ADVERTISEMENT

ಬಂಗಾಳದ ಸಾಕ್ಷಿಪ್ರಜ್ಞೆ

ಅಗ್ರಹಾರ ಕೃಷ್ಣಮೂರ್ತಿ
Published 24 ಡಿಸೆಂಬರ್ 2016, 19:30 IST
Last Updated 24 ಡಿಸೆಂಬರ್ 2016, 19:30 IST
ಶಂಖ ಘೋಷ್
ಶಂಖ ಘೋಷ್   

ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ಒಂದು ಐತಿಹಾಸಿಕ ಕಾರಣಕ್ಕಾಗಿ ಮುಖ್ಯವೆನಿಸುತ್ತದೆ. ಅದನ್ನು ಮೊದಲು ತಿಳಿಸಿಬಿಡುತ್ತೇನೆ. ಸಾಹಿತಿಗಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನೂರಾರು ಸರ್ಕಾರಿ ಮತ್ತು ಖಾಸಗಿ ಪುರಸ್ಕಾರಗಳಿವೆಯಷ್ಟೆ. ಅವುಗಳಲ್ಲಿ ‘ಜ್ಞಾನಪೀಠ’ ಮತ್ತು ‘ಸರಸ್ವತಿ ಸಮ್ಮಾನ’ ಅತ್ಯಂತ ಪ್ರತಿಷ್ಠಿತವಾಗಿವೆ. ಎರಡು ಪ್ರತ್ಯೇಕ ಖಾಸಗಿ ಉದ್ದಿಮೆದಾರ ಕುಟುಂಬಗಳು ಇವುಗಳನ್ನು ಕೊಡಮಾಡುತ್ತಾ ಬಂದಿವೆ.

ಇವೆರಡರ ನಡುವೆ ಒಂದು ಅಲಿಖಿತ ಅಥವಾ ಅಗೋಚರ ನಿಯಮ ಜಾರಿಯಲ್ಲಿತ್ತು. ‘ಸರಸ್ವತಿ ಸಮ್ಮಾನ’ 1991ರಿಂದ ಪ್ರಾರಂಭವಾದರೂ ತಾನು ಕೊಡಮಾಡುವ ಬಹುಮಾನದ ನಗದು ಮೊತ್ತವನ್ನು ಹೆಚ್ಚುಮಾಡಿ ಒಂದು ಬಗೆಯ ಪೈಪೋಟಿಯನ್ನೇ ಹುಟ್ಟುಹಾಕಿತು. ಅದಕ್ಕೆ ಸರಿಸಾಟಿಯೋ ಎಂಬಂತೆ ಜ್ಞಾನಪೀಠವೂ ನಗದು ಮೊತ್ತವನ್ನು ಹೆಚ್ಚಿಸುತ್ತಾ ಬಂದು ಇದೀಗ ಅದು ಹನ್ನೊಂದು ಲಕ್ಷಗಳಿಗೆ ಮುಟ್ಟಿದೆ.

ಸಾಮಾನ್ಯವಾಗಿ ಬಡವರ್ಗವೇ ಆದ ಸಾಹಿತಿಗಳಿಗೆ ಇದೊಂದು ಭಾರೀ ರಖಮೇ ಸರಿ! ಈ ದುಡ್ಡಿನ ವಿಚಾರ ಹೇಗಾದರೂ ಇರಲಿ, ಮೇಲೆ ತಿಳಿಸಿದ ಅಲಿಖಿತ ಅಥವಾ ಅಗೋಚರ ನಿಯಮ ಕಾಕತಾಳೀಯವೆಂಬಂತೆ ವರ್ತಿಸುತ್ತಿತ್ತು. ಆ ಪ್ರಶಸ್ತಿ ಬಂದ ಲೇಖಕರಿಗೆ ಈ ಸಮ್ಮಾನ ಬರುತ್ತಿರಲಿಲ್ಲ, ಇದು ಬಂದವರಿಗೆ ಅದು ಸಿಕ್ಕುತ್ತಿರಲಿಲ್ಲ! 

