ADVERTISEMENT

ಚೀನಾ ಯಜಮಾನಿಕೆ ಹಾಂಕಾಂಗ್ ಜನರ ಆಕ್ರೋಶ

Published 3 ಮೇ 2014, 19:30 IST
Last Updated 3 ಮೇ 2014, 19:30 IST

ಹಾಂಕಾಂಗ್‌ನ ಬಹುತೇಕ ನಿವಾಸಿಗಳಲ್ಲಿ ಚೀನಾ ಬಗ್ಗೆ ಆಕ್ರೋಶ ಮನೆ ಮಾಡಿದೆ. ತಮ್ಮ ದೇಶವನ್ನು ಚೀನಾ ಕಡೆಗಣಿಸಿದೆ, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ತೀವ್ರ ಅಸಮಾಧಾನ ಇಲ್ಲಿನ ಜನರನ್ನು ಕಾಡುತ್ತಿದೆ. ಚೀನಾ ವಿರುದ್ಧ ಅತೃಪ್ತ ಭಾವನೆ ಹೊಂದಿರುವವರಲ್ಲಿ ಬಹುಪಾಲು ಯುವ ಸಮುದಾಯ ದವರು ಎಂಬುದು ಗಮನಾರ್ಹ.

ಎರಡು ದಶಕಗಳಿಂದ ದೇಶ ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಮುಂದಿಟ್ಟುಕೊಂಡು ‘ಹಾಂಕಾಂಗ್ ಪರಿವರ್ತನಾ ಯೋಜನೆ’ ಇತ್ತೀಚೆಗೆ ಸಮೀಕ್ಷೆ ನಡೆಸಿತು. ದೇಶದ ಕಾಯಂ ನಿವಾಸಿಗಳಲ್ಲಿ ಶೇಕಡಾ 52ರಷ್ಟು ಜನರ ಅಭಿಪ್ರಾಯವನ್ನು ಒಳಗೊಂಡ ಈ ಸಮೀಕ್ಷೆಯ ವರದಿ ಕಳೆದ ಮಂಗಳವಾರ (ಏ.29) ಬಿಡುಗಡೆ ಆಗಿದೆ. ಇದರಲ್ಲಿ ಶೇ 48ರಷ್ಟು ಜನರು ಚೀನಾದ ಆಡಳಿತದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದರೆ ಈ ಬಾರಿ ಚೀನಾದ ವಿರುದ್ಧ ಅಸಮಾಧಾನ ಗಣನೀಯವಾಗಿ ಹೆಚ್ಚಿದೆ.

2004ರ ಜೂನ್ ನಂತರ ಚೀನಾದ ಬಗ್ಗೆ ಹಾಂಕಾಂಗ್ ನಿವಾಸಿಗಳಲ್ಲಿ ಅಂತಹ ಪ್ರೀತಿಯೇನೂ ಉಳಿದಿಲ್ಲ. ಚೀನಾ ಸರ್ಕಾರ ಹಾಂಕಾಂಗ್‌ನಲ್ಲಿ ದೇಶದ್ರೋಹದ ಕಾನೂನನ್ನು ಜಾರಿ ಮಾಡಲು ಮುಂದಾಯಿತು. ಇದು ಹಾಂಕಾಂಗ್ ನಾಗರಿಕರನ್ನು ಕೆರಳಿಸಿತು. ಆಗ ದೇಶದಲ್ಲಿ ಹರಡಿದ ಚೀನಾ ವಿರೋಧಿ ಅಲೆ ಈಗಲೂ ಗುಪ್ತವಾಗಿ ಪ್ರವಹಿಸುತ್ತಿದೆ.

ಸಮೀಕ್ಷೆಗೆ ಒಳಪಟ್ಟ 21ರಿಂದ 29ರ ನಡುವಣ ವಯಸ್ಸಿನವರಂತೂ ಚೀನಾ ಬಗ್ಗೆ ಕೆಂಡಕಾರುತ್ತಾರೆ. ಈ ಯುವ ಸಮುದಾಯದ ಗುಂಪಿನಲ್ಲಿ ಶೇ 82ರಷ್ಟು ಜನರು ಹಾಂಕಾಂಗ್ ಬಗ್ಗೆ ಚೀನಾ ಹೊಂದಿರುವ ಧೋರಣೆ ಅತ್ಯಂತ ಶೋಚನೀಯ ಎಂದಿದ್ದಾರೆ.

