ADVERTISEMENT

ಸ್ವಾತಂತ್ರ್ಯ ಗೀತೆಯ ಹಕ್ಕಿ ಮಾಯಾ ಏಂಜೆಲೊ

ಜಿ.ಬಿ.ಹರೀಶ
Published 31 ಮೇ 2014, 19:30 IST
Last Updated 31 ಮೇ 2014, 19:30 IST
ಸ್ವಾತಂತ್ರ್ಯ ಗೀತೆಯ ಹಕ್ಕಿ ಮಾಯಾ ಏಂಜೆಲೊ
ಸ್ವಾತಂತ್ರ್ಯ ಗೀತೆಯ ಹಕ್ಕಿ ಮಾಯಾ ಏಂಜೆಲೊ   

‘ಪಂಜರದ ಹಕ್ಕಿ
ಕಂಪಿಸುವ ದನಿಯಲ್ಲಿ
ಕಾಣದೂರನ್ನು ಕುರಿತು
ಕಾಣುವಾಸೆಯಲಿ ಹಾಡುತ್ತೆ
ದೂರದ ಬೆಟ್ಟಗಳಲ್ಲಿ
ಹಕ್ಕಿಯ ರಾಗ ಮಾರ್ದನಿಸುತ್ತೆ
ಯಾಕೆಂದರೆ–ಪಂಜರದ ಹಕ್ಕಿ
ಸ್ವಾತಂತ್ರ್ಯ ಗೀತೆಯ ಹಾಡುತ್ತೆ’
(ಕವನ: ಮಾಯಾ ಏಂಜೆಲೊ. ಅನುವಾದ:ಎಂ.ಆರ್‌.ಕಮಲ)


ಜಗತ್ತಿನಾದ್ಯಂತ ನೋವಿನಲ್ಲಿ ಬೆಳೆದು ಜೀವನದ ಉದ್ದಕ್ಕೂ ಅವಮಾನ ಅನುಭವಿಸಿದವರಿದ್ದಾರೆ. ಅವರಲ್ಲಿ ಆಫ್ರಿಕಾದಿಂದ ಅಮೆರಿಕ ಖಂಡಕ್ಕೆ ಬಲವಂತವಾಗಿ ಕರೆತರಲ್ಪಟ್ಟ ಕಪ್ಪುಜನರದ್ದು ನೋವಿನಲ್ಲಿ ಅದ್ದಿದ ಮತ್ತು ರೋಮಾಂಚನಕಾರಿಯಾದ ಹೋರಾಟದ ಗಾಥೆ. ಮಾಯಾ ಏಂಜೆಲೊ ಅವರದ್ದು ಅಂತಹ ಒಂದು ಹೋರಾಟದ ಬದುಕು. ಮಾಯಾ ಅವರು ಚಿಕ್ಕವರಿದ್ದಾಗ ಕಪ್ಪುಜನರು ಮತ್ತು ಅಮೆರಿಕದ ಬಿಳಿಯರ ನಡುವೆ ತೀವ್ರ ಸ್ವರೂಪದ ಅನುಮಾನದ ವಾತಾವರಣವಿತ್ತು.

ಮಾಯಾ ಚಿಕ್ಕವರಿದ್ದಾಗ ಮೂವತ್ತರ ದಶಕದಲ್ಲಿ ಆರ್ಕಾನ್ಸ್‌ ಎಂಬಲ್ಲಿ ಕಪ್ಪುಜನರನ್ನು ಗಲ್ಲಿಗೆ ಏರಿಸಲಾಗುತ್ತಿತ್ತು. ಒಂದು ಸಲವಂತೂ ಒಬ್ಬ ಕಪ್ಪು ವ್ಯಕ್ತಿಯನ್ನು ಗಲ್ಲಿಗೇರಿಸಿದ ಮೇಲೆ ಜನರು ಅವನ ಚರ್ಮವನ್ನು ಸುಲಿದು ನೆನಪಿಗಾಗಿ ಇಟ್ಟುಕೊಂಡುದ್ದನ್ನು ಮಾಯಾ ತಮ್ಮ ಆತ್ಮಕತೆಯಲ್ಲಿ ನೆನಪಿಸಿಕೊಳ್ಳುತ್ತಾರೆ. ಈ ಭಯಾನಕ ವಾತಾವರಣದಲ್ಲಿ ಬೆಳೆದ ಮಾಯಾ ಅವರ ಪರಿಸರದಲ್ಲಿ ಸಮಾಧಾನದ ವಿಷಯವೆಂದರೆ ಒಂದು ಪುಸ್ತಕಾಲಯವಿತ್ತು. ಅಲ್ಲಿ ಬಾಲಕಿ ಮಾಯಾ ಅನೇಕ ಉತ್ತಮ ಪುಸ್ತಕಗಳನ್ನು ಓದಿದರು.

