ADVERTISEMENT

ದೇಶವೆಂದರೆ ‘ಇ–ಖಾತಾ’ ಆಗಿರುವ ಜಮೀನಲ್ಲ!

ವಾರದ ಸಂದರ್ಶನ: ಬೊಳುವಾರು ಮಹಮ್ಮದ್‌ ಕುಂಞಿ ಕಥೆಗಾರ

ಚ.ಹ.ರಘುನಾಥ
Published 25 ಡಿಸೆಂಬರ್ 2016, 7:07 IST
Last Updated 25 ಡಿಸೆಂಬರ್ 2016, 7:07 IST
ಬೊಳುವಾರು ಮಹಮ್ಮದ್‌ ಕುಂಞಿ ಕಥೆಗಾರ
ಬೊಳುವಾರು ಮಹಮ್ಮದ್‌ ಕುಂಞಿ ಕಥೆಗಾರ   

ಮಾನವೀಯತೆಯ ಅನಾವರಣವನ್ನು ತಮ್ಮೆಲ್ಲ ಕೃತಿಗಳ ಮೂಲವಾಗಿಸಿಕೊಂಡಿರುವ ಬೊಳುವಾರು ಮಹಮ್ಮದ್‌ ಕುಂಞಿ ಕನ್ನಡದ ಅನನ್ಯ ಬರಹಗಾರ. ಭಾರತೀಯ ಸಮಾಜದೊಳಗೆ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳು ಸಾಮರಸ್ಯದಿಂದ ಬದುಕುವ ಕಥೆಗಳನ್ನು ಬೊಳುವಾರರಷ್ಟು ಆಸ್ಥೆಯಿಂದ ಚಿತ್ರಿಸುವ ಮತ್ತೊಬ್ಬ ಬರಹಗಾರನನ್ನು ಕಾಣುವುದು ಕಷ್ಟ. ಅವರ ಎಲ್ಲ ಕಥೆ, ಕಾದಂಬರಿ, ನಾಟಕಗಳ ಕೇಂದ್ರದಲ್ಲಿ ಇರುವುದು ಮಾನವೀಯತೆ. ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಚೊಚ್ಚಿಲ ‘ಬಾಲಸಾಹಿತ್ಯ ಪುರಸ್ಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು, ಇದೀಗ ‘ಸ್ವಾತಂತ್ರ್ಯದ ಓಟ’ ಕೃತಿಗಾಗಿ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಪ್ರಶಸ್ತಿ ಮರುಕಳಿಕೆ’ಯ ಖುಷಿಯಲ್ಲಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

*ಸೃಜನಶೀಲ ಕೃತಿಗಳಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಎರಡು ಸಲ ಪ್ರಶಸ್ತಿ ಪಡೆದಿರುವ ಮೊದಲ ಲೇಖಕರು ನೀವು. ಆರು ವರ್ಷಗಳ ಅವಧಿಯಲ್ಲಿನ ಈ ಪ್ರಶಸ್ತಿ ಮರುಕಳಿಕೆಯ ಸಂದರ್ಭ ಹೇಗನ್ನಿಸುತ್ತದೆ? ಇನ್ನೂ ದೊಡ್ಡ ದೊಡ್ಡ ಪ್ರಶಸ್ತಿಗಳ ಆಸೆಗಳನ್ನಿಟ್ಟುಕೊಂಡಿರುವಿರಾ?
‘ಏನೆಂದು ನಾ ಹೇಳಲೀ.., ಮಾನವನಾಸೆಗೆ ಕೊನೆಯೆಲ್ಲೀ...’ ಎಂದು ಹಾಡಬೇಕನ್ನಿಸುತ್ತಿದೆ.

