ಬೆಂಗಳೂರು: ‘ಈ ಜಯಂತಿ ಇದ್ದಾರಲ್ಲಾ, ರೀಜನಲ್ ಕಮಿಷನರ್... ಇಂತಹವರನ್ನೆಲ್ಲಾ ತೆಗೆದು ಹಾಕಿ ಎಂದು ನಾನು 1998ರಲ್ಲೇ ಶಿಫಾರಸು ಮಾಡಿದ್ದೆ. ಈ ಜಯಂತಿ ಬೇಕಾ? ಬೇಡ್ವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭಿಕರನ್ನು ಉದ್ದೇಶಿಸಿ ಕೇಳಿದಾಗ ತಬ್ಬಿಬ್ಬಾಗುವ ಸರದಿ ಬೆಂಗಳೂರಿನ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅವರದ್ದು.
ವೇದಿಕೆಯಲ್ಲಿದ್ದ ಜಯಂತಿ ಅವರಿಗೆ ಅಲ್ಲಿ ಏನಾಗುತ್ತಿದೆ ಎಂದೇ ಅರೆ ಕ್ಷಣ ಅರಿವಾಗಲಿಲ್ಲ. ಅದು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮ. ಕಂದಾಯ ಇಲಾಖೆಯ ನೌಕರರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.
ಕಾರ್ಯಕ್ರಮವು ನಿಗದಿತ ಸಮಯಕ್ಕಿಂತ ಎರಡೂವರೆ ತಾಸು ತಡವಾಗಿ ಆರಂಭವಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್, ಕಂದಾಯ ವಿಭಾಗಗಳನ್ನು ರದ್ದುಪಡಿಸಿ ಆಯುಕ್ತಾಲಯ (ಕಮಿಷನರೇಟ್) ರಚಿಸುವಂತೆ ಒತ್ತಾಯ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ‘ಜೆ.ಎಚ್.ಪಟೇಲ್ ಅವರ ಸರ್ಕಾರದಲ್ಲಿ ನಾನು ಉಪ ಮುಖ್ಯಮಂತ್ರಿ ಆಗಿದ್ದಾಗಲೇ ಕಂದಾಯ ವಿಭಾಗಗಳನ್ನು ತೆಗೆದು ಹಾಕುವಂತೆ ಶಿಫಾರಸು ಮಾಡಿದ್ದೆ’ ಎಂದು ಮೆಲುಕು ಹಾಕಿದರು. ಇದನ್ನು ಸಭಿಕರಿಗೆ ಅರ್ಥ ಮಾಡಿಸುವ ಸಲುವಾಗಿ, ಜಯಂತಿ ಅವರ ಹೆಸರನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದರು.
ಯಾವುದೋ ಗುಂಗಿನಲ್ಲಿದ್ದ ಜಯಂತಿ ಅವರಿಗೆ ಆರಂಭದಲ್ಲಿ ಮುಖ್ಯಮಂತ್ರಿ ತಮ್ಮ ಹೆಸರನ್ನು ಏಕೆ ಪ್ರಸ್ತಾಪಿಸಿದರು ಎಂದೇ ತಿಳಿಯಲಿಲ್ಲ. ಪಕ್ಕದಲ್ಲೇ ಆಸೀನರಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಈ ಘಟನೆ ಬಗ್ಗೆ ವಿವರಿಸಿದರು. ಬಳಿಕ ಅವರ ಮುಖದಲ್ಲಿ ಕಿರುನಗೆ ಮೂಡಿತು. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.