ಮಾಯಾ ಅವರ ಅಜ್ಜಿಯದು ಕರುಣಾಮಯಿ ವ್ಯಕ್ತಿತ್ವ. ಯಾವುದೇ ಹಿಂಸಾಮಯ ಘಟನೆ ನಡೆದಾಗಲೂ ಪುಟ್ಟ ಮಾಯಾಳ ಅಜ್ಜಿ ‘ಪ್ರಾರ್ಥನೆ ಮಾಡಿ’ ಎಂದು ಜನರಿಗೆ ತಿಳಿಸುತ್ತಿದ್ದರು. ಹೀಗೆ ದೈವವನ್ನು ಕುರಿತ ನಂಬಿಕೆ ಮಾಯಾಗೆ ಅಜ್ಜಿಯ ಮೂಲಕ ಬಾಲ್ಯದಲ್ಲೇ ರೂಢಿಗೊಂಡಿತು.

ಕಿರಿಯವಳಿದ್ದಾಗಲೇ ಓದಿನ ಹುಚ್ಚು ಹತ್ತಿಸಿಕೊಂಡ ಮಾಯಾಳ ಮನಸ್ಸಿನ ಮೇಲೆ ಪ್ರಭಾವ ಬೀರಿದವರಲ್ಲಿ ಚಾರ್ಲ್ಸ್‌ ಡಿಕನ್ಸ್‌, ಬ್ರಾಂಟೆ ಸಹೋದರಿಯರು ಮುಖ್ಯರು. ಬಿಳಿಯರ ಬಗ್ಗೆ ಸಹಜವಾಗಿಯೇ ಕಪ್ಪು ಜನರು ದ್ವೇಷ ಬೆಳೆಸಿಕೊಳ್ಳುವಂಥ ವಾತಾವರಣದಲ್ಲಿ ಬೆಳೆದ ಮಾಯಾಳನ್ನು ಅದರಿಂದ ಬಿಡುಗಡೆ­ಗೊಳಿಸಿದ್ದು ಡಿಕನ್ಸ್‌ ಕಾದಂಬರಿಗಳು. ಎಲ್ಲರೂ ಮನುಷ್ಯರೇ, ಅವರಲ್ಲಿ ಒಳ್ಳೆಯವರು , ಕೆಟ್ಟವರು ಇರುತ್ತಾರೆ ಎಂಬ ಪಾಠವನ್ನು ಮಾಯಾಳಿಗೆ ಡಿಕನ್ಸ್‌ ಮೌನವಾಗಿ ಬೋಧಿಸಿದ. ಅವರ ಜೀವನ ಕಲ್ಲು ಮುಳ್ಳಿನಿಂದ ಕೂಡಿತ್ತು.

ಆದರೆ ಅವರೇ ಹೇಳುವಂತೆ ‘ಜೀವನದಲ್ಲಿ ಎಷ್ಟು ಸಲ ಸೋತೆನೆಂದು ಅನಿಸಿದರೂ ಸೋತೆ ಎಂದು ಭಾವಿಸಬಾರದು’. ಅವರು ಬಾಲ್ಯದಲ್ಲಿ ಅನುಭವಿಸದ ಸಂಕಟಗಳಿಲ್ಲ. ಬಡತನ, ಒಂದು ಕಡೆಯಾದರೆ, ವರ್ಣಭೇದ ನೀತಿಯಿಂದಾಗುವ ಅವಮಾನ ಇನ್ನೊಂದು ಕಡೆಯಲ್ಲಿ ಅವರನ್ನು ಕಾಡಿತು.

ಇನ್ನೂ ದುರಂತವೆಂದರೆ ಕುಸುಮ ಕೋಮಲವಾದ ಏಳನೇ ವಯಸ್ಸಿನಲ್ಲಿ ಅವರು ಅತ್ಯಾಚಾರಕ್ಕೆ ಒಳಗಾದರು, ಅದರಲ್ಲಿನ ದುರಂತವೆಂದರೆ ಅವರ ತಾಯಿಯ ಗೆಳೆಯನೇ ಈ ಹೀನ ಕೃತ್ಯ ಎಸಗಿದ್ದು!

