1927ರಲ್ಲಿ ಅಸ್ತಿತ್ವಕ್ಕೆ ಬಂದು, ಉಚ್ಛ್ರಾಯ ಸ್ಥಿತಿಯನ್ನು ತಲುಪಿ, ಮಹಾತ್ಮ ಗಾಂಧಿ ಅವರನ್ನು ತನ್ನತ್ತ ಸೆಳೆದಿದ್ದ ಬದನವಾಳು ನೂಲು ವಸ್ತ್ರಾಲಯ, ಇಂದು ತನ್ನೆಲ್ಲ ಪ್ರಭಾವಳಿಯನ್ನು ಕಳಚಿಕೊಂಡು ನಿಸ್ತೇಜ ಅಸ್ಥಿಪಂಜರದಂತೆ ನಿಂತಿದೆ. ಇಂತಹ ಅಸ್ಥಿರ ತಾಣದ ಮುರುಕಲು ಕಟ್ಟಡದಲ್ಲಿ ಗೆಳೆಯರೊಂದಿಗೆ ತಳವೂರಿ ಸುಸ್ಥಿರ ಬದುಕನ್ನು ಕನಸುತ್ತಿರುವ ಹಿರಿಯ ರಂಗಕರ್ಮಿ ಪ್ರಸನ್ನ ಅವರು, ‘ಪ್ರಜಾವಾಣಿ’ ಜತೆ ತಾವು ನಿರ್ದೇಶಿಸ ಹೊರಟಿರುವ ಜನಾಂದೋಲನದ ದಿಕ್ಕು–ದೆಸೆಯ ಕುರಿತು ಮಾತನಾಡಿದ್ದಾರೆ.
‘ಯಾವುದೇ ಬದಲಾವಣೆ ಆಗಬೇಕಾದರೆ ಚಾರಿತ್ರಿಕ ಸಂದರ್ಭ ಕೂಡಿಬರಬೇಕು. ಆ ಸಂದರ್ಭ ಇದೀಗ ಕೂಡಿ ಬಂದಿದೆ ಎನ್ನಿಸುತ್ತಿದೆ. ಮುಂದಿನ ಕೆಲ ವರ್ಷಗಳು ‘ಚಳವಳಿಯ ವರ್ಷ’ಗಳಾಗಿ, ಜನಾಂದೋಲನಗಳು ಮೇಲೇಳುವ ಸೂಚನೆಗಳು ಕಾಣುತ್ತಿವೆ’ ಎಂಬ ಆಶಾಭಾವನೆ ಇಟ್ಟುಕೊಂಡಿರುವ ಪ್ರಸನ್ನ ಅವರ ಮಾತು ಇಲ್ಲಿದೆ:
* ಕರ್ಮಭೂಮಿ ಹೆಗ್ಗೋಡು ಬಿಟ್ಟು ಬಂದಿದ್ದೀರಿ. ಬದನವಾಳು ವಾಸ್ತವ್ಯದ ಅನುಭವ ಹೇಗಿದೆ?
ಹೆಚ್ಚು–ಕಡಿಮೆ 20 ದಿವಸ ಆಯ್ತು. ಆರೇಳು ಜನ ಸದ್ದಿಲ್ಲದೆ ಬಂದು ಇಲ್ಲಿ ನಮ್ಮ ಪಾಡಿಗೆ ತಳವೂರಿದ್ದೆವು. ಗ್ರಾಮಕ್ಕೂ ಹೋಗಲಿಲ್ಲ. ಸುದ್ದಿ ಹರಡಿತು. ಒಂದೆರಡು ದಿನಗಳ ನಂತರ ಊರಿನ ಜನ ಬಂದು ವಿಚಾರಿಸಿದರು. ಅವರಿಗೆ ನಮ್ಮ ಉದ್ದೇಶ ತಿಳಿಸಿದೆವು. ‘ಈ ರೀತಿ ಇದು ಮುರುಕಲು ಮನೆಯಾಗಿರೋದು ಸರಿಯಲ್ಲ, ಇದು ಸುಸ್ಥಿರವಾಗಿ ಇರಬೇಕಿತ್ತು. ಇದರ ಒಳಗೆ ನಡೆಯುವ ಎಲ್ಲ ಗ್ರಾಮೀಣ ಉದ್ಯಮಗಳು ಸುಸ್ಥಿರವಾಗಿರಬೇಕಿತ್ತು. ಇದರ ಕಡೆಗೆ ಗ್ರಾಮಸ್ಥರ ಗಮನ ಸೆಳೆಯಬೇಕಿತ್ತು. ಹಾಗಾಗಿ, ತಳವೂರಿದ್ದೀವಿ. ಇದೊಂದು ರೀತಿಯಲ್ಲಿ ತಳವೂರುವ ಚಳವಳಿ’ ಎಂದು ವಿವರಿಸಿದೆವು. ಉದ್ದೇಶ ಗೊತ್ತಾದ ತಕ್ಷಣ ಅವರೇ ಬಂದು ಊಟ, ತಿಂಡಿ, ಹಣ್ಣು–ಹಂಪಲು ಕೊಡೋಕೆ ಶುರು ಮಾಡಿದ್ರು. ಸಹಾಯ ಮಾಡಲು ಮುಂದಾದ್ರು. ಇದು ಗ್ರಾಮದಿಂದ ಗ್ರಾಮಕ್ಕೆ ಹರಡಿ, ದೂರದೂರಿನಿಂದ ಬಂದು ವಿಚಾರಿಸಿಕೊಳ್ಳುತ್ತಿದ್ದಾರೆ.
