ADVERTISEMENT

ಹೆಣ್ಣಿನ ಮೇಲೆ ಕಣ್ಣು ಹಾಕಿದ ‘ಕೀಚಕ ವಧೆ’...

ಎಂ.ಟಿ.ನಾಣಯ್ಯ
Published 3 ಸೆಪ್ಟೆಂಬರ್ 2016, 20:18 IST
Last Updated 3 ಸೆಪ್ಟೆಂಬರ್ 2016, 20:18 IST
ಹೆಣ್ಣಿನ ಮೇಲೆ ಕಣ್ಣು ಹಾಕಿದ ‘ಕೀಚಕ ವಧೆ’...
ಹೆಣ್ಣಿನ ಮೇಲೆ ಕಣ್ಣು ಹಾಕಿದ ‘ಕೀಚಕ ವಧೆ’...   

ಸುಂದರಿ ಸೀತಾ, ಅಂಗವಿಕಲೆ. ಕಾಲಿನ ಶಕ್ತಿ ಕಳೆದುಕೊಂಡಿರುವ ಆಕೆಗೆ ಗಂಡ ನಜೀರನೇ ಆಸರೆ. ಇವರದ್ದು ಅಂತರ ಧರ್ಮದ ಪ್ರೇಮ ಕಥನ. ತಮಿಳುನಾಡಿನ ಮೂಲದ ಇವರು ಪರಸ್ಪರ ಮೆಚ್ಚಿ, ಮದುವೆಯಾದವರು.

ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಮದುವೆಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಇರಲಿಲ್ಲ. ಆದ್ದರಿಂದ ದಂಪತಿ ಪ್ರತ್ಯೇಕ ಮನೆ ಮಾಡಿ ವಾಸವಾಗಿದ್ದರು. ಆದರೂ ಅಲ್ಲಿಯ ಜನರು ಇವರನ್ನು ನೆಮ್ಮದಿಯಿಂದ ಇರಗೊಡಲಿಲ್ಲ.

ಈ ಹಿನ್ನೆಲೆಯಲ್ಲಿ ಸೀತಾ ಹಾಗೂ ನಜೀರ್, ಚೆನ್ನೈನಿಂದ ಬೆಂಗಳೂರಿಗೆ ಬಂದು ಮನೆ ಬಾಡಿಗೆಗೆ ಪಡೆದುಕೊಂಡರು. ಖಾಸಗಿ ಕಂಪೆನಿಯೊಂದರಲ್ಲಿ ಸೀತಾಳಿಗೆ ಕೆಲಸ ಸಿಗುತ್ತದೆ. ಆಕೆ ಕೆಲಸಕ್ಕೆ  ಕೆಲವು ಮಹಡಿಗಳನ್ನು ಹತ್ತಿ ಹೋಗಬೇಕಿರುವ ಕಾರಣ, ಅವಳನ್ನು ಹೊತ್ತುಕೊಂಡು ಹೋಗುವ ಕೆಲಸ ನಜೀರನದ್ದಾಗಿರುತ್ತದೆ. ಇನ್ನೊಂದೆಡೆ ನಜೀರ್‌ಗೆ ಕೆಲಸದ ಹುಡುಕಾಟ. ಈ ತೊಂದರೆಯ ನಡುವೆಯೂ ದಂಪತಿಯದ್ದು ಅನ್ಯೋನ್ಯ ಜೀವನ.

ಅದೊಂದು ದಿನ ಗ್ರಹಚಾರ ಇವರ ಬದುಕನ್ನು ವಕ್ಕರಿಸುತ್ತದೆ. ದುಬೈನಲ್ಲಿರುವ ರಾಜಾ ಎಂಬಾತ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದ. ಅವನು ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ಈ ದಂಪತಿಯ ಮನೆಯ ಎದುರೇ ಹಾಳಾಯಿತು.

