ADVERTISEMENT

ಸೈನಿಕರಿಗೆ ನ್ಯಾಯ ಸಿಗಬೇಕು

ವಾರದ ಸಂದರ್ಶನ

ಪ್ರಜಾವಾಣಿ ವಿಶೇಷ
Published 22 ಆಗಸ್ಟ್ 2015, 19:30 IST
Last Updated 22 ಆಗಸ್ಟ್ 2015, 19:30 IST

‘ಒಂದು ಶ್ರೇಣಿ ಒಂದು ಪಿಂಚಣಿ’ ಯೋಜನೆ ಜಾರಿಗೆ ಆಗ್ರಹಿಸಿ ಒಂದು ವರ್ಷದಿಂದ ಮಾಜಿ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ 56 ಸೈನಿಕರನ್ನು ಸ್ವಾತಂತ್ರ್ಯೋತ್ಸವದ ಕಾರಣ ಇದೇ ಆಗಸ್ಟ್‌ 14ರಂದು ಬಲವಂತವಾಗಿ ತೆರವುಗೊಳಿಸಲಾಯಿತು.

ಇಂತಹ ಸಾವಿರಾರು ಸೈನಿಕರ ಪರ, ಭಾರತೀಯ ಮಾಜಿ ಸೈನಿಕರ ಅಭಿಯಾನದ (ಐಇಎಸ್‌ಎಂ) ಉಪಾಧ್ಯಕ್ಷ, ನಿವೃತ್ತ ಸೇನಾಧಿಕಾರಿ ಮೇಜರ್‌ ಜನರಲ್‌ ಸತ್ಬೀರ್‌ ಸಿಂಗ್‌ ದಣಿವಿಲ್ಲದೇ ಹೋರಾಡುತ್ತಿದ್ದಾರೆ. ಪ್ರಧಾನಿ, ಸೇನಾಪಡೆ ಮುಖ್ಯಸ್ಥರು, ರಕ್ಷಣಾ ಸಚಿವರು, ಸೇನಾ ಕೇಂದ್ರ ಕಚೇರಿಗೆ 5000ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ‘ಒಂದು ಶ್ರೇಣಿ ಒಂದು ಪಿಂಚಣಿ’ ಯೋಜನೆಯ ಅನಿವಾರ್ಯತೆ, ಸೈನಿಕರ ಸ್ಥಿತಿಗತಿ, ಅವರ ಕೆಲಸದ ಸನ್ನಿವೇಶದ ಬಗ್ಗೆ ಸತ್ಬೀರ್‌ ಸಿಂಗ್‌  ಇಲ್ಲಿ ಮಾತನಾಡಿದ್ದಾರೆ.

* ‘ಒಂದು ಶ್ರೇಣಿ ಒಂದು ಪಿಂಚಣಿ’ (ಒಆರ್‌ಒಪಿ) ಬೇಡಿಕೆ ಆರಂಭವಾದದ್ದು ಯಾವಾಗ?
1973ರವರೆಗೆ ಸೇನಾಪಡೆಗಳು ತಮ್ಮದೇ ಆದ ವೇತನ ಶ್ರೇಣಿ ಹಾಗೂ ಪಿಂಚಣಿ ಯೋಜನೆ ಹೊಂದಿದ್ದವು. ಸೇನಾಪಡೆಗಳ ಮೇಲೆ ನಿಯಂತ್ರಣ ಸಾಧಿಸಬಯಸಿದ್ದ ಅಧಿಕಾರಶಾಹಿ, ರಾಜಕೀಯ ನಾಯಕರ ಮನವೊಲಿಸಿ ಸೇನಾ ವೇತನ ಆಯೋಗ ಹಾಗೂ ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ನಮ್ಮ ಸೇನಾ ಮುಖ್ಯಸ್ಥರು ಆ ಸಮಯದಲ್ಲಿ ಅದಕ್ಕೆ ಅಷ್ಟೊಂದು ಮಹತ್ವ ನೀಡಲಿಲ್ಲ. ಈ ಒಗ್ಗೂಡುವಿಕೆಯಿಂದ ನಮ್ಮ ಸ್ಥಾನಮಾನ, ಭತ್ಯೆಗಳು, ಪಿಂಚಣಿ ಮತ್ತಿತರ ಎಲ್ಲ ಸೌಲಭ್ಯಗಳೂ ಕಡಿತಗೊಂಡವು. ದುರದೃಷ್ಟವಶಾತ್‌ ಆಗ ಅದರ ಅರಿವಾಗಲಿಲ್ಲ.
1971ರಲ್ಲಿ ನಾವು ಪಾಕಿಸ್ತಾನದೊಂದಿಗೆ ಸೆಣಸಿ ಗೆದ್ದಿದ್ದೆವು. ಜಗತ್ತಿನ ಇತಿಹಾಸದಲ್ಲೇ ಮೊದಲ ಬಾರಿ 15 ದಿನಗಳ ಯುದ್ಧದಲ್ಲಿ 93 ಸಾವಿರ ಯುದ್ಧಕೈದಿಗಳನ್ನು ಸೆರೆಹಿಡಿಯಲಾಗಿತ್ತು. ನಮ್ಮ ಸೇನಾಪಡೆಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಬೇಕಿತ್ತು. ಅದರ ಬದಲಾಗಿ ಅವಮಾನ ಎದುರಿಸುವಂತಾಯಿತು.

