ADVERTISEMENT

ದಿಕ್ಕೆಟ್ಟ ಸಂಚಾರ ದಟ್ಟಣೆ ಸರಿದಾರಿಗೆ ಸಲಹೆ

ಡಾ.ಎಂ.ಎ.ಸಲೀಂ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಬೆಂಗಳೂರು ಮತ್ತು ರಾಜ್ಯದ ಇನ್ನಿತರ ಪ್ರಮುಖ ನಗರಗಳು ಸಂಚಾರ ದಟ್ಟಣೆಯಿಂದ ದಿಕ್ಕೆಟ್ಟಿವೆ. ಈ ನಗರಗಳ ಧಾರಣಾ ಸಾಮರ್ಥ್ಯವನ್ನೂ ಮೀರಿ ವಾಹನಗಳು ರಸ್ತೆಗೆ ಇಳಿದಿವೆ. ಆದರೆ, ಇದಕ್ಕೆ ತಕ್ಕಂತೆ ರಸ್ತೆ ಜಾಲ ವಿಸ್ತರಣೆ ಆಗುತ್ತಿಲ್ಲ. ಅಭಿವೃದ್ಧಿಯ ಪ್ರಮಾಣವೂ ಏರುತ್ತಿಲ್ಲ. ಬದಲಿಗೆ ರಸ್ತೆಗಳು ಮತ್ತಷ್ಟು ಕಿರಿದಾಗುತ್ತಿವೆ.

ಮತ್ತೊಂದು ಬದಿಯಲ್ಲಿ ದಿನನಿತ್ಯ ಹೊಸದಾಗಿ ಗಣನೀಯ ಸಂಖ್ಯೆಯಲ್ಲಿ ವಾಹನಗಳು ರಸ್ತೆ ಮೇಲೆ ಕಾಲೂರುತ್ತಿವೆ. ಇದರಿಂದ ವಾಯು ಮಾಲಿನ್ಯದ ಜೊತೆಗೆ ಶಬ್ದ ಮಾಲಿನ್ಯವೂ ಎಲ್ಲೆ ಮೀರಿದೆ. 

ವಾಹನ ದಟ್ಟಣೆಗೆ ಪ್ರಮುಖ ಕಾರಣಗಳು:

  1. ಜನಸಂಖ್ಯೆ ಹೆಚ್ಚಳ ಮತ್ತು ಜನರಲ್ಲಿ ಅಗತ್ಯಕ್ಕೂ ಮೀರಿ ಹೆಚ್ಚಾಗುತ್ತಿರುವ ಚಟುವಟಿಕೆಗಳು .
  2. ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರೀಕೃತವಾದ ಕಚೇರಿ, ಉದ್ದಿಮೆಗಳಿಂದಾಗಿ ನೌಕರರು, ವ್ಯಾಪಾರಿಗಳು ವಾಹನ ಬಳಸಬೇಕಾದ ಅನಿವಾರ್ಯ.
  3. ಕಲಸುಮೇಲೊಗರವಾಗಿರುವ ಸಂಚಾರ ವ್ಯವಸ್ಥೆ.
  4. ವಾಹನಗಳ ಸಂಚಾರವನ್ನು ವೇಗದ ಗತಿಯನ್ನಾಧರಿಸಿ ವರ್ಗೀಕರಿಸದಿರುವುದು .
  5. ಸಣ್ಣ ಸಣ್ಣ ರಸ್ತೆಗಳು, ಕಿರಿದಾದ ಪಾದಚಾರಿ ಮಾರ್ಗ, ಪಾದಚಾರಿ ಮಾರ್ಗದ ಅತಿಕ್ರಮಣ .
  6. ವಾಹನ ನಿಲ್ದಾಣದ ಕೊರತೆಯಿಂದಾಗಿ ರಸ್ತೆಯ ಬದಿಗೆ ನಿಲ್ಲುವ ವಾಹನಗಳು .
  7. ರಸ್ತೆ ನಿಯಮಗಳ ಪಾಲನೆಯಲ್ಲಿ ಉದಾಸೀನ, ಸಂಚಾರ ಜ್ಞಾನದ ಕೊರತೆ, ಅಜಾಗರೂಕ ಚಾಲನೆ .
  8. ಪರಿಣಾಮಕಾರಿಯಾಗಿ ಜಾರಿಯಾಗದ ಕಾನೂನು .
  9. ಅಗತ್ಯ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ .

ಸುಗಮ ಸಂಚಾರಕ್ಕೆ ಸಲಹೆ
1. ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚು ಬಳಕೆ ಮಾಡುವುದರಿಂದ ಸಂಚಾರ ದಟ್ಟಣೆ ತಗ್ಗಿಸಲು ಸಾಧ್ಯ. ಉತ್ತಮವಾದ ಮತ್ತು ಪರ್ಯಾಯ ಸಾರ್ವಜನಿಕ ಸಾರಿಗೆ ಎಂದರೆ `ಕಮ್ಯೂಟರ್ ರೈಲು' ವ್ಯವಸ್ಥೆ. ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುವ ಮಾರ್ಗಗಳನ್ನು ಗುರುತಿಸಿ, ಈ ವಲಯದಲ್ಲಿ ಪರಸ್ಪರ ಸಂಪರ್ಕಿಸುವ ಅಥವಾ ಪೂರಕ ಸಾರಿಗೆಯ ಅನುಕೂಲ ಇರುವಂತಹ ಮಾರ್ಗ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆ ತಗ್ಗುತ್ತದೆ.

ADVERTISEMENT

ಇದಕ್ಕಾಗಿ `ಮೆಟ್ರೊ' ಅಥವಾ `ಮಾನೊ' ರೈಲು ಇಲ್ಲವೇ ಬಸ್ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ನಿರ್ಮಾಣ ಅಗತ್ಯ. ಕಡಿಮೆ ದರದಲ್ಲಿ ಪ್ರಯಾಣ, ಸುಗಮ ಮತ್ತು ಶೀಘ್ರ ಸಂಚಾರದ ಅನುಕೂಲ ಕಲ್ಪಿಸುವ `ಕಮ್ಯೂಟರ್ ರೈಲು' ವ್ಯವಸ್ಥೆಯು ಜನಪ್ರಿಯ ಯೋಜನೆಯೂ ಆಗಿದೆ.

2. ವಾಹನ ಹೊಂದುವ ಹಂಬಲ ಹೆಚ್ಚುತ್ತಿದೆ. ಮುಂದಿನ ಹಲವು ವರ್ಷಗಳಲ್ಲಿ ದುಪ್ಪಟ್ಟಾಗುವ ವಾಹನಗಳ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ದೀರ್ಘ ಬಾಳಿಕೆ ಮತ್ತು ವಾಹನ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯದ ರಸ್ತೆಗಳನ್ನು ನಿರ್ಮಿಸಬೇಕು. ನಿರ್ಮಿಸಿದರೆ ಸಾಲದು, ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆಯೂ ಮಾಡಬೇಕು.

ಇದರಿಂದ ಅಪಘಾತ ಸಂಭವ ತಗ್ಗುತ್ತದೆ, ಅಧಿಕ ಸಂಚಾರ ಒತ್ತಡ ಇರುವ ಕಡೆಗಳಲ್ಲಿ ಮೇಲುಸೇತುವೆ (ಫ್ಲೈ ಓವರ್) ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಇದಕ್ಕೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಒಂಬತ್ತು ಕಿ.ಮೀ. ಉದ್ದದ ಫ್ಲೈ ಓವರ್ ಉತ್ತಮ ಉದಾಹರಣೆ. ಇಂತಹ ಫ್ಲೈ ಓವರ್‌ನಿಂದ ಸಿಗ್ನಲ್ ಮುಕ್ತ ಸಂಚಾರ ಮಾರ್ಗ ಸಾಧ್ಯ.

3. ಸನಿಹದ ಪ್ರಯಾಣಕ್ಕೆ ಹೊಗೆಯುಗುಳದ ಸೈಕಲ್ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚಬೇಕಾಗಿದೆ.

4. ಕಾಲ್ನಡಿಗೆಯಷ್ಟು ದೂರವನ್ನು ನಡೆದೇ ಹೋಗುವುದು ಒಳಿತು. ಪ್ರಯಾಣಿಕರಲ್ಲಿ ಶೇ 25ರಿಂದ 30ರಷ್ಟು ಮಂದಿ ಪಾದಚಾರಿಗಳು. ಆದರೆ, ಇವರ ಪ್ರಯಾಣಕ್ಕೆ ಇರುವ ದಾರಿ ವಿವಿಧ ರೀತಿಯಲ್ಲಿ ಒತ್ತುವರಿಯಾಗಿದೆ.  ಉತ್ತಮ ನಿರ್ವಹಣೆಯಿಂದ ಕೂಡಿದ ಪಾದಚಾರಿ ಮಾರ್ಗ ಇಂದಿನ ಅಗತ್ಯವಾಗಿದೆ.

5. ಸರ್ಕಾರಿ ಕಚೇರಿ ಮತ್ತು ಶಾಲಾ- ಕಾಲೇಜುಗಳ ಕಾರ್ಯಾವಧಿಯಲ್ಲಿ ಬದಲಾವಣೆ ಮಾಡುವುದರಿಂದಲೂ ಸಂಚಾರ ದಟ್ಟಣೆ ತಪ್ಪಿಸಬಹುದು. 

6. ಒಂದೇ ಪ್ರದೇಶದಲ್ಲಿ ಉದ್ಯೋಗ ಮಾಡುವವರ ನಿವಾಸವು ಒಂದೇ ಕಾಲೊನಿ ಅಥವಾ ಉದ್ಯೋಗ ಸ್ಥಳಕ್ಕೆ ತೆರಳುವ ಮಾರ್ಗದಲ್ಲೇ ಇದ್ದ ಪಕ್ಷದಲ್ಲಿ ಅಂತಹವರು ಪ್ರತ್ಯೇಕ ವಾಹನಗಳಲ್ಲಿ ಬರುವ ಬದಲು ಎಲ್ಲರೂ ಕೂಡಿ ಒಂದು ವಾಹನದಲ್ಲಿ ಬಂದರೆ ವಾಹನ ದಟ್ಟಣೆ ಕಡಿಮೆಯಾಗಲು ನೆರವು ನೀಡಿದಂತಾಗುತ್ತದೆ. ಇಂತಹ ಪದ್ಧತಿ ಪಶ್ಚಿಮದ ದೇಶಗಳಲ್ಲಿ ರೂಢಿಯಲ್ಲಿದೆ. ನಮ್ಮಲ್ಲೂ ಈಗೀಗ ಶುರುವಾಗಿದೆ. ಇದು ಮತ್ತಷ್ಟು ಹೆಚ್ಚಬೇಕು.

7. ರಸ್ತೆ ಬಳಕೆ ಮಾಡುವವರಿಗೆ ಸಂಚಾರ ನಿಯಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಶಿಕ್ಷಣ ನೀಡುವುದು ಅಗತ್ಯ.  ಪದೇ ಪದೇ ನಿಯಮ ಉಲ್ಲಂಘಿಸುವ ಅಥವಾ ಅಪಘಾತ ಪ್ರಕರಣದಲ್ಲಿ ಭಾಗಿಯಾಗುವವರಿಗೆ ಕಾನೂನು ಕ್ರಮದ ಜೊತೆಗೆ ಅವರನ್ನು ಸುಧಾರಿಸಲು ಅಗತ್ಯ ತರಬೇತಿ ಮತ್ತು ಮಾನಸಿಕ ಚಿಕಿತ್ಸೆಗಾಗಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡುವುದು ಅಗತ್ಯ.

(ಲೇಖಕರು ಹೆಚ್ಚುವರಿ ಪೊಲೀಸ್ ಕಮಿಷನರ್, ಬೆಂಗಳೂರು ನಗರ ಸಂಚಾರ ವಿಭಾಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.