ಬ್ರಿಟಿಷರ ವಸಾಹತು ಆಗಿದ್ದ ಹಾಂಕಾಂಗ್ 1997ರಲ್ಲಿ ಚೀನಾದ ಹಿಡಿತಕ್ಕೆ ಬಂತು. ‘ಒಂದೇ ದೇಶ ಎರಡು ವ್ಯವಸ್ಥೆ’ ಎಂಬ ಆಧಾರದ ಮೇಲೆ ಹಾಂಕಾಂಗ್ ಸ್ವಾಯತ್ತತೆ ಪಡೆದ ನಾಡು. ಚೀನಾ ಮತ್ತು ಹಾಂಕಾಂಗ್ ಮಧ್ಯೆ ಆಗಿರುವ ಈ ಒಪ್ಪಂದವು 2047ರವರೆಗೂ ಮುಂದುವರಿಯಲಿದೆ. ಚೀನಾದ ಜನರಿಗೆ ಇಲ್ಲದ ವಾಕ್, ಧಾರ್ಮಿಕ ಸ್ವಾತಂತ್ರ ಸೇರಿದಂತೆ ನಾಗರಿಕ ಹಕ್ಕುಗಳು ಹಾಂಕಾಂಗ್ ಜನರಿಗಿದೆ. ಇಲ್ಲಿನ ಮಾಧ್ಯಮಗಳು ಚೀನಾದಂತೆ ಸರ್ಕಾರದ
ಕಪಿಮುಷ್ಟಿಯಲ್ಲಿ ಇಲ್ಲ. ಅವುಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಿವೆ. ಆದರೂ, ತಮ್ಮ ದೇಶದ ಮೇಲೆ ಚೀನಾ ದಬ್ಬಾಳಿಕೆ ನಿಂತಿಲ್ಲ ಎಂಬುದು ಹಾಂಕಾಂಗ್ ನಿವಾಸಿಗಳ ಆರೋಪ.

ಬೀಜಿಂಗ್ ಸರ್ಕಾರದ ಬಗ್ಗೆ ಇರುವ ಆಕ್ರೋಶಕ್ಕಿಂತಲೂ ಹೆಚ್ಚಿನ ಸಿಟ್ಟು ಲೆಯುಂಗ್ ಚುನಿಯಿಂಗ್ ಅವರ ನೇತೃತ್ವದ ಹಾಂಕಾಂಗ್ ಸರ್ಕಾರದ ಬಗ್ಗೆ ಇದೆ. ಮುಖ್ಯ ಆಡಳಿತಾಧಿಕಾರಿ ಯಾದ ಚುನಿಯಿಂಗ್ ಅವರು ಚೀನಾ ಸರ್ಕಾರದ ಜೊತೆಗೆ ದೇಶದ ಹಿತಕಾಯುವಂತಹ ಒಪ್ಪಂದಗಳನ್ನು ಮಾಡಿಕೊಂಡಿಲ್ಲ ಎಂದು ಬಹುಪಾಲು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್ 18ರಿಂದ ಜನವರಿ 1ರವರೆಗೆ ನಡೆದ ಸಮೀಕ್ಷೆಯಲ್ಲಿ ಸುಮಾರು 1007 ಕಾಯಂ ನಿವಾಸಿಗಳಿಗೆ ‘ಸ್ಥಳೀಯ ಸರ್ಕಾರವು ಚೀನಾ ಸರ್ಕಾರದ ಜೊತೆಗೆ ಹೊಂದಿರುವ ಸಂಬಂಧ’ದ ಬಗ್ಗೆ ಪ್ರಶ್ನಿಸಲಾಯಿತು. ಇವರಲ್ಲಿ ಶೇ 56ರಷ್ಟು ಮಂದಿ ‘ಸ್ಥಳೀಯ ಸರ್ಕಾರವೇ ನಾಡಿನ ಹಿತಕಾಯುತ್ತಿಲ್ಲ. ಅದು ಚೀನಾ ಜೊತೆಗೆ ಹೊಂದಿರುವ ಸಂಬಂಧ ಅಷ್ಟಕಷ್ಟೆ’ ಎಂದಿದ್ದಾರೆ.