ಅಲ್ಲಿಯವರೆಗೆ ‘ಜೂನಿಯರ್‌ ಕಮಿಷನ್ಡ್‌ ಆಫೀಸರ್‌’ (ಜೆಸಿಒ) ಹುದ್ದೆಯವರೆಗಿನ ಸೈನಿಕರು ತಮ್ಮ ಕೊನೆಯ ಸಂಬಳದ ಶೇ 70ರಷ್ಟು ಪಿಂಚಣಿ ಪಡೆಯುತ್ತಿದ್ದರು. ಸೇನಾಧಿಕಾರಿಗಳು ಕೊನೆಯ ಸಂಬಳದ ಶೇ 50ರಷ್ಟು ಪಿಂಚಣಿ ಪಡೆಯುತ್ತಿದ್ದರು. ಅದೇ ಸರ್ಕಾರಿ ನೌಕರರು ತಮ್ಮ ಕೊನೆಯ ಸಂಬಳದ ಶೇ 33ರಷ್ಟು ಪಿಂಚಣಿ ಪಡೆಯುತ್ತಿದ್ದರು. ಸೇನೆ ಮತ್ತು ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಒಗ್ಗೂಡಿಸಿದ ಮೇಲೆ ಅಧಿಕಾರಿಗಳು ಸೈನಿಕರ ಪಿಂಚಣಿಯನ್ನು ಶೇ 70ರಿಂದ ಶೇ 50ಕ್ಕೆ ಇಳಿಸಿದರು. ಸರ್ಕಾರಿ ನೌಕರರ ಪಿಂಚಣಿಯನ್ನು ಶೇ 33ರಿಂದ ಶೇ 50ಕ್ಕೆ ಏರಿಸಲಾಯಿತು.

ನಮ್ಮ ಸೇನೆಯ ಶೇ 80ರಷ್ಟು ಸೈನಿಕರು 50ನೇ ವರ್ಷದ ಹೊತ್ತಿಗೆ ನಿವೃತ್ತರಾಗಿರುತ್ತಾರೆ. ಅದೇ ಸರ್ಕಾರಿ ನೌಕರರು 60 ವರ್ಷದವರೆಗೆ ನೌಕರಿಯಲ್ಲಿ ಇರುತ್ತಾರೆ. ಸೈನಿಕನೊಬ್ಬ ತನ್ನ  ಸೇವಾವಧಿಯಲ್ಲಿ ಕೇವಲ ಎರಡು ವೇತನ ಆಯೋಗಗಳ ಪ್ರಯೋಜನ ಪಡೆಯುತ್ತಾನೆ. ಅದೇ ಸರ್ಕಾರಿ ನೌಕರನೊಬ್ಬ ಐದು ವೇತನ ಆಯೋಗಗಳ ಪ್ರಯೋಜನ ಪಡೆದಿರುತ್ತಾನೆ.

ಸೈನಿಕರನ್ನು ಬೇಗ ನಿವೃತ್ತಿಗೊಳಿಸಲಾಗುತ್ತದೆ. ನಿವೃತ್ತರಾಗುತ್ತಿದ್ದಂತೆ ಅವರು  ಕುಟುಂಬದ ಹೊಣೆ ಹೊರಬೇಕಾಗುತ್ತದೆ.  ಸರ್ಕಾರ ಅವರಿಗೆ ಪೂರ್ಣ  ಜೀವನ ಅಥವಾ ಪೂರ್ಣ ಸೇವಾ  ಅವಧಿಯನ್ನು ಒದಗಿಸುವುದಿಲ್ಲ. ನಮ್ಮ ಸೈನಿಕರು ಸೇನೆಯಿಂದ ಹೊರಬಂದಾಗ ಅವರಿಗೆ ಏನು ಮಾಡಬೇಕು ಎಂದು ತೋಚುವುದಿಲ್ಲ. ಅವರಿಗೆ ಬೇರೆ ವೃತ್ತಿ ಕೈಗೊಳ್ಳುವಷ್ಟು ವಿದ್ಯಾರ್ಹತೆ ಇರುವುದಿಲ್ಲ.

