ಅದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ. ನಾನು ನನ್ನ ಕುರ್ಚಿಯಲ್ಲಿ ಕುಳಿತುಕೊಂಡು ತಲೆ ಬಗ್ಗಿಸಿಕೊಂಡು ನನಗೆ ಬಂದಿದ್ದ ಪತ್ರವೊಂದನ್ನು ಓದುತ್ತಿದ್ದೆ. ಪತ್ರ ಓದಿದ ಬಳಿಕ ತಲೆ ಎತ್ತಿ ನೋಡಿದೆ...
ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನನ್ನ ಎದುರಿಗೆ ಕುಳಿತವರು ಮತ್ತಾರೂ ಅಲ್ಲ. ಭಾರತದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್. ಸಿ.ವಿ. ರಾಮನ್!
ತಕ್ಷಣ ತಪ್ಪಿನ ಅರಿವಾಗಿ ಎದ್ದು ನಮಸ್ಕರಿಸಿದೆ. ಜತೆಗೆ ಪತ್ರದಲ್ಲಿ ಮಗ್ನವಾಗಿ ನೋಡದ್ದಕ್ಕೆ ಕ್ಷಮಾಪಣೆ ಕೇಳಿದೆ.
It’s ok, young man; I can understand. It must
be a love letter.
ಸರ್. ಸಿ.ವಿ. ರಾಮನ್ ನಗೆಚಟಾಕಿ ಹಾರಿಸಿದರು.
ಏನು ಸಹಾಯ ಮಾಡಲಿ ಎಂದು ಕೇಳಿದೆ.
`ರಾಮನ್ ಎಫೆಕ್ಟ್ ಬಗ್ಗೆ ಅಮೆರಿಕದ ನಿಯತಕಾಲಿಕೆ ಒಂದರಲ್ಲಿ ವ್ಯತಿರಿಕ್ತ ವರದಿಯೊಂದು ಬಂದಿದೆಯಂತೆ. ಅದಕ್ಕೆ ಪ್ರತಿಕ್ರಿಯೆ ನೀಡಬೇಕಿದೆ. ಆ ನಿಯತಕಾಲಿಕೆ ದೊರಕಿಸಿಕೊಳ್ಳಲು ಬೆಂಗಳೂರಿನ ಬ್ರಿಟಿಷ್ ಲೈಬ್ರರಿ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಅಲೆದೆ. ಕೊನೆಗೆ ಯಾರೋ ನಿಮ್ಮ ಬಳಿ ಸಿಕ್ಕುತ್ತದೆ ಎಂದರು. ದಯವಿಟ್ಟು ಅದು ಸಿಕ್ಕಬಹುದೇ' ಎಂದು ರಾಮನ್ ಪ್ರಶ್ನಿಸಿದರು.
`ಎರಡು ನಿಮಿಷ ಕುಳಿತುಕೊಳ್ಳಿ' ಎಂದು ಹೇಳಿ ನಾನು ಎದ್ದು ಹೊರಟೆ.
ಎಲ್ಲಿಗೆ ಹೊರಟಿರಿ? ರಾಮನ್ ಪ್ರಶ್ನಿಸಿದರು.
`ಅದು ಮೇಲಿನ ಮಹಡಿಯಲ್ಲಿದೆ. ನಾನು ತರುತ್ತೇನೆ. ನೀವು ಕುಳಿತುಕೊಳ್ಳಿ' ನಾನೆಂದೆ.
`ನಾನೂ ಬರುತ್ತೇನೆ' ಎಂದರು ರಾಮನ್.
`ಮೇಲೆ ಹೋಗಲು 40 ಮೆಟ್ಟಿಲುಗಳಿವೆ. ನೀವು ಕುಳಿತುಕೊಳ್ಳಿ' ಎಂದೆ ಸೌಜನ್ಯದಿಂದ.