ಸಮೀಪದಲ್ಲಿ ಕಾರಿನ ರಿಪೇರಿ ಮಾಡುವವರಿಗಾಗಿ ಆತ ತಡಕಾಡುತ್ತಿದ್ದಾಗ, ನಜೀರ್‌ ಇದನ್ನು ನೋಡುತ್ತಾನೆ. ಕಾರು ರಿಪೇರಿಯನ್ನು ಅರಿತ ಆತ ಅದನ್ನು ಸರಿಪಡಿಸಿ ಕೊಡುತ್ತಾನೆ. ಇದರಿಂದ ಸಂತಸಗೊಂಡ ರಾಜಾ, ನಜೀರನ ಪರಿಚಯ ಮಾಡಿಕೊಂಡ. ಪರಸ್ಪರ ಪರಿಚಯದ ನಂತರ ರಾಜಾನನ್ನು ನಜೀರ್‌ ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋದ.

ಮನೆಯಲ್ಲಿ ಸೀತಾ ಇದ್ದಳು. ಸೀತಾಳ ಸೌಂದರ್ಯ ರಾಜಾನ ಕಣ್ಣು ಕುಕ್ಕಿತು.  ಆತನ ಕಾಮುಕತೆ ಜಾಗೃತವಾಯಿತು. ಆಕೆಯನ್ನು ಹೇಗಾದರೂ ಪಡೆದುಕೊಳ್ಳಬೇಕು ಎಂದು ಎಣಿಸತೊಡಗಿದ.

ಆಗ ಅವನಿಗೆ ಕಂಡದ್ದು ಆಕೆಯ ಅಂಗವೈಕಲ್ಯ. ಸೀತಾಳ ಮೇಲೆ ಕರುಣೆ ತೋರುವಂತೆ ನಾಟಕವಾಡಿದ ಆತ, ದಂಪತಿ ಬಳಿ ತಾನೊಬ್ಬ ವೈದ್ಯ ಎಂದು ಹೇಳಿಕೊಂಡ. ದುಬೈನಲ್ಲಿ ಈ ರೀತಿಯ ಅಂಗವಿಕಲರಿಗೆ ತಾನು ಚಿಕಿತ್ಸೆ ನೀಡಿದ್ದು, ಅವರೆಲ್ಲರೂ ಈಗ ಸಲೀಸಾಗಿ ನಡೆಯುತ್ತಿದ್ದಾರೆ, ಇದೇನು ದೊಡ್ಡ ವಿಷಯವಲ್ಲ ಎಂದ ಆತ, ಸೀತಾಳಿಗೂ ತಾನು ಚಿಕಿತ್ಸೆ ನೀಡುವುದಾಗಿ ನಂಬಿಸಿಬಿಟ್ಟ.

ದಂಪತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ರಾಜಾ ಆಗೀಗ ಮನೆಗೆ ಬಂದು ಚಿಕಿತ್ಸೆ ನೀಡುವಂತೆ ನಟಿಸುತ್ತಿದ್ದ. ಆದರೆ ಸೀತಾಳಿಗೆ ರಾಜಾನ ನಡವಳಿಕೆ ಮೇಲೆ ಸಂದೇಹ ಮೂಡಲು ಶುರುವಾಯಿತು. ಆ ಬಗ್ಗೆ ತನ್ನ ಗಂಡನಿಗೆ ಹೇಳಿದಳು. ಆದರೆ ನಜೀರ್ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ಏಕೆಂದರೆ ತನ್ನ ಮೋಸದ ಮಾತಿನಿಂದ ನಜೀರನನ್ನು ಮರುಳು ಮಾಡಿಬಿಟ್ಟಿದ್ದ ರಾಜಾ. ಆತನಿಂದ ಚಿಕಿತ್ಸೆ ತನಗೆ ಬೇಡ ಎಂದು ಸೀತಾ ಹೇಳಿದಾಗ, ನಜೀರ್ ಸಿಟ್ಟುಗೊಂಡು ಆಕೆಗೇ ಬೈದ. ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ಕೂಡ ಆಯಿತು. ಆದರೆ ಪದೇ ಪದೇ ಸೀತಾ ಈ ಬಗ್ಗೆ ಹೇಳುತ್ತಿದ್ದುದರಿಂದ ರಾಜಾನ ಬಗ್ಗೆ ಆತನಿಗೂ ಸಂದೇಹ ಉಂಟಾಯಿತು.

