ADVERTISEMENT

‘ಸೆಕೆಂಡ್‌ಹ್ಯಾಂಡ್’ ಬೊಕೆ ವ್ಯವಹಾರ

ವಿರೂಪಾಕ್ಷ ಹೊಕ್ರಾಣಿ
Published 2 ಡಿಸೆಂಬರ್ 2017, 19:30 IST
Last Updated 2 ಡಿಸೆಂಬರ್ 2017, 19:30 IST

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ರತ್ನಪ್ರಭಾ ಅವರನ್ನು ವ್ಯಕ್ತಿಯೊಬ್ಬ ಸೆಕೆಂಡ್‌ಹ್ಯಾಂಡ್ ಹೂಗುಚ್ಛ ನೀಡಿ ಅಭಿನಂದಿಸಿದ ಪ್ರಸಂಗವಿದು.

ಪ್ಯಾಂಟ್‌, ಶರ್ಟ್‌, ಮೇಲೊಂದು ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಠಳಾಯಿಸಿದ. ಮುಖ್ಯಕಾರ್ಯದರ್ಶಿ ಕಚೇರಿ ಮುಂದೆ ನಿಂತು ತನ್ನ ಪರ್ಸ್‌ನಿಂದ ₹100ರ ನೋಟ್‌ ತೆಗೆದು ಮೇಲಿನ ಕಿಸೆಯಲ್ಲಿಟ್ಟುಕೊಂಡ. ಅಲ್ಲಿದ್ದ ಪರಿಚಾರಕ ನೊಬ್ಬನನ್ನು ಕರೆದು ಒಳಗಿಂದ ಎರಡು ಬೊಕೆಗಳನ್ನು
ತರುವಂತೆ ಸೂಚಿಸಿದ.

ಆ ಪರಿಚಾರಕ ಓಡಿಹೋಗಿ ಮೇಡಮ್ ಕಚೇರಿಯ ಒಳಗೆ ರಾಶಿ ಬಿದ್ದಿದ್ದ ಬೊಕೆ ಮತ್ತು ಹಾರಗಳ ನಡುವಿನಿಂದ ಎರಡನ್ನು ಎತ್ತಿಕೊಂಡು ಹಿಂಬಾಗಿಲಿಂದ ಬಂದು ಇವರಿಗೆ ನೀಡಿದ. ಅದರಲ್ಲಿ ಚೆನ್ನಾಗಿರುವ ಒಂದು ಬೊಕೆ ಆಯ್ದುಕೊಂಡ ವ್ಯಕ್ತಿ, ₹100ರ ನೋಟನ್ನು ಪರಿಚಾರಕನ ಕೈಲಿಟ್ಟ!

ADVERTISEMENT

ಬಳಿಕ ರತ್ನಪ್ರಭಾ ಅವರ ಕಚೇರಿಯ ಒಳಗೆ ಹೋಗಿ ಅಲ್ಲಿನ ಎಲ್ಲ ಸಿಬ್ಬಂದಿಗೂ ತುಂಬಾ ಆತ್ಮೀಯನಂತೆ ಮಾತನಾಡಿಸಿದ. ಅಲ್ಲೇ ಸ್ವಲ್ಪ ಹೊತ್ತು ಕಾಯ್ದು, ರತ್ನಪ್ರಭಾ ಅವರನ್ನು ಅಭಿನಂದಿಸಿ ಸಂತೋಷದಿಂದ ಹೊರಬಂದ. ಸೆಕೆಂಡ್‌ಹ್ಯಾಂಡ್ ಬೊಕೆಯಲ್ಲಿ ವ್ಯವಹಾರ ಮುಗಿಸಿದ ‘ಚತುರ ನಡೆ’ ಕಂಡು ಅಲ್ಲಿದ್ದವರೆಲ್ಲ ಕಕ್ಕಾಬಿಕ್ಕಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.