ಸೈನಿಕರನ್ನು 60 ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಸಲು ಅವರನ್ನು ವಿವಿಧ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈ ಯೋಜನೆ ಎಂದಿಗೂ ಜಾರಿಯಲ್ಲಿ ಬರಲಿಲ್ಲ. ಅಲ್ಲದೆ ನಮ್ಮ ಸರ್ಕಾರ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಬ್ರಿಟನ್‌, ಅಮೆರಿಗಳಲ್ಲಿ ಇದ್ದಂತೆ ಪ್ರತ್ಯೇಕ ಕಾಯ್ದೆ ರೂಪಿಸಿಲ್ಲ. ಇಂತಹ ಕಾಯ್ದೆ ಇದ್ದಾಗ ಸೈನಿಕ ನಿವೃತ್ತನಾದ ನಂತರ ಅವನ ಯೋಗಕ್ಷೇಮದ ಜವಾಬ್ದಾರಿ ಇಡೀ ದೇಶಕ್ಕೆ ಸೇರುತ್ತದೆ.

ಆತನ ಶಿಕ್ಷಣದ ವೆಚ್ಚವನ್ನು ದೇಶ ನೋಡಿಕೊಳ್ಳುತ್ತದೆ. ಆತನಿಗೆ ಉದ್ಯೋಗ ನೀಡುತ್ತದೆ. ಆತನ ಮಕ್ಕಳನ್ನೂ ದೇಶ ನೋಡಿಕೊಳ್ಳುತ್ತದೆ. ದೇಶಕ್ಕಾಗಿ ಸೈನಿಕರು ಸಲ್ಲಿಸುವ ಸೇವೆಯನ್ನು ಗುರುತಿಸುವ ದೇಶ, ಸೈನಿಕ ಸಮವಸ್ತ್ರವನ್ನು ಕಳಚಿಟ್ಟಾಗ ಆತನಿಗೆ ಕೃತಜ್ಞತೆ ಸಲ್ಲಿಸುತ್ತದೆ.

ನಮಗೆ ನ್ಯಾಯಯುತವಾಗಿ ಬರಬೇಕಿರುವ ‘ಒಂದು ಶ್ರೇಣಿ, ಒಂದು ಪಿಂಚಣಿ’ಗಾಗಿ ಹೋರಾಡುತ್ತಿದ್ದೇವೆ.

* ಸೈನಿಕರ ಸರಾಸರಿ ಜೀವಿತಾವಧಿಯ ಬಗ್ಗೆ ಗಮನ ಸೆಳೆಯಲು ನೀವು ಹೋರಾಡುತ್ತಿದ್ದೀರಿ. ಅದರ ಬಗ್ಗೆ ಹೇಳುವಿರಾ?
ನಾವು ಬೇಗ ನಿವೃತ್ತರಾಗುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾವು ಬೇಗ ಸಾಯುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಸರ್ಕಾರ ಈ ಅಂಶವನ್ನು ಜನರಿಂದ ಮುಚ್ಚಿಟ್ಟಿದೆ.

ಐದನೇ ವೇತನ ಆಯೋಗದಲ್ಲಿ ಸರ್ಕಾರ, ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು 58ರಿಂದ 60ಕ್ಕೆ ಏರಿಸಿತು. ಸರಾಸರಿ ಜೀವಿತಾವಧಿಯನ್ನು ಅಳೆಯುವ ಸರ್ಕಾರಿ ಇಲಾಖೆಯೊಂದು ಇದೆ. ಕೇಂದ್ರ ಸರ್ಕಾರಿ ನೌಕರರ ಜೀವಿತಾವಧಿ 77 ವರ್ಷಗಳು ಮತ್ತು ರೈಲ್ವೆ ನೌಕರರ ಜೀವಿತಾವಧಿ 78 ವರ್ಷಗಳು ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಸೈನಿಕರ ವಿಷಯಕ್ಕೆ ಬಂದಾಗ ಇಂತಹ ಅಧ್ಯಯನ ನಡೆಸಬೇಕು ಎಂದು ಯಾರಿಗೂ ಅನ್ನಿಸಲಿಲ್ಲ. ಏಕೆಂದರೆ ಸೈನಿಕರನ್ನು ಸದೃಢ ಮೈಕಟ್ಟಿನವರು, ಆರೋಗ್ಯಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಮೂರು ಸೇನಾಪಡೆಗಳ ಕ್ಷೇಮಾಭಿವೃದ್ಧಿ ನೋಡಿಕೊಳ್ಳುವ ಅಧಿಕಾರಿಗಳು ಇಂತಹ ಅಧ್ಯಯನ ನಡೆಸಲು ಸೂಚಿಸಿದ್ದರು. ಆ ಅಧ್ಯಯನದ ಫಲಿತಾಂಶ ಆಘಾತ ತರುವಂತಿತ್ತು.

