ADVERTISEMENT

ಉತ್ಪ್ರೇಕ್ಷೆ ಸಲ್ಲದು

ಕೆ.ಉಲ್ಲಾಸ ಕಾರಂತ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST
ಉತ್ಪ್ರೇಕ್ಷೆ ಸಲ್ಲದು
ಉತ್ಪ್ರೇಕ್ಷೆ ಸಲ್ಲದು   

ಮಾನವ– ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ ಎಂಬ ವಾದದಲ್ಲಿ ಹುರುಳಿಲ್ಲ. ಅದೇನಿದ್ದರೂ ಆಧುನಿಕ ಸಂಪರ್ಕ ಸಾಧನಗಳು ಮತ್ತು ಮಾಧ್ಯಮಗಳ ಉತ್ಪ್ರೇಕ್ಷೆಯ ಫಲ. ಮೊದಲಿ­ನಿಂದಲೂ ಕಾಡಂಚಿನಲ್ಲಿ ವನ್ಯಜೀವಿಗಳು ಕಾಣಿಸಿಕೊಳ್ಳು­ವುದು, ಚಿರತೆಗಳು ಕೃಷಿ ಭೂಮಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತಾ ಸಣ್ಣ ಪ್ರಾಣಿಗಳು, ಬೀದಿನಾಯಿಗಳನ್ನು ಹಿಡಿದು ತಿನ್ನುವುದು ಸಾಮಾನ್ಯ ಸಂಗತಿ. ಆದರೆ ಈಗ ಪ್ರತಿ ಬಾರಿ ಕಾಡು ಪ್ರಾಣಿ ಜನರ ಕಣ್ಣಿಗೆ ಬಿದ್ದಾಗಲೂ ಟಿ.ವಿ., ಮೊಬೈಲ್‌ನಂತಹ ಸಂಪರ್ಕ ಸಾಧನಗಳಿಂದ ಅದು ದೊಡ್ಡ ಸುದ್ದಿಯಾಗುತ್ತದೆ.

ಹಿಂದೆಲ್ಲ ನೈಸರ್ಗಿಕ ವಿಧಾನಗಳಿಗೆ ಮಹತ್ವ ಇದ್ದುದರಿಂದ ಮಾನವ– ಪ್ರಾಣಿ ಸಂಘರ್ಷಕ್ಕೆ ಸಹಜವಾಗಿಯೇ ಪರಿಹಾರ ದೊರಕುತ್ತಿತ್ತು. ಆದರೆ ಈಗ ಅಭ­ಯಾರಣ್ಯಗಳಲ್ಲಿ ಅನೈಸರ್ಗಿಕವಾಗಿ ಪರಿಸರವನ್ನು ಮಾರ್ಪಡಿಸಿ ಪ್ರಾಣಿಗಳ ಸಂಖ್ಯೆ­ಯನ್ನು ನೈಸರ್ಗಿಕ ಮಟ್ಟಕ್ಕಿಂತ ಮೇಲೆ ಏರಿಸುತ್ತಿರುವುದರಿಂದ  ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವ್ಯವಸಾಯ ಮತ್ತು ಜಲಾಶಯ ನಿರ್ಮಾಣದಂತಹ ಕಾರಣಗಳಿಗೆ ಕಾಡು ನಾಶವಾಗುತ್ತಿದೆ. ಇದರಿಂದ ಇಂತಹ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವುದು ಈಗ  ಸಂಕೀರ್ಣವಾಗಿದೆ.

ಕಾಡಿನಲ್ಲಿ ಆಹಾರ ಇಲ್ಲದೇ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂಬ ಭಾವನೆ ಸಂಪೂರ್ಣ ತಪ್ಪು. ಕೆಲವು ಸಲ ಕಾಡಿನಲ್ಲಿ ಸಾಂದ್ರತೆ ಹೆಚ್ಚಾದಾಗಲೂ ಸಣ್ಣ ವಯಸ್ಸಿನ ಪ್ರಾಣಿಗಳು ಹೊಸ ಜಾಗ ಹುಡುಕಿಕೊಂಡು ಹೊರಗೆ ಬರುವ ಸಾಧ್ಯತೆ ಇರುತ್ತದೆ. ಮೊದಲು ಕಾಡು ಪ್ರಾಣಿಗಳ ಮುಕ್ತ ಬೇಟೆ ನಡೆಯುತ್ತಿತ್ತು. ಇದರಿಂದ ವನ್ಯಜೀವಿಗಳು ವಿನಾಶದ ಅಂಚು ತಲುಪಿದ್ದವು. 1970ರ ದಶಕದಲ್ಲಿ ಜಾರಿಗೆ ಬಂದ ಬೇಟೆ ನಿಷೇಧ, ವನ್ಯಪ್ರಾಣಿಗಳ ಮಾಂಸ ಮಾರಾಟ ನಿಷೇಧದಂತಹ ಉತ್ತಮ ಕಾನೂನುಗಳು ವನ್ಯಜೀವಿಗಳಿಗೆ ವರವಾಗಿ ಪರಿಣಮಿಸಿದವು.