ಹೀಗಿರುವಾಗ ರಾಜಾ ಒಂದು ದಿನ ಸೀತಾಳಿಗೆ ಕರೆ ಮಾಡಿ ತಾನು ಮನೆಗೆ ಚಿಕಿತ್ಸೆ ನೀಡಲು ಬರುವುದಾಗಿ ಹೇಳಿದ. ‘ಗಂಡ ಮನೆಯಲ್ಲಿ ಇಲ್ಲ, ಅವರು ಬಂದ ಮೇಲೆ ಬನ್ನಿ’ ಎಂದು ಸೀತಾ ಹೇಳಿದಳು. ಆದರೆ ರಾಜಾ ಕೇಳಲಿಲ್ಲ.

‘ತುರ್ತಾಗಿ ಚಿಕಿತ್ಸೆ ನೀಡಬೇಕಿದೆ, ಗಂಡ ಮನೆಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ಬರುತ್ತೇನೆ’ ಎಂದ. ಗಾಬರಿಗೊಂಡ ಸೀತಾ ಈ ವಿಷಯವನ್ನು ಗಂಡನಿಗೆ ತಿಳಿಸಿದಳು. ಈಗ ನಜೀರ್‌ಗೆ ರಾಜಾನ ಬಗ್ಗೆ ಸಂದೇಹ ಇನ್ನಷ್ಟು ಬಲವಾಯಿತು. ಅವನಿಗೊಂದು ಗತಿ ಕಾಣಿಸಲೇಬೇಕು ಎಂದುಕೊಂಡ.
ರಾಜಾನನ್ನು ಮನೆಗೆ ಕರೆಯುವಂತೆ ಹೆಂಡತಿಗೆ ತಿಳಿಸಿದ ನಜೀರ್. ಗಂಡ ಹೇಳಿದಂತೆ ಸೀತಾ ರಾಜಾನನ್ನು ಮನೆಗೆ ಕರೆದಳು.

ನಜೀರ್, ಹೆಂಡತಿಯನ್ನು ಹೊರಕ್ಕೆ ಕಳುಹಿಸಿ, ಮನೆಯಲ್ಲಿ ತಾನೊಬ್ಬನೇ ಉಳಿದ. ಸೀತಾ ಕರೆದುದರಿಂದ ರಾಜಾ ಹಿರಿಹಿರಿ ಹಿಗ್ಗಿದ. ಮನೆಗೆ ಬಂದ. ಆದರೆ ಮನೆಯಲ್ಲಿ ಸೀತಾ ಬದಲು ನಜೀರ್ ಇದ್ದದ್ದು ನೋಡಿ ಅವನಿಗೆ ‘ಶಾಕ್’ ಆಯಿತು. ಸೀತಾ ಎಲ್ಲಿ ಎಂದು ಪ್ರಶ್ನಿಸಿದ. ಅವಳನ್ನು ನೋಡಲು ಸಾಧ್ಯ ಇಲ್ಲ ಎಂದು ನಜೀರ್‌ ಹೇಳಿದ. ಮಾತಿಗೆ ಮಾತು ಬೆಳೆಯಿತು.

ಸೀತಾಳನ್ನು ತನ್ನ ಬಳಿ ಕಳುಹಿಸಿದರೆ ದುಡ್ಡು ಕೊಡುವುದಾಗಿ ರಾಜಾ ಹೇಳಿದ. ಆಕೆ ತನಗೆ ಬೇಕು ಎಂದ. ನಂತರ ತಾನು ವೈದ್ಯ ಅಲ್ಲ ಎಂಬ ಸತ್ಯ ಬಿಚ್ಚಿಟ್ಟ. ಹೆಂಡತಿಯ ಬಗ್ಗೆ ಈ ರೀತಿಯ ಅಸಹ್ಯವಾಗಿ ಮಾತನಾಡುವುದನ್ನು ಕೇಳಿದ ನಜೀರನ ಪಿತ್ತ ನೆತ್ತಿಗೇರಿತು.

