ADVERTISEMENT

ವ್ಯಕ್ತಿ: ಕಳಚಿದ ಕೆಂಪುನಕ್ಷತ್ರ ಬಿ.ವಿ.ಕಕ್ಕಿಲ್ಲಾಯ

ಬಾಲಕೃಷ್ಣ ಪುತ್ತಿಗೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

ಹಿರಿಯ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ.. ಹೀಗೆ ಬಹುಮುಖ ವ್ಯಕ್ತಿತ್ವದ ಬಿ.ವಿ. ಕಕ್ಕಿಲ್ಲಾಯ (93) ಅವರು ಕಳೆದ ಸೋಮವಾರ ನಿಧನರಾಗುವುದರೊಂದಿಗೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಕೊಂಡಿಯೊಂದು ಕಳಚಿತು. ದುಡಿಯುವ ವರ್ಗಕ್ಕೆ ಸ್ವಾತಂತ್ರ್ಯವನ್ನು ತಲುಪಿಸಿದ ಅವರ ಕೀರ್ತಿ ಮಾತ್ರ ಅಮರವಾಯಿತು.

ರಾಜಕಾರಣಿ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟವರು ಕಕ್ಕಿಲ್ಲಾಯರು. ಅವರು ಬರೀ ರಾಜಕಾರಣಿ ಆಗಿರಲಿಲ್ಲ, ಚಿಂತಕ. ಅವರೊಂದು ಮಾದರಿ. ಸಾರ್ಥಕ ಸೇವೆಯ ರಾಜಕಾರಣಿ. ವೈಚಾರಿಕ ಲೋಕಕ್ಕೆ ವೈಜ್ಞಾನಿಕ ಚಿಂತನೆಗಳನ್ನು ಹಚ್ಚಿದ ವ್ಯಕ್ತಿ.
 
ಜನಪರ ಕಾಳಜಿಯ ಚಿಂತಕ. ಭೂಮಾಲೀಕರ ಕುಟುಂಬದಿಂದ ಬಂದರೂ ಕಾರ್ಮಿಕ ವರ್ಗದ ಕುಡಿಯಂತೆ ಬದುಕಿದವರು. ವೈಯಕ್ತಿಕ ಜೀವನಕ್ಕೆ ಮಹತ್ವ ಕೊಡದೆ ಕಾರ್ಮಿಕರ ಕಲ್ಯಾಣಕ್ಕಾಗಿ ಸದಾ ಹೋರಾಟದ ಹಾದಿ ತುಳಿದವರು. ಭೂಸುಧಾರಣಾ ಹೋರಾಟದ ಕಿಚ್ಚು ಹಚ್ಚಿದವರು.

ವಿದ್ಯಾರ್ಥಿ ದೆಸೆಯಿಂದಲೇ ಹಲವಾರು ಚಳವಳಿಗಳಲ್ಲಿ ಭಾಗಿಯಾದವರು. ಭಾಷಾವಾರು ಪ್ರಾಂತ್ಯ ರಚನೆಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದವರಲ್ಲಿ ಮೊದಲಿಗರು. 1952ರಲ್ಲಿ ಮದ್ರಾಸ್ ಅಸೆಂಬ್ಲಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ಅವಧಿಯಲ್ಲಿ ಅವರು ಈ ದಿಟ್ಟತನ ತೋರಿದ್ದರು.
 
ಇತ್ತೀಚೆಗೆ ಅಂದರೆ ಕಳೆದ ತಿಂಗಳು, ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿ ವಿಠಲ ಮಲೆಕುಡಿಯನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದಾಗ ಅದರ ವಿರುದ್ಧವೂ ಕಕ್ಕಿಲ್ಲಾಯರು ಧ್ವನಿ ಎತ್ತಿದ್ದರು. ನಕ್ಸಲ್ ನಂಟಿನ ಆರೋಪದ ಮೇಲೆ ವಿಠಲನನ್ನು ಪೊಲೀಸರು ಬಂಧಿಸಿ ಆತನ ಕುಟುಂಬಕ್ಕೆ ನೀಡಿದ ಕಿರುಕುಳವನ್ನು ಪ್ರತಿಭಟಿಸಿ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮೇ 18ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ತಮ್ಮ ಮಾತಿನ ಛಾಪು ತೋರಿದ್ದರು.

