ಎದುರಾಳಿಗಳನ್ನು ಹಣಿಯಲು ಏನಾದರೊಂದು ಕಾರ್ಯತಂತ್ರ ರೂಪಿಸುವ ಚಾಣಾಕ್ಷ, ಮಾಹಿತಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಚತುರ, ಕೆಲವೊಮ್ಮೆ ಉಪಾಯ ಮಾಡಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡು ವಿವಾದದ ಕೇಂದ್ರ ಬಿಂದುವಾಗುವ ವ್ಯಕ್ತಿ...
–ಇವರು ಬೇರೆ ಯಾರೂ ಅಲ್ಲ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ‘ಬಲಗೈ ಬಂಟ’, ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್ ಷಾ.
ಮಹಿಳೆಯೊಬ್ಬರ ಮೇಲೆ ಅಕ್ರಮವಾಗಿ ನಿಗಾ ಇಡುವಂತೆ ಆದೇಶ ನೀಡಿದ್ದ ಪ್ರಕರಣದಲ್ಲಿ ಇದೀಗ ಷಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2009ರಲ್ಲಿ ನಡೆದ ಈ ಪ್ರಕರಣಕ್ಕೆ ಈಗ ಜೀವ ಬಂದಿದೆ. ಆಗ ಗೃಹ ಸಚಿವರಾಗಿದ್ದ ಷಾ, ತಮ್ಮ ‘ಸಾಹೇಬರ’ ಆಣತಿಯಂತೆ ಮಹಿಳೆಯೊಬ್ಬರ ಚಲನವಲನದ ಮೇಲೆ ನಿಗಾ ಇಡಲು ಬೇಹುಗಾರಿಕಾ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ‘ ಕೋಬ್ರಾ ಪೋಸ್ಟ್’ ಹಾಗೂ ‘ಗುಲೈಲ್’ ಎಂಬ ತನಿಖಾ ವೆಬ್‌ಸೈಟ್‌ಗಳು ಇತ್ತೀಚೆಗೆ ಸ್ಫೋಟಕ ಸುದ್ದಿ ಬಿತ್ತರಿಸಿದವು.
ಇದಕ್ಕೆ ಆಧಾರವಾಗಿ, ಐಪಿಎಸ್ ಅಧಿಕಾರಿ ಜಿ.ಐ.ಸಿಂಘಾಲ್ ಹಾಗೂ ಷಾ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆಗಳನ್ನೂ ಬಿಡುಗಡೆ ಮಾಡಿದವು. ಅಧಿಕಾರ ಹಾಗೂ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ಮಹಿಳೆ ಮೇಲೆ ಅಕ್ರಮವಾಗಿ ನಿಗಾ ಇಡುವಂತೆ ಸೂಚಿಸಿದ್ದ ಆರೋಪ ಷಾ ಅವರ ಬೆನ್ನಿಗಂಟಿದೆ.
ಹಾಗೆ ನೋಡಿದರೆ, ಅವರಿಗೆ ಇಂಥದ್ದೊಂದು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದ್ದು ಇದೇ ಮೊದಲೇನೂ ಅಲ್ಲ. ಅದು 2005ರ ನವೆಂಬರ್ 26. ಅಪರಾಧ ಹಿನ್ನೆಲೆಯ ಸೊಹ್ರಾಬುದ್ದೀನ್ ಎಂಬಾತನನ್ನು ಗುಜರಾತ್ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 2010ರ ಜುಲೈ 25ರಂದು ಷಾ ಬಂಧನಕ್ಕೊಳಗಾಗಿದ್ದರು. ಮೂರು ತಿಂಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.
ಷೇರು ದಲ್ಲಾಳಿ ರಾಜಕಾರಣಿಯಾದ ಕಥೆ: 1964ರಲ್ಲಿ ಜನಿಸಿದ ಷಾ, ಶ್ರೀಮಂತ ಉದ್ಯಮಿಯಾಗಿದ್ದ ಅನಿಲ್‌ಚಂದ್ರ ಷಾ ಅವರ ಮಗ.