*‘ಸ್ವಾತಂತ್ರ್ಯದ ಓಟ’ ಆಧುನಿಕ ಭಾರತದ ಮಹಾಭಾರತ ಸ್ವರೂಪದ ಕೃತಿ. ‘ದೇಶಭಕ್ತಿ’ಯ ಚರ್ಚೆ ಚಾಲ್ತಿಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ,  ನಿಮ್ಮ ಕೃತಿಗೆ ದೊರೆತ ಮನ್ನಣೆಯನ್ನು ಹೇಗೆ ವಿಶ್ಲೇಷಿಸುವುದು?
ಬಹಳ ಇಕ್ಕಟ್ಟಿನ ಪ್ರಶ್ನೆ ಇದು. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಉತ್ತರಿಸುತ್ತಿರುವೆ. ಎ.ಟಿ.ಎಂ. ಯಂತ್ರಗಳ ಎದುರು ಸರದಿ ಸಾಲುಗಳಲ್ಲಿ ಶಾಂತವಾಗಿ ನಿಂತಿರುವ ಜನರನ್ನು, ಅಪ್ಪಟ ದೇಶಪ್ರೇಮಿಗಳ ಪ್ರತೀಕಗಳೆಂದು ಉದಾಹರಿಸುತ್ತಾ ನಾವೆಲ್ಲ ಹೆಮ್ಮೆ ಪಡುತ್ತಿರುವ ದಿನಗಳು ಇವು. ‘ಈ ಜಗತ್ತಿನಲ್ಲಿ ‘ದೇಶಪ್ರೇಮ’ವೆಂಬ ಕಲ್ಪನೆ ಇಲ್ಲದೇ ಹೋಗಿದ್ದರೆ, ಯುದ್ಧಗಳೇ ಅಗುತ್ತಿರಲಿಲ್ಲ’. ಈ ಮಾತು ಕದ್ದ ಮಾಲು.  ಪ್ರಸ್ತುತ ಚಾಲ್ತಿಯಲ್ಲಿರುವ ದೇಶಪ್ರೇಮದ ವಿವಿಧ ಸ್ವರೂಪಗಳನ್ನು ಮುಂದೊಂದು ದಿನ ಕಾಣಲಿದ್ದೇನೆ ಎಂಬ ಆತಂಕದಿಂದಲೇ ಕಣ್ಣು ಮುಚ್ಚಿರುವ ಲಿಯೋ ಟಾಲ್‌ಸ್ಟಾಯ್ ಎಂಬ ಮಹಾನುಭಾವ ಹೇಳಿರುವ ಮಾತಿದು.

‘ನೀನು ಹುಟ್ಟಿರುವ ದೇಶವನ್ನು ನಿರ್ವಂಚನೆಯಿಂದ ಪ್ರೀತಿಸು’ ಮತ್ತು ‘ನಿನ್ನ ನೆರೆಮನೆಯವನು ಹಸಿದಿದ್ದಾಗ ಹೊಟ್ಟೆ ತುಂಬ ತಿನ್ನದಿರು’ ಎಂದು ಸಾವಿರದೈನೂರು ವರ್ಷಗಳ ಹಿಂದೆಯೇ ಸೂಚಿಸಿದ್ದ ಪ್ರವಾದಿ ಮುಹಮ್ಮದರ ಮಾತುಗಳನ್ನು ಬೆಂಬಲಿಸುವವನು ನಾನು. ನನಗೆ ನನ್ನ ದೇಶವೆಂದರೆ, ನನ್ನ ದೇಶದ ಹೆಸರಲ್ಲಿ ‘ಇ–ಖಾತಾ’ ಆಗಿರುವ ಜಮೀನಲ್ಲ. ಗಗನಚುಂಬಿ ಕಟ್ಟಡಗಳಲ್ಲ, ಗುಡ್ಡ–ಬೆಟ್ಟ, ನದಿ ತೊರೆಗಳೂ ಅಲ್ಲ. ಅವುಗಳ ಜೊತೆಗೆ ಬದುಕುತ್ತಿರುವ ಎಲ್ಲ ಮನುಷ್ಯರು ನನಗೆ, ನನ್ನ ದೇಶ ಮತ್ತು ನನ್ನ ಜನರು. ನನ್ನ ಜನರ ಜೊತೆಗಿರುವ ಎಲ್ಲ ಪ್ರಾಣಿ, ಪಕ್ಷಿಗಳೂ ನನಗೆ ನನ್ನ ದೇಶ.