ಸೀತಾ ತನಗೆ ಬೇಕು ಎಂದು ರಾಜಾ ನೇರವಾಗಿಯೇ ಹೇಳಿದಾಗ ಇದನ್ನು ತಡೆದುಕೊಳ್ಳಲಾಗದ ನಜೀರ್ ಅಲ್ಲಿಯೇ ಇದ್ದ ಸಲಾಕೆಯಿಂದ ರಾಜಾನ ತಲೆಗೆ ಬಲವಾಗಿ ಹೊಡೆದ. ಈ ಹೊಡೆತಕ್ಕೆ ರಾಜಾ ಅಲ್ಲಿಯೇ ಕುಸಿದುಬಿದ್ದ. ನಜೀರ್ ನೋಡಿದಾಗ ರಾಜಾ ಸತ್ತುಹೋಗಿದ್ದ.

ನಜೀರ್‌ಗೆ ಏನು ಮಾಡಬೇಕು ಎಂದು ತಿಳಿಯದಾಯಿತು. ರಾಜಾನ ಶವವನ್ನು ಅವನದ್ದೇ ಕಾರಿನೊಳಕ್ಕೆ ಹಾಕಿ, ಕಾರನ್ನು ಲಾಕ್‌ ಮಾಡಿ ಬೆಂಗಳೂರು ಹೊರವಲಯದ ಹೊಸಕೋಟೆಯ ಬಳಿ ಬಿಟ್ಟುಬಂದ. ಕಾರಿನಲ್ಲಿ ಶವ ಇದ್ದುದು ಅಲ್ಲಿಯ ಜನರಿಗೆ ತಿಳಿದಾಗ, ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. 

ಆಗ ಅಶೋಕ್ ಕುಮಾರ್ ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದರು. ಈ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡರು. ರಾಜಾನ ಮೊಬೈಲ್ ಫೋನಿನಲ್ಲಿದ್ದ ಕರೆಗಳ ಪಟ್ಟಿಯನ್ನು ಪರಿಶೀಲಿಸಿದ ಅವರಿಗೆ ನಜೀರ್‌ ದಂಪತಿ ಮೇಲೆ ಸಂದೇಹ ಬಂತು.

ದಂಪತಿಗಾಗಿ ಹುಡುಕಾಡಿದಾಗ ಅವರು ಬೆಂಗಳೂರಿನಲ್ಲಿ ಸಿಗಲಿಲ್ಲ. ತನಿಖೆ ಚುರುಕುಗೊಳಿಸಿದಾಗ ಅವರಿಗೆ ದಂಪತಿ ಬೆಂಗಳೂರು ಬಿಟ್ಟು ಚೆನ್ನೈಗೆ ಹೋಗಿರುವುದಾಗಿ ತಿಳಿದುಬಂತು. ಅವರ ಸಂದೇಹ ಇನ್ನಷ್ಟು ಬಲವಾಯಿತು. ಚೆನ್ನೈನ ಪೊಲೀಸರ ಜೊತೆಗೂಡಿ ಕಾರ್ಯಾಚರಣೆ ನಡೆಸಿದಾಗ ಕೊನೆಗೂ ನಜೀರ್ ಸಿಕ್ಕಿಬಿದ್ದ. ಅಲ್ಲಿ ಅವನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಯಿತು.

ದಾರಿಯ ಮಧ್ಯೆ ಸತ್ಯ ನುಡಿಯುವಂತೆ ಅಶೋಕ್ ಕುಮಾರ್ ಅವರು ನಜೀರನಿಗೆ ಹೇಳಿದರು. ಆತ ನಡೆದ ವಿಷಯಗಳನ್ನು ಚಾಚೂತಪ್ಪದೆ ವಿವರಿಸಿದ. ‘ನನ್ನ ಪತ್ನಿಯ ಮೇಲೆ ಕಣ್ಣುಹಾಕಿದ ಕೀಚಕ ಆತ. ಆದ್ದರಿಂದ ಬೇರೆ ದಾರಿಯಿಲ್ಲದೆ ನಾನು ಈ ರೀತಿ ಮಾಡಬೇಕಾಯಿತು’ ಎಂದೆಲ್ಲಾ ವಿವರಿಸಿದ.

ಈ ಕತೆಯನ್ನು ಕೇಳಿ ಅಶೋಕ್ ಕುಮಾರ್ ಅವರಿಗೆ ನಜೀರನ ಮೇಲೆ ಕನಿಕರ ಹುಟ್ಟಿತು. ಹಾಗೆಂದು ತಮ್ಮ ಕರ್ತವ್ಯವನ್ನು ಅವರು ಮರೆಯಬಾರದಲ್ಲ. ನಜೀರನನ್ನು ಬಂಧಿಸಿ ಜೈಲಿನಲ್ಲಿ ಇಟ್ಟು, ಆತನ ವಿರುದ್ಧ ಕೊಲೆ ಆರೋಪದ ಅಡಿ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಶುರುವಾಗಲು ಇನ್ನೇನು ಸ್ವಲ್ಪ ದಿನ ಬಾಕಿ ಇತ್ತು.

ಆ ನಡುವೆ, ಅಶೋಕ್ ಕುಮಾರ್ ಅವರು ನನ್ನ ಬಳಿ ಬಂದರು. ನಜೀರನ ಪರವಾಗಿ ವಕಾಲತ್ತು ವಹಿಸುವಂತೆ ಹೇಳಿದರು. ಕೊಲೆ ಆಪಾದನೆ ಮೇಲೆ ದೋಷಾರೋಪ ಪಟ್ಟಿ ತಯಾರಿಸಿ, ಆತನನ್ನು ಜೈಲಿನಲ್ಲಿ ಇಟ್ಟ ಮೇಲೆ ಅವನ ಪರವಾಗಿ ವಕಾಲತ್ತು ವಹಿಸುವಂತೆ ನನಗೆ ಹೇಳುತ್ತಿರುವಿರಲ್ಲ ಎಂದು ತಮಾಷೆಯಿಂದ ಕೇಳಿದೆ.

ನಜೀರನ ಕತೆ ಹೇಳಿದ ಅವರು, ಅವನು ಕೀಚಕನ ವಧೆ ಮಾಡಿದ್ದಾನೆ ಅಷ್ಟೆ ಎಂದು ಹೇಳಿದರು. ಅವರು ಹಾಗೆ ಹೇಳಲು ಇನ್ನೂ ಒಂದು ಕಾರಣವಿತ್ತು. ಅದೇನೆಂದರೆ ಗಂಡನನ್ನು ಜೈಲಿನಿಂದ ಬಿಡಿಸಿಕೊಳ್ಳಲು ಸೀತಾ ಬೆಂಗಳೂರಿಗೆ ಬಂದು ಚಿಕ್ಕ ರೂಮ್‌ ಮಾಡಿಕೊಂಡು ಇದ್ದಳು. ಅವರಿವರ ಬಳಿ ಕಾಡಿಬೇಡಿ, ಅಲ್ಲಲ್ಲಿ ಕೆಲಸ ಮಾಡಿ ಒಂದು ಲಕ್ಷ ರೂಪಾಯಿಯನ್ನು ಕೂಡಿಸಿಟ್ಟಿದ್ದಳು.

ಈ ವಿಷಯ ಉಪ್ಪಾರಪೇಟೆಯ ಪೊಲೀಸ್ ಸಿಬ್ಬಂದಿ ಒಬ್ಬರಿಗೆ ಹೇಗೋ ತಿಳಿದುಬಿಟ್ಟಿತು. ವಕೀಲರೊಬ್ಬರನ್ನು ಆಕೆಯ ರೂಮಿಗೆ ಕರೆದುಕೊಂಡು ಹೋದ ಆ ಪೊಲೀಸ್, ‘ಈ ವಕೀಲರು ನಿನ್ನ ಗಂಡನ ಪರವಾಗಿ ವಕಾಲತ್ತು ವಹಿಸುತ್ತಾರೆ.

