ಅತಿ ಸಂಕೀರ್ಣವಾದ ಸಾಮಾಜಿಕ ಸಮಸ್ಯೆಗಳಿಗೆ ಸುಲಭದ ತಾಂತ್ರಿಕ ಪರಿಹಾರ ಗಳಿವೆಯೆಂಬ ನಂಬಿಕೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಾಧ್ಯತೆ ಗಳನ್ನು ಅರಿತ ಮೇಲೆ ಹುಟ್ಟಿಕೊಂಡದ್ದೇನೂ ಅಲ್ಲ. ಏನಿಲ್ಲವೆಂದರೂ ಇದಕ್ಕೆ ಕನಿಷ್ಠ ನಾಲ್ಕೂವರೆ ದಶಕಗಳ ಇತಿಹಾಸವಂತೂ ಇದೆ.
1966ರಲ್ಲಿ ಅಮೆರಿಕದ ಓಕ್ ರಿಜ್ ನ್ಯಾಷನಲ್ ಲ್ಯಾಬೊರೇಟರಿಯ ಮುಖ್ಯಸ್ಥ ಆಲ್ವಿನ್ ವೀನ್‌ಬರ್ಗ್, ಸಂಕೀರ್ಣ ಸಾಮಾಜಿಕ ಸಮಸ್ಯೆಗಳನ್ನು ತಾಂತ್ರಿಕವಾಗಿ ಅರ್ಥ ಮಾಡಿಕೊಂಡರೆ ತಂತ್ರಜ್ಞಾನ ದಲ್ಲಿಯೇ ಅವುಗಳಿಗೊಂದು ಪರಿಹಾರವನ್ನೂ ಹುಡುಕಬಹುದು ಎಂದು ಪ್ರತಿಪಾದಿ ಸಿದ ನಂತರ ಅದನ್ನು ಪ್ರಾಯೋಗಿಕವಾಗಿ ಸಾಧಿಸುವ ಹಲವು ಪ್ರಯೋಗಗಳು ನಡೆದಿವೆ.
ಇವುಗಳಲ್ಲೆಷ್ಟು ಯಶಸ್ವಿಯಾದವೋ ಗೊತ್ತಿಲ್ಲ. ಆದರೆ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಉತ್ತರವನ್ನು ಹುಡುಕುವ ಪ್ರಯತ್ನಗಳಂತೂ ಇನ್ನೂ ನಿಂತಿಲ್ಲ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಆಧಾರ್ ಅಥವಾ ವಿಶಿಷ್ಟ ಗುರುತು ಸಂಖ್ಯೆಯ ಯೋಜನೆಯೂ ಇಂಥದ್ದೇ ಒಂದು ‘ತಾಂತ್ರಿಕ ಪರಿಹಾರ’ದ ಯೋಜನೆ. ರಾಷ್ಟ್ರೀಯ ಭದ್ರತೆಯಿಂದ ಆರಂಭಿಸಿ ಬಡವರಿಗೆ ಅನುಕೂಲ ಕಲ್ಪಿಸುವ ತನಕದ ಹತ್ತು ಹಲವು ಉದ್ದೇಶಗಳನ್ನು ಹೇಳಿಕೊಂಡಿದ್ದ ಈ ಯೋಜನೆಗೆ ಈಗ ಸುಪ್ರೀಂ ಕೋರ್ಟ್ ‘ತಡೆ’ಯೊಡ್ಡಿದೆ.
ಯೋಜನೆ ಆರಂಭವಾದಾಗಲೇ ಇದರ ಕಾನೂನು ಬದ್ಧತೆಯ ಬಗ್ಗೆ ಹಲವರು ಎತ್ತಿದ್ದ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೂಡಾ ಸದ್ಯಕ್ಕೆ ಮಾನ್ಯ ಮಾಡಿದೆ. 2009ರಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಸ್ತಿತ್ವಕ್ಕೆ ಬಂದಾಗ ಅದಕ್ಕೊಂದು ಕಾನೂನಿನ ಬೆಂಬಲವಿರಲಿಲ್ಲ. ಹಾಗೆಯೇ ಅದು ಸಂಗ್ರಹಿಸುವ ಮಾಹಿತಿಯ ಬಳಕೆ ಮತ್ತು ರಕ್ಷಣೆಗೆ ಅಗತ್ಯವಾದ ನಿಯಮಗಳೂ ಇರಲಿಲ್ಲ. ಈ ಯೋಜನೆಗೆ ಕಾನೂನಿನ ಮಾನ್ಯತೆ ದೊರಕಿಸುವುದಕ್ಕಾಗಿ ಸಿದ್ಧಪಡಿಸ ಲಾಗಿದ್ದ ಮಸೂದೆಯ ಕರಡನ್ನು 2011ರಲ್ಲಿಯೇ ಸಂಸದೀಯ ಸ್ಥಾಯಿ ಸಮಿತಿ ಯೊಂದು ಹಲವು ಪ್ರಶ್ನೆಗಳು ಮತ್ತು ಟೀಕೆಗಳೊಂದಿಗೆ ಹಿಂದಿರುಗಿಸಿತ್ತು.
