ಕನ್ನಡದ ಹಿರಿಯ ಕವಿ ಕೆ.ವಿ.ತಿರುಮಲೇಶ್ ತಮ್ಮ ಐದು ದಶಕಗಳಿಗೂ ಹೆಚ್ಚಿನ ಬರವಣಿಗೆಯಲ್ಲಿ ಪ್ರಯೋಗಶೀಲತೆಯನ್ನು ವ್ರತದಂತೆ ನೆಚ್ಚಿಕೊಂಡವರು. ವಿಶ್ವ ಸಾಹಿತ್ಯದ ಬಗ್ಗೆ ಆಳ ತಿಳಿವಳಿಕೆ ಹೊಂದಿರುವ ಅವರು ತಾವು ಬರೆದ ಎಲ್ಲ ಪ್ರಕಾರಗಳಲ್ಲೂ ಅತ್ಯುತ್ತಮವಾದುದನ್ನು ಸಾಧಿಸಲು ಹಂಬಲಿಸಿದವರು. ಕಥೆ, ಕವಿತೆ, ಅಂಕಣ, ಅನುವಾದ, ಮಕ್ಕಳ ಬರಹ, ವಿಮರ್ಶೆ– ಹೀಗೆ ಅವರ ಬರಹದ ಬೀಸು ವಿಸ್ತಾರವಾದುದು. ಕಾಸರಗೋಡಿಗೆ ಸಮೀಪದ ಕಾರಡ್ಕ ಗ್ರಾಮದ ಅವರು ಮೇಷ್ಟ್ರಾಗಿ ಬೇರೆ ಬೇರೆ ದೇಶಗಳನ್ನು ಸುತ್ತಿ ಈಗ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಅವರ ಪ್ರಯೋಗಶೀಲತೆಯ ಮಾಗಿದ ಫಲದಂತಿರುವ ‘ಅಕ್ಷಯ ಕಾವ್ಯ’ ಕೃತಿಗೆ 2015ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ದೊರೆತ ಹಿನ್ನೆಲೆಯಲ್ಲಿ ತಿರುಮಲೇಶ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.
* ಪ್ರಶಸ್ತಿಗಳನ್ನು ಮರಳಿಸುವ ಪ್ರಕ್ರಿಯೆ ಒಂದು ಚಳವಳಿಯ ರೂಪ ತಾಳಿರುವ ಸಂದರ್ಭದಲ್ಲಿ ನಿಮ್ಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದನ್ನು ಹೇಗೆ ನೋಡುವುದು?
ಯಾವುದೇ ಸಂದರ್ಭದಲ್ಲೂ ಪ್ರಶಸ್ತಿಗಳ ಕುರಿತು ಭ್ರಮೆಯನ್ನಾಗಲಿ ಮೋಹವನ್ನಾಗಲಿ ಇರಿಸಿಕೊಂಡ ವ್ಯಕ್ತಿ ನಾನಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಅಪರೂಪ. ವ್ಯಕ್ತಿಗಿಂತ ಆತನ ಕೃತಿ ಮುಖ್ಯವಾಗಬೇಕು, ಮುಂದೆ ಬರಬೇಕು. ಬರೆದ ನಂತರ ಬರೆದವ ಹಿಂದೆ ಸರಿಯಬೇಕು. The author is always already dead. ಸಮಕಾಲೀನ ಪ್ರಶಸ್ತಿವಿಜೇತ ಸಾಹಿತಿಗಳಲ್ಲಿ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯ ದಮನ, ಅಸಹಿಷ್ಣುತೆ ಮುಂತಾದ ಗಂಭೀರ ಕಾರಣಗಳನ್ನು ಮುಂದಿಟ್ಟುಕೊಂಡು ತಮಗೆ ಸಿಕ್ಕ ಪ್ರಶಸ್ತಿಗಳನ್ನು ಮರಳಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು, ನಿಜ. ಅದು ಅವರ ಹಕ್ಕು. ಪ್ರಜಾಪ್ರಭುತ್ವದ ಒಂದು ಗುಣವೇ ಇಂಥ ವಾದ ವಿವಾದ.