ಅವುಗಳ ನಡುವೆ ಬದುಕುವ ಹಾಲು ಕೊಡುವ ಹಸುಗಳೂ ವಿಷಕಾರುವ ಹಾವುಗಳೂ ನನಗೆ ನನ್ನ ದೇಶವೇ. ನನ್ನ ಕಾದಂಬರಿಯಲ್ಲಿ ಚರ್ಚೆಗೆ ಎತ್ತಿಕೊಂಡದ್ದೂ ಇದೇ ಸಂಗತಿಗಳನ್ನು. ಈ ಚರ್ಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಮನ್ನಣೆ ನೀಡಿ ಪ್ರಶಸ್ತಿ ನೀಡಿದೆ ಎಂದು ನಂಬಲು ಇಷ್ಟಪಡುವೆ.

*ನೀವು ‘ಒಳ್ಳೆಯತನ’ದ ಪ್ರೇಮಿ. ಆದರೆ, ಒಳಿತನ್ನೇ ಮುಖ್ಯವಾಗಿ ಬಿಂಬಿಸುವುದು ವರ್ತಮಾನದ ತಲ್ಲಣಗಳಿಗೆ ಬೆನ್ನುಹಾಕಿದಂತೆ ಎನ್ನಿಸುವುದಿಲ್ಲವೆ? 
ಕಥೆ ಹೇಳುವುದು ಎಂದರೆ ಸುಳ್ಳು ಹೇಳುವುದು ಎಂದು ನನಗೆ ನಾನೇ ಸುಳ್ಳು ಹೇಳಿಕೊಳ್ಳುತ್ತಿದ್ದೇನೆ. ‘ಸಾಹಿತ್ಯವನ್ನು ಬದುಕಿನ ಪ್ರತಿಬಿಂಬ’ ಎಂಬ ಮಾತನ್ನು ಒಪ್ಪಲು ಅದೇಕೋ ಇಷ್ಟವಾಗುತ್ತಿಲ್ಲ. ಕನಿಷ್ಠ ನನ್ನ ಬರಹಗಳನ್ನಾದರೂ ಬದುಕಿನ ಪ್ರತಿಬಿಂಬವಾಗಿಸಬೇಕು ಎಂಬ ಹಟ ನನ್ನದು. ‘ಹೀಗಿದೆ’ ಎನ್ನುವುದಕ್ಕಿಂತ ಹೀಗಿರಬೇಕು ಎಂದು ಹೇಳುವ ಆಸೆ. ಆದ್ದರಿಂದಲೇ, ನನ್ನ ಕಥೆ–ಕಾದಂಬರಿಗಳಲ್ಲಿ ಯಾರೂ ಪೂರ್ತಿ ಕೆಟ್ಟವರಾಗಿರುವುದಿಲ್ಲ. ನನ್ನ ಕಥೆಗಳ ಯಾವುದೇ ಪಾತ್ರವೂ ಬದುಕಿನಲ್ಲಿ ಸೋತು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

ಹೆಣ್ಣುಗಳಂತೂ ಯಾವುದೇ ಕಾರಣಕ್ಕೆ ಸೋಲೊಪ್ಪಿಕೊಳ್ಳುವುದಿಲ್ಲ. ಇತ್ಯಾದಿ, ಇತ್ಯಾದಿ ಸುಳ್ಳುಗಳನ್ನೇ ಮತ್ತೆ ಮತ್ತೆ ಕ್ಲೀಷೆಯಾಗುವಷ್ಟು ಬರೆಯುತ್ತಿರುವೆ. ‘ಮೀನು ಮಾರುವವನು ಹಡಗು ಕೊಳ್ಳುತ್ತಾನೆ. ಹಡಗು ಮುಳುಗಿದರೆ ಮೀನು ಮಾರುತ್ತಾನೆ’ ಎಂಬುದು ನನ್ನೆಲ್ಲಾ ಬರಹಗಳ ಟ್ಯಾಗ್‌ಲೈನ್. ಆದ್ದರಿಂದಲೇ, ‘ತಲ್ಲಣಗಳಿಗೆ, ತಲ್ಲಣಿಸದಿರು ತಾಳು ಮನವೇ’ ಎಂದು ಬೆನ್ನು ಸವರುತ್ತಿರುವೆ. ಈ ನಿಲುವು ತಲ್ಲಣಗಳಿಗೆ ಕಣ್ಣು ಮುಚ್ಚಿಕೊಳ್ಳುವುದಲ್ಲ, ಕಣ್ಣು ತೆರೆಸುವುದು ಎಂದು ನನ್ನನ್ನು ನಾನೇ ನಂಬಿಸುತ್ತಿರುವೆ. ಪೂರ್ತಿ ಒಳ್ಳೆಯವನಾಗುವುದು ಸಾಧ್ಯವಾಗದೆ ಹೋದರೂ, ಕಡಿಮೆ ಕೆಟ್ಟವನಾಗುವ ಆಸೆ ನನ್ನದು.

