ADVERTISEMENT

ನವ್ಯಕಲೆಯ ಅಪೂರ್ವ ಚಿತ್ರಗಳ ಕಣಜಕ್ಕೆ ಬೇಕು ತಾಣ

ಡೇವಿಡ್ ಡಬ್ಲ್ಯು.ಡನ್‌ಲಪ್ (ನ್ಯೂಯಾರ್ಕ್ ಟೈಮ್ಸ್)
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ನ್ಯೂಯಾರ್ಕಿನ ಛಾಯಾಚಿತ್ರಗ್ರಾಹಕ ಡಿ. ಜೇಮ್ಸ ಡೀ ತಮಗೆ ಗೊತ್ತಿಲ್ಲದಂತೆ ನವ್ಯಚಿತ್ರ ಮತ್ತು ಪ್ರತಿಷ್ಠಾನ ಕಲೆಯ ಚಾರಿತ್ರಿಕ ಮಹತ್ವವನ್ನು ತಮ್ಮ ಛಾಯಾಚಿತ್ರಗಳ ಮೂಲಕ ದಾಖಲೀಕರಣ ಮಾಡಿದ್ದಾರೆ. 39 ವರ್ಷಗಳ ಕಾಲ ಅವರು ಕಲಾವಿದರ ಮತ್ತು ಗ್ಯಾಲರಿಗಳಲ್ಲಿರುವ ಕಲಾಕೃತಿಗಳ ಚಿತ್ರಗಳನ್ನು ತೆಗೆಯುವುದರ ಜತೆಗೆ ಅವುಗಳನ್ನು ಸಂಗ್ರಹಿಸುತ್ತಲೇ ಹೋದಾಗ ಅದು ಈ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ. ಈಗ ಅವರ ಬಳಿ ಇರುವ ವರ್ಣಪಾರದರ್ಶಿಕೆ ಮತ್ತು ಸ್ಲೈಡ್‌ಗಳ ಸಂಖ್ಯೆ ಸುಮಾರು 2,50,000. ಈ ದಾಖಲೆ ಪ್ರಮಾಣದ ಸಂಗ್ರಹವನ್ನು ಅವರೀಗ ಮಾರಾಟ ಮಾಡಲು ಮುಂದಾಗಿದ್ದಾರೆ.

35 ಮಿ.ಮೀ.ನಿಂದ ತೊಡಗಿ 8 ಇಂಚು ಉದ್ದ 10 ಇಂಚು ಅಗಲದ ವರ್ಣಚಿತ್ರ, ವರ್ಣಪಾರದರ್ಶಿಕೆ ಮತ್ತು ಸ್ಲೈಡ್‌ಗಳು ಅವರ ಸಂಗ್ರಹದಲ್ಲಿವೆ. 68ನೇ ವಯಸ್ಸಿನಲ್ಲಿ ಛಾಯಾಚಿತ್ರ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ವೃತ್ತಿ ನಿರತರಾಗಿದ್ದಾಗ ಅವರು ಕಲಾವಿದರ ಹಾಗೂ ಅವರ ಕಲಾಕೃತಿಗಳ, ಅವುಗಳ ಪ್ರದರ್ಶನ ನಡೆದ ಗ್ಯಾಲರಿಗಳ ಚಿತ್ರ ತೆಗೆಯುತ್ತಲೇ ಹೋದರು. ನ್ಯೂಯಾರ್ಕ್‌ನಲ್ಲಿ ನೆಲೆಸಿದ ಅವರು ತಮ್ಮ ಪತ್ನಿ ಜತೆ ಮಯಾಮಿಗೆ ಮುಂದಿನ ತಿಂಗಳ 24ರಂದು ತೆರಳಿ ಅಲ್ಲಿಯೇ ವಾಸ ಮಾಡಲು ನಿರ್ಧರಿಸಿದ್ದಾರೆ. ಅವರ ಜತೆ ಪತ್ನಿ ಮಾತ್ರ ಹೋಗುತ್ತಾರೆ. ಅವರ ಬಾಳಸಂಗಾತಿಯಂತೆ ಅವರ ಜತೆ ಇಷ್ಟು ವರ್ಷ ಇದ್ದ ಲಕ್ಷಾಂತರ ಛಾಯಾಚಿತ್ರಗಳು ತೆರಳುವುದಿಲ್ಲ.