ಸಾಕ್ರಟೀಸ್‌ನನ್ನು ಶಿಕ್ಷೆಗೆ ಗುರಿಪಡಿಸುವ ಮುನ್ನವೂ ಇದು ನಡೆದಿತ್ತು. ಆದರೆ ನನ್ನ ಮಟ್ಟಿಗೆ ನನ್ನ ಬರವಣಿಗೆಯೇ ಒಂದು ‘ಮಹಾ ಪ್ರತಿಭಟನೆ’. ಅದಕ್ಕಿಂತ ಹೆಚ್ಚಿನ ಪ್ರತಿಭಟನೆ ನನಗೆ ಗೊತ್ತಿಲ್ಲ ಮತ್ತು ಸಾಹಿತ್ಯ ನನಗಿದನ್ನು ಒದಗಿಸಿಕೊಟ್ಟಿದೆ. ಅದಲ್ಲದಿದ್ದರೆ ನಾನು ಕತೆ, ಕವಿತೆ, ಲೇಖನ ಇತ್ಯಾದಿಗಳನ್ನು ಬರೆಯಲು ನನಗೊಂದು ಕಾರಣವೇ ಇರುತ್ತಿರಲಿಲ್ಲ. ಸಾಹಿತ್ಯ ಮುಖ್ಯ; ಪ್ರಶಸ್ತಿ ಸೆಕೆಂಡರಿ. ಪ್ರಶಸ್ತಿಯನ್ನೇ ವೈಭವೀಕರಿಸಬಾರದು. ಪ್ರಶಸ್ತಿಗಳಿಲ್ಲದಿದ್ದಾಗಲೂ ಲೇಖಕರು ಬರೆಯುತ್ತಿದ್ದರು. ಇನ್ನು ಪ್ರಶಸ್ತಿ ಕೊಡುವವರು ಕೃತಿಗಳ ಗುಣಗಳನ್ನು ಗುರುತಿಸಿಯೇ ಪ್ರಶಸ್ತಿ ಕೊಡುತ್ತಾರೆ—ಕೊಡಬೇಕು. ಯೋಗ್ಯವಾದ ಎಲ್ಲಾ ಕೃತಿಗಳಿಗೂ ಇಂಥಾ ಗೌರವ ದೊರೆಯುವುದಿಲ್ಲ ಎನ್ನುವುದೊಂದು ದುರ್ದೈವ.
*ಹೈದರಾಬಾದ್‌ನಲ್ಲಿ ಇದ್ದುಕೊಂಡು ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಿರುವಿರಿ. ಯೆಮನ್‌ನಲ್ಲಿ ಇದ್ದಾಗಲೂ ಬರೆಯುತ್ತಿದ್ದಿರಿ. ಕನ್ನಡದೊಂದಿಗೆ ನಿಮ್ಮನ್ನು ಹಿಡಿದಿಟ್ಟಿರುವ ಸೂತ್ರ ಯಾವುದು?
ಜೀವನವೊಂದು ಆಕಸ್ಮಿಕ: ಯಾವುದೋ ಒಂದು ಕಡೆ ಯಾವ ಕುಲದಲ್ಲೋ ಭಾಷೆಯಲ್ಲೋ ಹುಟ್ಟುತ್ತೇವೆ. ವಾಸ್ತವದಲ್ಲಿ ನಾವೆಲ್ಲರೂ ಲೋಕಕ್ಕೆ ಸೇರಿದವರು; ಆದರೂ ‘ನಮ್ಮದು’ ಎಂಬ ಒಂದು ಭಾವನಾ ಪ್ರಪಂಚವಿದೆ ನೋಡಿ. ಅಂಥ ಪ್ರಪಂಚದಲ್ಲಿ ನಾನೆಲ್ಲಿ ಹೋದರೂ ಒಬ್ಬ ಕನ್ನಡಿಗ. ಕನ್ನಡಿಗರ ಜೊತೆ ಸಂಬಂಧಿಸುವುದಕ್ಕೆ ನನಗೆ ಕನ್ನಡ ಓದುವುದು, ಕನ್ನಡದಲ್ಲಿ ಬರೆಯುವುದು, ಸಾಧ್ಯವಿದ್ದಾಗ ಮಾತಾಡುವುದು ಒಂದು ಮಾರ್ಗ. ಯಾಕೆಂದರೆ ಯಾವ ಯಾವುದೋ ಕಾರಣಕ್ಕೆ ನಾನು, ನನ್ನಂಥ ಹಲವರು ಕನ್ನಡದ ಪರಿಸರದಿಂದ ದೂರ ಬದುಕುತ್ತಿದ್ದೇವೆ. ಆಗ ಕನ್ನಡದ ಕಾಳಜಿ ಜಾಸ್ತಿ ಇರುತ್ತದೆ.