*ನಿಮ್ಮ ಪ್ರಕಾರ ಲೇಖಕ ಮತ್ತು ಸಮಾಜದ ನಡುವಣ ಸಂಬಂಧ ಯಾವ ಬಗೆಯದು? 
‘ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ಇಲ್ಲ’ ಎಂಬ ಮಾತು ಹಲವೆಡೆ ಚಲಾವಣೆಯಲ್ಲಿದೆ. ಆದರೆ, ಈ ಬಗೆಯ ಮಾತುಗಳು ನಿಜವೇ ಆಗಿರುತ್ತಿದ್ದರೆ, ಈಗ ಹೆಚ್ಚು ಸುದ್ದಿ ಮಾಡುತ್ತಿರುವ ಜಾಗತಿಕ ಧರ್ಮಗ್ರಂಥಗಳೆಲ್ಲ ಕಸದ ಬುಟ್ಟಿಗಳನ್ನು ಸೇರಬೇಕಾಗಿತ್ತು. ಹಾಗಾಗಿಲ್ಲ ಎಂಬ ವಾಸ್ತವ ಸತ್ಯ ಕಣ್ಣುಗಳಿಗೆ ರಾಚುತ್ತಿದೆ. ಲೇಖಕ ಮತ್ತು ಸಮಾಜದ ನಡುವಣ ಸಂಬಂಧಗಳು ಹೇಗಿರಬೇಕು ಎಂಬ ಬಗ್ಗೆ ಬೇರೆಯವರ ಮೇಲೆ ಒತ್ತಡ ಹೇರುವ ಹಕ್ಕು ನನಗಿಲ್ಲ. ನನ್ನ ಮಟ್ಟಿಗೆ ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಹಿಂದಿನ ಪ್ರಶ್ನೆಯಲ್ಲೇ ಉತ್ತರಿಸಿರುವೆ.

*ವೈಚಾರಿಕ ಅಸಹನೆ, ಅಸಹಿಷ್ಣುತೆ, ಬಾಯಿಬಾಕತನ– ಇವೆಲ್ಲ ಈಗ ಚಾಲ್ತಿಯಲ್ಲಿರುವ ಪದಗಳು. ಇವುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? 
ವೈಚಾರಿಕ ಅಸಹನೆ, ಆಸಹಿಷ್ಣುತೆ, ಬಾಯಿಬಾಕತನ ಇತ್ಯಾದಿಗಳಿಗೆ ಪ್ರತಿಕ್ರಿಯಿಸುವುದೂ, ಅದೇ ಬಗೆಯ ವೈಚಾರಿಕ ಅಸಹನೆ, ಆಸಹಿಷ್ಣುತೆ, ಬಾಯಿಬಾಕತನಗಳಾಗುತ್ತವೆ. ಆದ್ದರಿಂದ ಆ ಮಹಾಪಾಪಗಳನ್ನು ಮಾಡಲು ಒತ್ತಾಯಿಸದಿರಿ.