ಸಾಮಾನ್ಯ ಸೈನಿಕರು 59ರಿಂದ 64 ವರ್ಷದೊಳಗೆ ಸಾಯುತ್ತಾರೆ. ಇವರಿಗಿಂತ ಸ್ವಲ್ಪ ದೀರ್ಘ ಕಾಲ ಸೇವೆ ಸಲ್ಲಿಸುವ ‘ಜೆಸಿಒ’ಗಳ ಸರಾಸರಿ ಜೀವಿತಾವಧಿ 67 ವರ್ಷಗಳು. ಅದೇ ಸೇನಾಧಿಕಾರಿಗಳ ಸರಾಸರಿ ಜೀವಿತಾವಧಿ 72.5 ವರ್ಷಗಳು. ಸಾಮಾನ್ಯ ಸರ್ಕಾರಿ ನೌಕರರಿಗಿಂತ ಇವರೆಲ್ಲರ ಜೀವಿತಾವಧಿ ಕಡಿಮೆ.

ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ದೊಡ್ಡ ಗದ್ದಲ ಎದ್ದಿತು. ಮೂರು ಸೇನಾಪಡೆಗಳ ಮಹಾದಂಡನಾಯಕರಾದ ರಕ್ಷಣಾ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವಚನ ನೀಡಿದ್ದರು. ಆದರೆ, ಸ್ವಲ್ಪ ಕಾಲದಲ್ಲೇ ಈ ವರದಿ ಎಲ್ಲರಿಗೂ ಮರೆತುಹೋಯಿತು. 2011ರಲ್ಲಿ ನಾನು ಆ ವರದಿಯನ್ನು ಓದಿದೆ. ಪ್ರಧಾನಿಯವರಿಗೆ ವರದಿಯನ್ನು ಕಳುಹಿಸಿಕೊಟ್ಟಿದ್ದೆ. ಅವರು ಈ ಬಗ್ಗೆ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ನಾನು ಎಲ್ಲರಿಗೂ ಈ ಬಗ್ಗೆ ಪತ್ರ ಬರೆಯುತ್ತಲೇ ಇದ್ದೆ. ಆದರೆ ಏನೂ ಆಗಲಿಲ್ಲ.

*  ಮತ್ಯಾವ ತಾರತಮ್ಯದ ವಿರುದ್ಧ ನೀವು ಹೋರಾಡುತ್ತಿದ್ದೀರಿ?
ಸಂವಿಧಾನದ ಪ್ರಕಾರ ಸೇನಾಪಡೆ ಸಂಸತ್ತಿನ ಅಡಿ ಕೆಲಸ ಮಾಡಬೇಕು. ಸ್ವಾತಂತ್ರ್ಯದ ನಂತರ ನೆಹರೂ ನೀತಿ ‘ನಮಗೆ ಸೇನಾಪಡೆಗಳ ಅಗತ್ಯವಿಲ್ಲ, ಉತ್ತಮ ನೀತಿ ರೂಪಿಸಿದರೆ ಸಾಕು’ ಎಂದು ಹೇಳಿತು. ಸೇನಾಪಡೆ ಮಾಡುತ್ತಿರುವ ಕೆಲಸಕ್ಕೆ ದೊರೆಯಬೇಕಾದ ಮನ್ನಣೆ ದೊರಕಲಿಲ್ಲ.  ನಮಗೆ ಸಿಗಬೇಕಿದ್ದ ಎಲ್ಲ ಮೀಸಲಾತಿಗಳನ್ನು  ಕಿತ್ತುಕೊಳ್ಳಲಾಯಿತು. ಸ್ವಾತಂತ್ರ್ಯಕ್ಕೂ ಮೊದಲು ಶೇ 28ರಷ್ಟು ಸೈನಿಕರನ್ನು ಎರವಲು ಸೇವೆಗೆ ನಿಯೋಜಿಸಲಾಗುತ್ತಿತ್ತು. ಅದು ಸೊನ್ನೆಗೆ ಇಳಿಯಿತು. ಸೇನೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಯಿತು.

ಭತ್ಯೆಗಳನ್ನೇ ತೆಗೆದುಕೊಳ್ಳಿ. ಸರ್ಕಾರಿ ನೌಕರನೊಬ್ಬ ಗುವಾಹಟಿ ಅಥವಾ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ ತಕ್ಷಣ ಮೂಲವೇತನದ ಶೇ 23ರಷ್ಟು ಹೆಚ್ಚುವರಿ ಸಂಬಳ ನೀಡಲಾಗುತ್ತದೆ. ಆದರೆ, ಸೈನಿಕರಿಗೆ ಕೇವಲ ₨ 200 ಅಥವಾ ₨ 400 ನೀಡಲಾಗುತ್ತದೆ. ಉದಾಹರಣೆಗೆ, ರಾಷ್ಟ್ರೀಯ ಸೇನಾ ಕಾಲೇಜನ್ನೇ ನೋಡಿ. ಸೇನೆಯ ತರಬೇತುದಾರರಿಗೆ ₨ 1800ರಷ್ಟು ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ. ಅದೇ ನಾಗರಿಕ ಸೇವೆಗೆ ಸೇರಿದ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಗಳಿಗೆ ಇದೇ ಕೆಲಸಕ್ಕೆ ₨ 19 ಸಾವಿರ ನೀಡಲಾಗುತ್ತದೆ.