ಚುನಿಯಿಂಗ್ ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ಆರೋಪಿಸುವ ಜನರಲ್ಲಿ ಮುಂದಿನ ಮುಖ್ಯ ಆಡಳಿತಾಧಿಕಾರಿ ಆಯ್ಕೆಗೆ ಚುನಾವಣೆ ನಡೆಸಲು ಅವರು ಮುಂದಾಗದಿರುವುದು ಅಸಹನೆ ಉಂಟುಮಾಡಿದೆ. 2017ರಲ್ಲಿ ಸ್ಥಳೀಯ ಸರ್ಕಾರ ಆಯ್ಕೆಗೆ ಚುನಾವಣೆ ನಡೆಸುವುದಾಗಿ ಚೀನಾ ಹೇಳಿದೆ. ಹಾಂಕಾಂಗ್ ಜನರು ತಮ್ಮ ಆಯ್ಕೆಯ ಪ್ರತಿನಿಧಿಗಳನ್ನು ಚುನಾಯಿಸುವ ಸ್ವಾತಂತ್ರ ಹೊಂದಿದ್ದಾರೆಂದು ಚೀನಾ ಹೇಳುತ್ತಿದ್ದರೂ ದೇಶಭಕ್ತಿಯ ಹೆಸರಲ್ಲಿ ಚೀನಾ ತನಗೆ ಬೇಕಾದ ಅಭ್ಯರ್ಥಿಗಳನ್ನು ಹೇರಲು ಹುನ್ನಾರ ಮಾಡುತ್ತಿದೆ ಎಂಬ ಚರ್ಚೆಗಳು ಹಾಂಕಾಂಗ್‌ನಲ್ಲಿ ನಡೆಯುತ್ತಿವೆ.

ಚುನಿಯಿಂಗ್ ಅವರು ಕೂಡ ಹೀಗೆಯೇ ಆಯ್ಕೆ ಆಗಿದ್ದು ಎಂಬುದು ಹಲವರ ಆರೋಪ. 1200ಕ್ಕೂ ಹೆಚ್ಚು ಜನರ ಗುಂಪು ಮತ್ತು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಸೇರಿಕೊಂಡು ಚುನಿಯಿಂಗ್ ಅವರಿಗೆ ಪಟ್ಟಕಟ್ಟಿದರು ಎಂಬ ಕೋಪ ಅನೇಕರಲ್ಲಿ ಈಗಲೂ ಮನೆ ಮಾಡಿದೆ. ಶೇ 72 ಜನರು ಚುನಿಯಿಂಗ್ ಅವರಿಂದ ನ್ಯಾಯಸಮ್ಮತ ರೀತಿಯಲ್ಲಿ ಅಧಿಕಾರ ಹಸ್ತಾಂತರ ನಡೆಯುವುದಿಲ್ಲ ಎಂದಿದ್ದಾರೆ.

ಆದರೆ, ಸಮೀಕ್ಷೆಗೆ ಒಳಪಟ್ಟ ಸರ್ಕಾರ ಆಯ್ಕೆ ಮಾಡುವ ಗುಂಪಿನಲ್ಲಿ ರುವ ಕೆಲವರು ಚುನಿಯಿಂಗ್ ಅವರ ಬಗ್ಗೆ ಒಳ್ಳೆಯ ಮಾತನ್ನಾಡಿದ್ದಾರೆ. ತಮ್ಮ ಉತ್ತರಾಧಿಕಾರಿ ಆಯ್ಕೆಯನ್ನು ಅವರು ನ್ಯಾಯಸಮ್ಮತವಾಗಿಯೇ ಮಾಡುತ್ತಾರೆ ಎಂದಿದ್ದಾರೆ. ಮುಖ್ಯ ಆಡಳಿತಾಧಿಕಾರಿಯನ್ನು ಜನರೇ ನೇರವಾಗಿ ಆಯ್ಕೆ ಮಾಡುವ ವಿಧಾನ ಜಾರಿಯಾಗಬೇಕಾದರೆ ಇದಕ್ಕೆ ಚೀನಾ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ (ಶಾಸನಸಭೆ) ಅಂಗೀಕಾರ ಕಡ್ಡಾಯವಾಗಿಬೇಕು.

ಅಂತರರಾಷ್ಟ್ರೀಯ ಮಾನದಂಡದಂತೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು. ಅದನ್ನು ಬಿಟ್ಟು ತನ್ನ ತಾಳಕ್ಕೆ ಕುಣಿಯುವಂತಹ ಅಭ್ಯರ್ಥಿಗಳನ್ನು ಚೀನಾ ಹೇರಲು ಪ್ರಯತ್ನಿಸಿದರೆ ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಹಾಂಕಾಂಗ್‌ನ ಪ್ರಜಾತಂತ್ರ ವ್ಯವಸ್ಥೆ ಪರ ಹೋರಾಟಗಾರರು ಸಿದ್ಧತೆ ನಡೆಸಿದ್ದಾರೆ. ಹೋರಾಟದ ಮುನ್ಸೂಚನೆ ಎಂಬಂತೆ, ಕೇಂದ್ರ (ಚೀನಾ) ಸರ್ಕಾರವನ್ನು ಪ್ರೀತಿ ಮತ್ತು ಶಾಂತಿಯಿಂದ ಒಪ್ಪಿಕೊಳ್ಳುವಂತೆ ಚೀನಾ ಉಪಾಧ್ಯಕ್ಷ ಲಿ ಯುವಾಚೊ ಅವರು ಎಚ್ಚರಿಕೆಯ ಧಾಟಿಯಲ್ಲಿ ನೀಡಿರುವ ಹೇಳಿಕೆಯನ್ನು ಈ ಹೋರಾಟಗಾರರು ಖಂಡಿಸಿದ್ದಾರೆ. ಉಪಾಧ್ಯಕ್ಷರ ಎಚ್ಚರಿಕೆಯು ಹಾಂಕಾಂಗ್‌ನ ಅಭಿವೃದ್ಧಿ ಮತ್ತು ಸ್ಥಿರತೆಗೆ ಹಾಕಿರುವ ಬೆದರಿಕೆ ಎಂದಿದ್ದಾರೆ.