ಈ ವಿಷಯ ತಿಳಿದ ಜನರು ಅತ್ಯಾಚಾರಿಯನ್ನು ಮಾಯಾ ಕಣ್ಣೆದುರೇ ಹೊಡೆದು ಕೊಂದರು. ಈ ಘಟನೆ ಅವರನ್ನು ಬೆಚ್ಚಿ ಬೀಳಿಸಿತು. ಮಾಯಾ ಅಲ್ಲಿಂದ ಹಲವು ವರ್ಷಗಳ ಕಾಲ ಮಾತೇ ಆಡಲಿಲ್ಲ.

ಮುಂದೆ ಅವರು ಬರೆದ ಅಪಾರ ಪ್ರಮಾಣದ ಸಾಹಿತ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಕಸುವು ದೊರೆತದ್ದು ಈ ಮೌನಗರ್ಭದಿಂದಲೇ. ಕಪ್ಪು ಜನರು ತಮ್ಮ  ಭಾಷೆ, ಸಂಗೀತ, ಅಸ್ಮಿತೆ ಯಾವುದನ್ನೂ ಕಳೆದುಕೊಳ್ಳಬಾರದು. ಬಿಳಿಯರಿಂದ ಆಗಿರುವ ಹಿಂಸೆಯನ್ನು ಎದುರಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜಗತ್ತಿನ ಉಳಿದ ಜನಾಂಗದ ಜನರು ಅವರನ್ನು ವಿಸ್ಮಯ, ಗೌರವಗಳಿಂದ ನೋಡುವಂತೆ ಮಾಡಬೇಕೆಂಬುದು ಮಾಯಾ ಅವರ ಕನಸಾಯಿತು.

ಬದುಕಲು ಅವರು ಅನೇಕ ಕೆಲಸಗಳನ್ನು ಮಾಡಿದರು. ಮನೆಗೆಲಸದವಳಾಗಿ, ಕೇಬಲ್‌ ಕಾರ್‌ ಕಂಡಕ್ಟರ್‌ ಆಗಿ, ಹೋಟೆಲಿನ ಪರಿಚಾರಕಿಯಾಗಿ, ಅಡುಗೆಯವಳಾಗಿ, ರಾತ್ರಿ ಕ್ಲಬ್‌ಗಳಲ್ಲಿ ಹಾಡುವವಳಾಗಿ ದುಡಿದರು. ಇದರ ಜತೆಗೆ ಕಿರಿ ವಯಸ್ಸಿನಲ್ಲಿ ಒಬ್ಬಂಟಿ ತಾಯಿಯ ಹೊರೆಯನ್ನೂ ಹೊತ್ತರು. ಆದರೆ ಅವರು ಯಾವುದನ್ನೂ ತಿರಸ್ಕರಿಸದೆ ಸವಾಲಾಗಿ ತೆಗೆದುಕೊಂಡರು.
ಮುಂದೆ ಅನೇಕರು ಅವರನ್ನು ಸಂದರ್ಶನ ಮಾಡಿದವರು ಆಕೆಯ ಅಪಾರ ಆತ್ಮವಿಶ್ವಾಸವನ್ನು ಕೊಂಡಾಡಿದ್ದಾರೆ. ಅದರ ಮೂಲವಿರುವುದು ಹದಿಹರೆಯದಲ್ಲಿ, ಆಕೆ ಎದುರಿಸಿದ ಸವಾಲು ಮತ್ತು ಪ್ರತಿಕ್ರಿಯಿಸಿದ ರೀತಿಯಲ್ಲಿ.

ನಮ್ಮ ಬಾಬಾ ಸಾಹೇಬ್‌ ಅಂಬೇಡ್ಕರ್‌ರಂತೆ, ಶಿವರಾಮ ಕಾರಂತರಂತೆ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡ ಹಿರಿಯ ಚೇತನ ಮಾಯಾ ಏಂಜೆಲೊ. ಆಕೆ ಬದುಕು ರೆಕ್ಕೆ ಸುಟ್ಟಾಗಲೆಲ್ಲ ಮತ್ತೆ ಮತ್ತೆ ಫೀನಿಕ್ಸ್‌ ಹಕ್ಕಿಯಂತೆ ಎದ್ದುಬಂದರು.