ಅದೇ ಅವರ ಕಡೆಯ ಸಾರ್ವಜನಿಕ ಸಭೆಯೂ ಆಯ್ತು. ಗಡಿನಾಡು ಕಾಸರಗೋಡು ಕಕ್ಕಿಲ್ಲಾಯರ ತವರು. ಶಿವಳ್ಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬೇವಿಂಜೆ ಮನೆತನದವರು. ಕುಟುಂಬದಲ್ಲೂ ಆದರ್ಶ ವ್ಯಕ್ತಿಯಾಗಿದ್ದರು.

ಕಮ್ಯುನಿಸ್ಟರಾಗಿದ್ದರೂ ದೇವರು, ನಂಬಿಕೆಯನ್ನು ಅವರೆಂದೂ ವಿರೋಧಿಸಲಿಲ್ಲ. ದೇವಸ್ಥಾನ ಜನರ ನಂಬಿಕೆಯ ಕೇಂದ್ರ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದ್ದ ಅವರು, ತಮ್ಮ ಇಳಿಯವಯಸ್ಸಿನಲ್ಲಿ ಮಿಂಚಿನಪದವಿನ ಮನೆ ಸಮೀಪದ ಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಕುಟುಂಬದ ನಂಬಿಕೆಯನ್ನು ಮಾತ್ರ ಅವರೆಂದೂ ಪಕ್ಷಕ್ಕೆ ಸೇರಿಸಲಿಲ್ಲ.
 
ತಮ್ಮ ಅಭಿಪ್ರಾಯವನ್ನು ಎಂದೂ ಇನ್ನೊಬ್ಬರ ಮೇಲೆ ಹೇರಿಲ್ಲ ಎಂದು ಅವರ ಅಣ್ಣನ ಮಗ ಬಿ.ವಿ.ಕಕ್ಕಿಲ್ಲಾಯ (ಹೆಸರು ಒಂದೇ ರೀತಿ ಇದೆ) ಅವರು ನೆನಪಿಸಿಕೊಳ್ಳುತ್ತಾರೆ. `ಅವರು ಆದರ್ಶ ವ್ಯಕ್ತಿಯಾಗಿದ್ದರು. ಸಮಸ್ಯೆಗಳು ಬಂದಾಗ ಅವರಲ್ಲಿಗೆ ಹೋಗುತ್ತಿದ್ದೆವು. ಅವರು ಪರಿಹರಿಸಿ ಸಹಾಯ ಮಾಡುತ್ತಿದ್ದರು~ ಎಂದು ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ರಾಜಕೀಯ ಬದುಕು: ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದಿದ್ದ ಕಕ್ಕಿಲ್ಲಾಯರು ನಂತರ ಅಲ್ಲೇ ನೆಲೆ ಕಂಡುಕೊಂಡರು. ಸ್ವಾತಂತ್ರ್ಯ ಚಳವಳಿ ಮತ್ತು ಕಮ್ಯುನಿಸ್ಟ್ ಚಳವಳಿಯಲ್ಲಿ
ಸಕ್ರಿಯರಾದರು. ಭಾರತೀಯ ಕಮ್ಯುನಿಸ್ಟ್ ಪಕ್ಷದಲ್ಲಿ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದರು. ಬಂಟ್ವಾಳ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿ ಆಯ್ಕೆ ಆದರು. ಆದರೆ ಎಂದೂ ಅಧಿಕಾರದ ಹಿಂದೆ ಹೋಗಲಿಲ್ಲ. ಜನಪರವಾಗಿಯೇ ನಿಂತುಬಿಟ್ಟರು.

ಸ್ವಾತಂತ್ರ್ಯ ಹೋರಾಟ, ಕಮ್ಯುನಿಸ್ಟ್ ಚಳವಳಿಯಂತೆ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯವಾಗಿ ಹೋರಾಡಿದರು. ಬೇವಿಂಜೆ ಶ್ರೀಧರ ಕಕ್ಕಿಲ್ಲಾಯರ ನೇತೃತ್ವದಲ್ಲಿ ನಡೆದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಕೆ.ಆರ್.ಕಾರಂತ ಮುಂತಾದವರೊಂದಿಗೆ ಕಕ್ಕಿಲ್ಲಾಯರೂ ಕೈಜೋಡಿಸಿದ್ದರು. ಆಗ ಬೇವಿಂಜೆಯ ಮನೆಯೇ ಕರ್ನಾಟಕ ಸಮಿತಿ ಕಚೇರಿಯೂ ಆಗಿತ್ತು.
ಮಹಾಜನ ಆಯೋಗವು ಕಾಸರಗೋಡಿಗೆ ಬಂದಾಗ ದಾಖಲೆ ಸಹಿತ ಮಾಹಿತಿಗಳನ್ನು ಒದಗಿಸಿ, ಮಹಾಜನ ವರದಿ ಜಾರಿಗೆ ಒತ್ತಾಯಿಸಿದ್ದರು. ರಾಜಕೀಯವಾಗಿ ಕಮ್ಯುನಿಸ್ಟರಾಗಿದ್ದ ಕಾರಣ ಅವರು ಕಾಸರಗೋಡು ಕರ್ನಾಟಕ ಸಮಿತಿ ಸದಸ್ಯರಾಗಿರಲಿಲ್ಲ.
 