*  ಯುದ್ಧದಲ್ಲಿ ಮೃತಪಟ್ಟಸೈನಿಕರ ವಿಧವೆಯರ ಸ್ಥಿತಿಗತಿ ಹೇಗಿದೆ?
6.45 ಲಕ್ಷ ವಿಧವೆಯರು ತಮ್ಮ ಪಿಂಚಣಿಗಾಗಿ ಇನ್ನೂ ಕಾಯುತ್ತಿದ್ದಾರೆ. ಕಾರ್ಗಿಲ್‌ ಸಂಘರ್ಷದ ಸಂದರ್ಭದಲ್ಲಿ ಒಂದೇ ಗ್ರಾಮದ 18 ಮಹಿಳೆಯರು ವಿಧವೆಯರಾದರು. ಅವರೆಲ್ಲ 20– 35 ವರ್ಷದ ವಯೋಮಾನದಲ್ಲಿ ಇದ್ದರು. ಅವರೆಲ್ಲ ಈಗಲೂ ಕಾಯುತ್ತಿದ್ದಾರೆ.

₨ 3,500 ಮೂಲವೇತನವನ್ನು ಪಿಂಚಣಿಯಾಗಿ ಪಡೆಯುತ್ತಿದ್ದಾರೆ. ಅವರ ಸ್ಥಿತಿಯ ಬಗ್ಗೆ ಯೋಚಿಸಿ. ದುಡಿಯುವ ಕೈ ಈಗಿಲ್ಲ. ಇಬ್ಬರು ಮಕ್ಕಳನ್ನು ಅವರು ಓದಿಸಬೇಕಿದೆ. ವಯಸ್ಸಾದ ಪಾಲಕರನ್ನು ನೋಡಿಕೊಳ್ಳಬೇಕಿದೆ. ಹೊಟ್ಟೆಪಾಡಿಗಾಗಿ ಇಂತಹ ವಿಧವೆಯರು ಕೆಟ್ಟಹಾದಿ ಹಿಡಿದ ನಿದರ್ಶನಗಳೂ ಇವೆ.

2009ರಲ್ಲಿ ಇತರ ಪಿಂಚಣಿಗಳನ್ನು ಏರಿಸಿದಾಗ ವಿಧವೆಯರ ಪಿಂಚಣಿ ಏಕೆ ಏರಿಸಿಲ್ಲ ಎಂದು ನಾನು ಪ್ರಶ್ನಿಸಿದೆ. ಅವರ ಪತಿಯರು ಈಗಿಲ್ಲ, ಹಾಗಾಗಿ ಅವರಿಗೆ ಹೆಚ್ಚಿನ ಪಿಂಚಣಿ ಪಡೆಯುವ ಅರ್ಹತೆಯಿಲ್ಲ ಎಂದು ಸರ್ಕಾರ ಉತ್ತರಿಸಿತು. ಆ ದಿನ ನಾನು ಸೈನಿಕರಿಗಾಗಿ ಹೋರಾಡಲು ನಿರ್ಧರಿಸಿದೆ.

ಸೈನಿಕ ಮತ್ತು ದೇಶದ (ಸರ್ಕಾರ) ನಡುವೆ ಒಂದು ಅಲಿಖಿತ ಒಪ್ಪಂದವಿರುತ್ತದೆ. ಸೈನಿಕನಾಗಿ ನನ್ನ ಜೀವವನ್ನು ಪಣಕ್ಕಿಟ್ಟಾದರೂ ದೇಶವನ್ನು ರಕ್ಷಿಸುತ್ತೇನೆ, ನಾನು ಸೇವೆ ಸಲ್ಲಿಸುವಾಗ ಸೂಕ್ತ ಶಸ್ತ್ರಾಸ್ತ್ರ ಹೊಂದಿರುವಂತೆ ನೋಡಿಕೊಳ್ಳುವ, ನಿವೃತ್ತಿಯ ನಂತರ ನನ್ನನ್ನು ಗೌರವದಿಂದ ಕಾಣುವ ಹಾಗೂ ನಾನು ಸತ್ತ ನಂತರ ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆ ದೇಶ ಅಥವಾ ಸರ್ಕಾರದ್ದು. ಈಗ ಆ ಒಪ್ಪಂದ ಏಲ್ಲಿದೆ?

* ‘ಒಆರ್‌ಒಪಿ’ಗೆ ಕಾನೂನಿನ ಮಾನ್ಯತೆ ಇದೆಯೇ?
2014ರ ಫೆಬ್ರುವರಿ 17ರಂದು ‘ಒಆರ್‌ಒಪಿ’ಗೆ ಸಂಸತ್ತು ಒಪ್ಪಿಗೆ ನೀಡಿತು. 2014ರ ಜೂನ್‌ 12ರಂದು ಹೊಸ ಸರ್ಕಾರ ಇದಕ್ಕೆ ಅನುಮೋದನೆ ನೀಡಿತು. ರಾಷ್ಟ್ರಪತಿಗಳ ಭಾಷಣದಲ್ಲೂ ಅದಕ್ಕೆ ಆದ್ಯತೆ ನೀಡಲಾಯಿತು. ಇದಕ್ಕೆ ಹಲವಾರು ವ್ಯಾಖ್ಯೆಗಳಿವೆ ಎಂದು ಪ್ರಧಾನಿ ಈಗ ಹೇಳುತ್ತಿದ್ದಾರೆ. ಸಂಸತ್ತು ಇದಕ್ಕೆ ಒಪ್ಪಿಗೆ ನೀಡಿದೆ ಎಂಬುದಕ್ಕೆ ನನ್ನ ಬಳಿ ಮೂರು ದಾಖಲೆಗಳಿವೆ.   ‘ಒಆರ್‌ಒಪಿ’ಗೆ ಸಂಸತ್ತು ಒಪ್ಪಿಗೆ ನೀಡಿರುವುದರಿಂದ ಪ್ರಧಾನಿ ತಿದ್ದುಪಡಿ ತಂದ ಹೊರತು ಅದನ್ನು ಬದಲಿಸಲು ಸಾಧ್ಯವಿಲ್ಲ.

ಸಂಸದರು ಐದೇ ನಿಮಿಷದಲ್ಲಿ ತಮ್ಮ ಸಂಬಳವನ್ನು ಶೇ 300ರಷ್ಟು ಹೆಚ್ಚಿಸಿಕೊಂಡರು. ಎಲ್ಲ ಸಂಸದರು, ನ್ಯಾಯಮೂರ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ‘ಒಂದು ಶ್ರೇಣಿ ಒಂದು ಪಿಂಚಣಿ’ ಪಡೆಯುತ್ತಿದ್ದಾರೆ. ಅಲ್ಲಿ ತಾರತಮ್ಯವಿಲ್ಲ. ನಮ್ಮ ಮೊಕದ್ದಮೆಯನ್ನು ಆಧರಿಸಿ ನ್ಯಾಯಾಲಯವು, 2015ರ ಫೆಬ್ರುವರಿ 16ರೊಳಗೆ ‘ಒಆರ್‌ಒಪಿ’ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಮತ್ತೊಂದು ವೈಯಕ್ತಿಕ ಪ್ರಕರಣದಲ್ಲಿ ಮೂರು ತಿಂಗಳೊಳಗಾಗಿ ‘ಒಆರ್‌ಒಪಿ’ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿತು.

ಈ ವರ್ಷದ ಮೇ 15ರಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ‘ಒಆರ್‌ಒಪಿ’ ಜಾರಿಗೊಳಿಸುವುದಾಗಿ ಲಿಖಿತ ಹೇಳಿಕೆ ಕೊಟ್ಟಿದ್ದರು. ಜುಲೈ 8ರ ವಿಚಾರಣೆಯ ವೇಳೆ ಮೂರು ದಿನಗಳ ಒಳಗೆ ಅನುಷ್ಠಾನಗೊಳಿಸುವುದಾಗಿ ಕೋರ್ಟ್‌ಗೆ ಕೇಂದ್ರ ತಿಳಿಸಿದೆ. ಅದನ್ನು ಇನ್ನೂ ಅನುಷ್ಠಾನಗೊಳಿಸಬೇಕಿದೆ. ಈ ಸರ್ಕಾರಕ್ಕೆ ನ್ಯಾಯಾಲಯಗಳ ಬಗ್ಗೆ ಗೌರವ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ.

ಸೇನಾಪಡೆಗಳ ನ್ಯಾಯಮಂಡಳಿಯಲ್ಲಿ ನಿವೃತ್ತ ಸೈನಿಕರು 12 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲೂ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ನಮ್ಮ ಸೈನಿಕರು ಹಾಗೂ ಸೈನಿಕರ ವಿಧವೆ ಪತ್ನಿಯರು ಸುಪ್ರೀಂಕೋರ್ಟ್‌ಗೆ ಬಂದು ಹೋರಾಡಲು ಸಾಧ್ಯವೆ? ಸೈನಿಕರನ್ನು ಸುಮ್ಮನಿರಿಸಲು ಇದೂ ಒಂದು ಮಾರ್ಗ.

* ಇದರಿಂದ ಸೇನಾ ನೇಮಕಾತಿಗೆ ತೊಂದರೆಯಾಗುತ್ತಿದೆಯೇ?
ಖಂಡಿತವಾಗಿ ಹೌದು. ಸೇನೆಗೆ ಜನರನ್ನು ಸೇರಿಸಿಕೊಳ್ಳುವುದರಲ್ಲಿ ದೊಡ್ಡ ಸವಾಲೇ ಇದೆ. ಸೇನೆಗಾಗಿ ದುಡಿದವರು ರಸ್ತೆಗೆ ಇಳಿಯುವುದನ್ನು ನಮ್ಮ ಮಕ್ಕಳು ನೋಡಿದಲ್ಲಿ ಅವರಿಗೆ ಯಾವ ಸಂದೇಶ ದೊರಕೀತು? ನಮ್ಮನ್ನು ವಂಚಿಸಲಾಗಿದೆ ಎಂಬ ಭಾವ ಮೂಡುತ್ತಿದೆ. ಇದರಿಂದ ಸೇನೆಯ ಗುಣಮಟ್ಟಕ್ಕೆ ಹೊಡೆತ ಬೀಳುತ್ತಿದೆ. 2005ರಿಂದ 2009ರ ಅವಧಿಯಲ್ಲಿ ‘ಇಂಡಿಯನ್‌ ಮಿಲಿಟರಿ ಅಕಾಡೆಮಿ’ ಹಾಗೂ ‘ಅಧಿಕಾರಿಗಳ ತರಬೇತಿ ಅಕಾಡೆಮಿ’ಯಲ್ಲಿ  ಶೇ 40ರಷ್ಟು ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದವು.

ಈ ಸನ್ನಿವೇಶ ನಮಗೆ ಎಚ್ಚರಿಕೆ ನೀಡುವಂತಿದೆ. ನಮ್ಮ ಗಡಿಗಳು ಭದ್ರವಾಗಿರುವ ಕಾರಣ ನಾವೆಲ್ಲ ಸುರಕ್ಷಿತವಾಗಿದ್ದೇವೆ. ದೇಶ ಇದನ್ನೆಲ್ಲ ಪರಿಗಣಿಸುವುದಿಲ್ಲವೇ? ಪ್ರಸ್ತುತ ನಾವು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಬಂಡುಕೋರರನ್ನು ಎದುರಿಸುತ್ತಿದ್ದೇವೆ. ದೇಶದ 647 ಜಿಲ್ಲೆಗಳ ಪೈಕಿ 267 ಜಿಲ್ಲೆಗಳು ನಕ್ಸಲ್‌ಪೀಡಿತವಾಗಿವೆ. ಆ ಪ್ರದೇಶಗಳಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿಲ್ಲ. ಸರ್ಕಾರಿ ಯಂತ್ರ ಕೆಲಸ ಮಾಡುತ್ತಿಲ್ಲ. ನಾವು ಯಾವ ದಿಕ್ಕಿಗೆ ಹೋಗುತ್ತಿದ್ದೇವೆ ?

*  ನಮ್ಮ ಸೈನಿಕರು ಸೇವೆ ಸಲ್ಲಿಸುವ ವಾತಾವರಣ ಹೇಗಿದೆ ಎಂದು ವಿವರಿಸುತ್ತೀರಾ?
ಮುಂದಿನ ಪೀಳಿಗೆಯವರನ್ನು ಜಾಗೃತಗೊಳಿಸುವ ಮೂಲಕ ದೇಶವನ್ನು ಕಟ್ಟಲಾಗುತ್ತದೆ. ದೇಶದ ಸೇನಾ ಇತಿಹಾಸ ಹಾಗೂ ಸವಾಲುಗಳ ಬಗ್ಗೆ ಹೊಸ ಪೀಳಿಗೆಯಲ್ಲಿ ಅರಿವು ಮೂಡಿಸಬೇಕಿತ್ತು. ಆದರೆ 1950ರಿಂದ 60ರ ಅವಧಿಯಲ್ಲಿ ಸರ್ಕಾರ ಸೇನೆಗೆ ನೀಡಬೇಕಾದ ಮಹತ್ವ ನೀಡಲಿಲ್ಲ ಹಾಗೂ ನಮ್ಮ ಯುದ್ಧ ತಯಾರಿ ಕೆಳಮಟ್ಟದಲ್ಲಿ ಇತ್ತು. 1962ರಲ್ಲಿ  ಚೀನಾ ಜತೆಗಿನ ಯುದ್ಧದಲ್ಲಿ ಇದೇ ಕಾರಣಕ್ಕೆ ಸೋಲು ಅನುಭವಿಸಬೇಕಾಯಿತು.