ಇದರಿಂದ, ನಾಶವಾಗಿದ್ದ ಕಡೆಯಲ್ಲೆಲ್ಲ ಪ್ರಾಣಿಗಳ ಸಂತತಿ ಮರುಕಳಿಸಿತು. ಉದಾಹರಣೆಗೆ, ದಕ್ಷಿಣ ಕನ್ನಡದಲ್ಲಿ ಹಿಂದೆಲ್ಲ ಸಾಕಷ್ಟು ಕಾಟಿ, ಕಡವೆಗಳಿದ್ದವು. 50– 60ರ ದಶಕದಲ್ಲಿ ಅವೆಲ್ಲ ನಿರ್ನಾಮವಾಗಿ ಹೋಗಿದ್ದವು. ಆದರೆ ಈಗ ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸಹ ಕಾಟಿ ಕಾಣಿಸಿಕೊಳ್ಳುವಷ್ಟರ ಮಟ್ಟಿಗೆ ಅವುಗಳ ಸಂತತಿ ವೃದ್ಧಿಸಿದೆ.

ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟದಂತಹ ಅಭಯಾರಣ್ಯ­ಗಳಲ್ಲಿ 20 ವರ್ಷಗಳಿಂದ ಉತ್ತಮ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಅದರ ಜೊತೆಗೇ ಅನೈಸರ್ಗಿಕವಾಗಿ ಪ್ರಾಣಿಗಳ ಆವಾಸದ ನಿರ್ವಹಣೆ ಮಾಡಿ ಅವುಗಳ ಸಂಖ್ಯೆ ವೃದ್ಧಿಸುವುದೂ ಸರಿಯಲ್ಲ.

ಮೊದಲು ಬೇಸಿಗೆಯಲ್ಲಿ ಕೆಲ ಪ್ರಾಣಿಗಳು, ಅದರಲ್ಲೂ ಹೆಚ್ಚಾಗಿ ಮರಿಗಳು ನೀರಿಲ್ಲದೇ ಸಾಯುತ್ತಿದ್ದವು. ಈಗ ಕಾಡುಗಳಲ್ಲಿ ಅಧಿಕ ನೀರಿನ ತಾಣಗಳನ್ನು ಸೃಷ್ಟಿಸಿರುವುದರಿಂದ ಅವುಗಳ ಮರಣ ಪ್ರಮಾಣ ತಗ್ಗಿದೆ.  ಇದರಿಂದ ಕಾಡಿನಲ್ಲಿ ಪ್ರಾಣಿಗಳ ಸಾಂದ್ರತೆ ಹೆಚ್ಚಾಗಿದೆ. ಹೀಗೆ ಪ್ರಾಣಿಗಳ ಹುಟ್ಟು– ಸಾವಿನ ನೈಸರ್ಗಿಕ ಸರಪಳಿಯಲ್ಲಿ ನಾವು ಮಧ್ಯಪ್ರವೇಶಿಸುತ್ತಿದ್ದೇವೆ.

ಕೆಲವು ಪ್ರಾಣಿಗಳು ಅಪರೂಪಕ್ಕೊಮ್ಮೆ ಮನುಷ್ಯರನ್ನು ತಿನ್ನುತ್ತವೆ.  ಅದು ಅಭ್ಯಾಸಬಲ ಆಗದಂತೆ ತಡೆಯಲು ಅಂತಹ ಪ್ರಾಣಿಗಳನ್ನು ಕೂಡಲೇ ಕೊಲ್ಲಬೇಕಾಗುತ್ತದೆ. ಅದಕ್ಕೂ ಮೀನ­­ಮೇಷ ಎಣಿಸುತ್ತಾ ಕೂತರೆ ಜನ ಉದ್ರೇಕಗೊಳ್ಳುತ್ತಾರೆ. ವನ್ಯಸಂರಕ್ಷಣೆಯ ಮೇಲೆ ಅವರಿಗೆ ರೋಷಾವೇಷ ಬರು­ತ್ತದೆ.

ಕಾಡಂಚಿನ ಹಳ್ಳಿಗರಲ್ಲಿ ಜಾಗೃತಿ ಮೂಡಿಸ­ಬೇಕು. ವನ್ಯಜೀವಿಗಳು ದನಕರುಗಳನ್ನು ಕೊಂದರೆ ಪರಿಹಾರ, ಬೆಳೆಹಾನಿಗೆ ವಿಮೆ ನೀಡಬೇಕು. ಕಾಡಿ­ನಿಂದ ಸ್ವ ಇಚ್ಛೆಯಿಂದ ಹೊರ­ಬರು­ವವರಿಗೆ ಸೂಕ್ತ ಪುನರ್ವಸತಿ ಕಲ್ಪಿಸ­ಬೇಕು. ಕಾಡಂಚಿನಲ್ಲಿ ಕಂದಕ­ಗಳನ್ನು ನಿರ್ಮಿಸಬೇಕು. ವಿದ್ಯುತ್‌ ತಂತಿ ಬೇಲಿ ಹಾಕಬೇಕು. ಹೀಗೆ ಸಮಸ್ಯೆಗಳಿಗೆ ಯುಕ್ತ ಮಾರ್ಗೋಪಾಯ ಕಂಡು­ಕೊಂಡರೆ ಸಂಘರ್ಷದ ಪ್ರಮಾಣ ಸಹಜವಾಗಿಯೇ ತಗ್ಗುತ್ತದೆ.
(ಲೇಖಕರು ವನ್ಯಜೀವಿ ಸಂರಕ್ಷಣಾ ಸೊಸೈಟಿಯ ವೈಜ್ಞಾನಿಕ ನಿರ್ದೇಶಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.