`ಬಂದೆ' ಎನ್ನುತ್ತ ವಯೋವೃದ್ಧ ರಾಮನ್ ಎದ್ದೇ ಬಿಟ್ಟರು. ನನ್ನಷ್ಟೇ ವೇಗದಲ್ಲಿ 40 ಮೆಟ್ಟಿಲುಗಳನ್ನು ಸಲೀಸಾಗಿ ಏರಿದರು.
ನಾನು ಅವರ ಕೈಗೆ ಅಮೆರಿಕದ ಆ ನಿಯತಕಾಲಿಕೆಯನ್ನು ಕೊಟ್ಟಾಗ ಥ್ಯಾಂಕ್ಸ್ ಎಂದರು.
I wish I had a camera. I could have clicked that rare moment... ಎಂದುಕೊಂಡೆ.
***
ಇದು ಕರ್ನಾಟಕ ವಿಶ್ವವಿದ್ಯಾಲಯದಿಂದ ಫೆ.15 ರಂದು ಗೌರವ ಡಾಕ್ಟರೇಟ್ ಸ್ವೀಕರಿಸಿದ 89 ವರ್ಷದ ಪ್ರೊ. ಕೆ.ಎಸ್. ದೇಶಪಾಂಡೆ ಅವರ ನೆನಪಿನ ಬುತ್ತಿಯಿಂದ ಬಂದ ಘಟನೆ.
ಕರ್ನಾಟಕದಲ್ಲಿ ಗ್ರಂಥಾಲಯ ಪಿತಾಮಹ ಎಂದೇ ಖ್ಯಾತರಾದ ಪ್ರೊ. ಎಸ್.ಆರ್. ರಂಗನಾಥನ್ ಅವರನ್ನು ಹೊರತುಪಡಿಸಿದರೆ ಅವರ ಮಟ್ಟಕ್ಕೆ ಏರಬಲ್ಲ ಏಕಮಾತ್ರ ವ್ಯಕ್ತಿ ಪ್ರೊ. ಕೆ.ಎಸ್. ದೇಶಪಾಂಡೆ ಎಂದರೆ ಅದು ಅತಿಶಯೋಕ್ತಿಯಲ್ಲ.
ನೆನಪಿಡಿ, ಈಗಿನಂತೆ ಆಗ ಇಂಟರ್‌ನೆಟ್, ಇಂಟ್ರಾನೆಟ್, ಗೂಗಲ್ ಮತ್ತಿತರ ಸರ್ಚ್ ಎಂಜಿನ್, ಆನ್‌ಲೈನ್, ಡಿಜಿಟಲ್ ಲೈಬ್ರರಿಗಳೂ ಇರಲಿಲ್ಲ. ಇಂಥ ಯಾವ ಸೌಲಭ್ಯಗಳೂ ಇಲ್ಲದಿದ್ದಂತಹ ಸಮಯದಲ್ಲಿ ದೇಶಪಾಂಡೆ ಅವರಿಗೆ ವಿಶ್ವದ ಅನೇಕ ವಿಚಾರಗಳು ಕರತಲಾಮಲಕವಾಗಿದ್ದವು. ದೇಶಪಾಂಡೆ ಅವರ ಜೀವನದಲ್ಲಿ ನಡೆದ ಇನ್ನೊಂದೆರಡು ಪ್ರಸಂಗಗಳನ್ನು ಗಮನಿಸಿದರೆ ಅವರ ವ್ಯಕ್ತಿತ್ವದ ಅರಿವಾಗುತ್ತದೆ.
ಬೆಂಗಳೂರಿನಲ್ಲಿ 1980ರ ದಶಕದಲ್ಲಿ `ಅಂಕ್ಟಾಡ್' (Unctad) ಸಮ್ಮೇಳನ ಆಯೋಜನೆ ಆಗಿತ್ತು. ಆರ್.ಕೆ. ಲಕ್ಷ್ಮಣ್ ಅವರ ಅಣ್ಣ ಆರ್.ಕೆ. ಶ್ರೀನಿವಾಸನ್ ರಾಜ್ಯಪಾಲರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ `ಅಂಕ್ಟಾಡ್' ಕುರಿತಾದ ಮಾಹಿತಿ ಬೇಕಿತ್ತು.