`ಈ ಛಾಯಾಚಿತ್ರಗಳು ಯಾರಿಗಾದರೂ ಮಹತ್ವದ್ದು ಎಂದು ಅನಿಸಬಹುದು. ಅವರು ಇವನ್ನು ಖರೀದಿಸಬಹುದು' ಎಂದು ಆಶಾವಾದದಿಂದ ಅವರು ಹೇಳುತ್ತಾರೆ. ಆದರೆ ಅವನ್ನು ಖರೀದಿಸಲು ಮುಂದಾದ ಹಲವಾರು ಜನ ಅನಂತರ ಹಿಂದೇಟು ಹಾಕಿದ್ದಾರೆ. ಸಂಗ್ರಹವಾಗಿರುವ ಈ ಚಿತ್ರಗಳ ಬಗ್ಗೆ ಲಿಖಿತ ಮಾಹಿತಿ ಇಲ್ಲ ಎಂಬುದು ಅದನ್ನು ಕೊಳ್ಳಲು ಹೋದವರ ಆಕ್ಷೇಪ. ಚಿತ್ರದಲ್ಲಿ ಇರುವ ಕಲಾವಿದ ಯಾರು? ಅಥವಾ ಕಲಾಕೃತಿ ಯಾರದ್ದು? ಎನ್ನುವುದು ಗೊತ್ತಾಗದಿರುವುದು ಒಂದು ಸಮಸ್ಯೆ ಎಂದು ಜನ ಹೇಳುತ್ತಿದ್ದಾರೆ.

ಈ ಕಾರಣಕ್ಕೆ ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್, ಗೆಟ್ಟಿ ಇಮೇಜಸ್, ಫೆಲೆಸ್ ಲೈಬ್ರರಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿಶೇಷ ಸಂಗ್ರಹ ವಿಭಾಗ- ಈ ಸಂಸ್ಥೆಗಳ ಛಾಯಾಚಿತ್ರದ ಜತೆ ಪೂರಕ ಮಾಹಿತಿ ಇಲ್ಲದಿರುವುದು ಮತ್ತು ತಮ್ಮ ಬಳಿ ಸಂಗ್ರಹಿಸಿ ಇಡಲು ಜಾಗದ ಕೊರತೆಯ ಕಾರಣಕ್ಕೆ ಖರೀದಿಗೆ ಮುಂದಾಗಿಲ್ಲ.

ಫ್ರಾಂಕ್ ಗೆರಿ, ಜೊಯೆಲ್ ಶಾಪಿರೋ, ನಾಮ್ ಜೂನ್ - ಈ ಮುಂತಾದ ಕಲಾವಿದರ ಚಿತ್ರಗಳು ಇವರ ಸಂಗ್ರಹದಲ್ಲಿವೆ. ನವ್ಯ ಕಲೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಈ ಛಾಯಾಚಿತ್ರಗಳು ಒಳಗೊಂಡಿವೆ.
ಇವುಗಳನ್ನು ಸಂಗ್ರಹಿಸಿಡುವುದು ಜಾಗದ ಸಮಸ್ಯೆ ಮಾತ್ರವಲ್ಲ, ಹಾನಿಗೆ ಒಳಗಾಗದಂತೆ ಜೋಪಾನವಾಗಿಡುವುದು ಕೂಡ ಕ್ಲಿಷ್ಟದ ಕೆಲಸವೇ ಸೈ.