ಆದರೆ ‘ಆಧಾರ್’ ಹೆಸರಿನಲ್ಲಿ ವಿಶಿಷ್ಟ ಗುರುತು ಸಂಖ್ಯೆಯನ್ನು ನೀಡುವ ಕೆಲಸ ಮುಂದುವರಿ ದಿತ್ತು. ಇದು ಸಾಲದು ಎಂಬಂತೆ ರಾಜ್ಯ ಸರ್ಕಾರಗಳು ತಮ್ಮ ಹಲವಾರು ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಕಡ್ಡಾಯ ಮಾಡತೊಡಗಿದ್ದವು. ಕೇಂದ್ರ ಸರ್ಕಾರ ವಂತೂ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಪಿಜಿ ಸಬ್ಸಿಡಿಯನ್ನು ‘ಆಧಾರ್’ ಸಂಖ್ಯೆ ಆಧರಿಸಿ ನೇರವಾಗಿ ಬಳಕೆದಾರರ ಖಾತೆಗೆ ಜಮಾ ಮಾಡಲು ಆರಂಭಿಸಿತ್ತು.
ಈ ಯೋಜನೆಯನ್ನು ವಿರೋಧಿಸಿ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ್ದ ಮೊಕದ್ದಮೆಯೂ ಸೇರಿದಂತೆ ದೇಶದಾದ್ಯಂತ ಒಟ್ಟು ಐದು ಮೊಕದ್ದಮೆಗಳನ್ನು ಹೂಡಲಾಗಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮ್ಯಾಥ್ಯೂ ಥಾಮಸ್ ಮತ್ತು ವಿ.ಕೆ. ಸೋಮಶೇಖರ್ ಅವರು ವಿಶಿಷ್ಟ ಗುರುತು ಸಂಖ್ಯೆ ನೀಡುವುದನ್ನು ನಿಲ್ಲಿಸಲು ಆದೇಶಿಸಬೇಕೆಂದು ವಿನಂತಿಸಿ ದಾಖಲಿಸಿದ್ದ ಪ್ರಕರಣ ವಜಾ ಆಗಿತ್ತು. ಅವರು ಹೈಕೋರ್ಟ್‌ನಲ್ಲಿ ಮತ್ತೆ ಪ್ರಕರಣ ದಾಖಲಿಸಿದ್ದಾರೆ.
ಚಂಡೀಗಡದಲ್ಲಿ ಸಂಜೀವ್ ಪಾಂಡೆ ಎಂಬುವವರು ಚಾಲನಾ ಪರವಾನಗಿ ನೀಡುವುದಕ್ಕೆ ಆಧಾರ್ ಕಡ್ಡಾಯಗೊಳಿಸಿರುವುದರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಮುಂಬೈ ಮತ್ತು ಮದ್ರಾಸ್ ಹೈಕೋರ್ಟ್‌ಗಳಲ್ಲಿ ವಿಶಿಷ್ಟ ಗುರುತು ಸಂಖ್ಯೆ ನೀಡುವುದಕ್ಕೆ ಯುಐಡಿಎಐಗೆ ಇರುವ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಎರಡು ಪ್ರಕರಣಗಳಿವೆ. ನಿವೃತ್ತ ನ್ಯಾಯಮೂರ್ತಿ ಪುಟ್ಟಸ್ವಾಮಿಯವರ ಪ್ರಕರಣದ ಜೊತೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸುತ್ತಿದೆ.
ಆಧಾರ್ ಯುಪಿಎ ಸರ್ಕಾರದ ಯೋಜನೆಯೆಂಬಂತೆ ಈಗ ಪ್ರತಿಬಿಂಬಿತ ವಾಗುತ್ತಿದ್ದರೂ ವಾಸ್ತವದಲ್ಲಿ ಇಂಥದ್ದೊಂದು ಪರಿಕಲ್ಪನೆ ಎನ್‌ಡಿಎ ಅಧಿಕಾರದ ಕಾಲದಲ್ಲಿಯೇ ರೂಪುಗೊಂಡಿತ್ತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಭಾಗವಾಗಿ ಎಲ್ಲಾ ಪ್ರಜೆಗಳು ತಮ್ಮನ್ನು ನೋಂದಾಯಿಸಿ ಕೊಳ್ಳುವುದನ್ನು ಕಡ್ಡಾಯಗೊಳಿಸುವ ಒಂದು ಕಾಯ್ದೆಯೂ ಈಗಾಗಲೇ ಅಸ್ತಿತ್ವ ದಲ್ಲಿದೆ. ಹೀಗೆ ನೋಂದಾಯಿಸಿಕೊಂಡ ಪ್ರಜೆಗಳಿಗೆ ಒಂದು ಸ್ಮಾರ್ಟ್ ಕಾರ್ಡ್ ಕೊಡ ಬೇಕೆಂಬ ಪ್ರಸ್ತಾವವೂ ಆಗಲೇ ಇತ್ತು.
ಈ ನೋಂದಣಿ ಕ್ರಿಯೆಯಲ್ಲಿಯೂ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ವಿವರಗಳು ಅಥವಾ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಪೌರತ್ವ ಕಾಯ್ದೆಯನ್ವಯ ರೂಪುಗೊಂಡಿರುವ ಎನ್‌ಪಿಆರ್‌ನ ನಿಯಮಾವಳಿಗಳ ಪಠ್ಯದಲ್ಲಿ ಬಯೋಮೆಟ್ರಿಕ್ ವಿವರಗಳ ಕುರಿತು ಪ್ರಸ್ತಾಪವಿಲ್ಲ. ನೋಂದಣಿಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ಈ ವಿವರ ಸಂಗ್ರಹಕ್ಕೆ ಸೂಚಿಸಲಾಗಿದೆ.
2010ರಲ್ಲಿ ಒದಗಿಸಲಾದ ಮಾಹಿತಿಯಂತೆ ಕಣ್ಣಿನ ಪಾಪೆಯ ವಿವರಗಳನ್ನು ದಾಖಲಿಸುತ್ತಿರಲಿಲ್ಲ. ಕೇವಲ ಬೆರಳಚ್ಚು ಮತ್ತು ಛಾಯಾ ಚಿತ್ರಗಳನ್ನು ಸಂಗ್ರಹಿಸಬೇಕೆಂಬ ಸೂಚನೆಯನ್ನು ನೀಡಲಾಗಿತ್ತು. ಆಧಾರ್ ಯೋಜನೆ ಆರಂಭವಾದ ಮೇಲೆ ಇಲ್ಲಿಯೂ ಕಣ್ಣಿನ ಪಾಪೆ ಅಥವಾ ಐರಿಸ್ ಮಾಹಿತಿಯನ್ನು ಸಂಗ್ರಹಿಸುವ ಕ್ರಿಯೆ ಆರಂಭವಾಯಿತು.
ಆಧಾರ್ V/s ಎನ್‌ಪಿಆರ್: ಆಧಾರ್ ಯೋಜನೆ ಆರಂಭವಾದದ್ದು ಯೋಜನಾ ಆಯೋಗದ ಅಡಿಯಲ್ಲಿ. ಯುಐಡಿಎಐ ಯೋಜನಾ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಎನ್‌ಪಿಆರ್ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶಿಷ್ಟ ಗುರುತೊಂದನ್ನು ನೀಡುವ ಮೂಲಕ ‘ಐಡೆಂಟಿಟಿ’ ಸಮಸ್ಯೆಯನ್ನು ಬಗೆಹರಿಸುವುದರ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕ್ರಿಯೆಯನ್ನು ಸುಲಭಗೊಳಿಸುವುದು ಆಧಾರ್‌ನ ಘೋಷಿತ ಉದ್ದೇಶ.
ಬ್ಯಾಂಕ್ ಖಾತೆ ತೆರೆಯುವುದರಿಂದ ಆರಂಭಿಸಿ ಎಲ್ಲಾ ರೀತಿಯ ಅಗತ್ಯಗಳಿಗೆ ಒಂದೇ ಗುರುತು ಪತ್ರವನ್ನು ಬಳಸುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಹಾಗೆಯೇ ನೇರ ನಗದು ವರ್ಗಾವಣೆಯಂಥ ಯೋಜನೆಗಳಿಗೆ ಆಧಾರ್ ಅನುಕೂಲ ಕಲ್ಪಿಸುತ್ತದೆ ಎಂಬುದು ಆಧಾರ್ ಪರವಾಗಿ ಇರುವ ವಾದಗಳು. ಎನ್‌ಪಿಆರ್ ಎಂಬುದು ಪೌರತ್ವದ ದಾಖಲೆ. ಆಧಾರ್ ಕೇವಲ ಒಂದು ಗುರುತು ಪತ್ರ. ಆಧಾರ್ ಯೋಜನೆಯನ್ನು ಜಾರಿಗೊಳಿಸಲು ಹೊರಟಾಗ ಮೊದಲ ವಿರೋಧ ಎದುರಾದದ್ದು ಗೃಹ ಸಚಿವಾಲಯದಿಂದ.
ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅನುಮಾನಗಳನ್ನು ಬೇರೆ ಬಗೆಯಲ್ಲಿ ಗೃಹ ಸಚಿವಾಲಯ ವ್ಯಕ್ತಪಡಿಸಿತ್ತು. ಆದರೆ ಒಂದು ಹಂತದಲ್ಲಿ ಈ ಎರಡರ ಮಧ್ಯೆ ಒಂದು ಮಟ್ಟದ ಸಮನ್ವಯವನ್ನು ಅನಧಿಕೃತ ವಾಗಿ ಸಾಧಿಸಲಾಯಿತು. ಆಧಾರ್‌ಗಾಗಿ ಸಂಗ್ರಹಿಸಲಾಗುವ ಬಯೋ ಮೆಟ್ರಿಕ್ ವಿವರಗಳನ್ನೇ ಎನ್‌ಪಿಆರ್‌ನಲ್ಲಿ ಬಳಸಿಕೊಳ್ಳುವುದು ಈ ರಾಜೀ ಸೂತ್ರ.
ಆಧಾರ್‌ನಲ್ಲಿ ನೋಂದಾಯಿಸಿಕೊಂಡವರು ಎನ್‌ಪಿಆರ್‌ನಲ್ಲಿ ನೋಂದಾಯಿಸಿ ಕೊಳ್ಳಬೇಕೇ ಎಂಬ ಪ್ರಶ್ನೆಯನ್ನು ಕೇಳಿದರೆ ನಿಜ ಉತ್ತರ ಹೌದು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ನೀಡಿಲ್ಲ. ಎನ್‌ಪಿಆರ್‌ಗೆ ಎಲ್ಲಿ ನೋಂದಣಿ ನಡೆಯುತ್ತಿದೆ ಎಂಬ ಪ್ರಶ್ನೆಗೂ ಬಹುಶಃ ಇದುವೇ ಉತ್ತರ. ಅಧಿಕೃತ ಮಾಹಿತಿಗಳಂತೆ ಸುಮಾರು 17 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ ಮಾಹಿತಿಯನ್ನು ಡಿಜಿಟೈಜ್ ಮಾಡುವ ಹೊಣೆಯನ್ನು ಮಾಹಿತಿ ತಂತ್ರಜ್ಞಾನ ಇಲಾಖೆಗೆ ವಹಿಸಿದೆ.
ಆಧಾರ್ ನೋಂದಣಿ ‘ಐಚ್ಛಿಕ’. ಆದ್ದರಿಂದ ನೋಂದಣಿ ಕೇಂದ್ರಗಳಿಗೆ ಪೌರರೇ ಹೋಗಿ ತಮ್ಮ ವಿವರಗಳನ್ನು ಒದಗಿಸಬೇಕು. ಹುಟ್ಟಿದ ದಿನಾಂಕವನ್ನು ಸಾಬೀತು ಪಡಿಸುವ ಯಾವುದೇ ದಾಖಲೆಯನ್ನು ಒದಗಿಸುವುದು ಕಡ್ಡಾಯವಲ್ಲ. ಆದರೆ ವಿಳಾಸ ಮತ್ತು ಗುರುತಿಗಾಗಿ ದಾಖಲೆಗಳನ್ನು ಒದಗಿಸಬೇಕು. ಇಲ್ಲವೇ ಈಗಾಗಲೇ ಆಧಾರ್ ಪಡೆದಿರುವ ಒಬ್ಬರನ್ನು ಪರಿಚಯಿಸುವುದಕ್ಕಾಗಿ ಬಳಸಬಹುದು. ಆದರೆ ಒಂದು ಹಂತದಲ್ಲಿ ಈ ವ್ಯವಸ್ಥೆಯನ್ನು ಬದಿಗಿರಿಸಿ ಸರ್ಕಾರಿ ಪತ್ರಾಂಕಿತ ಅಧಿಕಾರಿ ಯೊಬ್ಬರಿಂದ ಗುರುತು ಮತ್ತು ವಿಳಾಸವನ್ನು ಪರಿಶೀಲಿಸಿದ ಪ್ರಮಾಣ ಪತ್ರವನ್ನಷ್ಟೇ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ. ಅಂದರೆ ಆಧಾರ್ ಗುರುತು ಚೀಟಿ ಮತ್ತು ಇದರೊಂದಿಗಿರುವ ವಿಶಿಷ್ಟ ಸಂಖ್ಯೆ ಒಂದು ಗುರುತು ಪ್ರಮಾಣ ಮಾತ್ರ.
ಕಡ್ಡಾಯವಾಗಿ ಸ್ವಯಂಪ್ರೇರಿತ: ಆಧಾರ್ ಯೋಜನೆ ಜಾರಿಗೆ ಬಂದಂದಿನಿಂದಲೂ ಸರ್ಕಾರ ಇದನ್ನು ಸ್ವಯಂ ಪ್ರೇರಿತ ಎಂದೇ ಹೇಳುತ್ತಿದೆ. ಯುಐಡಿಎಐ ಅಧ್ಯಕ್ಷ ನಂದನ್ ನಿಲೇಕಣಿ ಕೂಡಾ ಇದು ಸ್ವಯಂಪ್ರೇರಿತವಾಗಿ ಪಡೆಯಬಹುದಾದ ಗುರುತು ಪತ್ರ ಎಂದು ಹೇಳುತ್ತಲೇ ಬಂದಿದ್ದಾರೆ. ಅದನ್ನೀಗ ಸರ್ಕಾರ ನ್ಯಾಯಾಲಯ ದಲ್ಲೂ ಹೇಳಿದೆ.
ಆದರೆ ಆಧಾರ್ ನೋಂದಣಿ ಸಮಯದಲ್ಲಿ ರಾಜ್ಯ ಸರ್ಕಾರಗಳು ನೀಡುವ ಕೆವೈಸಿ (know your customer) ವಿವರಗಳನ್ನು ನೀಡದಿರಲು ಸಾಧ್ಯವಿಲ್ಲ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಂತರವೂ ಈ ಸ್ಥಿತಿಯಲ್ಲೇನೂ ಬದಲಾವಣೆ ಕಂಡುಬಂದಿಲ್ಲ.
ಆಧಾರ್ ಮುಂದೇನು?: ಈಗಾಗಲೇ ಸುಮಾರು 42.5 ಕೋಟಿ ಮಂದಿ ಆಧಾರ್ ಪಡೆದುಕೊಂಡಿದ್ದಾರೆ. ಅಂದರೆ ಪ್ರತೀ ಮೂವರು ಭಾರತೀಯರಲ್ಲಿ ಒಬ್ಬರ ಬಳಿ ಈಗಾಗಲೇ ವಿಶಿಷ್ಟ ಗುರುತು ಸಂಖ್ಯೆಯಿರುವ ಆಧಾರ್ ಕಾರ್ಡ್ ಇದೆ. ಈ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶ ಅಂತಿಮ ತೀರ್ಪು ಬರುವಾಗ ಬದಲಾಗದಿದ್ದರೆ ಎಂಬ ಪ್ರಶ್ನೆಯಂತೂ ಇದ್ದೇ ಇದೆ.
ಸರ್ಕಾರದ ನೇರ ನಗದು ವರ್ಗಾವಣೆ ಯೋಜನೆಯೇ ಆಧಾರ್ ಸಂಖ್ಯೆಯನ್ನು ಅವಲಂಬಿಸಿದೆ. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಯುಪಿಎ, ಆಧಾರ್ ಕಾರಣಕ್ಕೆ ಆಧಾರ ಕಳೆದುಕೊಳ್ಳುತ್ತಿದೆ. ಆಧಾರ್ ಎಂಬ ವಿಶಿಷ್ಟ ಗುರುತು ಸಂಖ್ಯೆ ಈಗಾಗಲೇ ಇರುವ ‘ಪ್ಯಾನ್’, ಬ್ಯಾಂಕ್ ಖಾತೆ ಕಡ್ಡಾಯವಾಗಿರುವ ಎನ್‌ಪಿಆರ್‌ಗಳ ಮತ್ತೊಂದು ಸಂಖ್ಯೆಯಾಗಿ ಅಷ್ಟೇ ಉಳಿಯುತ್ತಿದೆ. ಅದಕ್ಕಿಂತ ಹೆಚ್ಚಾಗಿ ಬಹುದೊಡ್ಡ ಸಂಖ್ಯೆಯ ಮೊತ್ತವಾಗುವ ತೆರಿಗೆದಾರನ ಹಣ ನಿರಾಧಾರವಾಗಿ ಖರ್ಚಾಗಿಬಿಟ್ಟಿದೆ!
-ಎನ್.ಎ.ಎಂ. ಇಸ್ಮಾಯಿಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.