ಶ್ರೀನಿವಾಸನ್ ಅವರಿಗೆ ಆ ಬಗ್ಗೆ ಮಾಹಿತಿ ದೊರೆತಿರಲಿಲ್ಲ. ದೇಶಪಾಂಡೆ ಅವರಿಗೆ ದೂರವಾಣಿ ಮಾಡಿದಾಗ ಅವರು, `ಹದಿನೈದು ನಿಮಿಷ ಬಿಟ್ಟು ಬನ್ನಿ ಕೊಡುತ್ತೇನೆ' ಎಂದರು.
ಶ್ರೀನಿವಾಸನ್ ಮತ್ತೆ ಹೇಳಿದರು. `ಅಂಕ್ಟಾಡ್'ನ ಹಿನ್ನೆಲೆ ಬಗ್ಗೆ ನಮಗೆ ಮಾಹಿತಿ ಬೇಕಿದೆ' ಎಂದು.
ಅವರಿಗೆ ತಾವು ಹೇಳಿದ್ದು ನನಗೆ ತಿಳಿದಿರಲಿಕ್ಕಿಲ್ಲ ಎಂಬ ಅನುಮಾನ. ಏಕೆಂದರೆ ಬೆಂಗಳೂರಿನ ಇತರ ಗ್ರಂಥಾಲಯಗಳಲ್ಲಿ ಆ ಕುರಿತಾದ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ಮತ್ತೊಮ್ಮೆ ತಮಗೇನು ಬೇಕೆಂದು ಪುನರುಚ್ಚರಿಸಿದ್ದರು.
`ಗೊತ್ತಾಯಿತು, ನೀವು ಹದಿನೈದು ನಿಮಿಷ ಬಿಟ್ಟು ಬನ್ನಿ' ಎಂದು ದೇಶಪಾಂಡೆ ಸಹಜವಾಗಿ ಉತ್ತರಿಸಿದರು.
ಸುಮಾರು 15 ನಿಮಿಷ ಕಳೆದಿರಬೇಕು. ರಾಜ್ಯಪಾಲರ ಕಚೇರಿಯ ಕಾರು ದೇಶಪಾಂಡೆ ಅವರಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಬಂದಿತ್ತು. `ರಾಜ್ಯಪಾಲರು' ಎಂಬ ನಾಮಫಲಕವಿದ್ದ ಕಾರನ್ನು ನೋಡಿ ಗ್ರಂಥಾಲಯದ ಇತರ ಸಿಬ್ಬಂದಿ ಗಾಬರಿ ಆಗಿದ್ದರು. ಅದರಿಂದ ಇಳಿದು ಬಂದ ಶ್ರೀನಿವಾಸನ್ ಅವರಿಗೆ `ಅಂಕ್ಟಾಡ್' ಕುರಿತಾದ ಮಾಹಿತಿ ನೀಡಿದೆ. ಅವರು `ಥ್ಯಾಂಕ್ಸ್' ಹೇಳಿ ಹೊರ ನಡೆದರು ಎಂದು ದೇಶಪಾಂಡೆ ಸ್ಮರಿಸಿಕೊಂಡರು.