ಯೆಮನ್‌ನಲ್ಲಿ ಇರುವಾಗ ನನಗೆ ಕೈಯಡುಗೆಯಿಂದ ಹಿಡಿದು ಪಾಠಪ್ರವಚನದವರೆಗೆ ತುಂಬಾ ಕೆಲಸಗಳಿದ್ದವು; ಆದರೂ ಅಲ್ಲಿ ‘ರೋಮಿಯೊ ಅಂಡ್ ಜೂಲಿಯೆಟ್’ ನಾಟಕವನ್ನು (ಕೆ.ವಿ.ಅಕ್ಷರರಿಗೋಸ್ಕರ) ಕೇವಲ ಒಂದು ತಿಂಗಳಲ್ಲಿ ಅನುವಾದ ಮಾಡಿದೆ ಎನ್ನುವುದು ನನಗೇ ಅಚ್ಚರಿಯ ವಿಚಾರ. ಅಮೆರಿಕದಲ್ಲಿ ನಾನು ಮಕ್ಕಳ ಪದ್ಯಗಳನ್ನು ಬರೆಯಲು ಶುರುಮಾಡಿದೆ. ಹೀಗೆ ನಾನು ಹೋದಲ್ಲೆಲ್ಲ ಕನ್ನಡ ನನ್ನ ಜೊತೆ ಇರುತ್ತದೆ. ಆದರೆ ಅದೇನೂ ನನ್ನನ್ನು ಇತರ ಸಂಸ್ಕೃತಿಗಳ ಕುರಿತು ಅಸಹಿಷ್ಣುವನ್ನಾಗಿ ಮಾಡಿಲ್ಲ. ವಾಸ್ತವದಲ್ಲಿ ನನ್ನ ಕುರಿತಾದ ಒಂದು ಆಕ್ಷೇಪವೆಂದರೆ ನಾನು ಪರಸಂಸ್ಕೃತಿಗಳ ಮೋಹಿ ಎನ್ನುವುದು! ನಾನೇನೂ ಅಂಥ ಮೋಹಿಯಲ್ಲ, ಬದಲು ಆಸಕ್ತ ಅಷ್ಟೆ.
ಯಾರು ಏನು ಬೇಕಾದರೂ ಎಲ್ಲಿಂದ ಬೇಕಾದರೂ ಸ್ವೀಕರಿಸಲು ಸ್ವತಂತ್ರರು ಎನ್ನುವುದು ನನ್ನ ನಿಲುವು. ‘ಬಸ್’ ಎನ್ನುವ ಪದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಬಂತು. ಇಂಗ್ಲಿಷ್‌ಗೆ ಎಲ್ಲಿಂದ ಬಂತು? ಓಮ್ನಿಬಸ್ (‘ಎಲ್ಲರಿಗೋಸ್ಕರ’) ಎಂಬ ಲ್ಯಾಟಿನ್ ಪದದಿಂದ; ಈ ಪದದಲ್ಲಿನ ‘ಬಸ್’ ಒಂದು ಪ್ರತ್ಯಯ (‘ಓಸ್ಕರ’ ಎಂಬ ಅರ್ಥದ ವಿಭಕ್ತಿ). ಹೀಗೆ ಪದಮೂಲ ಹುಡುಕುತ್ತಾ ಹೋದಂತೆ ಹಲವು ವಿಸ್ಮಯಕಾರಿ ಸಂಗತಿಗಳು ನಮಗೆ ಸಿಗುತ್ತವೆ. ಯಾವುದೇ ಮನುಷ್ಯನೂ ಒಂದು ದ್ವೀಪವಲ್ಲ, ಯಾವುದೇ ಭಾಷೆಯೂ. ಯಾಕೆ ಹೇಳುತ್ತಿದ್ದೇನೆಂದರೆ, ಹೆಚ್ಚು ತಿಳಿದುಕೊಂಡಂತೆ ಅಸಹಿಷ್ಣುತೆ ತಾನಾಗಿಯೇ ತೊಲಗುತ್ತದೆ. ಶುದ್ಧವಾದುದು ಯಾವುದೂ ಇಲ್ಲ. ಇನ್ನು ಒಬ್ಬ ಭಾಷಾವಿಜ್ಞಾನಿಯಾಗಿ ನಾನು ಭಾಷೆಗಳನ್ನು, ಉಪಭಾಷೆಗಳನ್ನು ವಸ್ತುನಿಷ್ಠವಾಗಿ ನೋಡುತ್ತೇನೆ. ಇದು ನನ್ನ ಕನ್ನಡದ ಪ್ರೀತಿಗೆ ಎಂದೂ ಬಾಧಕವಾಗಿಲ್ಲ.
