆಗೆಯಲಾಗುವುದು. ಹಾಗೆ ಮಾಡಲು ಹರಿತ ಆಯುಧ ಬೇಕಿಲ್ಲ. ಹೀಗೆ ಕತ್ತರಿಸುವ ಪ್ರಕ್ರಿಯೆಗೆ ವೈದ್ಯಕೀಯ ಭಾಷೆಯಲ್ಲಿ ‘ಟ್ರೇಲಿಂಗ್ ಎಂಡ್’ ಎನ್ನುತ್ತಾರೆ. ಇದರ ಬಗ್ಗೆ ವೈದ್ಯರಿಗೆ ಕೇಳಿದಾಗ ‘ಅಂಥ ಶಬ್ದ ನಾವು ಕೇಳಿಯೇ ಇಲ್ಲ’ ಎಂದರು! ಮೆಡಿಕಲ್ ಜುರಿಸ್‌ಪ್ರುಡೆನ್ಸ್ ಪುಸ್ತಕ ತಂದು ವೈದ್ಯರಿಗೇ ನಾನು ವಿವರಿಸಬೇಕಾಯಿತು.
ಇಂಥ ಸೂಕ್ಷ್ಮ, ಮಹತ್ವದ ವಿಷಯವೇ ಗೊತ್ತಿಲ್ಲದ ವೈದ್ಯರು ನಡೆಸುವ ಪರೀಕ್ಷೆ ನಂಬಲು ಅರ್ಹವೇ ಎಂಬ ಪ್ರಶ್ನೆಯನ್ನೂ ನಾನು ಕೋರ್ಟ್ ಮುಂದಿಟ್ಟೆ. ಜಯದ ಒಂದು ಹೆಜ್ಜೆ ನನಗೆ ಸನಿಹವಾಯಿತು. ನಂತರ ಕಟಕಟೆಯಲ್ಲಿ ಸಾಕ್ಷಿದಾರರಾಗಿ ಬಂದವರು ಇನ್ಸ್‌ಪೆಕ್ಟರ್ ಶಿವಸ್ವಾಮಿ. ಸ್ವಾಮೀಜಿಯ ಗುಡಿಸಲಿನಲ್ಲಿ ತಾವು ಕಂಡಿದ್ದನ್ನೆಲ್ಲ ಅವರು ಚಾಚೂತಪ್ಪದೆ ವಿವರಿಸಿದರು. ನಾನು ಪಾಟಿ ಸವಾಲು ಮಾಡುವ ಸರದಿ ಬಂತು. ಅವರಿಗೆ ನಾನು, ‘ಗುಡಿಸಲಿನಲ್ಲಿ ನೀವು ಕಂಡ ತ್ರಿಶೂಲ, ಅಲ್ಲಿದ್ದ ಪುಸ್ತಕಗಳಲ್ಲಿ ರಕ್ತದ ಕಲೆಗಳು ಇದ್ದವು ಎಂದು ಹೇಳಿದಿರಿ. ಅವು ರಕ್ತದ್ದೇ ಕಲೆಗಳು ಎಂದು ಸಾಬೀತುಪಡಿಸಲು ಯಾವುದಾದರೂ ಪರೀಕ್ಷೆ ನಡೆಸಿದ್ದೀರಾ’ ಎಂದು ಪ್ರಶ್ನಿಸಿದೆ.
ಅದಕ್ಕೆ ಅವರಿಂದ ‘ಇಲ್ಲ’ ಎಂಬ ಉತ್ತರ ಬಂತು. ‘ಸರಿ. ಅಲ್ಲಿದ್ದ ರಕ್ತದ ಕಲೆಗೂ, ಈಗ ಸತ್ತಿರುವ ಮಕ್ಕಳ ರಕ್ತಕ್ಕೂ ಹೊಂದಿಕೆ ಆಗಿದೆಯಾ? ಅದರ ಬಗ್ಗೆ ಏನಾದರೂ ಪರೀಕ್ಷೆ ನಡೆದಿದೆಯಾ?’ ಎಂದು ಪ್ರಶ್ನಿಸಿದೆ. ಅದಕ್ಕೂ ನಕಾರಾತ್ಮಕ ಉತ್ತರವೇ ಬಂತು. ಅಂದರೆ ಈ ಪ್ರಕರಣದಲ್ಲಿ ಪ್ರಮುಖವಾದ ಸಾಕ್ಷ್ಯವಾಗಿದ್ದ ರಕ್ತದ ಕಲೆಯ ಪರೀಕ್ಷೆಯನ್ನೇ ನಡೆಸಿರಲಿಲ್ಲ! ಜಯ ಇನ್ನಷ್ಟು ನನ್ನತ್ತ ಸಮೀಪಿಸಿತು. ಕೊನೆಯ ಪ್ರಮುಖ ಸಾಕ್ಷಿದಾರರು ಎಂದರೆ ಲಕ್ಷ್ಮಮ್ಮ. ಇವರು ಮಾಫಿ ಸಾಕ್ಷಿಯಾಗಿದ್ದರಿಂದ ಈಗಾಗಲೇ ಎಲ್ಲ ವಿಷಯಗಳನ್ನು ಕೋರ್ಟ್‌ಗೆ ಹೇಳಿದ್ದರು. ಅವರನ್ನು ನಾನು ಒಂದೂವರೆ ದಿನ ಪಾಟಿ ಸವಾಲು ಮಾಡಿದೆ.