ಮತ್ತೊಂದು ಘಟನೆ. ದೇಶಪಾಂಡೆ ಅವರು ಆಗ ಮುಂಬೈನಲ್ಲಿ ಬಾಂಬೆ ಸರ್ಕಾರದ ಓರಿಯಂಟಲ್ ಟ್ರಾನ್ಸ್‌ಲೇಟರ್ ಆಫೀಸ್‌ನ ಭಾಷಾಂತರ ವಿಭಾಗದಲ್ಲಿ ಟ್ರಾನ್ಸ್‌ಲೇಟರ್ ಎಂದು ಕೆಲಸ ಮಾಡುತ್ತಿದ್ದರು. ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಧಾರವಾಡ ಜಿಲ್ಲೆ ಮತ್ತು ಈ ಭಾಗದ ಇತರ ಪ್ರದೇಶಗಳ ಬಗ್ಗೆ ಮುಂಬೈ ಸರ್ಕಾರಕ್ಕೆ ವರದಿಗಳನ್ನು ತರ್ಜುಮೆ ಮಾಡಿ ಕೊಡುವುದು ನಮ್ಮ ಕೆಲಸ ಆಗಿತ್ತು.
ಓರಿಯಂಟಲ್ ಟ್ರಾನ್ಸ್‌ಲೇಷನ್ ವಿಭಾಗದಲ್ಲಿ ಕನ್ನಡ, ಗುಜರಾತಿ, ಸಿಂಧಿ, ಮರಾಠಿ ಮತ್ತಿತರ ಭಾಷೆಗಳ ಪತ್ರಿಕಾ ವರದಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು.
ಧಾರವಾಡದ ಲೈನ್ ಬಜಾರ್‌ನಲ್ಲಿದ್ದ ಏಳೆಂಟು ಗಡಗಡೆ ಬಾವಿ ಬತ್ತಿ ಹೋಗಿದ್ದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಪರದಾಡುತ್ತಿರುವ ವಿಷಯದ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದ ವರದಿಯನ್ನು ದೇಶಪಾಂಡೆ ಅವರು ಭಾಷಾಂತರಿಸಿ ಸರ್ಕಾರಕ್ಕೆ ಕಳಿಸಿದ್ದರು. ಅದನ್ನು ಓದಿದ ಅಧಿಕಾರಿಯೊಬ್ಬರು ಅದನ್ನು ವಾಪಸ್ ಕಳಿಸಿ `ಇದು ನೈಜ ಸಂಗತಿಯೇ ಅಥವಾ ಉತ್ಪ್ರೇಕ್ಷೆಯೇ' ಎಂದು ಪ್ರಶ್ನಿಸಿದ್ದರು.
ದೇಶಪಾಂಡೆ ಅವರು ಕೆಲಸ ಮಾಡುತ್ತಿದ್ದ ವಿಭಾಗದ ಮುಖ್ಯಸ್ಥರಾಗಿದ್ದ ಕಲಘಟಗಿ ಎಂಬುವರು ಆ ಫೈಲ್‌ನಲ್ಲಿ ತಮ್ಮದೊಂದು ಷರಾ ಹಾಕಿ ಕಳಿಸಿಕೊಟ್ಟರು. `ದೇಶಪಾಂಡೆ ಅವರ ವರದಿ ಅಪ್ಪಟ ಸತ್ಯ. ಅವರ ಭಾಷಾಂತರದಲ್ಲಿ ಉತ್ಪ್ರೇಕ್ಷೆ ಇಲ್ಲ. ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಎಂ.ಎ. ಪಡೆದಿದ್ದಾರೆ' ಎಂದು ಷರಾ ಬರೆದಿದ್ದರು.
ದೇಶಪಾಂಡೆ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪಕರಾದ ರಾ.ಹ. ದೇಶಪಾಂಡೆ ಅವರ ಮೊಮ್ಮಗ.