ಇಲ್ಲದೇ ಹೋದರೆ ಗಂಡನಿಗೆ ಜೀವಾವಧಿ ಶಿಕ್ಷೆಯೋ, ಮರಣದಂಡನೆಯೋ ಆಗುತ್ತದೆ’ ಎಂದೆಲ್ಲಾ ಹೇಳಿ ಆಕೆ ಕೂಡಿಟ್ಟಿದ್ದ ಒಂದು ಲಕ್ಷ ರೂಪಾಯಿಯನ್ನು ಲಪಟಾಯಿಸಿಕೊಂಡು ಹೋಗಿ ನಾಪತ್ತೆಯಾಗಿ ಬಿಟ್ಟಿದ್ದರು! (ಇದಕ್ಕೂ ಮೊದಲು ಸೀತಾಳನ್ನು ಹೊತ್ತುಕೊಂಡು ಆಕೆಯ ಕಚೇರಿಗೆ ನಜೀರ್‌ ಬಿಟ್ಟುಬರುವ ಸಮಯದಲ್ಲಿ ಅಂಗವಿಕಲರ ಕುರ್ಚಿಯನ್ನು ಆತ ‘ನೋ ಪಾರ್ಕಿಂಗ್’ ಜಾಗದಲ್ಲಿ ನಿಲ್ಲಿಸಿದ್ದ. ಆಗ ಅಲ್ಲಿಗೆ ಬಂದಿದ್ದ ಪೊಲೀಸ್‌ ಸಿಬ್ಬಂದಿ, ದಂಡ ನೀಡುವಂತೆ ಹೇಳಿ ನಜೀರನ ಪರ್ಸನ್ನೇ ಎತ್ತಿಕೊಂಡು ಹೋಗಿದ್ದರು! ಈ ಪ್ರಕರಣಕ್ಕೂ, ಇದಕ್ಕೂ ಸಂಬಂಧ ಇಲ್ಲ ಬಿಡಿ. ಕೆಲವು ಪೊಲೀಸರ ಕಾರ್ಯವೈಖರಿಯ ಬಗ್ಗೆ ವಿವರಿಸಿದೆ ಅಷ್ಟೆ...)

ಆದರೆ ಎಲ್ಲಾ ಪೊಲೀಸರೂ ಹೀಗೇ ಇರುವುದಿಲ್ಲವಲ್ಲ! ಅಶೋಕ್ ಕುಮಾರ್ ಅವರು ಕೋರಿಕೊಂಡಂತೆ ನಾನು ನಜೀರನ ಪರವಾಗಿ ವಕಾಲತ್ತು ವಹಿಸಿದೆ.

ಕೇಸನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ, ನಜೀರನನ್ನು ಬಿಡಿಸುವುದು ಅಷ್ಟು ಕಷ್ಟವಾಗಿ ಕಾಣಲಿಲ್ಲ. ಏಕೆಂದರೆ ಬಹುತೇಕ ಪ್ರಕರಣಗಳಂತೆ ಇದರಲ್ಲಿಯೂ ಕೊಲೆಗೆ ಪ್ರತ್ಯಕ್ಷ ಸಾಕ್ಷಿಗಳು ಇರಲಿಲ್ಲ.

ಎಲ್ಲವೂ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನಿಂತಿತ್ತು. ರಾಜಾನ ಮೊಬೈಲ್ ಫೋನ್‌ನಿಂದ ದಂಪತಿಗೆ ಕರೆ ಹೋಗಿ-ಬಂದುದಕ್ಕೆ ಸಾಕ್ಷ್ಯ ಸಿಕ್ಕಿದ್ದರೂ ಅದೊಂದೇ ಆಧಾರದ ಮೇಲೆ ನಜೀರನೇ ಕೊಲೆ ಮಾಡಿದ್ದಾನೆ ಎಂದು ಹೇಳುವಂತೆ ಇರಲಿಲ್ಲ. ಆದ್ದರಿಂದ ಇದನ್ನೇ ಬಳಸಿಕೊಂಡು ಕೋರ್ಟ್‌ನಲ್ಲಿ ವಾದ ಮಂಡಿಸಿದೆ. ನ್ಯಾಯಾಧೀಶರು ನನ್ನ ವಾದವನ್ನು ಮನ್ನಿಸಿ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ನಜೀರನನ್ನು ಬಿಡುಗಡೆಗೊಳಿಸಿದರು.