ಕರ್ನಾಟಕ ಸಮಿತಿ ಚುನಾವಣೆಗೆ ನಿಂತಾಗ ಪಕ್ಷದ ನಿಲುವಿನಂತೆ ಅದನ್ನು ಬೆಂಬಲಿಸಲಿಲ್ಲ. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಅವರು ದುಡಿದರು. ಗೋವಾ ಏಕೀಕರಣಕ್ಕಾಗಿ ಬೆಂಗಳೂರಿನಿಂದ ಗೋವಾಕ್ಕೆ ಕಾಲ್ನಡಿಗೆ ಜಾಥಾ ಸಂಘಟಿಸಿ, ದಾರಿ ಮಧ್ಯೆ ಹಳ್ಳಿಯೊಂದಕ್ಕೆ (ಇದ್ದುಸ್) ನುಗ್ಗಿ ಭಾರತದ ಧ್ವಜಾರೋಹಣ ಮಾಡಿ ಬ್ರಿಟಿಷ್ ಪೊಲೀಸರಿಂದ ಏಟು ತಿಂದಿದ್ದರು.

ಹೋರಾಟದ ಹಾದಿ: ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಮಂಗಳೂರಿನ ಜೈಲಿನಲ್ಲಿ 9 ತಿಂಗಳು ಸೆರೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯಾನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅವರು ಬೀಡಿ, ನೇಯ್ಗೆ, ಗೋಡಂಬಿ ಕಾರ್ಖಾನೆಗಳ ಕಾರ್ಮಿಕರ ಸಂಘಟನೆ ಕಟ್ಟಿ ಅವರ ವೇತನ ಹಾಗೂ ತುಟ್ಟಿಭತ್ಯೆಗಾಗಿ ಹೋರಾಡಿದರು.

ಕಾಸರಗೋಡಿನಲ್ಲಿ ಸಿಪಿಐ ಕಟ್ಟಿ ಬೆಳೆಸುವಲ್ಲೂ ಅವರ ಪಾತ್ರ ದೊಡ್ಡದು. 1948ರಲ್ಲಿ ಕಮ್ಯುನಿಸ್ಟರ ಮೇಲೆ ನಿಯಂತ್ರಣ ನಡೆದಾಗ ಭೂಗತರಾಗಿ ಪಕ್ಷ ಕಟ್ಟಿದರು. 1950ರಲ್ಲಿ ದಾವಣಗೆರೆಯಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಜೈಲಿನಲ್ಲೇ ಮಾರ್ಕ್ಸ್‌ವಾದ ಅಧ್ಯಯನ ನಡೆಸಿದರು. ತತ್ವಶಾಸ್ತ್ರ, ಮಾರ್ಕ್ಸ್‌ವಾದ, ವೈಜ್ಞಾನಿಕತೆ ಕುರಿತು ಆಳವಾದ ಜ್ಞಾನ ಅವರಲ್ಲಿತ್ತು.

1964ರಲ್ಲಿ ಪಕ್ಷ ಇಬ್ಭಾಗ ಆದಾಗ ಅವರು ಮೂಲ ಪಕ್ಷದಲ್ಲೇ ಉಳಿದರು. 63ರಿಂದ 71ರವರೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಆಗಿದ್ದರು. 1982ರಲ್ಲಿ ನರಗುಂದದಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗ ವಿಧಾನಸಭಾ ಚಲೊ ಚಳವಳಿಯ ಮುಂಚೂಣಿಯಲ್ಲಿದ್ದರು. ಎಂ.ಎಸ್.ಕೃಷ್ಣನ್ ಮತ್ತಿತರ ಕಾರ್ಮಿಕ ಮುಖಂಡರೊಂದಿಗೆ ರಾಜ್ಯದಲ್ಲಿ ಎಐಟಿಯುಸಿ ಕಟ್ಟಿ ಬೆಳೆಸುವಲ್ಲೂ ಅವರ ಪಾತ್ರ ಪ್ರಮುಖ.