‘ಷಣ್ಮುಗಂ ಅವರೇ ಈ ಬಾಲಕಿಯರ ಕುತ್ತಿಗೆಯನ್ನು ಕತ್ತರಿಸಿದ್ದು ಎಂದು ನೀವೇನಾದರೂ ಪ್ರತ್ಯಕ್ಷವಾಗಿ ನೋಡಿದ್ದೀರಾ?’ ಪ್ರಶ್ನೆ ಹಾಕಿದೆ. ಅವರು ‘ನಾನು ಪ್ರತ್ಯಕ್ಷವಾಗಿ ನೋಡಿಲ್ಲ’ ಎಂದರು. ‘ಸ್ವಾಮೀಜಿ ಮಾಡುತ್ತಿದ್ದುದು ಅನಾಚಾರ ಎಂದು ತಿಳಿದಿದ್ದರೂ ನೀವ್ಯಾಕೆ ಇದುವರೆಗೆ ಪೊಲೀಸರಿಗೆ ಈ ವಿಷಯ ತಿಳಿಸಲಿಲ್ಲ? ನಿಮಗೂ ಸ್ವಾಮೀಜಿಗೂ ಏನು ಸಂಬಂಧ? ನೀವು ಅಲ್ಲಿಗೆ ಹೋಗಿ ಸೇರಿಕೊಂಡದ್ದು ಹೇಗೆ? ಇತ್ಯಾದಿಯಾಗಿ ಕೇಳಿದ ಪ್ರಶ್ನೆಗಳಿಗೂ ಅವರಿಂದ ಸಮಂಜಸ ಉತ್ತರ ಬರಲಿಲ್ಲ. ಜಯ ಸಂಪೂರ್ಣವಾಗಿ ನನ್ನತ್ತ ವಾಲಿತು. ಆರೋಪಿ ಷಣ್ಮುಗಂ ಕೊಲೆ ಮಾಡಿರುವ ಕುರಿತು ಸೂಕ್ತ ಸಾಕ್ಷ್ಯಾಧಾರ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಆತನನ್ನು ನ್ಯಾಯಾಧೀಶರು ಆರೋಪಮುಕ್ತಗೊಳಿಸಿದರು.
ಈ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ ಅಲ್ಲಿಯೂ ನನ್ನ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು. ಸರ್ಕಾರದ ಮೇಲ್ಮನವಿ ವಜಾಗೊಂಡಿತು. ಸ್ವಾಮೀಜಿ ಸತ್ತುಹೋದ ಕಾರಣ ಹಾಗೂ ಈ ಘಟನೆ ಪೊಲೀಸ್ ಕೇಸ್ ಆದುದರಿಂದ ಮಕ್ಕಳನ್ನು ಬಲಿ ಕೊಡುವ ಪದ್ಧತಿ ನಿಂತುಹೋಯಿತೆನ್ನಿ. ಆದರೆ ಪ್ರಾಸಿಕ್ಯೂಷನ್ ವೈಫಲ್ಯದಿಂದ ಪ್ರಕರಣ ಹೇಗೆಲ್ಲಾ ತಿರುವು ಪಡೆದುಕೊಳ್ಳಬಹುದು ಎಂಬುದಕ್ಕೆ ಇದೂ ಒಂದು ಸಾಕ್ಷಿಯಾಯಿತು.
ಮುಂದಿನ ವಾರ: ಕೊಲೆಯ ಸುಳಿಯಲ್ಲಿ ಗೃಹಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.