ADVERTISEMENT

ಕಠಿಣ ಕಾನೂನಿನಿಂದ ಸ್ವಯಂ ಶಿಸ್ತು

ಡಾ.ಎಂ.ಎ.ಸಲೀಂ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST
ಕಠಿಣ ಕಾನೂನಿನಿಂದ ಸ್ವಯಂ ಶಿಸ್ತು
ಕಠಿಣ ಕಾನೂನಿನಿಂದ ಸ್ವಯಂ ಶಿಸ್ತು   

ದೇಶ ಕಳೆದ ಎರಡು ದಶಕಗಳಲ್ಲಿ ಕೈಗಾ­ರಿಕೆ, ವಾಣಿಜ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸರ್ವತೋ­ಮುಖ ಅಭಿವೃದ್ಧಿ­ಯನ್ನು ಕಂಡಿದೆ. ಇದರಿಂದ ಪ್ರಮುಖ ನಗರಗಳೂ ಸೇರಿದಂತೆ ಹಲವು ನಗರ, ಪಟ್ಟಣಗಳು ಗ್ರಾಮಾಂತರ ಪ್ರದೇಶದಿಂದ ಹೆಚ್ಚು ಹೆಚ್ಚು ಜನ­ರನ್ನು ಆಕರ್ಷಿಸು­ತ್ತಿವೆ. ಇದರ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಜನ­ಸಂದಣಿ ಹೆಚ್ಚಾ­ಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರತಿ ದಿನ ಸಾವಿರಾರು ವಾಹನ­ಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ಆದರೆ ಅದಕ್ಕೆ ತಕ್ಕಂತೆ  ಸಮರ್ಪಕವಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದ­ರಾ-­­ಬಾದ್‌ನಂತಹ ದೇಶದ ಪ್ರಮುಖ ಮಹಾನಗರಗಳ ರಸ್ತೆಗಳಲ್ಲಿ ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಇದರಿಂದ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಅದು ಎಷ್ಟರ ಮಟ್ಟಿಗಿದೆ ಎಂದರೆ, ನಗರ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ದಿನನಿತ್ಯದ ಕಾರ್ಯ ನಿರ್ವಹಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪತ್ತೆ ಕಾರ್ಯಕ್ಕಿಂತಲೂ ಹೆಚ್ಚಾಗಿ ಸಂಚಾರ ನಿಯಂತ್ರಣ ಸಮಸ್ಯೆಯೇ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಮಿತಿಮೀರಿದ ಪ್ರಮಾಣದಲ್ಲಿ ವಾಹನಗಳು ಬೀದಿಗಿಳಿಯುತ್ತಿ­ರು­ವು­ದರಿಂದ  ಸಂಚಾರ ನಿಯಂತ್ರಣ ಅಸಮರ್ಪಕವಾಗುತ್ತಿದೆ. ಇದರ ಜೊತೆಗೆ ವಾಹನ ಚಾಲಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿ­ಸದೇ ಇರುವುದು ಸಹ ಸಂಚಾರ ದಟ್ಟಣೆ ಮತ್ತು ರಸ್ತೆಯಲ್ಲಿನ ಅಶಿಸ್ತಿಗೆ ತನ್ನದೇ ಕೊಡುಗೆ ನೀಡುತ್ತಿದೆ. ಇವೆಲ್ಲವೂ ರಸ್ತೆ ಅಪಘಾತ­ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಅಲ್ಲಿದೆ ಶಿಸ್ತು: ಕೊಲ್ಲಿ ರಾಷ್ಟ್ರಗಳಲ್ಲಿ ರಸ್ತೆ ನಿಯಮ ಉಲ್ಲಂಘನೆ ಮಾಡು­ವವರ ವಿರುದ್ಧ ಅತ್ಯಂತ ಕಠಿಣ­ವಾದ ಕಾನೂನುಗಳು ಜಾರಿ­ಯ­ಲ್ಲಿವೆ. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ನೀಡುವುದರಿಂದ ವಾಹನ ಚಾಲ­ಕರು ಅನ್ಯ ಮಾರ್ಗವಿಲ್ಲದೇ ಸಂಚಾರ ನಿಯಮಗಳನ್ನು
ಕಡ್ಡಾ­ಯ­ವಾಗಿ ಪಾಲನೆ ಮಾಡು­ತ್ತಾರೆ. ಇದರಿಂದ ಆ ರಾಷ್ಟ್ರಗಳಲ್ಲಿ ಅತ್ಯಂತ ಉತ್ತಮ­ವಾದ ಸುಗಮ ಸಂಚಾರ ವ್ಯವಸ್ಥೆಯನ್ನು ನಾವು ಕಾಣ­­ಬಹುದು. ಜೊತೆಗೆ ಅಪಘಾತಗಳ ಸಂಖ್ಯೆಯೂ ಅಲ್ಲಿ ಕಡಿಮೆ ಪ್ರಮಾಣದಲ್ಲಿ ಇದೆ. ನಮ್ಮ ದೇಶದಲ್ಲಿ ಈವರೆಗೆ ಅಲ್ಲಿಯಂತೆ ಕಠಿ­ಣ­ವಾದ ಕಾನೂನು­ಗಳು ಜಾರಿಯಲ್ಲಿ ಇರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಪಾಶ್ಚಿ­ಮಾತ್ಯ ದೇಶಗಳಲ್ಲಿ  ವಾಹನ ಚಾಲಕರಿಗೆ ಇರುವಂತೆ ಸ್ವಯಂ ಪ್ರೇರಿತವಾದ ಶಿಸ್ತೂ ನಮ್ಮವರಿಗೆ ಇಲ್ಲ.  ಈಗಿನ ನಮ್ಮ ಕಾನೂನಿನ ಪ್ರಕಾರ, ಕೆಲವು ರಸ್ತೆ ನಿಯಮಗಳ ಉಲ್ಲಂಘನೆಗೆ ಕೇವಲ ₨ 100 ದಂಡ ವಿಧಿಸ­ಲಾ­ಗುತ್ತಿದೆ.