*ನಿಮ್ಮ ‘ಸ್ವಾತಂತ್ರ್ಯದ ಓಟ’ ಕಾದಂಬರಿಯು ತನ್ನ ಗಾತ್ರದಿಂದ ಭಯ ಹುಟ್ಟಿಸುತ್ತದೆ. ಈ ಗಾತ್ರ – ಬೃಹತ್ತಿಗೂ ಮಹತ್ತಿಗೂ ಇರಬಹುದಾದ ಸಂಬಂಧದ ಸಂಕೇತವೇ ಅಥವಾ ಬೃಹತ್ ಬರವಣಿಗೆ ಎನ್ನುವುದೂ ಒಂದು ತಂತ್ರಗಾರಿಕೆಯೇ? ದೀರ್ಘ ಬರವಣಿಗೆ ಓದುಗಸ್ನೇಹಿಯಲ್ಲ ಎನ್ನುವ ಬಗ್ಗೆ ನಿಮ್ಮ ಅನಿಸಿಕೆಯೇನು?
ನಿಮ್ಮ ಪ್ರಶ್ನೆಗಳಲ್ಲಿ ಕೊನೆಯ ಭಾಗಕ್ಕೆ ಮೊದಲು ಉತ್ತರಿಸುವೆ. ದೀರ್ಘ ಬರವಣಿಗೆ ಓದುಗಸ್ನೇಹಿಯಲ್ಲ ಎಂಬ ನಿಮ್ಮ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸಲಾರೆ. ಅದು ನಿಜವೂ ಹೌದು ಎಂಬುದು ನನ್ನ ಇತ್ತೀಚಿನ ಅನುಭವ. ಪ್ರಸ್ತುತ ಸಾವಿರ ಪುಟಗಳ ಕಾದಂಬರಿಯನ್ನು ಪ್ರಕಟವಾದ ಮೊದಲ ವಾರದಲ್ಲೇ ಖರೀದಿಸಿದ್ದ ನನ್ನ ಗ್ಯಾರಂಟಿ ಓದುಗರಲ್ಲಿ ಕೆಲವರು ಇಂದಿನವರೆಗೂ ಅದನ್ನು ಓದಲು ಆರಂಭಿಸದಿರುವುದನ್ನು ಮುಜುಗರದಿಂದ ನನಗೇ ತಿಳಿಸಿದ್ದಿದೆ.

ಸುಮಾರು ಎರಡು ಕಿಲೊ ತೂಕದ ಈ ಪುಸ್ತಕವನ್ನು ಬಸ್ಸಿನಲ್ಲಿ ಓದಲು ಒಯ್ದರೆ ಕಂಡಕ್ಟರ್ ಸಾಹೇಬರು ಲಗೇಜ್ ಚಾರ್ಜ್ ಮಾಡುತ್ತಾರೆಂದೂ, ಹಾಸಿಗೆಯಲ್ಲಿ ಎದೆ ಮೇಲಿಟ್ಟುಕೊಂಡು ಓದಿದರೆ ಎದೆನೋವು ಬರುತ್ತದೆಯೆಂದೂ ತಮ್ಮ ಉಗ್ರ ಪ್ರತಿಭಟನೆಯನ್ನು ತಮಾಷೆಯಾಗಿಯೇ ನನ್ನೆದುರು ಪ್ರದರ್ಶಿಸಿದವರೂ ಇದ್ದಾರೆ. ಶತ್ರುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವ ನನ್ನ ನಿಲುವಿಗೆ ನನ್ನದೇ ಕೃತಿಯೊಂದು ಅಡ್ಡಿಯಾದದ್ದು ನನಗೇನೂ ಸಂತಸದ ಸಂಗತಿಯಲ್ಲ. ಆದರೂ ಇಂಥ ಪ್ರತಿಭಟನೆಗಳ ನಡುವೆಯೂ, ರಾಜ್ಯದ ಪ್ರಮುಖ ಜಿಲ್ಲೆಯೊಂದನ್ನಾಳುತ್ತಿರುವ ಅತ್ಯುನ್ನತ ಅಧಿಕಾರಿಯೊಬ್ಬರು ಐದು ದಿನಗಳ ರಜಾ ಹಾಕಿ, ಕಾದಂಬರಿಯ ಓದು ಮುಗಿಸಿ, ನನ್ನೊಂದಿಗೆ ಸುಮಾರು ಎರಡು ತಾಸುಗಳ ಕಾಲ ದೂರವಾಣಿಯಲ್ಲಿ, ಹೆಚ್ಚು ಕಮ್ಮಿ ಕಾದಂಬರಿಯ ಯಾವುದೇ ಘಟನೆಯನ್ನೂ ಬಿಡದೆ ವಿಮರ್ಶಿಸುತ್ತಾ ನನ್ನನ್ನು ಮೆಚ್ಚಿಕೊಂಡು ಬೆಚ್ಚಿಬೀಳಿಸಿದ್ದೂ ಇದೆ.