ಇಂಥ ಎಷ್ಟೋ ಪ್ರಕರಣಗಳಲ್ಲಿ ನಾನು ಆರೋಪಿ ಪರವಾಗಿ ವಕಾಲತ್ತು ವಹಿಸಿದ್ದೇನೆ. ಅದೇ ರೀತಿ ಪೊಲೀಸ್‌ ಅಧಿಕಾರಿಗಳಿಗೂ ಇಂಥ ಪ್ರಕರಣವೇನೂ ಹೊಸತಲ್ಲ. ಕೊಲೆ ಆಪಾದನೆ ಹೊತ್ತ ಕಕ್ಷಿದಾರರನ್ನು ಬಿಡುಗಡೆಗೊಳಿಸುವುದು ನಮ್ಮಂಥ ವಕೀಲರ ಕರ್ತವ್ಯವಾದರೆ, ಆರೋಪಿಗಳನ್ನು ಅಪರಾಧಿಯನ್ನಾಗಿಸುವುದು ಪೊಲೀಸರ ಕರ್ತವ್ಯ. 

ಹೆಣ್ಣಿನ ಮೇಲೆ ಕಣ್ಣು ಹಾಕುವ ಇಂಥ ಕಾಮುಕರು ಕೊಲೆಯಾಗುವ ಪ್ರಕರಣಗಳೂ ಹೊಸತೇನಲ್ಲ. ಆದರೆ ಈ ಪ್ರಕರಣ ಮಾತ್ರ ಎಲ್ಲ ಪ್ರಕರಣಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ನಜೀರನ ಕತೆಯನ್ನು ಆರಂಭದಿಂದಲೂ ಕೇಳಿದ ಪೊಲೀಸ್‌ ಅಧಿಕಾರಿಯೊಬ್ಬರು ಆತನನ್ನು ಬಿಡುಗಡೆಗೊಳಿಸುವಂತೆ ಕೋರಿಕೊಂಡಿದ್ದು ಈ ಪ್ರಕರಣದ ವಿಶೇಷ  ಎನ್ನಬಹುದು.

ಇದೇ ಕಾರಣಕ್ಕೆ, ಈ ದಂಪತಿಯ ಕತೆಯನ್ನು ಆಧರಿಸಿದ ಕನ್ನಡ ಚಲನಚಿತ್ರವೊಂದು 2013ರಲ್ಲಿ ಬಿಡುಗಡೆಗೊಂಡು 100 ದಿನ ಓಡಿದೆ. ಈ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲೂ ರೀಮೇಕ್‌ ಮಾಡಲಾಗಿದೆ. ಆದರೆ ಚಿತ್ರದಲ್ಲಿ  ಇನ್ನಷ್ಟು ಕುತೂಹಲ ಕೆರಳಿಸುವ ಸಂಬಂಧ, ಕೆಲವೊಂದು ಬದಲಾವಣೆ ಮಾಡಲಾಗಿದೆ.

ಚಿತ್ರದ ಅಂತ್ಯದಲ್ಲಿ ಪೊಲೀಸರ ಗುಂಡಿಗೆ ದಂಪತಿ ಬಲಿಯಾಗುವುದನ್ನು ತೋರಿಸಲಾಗಿದೆ. ಆದರೆ ನಿಜ ಜೀವನದಲ್ಲಿ ದಂಪತಿ ಈಗಲೂ ಚೆನ್ನೈನಲ್ಲಿ ಸುಖವಾಗಿ ವಾಸಿಸುತ್ತಿದ್ದಾರೆ.
(ಎಲ್ಲರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT