ADVERTISEMENT

ಚಿನ್ನಮ್ಮನ ಹಸುಗೂಸು

ವ್ಯಕ್ತಿ

ಗಂಗಾಧರ ಮೊದಲಿಯಾರ್
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಚಿನ್ನಮ್ಮನ  ಹಸುಗೂಸು
ಚಿನ್ನಮ್ಮನ ಹಸುಗೂಸು   
ತಮಿಳುನಾಡಿನಲ್ಲಿ ಈಗ ಮತ್ತೊಂದು ‘ಕೈಗೊಂಬೆ’ಯ ಆಡಳಿತ. ಪನ್ನೀರ್‌ ಸೆಲ್ವಂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರನ್ನು ‘ಅಮ್ಮ’ ಅವರ ಕೈಗೊಂಬೆ ಎಂದೇ ಕರೆಯಲಾಗುತ್ತಿತ್ತು. ಅವರೂ ಅದೇ ರೀತಿ ಗೋಣು ಆಡಿಸುತ್ತಿದ್ದರು. ಈಗ ಗಾದಿ ಏರಿರುವವರು ‘ಚಿನ್ನಮ್ಮ’ನ ಕೈಗೊಂಬೆ.
 
ಹತ್ತು ದಿನಗಳ ರಾಜಕೀಯ ಅನಿಶ್ಚಯ ಸ್ಥಿತಿಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಅಚ್ಚರಿಯ ಹೆಸರಾಗಿ ಹೊರಹೊಮ್ಮಿದ ಎಡಪ್ಪಾಡಿ ಕರುಪ್ಪುಗೌಂಡರ್ ಪಳನಿಸ್ವಾಮಿ (63) ಮುಖ್ಯಮಂತ್ರಿಯಾದರು ಎಂಬ ಸುದ್ದಿ ಕೇಳಿದ ಕೂಡಲೇ ಎಲ್ಲರಲ್ಲೂ ಮೂಡಿದ್ದು ಒಂದೇ ಪ್ರಶ್ನೆ, ಇವರ ಅಧಿಕಾರಾವಧಿ ಎಷ್ಟು ದಿನ? ನಾಲ್ಕು ವರ್ಷ ಪೂರೈಸುತ್ತಾರಾ? ಈ ಅನುಮಾನಗಳೇ ತಮಿಳುನಾಡಿನ ಮುಖ್ಯಮಂತ್ರಿ ಕುರ್ಚಿ ಇನ್ನೂ ಕಂಪನದಲ್ಲೇ ಇದೆ ಎನ್ನುವುದರ ದಿಕ್ಸೂಚಿಯಾಗಿದೆ.
 
ತಮಿಳುನಾಡಿನ ಮುಖ್ಯಮಂತ್ರಿ ಪಟ್ಟ ಚೆನ್ನೈ ನಿವಾಸಿಗಳಿಗಷ್ಟೇ ಸೀಮಿತ ಎನ್ನುವಂತಿದ್ದ ಪರಿಸ್ಥಿತಿಯಲ್ಲಿ ಸೇಲಂ ಜಿಲ್ಲೆಗೆ ಅದು ಆರು ದಶಕಗಳ ನಂತರ ಒಲಿದು ಬಂದಿದೆ. ಸೇಲಂ ಜಿಲ್ಲೆಯವರೇ ಆಗಿದ್ದ ರಾಜಾಜಿ 1952ರಲ್ಲಿ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಈಗ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿಬಂದಿದೆ. ಅತಿದೊಡ್ಡ ಜವಳಿ ಕೇಂದ್ರವಾಗಿ, ಆರ್ಥಿಕ ವಹಿವಾಟಿನ ಮುಂಚೂಣಿಯಲ್ಲಿರುವ ಸೇಲಂ, ಚೆನ್ನೈಗೆ ದೂರ. ಬೆಂಗಳೂರಿಗೆ ಹತ್ತಿರ. ಚೆನ್ನೈನಿಂದ ಸೇಲಂ 340 ಕಿ.ಮೀ, ಬೆಂಗಳೂರಿಗೆ 186  ಕಿ.ಮೀ. ಅತಿ ನಂಬುಗೆಯ ವ್ಯಕ್ತಿ ಎಂದು ಶಶಿಕಲಾ ಅವರಿಂದ ನೇಮಕಗೊಂಡ ಪಳನಿಸ್ವಾಮಿ ಅವರಿಗೆ ಆಡಳಿತ ನಿರ್ದೇಶನ ಪಡೆಯಲು ಚೆನ್ನೈಗಿಂತ ಬೆಂಗಳೂರಿನ ಪರಪ್ಪನ ಅಗ್ರಹಾರವೇ ಸನಿಹ.
 
ಪಳನಿಸ್ವಾಮಿ ಅವರ ಆಯ್ಕೆಯ ಮೂಲಕ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಸಮೀಕರಣ ಆರಂಭವಾಗಿದೆ. ತೇವರ್‌ಗಳ ಹಿಡಿತದಲ್ಲಿದ್ದ ಎಐಎಡಿಎಂಕೆ ಪಕ್ಷದಲ್ಲಿ ಈಗ ಗೌಂಡರ್‌ಗಳ ಪ್ರವೇಶವಾಗಿದೆ. ಪಕ್ಷಕ್ಕೆ ಸವಾಲಾಗಬಹುದಾದ ಈ ಕಠಿಣ ನಿಲುವನ್ನು ತೆಗೆದುಕೊಳ್ಳುವುದರಲ್ಲಿ ಶಶಿಕಲಾ ರಾಜಕೀಯ ದಾಳವನ್ನೇ ಉರುಳಿಸಿದ್ದಾರೆ. ತಂಬಿದೊರೈ ಸೇರಿದಂತೆ ಬಹುತೇಕ ಗೌಂಡರ್ ನಾಯಕರು ಪಕ್ಷದಲ್ಲಿ, ಮಂತ್ರಿಮಂಡಲದಲ್ಲಿ ತಮ್ಮ ಸಮುದಾಯಕ್ಕೆ ಅನ್ಯಾಯವಾಗಿರುವುದರ ಬಗ್ಗೆ ಅತೃಪ್ತಿ ಹೊಂದಿದ್ದರು. ಅವರೆಲ್ಲ ವಿಶ್ವಾಸಮತದ ಸಮಯದಲ್ಲಿ ಕೈಕೊಡುವ ಸಂಭವವೂ ಹೆಚ್ಚಾಗಿಯೇ ಇತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸುವ ನಿರ್ಧಾರಕ್ಕೆ ಬಂದ ಶಶಿಕಲಾ, ತಮಗೆ ಅತಿನಿಷ್ಠ ಎನಿಸಿದ ಪಳನಿಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದರು. ತೇವರ್‌ಗಳನ್ನು ಸಂತೃಪ್ತಿಪಡಿಸಲು ಜಯಲಲಿತಾ ಇದ್ದಾಗ ಪಕ್ಷದಿಂದಲೇ ದೂರ ಅಟ್ಟಿದ್ದ ದಿನಕರನ್ ಅವರನ್ನು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತರುವ ಮೂಲಕ ಪಕ್ಷ ಹಾಗೂ ಸರ್ಕಾರ ಎರಡೂ ತೇವರ್‌ಗಳ ಕೈಯಲ್ಲೇ ಇರುವಂತೆ ನೋಡಿಕೊಂಡರು. ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಂಡ ಪಳನಿಸ್ವಾಮಿ ಮನದೊಳಗೇ ಮಂಡಿಗೆ ತಿಂದರು.
 
ಅಣ್ಣಾಡಿಎಂಕೆ ಅಧಿಕಾರಕ್ಕೆ ಬರಲು ತೇವರ್ ಶಾಸಕರೇ ಅಲ್ಲದೆ, ಬಹುಸಂಖ್ಯೆಯಲ್ಲಿರುವ ಗೌಂಡರ್ ಶಾಸಕರ ಬೆಂಬಲವೂ ಅನಿವಾರ್ಯವಾಗಿರುವುದರಿಂದ ಎರಡೂ ಸಮುದಾಯದವರನ್ನು ಸರಿದೂಗಿಸುವ ಹಗ್ಗದ ಮೇಲಿನ ನಡಿಗೆಯನ್ನು ಶಶಿಕಲಾ ಮಾಡಿದ್ದಾರೆ. ಒಳರಹಸ್ಯವಿಷ್ಟೆ, ದಿನಕರನ್ ಮೂಲಕ ಪಕ್ಷವೂ, ಮುಖ್ಯಮಂತ್ರಿ ಸ್ಥಾನವೂ ‘ಮನ್ನಾರ್‌ಗುಡಿ ಮಾಫಿಯಾ’ ಕೈಗೇ ಸೇರಿದೆ.
 
ಪಳನಿಸ್ವಾಮಿ ಎಐಎಡಿಎಂಕೆಯ ಸಾಮಾನ್ಯ ಕಾರ್ಯಕರ್ತ. ಸೇಲಂ ಜಿಲ್ಲೆಯ ನೆಡುಂಗುಳಂ ಹಳ್ಳಿಯ ಕೃಷಿಕ. ಪದವೀಧರ ಎಂದು ಹೇಳಿಕೊಳ್ಳುತ್ತಾರಾದರೂ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ, ಈರುಳ್ಳಿ ವ್ಯಾಪಾರಿಯಾಗಿದ್ದವರು. ಎಂಜಿಆರ್ ಇದ್ದಾಗಲೇ ಅಣ್ಣಾಡಿಎಂಕೆ   ಸೇರಿದ್ದರೂ ಜಯಲಲಿತಾ ಅವರ ಅಭಿಮಾನಿ. ಎಡಪ್ಪಾಡಿಯಲ್ಲಿ ಪುರುಚ್ಚಿತಲೈವಿ ಜಯಲಲಿತಾ ಅಭಿಮಾನಿಗಳ ಸಂಘ ಸ್ಥಾಪಿಸಿದ್ದ ಹುಚ್ಚಾಭಿಮಾನಿ. 1987ರಲ್ಲಿ ಎಂಜಿಆರ್ ನಿಧನಾನಂತರ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಜಯಲಲಿತಾ ಅವರೊಂದಿಗೆ ಗಟ್ಟಿಯಾಗಿ ನಿಂತು, 1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾದರು. 1991ರಲ್ಲೂ ಎಡಪ್ಪಾಡಿ ಕ್ಷೇತ್ರದಿಂದ ಪುನರಾಯ್ಕೆ ಆದರು. 2011ರ ಚುನಾವಣೆಯಲ್ಲಿ ಗೆದ್ದ ನಂತರ ಶಿಷ್ಯನ ಶಕ್ತಿ ಅರಿತ ಜಯಲಲಿತಾ, ಸಂಪುಟದಲ್ಲಿ ಹೆದ್ದಾರಿ ಹಾಗೂ ಬಂದರು ಖಾತೆ ನೀಡಿದರು. ಸಿಲುವಾಲಪಾಳ್ಯಂ, ಎಡಪ್ಪಾಡಿ ಪಂಚಾಯತ್ ಯೂನಿಯನ್ (ಸೇಲಂ) ಕಾರ್ಯದರ್ಶಿಯಾಗಿದ್ದ ಪಳನಿಸ್ವಾಮಿ, ನಂತರದ ದಿನಗಳಲ್ಲಿ ಪಕ್ಷದ ಉತ್ತರ ಸೇಲಂ ಜಂಟಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದರು. ಗೌಂಡರ್ ಸಮುದಾಯದವರು ಹೆಚ್ಚಾಗಿರುವ ಸೇಲಂ ವಲಯದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಸಂಘಟಕರಾಗಿ ಗಮನ ಸೆಳೆದವರು. ಹೀಗಾಗಿ ಇವರು ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ, ಪ್ರಚಾರ ಕಾರ್ಯದರ್ಶಿಯಾಗಿ, ಶಿಸ್ತು ಸಮಿತಿ ಸದಸ್ಯರಾಗಿ ಸೇಲಂ ಗ್ರಾಮೀಣ ಜಿಲ್ಲಾ ಕಾರ್ಯದರ್ಶಿಯಾಗಿ ಎಲ್ಲಾ ರೀತಿಯ ಅಧಿಕಾರ ನಿರ್ವಹಿಸಬೇಕಾಯಿತು.
 