* ಬದನವಾಳು ಕೇಂದ್ರವನ್ನು ಏಕೆ ಆಯ್ಕೆ ಮಾಡಿಕೊಂಡಿರಿ? ಈ ಭಾಗದ ಜನ ನಿಮ್ಮ ಚಳವಳಿಗೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಭರವಸೆ ಇದೆಯೇ?
ಬದನವಾಳು ಕೇವಲ ಒಂದು ಖಾದಿ ಕೇಂದ್ರವಲ್ಲ. ಇದು ಸ್ವಾತಂತ್ರ್ಯಪೂರ್ವದಲ್ಲಿ ಇಡೀ ಮೈಸೂರು ಸಂಸ್ಥಾನದ ಖಾದಿ ಮತ್ತು ಗ್ರಾಮೋದ್ಯೋಗದ ಕೇಂದ್ರವಾಗಿತ್ತು. ಇಲ್ಲಿ ಕೆಲಸ ಮಾಡಿದೋರು ಬರೇ ಬದನವಾಳು ಗ್ರಾಮದವರಲ್ಲ. ದೂರದೂರಿನ ಹಲವರು ಇಲ್ಲಿ ಕೆಲಸ ಮಾಡಿದ್ದಾರೆ. ಯಾರ್‍್ಯಾರದೋ ಹೆಸರು ಹೇಳುತ್ತಾರೆ. ಹಟ ಹಿಡಿದು, ತಾಂತ್ರಿಕತೆಯನ್ನು ಜಯಿಸಿ, ಶಿಸ್ತಿನಿಂದ ಈ ಕೇಂದ್ರವನ್ನು ಕಟ್ಟಿ ಬೆಳೆಸಿದವರು ಶಿವಮೊಗ್ಗದ ಕಡೆಯ ರಾಜಾರಾಮ್ ಅಯ್ಯಂಗಾರ್. ನಾವೀಗ ಕುಳಿತಿರುವ ಜಾಗ ಹಿಂದೆ ಕಾಗದ ಘಟಕವಾಗಿತ್ತು. ಈ ಘಟಕಕ್ಕೆ ರೂಪು ಕೊಟ್ಟವರು ಕೇಶವಮೂರ್ತಿ ಎಂಬುವವರು. ಇದನ್ನೆಲ್ಲ ಹೇಳಿದವರು ನಮ್ಮನ್ನು ಭೇಟಿ ಮಾಡಿದ ಜನರು. ಅವರ ನೆನಪು ಆಲದ ಮರದ ಬೇರಿನಂತೆ ವಿಸ್ತಾರವಾಗಿದೆ. ಹಾಗಾಗಿ, ಇದು ಒಂದು ರೀತಿಯಲ್ಲಿ ‘ಕರ್ನಾಟಕದ ನೆನಪಿನ ಕೇಂದ್ರ’. ಆ ನೆನಪನ್ನು ಜಾಗೃತಗೊಳಿಸುವುದು ನಮ್ಮ ಉದ್ದೇಶ. ನನಗೆ ಇನ್ನೂ ಆಸೆ ಇದೆ. ನಾನೊಬ್ಬ ಆಶಾವಾದಿ. ಈ ನೆನಪನ್ನು ಜಾಗೃತಗೊಳಿಸಿದರೆ, ಈಗಲೂ ಜನರು ತಾವು ಮಾಡುತ್ತಿರುವ ಆಧುನಿಕತೆಯ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಅನಿಸುತ್ತದೆ.