*ಸಹೃದಯರ ನಡುವೆ ನೀವು ಕವಿಯಾಗಿ ಹೆಚ್ಚು ಪರಿಚಿತರು. ಆದರೆ, ಸಾಹಿತ್ಯದ ಇತರ ಪ್ರಕಾರಗಳಲ್ಲೂ ವಿಪುಲವಾಗಿ ಬರೆದಿದ್ದೀರಿ. ಚಿತ್ರಕಲೆಯ ಸಖ್ಯವನ್ನೂ ಹಚ್ಚಿಕೊಂಡಿದ್ದಿರಿ. ಈ ಅಲೆದಾಟಕ್ಕೆ ಏನು ಕಾರಣ?
ಕವಿತೆ ಬರೆಯುವುದು, ಓದುವುದು ನನಗೆ ಪ್ರಿಯವಾದ ಸಂಗತಿ. ಆದರೆ ಹುಚ್ಚು ಮನಸ್ಸು ನನ್ನಿಂದ ಇತರ ಕೆಲಸಗಳನ್ನೂ ಮಾಡಿಸುತ್ತಿದೆ. ವಿದೇಶದಲ್ಲಿರುವಾಗ ಚಿಕ್ಕ ಚಿಕ್ಕ ಚಿತ್ರಗಳನ್ನು ಸಹ ರಚಿಸುತ್ತಿದ್ದೆ. ಇನ್ನು ಓದುವುದು, ಪಾಠ ಹೇಳುವುದು ನನ್ನ ಉದ್ಯೋಗವಾಗಿತ್ತು; ಒಂದು ಪಾಠ ಚೆನ್ನಾಗಿ ನಡೆಯಿತು ಎಂದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದು ಇಲ್ಲ. ಈಗಲೂ ಓದಿದ ಒಳ್ಳೆಯ ಪುಸ್ತಕಗಳನ್ನು ಇತರರಿಗೆ ಪರಿಚಯಿಸುವ ಹವ್ಯಾಸ ನನಗೆ. ಅದಕ್ಕೆಂದೇ ಲೇಖನಗಳನ್ನು ಬರೆಯುತ್ತೇನೆ. ಈ ಕ್ರಿಯೆಗಳೆಲ್ಲ ಪರಸ್ಪರ ಪೂರಕವೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಇವೆಲ್ಲವೂ ನನ್ನ ಜೀವನಾಸಕ್ತಿಯ ಭಾಗಗಳು. ಬಹುಶಃ ಒಂದೇ ವಿಷಯದ ಮೇಲೆ ಮನಸ್ಸು ಕೇಂದ್ರೀಕರಿಸಿರುತ್ತಿದ್ದರೆ ಮಹತ್ತಾದ ಸಾಧನೆ ಮಾಡಬಹುದಿತ್ತೇನೋ. (ಒಂದೇ ದಿಕ್ಕಿನಲ್ಲಿ ನಡೆದಿದ್ದರೆ ಭೂಮಂಡಲಕ್ಕೆ ಒಂದು ಸುತ್ತು ಹಾಕಬಹುದಿತ್ತು!). ನನ್ನದು ಚಂಚಲ ಮನಸ್ಸು. ಪಾತರಗಿತ್ತಿಯ ಪಕ್ಕ. ಏನೂ ನಷ್ಟವಿಲ್ಲ!
*‘ಅಕ್ಷಯ ಕಾವ್ಯ’ವನ್ನು ಕೆಲವರು ‘ಆಧುನಿಕ ಮಹಾಕಾವ್ಯ’ ಎಂದು ಗುರ್ತಿಸುತ್ತಾರೆ. ‘ಅಕ್ಷಯ ಕಾವ್ಯ’ ನನ್ನ ಪ್ರೀತಿಯ ಕೃತಿ ಎಂದು ನೀವೂ ಹೇಳಿದ್ದೀರಿ. ಈ ಪ್ರೀತಿಗೆ ಏನು ಕಾರಣ? ಈ ಕೃತಿಯನ್ನು ನೀವು ಹೇಗೆ ಗುರ್ತಿಸುತ್ತೀರಿ?