1962ರ ನಂತರ ಸರ್ಕಾರ ಎಚ್ಚೆತ್ತುಕೊಂಡ ಕಾರಣ 1965 ಹಾಗೂ 1971ರ ಯುದ್ಧದಲ್ಲಿ ನಾವು ಜಯ ಗಳಿಸಿದೆವು. 71ರ ಯುದ್ಧವನ್ನು ಸೇನೆ ಗೆದ್ದಿದೆ ಹೊರತು ರಾಜಕೀಯ ನಾಯಕರಲ್ಲ. 1971ರ ಏಪ್ರಿಲ್‌ನಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ದಾಳಿ ನಡೆಸುವಂತೆ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ಷಾ ಅವರಿಗೆ ಸೂಚಿಸಲಾಗಿತ್ತು. ಅದಕ್ಕೆ ನಿರಾಕರಿಸಿದ ಅವರು ಪೂರ್ಣ ತಯಾರಿ ಮಾಡಿಕೊಂಡೇ ದಾಳಿ ನಡೆಸಿದರು. ಆ ಕಾರಣದಿಂದ ನಾವು ಯುದ್ಧ ಗೆದ್ದೆವು.

ಸೇನಾಪಡೆಗಳು ನಿತ್ಯ ಮಾಡುತ್ತಿರುವ ತ್ಯಾಗವನ್ನು ಗಮನಿಸಿ. ನಮ್ಮ ಸೈನಿಕರ ಮೇಲೆ ಅಪಾರ ಒತ್ತಡವಿದೆ. ದುರ್ಗಮ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿರುತ್ತಾರೆ. ಕುಟುಂಬದಿಂದ ಬಹುಕಾಲ ದೂರವಿರುವುದರಿಂದ ಭಾವನಾತ್ಮಕ ಸಮಸ್ಯೆಯಿಂದ ಬಳಲುತ್ತಾರೆ. ಸಿಯಾಚಿನ್‌ನಲ್ಲಿ ಮೈನಸ್‌ 50 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡುವವರಿಗೆ ಭ್ರಾಂತಿ ಹಾಗೂ  ಶ್ವಾಸಕೋಶದ ಸಮಸ್ಯೆ ಉಂಟಾಗುತ್ತದೆ. ಇದು ಉದಾಹರಣೆ ಮಾತ್ರ.

ನನ್ನ ತುಕಡಿ ಲಡಾಕ್‌ನಿಂದ ಮರಳಿದಾಗ ಅವರು ರಜೆಯ ಮೇಲೆ ಮನೆಗೆ ಹೋಗಲು ನಿರಾಕರಿಸುತ್ತಿದ್ದರು. ನಾನು ಸೇನಾ ವೈದ್ಯರ ಬಳಿ ಈ ಬಗ್ಗೆ ಚರ್ಚಿಸಿದೆ. ಅತಿ ಎತ್ತರದ ಪ್ರದೇಶದಲ್ಲಿ ಕೆಲಸ ಮಾಡಿದ್ದರಿಂದಾಗಿ ಅವರಲ್ಲಿ ನಪುಂಸಕತ್ವ ಕಾಣಿಸಿಕೊಂಡಿತ್ತು. ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು. ತಮ್ಮನ್ನು ರಕ್ಷಿಸುವ ಸೈನಿಕರು ಎದುರಿಸುವ ಕಷ್ಟ–ಕೋಟಲೆಗಳನ್ನು ಸಾಮಾನ್ಯ ಜನ ಅರಿತುಕೊಳ್ಳಬೇಕು ಹಾಗೂ ಅವರಿಗೆ ನ್ಯಾಯಯುತವಾಗಿ ದೊರಕಬೇಕಿರುವ ಸೌಲಭ್ಯಗಳನ್ನೆಲ್ಲ ನೀಡಬೇಕು.

2500 ವರ್ಷಗಳ ಹಿಂದೆ ಕೌಟಿಲ್ಯ ಮಗಧದ ರಾಜನಿಗೆ, ‘ಸೈನಿಕರು ತಮಗೇನು ಬೇಕು ಎಂದು ಕೇಳಿದ ದಿನ ನೀನು ರಾಜನಾಗುವ ಅರ್ಹತೆ ಕಳೆದುಕೊಳ್ಳುತ್ತೀಯಾ’ ಎಂದು ಹೇಳಿದ್ದ. ಸೈನಿಕರನ್ನು ಗೌರವಿಸದೇ ಇರುವ ದೇಶ ಸಹ ಸೋಲಿನತ್ತ ಜಾರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.