`ಗಿರಾಕಿಗಳು ನಾಲ್ಕು ವರ್ಣಪಾರದರ್ಶಿಕೆಗಳನ್ನು ಬಯಸಿದರೆ ನನ್ನ ಸಂಗ್ರಹಕ್ಕೆಂದು ಐದನೆಯದ್ದು ತೆಗೆಯುತ್ತಿದ್ದೆ. 10 ಸ್ಲೈಡ್ ಬಯಸಿದರೆ 12 ತೆಗೆಯುತ್ತಿದ್ದೆ. ಅವರು ಹೇಳಿದ್ದಷ್ಟೇ ತೆಗೆದು ಮತ್ತೆ ಅದೇ ಜಾಗಕ್ಕೆ ಹೋಗಿ ತೆಗೆಯುವುದು ಶ್ರಮದ ಮತ್ತು ವೆಚ್ಚದ ವಿಷಯ. ಅದಕ್ಕೆ ಸ್ವಲ್ಪ ಹೆಚ್ಚೇ ತೆಗೆದು ಪೆಟ್ಟಿಗೆಯೊಂದರಲ್ಲಿ ಜೋಪಾನವಾಗಿ ಇರಿಸುತ್ತಿದ್ದೆ' ಎಂದು ಡೀ ಹೇಳುತ್ತಾರೆ.

ಈ ರೀತಿ ಛಾಯಾಚಿತ್ರ ಸಂಗ್ರಹಿಸಿ ಇಟ್ಟ ಪೆಟ್ಟಿಗೆಗಳ ಸಂಖ್ಯೆ ಹೆಚ್ಚುತ್ತಾ ಹೋಗಿ ಕೊನೆಗೆ 65 ಪೆಟ್ಟಿಗೆಗಳು ಅವರ ಮನೆಯಲ್ಲಿ ಜಾಗ ಪಡೆದವು. ನ್ಯೂಯಾರ್ಕ್ ಸ್ಟುಡಿಯೊ ಸ್ಕೂಲ್ ಆಫ್ ಡ್ರಾಯಿಂಗ್‌ನ ಡೀನ್ ಗ್ರಾಮ್ ನಿಕಸನ್ ಅವರು ಡೀ ಬಗ್ಗೆ ಸಾಕಷ್ಟು ಬಲ್ಲರು.

`ಡೀ 70, 80, 90ರ ದಶಕಗಳಲ್ಲಿ ಹಲವಾರು ಹಿರಿಯ ಕಲಾವಿದರ ಜತೆ ಕೆಲಸ ಮಾಡಿದ್ದಾರೆ. ಅವರು ಕಲಾವಿದರ ಮತ್ತು ಅವರ ಕಲಾಕೃತಿಗಳ ಚಿತ್ರ ತೆಗೆದು ಉತ್ತಮ ದಾಖಲೀಕರಣದ ಕೆಲಸ ಮಾಡಿದ್ದಾರೆ. ಇದು ಶ್ಲಾಘನೀಯ' ಎಂದು ಹೇಳುತ್ತಾರೆ.

`ವರ್ಣ ಛಾಯಾಚಿತ್ರಗಳ ವಿಷಯಕ್ಕೆ ಬಂದರೆ ಅವರು ಒಳ್ಳೆಯ ಛಾಯಾಚಿತ್ರಕಾರರು. ಕಲಾವಿದರಿಗೆ ಅವರ ಚಿತ್ರಕಲೆಯಲ್ಲಿನ ಬಣ್ಣ ಪರಿಣಾಮಕಾರಿಯಾಗಿ ಛಾಯಾಚಿತ್ರಗಳಲ್ಲಿ ಮೂಡಿಬರುವುದು ಬಹಳ ಮುಖ್ಯ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ' ಎಂದು ಅವರು ಹೇಳುತ್ತಾರೆ. ಗ್ರಾಮ್ ಕೂಡ ಕಲಾವಿದರು.

