ನನಗೊಬ್ಬ ಆತ್ಮೀಯ ಸಸ್ಯ ವಿಜ್ಞಾನಿ ಮಿತ್ರರಿದ್ದಾರೆ. ಹೆಸರು ಮಹಮ್ಮದಾಲಿ. ಆತನ ಬಗಲಲ್ಲಿ ಒಂದು ಚೀಲವಿರುವುದು. ಕಾಡಿನ ಪ್ರದೇಶಗಳಲ್ಲಿ ಚಾರಣ ಮಾಡುವ ಆತ ಅಪರೂಪದ ಸಸ್ಯ ಪ್ರಭೇದಗಳನ್ನು ಗುರುತಿಸಿ ಅದರ ಕಾಯಿ, ಬೀಜಗಳನ್ನು ಚೀಲದಲ್ಲಿ ತುಂಬಿಕೊಂಡು, ತಾವು ಪಯಣಿಸುವ ತಾವುಗಳಲ್ಲಿ, ರೈಲಿನಲ್ಲಿ ಹೋಗುವಾಗ ಅಲ್ಲಲ್ಲಿ ಬೀಜ ಪ್ರಸಾರ ಮಾಡುತ್ತಾರೆ. ಹೊಸ ಸಂತತಿ ಹುಟ್ಟಲಿ ಎಂಬ ಮಹದಾಶಯ ಅವರದು.
ನಮಗಿಂದು ಅಂತಹ ಮಹಮ್ಮದಾಲಿಗಳು ಬೇಕಾಗಿದ್ದಾರೆ...
ಪ್ರಪಂಚದಲ್ಲಿರುವ ಕಾಡುಗಳ ಪೈಕಿ ಮುಕ್ಕಾಲು ಭಾಗ ನಿರ್ಮಾಣವಾಗಲು ಪ್ರಾಣಿ, ಪಕ್ಷಿ ಸಂಕುಲವೇ ಕಾರಣ. ಅಂತಹ ಜೀವ ಸಂಕುಲ ಇಂದು ಬಹಳ ಅಪಾಯದಲ್ಲಿದೆ. ಬದುಕಿ ಉಳಿಯಲೇ ಅಸಾಧ್ಯ. ಇನ್ನು ಬೀಜ ಪ್ರಸಾರವೆಲ್ಲಿಯದು?! ಅನೇಕ ಕಡೆ ಇಂದು ಅಕೇಸಿಯಾ ಎಂಬ ಆಸ್ಟ್ರೇಲಿಯ ಕಳೆಯ, ಚಪ್ಪಟೆ ಕಾಯಿಯ ಸಿಪ್ಪೆ ಸುಲಿದು ಬೀಜ ತಿಂದು ಜೀವ ಹಿಡಿಯುವ ಪರಿಸ್ಥಿತಿ ಕೋತಿ ಹಿಂಡುಗಳಿಗೆ ಉಂಟಾಗಿದೆ. ವನರಾಶಿ ಮತ್ತು ಖಗ-ಮೃಗಗಳು ಉಳಿಯಬೇಕು ಎಂಬ ಬಯಕೆ ಇಂದು ಮಟಮಾಯ!
ಕಾಡಿನ ಹಣ್ಣುಗಳು, ಗೆಡ್ಡೆ, ಸೊಪ್ಪು, ಚಿಗುರು, ಕಾಂಡದ ತೊಗಟೆ, ಬಿದಿರು ಯಥೇಚ್ಛವಾಗಿದ್ದರೆ ಯಾವ ಮೃಗಗಳೂ ಮಾನವನ ಗೊಡವೆಗೆ ಬರಲಾರವು. ಪಂಪನ ಬನವಾಸಿಯ ಬಣ್ಣನೆಯ ಗೊಟ್ಟಿಯ ಮುಳ್ಳು ಹಣ್ಣು ಇಂದು ಕಂಡವರೇ ವಿರಳ. ಶ್ರಿಗಂಧದ ಹಣ್ಣು ಹಕ್ಕಿಗಳ ಆಹಾರ. ಒಂದೆರಡು ಬಲಿತ ಮರವಿದ್ದರೆ ಸಾಕು. ಊರಿಡೀ ಬೀಜ ಪ್ರಸಾರಕ್ಕೆ ಅನುಕೂಲ. ಹಲಗೆಯ ಹಣ್ಣು, ಮುಳ್ಳುಹಣ್ಣು, ಅಬ್ಬುಳುಕ (ಕಲ್ಲು ಸಂಪಗೆ), ಅಂಕೋಲೆ, ಸೂರಿ, ಎಲಚಿ, ರೆಂಜೆ, ಗುಡ್ಡೆ ರೆಂಜೆ, ನಮ್ಮ ನೆಲಕ್ಕೆ `ಜಂಬೂದ್ವೀಪ' ಎಂಬ ಹೆಸರಿಗೆ ಮೂಲ ಕಾರಣವಾದ ನೇರಿಳೆ, ಕಾಡಂಬಟೆ, ಹೆಬ್ಬಲಸು, ಉಂಡೆ ಹುಳಿ, ಉಪ್ಪಾಗೆ, ಕೋಕಂನ ಹಲವು ಜಾತಿಗಳು, ಕೌಲು, ಕೇರು, ಚಾರು, ನೀಟಂ, ಅಳಲೆ, ತಾರೆ, ನೆಲ್ಲಿಗಳಿಂದು ಕಾಡಿನಲ್ಲಿ ಮಾಯವಾಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಹಲಗೆಯ ಹಣ್ಣು (ಈಲಿಯಾಗ್ನಸ್ ಕಾನಫರ್ಟಾ) ಇಂದು ಅಳಿವಿನಂಚಿನ ಸಸ್ಯದ ಪಟ್ಟಿಗೆ ಸೇರಿಹೋಗಿದೆ.
