ADVERTISEMENT

ಆನಂದಲಹರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST

ಮೇಷ್ಟ್ರು: ನಮಗೆ ಸೂರ್ಯ ಮುಖ್ಯವೋ? ಚಂದ್ರ ಮುಖ್ಯವೋ?
ವಿದ್ಯಾರ್ಥಿ: ಚಂದ್ರನೇ ಮುಖ್ಯ ಸರ್!
ಮೇಷ್ಟ್ರು:  ಅದ್ಹೇಗೋ?
ವಿದ್ಯಾರ್ಥಿ: ಸೂರ್ಯ ಬೆಳಗಿನ ಹೊತ್ತು ಬೆಳಕಿರುವಾಗ ಬೆಳಕನ್ನು ಕೊಡ್ತಾನೆ; ಆದ್ರೆ ಚಂದ್ರ ರಾತ್ರಿಯ ಕತ್ತಲಿನಲ್ಲಿ ಬೆಳಕು ಕೊಡ್ತಾನಲ್ಲ ಸರ್!
ಈ ಜೋಕ್‌ ನಮಗೆ ಬದುಕಿನ ಒಂದು ಮಹತ್ವದ ಪಾಠವನ್ನು ಕಲಿಸುವಂತಿದೆ. ಎಷ್ಟೋ ವಿಷಯಗಳ ವಾಸ್ತವ ನಮಗೆ ಗೊತ್ತಿರುವುದಿಲ್ಲ. ಮೇಲ್ನೋಟಕ್ಕೆ ಕಾಣುವಂತೆ ಅವುಗಳ ಹಿನ್ನೆಲೆಯಾಗಲೀ ಸತ್ಯವಾಗಲೀ ಇರುವುದಿಲ್ಲ. ಅಂಥ ವಿಷಯಗಳ ಬಗ್ಗೆ ನಾವು ಅಧಿಕೃತವಾಗಿ ಮಾತನಾಡಿದರೆ ಆಗ ನಮ್ಮ ಪಾಡು ಕೂಡ ಆ ವಿದ್ಯಾರ್ಥಿಯಂತೆಯೇ ಆಗುತ್ತದೆ.


ಬೆಳಗಿನ ಹೊತ್ತು ಸೂರ್ಯನ ಬೆಳಕಿರುತ್ತದೆ.  ರಾತ್ರಿಯಲ್ಲಿ ಚಂದ್ರನ ಬೆಳಕಿರುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವ ವಿದ್ಯಮಾನ. ಆದರೆ ಇದು ಸತ್ಯವಲ್ಲ; ಬೆಳಗಿನ ಬೆಳಕಿಗೂ ರಾತ್ರಿಯ ಬೆಳಕಿಗೂ ಕಾರಣ ಸೂರ್ಯನೇ. ಚಂದ್ರನಿಗೆ ಸ್ವಂತ ಬೆಳಕಿಲ್ಲವಷ್ಟೆ! ಹೀಗಾಗಿ ಚಂದ್ರನ ಬೆಳಕು ಕೂಡ ವಾಸ್ತವದಲ್ಲಿ ಸೂರ್ಯನ ಬೆಳಕೇ ಹೌದು. ಹೀಗಾಗಿ ರಾತ್ರಿಯ ಕತ್ತಲಿನಲ್ಲಿ ಚಂದ್ರನು ಬೆಳಕನ್ನು ಕೊಡುತ್ತಾನೆ ಎನ್ನುವುದೇ ತಪ್ಪು. ಸೂರ್ಯ–ಚಂದ್ರರ ಈ ವೈಜ್ಞಾನಿಕ ಸತ್ಯ ತಿಳಿಯದಿದ್ದಾಗ ನಾವು ಸಹ ಮೇಲಣ ವಿದ್ಯಾರ್ಥಿಯಂತೆ ಮಾತನಾಡಿ, ಪೆದ್ದರೆನಿಸಿಕೊಳ್ಳುತ್ತೇವೆ.


ತತ್ತ್ವಶಾಸ್ತ್ರದಲ್ಲಿ ಇಂಥ ವಿವರಗಳು ಹಲವಾರು ಸಂದರ್ಭಗಳಲ್ಲಿ ಬಳಕೆಯಾಗುತ್ತವೆ. ‘ಆತ್ಮ’ ಎನ್ನುವುದು ಇಲ್ಲ; ಇದ್ದರೆ ಅದು ಕಣ್ಣಿಗೆ ಕಾಣಬೇಕಲ್ಲವೆ? – ಹೀಗೆಲ್ಲ ವಾದ ಬರುವುದುಂಟು. ಆದರೆ ಆತ್ಮದ ನಿರಾಕರಣೆ ಅಷ್ಟು ಸುಲಭವಲ್ಲ; ಕಾಣುತ್ತಿಲ್ಲ ಎಂದ ಮಾತ್ರಕ್ಕೆ ಅದು ಇಲ್ಲ ಎನ್ನುವಂತಿಲ್ಲ.
ರಾತ್ರಿ ಸೂರ್ಯ ಕಾಣುವುದಿಲ್ಲ; ಹೀಗೆಂದು ಸೂರ್ಯನೇ ಇಲ್ಲ ಎನ್ನಲಾದೀತೆ? ಚಂದ್ರ ಬೆಳಗುತ್ತಿರುವುದಕ್ಕೆ ಕಾರಣವೇ ಸೂರ್ಯ. ಹೀಗೆಯೇ ‘ಆತ್ಮ ಇಲ್ಲ’ ಎಂದು ಯಾರು ಹೇಳುತ್ತಿರುವುದಕ್ಕೆ ಸಾಧ್ಯವಾಗಿರುವುದೇ ಆತ್ಮದ ಕಾರಣದಿಂದ. ಹೀಗೆಲ್ಲ ಈ ಚರ್ಚೆ ಮುಂದುವರೆಯುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.