ADVERTISEMENT


ಈಗ ನಿಮ್ಮ ಪ್ರಶ್ನೆಯ ಆರಂಭದಲ್ಲಿರುವ, ‘ಈ ಗಾತ್ರ – ಬೃಹತ್ತಿಗೂ ಮಹತ್ತಿಗೂ ಇರಬಹುದಾದ ಸಂಬಂಧದ ಸಂಕೇತವೇ ಅಥವಾ ಬೃಹತ್ ಬರವಣಿಗೆ ಎನ್ನುವುದೂ ಒಂದು ತಂತ್ರಗಾರಿಕೆಯೇ?’ ಎಂಬುದಕ್ಕೆ ಉತ್ತರಿಸುವೆ.

‘ಸ್ವಾತಂತ್ಯದ ಓಟ’ದ ಮಟ್ಟಿಗೆ ಹೇಳುವುದಾದರೆ, ಕಾದಂಬರಿಯಲ್ಲಿ ನೀವು ಉಲ್ಲೇಖಿಸಿರುವ ತಂತ್ರಗಾರಿಕೆ ಇರುವುದು ನಿಜ. ಇದಕ್ಕೆ ಕಾರಣರಾದವರು, ನನ್ನ ಪ್ರೀತಿಯ ಕಾರಂತ ಮತ್ತು ಕುವೆಂಪು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಎಂ.ಎ. ಸೇರುವ ಮೊದಲೇ ಓದಿದ್ದೆ. ಎಂ.ಎ.ಯಲ್ಲಿ ಅದೇ ಪಠ್ಯಪುಸ್ತಕವಾಗಿದ್ದ ಕಾರಣಕ್ಕೆ ಮತ್ತೆ ಮತ್ತೆ ಓದುತ್ತಾ ಕಂಠಪಾಠ ಮಾಡಿಕೊಂಡಿದ್ದೆ.

ಇನ್ನು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕಾರಂತರ ನಿಕಟ ಒಡನಾಟದಲ್ಲಿದ್ದ ಕಾರಣಕ್ಕೆ ಅವರಂತೆ ಬದುಕುವ ಆಸೆಯಿಟ್ಟುಕೊಂಡಿದ್ದೆ. ಕಾರಂತರ ಚಿತೆಗೆ ಬೆಂಕಿಯಿಡುವ ಕ್ಷಣದಲ್ಲಿ ಕುವೆಂಪು ಕೂಡಾ ನೆನಪಾಗಿದ್ದುದರಿಂದ, ಚಿತಾಸಾಕ್ಷಿಯಲ್ಲಿ ಇಬ್ಬರನ್ನೂ ಸೇರಿಸಿ, ನಾನೊಂದು ಪ್ರತಿಜ್ಞೆ ಮಾಡಿಬಿಟ್ಟಿದ್ದೆ.

‘ಕಾರಂತರಂತೆ ಬದುಕಲು ಸಾಧ್ಯವಾಗದೆಹೋದರೂ, ಅವರು ಬದುಕಿದ್ದಷ್ಟು ವರ್ಷಗಳ ಕಾಲವಾದರೂ ನಾನು ಬದುಕಬೇಕು ಮತ್ತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಷ್ಟು ಒಳ್ಳೆಯ ಕಾದಂಬರಿಯನ್ನು ಬರೆಯಲು ಸಾಧ್ಯವಾಗದೇಹೋದರೂ, ಆ ‘ಮದುಮಗಳ’ನ್ನು ಪುಟಗಳ ಸಂಖ್ಯೆಯಲ್ಲಾದರೂ ಮೀರಿಸಬೇಕು ಎಂಬುದು ಆ ಪ್ರತಿಜ್ಞೆ.