ಕಾಡುಹಂದಿಗಳದು ಅತೀ ಬೇಗ ಸಂತತಿ ಬೆಳೆಸುವ ಸಂಸಾರ. ಇವುಗಳ ಸಂತತಿಗೆ ಪೂರಕವಾದ ಹಲವು ಮಕ್ಕಳ ತಾಯಿ, ನೆಲತೆಂಗು ಗೆಡ್ಡೆಗಳು ಕಾಡಿನಲ್ಲಿ ವಿರಳ. ಏಕೆಂದರೆ ಮಾನವನ ಸಂತತಿ ಬೆಳೆಸುವ ಅಪರೂಪದ ಸಂಜೀವಿನಿ ಅವು. ಅತಿ ಕೊಯಿಲಿನಿಂದ ಕಾಡಿನಲ್ಲಿ ಮಾಯ. ಹೀಗಾಗಿ ಹಂದಿ ಹಿಂಡು ಹೊಲಗದ್ದೆಗೆ ದಾಳಿ ಇಡುವ ಪ್ರಮೇಯ. ತಡಸದ ಮರದ ನಾರು ಎಂದರೆ ಆನೆಗಳಿಗೆ ಬಲು ಪ್ರೀತಿ. ಇಂದು ಆ ಮರ ಕಂಡವರಿಲ್ಲ. ಬಿದಿರು, ಕರಡದ ಹುಲ್ಲಿಗೆ ಇಂದು ಸಂಚಕಾರದ ಸ್ಥಿತಿ. ಆನೆಗೆ ಪುರುಷತ್ವ ಹೆಚ್ಚಿಸಲು ಕೌಲು ಮರದ ಕಾಯಿ ಬೇಕಂತೆ. ಬಿಳಿಗಿರಿ ಮರದ ಸೋಲಿಗರು ಈ ಮರವನ್ನು ಡೊಳ್ಳೆ ಎಂದು ಕರೆಯುವರು. ಕೆರೆಯಾ ಅರ‌್ಬೊರಿಯ ಎಂಬ ಸಸ್ಯ ನಾಮ. ಆದರೆ ಇಂದು ಆನೆಗಳ ವಯಾಗ್ರ ಮರಗಳು ಕಾಡಿನಲ್ಲಿ ವಿರಳ.
ಸಹ್ಯಾದ್ರಿಯ ಕಾಡುಗಳು ಜೀವ ವೈವಿಧ್ಯದ ಆಗರ. ಕನಿಷ್ಠ ಐದು ಸಾವಿರ ಹೂಬಿಡುವ ಸಸ್ಯಪ್ರಭೇದ, 139 ಬಗೆಯ ಸಸ್ತನಿ ಮೃಗವಿಂಡು ಹಸಿರು ವನದೇವತೆಯ ಜೀವರಾಶಿ, 508 ಖಗ ವೈವಿಧ್ಯಗಳು ಹಸಿರು ಕಾನನದ ಬಾನಾಡಿಗಳು, ಸುಮಾರು ಆರುಸಾವಿರಕ್ಕೂ ಮೀರಿದ ಕೀಟ ಪ್ರಪಂಚ ಇಲ್ಲಿವೆ. ಉಭಯ ಪದಿಗಳು ಹಾಗೂ ಅಳಿವಿನಂಚಿನ ಜೀವಿಗಳು ಪಶ್ಚಿಮ ಘಟ್ಟದಲ್ಲಿ ಇನ್ನೂ ಜೀವ ಹಿಡಿದು ಬದುಕಿರುವುದು ಈ ನೆಲದ ವಿಶೇಷ.
ಏನು ಮಾಡಬೇಕು?: ಇನ್ನೊಂದು ಕಟುವಾಸ್ತವ ಸಂಗತಿ ಸಹ ಪ್ರಸ್ತುತ. ಕಾಡಿನ ಕಣಜ ಬರಿದು ಮಾಡಿ ಕಾಡಿನ ಒಡೆಯರಿಗೆ ದ್ರೋಹ ಮಾಡುವುದಷ್ಟೇ ಅಲ್ಲ, ಇಂದು ನಾವು ತಿಂದುಣ್ಣುವ ಸಮಸ್ತ ಆಹಾರ ಪ್ರಭೇದಗಳು ಕಾಡಿನ ಮೂಲದ್ದು. ಇಂತಹ ಮೂಲ ತಳಿಗಳಿಗೆ ಸಹ ನಾವು ಅಪಾಯ ತಂದೊಡ್ಡುತ್ತಿದ್ದೇವೆ. ಇಂದು ಅತೀ ಅಗತ್ಯ ಮತ್ತು ತುರ್ತಿನ ಕೆಲಸ ಅಂದರೆ ಕಾಡಿನ ಮೂಲದ ಎಲ್ಲಾ ಆಹಾರೋಪಯೋಗಿ ಸಸ್ಯಗಳನ್ನು ಯಥಾಸ್ಥಿತಿ ಉಳಿಸಲು ಮತ್ತು ಬೆಳೆಸಲು ಕ್ರಮ ಕೈಗೊಳ್ಳುವುದು.
ಮೊದಲನೆಯ ಕೆಲಸ- ಅರಣ್ಯ ಇಲಾಖೆಯು ವರ್ಷಾವಧಿ ಗುತ್ತಿಗೆ ನೀಡುವ ಕಿರು ಅರಣ್ಯ ವಸ್ತು ಸಂಗ್ರಹವನ್ನು ತಕ್ಷಣದಿಂದ ಕಡ್ಡಾಯವಾಗಿ ಐದು ವರ್ಷ ನಿಲ್ಲಿಸುವುದು. ಇದರಿಂದ ಹೊಸ ಸಸ್ಯ ಹುಟ್ಟಲು ಅವಕಾಶ. ಮಡುವಾಗಲ, ಅಣಿಲೆ, ತಾರೆ, ನೆಲ್ಲಿ ಎಲ್ಲವೂ ಪ್ರಾಣಿ ಪಕ್ಷಿಗಳ ಆಹಾರವೇ ಆಗಿವೆ. ಅವುಗಳ ಸಂಗ್ರಹ ನಿಲ್ಲಿಸಲು ಏನಡ್ಡಿಯಿದೆ? ಎರಡನೆಯ ಕಾರ್ಯಕ್ರಮ- ಇದು ಕೊಂಚ ಕಠಿಣ. ಇಂತಹ ಸಸ್ಯ ಜಾತಿ ಗುರುತಿಸಬೇಕು. ಅವುಗಳನ್ನು ನೆಟ್ಟು ಪೋಷಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ವಿಚಾರ ಮಾಡಬಹುದು. ಕಾಗದ ಕಾರ್ಖಾನೆಗೆ ಬೇಕಾದ ಮೂಲವಸ್ತು ನೆಡುತೋಪು ಸಿದ್ಧವಾಗುವುದಾದರೆ ಇಂತಹ ಸಂಗತಿ ಸಾಧ್ಯವಾಗಬಾರದೇಕೆ?
ಜಲಮೂಲಗಳ ರಕ್ಷಣೆ ಅಗತ್ಯ: ಮಹಾನಗರ ಬೆಂಗಳೂರಿಗೆ, ಮೈಸೂರಿಗೆ ನೀರುಣಿಸುವ ಕಾವೇರಿ ನದಿ ಬತ್ತಿದರೆ? ಇಂತಹ ಹೊಸ ವಿಪತ್ತು ಎದುರಿಸಲು ನಾವ್ಯಾರೂ ಸಿದ್ಧರಾಗಿಲ್ಲ. ಉಗಮದ ನೀರೊರತೆಯ ಜಲಮೂಲಗಳು ಬರಿದಾದರೆ ಕಾವೇರಿಯ ಒಡಲು ಬತ್ತೀತು. ಅಂತಹ ಜಲಸೆಲೆಯ ಮೂಲ ತಾಣಗಳಿಗೆ ವೈಜ್ಞಾನಿಕವಾಗಿ `ಮಿರಿಸ್ಟಿಕಾ ಸ್ವಾಂಪ್ಸ್' ಎಂಬ ಹೆಸರಿದೆ.
ಮಳೆ ನೀರು ಇಂಗಿಸಿಕೊಂಡು ಸದಾ ಕಾಲ ಒರತೆಯ ಬುಗ್ಗೆ ಒಡಲಲ್ಲಿ ಇರಿಸಿಕೊಳ್ಳುವ ಪ್ರಕೃತಿದತ್ತ ಜಾಯಿಕಾಯಿ ಕೊಳ್ಳಗಳು ಅವು. ಇಂದು ಮಾರುಕಟ್ಟೆಯ ಅತೀ ದುಬಾರಿ ಬೆಲೆಯ ಕಾಯಿಗಾಗಿ, ಜಾಪತ್ರೆಯ ಅತೀ ಕೊಯಿಲಿನ ದೆಸೆಯಿಂದ ಅಂತಹ ನೀರೊಡಲು ಬರಿದು. ಅಂತಹ ಕೊಳ್ಳಗಳ ಇತರ ಸಸ್ಯಗಳ ಪೈಕಿ ಪುಂಡಿಕಾಯಿ (ಜಿಮ್ನೋಕ್ರಾಂತೆರಾ ಕೆನರಿಕಾ) ಅತೀ ವಿರಳ ಎನಿಸಿದೆ. ಜಾಪತ್ರೆಯಷ್ಟೇ ಬೃಹದಾಕಾರದ ಮರಗಳು. ಅಷ್ಟೇ ಸುವ್ಯವಸ್ಥಿತವಾಗಿ ನೀರ ಬುಗ್ಗೆ ಹಿಡಿದಿಡುವಂತಹವು. ಸೀಮೆ ಎಣ್ಣೆಯ ಪೂರ್ವಯುಗದಲ್ಲಿ ಪುಂಡಿಕಾಯಿ ಎಣ್ಣೆಯೇ ದೀಪದ ಎಣ್ಣೆ. ಡೀಸೆಲ್ ಮಿಶ್ರಣಕ್ಕೆ ಸಹ ಅರ್ಹತೆ ಉಳ್ಳ ಅಂತಹ ಮರ ಇಂದು ಸದ್ದಿಲ್ಲದೆ ಅಳಿವಿನಂಚಿಗೆ ಸರಿದಿದೆ.
ಕರ್ನಾಟಕದ ಘಟ್ಟ ಸೀಮೆಗೆ ಮಾತ್ರ ಸೀಮಿತವಾದ ಈ ಮರಗಳ ಪುನಶ್ಚೇತನಕ್ಕೆ ಆದ್ಯತೆ ಅಗತ್ಯ. ಅಂತೆಯೇ ನಾಗಕೇಸರ, ಹೊನ್ನೆ, ಅಂಡಿಪುನರ್, ಕೇರಿನ ಕೆಲವು ಪ್ರಭೇದ ಸಹ ನೀರೊರತೆಯ ಸಹವರ್ತಿ ಸಸ್ಯ ಜಾತಿಗಳು. ಅಂತಹ ವ್ಯವಸ್ಥೆಗೆ ತಕ್ಷಣ ಕೈ ಹಚ್ಚುವ ಅನಿವಾರ್ಯ ನಮಗಿದೆ.
ಔಷಧಾಗಾರಗಳು ಬೇಕು: ಪಶ್ಚಿಮ ಘಟ್ಟದ ಸೆರಗಿನ ಎಲ್ಲಾ ದೇಗುಲಗಳ ಪರಿಸರದಲ್ಲಿ ಕಡ್ಡಾಯವಾಗಿ ಹೊಸ ಕಾಡು ನಿರ್ಮಾಣವಾಗಬೇಕು. ಇರುವ ಕಾನು, ಕಾಡು, ಕಾವುಗಳನ್ನು ಇನ್ನಷ್ಟು ಜತನದಿಂದ ಸಂರಕ್ಷಿಸಬೇಕು. ಆಯಾ ದೇಗುಲದ ಹೆಸರಿನಿಂದ ಇಂತಹ ಅರಣ್ಯಗಳನ್ನು ದೇವರ ಕಾಡು ಎಂದು ಘೋಷಿಸಿ ಹೆಚ್ಚಿನ ಸ್ಥಾನಮಾನ ಒದಗಿಸಬೇಕು. ಅಲ್ಲಿರುವ ಜೀವ ಸಂಕುಲಕ್ಕೆ ಯಾವುದೇ ವಿಧದ ಅಪಾಯ ಇರಬಾರದು. ಪ್ರಾಣಿ, ಪಕ್ಷಿಗಳಿಗೆ ಸಹ ಹೆಚ್ಚಿನ ರಕ್ಷಣೆ ನೀಡಬೇಕು. ಒತ್ತುವರಿಗೆ ಪೂರ್ಣ ವಿರಾಮ ಬೀಳಬೇಕು. ವಿಶೇಷ ಗಿಡಮೂಲಿಕೆಗಳಿಗೆ ಹೊಸ ಹೊಸ ಹೊರ ನೆಲೆ ಆಸರೆಗಳಿಗೆ ಇಂತಹ ದೇವರ ಕಾಡು ಸೂಕ್ತ.
ಕಾಡಿನ ಬೆಂಕಿಗೆ ಕಡಿವಾಣ: ಕಾಡು ಪ್ರಾಣಿಗಳಿಂದ ನೊಂದು ಉಪಟಳಕ್ಕೆ ಬೇಸತ್ತು ಕಾಡಿನಂಚಿನ ಮಂದಿ ಸೇಡಿಗಾಗಿ ಕಾಡಿಗೆ ಕಿಚ್ಚು ಹಚ್ಚುವರು. ಇಲಾಖೆಯೊಂದಿಗೆ ನಡೆಯುವ ಘರ್ಷಣೆ ಸಹ ಕೆಲವು ಬಾರಿ ಕಾಡಿನ ಬೆಂಕಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಪೀಳಿಗೆಯ ಮಕ್ಕಳಿಗೆ ಕಾಡು ಮತ್ತು ಅದರ ಮಹತ್ವದ ಬಗ್ಗೆ ಕಾಳಜಿ ಮೂಡಿಸಬೇಕು. ಅಲ್ಲದೇ, ಕಾಡಿಗೆ ಬೆಂಕಿ ಹತ್ತದಂತೆ ಮುಂಜಾಗರೂಕತೆ ವಹಿಸುವುದು ಲೇಸು. ಒಂದು ವೇಳೆ ಬೆಂಕಿ ಕಂಡರೂ ತಕ್ಷಣ ಆರಿಸುವ ಕಾರ್ಯಪಡೆ ಸ್ಥಳಿಯವಾಗಿ ಹುಟ್ಟಬೇಕಿದೆ.
ಕಾಡಿನ ಜನರಿಂದ ಕಲಿಯಬೇಕಿದೆ: ಶತಶತಮಾನಗಳಿಂದ ಕಾಡನ್ನೇ ನಂಬಿ ಬದುಕಿದ ಅನೇಕ ಬುಡಕಟ್ಟು ಜನರ ಸಮುದಾಯಗಳು ಇಂದಿಗೂ ನಮ್ಮಲ್ಲಿವೆ. ಅವರು ಆಹಾರಕ್ಕಾಗಿ ಬೇಟೆಯಾಡುವುದು ಸಹಜ. ಇಂತಹ ಬೇಟೆಗಳಿಗೆ ಸಂಪೂರ್ಣ ನಿಷೇಧ ಹೇರಿ ಅವರಿಂದ ಕಾಡು ಕಾಯುವ ಕಾಯಕ ಮಾಡಿಸಬಹುದು. ಸುಸ್ಥಿರ ಬದುಕಿಗೆ ಅವರಿಗೆ ನೆಲೆ ಕಲ್ಪಿಸಿ ಕಾಡು ಉಳಿಸುವ ಅವರ ವಿಧಾನ ಅರಿತು ಅಳವಡಿಸಬಹುದು. ಕಾಡಿನ ಲಂಟಾನ, ಯುಪಟೋರಿಯಂ ಕಳೆಯ ನಿರ್ಮೂಲನೆಗೆ ಅವರ ನೆರವು ಪಡೆಯಬಹುದು. ರಾಜ್ಯದ ಕೋಗಾರ, ಜೋಗ, ಮೇಗಾನೆ, ಮೇದಿನಿಯಂತಹ ಪ್ರದೇಶಗಳಲ್ಲಿ ಕೂಡಲೇ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.