ಜೀವ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಆಕರ್ಷಿಸಿದ್ದು ಆರ್‌ಎಸ್‌ಎಸ್. ಕ್ರಮೇಣ ಎಬಿವಿಪಿ ಸಖ್ಯ. ಕೆಲ ಕಾಲ ಷೇರು ದಲ್ಲಾಳಿಯಾಗಿ ಕೆಲಸ ಮಾಡಿದ ನಂತರ ಬಿಜೆಪಿ ಪ್ರವೇಶ.
ಷಾ, ಕಿರಿಯ ವಯಸ್ಸಿನಲ್ಲಿಯೇ ಗುಜರಾತ್ ರಾಜ್ಯ ಹಣಕಾಸು ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಾಗ ಅನೇಕರು ಅಚ್ಚರಿಪಟ್ಟಿದ್ದರು. ಇಲ್ಲಿಂದ ಮುಂದೆ ಅವರ ಜನಪ್ರಿಯತೆಯ ‘ಗ್ರಾಫ್’ ಏರುತ್ತಲೇ ಹೋಯಿತು. ನಂತರದಲ್ಲಿ ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್‌್ ಅಧ್ಯಕ್ಷ ಗಾದಿಯೂ ಒಲಿದು ಬಂತು.
ಖುಲಾಯಿಸಿದ ಅದೃಷ್ಟ: ಅದು 2003. ಗುಜರಾತ್‌ನಲ್ಲಿ ಸತತ ಎರಡನೇ ಬಾರಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆ ಏರಿದ್ದರು. ಷಾ ಅವರನ್ನು ಅದೃಷ್ಟ ಹುಡುಕಿಕೊಂಡು ಬಂದಿತ್ತು. ಮೋದಿ ಸಂಪುಟ ಸೇರಿದ ಅವರು ಗೃಹ ಖಾತೆಯೂ ಸೇರಿ ಒಟ್ಟು ಹತ್ತು ಖಾತೆಗಳನ್ನು ವಹಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅಲ್ಲಿಂದ ಮುಂದೆ ಮೋದಿ ‘ಬಲಗೈ ಬಂಟ’ನಾಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ.
2002 ಹಾಗೂ 2007ರಲ್ಲಿ ಗುಜರಾತ್‌ನ ಸರ್ಖೆಜ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಷಾ, ಪ್ರಸ್ತುತ ನರನ್‌ಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2002ರ ಚುನಾವಣೆಯಲ್ಲಿ ಮೋದಿ ಅವರಿಗಿಂತಲೂ ಹೆಚ್ಚಿನ ಮತಗಳಿಂದ ಗೆದ್ದಿದ್ದರು ಎನ್ನುವುದು ಗಮನಾರ್ಹ ಸಂಗತಿ.
2001ರಲ್ಲಿ ಮುಖ್ಯಮಂತ್ರಿ ಗಾದಿ ಏರಿದ ಬಳಿಕ ಮೋದಿ ಅವರು ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದು, ಇದರ ಹಿಂದೆ ಷಾ ಶ್ರಮ ಕೂಡ ಇದೆ.
ಸದಾ ರಾಜಕೀಯದ ಗುಂಗಿನಲ್ಲೇ ಇರುವ ಷಾ, ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರು. ಅಹಮದಾಬಾದ್‌ನಲ್ಲಿ ಭವ್ಯ ಬಂಗಲೆ ಇದ್ದರೂ, ಮಧ್ಯಮವರ್ಗದವರ ಬಡಾವಣೆಯಲ್ಲಿ ಕೆಲ ಕಾಲ ವಾಸ ಮಾಡಿದ್ದರ ಹಿಂದೆ ‘ಮತ ಗಳಿಕೆ’ಯ ಲೆಕ್ಕಾಚಾರ ಇತ್ತು ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.