1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸೇವೆ ಆರಂಭಿಸಿದ ಅವರು 1984ರಲ್ಲಿ ಅದರ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ನಿವೃತ್ತರಾದರು. ಕರ್ನಾಟಕದ ಐದು ವಿ.ವಿ.ಗಳಲ್ಲಿ (ಗುಲ್ಬರ್ಗ, ಮಂಗಳೂರು, ಬೆಂಗಳೂರು, ಕುವೆಂಪು ಮತ್ತು ತಾವಿದ್ದ ಕರ್ನಾಟಕ ವಿ.ವಿ.) ಗ್ರಂಥಾಲಯಗಳ ಸ್ಥಾಪನೆಗೆ ಹೆಗಲು ಕೊಟ್ಟು ದುಡಿದ ದೇಶಪಾಂಡೆ, ಇಂಫಾಲ್, ಮಣಿಪುರ, ಗೋವಾ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಉದ್ದಗಲಕ್ಕೂ ಹತ್ತು ಹಲವು ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಭಾಗದ ಸ್ಥಾಪನೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದವರು.
ಇನ್ನೊಂದು ಪ್ರಸಂಗ ಇಲ್ಲಿ ಹೇಳಲೇಬೇಕು. 1993ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಸಮಿತಿ ಇತ್ತು. ಪಟ್ಟಿಯಲ್ಲಿ ಪ್ರೊ. ದೇಶಪಾಂಡೆ ಅವರ ಹೆಸರಿತ್ತು. ಅಷ್ಟರಲ್ಲಾಗಲೇ ದೇಶಪಾಂಡೆ ಅವರು ನಿವೃತ್ತರಾಗಿ ಹತ್ತು ವರ್ಷಗಳಾಗುತ್ತ ಬಂದಿತ್ತು. ಅವರ ಹೆಸರು ನೋಡಿದಾಕ್ಷಣ ಶಿವರಾಮ ಕಾರಂತರು `ಇವರಿಗೆ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಲ್ಲವೇ? ಈ ಬಗ್ಗೆ ಚರ್ಚೆ ಬೇಡ; ಮೊದಲ ಹೆಸರು ಅವರದೇ; ಬರೆದುಕೊಂಡು ಬಿಡಿ' ಎಂದು ಹೇಳುವ ಮೂಲಕ ದೇಶಪಾಂಡೆ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದ್ದರು.
2012ರಲ್ಲಿ ಕರ್ನಾಟಕ ಲೈಬ್ರರೀಸ್ ಅಸೋಸಿಯೇಷನ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ದಿವಂಗತ ಪ್ರೊ.ಎಸ್. ಗೋಪಾಲ್ ಅವರು ತಮ್ಮ ವಿವಿಗೆ ಬರಬೇಕೆಂದು ಆಹ್ವಾನಿಸಿ ದೇಶಪಾಂಡೆ ಅವರಿಗೆ ಪತ್ರ ಬರೆದಿದ್ದರು. ಪತ್ರದ ಆರಂಭದಲ್ಲಿ `ಡಿಯರ್ ಸರ್' ಎಂಬ ಸಂಬೋಧನೆ ಇತ್ತು. ಅದನ್ನು ಗಮನಿಸಿದ ಅವರ ಸ್ಟೆನೋ ಆಗಿದ್ದವರು ಪ್ರೊ. ಗೋಪಾಲರಿಗೆ ಸರ್, ನೀವು ಒಬ್ಬ ಲೈಬ್ರೇರಿಯನ್‌ಗೆ ಸರ್ ಎಂದು ಸಂಬೋಧಿಸುತ್ತಿದ್ದೀರಲ್ಲ ಎಂದು ಪ್ರಶ್ನಿಸಿದರು.
ಆಗ ಗೋಪಾಲ್ ಅವರು, `ದೇಶಪಾಂಡೆ ಅವರು ಗ್ರಂಥಾಲಯಾಧಿಕಾರಿ ಆಗಿರಬಹುದು. ಆದರೆ ಅವರ ಪಾಂಡಿತ್ಯ ಅಗಾಧವಾದದ್ದು. ಅವರಿಗೆ ನಾನು ಸರ್ ಬಳಸದಿದ್ದರೆ ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ' ಎಂದಿದ್ದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕುರಿತಂತೆ `ಕನ್ನಡದ ಗುಡಿ', ಕರ್ನಾಟಕ ವಿಶ್ವವಿದ್ಯಾಲಯದ ಬೆಳವಣಿಗೆಯ ಬಗ್ಗೆ `ಜ್ಞಾನ ದೇಗುಲ', ರಾ.ಹ. ದೇಶಪಾಂಡೆ, ಛಲದಂಕಮಲ್ಲ - ಎನ್.ಬಿ. ಕಬ್ಬೂರ ಮತ್ತಿತರ ಪುಸ್ತಕಗಳನ್ನು ದೇಶಪಾಂಡೆ ಅವರು ಬರೆದಿದ್ದಾರೆ.