ಹಾಂಕಾಂಗ್ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸಿದರೆ ಅದರಿಂದ ಸ್ಥಳೀಯ ಆರ್ಥಿಕತೆಗೆ ಭಾರಿ ಹೊಡೆತ ಬೀಳುತ್ತದೆ ಎಂದು ಇಲ್ಲಿನ ಜನರು ಕಳವಳಗೊಂಡಿದ್ದಾರೆ. ಸಮೀಕ್ಷೆಯಲ್ಲಿ ಈ ಕುರಿತ ಪ್ರಶ್ನೆಗೆ ಶೇ 57ರಷ್ಟು ಮಂದಿ ಇದು ತೀವ್ರ ಆತಂಕಕಾರಿ ಬೆಳವಣಿಗೆ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಟ ಬಿಡದ ಉಪಾಧ್ಯಕ್ಷ ಲಿ ಯುವಾಚೊ, ‘ಯಾರೇ ಅಭ್ಯರ್ಥಿಯಾದರೂ ಅವರು ದೇಶ (ಚೀನಾ)ಭಕ್ತರು ಮತ್ತು ಹಾಂಕಾಂಗ್ ಪರ ಕಾಳಜಿ ಉಳ್ಳವರು ಎನ್ನುವುದನ್ನು ಖಾತರಿ ಪಡಿಸಬೇಕು’ ಎಂದಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹೋರಾಟಗಾರರ ಗುಂಪು, ‘ಇದು ಬೀಜಿಂಗ್‌ನ ಧೋರಣೆಯನ್ನು ಹಾಂಕಾಂಗ್ ಮೇಲೆ ಹೇರುವ ತಂತ್ರವಲ್ಲದೇ ಮತ್ತೇನು’ಎಂದು ಪ್ರಶ್ನಿಸಿದ್ದಾರೆ.

ಈ ವಿರೋಧದ ನಡುವೆಯೂ ಹಾಂಕಾಂಗ್‌ನಲ್ಲಿ ಚೀನಾದ ಸಂಪೂರ್ಣ ಆಧಿಪತ್ಯಕ್ಕೆ ಶೇ38 ಜನರು ಸೈ ಎಂದಿದ್ದಾರೆ. ಆದರೆ, ಶೇ 54ರಷ್ಟು ಮಂದಿ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ. ಯುವ ಜನಾಂಗದವರು ಚೀನಾ ಅವಲಂಬನೆಯನ್ನು ವಿರೋಧಿಸುತ್ತಿದ್ದಾರೆ.
ಹಾಂಕಾಂಗ್‌ನ ಬಹುತ್ವದ ಅನನ್ಯತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಮಾತುಗಳು ಶೇ 62ರಷ್ಟು ಜನರಿಂದ ಕೇಳಿಬಂದಿದೆ. ಶೇ 29ರಷ್ಟು ಮಂದಿ ಮಾತ್ರ ಹಾಂಕಾಂಗ್‌ನ ಇತಿಹಾಸ ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳನ್ನು ಚೀನಾ ಸಹಕಾರದಿಂದ ಎದ್ದುಕಾಣುವಂತೆ ಪ್ರದರ್ಶಿಸಬೇಕು ಎಂದಿದ್ದಾರೆ.

ಸಮೀಕ್ಷಾರರು ಈ ಅಧ್ಯಯನದಲ್ಲಿ ದೊರಕಿದ ಮಾಹಿತಿ ಮತ್ತು ಅಂಕಿಅಂಶ ಗಳನ್ನು 215 ಪುಟಗಳಲ್ಲಿ ಕ್ರೋಡೀಕರಿಸಿ, ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.