ಆಧುನಿಕ ಕಾಲದಲ್ಲಿ (ಎಂದರೆ ಪ್ರಜಾಪ್ರಭುತ್ವದಲ್ಲಿ) ಮಹಾಕಾವ್ಯ ಸಾಧ್ಯವಿಲ್ಲ ಎಂದು ಅಲೆಕ್ಸಿ ಟಾಕ್ವಿಲ್ ಹತ್ತೊಂಬತ್ತನೇ ಶತಮಾನದಲ್ಲೇ ಹೇಳಿದ. ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ದೊಡ್ಡ ದೊಡ್ಡ ನಾಯಕ ಪಾತ್ರಗಳಿರುವುದಿಲ್ಲ; ಇರುವುದು ಸಾಮಾನ್ಯ ಜನರು ಮಾತ್ರ. ಆಧುನಿಕ ಕಾವ್ಯ ಈ ಜನರ ಕುರಿತಾಗಿರುತ್ತದೆ. ‘ಅಕ್ಷಯ ಕಾವ್ಯ’ ಕೇವಲ ಮನುಷ್ಯರ ಕುರಿತಾದುದು; ಇದನ್ನೊಂದು ನೀಳ್ಗವಿತೆ ಎಂದು ಬೇಕಾದರೂ ಕರೆಯಬಹುದು. ಆಧುನಿಕ ಮಹಾಕಾವ್ಯವನ್ನು ಕಲ್ಪಿಸಬಹುದಾದರೆ ಅದು ಹೀಗಿರಬಹುದೇನೋ ಎನ್ನುವುದಕ್ಕೆ ಅದನ್ನು ‘ಮಹಾಕಾವ್ಯ’ ಎಂದು ಕರೆಯಬಹುದಾಗಿದೆ. ಇದು ನಾನು ಒಂದೇ ಕಾಲಕ್ಕೆ ಹಟ ಹಿಡಿದು ರಚಿಸಿದ ಕೃತಿಯಲ್ಲ; ಹಲವು ಕಾಲಗಳಲ್ಲಿ, ಹಲವು ದೇಶಗಳಲ್ಲಿ ಇತರ ಕೆಲಸಗಳ ನಡುವೆ ಅಷ್ಟಿಷ್ಟಾಗಿ ಬರೆದು ಸೇರಿಸಿದುದು. ಆದ್ದರಿಂದ ಇಲ್ಲಿನ ರಚನೆಗಳಲ್ಲಿ ಏಕಸೂತ್ರವಿಲ್ಲದೆ ಇದ್ದರೂ, ವೈವಿಧ್ಯ ಇದೆ ಎಂದುಕೊಳ್ಳುತ್ತೇನೆ. ಈ ರಚನೆಯ ಜೊತೆ ಸುದೀರ್ಘ ಕಾಲ ನಾನು ಜೀವಿಸಿಯೂ ಇದ್ದೇನೆ. ಇತ್ಯಾದಿ ಕಾರಣಗಳಿಂದ ನನಗೆ ಇದರ ಮೇಲೆ ಹೆಚ್ಚಿನ ಪ್ರೀತಿ.
*‘ಅಕ್ಷಯ ಕಾವ್ಯ’ ರೂಪುಗೊಂಡಿದ್ದರ ಹಿಂದಿನ ಪ್ರೇರಣೆಗಳೇನು?