* ಯಂತ್ರ ಎಲ್ಲವನ್ನೂ ಆಪೋಶನ ಮಾಡಿರುವ ಪ್ರಸ್ತುತ ಕಾಲಘಟ್ಟದಲ್ಲಿ ಯಂತ್ರ ಕಳಚೋ ಪರಿಕಲ್ಪನೆ ಸಾಧ್ಯವೇ? ಸಾಧುವೇ?
ಯಂತ್ರ ಕಳಚೋದು ಅಂದ್ರೆ ಅದನ್ನು ಕಿತ್ತು ಹಾಕೋದಲ್ಲ, ಒಡೆದು ಹಾಕೋದಲ್ಲ. ಮುರಿದು ಹಾಕೋದಲ್ಲ. ನಮ್ಮ ದೇಹದಿಂದ, ಆತ್ಮದಿಂದ, ಮನಸ್ಸಿನಿಂದ ಯಂತ್ರಗಳನ್ನು ಕಳಚೋದು. ಯಂತ್ರ ನಮ್ಮನ್ನು ಹಿಡಿದಿಲ್ಲ. ನಾವು ಅದನ್ನು ಹಿಡಿದಿದ್ದೇವೆ. ನಮ್ಮ ಸಂಸ್ಕೃತಿ, ಮನಸ್ಸು, ಆತ್ಮ, ಜೀವನಶೈಲಿಯನ್ನು ಯಂತ್ರದ ಕೈಲಿ ಕೊಟ್ಟುಬಿಟ್ಟಿದ್ದೇವೆ. ನಾವು ಕೈ ಬಿಟ್ಟರೆ ಸಾಕು, ಅದು ತಂತಾನೇ ಕಳಚಿ ಬೀಳುತ್ತದೆ. ಇಲ್ಲಿ ಯಂತ್ರ ಒಳ್ಳೇದೋ; ಕೆಟ್ಟದ್ದೋ ಎಂಬ ಚರ್ಚೆ ಮುಖ್ಯವಲ್ಲ. ಯಂತ್ರ ಒಳ್ಳೆಯದೇ. ಆದರೆ, ಯಂತ್ರದ ಹಿಂದಿರುವ ಶಕ್ತಿ ಎಂದರೆ ಮಾರುಕಟ್ಟೆ ಮತ್ತು ಲಾಭದ ದುರಾಸೆ. ನಮ್ಮನ್ನು ಹಾಳು ಮಾಡುತ್ತಿರೋದು ಯಂತ್ರದ ಮಹಾನ್ ತಾಂತ್ರಿಕತೆ ಅಲ್ಲ. ಅದರ ಹಿಂದೆ ಕೈಯಾಡಿಸುತ್ತಿರುವ ಬೃಹತ್ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳು, ಬಂಡವಾಳ ಶಕ್ತಿಗಳು. ಒಂದು ಯಂತ್ರಾಸುರದ ಜೀವ ಕೂಡ ಗ್ರಾಹಕ ಎಂಬ ಅಮಾಯಕ, ಮುಗ್ಧಜೀವಿಯಲ್ಲಿದೆ. ಆ ಜೀವಿ ಕೈ ಬಿಟ್ಟರೆ ಸಾಕು. ಯಂತ್ರ ಬಿದ್ದುಹೋಗುತ್ತದೆ. ಹಾಗಾಗಿ, ಯಂತ್ರ ಕಳಚೋದು ಎಂದರೆ ನಿಸರ್ಗದ ಕಡೆಗೆ ಹೋಗೋದು. ಸಹಜ ಬದುಕಿನತ್ತ ಸಾಗೋದು ಎಂದು ಅರ್ಥ.
* ಸರ್ಕಾರದ ಮುಂದೆ ಯಾವುದೇ ಬೇಡಿಕೆ ಇಡುತ್ತಿಲ್ಲ ಎಂದು ಹೇಳಿದ್ದೀರಿ? ಇದರ ಅರ್ಥ ಏನು?
ಕಳೆದ ಒಂದೂವರೆ ವರ್ಷ ದಿಂದ ಕೈಮಗ್ಗ ಸತ್ಯಾಗ್ರಹ ಮಾಡಿದಾಗ ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದ್ದೆವು. ಆದರೆ, ಅದರಿಂದ ಕಲಿತ ಪಾಠ ವೆಂದರೆ, ಎಲ್ಲ ಸರ್ಕಾರಗಳು ಬೃಹತ್ ಕೈಗಾರಿಕೆಗಳ ಜನರ ಹಿಂದೆ ಬಿದ್ದಿವೆ. ಹಾಗಾಗಿ, ನಮ್ಮ ಬೇಡಿಕೆಯನ್ನು ಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ಅನೇಕ ಸರ್ಕಾರಗಳಿಗೆ ತಾವು ಬೃಹತ್ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಬಿದ್ದಿರೋದು ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಂದಿಡುತ್ತಿದ್ದೇವೆ ಎಂದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಾವು ಹಿಂದುತ್ವದ ಪ್ರಣಾಳಿಕೆಯನ್ನು ಮುಂದಿಡುತ್ತಿದ್ದೇವೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ದುರಂತವೆಂದರೆ ಅವರು ಮುಂದಿಡುತ್ತಿರುವುದು ಅಂಬಾನಿ, ಅದಾನಿ ಅವರ ಪ್ರಣಾಳಿಕೆಯನ್ನು. ಇಂಡಸ್ಟ್ರಿಯಲ್ ಕಾರಿಡಾರ್‌ಗಳ ಮತ್ತು ಸ್ಮಾರ್ಟ್‌ಸಿಟಿಗಳ ಪ್ರಣಾಳಿಕೆ ಯನ್ನು. ಹಾಗಾಗಿ, ಈ ಹೋರಾಟದಲ್ಲಿ ಜನರ ಜತೆ ಮಾತನಾಡೋಣ, ಅರಿವಿನ ಚಳವಳಿಯನ್ನ ಮಾಡೋಣ ಎಂಬ ಕಾರಣದಿಂದ ಸರ್ಕಾರದ ಮುಂದೆ ಬೇಡಿಕೆ ಇಡದಿರಲು ನಿರ್ಧರಿಸಿದ್ದೇವೆ. ಜನರೇ ಬೇಡಿಕೆ ಇಟ್ಟಾಗ, ಒತ್ತಾಯ ಮಾಡಿದಾಗ ಸರ್ಕಾರಗಳು ಬದಲಾಗಲೇಬೇಕಾಗುತ್ತದೆ. ಆಗ ಒಳ್ಳೆಯದಾಗಬಹುದು.
* ಕೈಮಗ್ಗ ಭವಿಷ್ಯದ ಕೈಗಾರಿಕೆ ಎಂದು ಹೇಳಿದ್ದೀರಿ. ಹೇಗೆ?
ಭೂಮಿ ಬಿಸಿಯಾಗುತ್ತಿದೆ. ತೈಲ ನಿಕ್ಷೇಪ ಮುಗಿಯುತ್ತಾ ಬಂತು. ಖನಿಜ ನಿಕ್ಷೇಪ ಖಾಲಿಯಾಗುತ್ತಾ ಬಂದಿದೆ. ನಿಕ್ಷೇಪ ಹೊರತೆಗೆಯಲು ವೆಚ್ಚ ಜಾಸ್ತಿ ಆಗುತ್ತಿದೆ. ಇದರಿಂದ ಇಂಧನದ ಬೆಲೆ ಹೆಚ್ಚಾಗಿ ಹಣದ ಬಿಕ್ಕಟ್ಟು ಶುರುವಾಗುತ್ತದೆ. ಇಂತಹ ಬಿಕ್ಕಟ್ಟಿಗೆ ಯಾವ ಸಭ್ಯ ಪರಿಹಾರ ಕೊಡುತ್ತೀರಿ? ಇದಕ್ಕೆಲ್ಲ ಮುನ್ನೋಟ ಇಟ್ಟುಕೊಂಡು ಇಡೀ ಮಾನವ ಜನಾಂಗದ ಒಟ್ಟಾರೆ ಜೀವನಶೈಲಿ ಬದಲಿಸುವುದರಿಂದ ಮಾತ್ರ ಪರಿಹಾರ ಸಾಧ್ಯ. ಆಗ ಯಂತ್ರಗಳು ತಂತಾನೇ ಕುಸಿಯಲು ಆರಂಭಿಸುತ್ತವೆ. ಜೀವನಶೈಲಿ ಬದಲಾದ ಸಂದರ್ಭದಲ್ಲೂ ಕೆಲ ಯಂತ್ರಗಳು ಇರಬೇಕಾಗುತ್ತದೆ. ಆ ಅರ್ಥದಲ್ಲಿ ಅಂತಹ ಕೈಗಾರಿಕೆ ನಾಳಿನ ಕೈಗಾರಿಕೆಗಳು, ಅಂತಹ ವ್ಯವಸಾಯವೇ ನಾಳಿನ ಸುಸ್ಥಿರ ಕೃಷಿ ಪದ್ಧತಿ. ಮಾತೃಭಾಷೆಯೇ ನಾಳಿನ ಭಾಷೆ ಎಂದು ಗ್ರಹಿಸಿ, ಇವತ್ತಿನಿಂದಲೇ ಅದಕ್ಕೆ ಬೇಕಾದ ಸಂಶೋಧನೆ, ಬಂಡವಾಳ ಹೂಡಿಕೆಗೆ ಮುಂದಾಗಬೇಕು. ಆಗ ಮಾತ್ರ ನಾಳೆಗೆ ಸಿದ್ಧವಾಗಿರುತ್ತೇವೆ ಎಂಬ ಅರ್ಥದಲ್ಲಿ ಹೇಳಿದ್ದೇನೆ.
* ಮಾತೃಭಾಷೆಗೂ ಮಾರುಕಟ್ಟೆಗೂ ಸಂಬಂಧವಿದೆಯೇ? ಆ ಬಗ್ಗೆ ನಿಮ್ಮ ನಿಲುವೇನು?
ಮಾರುಕಟ್ಟೆಗೆ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಇದೆ. ಅದಕ್ಕಾಗಿ ಏಕ ಭಾಷೆ, ಏಕ ಸಂಸ್ಕೃತಿಯನ್ನು ಮಾರುಕಟ್ಟೆ ಶಕ್ತಿಗಳು ನಮ್ಮೆಲ್ಲರ ಮೇಲೆ ಬಲವಂತವಾಗಿ ಹೇರುತ್ತಿವೆ. ಅದು ಹೋದರೆ ಸಹಜವಾಗಿಯೇ ಮಾತೃಭಾಷೆ, ಜನಪದ ಸಂಸ್ಕೃತಿ ಮೇಲೆದ್ದು ಬರುತ್ತವೆ. ಇದನ್ನೇ ದೇವನೂರು ಮಹದೇವ ಅವರು ಪ್ರತಿಪಾದಿಸುತ್ತಿರುವುದು. ದೇವನೂರು ಅವರು ‘ನೀವು ಕೆಲ ಜಾತಿಯವರಿಗೆ ಮೀಸಲಾತಿ ಕೊಡದಿದ್ದರೂ ಪರವಾಗಿಲ್ಲ; ಸಮಾನ ಶಿಕ್ಷಣ ಕೊಡಿ’ ಎಂದು ಹತ್ತು ವರ್ಷಗಳ ಹಿಂದೆಯೇ ಮಹತ್ವದ ಹೇಳಿಕೆ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಸಮಾನ ಶಿಕ್ಷಣ ಸಿಕ್ಕಾಗ ದಲಿತರಿಗೆ ಸಮಾನತೆ ಸಿಕ್ಕಂತೆ; ಧೈರ್ಯವೂ ಸಿಗುತ್ತದೆ. ಆದರೆ, ಸರ್ಕಾರ ಮೀಸಲಾತಿ ಕೊಟ್ಟು ಅಧೈರ್ಯ ಮುಂದುವರಿಸುತ್ತಿದೆ. ಕೀಳರಿಮೆ ಮುಂದುವರಿಸುತ್ತಿದೆ. ಆ ಮೂಲಕ ಜಾತಿ ಪದ್ಧತಿಯನ್ನೂ ಮುಂದುವರಿಸುತ್ತಿದೆ. ಸಮಾನ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟರೆ, ಎಲ್ಲ ಜಾತಿ ಜನರು ಶ್ರೀಮಂತ, ಬಡವರೆನ್ನದೆ ಒಂದೇ ಶಾಲೆಯಲ್ಲಿ ಓದಿದಾಗ ಎಲ್ಲ ತಾರತಮ್ಯಗಳೂ ತಾನೇ ತಾನಾಗಿ ಪರಿಹಾರವಾಗುತ್ತವೆ.
* ಯಂತ್ರ ಕಳಚೋ ನಿಮ್ಮ ಆಶಯಕ್ಕೆ ಸರ್ಕಾರಿ ಯಂತ್ರ ಹೇಗೆ ಪ್ರತಿಕ್ರಿಯಿಸಿದೆ?
ನಾವು ಇಲ್ಲಿ ತಳವೂರಿರುವ ಬಗ್ಗೆ ಆರಂಭದಲ್ಲಿ ಆಡಳಿತ ಯಂತ್ರಕ್ಕೆ ಆತಂಕ ಇತ್ತು. ಪರ್ಮಿಷನ್ ಇದೆಯಾ ಎಂದು ಪ್ರಶ್ನಿಸಿದರು. ಭಿಕ್ಷುಕ ಇಂದು ಇಲ್ಲೆಲ್ಲೋ ಮಲಗಿ, ನಾಳೆ ಮತ್ತಿನ್ನೆಲ್ಲೋ ಹೋಗುತ್ತಾನೆ. ಅವನು ಪರ್ಮಿಷನ್ ತೆಗೆದುಕೊಳ್ಳುತ್ತಾನಾ? ನಾವೂ ಒಂದು ರೀತಿ ಭಿಕ್ಷುಕರೇ. ಅವರಂತೆ ಇಲ್ಲಿ ತಳವೂರಿದ್ದೇವೆ ಎಂದು ಸಮಜಾಯಿಷಿ ನೀಡಿದೆವು. ಈಗ ಅವರೂ ಸಹಕಾರ ನೀಡುತ್ತಿದ್ದಾರೆ. ಜತೆಗೆ, ವಿವಿಧ ಇಲಾಖೆಗಳ ಕೆಳಸ್ಥರದ ಅಧಿಕಾರಿಗಳಿಗೂ ಸುಸ್ಥಿರ ಬದುಕಿನ ಬಗ್ಗೆ ನಾವು ಹೇಳುತ್ತಿರುವುದು ಸರಿ ಅನಿಸುತ್ತಿದೆ. ನಮ್ಮ ಬಗ್ಗೆ ಓದಿ ಕೆಲ ಬ್ಯಾಂಕ್ ಅಧಿಕಾರಿಗಳು ಬಂದಿದ್ದರು. ತಾವು ಏನು ಮಾಡಬಹುದು ಎಂದು ಕೇಳಿದರು. ಕೆಲ ರಾಜಕೀಯ ಪಕ್ಷಗಳ ಕೆಳಹಂತದ ಕಾರ್ಯಕರ್ತರು ನಮ್ಮ ನಿಲುವನ್ನು ಗೌರವಿಸಿ, ತಮ್ಮ ಪಕ್ಷದ ಬಾವುಟವನ್ನು ಬದಿಗಿಟ್ಟು ಬೆಂಬಲ ಸೂಚಿಸಿದ್ದಾರೆ. ಹೀಗೆ ನಾನಾ ಕ್ಷೇತ್ರಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
* ಆದರೆ, ನೇಕಾರ ಸಮುದಾಯ ನಿಮ್ಮ ಜತೆ ಒಗ್ಗೂಡಿ ನಿಂತಿಲ್ಲ ಎಂಬ ಮಾತಿದೆಯಲ್ಲ?