ರಸ್ತೆ ಅಪಘಾತಗಳಿಂದ ಆಗುವ ಹಾನಿಯ ಪ್ರಮಾಣಕ್ಕೆ ಹೋಲಿ­ಸಿದರೆ ಈ ಅತ್ಯಲ್ಪವಾದ ದಂಡದ ಮೊತ್ತ ಒಂದು ಹಾಸ್ಯಾಸ್ಪದ ವ್ಯವಸ್ಥೆಯಂತೆ ಗೋಚರಿಸುತ್ತದೆ.  ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಉತ್ತಮ­ವಾಗುತ್ತಿ­ರುವುದರಿಂದ ಹೆಚ್ಚಿನ ವಾಹನ ಸವಾರರಿಗೆ ₨ 100 ದಂಡದ ಮೊತ್ತ ಪಾವತಿಸುವುದು ದೊಡ್ಡ ಸಂಗತಿಯೇ ಅಲ್ಲ. ಹೀಗಾಗಿ ತಾವು ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ ದಂಡಪಾವ­ತಿ­ಸ­ಬೇಕಾಗುತ್ತದೆ ಎಂಬ ಭೀತಿಯೇ ಬಹುತೇ­ಕರಿಗೆ ಇರದು. ಅಂತ­ಹ­ವರು ಮತ್ತೆಮತ್ತೆ ಸಂಚಾರ ನಿಯಮ ಉಲ್ಲಂಘಿಸು­ತ್ತಲೇ ಇರು­­­­ತ್ತಾರೆ. ದಂಡದ ಮೊತ್ತವನ್ನು ಪಾವತಿಸುತ್ತಲೇ ಇರುತ್ತಾರೆ. ಇಂತಹ ವ್ಯವಸ್ಥೆ ಇರುವುದರಿಂದಲೇ ಸುಗಮ ಸಂಚಾರ ವ್ಯವಸ್ಥೆ ಕಲ್ಪಿ­ಸುವ ನಿಟ್ಟಿ­ನಲ್ಲಿ ಕೈಗೊಳ್ಳುವ ಯಾವ ಯೋಜನೆಗಳೂ ಪರಿಣಾ­ಮ­ಕಾರಿ ಆಗು­ತ್ತಿಲ್ಲ.

ಸ್ವಾಗತಾರ್ಹ ಕ್ರಮ: ನಮ್ಮ ದೇಶದಲ್ಲೂ ರಸ್ತೆ ನಿಯಮಗಳನ್ನು ಉಲ್ಲಂಘಿ­­ಸಿದವರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ  ಇರುವಂತೆ ಉಗ್ರವಾದ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಬೇಕು. ಇದರ ಪ್ರಕಾರ ಅತಿ ಹೆಚ್ಚಿನ ಮೊತ್ತದ ದಂಡ ವಿಧಿಸುವುದರ ಜೊತೆಗೆ ವಾಹನ ಸವಾರರ ಚಾಲನಾ ಪರವಾನಗಿ, ವಾಹನದ ಪರವಾನಗಿ/ಆರ್.ಸಿ. ಅಮಾ­ನತು ಮಾಡುವುದು ಅಥವಾ ರದ್ದು ಮಾಡುವಂತಹ ಕಠಿಣ ಕ್ರಮ­ಗಳನ್ನು  ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ  ಹಳೆಯ ಕಾನೂನಿಗೆ ತಿದ್ದು­ಪಡಿ ತರಲು ಹೊರಟಿರುವ ಸರ್ಕಾರದ ಕ್ರಮ ಸ್ವಾಗತಾರ್ಹ­. 
  ಇಂತಹ ಕಠಿಣ ಕ್ರಮಗಳ ಜೊತೆಜೊತೆಗೇ ವಾಹನ ಚಾಲಕರು ಸ್ವಯಂ­ಪ್ರೇರಿತರಾಗಿ ರಸ್ತೆ ಶಿಸ್ತನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕಾದ ಸವಾಲೂ ನಮ್ಮ ಮುಂದೆ ಇದೆ. ಆಗ ಮಾತ್ರ ಸುಗಮ ಸಂಚಾರ ಸಾಧ್ಯವಾಗುತ್ತದೆ ಹಾಗೂ ರಸ್ತೆ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗುತ್ತದೆ.

(ಲೇಖಕರು ಮೈಸೂರು ನಗರದ ಪೊಲೀಸ್ ಕಮೀಷನರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.