ADVERTISEMENT

ಪ್ರಗತಿಪಥದ ಭರವಸೆಯ ನಡಿಗೆ

ವಾರದ ಸಂದರ್ಶನ

ಎಂ.ಎಸ್.ರಾಜೇಂದ್ರಕುಮಾರ್
Published 4 ಏಪ್ರಿಲ್ 2015, 19:30 IST
Last Updated 4 ಏಪ್ರಿಲ್ 2015, 19:30 IST
ಭಾರತದಲ್ಲಿರುವ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ                                / ಚಿತ್ರ: ಎಚ್‌.ಜಿ. ಪ್ರಶಾಂತ್‌
ಭಾರತದಲ್ಲಿರುವ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ / ಚಿತ್ರ: ಎಚ್‌.ಜಿ. ಪ್ರಶಾಂತ್‌   

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕಟ್ಟಿಕೊಂಡ ಕುಶಾಗ್ರಮತಿಗಳ ಪಡೆಯಲ್ಲಿರುವ ರಿಚರ್ಡ್ ವರ್ಮಾ, ಭಾರತೀಯ ಮೂಲದವರು. ಉಭಯ ದೇಶಗಳ ಬಾಂಧವ್ಯ ಹೊಸ ಪಥಕ್ಕೆ ಹೊರಳುವ ಸಂಕ್ರಮಣ ಸನ್ನಿವೇಶದಲ್ಲಿ ಅವರು ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿದ್ದಾರೆ. ಹಾಗಾಗಿ, ಎಲ್ಲರ ಗಮನ ವರ್ಮಾ ಅವರತ್ತ ನೆಟ್ಟಿದೆ. ವರ್ಮಾ ಅವರ ಪೂರ್ವಜರ ಮೂಲ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್‌ ರಾಜ್ಯವೇ. ಒಬಾಮ–ಮೋದಿ ಅವರ ಚಾಣಾಕ್ಷ ನಡೆಯಿಂದ ಕುದುರಿರುವ ಮೈತ್ರಿಯ ಹೊಸ ಶಕೆಯನ್ನು ಜತನ ಮಾಡುವ ಜರೂರತ್ತು 47ರ ಹರೆಯದ, ಉತ್ಸಾಹಿ ವರ್ಮಾ ಅವರ ಮೇಲಿದೆ.

ಭಾರತದ ನಾಡಿಮಿಡಿತ ವನ್ನು ಅರಿಯುವ ಹಾದಿಯಲ್ಲಿ ತಮ್ಮ ಅಧಿಕಾರಾವಧಿಯ ಮೊದಲ ಮೂರು ತಿಂಗಳಲ್ಲೇ ಭಾರತದ ಉದ್ದಗಲ ಸುತ್ತಿ ಹತ್ತು ಪ್ರವಾಸಗಳನ್ನು ಮುಗಿಸಿದ್ದಾರೆ. ಮೊನ್ನೆ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ (ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ನವೀಕೃತ ಕಟ್ಟಡದ ಉದ್ಘಾಟನೆಗೆ ಬಂದಿದ್ದ ರಿಚರ್ಡ್‌ ವರ್ಮಾ, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

* ಒಬಾಮ–ಮೋದಿ ಸೌಹಾರ್ದ ಸಂಬಂಧ ಭಾರತ–ಅಮೆರಿಕ ಅಭಿವೃದ್ಧಿಗೆ ವರವಾಗಲಿದೆಯೇ?
ಸೆಪ್ಟೆಂಬರ್‌ನಲ್ಲಿ ಮೋದಿ ಅವರು ವಾಷಿಂಗ್ಟನ್‌ಗೆ ತೆರಳಿದ್ದು, ಜನವರಿಯಲ್ಲಿ ಒಬಾಮ ನವದೆಹಲಿಗೆ ಆಗಮಿಸಿದ್ದು ಅವರಿಬ್ಬರ ನಡುವಿನ ಸ್ನೇಹ–ವಿಶ್ವಾಸವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಬೆಸುಗೆ ಮತ್ತಷ್ಟು ಬಲಗೊಂಡಿದೆ. ಇಬ್ಬರೂ ನಾಯಕರು ಅಭ್ಯುದಯದ ಪಥದಲ್ಲಿ ರಾಷ್ಟ್ರಗಳನ್ನು ಕೊಂಡೊಯ್ಯಲು ನಿರ್ಧರಿ ಸಿದ್ದಾರೆ. ಗಣರಾಜ್ಯೋತ್ಸವ ಭೇಟಿಗೆ ಪೂರ್ವಭಾವಿಯಾಗಿ ರಕ್ಷಣೆ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ, ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮಾತುಕತೆ, ಒಪ್ಪಂದ ನಡೆಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೋದಿ ಅವರ ಅಮೆರಿಕ ಭೇಟಿ ನಂತರ ದ್ವಿಪಕ್ಷೀಯ ಮಾತುಕತೆಗಳು ಮೊದಲ್ಗೊಂಡವು.

ಆರೋಗ್ಯ, ವಿಜ್ಞಾನ–ತಂತ್ರಜ್ಞಾನ, ಬಾಹ್ಯಾ ಕಾಶ, ರಕ್ಷಣೆ, ಆರ್ಥಿಕತೆ, ವ್ಯಾಪಾರ ಸೇರಿದಂತೆ ಸುಮಾರು 70 ವಿವಿಧ ಕ್ಷೇತ್ರಗಳಿಗೆ ಸಂಬಂಧಿ ಸಿದಂತೆ ಸಹಭಾಗಿತ್ವದಲ್ಲಿ ಒಪ್ಪಂದ, ಕಾರ್ಯ ಯೋಜನೆಗಳ ಮಾತುಕತೆಗಳು ನಡೆದಿವೆ. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟನ್ನು 100 ಬಿಲಿಯನ್‌ ಡಾಲರ್‌ ನಿಂದ 500 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸು ವುದಾಗಿ ಅಧ್ಯಕ್ಷರು ಹೇಳಿದ್ದಾರೆ.

ಅಮೆರಿಕ ಕಂಪೆನಿ ಗಳನ್ನು ಭಾರತಕ್ಕೆ ಮತ್ತು ಭಾರತದ ಕಂಪೆನಿಗಳನ್ನು ಅಮೆರಿಕಕ್ಕೆ ಆಕರ್ಷಿಸಲು ಉದ್ದೇಶಿಸ ಲಾಗಿದೆ. ವಾಣಿಜ್ಯ ಇಲಾಖೆ ವತಿಯಿಂದ ಕಳೆದ ವಾರ ವಾಷಿಂಗ್ಟನ್‌ ನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗ ವಹಿಸಿದ್ದ ಭಾರತದ 83 ಕಂಪೆನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡು ವತ್ತ ಆಸಕ್ತಿ ತೋರಿರುವುದು ಗಮನಾರ್ಹ ಬೆಳವಣಿಗೆ. ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಅಮೆರಿಕದ ವ್ಯಾಪಾರ ವಹಿವಾಟು ಗಳು ಅಪಾರವಾಗಿ ವೃದ್ಧಿಸಲಿವೆ.

ರಾಷ್ಟ್ರೀಯ ವೈಮಾನಿಕ ಒಪ್ಪಂದ, ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಬದ್ಧತೆ ತೋರಬೇಕಿದೆ. ಬಹುತೇಕ ಕಂಪೆನಿಗಳು ಇಲ್ಲಿ ಘಟಕ ಗಳನ್ನು ತೆರೆಯಲು ಒಲವು ತೋರಿವೆ. ಅವುಗಳಿಗೆ ನ್ಯೂಕ್ಲಿಯರ್‌ ವಸ್ತುಗಳ ಪೂರೈಕೆಯ ಭರವಸೆ ನೀಡಬೇಕಿದೆ