ಇಲ್ಲ, ಇದುವರೆಗೆ ನಡೆಸಿರುವ ಚಳವಳಿಯನ್ನ ಮುನ್ನಡೆಸಿದ್ದೇ ನೇಕಾರ ಸಮುದಾಯ. ಹಳೇ ಮೈಸೂರು ಭಾಗದಲ್ಲಿ ನೇಕಾರಿಕೆ ನಶಿಸಿಹೋಗಿದೆ. ನೇಕಾರ ವೃತ್ತಿ ಅವಲಂಬಿಸಿ ಸಂಕಷ್ಟಕ್ಕೆ ಸಿಲುಕಿದ್ದರೂ, ಅದನ್ನು ಮುಂದುವರಿಸಿಕೊಂಡು ಬಂದಿರುವುದು ಉತ್ತರ ಕರ್ನಾಟಕ ಭಾಗದವರು. ಅವರು ಎಷ್ಟೂ ಅಂತ ಬರುತ್ತಾರೆ. ಹಾಗಾಗಿ, ನೇಕಾರರು ಮತ್ತು ಗ್ರಾಹಕರು ಎಂಬ ತಳಹದಿಯ ಮೇಲೆ ಹೋರಾಟಕ್ಕೆ ಮುಂದಾಗಿದ್ದೇವೆ. ಬರೇ ಮುದುಕರ ಚಳವಳಿ ಆಗಬಾರದು ಎಂಬ ಕಾರಣಕ್ಕಾಗಿ ಹಿರಿಯರ ಜತೆಗೆ ಯುವಕರು, ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸಿಕೊಂಡು ಒಂದು ರೀತಿ ‘ಬೆರಕೆಸೊಪ್ಪಿ’ನ ಮಾದರಿಯಲ್ಲಿ ಹೋರಾಟಕ್ಕೆ ಹೊರಟಿದ್ದೇವೆ.
* ನಿಮ್ಮ ಚಳವಳಿ ಬಗ್ಗೆ ‘ಇದು ಪ್ರಸನ್ನ ಅವರ ಮತ್ತೊಂದು ಪ್ರಹಸನ’ ಎಂಬ ಟೀಕೆ ಕೇಳಿಬಂದಿದೆಯಲ್ಲ?
ಇನ್ನೊಂದು ಪ್ರಹಸನ ನಡೀತಿದೆ ಎಂದು ಹೇಳಿದ್ದರೆ ಅದರಲ್ಲಿ ತಪ್ಪಿಲ್ಲ. ಮೂಲತಃ ನಾನು ರಂಗಕರ್ಮಿ. ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ಎಂಬ ನಾಟಕ ಆಡುವಾಗ ಯಾವ ಪಾತ್ರವನ್ನು ಸ್ವೀಕರಿಸಿದ್ದೇನೋ ಅದೇ ಪಾತ್ರದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ನನ್ನ ಜತೆಗಿರುವವರೂ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸುತ್ತಾರೆ ಎಂದು ಟೀಕಾಕಾರರಿಗೆ ಭರವಸೆ ನೀಡುತ್ತೇನೆ. ಅದರ ಆಚೆಗೆ ನಾವೆಲ್ಲರೂ ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಅಲ್ಲವೇ?
* ‘ಸತ್ಯಾಗ್ರಹ ಪ್ರಣಾಳಿಕೆ’ ಮತ್ತು ‘ಬದನವಾಳು ಘೋಷಣೆ’ಯಲ್ಲಿ ಏನಿದೆ?
ಇಂದು (ಏ. 19) ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ನಡೆಯುತ್ತಿದೆ. ಈ ಚಳವಳಿಯನ್ನು ನೂರಾರು ಜನರ ಆಶಯದಂತೆ ಕಟ್ಟುತ್ತಿದ್ದೇವೆ. ಹಾಗಾಗಿ, ದೂರದಲ್ಲೆಲ್ಲೋ ಇರುವವರಿಗೆ ಚಳವಳಿಯ ಬಗ್ಗೆ ಗೊತ್ತಾಗಲಿ ಎನ್ನುವ ಕಾರಣಕ್ಕಾಗಿ ‘ಸತ್ಯಾಗ್ರಹ ಪ್ರಣಾಳಿಕೆ’ ಸಿದ್ಧಪಡಿಸಿದ್ದೇವೆ. ಹಾಗೆಯೇ, ‘ಬದನವಾಳು ಘೋಷಣೆ’ ಎಂಬುದು ಒಂದು ರೀತಿಯಲ್ಲಿ ಜಿಡಿಪಿ ಪ್ರಣೀತ ಅಭಿವೃದ್ಧಿ ನಂಬಿಕೊಂಡಿರುವ ಸರ್ಕಾರಗಳಿಗೆ, ಅಧಿಕಾರಿಗಳಿಗೆ ಮತ್ತು ಸಮಾಜಕ್ಕೆ ಕೊಡುತ್ತಿರುವ ಅಭಿವೃದ್ಧಿಯ ಪರ್ಯಾಯ ಮಾದರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.