ಕವಿಯಾಗಿ, ಹಾಡುಗಾರ್ತಿಯಾಗಿ, ನಟಿಯಾಗಿ ಹೆಸರು ಮಾಡಿದರು. ಅವರ ಬದುಕಿನ ಅನುಭವ ಎಷ್ಟು ವಿಶಾಲ, ಸಂಕೀರ್ಣವಾಗಿತ್ತೆಂದರೆ ಆಕೆಯ ಮೊದಲ 40 ವರ್ಷಗಳ ಜೀವನ ಹಲವು ಸಂಪುಟಗಳ ಆತ್ಮಕತೆಯಾಗಿ ಹೊರಬಂತು. ಅದರಲ್ಲಿ ಒಂದರ ಹೆಸರು ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ.’ ಜಗತ್ತಿನ ಲಕ್ಷಾಂತರ ಜನರ ಜೀವನದ ಮೇಲೆ ಈ ಕೃತಿಗಳು ಇಂದಿಗೂ ಪ್ರಭಾವ ಬೀರುತ್ತಿವೆ.
ಜೀವನದ ಹೋರಾಟ ಮತ್ತು ಕಪ್ಪು ಜನರ ಪರವಾಗಿ ಕೈಗೊಂಡ ಹೋರಾಟ ಅವರನ್ನು ಬೇರೆ ಬೇರೆ ದೇಶಗಳಿಗೆ ಕರೆದುಕೊಂಡು ಹೋಯಿತು.

ಆಕೆ ಶಿಕ್ಷಕಿಯಾಗಿ, ಲೇಖಕಿಯಾಗಿ ತಮ್ಮನ್ನು ಜನ ಗುರುತಿಸಲಿ ಎಂದು ಇಷ್ಟಪಡುತ್ತಿದ್ದರು.
ಮಾಯಾ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಒಮ್ಮೆ ಅಮೆರಿಕದ ಬಾಕ್ಸಿಂಗ್‌ ಪಟು ಮೈಕ್‌ ಟೈಸನ್‌ ಸೆರೆವಾಸದಲ್ಲಿದ್ದಾಗ ಮಾಯಾ ಅವರನ್ನು ನೋಡಬೇಕು ಎಂದು ಆಸೆ ಪಟ್ಟರು. ಜೈಲಿನ ಅಧಿಕಾರಿಗಳು ಇವರಿಬ್ಬರ ಭೇಟಿಗೆ ಏರ್ಪಾಡು ಮಾಡಿದರು. ಆ ದಿನಗಳಲ್ಲಿ ಟೈಸನ್‌ ಬಹಳ ಓದಲು ಆರಂಭಿಸಿದ್ದರು. ಮಾಯಾ ಅವರಿಗೆ ಅನೇಕ ಒಳ್ಳೆಯ ಲೇಖಕರನ್ನು ಓದಲು ಹುರಿದುಂಬಿಸಿದರು.

ಅನೇಕ ಗಣ್ಯರು ಮಾಯಾ ಅವರ ಸ್ನೇಹಿತರಾಗಿದ್ದರು. ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂನಿಯರ್‌) ಮತ್ತು ಮಾಲ್ಕಂ ಜತೆ ಮಾಯಾ ಕೆಲಸ ಮಾಡಿದ್ದರು.

ಫೆಬ್ರುವರಿ 2011ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಮಾಯಾ ಏಂಜೆಲೊ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪ್ರೆಸಿಡೆಂಟಲ್‌ ಮೆಡಲ್‌ ಆಫ್‌ ಫ್ರೀಡಂ’ ನೀಡಿ ಗೌರವಿಸಿದ್ದರು.

ಅಂತರಂಗದ ದನಿಗೆ ಕಿವಿಗೊಡಿ ಎಂದು ಮತ್ತೆಮತ್ತೆ ಹೇಳುತ್ತಿದ್ದ ಮಾಯಾ 2014ರಲ್ಲಿ ಒಂದು ಟ್ವೀಟ್‌ ನಲ್ಲಿ ಹೀಗೆ ಹೇಳಿದ್ದರು:‘ ನಿಮ್ಮ ಒಳದನಿಗೆ ಕಿವಿಗೊಡಿ. ಆಗ ಆ ಶಾಂತಿಯಲ್ಲಿ ನಿಮಗೆ ದೇವರು ಕಾಣಬಹುದು’. ಅನ್ಯಾಯಕ್ಕೆ ಎಂದೂ ತಲೆಬಾಗಿಸದ ಎಚ್ಚರದ ಸಂಕೇತವಾಗಿ, ಶೋಷಿತರ ಪರ ದನಿಯಾಗಿ ಸದಾ ಮಾಯಾ ಏಂಜೆಲೊ ನೆನಪು ನಮ್ಮೊಳಗೆ ಮಾರ್ದನಿಸುತ್ತಿರುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.