ಸಾಹಿತ್ಯ ಪರಂಪರೆ: ಸಮಕಾಲೀನ ಆಗುಹೋಗುಗಳ ಬಗ್ಗೆ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಪಕ್ಷದ ಮುಖವಾಣಿಯ (ಕೆಂಬಾವುಟ) ಸಂಪಾದಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದ್ದರು.

ಮಂಗಳೂರಿನಲ್ಲಿ ಪ್ರಭಾತ ಬುಕ್ ಹೌಸ್ ತೆರೆದು, ನವಕರ್ನಾಟಕ ಪ್ರಕಾಶನವನ್ನು ಪ್ರಾರಂಭಿಸಿ ಪುಸ್ತಕ ಪ್ರಕಾಶನ, ಮಾರಾಟದ ಹೊಣೆಯನ್ನೂ ಹೊತ್ತುಕೊಂಡಿದ್ದರು. ಕಮ್ಯುನಿಸಂ, ಭೂಮಿ ಮತ್ತು ಆಕಾಶ, ಮಾನವನ ನಡಿಗೆ ವಿಜ್ಞಾನದೆಡೆಗೆ, ಕಾರ್ಲ್ ಮಾರ್ಕ್ಸ್ ಬದುಕು-ಬರಹ, ಫ್ರೆಡ್ರಿಕ್ ಏಂಗೆಲ್ಸ್ ಜೀವನ ಚಿಂತನ, ಇರುವು ಅರಿವು (ಅನುವಾದ), `ಭಾರತೀಯ ಚಿಂತನೆ, ಹಿಂದೂ ಧರ್ಮ, ಕಮ್ಯುನಿಸಂ~, ಪ್ರಾಚೀನ ಭಾರತದಲ್ಲಿ ಭೌತವಾದ (ಅನುವಾದ), ಭಾರತಕ್ಕೊಂದು ಬದಲುದಾರಿ, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು, ದಲಿತರ ಸಮಸ್ಯೆಗಳು ಮತ್ತು ಪರಿಹಾರ (ಅನುವಾದ), ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದ (ಅನುವಾದ) ಪುಸ್ತಕಗಳನ್ನು ಅವರು ರಚಿಸಿದ್ದಾರೆ.

ಬರೆಯದ ದಿನಚರಿಯ ಮರೆಯದ ಪುಟಗಳು ಅವರ ಆತ್ಮಕತೆ. ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ (ಅನುವಾದ), ಭಾರತೀಯ ದರ್ಶನಗಳು (ಅನುವಾದ)- ಈ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ.

ಅವರ ಬದುಕು-ಬರಹಕ್ಕೆ ಹಲವಾರು ಪುರಸ್ಕಾರಗಳೂ ಸಂದಿವೆ. ಕಾರ್ಲ್ ಮಾರ್ಕ್ಸ್ ಬದುಕು ಬರಹ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಕಮ್ಯುನಿಸ್ಟ್ ಚಳವಳಿಗೆ ನೀಡಿದ ಕೊಡುಗೆಗಾಗಿ ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಕ್ಸಿಸ್ಟ್ ಥಿಯರಿ ಮತ್ತು ಪ್ರಾಕ್ಟೀಸ್ ಸಂಸ್ಥೆಯಿಂದ ಕಾರ್ಲ್ ಮಾರ್ಕ್ಸ್ ಪ್ರಶಸ್ತಿ, ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ.

ಹೀಗೆ ಹಲವಾರು ಗೌರವಗಳು ಸಿಕ್ಕಿವೆ. ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ `ನಿರಂತರ~ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿತ್ತು. ಹೀಗೆ ಅವರ ವ್ಯಕ್ತಿತ್ವ ಮೇರುಮಟ್ಟದ್ದು.
ಸಿಪಿಐ ಮತ್ತು ಸಿಪಿಐಎಂ ಅನ್ನು ಒಟ್ಟುಗೂಡಿಸಬೇಕೆಂಬ ಅವರ ಬಯಕೆ ಮಾತ್ರ ಈಡೇರಲೇ ಇಲ್ಲ. ಆ ನೋವು ಅವರಲ್ಲಿ ಕೊನೆವರೆಗೂ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.