ಆದ್ದರಿಂದ ನನ್ನ ಕಾದಂಬರಿಯ ಗಾತ್ರದ ‘ಮಹತ್’ ಉದ್ದೇಶಪೂರ್ವಕವಾದ ತಂತ್ರ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಕಾದಂಬರಿಯಲ್ಲಿ ಯಾರಿಗಾದರೂ ‘ಬೃಹತ್’ ಜೊತೆಗೆ ‘ಮಹತ್’ ಕೂಡಾ ಕಾಣಿಸಿದರೆ, ಅದಕ್ಕೆ ನಾನು ಹೊಣೆಯಲ್ಲ ಎಂಬುದನ್ನು ಕಾರಂತ ಮತ್ತು ಕುವೆಂಪು ಮೇಲೆ ಆಣೆಯಿಟ್ಟು ಹೇಳುವೆ.

*ನೀವು ಪ್ರಕಾಶಕರೂ ಹೌದು. ಬರೆಯುವುದು ಸುಖವಾ? ಪ್ರಕಟಿಸುವುದು ಸುಖವಾ? 
ಬರೆಯುವಾಗ ಪ್ರಸವದ ಸುಖ. ಪ್ರಕಟಿಸುವಾಗ ಪ್ರಯಾಸದ ಸುಖ. ಈ ಎರಡೂ ಲಾಭದಾಯಕ ಸುಖಗಳೆ.

*ಮೂಲಭೂತವಾಗಿ ನೀವು ಕಥೆಗಾರರು. ಆದರೆ, ಈಚಿನ ವರ್ಷಗಳಲ್ಲಿ ನೀವು ತಮ್ಮ ಮೊದಲ ಪ್ರೇಮಿಯಿಂದ ದೂರವಾದಂತಿದೆ. ಯಾಕೆ? 
ಹೌದು. ಈ ತಪ್ಪು ಮುಂದೆ ತಿದ್ದಿಕೊಳ್ಳುವೆ.

*ಹೊಸತಾಗಿ ಏನನ್ನು ಬರೆಯುತ್ತಿದ್ದೀರಿ? ಏನನ್ನು ‘ಮುಟ್ಟಲು’ ಪ್ರಯತ್ನಿಸುತ್ತಿದ್ದೀರಿ?
ಗಾಂಧೀಜಿಯವರನ್ನು ಸರಿಯಾಗಿ ಓದಬೇಕೆಂಬ ಹಟದಿಂದ ಎರಡು ವರ್ಷಗಳ ಕಾಲ, ‘ಪಾಪು ಗಾಂಧಿ, ಗಾಂಧಿ ಬಾಪು...’  ಬರೆದೆ. ಪ್ರವಾದಿ ಮುಹಮ್ಮದರ ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂಬ ಕಾರಣಕ್ಕೆ ಮತ್ತೆರಡು ವರ್ಷಗಳ ಕಾಲ ‘ಓದಿರಿ’ ಬರೆದೆ. ಇದೀಗ ಅಂಬೇಡ್ಕರರನ್ನು ಅರಿಯುವ ಸಲುವಾಗಿ ‘ಮುಟ್ಟಿರಿ’ ಎನ್ನುವ ಹೆಸರಲ್ಲಿ ಸಾವಿರ ದ್ವಿಪದಿಗಳನ್ನು ಬರೆಯಲಾರಂಭಿಸಿರುವೆ. ಅದಕ್ಕಾಗಿ ಓದು ಆರಂಭಿಸಿರುವೆ. ಬಾಬಾರ ಬಗ್ಗೆ ಪ್ರಕಟವಾಗಿರುವ ಕೃತಿಗಳನ್ನೆಲ್ಲ ಅಲ್ಪಸ್ವಲ್ಪವಾದರೂ ಮುಟ್ಟಿ ನೋಡಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.