ಒಂದು ಕವಿತೆಗೆ ಒಂದು ಹೆಸರು ಕೊಟ್ಟರೆ ಆ ಕವಿತೆಯ ವಿಷಯವನ್ನು ನಿರ್ದೇಶಿಸಿದಂತೆ ಆಗುತ್ತದೆ. ಇದರಿಂದ ಅನುಕೂಲತೆಯೂ ಇದೆ, ಅನನುಕೂಲತೆಯೂ ಇದೆ. ಹೆಸರೇ ಇಲ್ಲದಿದ್ದರೆ ವಿಷಯ ಓದುಗರು ಕಂಡುಕೊಂಡಂತೆ ಮುಕ್ತವಾಗಿರುತ್ತದೆ. ಇದರಲ್ಲೇನೂ ಹೊಸತಿಲ್ಲ. ಇಂಗ್ಲಿಷ್‌ನಲ್ಲಿ ಎಝ್ರಾ ಪೌಂಡ್, ವಿಲಿಯಮ್ ಕಾರ್ಲೋಸ್ ವಿಲಿಯಮ್ಸ್, ಚಾರ್ಲ್ಸ್ ಓಲ್ಸನ್ ಮುಂತಾದವರು ಓತಪ್ರೋತವಾಗಿ ಬರೆದಿದ್ದಾರೆ. ಕನ್ನಡದಲ್ಲಿ ಇದು ಹೇಗಿರುತ್ತದೆ ಎನ್ನುವ ಕುತೂಹಲವೇ ನನಗೆ ಪ್ರೇರಣೆ. ಸುದೀರ್ಘತೆಗೆ ಒಂದು ಗುಣವಿದೆ— ಅದು ನಾವು ಕವಿತೆಯೊಂದಿಗೆ ಸಾಕಷ್ಟು ಸಮಯ ಇರುವಂತೆ ಮಾಡುತ್ತದೆ. ಅದೇ ಒಂದು ಅನುಭವ. ಆದರೆ ಮುಂದೆಯೂ ಹೀಗೆಯೇ ಬರೆಯುತ್ತೇನೆ ಎನ್ನಲಾರೆ.
*ಹೈದರಾಬಾದ್‌ನಲ್ಲಿ ಇದ್ದರೂ ಕನ್ನಡ ಸಾಂಸ್ಕೃತಿಕ ಲೋಕದ ಚಟುವಟಿಕೆಗಳ ಪರಿಚಯ ನಿಮಗಿದ್ದೇ ಇದೆ. ಅಂತರ್ಜಾಲದಲ್ಲಿ ನಡೆಯುವ ಚರ್ಚೆಗಳಲ್ಲೂ ಭಾಗವಹಿಸುತ್ತೀರಿ. ಈ ಹಿನ್ನೆಲೆಯಲ್ಲಿ ಇಂದಿನ ಕನ್ನಡ ಸಾಂಸ್ಕೃತಿಕ ಜಗತ್ತಿನ ಬಗ್ಗೆ ನಿಮ್ಮ ಅನಿಸಿಕೆ ಏನು? ಸಾಹಿತ್ಯಕ್ಕೆ ಪೂರಕವಾದ ವಾತಾವರಣ ಇದೆ ಎಂದು ನೀವು ಭಾವಿಸುವಿರಾ?
ಸಾಹಿತ್ಯಕ್ಕೆ ಪೂರಕವಾದ ವಾತಾವರಣ ಇಂದು ಇದೆಯೋ ಇಲ್ಲವೋ ಹೇಳುವುದು ಕಷ್ಟ. ಆದರೆ ಕಾಲ ಬದಲಾಗಿದೆ. ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿಗಳಿಂದಾಗಿ ಸಂವಹನ ಕ್ಷೇತ್ರದಲ್ಲಿ ವೇಗವರ್ಧನೆಯನ್ನು ಕಾಣುತ್ತೇವೆ. ಹಲವು ಸಾಮಾಜಿಕ ತಾಣಗಳು ಇಂಟರ್ನೆಟ್‌ನಲ್ಲಿ ಉತ್ಪತ್ತಿಯಾಗಿವೆ. ಗಾಢವಾದ ಅನುಭವಕ್ಕೆ ಇಷ್ಟೊಂದು ವೇಗ ಸಹಕಾರಿಯೇ ಎನ್ನುವ ಪ್ರಶ್ನೆಯೊಂದು ಏಳುತ್ತದೆ. ಸೊಲೊಮನ್ ಗ್ರಂಡಿಯ ಜೀವನ ಒಂದು ವಾರದಲ್ಲಿ ಮುಗಿಯುತ್ತದೆ! ಈ ವೇಗದ ಒಂದು ಪರಿಣಾಮವೇ ಅಸಹನೆ ಎಂದರೆ ನೀವು ಆಶ್ಚರ್ಯಪಡಬೇಡಿ, ಆದರೆ ನನಗೆ ಹಾಗನಿಸುತ್ತದೆ. ಹೆಚ್ಚು ಅವಸರದಿಂದ ಓಡುವವ ಇತರರನ್ನು ಒತ್ತರಿಸಿಕೊಂಡೇ ಹೋಗುತ್ತಾನೆ. ರೋಡ್ ರೇಜಿನ ಬಗ್ಗೆ ನೀವು ಕೇಳಿದ್ದೀರಿ. ಮುಂದೆ ಹೋಗುವ ವಾಹನವನ್ನು ಹಿಂದಕ್ಕೆ ಹಾಕಬೇಕು ಎನ್ನುವುದೇ ರೋಡ್ ರೇಜಿನ ಹಟ. ಯಾಕೆ? ಯಾಕೆಂದು ಗೊತ್ತಿಲ್ಲ. ಈವತ್ತಿನ ಜೀವನ ಹಾಗಾಗಿದೆ. ಆದ್ದರಿಂದ ದೀರ್ಘವಾಗಿ ಮತ್ತು ಆಳವಾಗಿ ಓದಲು ಪುರುಸೊತ್ತಿಲ್ಲ.