ADVERTISEMENT

ನಮ್ಮ ದೇಶಭಾಷೆಗಳಲ್ಲಿ ಇವೆರಡೂ ಪುರಸ್ಕಾರಗಳಿಗೆ ಭಾಜನರಾಗಬಲ್ಲಂಥ ನೂರಾರು ಲೇಖಕರಿದ್ದರು ಮತ್ತು ಇದ್ದಾರೆ. ಇಂಥದ್ದೊಂದು ಸ್ವಶಾಪವನ್ನು ಹೇರಿಕೊಂಡಿದ್ದ ಜ್ಞಾನಪೀಠ ಮೊಟ್ಟಮೊದಲ ಬಾರಿಗೆ ಈಗಾಗಲೆ ‘ಸರಸ್ವತಿ ಸಮ್ಮಾನಿತ’ರಾಗಿರುವ ಶಂಖ ಘೋಷರಿಗೆ ನೀಡಿ ಶಾಪಮುಕ್ತಿ ಪಡೆದು ತನ್ನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಈ ಕಾರಣಕ್ಕೆ ಇದನ್ನು ನಾನು ಐತಿಹಾಸಿಕ ಎಂದದ್ದು. ‘ಸರಸ್ವತಿ ಸಮ್ಮಾನ’ ನೀಡುವ ಬಿರ್ಲಾ ಮನೆತನವೂ ಈ ಮಾದರಿಯನ್ನು ಅನುಸರಿಸುತ್ತದೆಂಬ ಆಶಯವನ್ನಿಟ್ಟುಕೊಳ್ಳಬಹುದು. ಕಾದು ನೋಡೋಣ!

ಶಂಖ ಘೋಷ್ (1932) ಬಂಗಾಳಿಗರ ಸಾಕ್ಷಿಪ್ರಜ್ಞೆಯಂತಿರುವ ಪ್ರಖ್ಯಾತ ಕವಿ, ವಿಮರ್ಶಕರು. ದೇಶದಲ್ಲಿ ಏನೇ ಆದರೂ ಬಂಗಾಳಿ ಜನ ಅವರ ಕಡೆಗೆ ನೋಡುತ್ತಾರೆ, ಅವರ ಪ್ರತಿಕ್ರಿಯೆಗೆ, ಮಾತಿಗೆ ಕಾಯುತ್ತಾರೆ. ಆಧುನಿಕ ಬಂಗಾಳದಲ್ಲಿ ಇಬ್ಬರು ಸಾಹಿತಿಗಳು ಸಾರ್ವಜನಿಕ ಬುದ್ಧಿಜೀವಿಗಳಾಗಿ ಪ್ರಖ್ಯಾತರು. ಒಬ್ಬರು ಮಹಾಶ್ವೇತಾ ದೇವಿ, ಇನ್ನೊಬ್ಬರು ಶಂಖ ಘೋಷ್. ಅದು ಬಾಬ್ರಿಯಾಗಿರಲಿ, ಗೋಧ್ರಾ ಆಗಿರಲಿ, ನಂದಿಗ್ರಾಮವಾಗಿರಲಿ ಶಂಖ ಘೋಷ್ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಷ್ಟೇ ಅಲ್ಲ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಾರೆ. 

ಅವರಿಗೆ ‘ಸರಸ್ವತಿ ಸಮ್ಮಾನ’ ಬಂದಾಗ (1998) ಅದನ್ನು ಸ್ವೀಕರಿಸಲು ಅವರು ಹೋಗಲಿಲ್ಲ. ಗೋಧ್ರಾ ಘಟನೆಗೆ ಗುಜರಾತ್ ಸರ್ಕಾರ ಕಣ್ಣುಮುಚ್ಚಿಕೊಂಡಿತ್ತು. ಆದ್ದರಿಂದ ಆ ಸರ್ಕಾರದ ರಾಜಕೀಯ ಪಕ್ಷದ ನೇತಾರರಾದ ಪ್ರಧಾನಿ ವಾಜಪೇಯಿಯವರ ಕೈಗಳಿಂದ ಸಮ್ಮಾನವನ್ನು ಸ್ವೀಕರಿಸಲಾರೆ ಎಂದು ತಮ್ಮ ಕಾರಣವನ್ನು ಪತ್ರದ ಮೂಲಕ ಬರೆದು ತಿಳಿಸಿದರು. ಬಿರ್ಲಾ ಪ್ರತಿಷ್ಠಾನ ಕೊಟ್ಟ ಐದು ಲಕ್ಷ ರೂಪಾಯಿಗಳನ್ನು ಬಂಗ್ಲಾ ಸಾಹಿತ್ಯ ಪರಿಷತ್ತಿಗೆ ಕೊಟ್ಟುಬಿಟ್ಟರು.

ಈಗ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ಮೇಲೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಅವರ ಮೌನವನ್ನು ಬಂಗಾಳದಲ್ಲಿ ಕೆಲವರು ಈ ಬಾರಿಯ ನೊಬೆಲ್‌ ಘೋಷಣೆಗೆ ಬಾಬ್ ಡಿಲಾನ್‌ನ ಪ್ರಾರಂಭಿಕ ಮೌನ ಪ್ರತಿಕ್ರಿಯೆಗೆ ಹೋಲಿಸುತ್ತಿದ್ದಾರೆ. ಆದರೆ ಶಂಖ ಈಗಲೂ ‘ಸರಸ್ವತಿ ಸಮ್ಮಾನ’ದ ಸಂದರ್ಭವನ್ನೇ ಚಿಂತಿಸುತ್ತಿರಬಹುದು.

ಅವರು ತಮ್ಮ ಸಹ ಲೇಖಕರ ಬಳಿ ಮಾತಾಡುವಾಗ ತಮ್ಮ ಭಾಷೆಯ ಪ್ರತಿಭಾವಂತ ಲೇಖಕರಾದ ಶಕ್ತಿ ಚಟ್ಟೋಪಾಧ್ಯಾಯ (1933- 1995) ಮತ್ತು ಜೀಬನಾನಂದ ದಾಸ್ (1899-1954) ಅವರುಗಳಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂಬ ವಿನಯವನ್ನು ಮೆರೆದಿದ್ದಾರೆ.  ನಮ್ಮ ಗಿರೀಶ್ ಕಾರ್ನಾಡ್ ತಮಗೆ ಪ್ರಶಸ್ತಿ ಬಂದಾಗ ಲಂಕೇಶ್ ಮತ್ತು ಕಂಬಾರರಿಗೆ ಬರಬೇಕಿತ್ತು ಎಂಬ ಮಾತಾಡಿದ್ದು ನೆನಪಾಗುತ್ತಿದೆ.

ಶಂಖ ಘೋಷರ ಇಡೀ ಕಾವ್ಯವನ್ನು ಎರಡು ಭಾಗವಾಗಿ ನೋಡಬಹುದೆಂದು ಅವರ ಕಾವ್ಯವನ್ನು ಚೆನ್ನಾಗಿ ಮತ್ತು ಇಡಿಯಾಗಿ ಬಲ್ಲವರು ಹೇಳುತ್ತಾರೆ. ಅತ್ಯಂತ ಸೊಗಸಾದ, ಲಾಲಿತ್ಯಪೂರ್ಣ ಪ್ರೇಮ ಕವಿತೆಗಳ ಒಂದು ಭಾಗ, ಮತ್ತೊಂದು ಭಾಗ ಪ್ರತಿಭಟನೆಯ ಕವಿತೆಗಳು. ಇಡೀ ಬಂಗಾಳೀ ಪರಿವಾರಕ್ಕೆ ಇದು ಇಮ್ಮಡಿ ಸಂತೋಷದ ಗಳಿಗೆಯಾಗಿರುವುದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಶಂಖ ಘೋಷ್ ಎಲ್ಲ ವರ್ಗದ, ಭಿನ್ನ ವಿಚಾರಧಾರೆಯುಳ್ಳ ಎಲ್ಲ ಗುಂಪಿನ ಲೇಖಕರಿಗೂ ಪ್ರಿಯರಾದ ವ್ಯಕ್ತಿ. 

ವ್ಯವಸ್ಥೆಯ ಕಟ್ಟಾ ವಿರೋಧಿ ಕವಿ. ಅಲ್ಲದೆ ಇಪ್ಪತ್ತು ವರ್ಷಗಳ ಬಳಿಕ ಇವರ ಮೂಲಕ ಬಂಗಾಳಿ ಭಾಷೆ ಈ ಪುರಸ್ಕಾರ ಪಡೆಯುತ್ತಿರುವುದು. ಅವರು ಎಷ್ಟು ಮಹತ್ವದ ಕವಿಯೋ ಅಷ್ಟೇ ಮಹತ್ವದ ಠ್ಯಾಗೋರ್ ಪಂಡಿತ. ರವೀಂದ್ರನಾಥ ಠ್ಯಾಗೋರರನ್ನು ತಲಸ್ಪರ್ಶಿ ಅಧ್ಯಯನ ಮಾಡಿ ಅವರನ್ನು ಮರು ಓದಿಗೆ ಮತ್ತು ಮರುಶೋಧನೆಗೆ ತೆರೆದಿಟ್ಟವರು ಶಂಖ ಘೋಷ್.

ಇವರು 1950ರಲ್ಲಿ ಪ್ರಕಟಿಸಿದ ‘ದಿನಗೂಲಿ ರಾತಗೂಲಿ’ ಎಂಬ ಕೃತಿ ಬಂಗಾಳಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ಆನಂತರ ‘ಆದಿಮ್ ಲತಾ ಗುಲ್ ಮೊಮೊಯ್’, ‘ಬಾಬರೇರ್ ಪ್ರಾರ್ಥನಾ’, ‘ನಿಹಿತೋಪಟಲ್ ಛಾಯಾ’, ‘ಮೂರ್ಖ ಬರೋ ಸಾಮಾಜಿಕ್ ನಾಯ್’, ‘ಕವೀರ್ ಅಭಿಪ್ರಾಯ್’, ‘ಮುಖ್ ದೇಖೆ ಜಯ ವಿಜ್ಞಾಪನೆ’, ‘ಓಕಾಂಪೋರ್ ರವೀಂದ್ರನಾಥ್’ ಮುಂತಾದ ಹಲವಾರು ಮೌಲಿಕ ಕೃತಿಗಳನ್ನು ರಚಿಸಿ ಬಂಗಾಳಿ ಸಾಹಿತ್ಯವನ್ನು ಉಜ್ವಲಗೊಳಿಸಿದ್ದಾರೆ.

ಈಗಿನ ಬಾಂಗ್ಲಾದೇಶದ ಚಾಂದಪುರದಲ್ಲಿ ಜನಿಸಿದ ಶಂಖ ಘೋಷ್ ಕಲ್ಕತ್ತೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಧ್ಯಾಪಕರಾದವರು. ನರಸಿಂಗದಾಸ್ ಪುರಸ್ಕಾರ (1977), ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1977), ರವೀಂದ್ರ ಪುರಸ್ಕಾರ್ (1989), ಸರಸ್ವತಿ ಸಮ್ಮಾನ್, ಭಾರತ ಸರ್ಕಾರದ ಪದ್ಮಭೂಷಣ (2011) ಮುಂತಾದ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ನಾಲ್ಕೈದು ಬಾರಿ ಅವರೊಡನೆ ಒಡನಾಡಿದ ನೆನಪುಗಳೊಡನೆ ಕನ್ನಡ ಓದುಗರ ಪರವಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.