ಇದಲ್ಲದೇ ಕರ್ನಾಟಕ ವಿದ್ಯಾವರ್ಧಕ ಸಂಘದ `ವಾಗ್ಭೂಷಣ' ಸೇರಿದಂತೆ ಹತ್ತು ಹಲವು ಪತ್ರಿಕೆ, ಪುಸ್ತಕಗಳನ್ನು ಸಂಪಾದಿಸಿದ್ದಾರೆ.
ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪ್ರೊ. ದೇಶಪಾಂಡೆ ಅವರು ಕೇಂಬ್ರಿಜ್, ಆಕ್ಸ್‌ಫರ್ಡ್ ವಿ.ವಿ.ಗಳಲ್ಲದೇ ಅಮೆರಿಕ, ಲಂಡನ್, ಪ್ಯಾರಿಸ್, ಜ್ಯೂರಿಚ್, ರೋಮ್ ಮತ್ತು ಇತರ ಕಡೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಕಾಯಿದೆಯ ತಿದ್ದುಪಡಿಗಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸೇವೆಯ ಅವಧಿ ಒಂದು ವರ್ಷ ಇದ್ದಾಗ ಬೆಂಗಳೂರಿನ ಮುಖ್ಯ ಗ್ರಂಥಾಲಯದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಸೇವೆ ಸಲ್ಲಿಸಲು ಕೋರಿ ಆಗಿನ ಮುಖ್ಯ ಕಾರ್ಯದರ್ಶಿಗಳು ದೇಶಪಾಂಡೆ ಅವರಿಗೆ ಪತ್ರ ಬರೆದಿದ್ದರು. ವಾಸ್ತವವಾಗಿ ಈ ವಿಷಯ ಕುರಿತಂತೆ ಕರ್ನಾಟಕ ವಿ.ವಿ.ಯ ಕುಲಪತಿಗಳಾಗಿದ್ದ ಪ್ರೊ. ಡಿ.ಎಂ. ನಂಜುಂಡಪ್ಪ ಅವರಿಗೆ ಮೊದಲೇ ಪತ್ರ ಬಂದಿತ್ತು. ಆದರೆ ದೇಶಪಾಂಡೆ ಅವರನ್ನು ಬಿಟ್ಟುಕೊಡಲು ಇಚ್ಛಿಸದ ಡಾ. ನಂಜುಂಡಪ್ಪ ಅದನ್ನು ಅವರಿಗೆ ಹೇಳಿರಲಿಲ್ಲ.
ಆದರೆ ಪತ್ರ ದೇಶಪಾಂಡೆ ಅವರಿಗೇ ನೇರವಾಗಿ ಬಂದಾಗ ಹೇಳದೇ ವಿಧಿ ಇರಲಿಲ್ಲ. ಆದರೆ ದೇಶಪಾಂಡೆ, ಅದನ್ನು ನಯವಾಗಿ ನಿರಾಕರಿಸಿ `ಧಾರವಾಡದಲ್ಲೇ ನಿವೃತ್ತನಾಗುವೆ. ಒಂದು ವರ್ಷಕ್ಕಾಗಿ ಮತ್ತೆ ಬೆಂಗಳೂರಿಗೆ ಈ ವಯಸ್ಸಿನಲ್ಲಿ ಬರಲೊಲ್ಲೆ' ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.