ದೀರ್ಘವಾಗಿ ಮತ್ತು ಆಳವಾಗಿ ಓದಲು ಕೆಲವು ಗುಣಗಳು ಅಗತ್ಯ: ಆಸಕ್ತಿ, ಸಹನೆ ಮತ್ತು ಕ್ಷಮಾಗುಣ. ಈ ಗುಣಗಳು ಇತರರನ್ನು ತಿಳಿದುಕೊಳ್ಳುವುದಕ್ಕೂ ಅಗತ್ಯ. ಒಂದು ಹೊಸ ಭಾಷೆ ಅಥವಾ ಇನ್ನೇನಾದರೂ ಕಲಿಯಿರಿ, ನಿಮಗೆ ಗೊತ್ತಿದ್ದನ್ನು ಇತರರಿಗೆ ಕಲಿಸಿರಿ, ಮಂಗೋಲಿಯನ್ನರ ಬಗ್ಗೆ ಓದಿರಿ (ಉದಾಹರಣೆಗೆ), ಮಧ್ಯಯುಗದಲ್ಲಿ ಏನಾಯಿತು ಎಂಬುದನ್ನು ತಿಳಿಯಿರಿ, ಇನ್ನೊಂದು ಧರ್ಮದ ಗ್ರಂಥಗಳನ್ನು ಓದಿರಿ. ಇನ್ನು ಇಂದಿನ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಬಂದರೆ ಇಲ್ಲಿ ಸಹಿಷ್ಣುತೆಗಿಂತ ಅಸಹಿಷ್ಣುತೆಯೇ ಜಾಸ್ತಿ ಕಾಣಿಸುತ್ತದೆ; ಸಹನೆಗಿಂತ ಅಸಹನೆಯೇ ಜಾಸ್ತಿ. ಬಹುಶಃ ನಮಗೆ ಹೊಸದಾಗಿ ಸಿಕ್ಕಿದ ವ್ಯಕ್ತಿಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮುಂತಾದವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ನಾವಿನ್ನೂ ತಿಳಿದುಕೊಂಡಿಲ್ಲದೆ ಇರುವುದೂ ಇದಕ್ಕೆ ಒಂದು ಕಾರಣ. ಹೊಸದಾಗಿ ಸೈಕಲ್ ಕಲಿತವನು ಇಡೀ ರೋಡು ತನ್ನದೆಂದು ತಿಳಿದುಕೊಳ್ಳುತ್ತಾನೆ.
ಆದರೆ ಇದೊಂದೇ ಕಾರಣವೂ ಅಲ್ಲ. ತಾನೇ ಶ್ರೇಷ್ಠ, ತನ್ನ ವಿಚಾರವೇ ಸತ್ಯ, ತನ್ನ ಧರ್ಮವೇ ಅತ್ಯುತ್ತಮ ಎಂಬಿತ್ಯಾದಿ ಅಹಮಿಕೆಯೇ ಅಸಹಿಷ್ಣುತೆಗೆ ಮುಖ್ಯ ಕಾರಣ. ಇದು ಅರಿವಿನ ಕೊರತೆಯಿಂದ ಮೂಡುವಂಥದು. ಇದರ ಕುರಿತಾದ ಎಚ್ಚರಿಕೆಯಾಗಿ ಸಾಹಿತ್ಯ ರಚನೆಯಾಗುವುದು ಕೂಡ ಇದನ್ನು ಎದುರಿಸುವ ಒಂದು ವಿಧಾನ. ಸಾಹಿತ್ಯ ತನ್ನ ಸಾಧ್ಯತೆಯ ವಾತಾವರಣವನ್ನು ತಾನೇ ನಿರ್ಮಿಸಿಕೊಳ್ಳಬೇಕಾಗುತ್ತದೆ. ಯೇಟ್ಸ್, ಕಾಫ್ಕಾ, ಎಲಿಯೆಟ್ ಮುಂತಾದವರು ಸಾಹಿತ್ಯ ರಚನೆ ಮಾಡಿದ್ದು ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಕಾಲದಲ್ಲಿ. ಹಾಗೆ ನೋಡಿದರೆ ಪ್ರಶಾಂತವಾದ ಕಾಲವೇ ಚರಿತ್ರೆಯಲ್ಲಿ ಇರಲಿಲ್ಲ.