ಪಳನಿಸ್ವಾಮಿಯವರ 40 ವರ್ಷಗಳ ರಾಜಕೀಯ ಹಾದಿಯಲ್ಲಿ ಐದು ಬಾರಿ ಗೆಲುವು, ಎರಡು ಬಾರಿ ಸೋಲಾಗಿದೆ. ಜಯಾ ಸೋತಾಗ ಇವರೂ ಸೋತಿದ್ದಾರೆ. ಜಯಾ ಗೆದ್ದಾಗ ಇವರೂ ಗೆದ್ದಿದ್ದಾರೆ. 1998ರಲ್ಲಿ ತಿರುಚೆಂಗೋಡ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಸೇಲಂ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರಗಳು ಎಐಎಡಿಎಂಕೆ ಪಾಲಾಗುವಲ್ಲಿ ಪಳನಿಸ್ವಾಮಿಯವರ ಪ್ರಭಾವ ಕೆಲಸ ಮಾಡಿತ್ತು. ಕೊಂಗುವಲಯದಲ್ಲಿ ಗೌಂಡರ್‌ಗಳ ಸಂಖ್ಯೆ ಜಾಸ್ತಿ. ಹಿಂದುಳಿದ ವರ್ಗಕ್ಕೆ ಸೇರುವ ಈ ಸಮುದಾಯದಿಂದ ವಿಧಾನಸಭೆಗೆ ಸುಮಾರು 60 ಮಂದಿ ಆಯ್ಕೆಯಾಗುತ್ತಾರೆ. ಆದುದರಿಂದ ಎಲ್ಲ ಪಕ್ಷಗಳಿಗೂ ಕೊಂಗುನಾಡಿನ ಮತಗಳೇ ನಿರ್ಣಾಯಕವೆನಿಸುತ್ತವೆ. 2015ರ ಚುನಾವಣೆಯಲ್ಲಿ ಜಯಲಲಿತಾ ಅವರ ಪಕ್ಷಕ್ಕೆ ಬಲ ನೀಡಿದ್ದೇ ಈ ವಲಯ. ಹೀಗಾಗಿ ಪಳನಿಸ್ವಾಮಿ ಅವರಿಗೆ ಜಯಲಲಿತಾ ಲೋಕೋಪಯೋಗಿ ಖಾತೆಯನ್ನೇ ನೀಡಿದರು. ಸೇಲಂನಲ್ಲಿ ಗೌಂಡರ್ ಪ್ರಾಬಲ್ಯವಿರುವಲ್ಲಿ ಅವರ ಸಮುದಾಯದ ಪ್ರಬಲ ನಾಯಕನಾಗಿ ಎಡಪ್ಪಾಡಿ ಹೊರಹೊಮ್ಮಿದ್ದು ಹೀಗೆ.
 
ಜಯಲಲಿತಾ ಇರುವವರೆಗೂ ನಾನೂ ಮುಖ್ಯಮಂತ್ರಿಯಾಗಬಹುದು ಎಂದು ಯಾವ ಶಾಸಕನೂ ತಮಾಷೆಗೂ ಊಹಿಸಿಕೊಳ್ಳುತ್ತಿರಲಿಲ್ಲ. ಜಯಲಲಿತಾ ನಿಧನಾನಂತರ ಶಾಸಕರೇ ಏಕೆ ಮನೆಯ ಸಹಾಯಕರೂ ಮುಖ್ಯಮಂತ್ರಿಯಾಗುವ ಕನಸು ಕಾಣಲಾರಂಭಿಸಿದ್ದಾರೆ. ಪಳನಿಸ್ವಾಮಿ ಅವರಿಗೂ ಇಂಥ ಒಂದು ಚಿಕ್ಕ ಆಸೆಯೂ ಜಯಲಲಿತಾ ನಿಧನರಾಗುವವರೆಗೂ ಇದ್ದಿರಲಾರದು. ಆದರೆ, ಡಿಸೆಂಬರ್ ಆರರ ನಂತರ, ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಮೇಲಿಂದ ಮೇಲೆ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾಗ, ಅವರೊಂದಿಗೇ ಎಡತಾಕಿದ್ದು ಪಳನಿಸ್ವಾಮಿ. ಆ ಸಮಯದಲ್ಲೇ ಪನ್ನೀರ್‌ ಸೆಲ್ವಂ ಹಾದಿ ಸುಗಮವಾಗದಂತೆ ಪಳನಿಸ್ವಾಮಿ ಎಂಬ ಮುಳ್ಳನ್ನು ಶಶಿಕಲಾ ನೆಟ್ಟಿದ್ದರು.
 
ಪಳನಿಸ್ವಾಮಿ ಪಕ್ಷದಲ್ಲಿ ಹಂತಹಂತವಾಗಿ ಮೇಲೇರಿದವರು. ಅವರಿಗೆ ದ್ರಾವಿಡ ಕಳಗಂನ ಮೂಲಗುಣ ಮೈಗೂಡಿದಂತೆ ಕಾಣುತ್ತಿಲ್ಲ. ಹಿಂದುಳಿದ ವರ್ಗದ ಪ್ರತಿನಿಧಿಯಾದರೂ, ಇವರ ಕ್ಷೇತ್ರದಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಎಲ್ಲರೂ ಹೇಳುವಂತೆ ಪಳನಿಸ್ವಾಮಿ ಮುಂಗೋಪಿ.
 