ADVERTISEMENT

* ಭಾರತ– ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದ ಯಾವಾಗ ಕಾರ್ಯಗತಗೊಳ್ಳಲಿದೆ?
ಅಣು ಒಪ್ಪಂದ ಜಾರಿಗೆ ಸಂಬಂಧಿಸಿದಂತೆ ಕಳೆದ ವಾರ ಉಭಯ ದೇಶಗಳ ನಡುವೆ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆ. ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ತೊಡಕುಗಳಿವೆ. ಒಂದು ಸಂಗತಿ ನ್ಯೂಕ್ಲಿಯರ್‌ ಖನಿಜಗಳ (ಯುರೇನಿಯಂ, ಥೋರಿಯಂ) ಸಾಗಣೆಗೆ ಸಂಬಂಧಿ ಸಿದೆ. ಎರಡೂ ರಾಷ್ಟ್ರಗಳು ಮಾತುಕತೆ ಮೂಲಕ ತೊಡಕುಗಳಿಗೆ ಪರಿಹಾರ ಕಂಡುಕೊಂಡಿವೆ. ರಾಷ್ಟ್ರೀಯ ವೈಮಾನಿಕ ಒಪ್ಪಂದ, ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಬದ್ಧತೆಯನ್ನು ತೋರಬೇಕಿದೆ. ಬಹುತೇಕ ಕಂಪೆನಿಗಳು ಇಲ್ಲಿ ಘಟಕಗಳನ್ನು ತೆರೆಯಲು ಒಲವು ತೋರಿವೆ. ಅವುಗಳಿಗೆ ನ್ಯೂಕ್ಲಿಯರ್‌ ವಸ್ತುಗಳ ಪೂರೈಕೆಯ ಭರವಸೆ ನೀಡಬೇಕಿದೆ. ಎರಡೂ ಸರ್ಕಾರಗಳೊಂದಿಗೆ ಕೆಲಸ ಮಾಡುವ ಕುರಿತು ಕಂಪೆನಿಗಳಿಗೆ ಭರ ವಸೆ ಮೂಡಿಸಬೇಕಿದೆ. ಅಮೆರಿಕದ ನ್ಯೂಕ್ಲಿಯರ್‌ ಕಂಪೆನಿಗಳು ಮತ್ತು ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದೊಂದಿ ಗಿನ ಮಾತುಕತೆಗಳು ಪೂರ್ಣ ಗೊಂಡ ನಂತರ ಅಣು ಒಪ್ಪಂದ ಕಾರ್ಯಗತವಾಗುತ್ತದೆ.
  
* ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ‘ಭಾರತದಲ್ಲೇ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಪರಿಕಲ್ಪನೆ ಸಾಕಾರಕ್ಕೆ ಅಮೆರಿಕ ಯಾವ ರೀತಿಯ ಸಹಕಾರ ನೀಡಲಿದೆ?
ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’, ‘ಕ್ಲೀನ್‌ ಇಂಡಿಯಾ’, ‘ಡಿಜಿಟಲ್‌ ಇಂಡಿಯಾ’ –ಇವೇ ಮೊದಲಾದ ಯೋಜನೆಗಳ ಯಶಸ್ವಿ ಅನುಷ್ಠಾನದ ನಿಟ್ಟಿನಲ್ಲಿ ಅಮೆರಿಕ ಕಂಪೆನಿಗಳು ಸಾಥ್‌ ನೀಡಲಿವೆ. ಭಾರತದಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಸಾಮಗ್ರಿಗಳ ತಯಾರಿಕಾ ಘಟಕ ಸ್ಥಾಪನೆಗೆ ಅಮೆರಿಕವು ಅಗತ್ಯ ಬೆಂಬಲ ನೀಡಲಿದೆ. ಈ ನಿಟ್ಟಿನಲ್ಲಿ ಸಹಭಾಗಿತ್ವದಲ್ಲಿ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆಗಳನ್ನು ಕೈಗೊಳ್ಳಲು ಅಮೆರಿಕ ಆಸಕ್ತಿ ಹೊಂದಿದೆ. ಪರಿಣತಿ, ಆವಿಷ್ಕಾರ, ತಂತ್ರಜ್ಞಾನ ಎಲ್ಲ ರೀತಿಯ ಸಹಕಾರವನ್ನು ಒದಗಿಸಿ ಭಾರತದ ಯೋಜನೆಗಳ ಯಶಸ್ಸಿಗೆ ಅಮೆರಿಕ ಸಹಕಾರ ನೀಡಲಿದೆ.