* ನಿಮ್ಮ ಪ್ರಕಾರ ಲೇಖಕ ಮತ್ತು ಸಮಾಜದ ನಡುವಣ ಸಂಬಂಧ ಯಾವ ಬಗೆಯದು? ವರ್ತಮಾನದ ತವಕ ತಲ್ಲಣಗಳಿಗೆ ಸ್ಪಂದಿಸುವುದು ಲೇಖಕನೊಬ್ಬನ ಪಾಲಿಗೆ ಎಷ್ಟು ಅನಿವಾರ್ಯ?
ಲೇಖಕನನ್ನು ಅವನಷ್ಟಕ್ಕೇ ಬಿಡುವುದರಿಂದ ಅವನು ಸೃಜನಶೀಲನಾಗಿ ಬರೆಯುವುದು ಸಾಧ್ಯ. ಯಾವಾಗ ಅವನು ಒತ್ತಡಕ್ಕೆ ಒಳಗಾಗುತ್ತಾನೋ ಆಗ ಅವನು ಬರೆಯುವುದೆಲ್ಲ ‘ಹಿಸ್ ಮಾಸ್ಟರ್ಸ್ ವಾಯ್ಸ್’ ಆಗುತ್ತದೆ. ಲೇಖಕ ಹುಟ್ಟುತ್ತಲೇ ಅಕ್ಷರಶಃ ಸಮಾಜದ ಅಂಗವಾಗಿರುತ್ತಾನೆ ಮತ್ತು ವರ್ತಮಾನದಲ್ಲೇ ಬದುಕಿರುತ್ತಾನೆ ಕೂಡ. ಆದರೆ ನೀವಿಲ್ಲಿ ಉದ್ದೇಶಿಸುವುದು ಬಹುಶಃ ಆಕ್ಟಿವಿಸಮ್ ಎಂದು ತೋರುತ್ತದೆ. ಇದರ ಆಯ್ಕೆಯನ್ನು ಲೇಖಕನಿಗೇ ಬಿಡಬೇಕು. ಇಲ್ಲದಿದ್ದರೆ ಅದೊಂದು ಒತ್ತಾಯವಾಗುತ್ತದೆ. ಜಗತ್ತಿನ ಹಲವು ಶ್ರೇಷ್ಠ ಲೇಖಕರು ಆಕ್ಟಿವಿಸ್ಟರು ಅಲ್ಲದೆಯೂ ಉತ್ತಮ ಕೃತಿಗಳನ್ನು ನೀಡಿದ್ದಾರೆ; ಶ್ರೇಷ್ಠರಾದ ಲೇಖಕರಲ್ಲಿ ಹಲವರು ಆಕ್ಟಿವಿಸ್ಟರು ಕೂಡ ಇದ್ದಾರೆ. ಇನ್ನು ಲೇಖಕ ವ್ಯಕ್ತವಾಗಿ ಸಮಕಾಲೀನ ತಲ್ಲಣಗಳಿಗೆ ತನ್ನ ಸಾಹಿತ್ಯದಲ್ಲಿ ಸ್ಪಂದಿಸುವಂತೆ ಕಾಣಿಸದೆ ಇದ್ದರೂ, ಅವು ಅವನ ಕೃತಿಗಳ ಧ್ವನಿಯಾಗಿರುವುದು ಸಾಧ್ಯ. ಇದಕ್ಕೆ ಕಾಫ್ಕಾ ಒಂದು ಉದಾಹರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.