`ಅವರು ಶಿಲ್ಪಗಳ ಚಿತ್ರ ತೆಗೆಯುವುದರಲ್ಲಿ ತಮ್ಮದೇ ವೈಶಿಷ್ಟ್ಯ ಹೊಂದಿದ್ದಾರೆ. ನನ್ನ ಛಾಯಾಚಿತ್ರ ನೋಡಿದ ಕಲಾಪ್ರೇಮಿ ಎಷ್ಟೊಂದು ಸುಂದರ ಛಾಯಾಚಿತ್ರ ಎಂದು ಹೇಳಬೇಕೆಂದು ನಾನು ಬಯಸುವುದಿಲ್ಲ. ಬದಲಾಗಿ ಎಷ್ಟೊಂದು ಸುಂದರ ಶಿಲ್ಪ ಎಂದು ಹೇಳಬೇಕೆಂದು ಬಯಸುತ್ತಿದ್ದೆ. ಇದು ನನ್ನ ಗುರಿ ಕೂಡ ಆಗಿತ್ತು ಎಂದು ಡೀ ಹೇಳುತ್ತಿದ್ದರು' ಎಂದು ಅವರು ಹೇಳುತ್ತಾರೆ.

ಡೀ, ಒಹಿಯೋ ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಛಾಯಾಚಿತ್ರಕಾರರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಬ್ರೂಕ್ ಅಲೆಕ್ಸಾಂಡರ್, ಮೇರಿ ಬೂನ್, ಪಾಲ್ ಕೂಪರ್ - ಈ ಮುಂತಾದ ಕಲಾವಿದರ, ಗ್ಯಾಲರಿ ಮಾಲೀಕರ ಜತೆ ಅವರು ಕೆಲಸ ಮಾಡಿದ್ದಾರೆ.

1982ರಲ್ಲಿ ಅವರು ಐದು ಮಹಡಿಯ ಕಟ್ಟಡ ಖರೀದಿಸಿ ಮೊದಲ ಮತ್ತು ಎರಡನೆಯ ಮಹಡಿಯಲ್ಲಿ ವಾಸ ಇರಲಾರಂಭಿಸಿದರು. ಒಂದು ದಶಕದ ಬಳಿಕ ಕಲಾ ಮಾರುಕಟ್ಟೆ ಕುಸಿದು ಹೋಯಿತು. ಗ್ಯಾಲರಿಗಳೂ ಕಲಾವಿದರ ಮಾಹಿತಿ ಸಂಗ್ರಹ ನಿಲ್ಲಿಸಿದವು. ಕ್ರಮೇಣ ಡಿಜಿಟಲ್ ಛಾಯಾಚಿತ್ರ ಕಲೆ ಕಾಲಿಟ್ಟಿತು. ಛಾಯಾಚಿತ್ರ ಜಗತ್ತಿನಲ್ಲಿ ಭಾರಿ ಬದಲಾವಣೆಗಳಾದವು.

ಡೀ ಈಗ ವಾಣಿಜ್ಯ ಕಲೆಯತ್ತ ಗಮನ ಹರಿಸದೆ ತಮಗೆ ಆಸಕ್ತಿ ಇರುವ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಮಾನವನ ದೈಹಿಕ ಸೌಂದರ್ಯ, ಅದರ ವಿವಿಧ ಆಯಾಮಗಳು, ದೇಹದ ಅಲಂಕಾರ ಇವನ್ನೆಲ್ಲಾ ವಸ್ತುವನ್ನಾಗಿಸಲು ಅವರು ನಿರ್ಧರಿಸಿದ್ದಾರೆ. `ನನ್ನಲ್ಲಿ ತಾಕತ್ತು ಇದೆ. ನನ್ನ ಬದುಕಿನ ಇನ್ನೊಂದು ಕಾರ್ಯದತ್ತ ಗಮನ ಹರಿಸುತ್ತೇನೆ' ಎಂದಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.