ಎಲ್ಲ ಆರ್‌ಎಸ್‌ಎಸ್ ಮುಖಂಡರಂತೆ ಷಾ ಕಾಂಗ್ರೆಸ್ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ವಾಗ್ದಾಳಿ ನಡೆಸುತ್ತಾರೆ. ಸೋನಿಯಾ ಗಾಂಧಿ ‘ವಿದೇಶಿ ಮೂಲ’ ಕೂಡ ಇವರ ಬಾಯಿಗೆ ಆಹಾರವಾಗಿತ್ತು.
ಮಾಹಿತಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಚುನಾವಣೆಯ ಸಂದರ್ಭದಲ್ಲಿ ತಮ್ಮದೊಂದು ತಂಡವನ್ನು ಎಲ್ಲೆಡೆ ಕಳುಹಿಸಿ ವಸ್ತು ಸ್ಥಿತಿ ತಿಳಿದುಕೊಳ್ಳುತ್ತಾರೆ. ನಂತರ ತಮ್ಮದೇ ಆದ ಲೆಕ್ಕಾಚಾರ ಮಾಡುತ್ತಾರೆ. ಕೆಲವೊಮ್ಮೆ ಈ ಲೆಕ್ಕಾಚಾರ ಬುಡಮೇಲಾದ ನಿದರ್ಶನಗಳು ಇವೆ ಎನ್ನುವುದು ಬೇರೆ ಮಾತು. ಜಬರದಸ್ತಿನ ಮನುಷ್ಯ, ವಿಲಕ್ಷಣ ವ್ಯಕ್ತಿ, ಕಟ್ಟಾ ಹಿಂದುತ್ವವಾದಿ ಎನ್ನುವುದು ಷಾ ಬಗ್ಗೆ ಸಾರ್ವಜನಿಕವಾಗಿ ಕೇಳಿ ಬರುವ ಮಾತು.
ಜನಪ್ರಿಯತೆಯ ಓಟಕ್ಕೆ ತಡೆ: ಗುಜರಾತ್‌ನಲ್ಲಿ ಷಾ ಜನಪ್ರಿಯತೆ ಅದೆಷ್ಟಿತ್ತೆಂದರೆ ಅವರನ್ನು ಮೋದಿ ಉತ್ತರಾಧಿಕಾರಿಯನ್ನಾಗಿ ಬಿಂಬಿಸುವ ಪ್ರಯತ್ನವೂ ನಡೆದಿತ್ತು. ಇದೇ ಸಮಯಕ್ಕೆ ಸರಿಯಾಗಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಷಾ ಹೆಸರು ಕೇಳಿ ಬಂತು. ನಂತರದಲ್ಲಿ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹತ್ತುಹಲವು ಆರೋಪಗಳನ್ನು ಹೊತ್ತುಕೊಂಡ ಷಾ, ಕ್ರಮೇಣ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳಬೇಕಾಯಿತು.
ಇಕ್ಕಟ್ಟು ತಂದ ಬೇಹುಗಾರಿಕೆ ಪ್ರಕರಣ: 2014ರ ಲೋಕಸಭೆ ಚುನಾವಣೆಗೆ ಉತ್ತರಪ್ರದೇಶ ಬಿಜೆಪಿ ಉಸ್ತುವಾರಿಯಾಗಿ ಷಾ ನೇಮಕಗೊಂಡಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಉತ್ತರಪ್ರದೇಶದಲ್ಲಿ ನೆಲಕಚ್ಚಿರುವ ಬಿಜೆಪಿಯ ಬೇರುಗಳನ್ನು ಗಟ್ಟಿಗೊಳಿಸುವ ಛಾತಿ
ಅವರಿಗೆ ಇದೆ. ಆದರೆ, ಮಹಿಳೆಯ ಮೇಲೆ ಅಕ್ರಮವಾಗಿ ನಿಗಾ ಇಟ್ಟ ಪ್ರಕರಣದಲ್ಲಿ ಅವರು ಷಾಮೀಲಾಗಿದ್ದರು ಎನ್ನುವುದು ಸಾಬೀತಾದಲ್ಲಿ ಈ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು ಎನ್ನುತ್ತಾರೆ ರಾಜಕೀಯ ಪಂಡಿತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.