* ‘ಸ್ಮಾರ್ಟ್‌ ಸಿಟಿ’, ದೊಡ್ಡ ಪ್ರಮಾಣದಲ್ಲಿ ಸೌರಶಕ್ತಿ ಬಳಕೆ ಯೋಜನೆಗಳಿಗೆ ಅಮೆರಿಕ ಕೈಜೋಡಿಸಲಿದೆಯೇ?
ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳ ಗರಿಷ್ಠ ಬಳಕೆ ಕುರಿತ ಭಾರತದ ಒಪ್ಪಂದಗಳಿಗೆ ಅಮೆರಿಕ ಸಹಿ ಹಾಕಿದೆ. ಈ ಯೋಜನೆಗೆ ಅಭಿವೃದ್ಧಿ ಸಂಸ್ಥೆಗಳು, ಎಕ್ಸಿಮ್‌ ಬ್ಯಾಂಕ್‌, ವ್ಯಾಪಾರ ಅಭಿವೃದ್ಧಿ ಏಜೆನ್ಸಿ ಇತ್ಯಾದಿ ಮೂಲಗಳಿಂದ ಹಣಕಾಸು ನೆರವನ್ನು ಒದಗಿಸಲಾಗುವುದು. ಇದಕ್ಕಾಗಿ 2.5 ಬಿಲಿಯನ್‌ ಡಾಲರ್‌ ನೆರವು ನೀಡಲಾಗುತ್ತಿದೆ. ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸಂಬಂಧಿಸಿದಂತೆ ಮೂರು ನಗರಗಳ ಅಭಿವೃದ್ಧಿ ಕುರಿತು ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ. ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಆ ನಗರಕ್ಕೆ ಒದಗಿಸಬೇಕಿರುವ ತಂತ್ರಜ್ಞಾನ ಮತ್ತು ಇತರ ಅಗತ್ಯಗಳ ಕುರಿತು ಅಮೆರಿಕದ ಕಂಪೆನಿಗಳು ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸುತ್ತಿವೆ.

ಸಾರಿಗೆ, ಸಂಚಾರ ವ್ಯವಸ್ಥೆ, ನೈರ್ಮಲ್ಯ, ಮೂಲಸೌಕರ್ಯ ಅಭಿವೃದ್ಧಿ, ಸಾರ್ವಜನಿಕರ ನಿರ್ವಹಣೆ ಇತ್ಯಾದಿಗೆ ಸಂಬಂಧಿಸಿದಂತೆ ಅಮೆರಿಕದ ನಗರ ಯೋಜನೆಗಳನ್ನು ಬಳಸಿಕೊಳ್ಳಲಾಗುವುದು. ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ನಾಯಕರೊಂದಿಗೆ ಚರ್ಚಿಸಿ, ಸ್ಥಳ ಪರಿಶೀಲಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶಗಳ ಹೂಡಿಕೆ ಆಕರ್ಷಣೆಗೆ ರಾಜ್ಯಗಳು ಉತ್ಸುಕವಾಗಿವೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳ ಜಾರಿಗೆ ಆಸಕ್ತಿ ತೋರಿವೆ.

* ಪಾರಂಪರಿಕ ಮೈಸೂರಿನ ಭೇಟಿ ಬಗ್ಗೆ ಏನು ಹೇಳುತ್ತೀರಿ?
ನಮ್ಮ ಸಹೋದರಿ ರೋಮಮೂರ್ತಿ ಅವರು ಮೈಸೂರಿನ ಸೊಸೆ. ಅವರು ಇಲ್ಲಿನ ಎನ್‌ಐಇ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಿವಂಗತ ಎನ್. ನರಸಿಂಹಮೂರ್ತಿ ಅವರ ಪುತ್ರ ಬಾಲಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಈ ಊರಿನೊಂದಿಗೆ ಬೀಗತನ ಇದೆ. ಇಲ್ಲಿಗೆ ಬಂದಿದ್ದರಿಂದ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಲಭಿಸಿತು. ನಮ್ಮ ಕುಟುಂಬದವರು ಮೂಲತಃ ಗುಜರಾತಿನವರು. ನಮ್ಮ ತಂದೆಯವರು ಅಮೆರಿಕ ದಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಮೈಸೂರು, ಭಾರತದ ಶೈಕ್ಷಣಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ವಿವಿಧ ಕ್ಷೇತ್ರಗಳಿಗೆ ಪಾರಂಗತರನ್ನು ಕೊಡುಗೆಯಾಗಿ ನೀಡಿರುವ ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಮೈಸೂರಿನ ಮಸಾಲೆ ದೋಸೆ ನನಗೆ ತುಂಬಾ ಇಷ್ಟವಾಯಿತು. ಪಾರಂಪರಿಕ ಕಟ್ಟಡಗಳು, ಉದ್ಯಾನಗಳನ್ನು ಹೊಂದಿರುವ ಸುಂದರ ನಗರವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.