ದೇವಸ್ಥಾನಕ್ಕೆ ಹೋಗುತ್ತಾರೋ ಇಲ್ಲವೋ ಪಳನಿಸ್ವಾಮಿ ಪ್ರತಿದಿನ ಬೆಳಿಗ್ಗೆ ಎದ್ದು ಪೋಯಸ್‌ ಗಾರ್ಡನ್‌ಗೆ ಪ್ರದಕ್ಷಿಣೆ ಹಾಕುವುದನ್ನು ತಪ್ಪಿಸುತ್ತಿರಲಿಲ್ಲ. ಹೀಗಾಗಿ ಅವರು  ಅಮ್ಮನಿಗೂ ಹತ್ತಿರವಾದರು. ಚಿನ್ನಮ್ಮನಿಗೂ ಬೇಕಾದವರಾದರು. ಜಯಲಲಿತಾ ನಿಧನರಾದ ನಂತರ ಚಿನ್ನಮ್ಮನಿಗೆ ಮತ್ತೂ ನಿಕಟರಾದರು. ಅಲ್ಲದೆ, ಚಿನ್ನಮ್ಮ ಮುಖ್ಯಮಂತ್ರಿಯಾಗಬೇಕು ಎಂಬ ದನಿಯನ್ನು ಮೊದಲಿಗೆ ಆರಂಭಿಸಿದವರೇ ಪಳನಿಸ್ವಾಮಿ. ಚಿನ್ನಮ್ಮನಿಗೆ ಇದು ಹಿತವಾಗಿ ಕೇಳಿಸಿದ ಪರಿಣಾಮವಾಗಿ, ಅವರಿಗೆ ಗೃಹ ಇಲಾಖೆಯ ಜವಾಬ್ದಾರಿಯನ್ನೂ ವಹಿಸಲು ಮುಂದಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ ಸೆಲ್ವಂ ಈ ನಡೆಯನ್ನು ತಡೆದರು. ಶಶಿಕಲಾ ಮತ್ತು ಪನ್ನೀರ್‌ ಸೆಲ್ವಂ ನಡುವೆ ಬಿರುಕು ಸ್ಫೋಟಗೊಂಡಿದ್ದೇ ಈ ಹಂತದಲ್ಲಿ. ಶಶಿಕಲಾ ವಿರುದ್ಧ ಪನ್ನೀರ್‌ ಸೆಲ್ವಂ ಬಂಡಾಯವೆದ್ದ ನಂತರ ಶಶಿಕಲಾ ಜೊತೆ ಬಲಗೈ ಭಂಟನ ತರಹ ನಿಂತು 124 ಶಾಸಕರನ್ನು ಒಂದುಗೂಡಿಸಿಕೊಂಡು ‘ಪ್ರಸಾದ’ ಹಂಚುವ ಕಾರ್ಯ ಮಾಡಿದರು. ಅಷ್ಟೂ ಶಾಸಕರನ್ನು ಮಹಾಬಲಿಪುರಂ ಬಳಿ ಇರುವ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಕೂಡಿಹಾಕುವ ಮೊದಲು, ಅವರೆಲ್ಲರಿಗೂ ಪಳನಿಸ್ವಾಮಿ ಮನೆಯಲ್ಲಿ ‘ಪಾಠ’ ಮಾಡಲಾಗಿತ್ತು.
 
ಪಳನಿಸ್ವಾಮಿ ಅವರದು ಕೈಗೊಂಬೆ ಸರ್ಕಾರ ಎನ್ನುವುದು ಈಗಾಗಲೇ ಜನಜನಿತ. ಸರ್ಕಾರವನ್ನು ನಿಯಂತ್ರಿಸುವುದು ‘ಮನ್ನಾರ್‌ಗುಡಿ ಮಾಫಿಯಾ’ ಎನ್ನುವುದೂ ಎಲ್ಲರಿಗೂ ತಿಳಿದಿರುವಂತೆ ಪಳನಿಸ್ವಾಮಿಯವರಿಗೂ ಗೊತ್ತು. ಜಯಲಲಿತಾ ಇದ್ದಾಗಲೇ ಅವರಿಗೆ ಅರಿವಿಲ್ಲದಂತೆ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ, ವರ್ಗಾವಣೆ ನಡೆಯುತ್ತಿದ್ದುದು, ಆಡಳಿತ ಕೇಂದ್ರಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ತಮಗೆ ಅನುಕೂಲಕರವಾದ ವ್ಯಕ್ತಿಗಳನ್ನು ಕೂರಿಸಿರುವುದು ಶಶಿಕಲಾ ಅವರು ಹೊಂದಿರುವ ಹಿಡಿತಕ್ಕೆ ಉದಾಹರಣೆಯಾಗಿದೆ. ಪಳನಿಸ್ವಾಮಿ, ಚಿನ್ನಮ್ಮನ ಹಿಡಿತದಲ್ಲಿರುವ ಹಸುಗೂಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.