ADVERTISEMENT

ನಾಡಿಮಿಡಿತ ಸರಿಯಾಗಲಿ

ಆಸ್ಪತ್ರೆಗಳ ‘ಜೀವ’ ಉಳಿಸುವುದು ಹೇಗೆ?

ಡಾ.ವಿ.ಲಕ್ಷ್ಮಿನಾರಾಯಣ
Published 6 ನವೆಂಬರ್ 2016, 8:37 IST
Last Updated 6 ನವೆಂಬರ್ 2016, 8:37 IST
ಡಾ. ವಿ.ಲಕ್ಷ್ಮಿನಾರಾಯಣ, ಚರ್ಮರೋಗ ತಜ್ಞ
ಡಾ. ವಿ.ಲಕ್ಷ್ಮಿನಾರಾಯಣ, ಚರ್ಮರೋಗ ತಜ್ಞ   
ಸಿಡುಬು ಕಾಯಿಲೆಗೆ ಕಂಡು ಹಿಡಿದ ಲಸಿಕೆ ಕೆಲವೇ ದಿನಗಳಲ್ಲಿ ಮೈಸೂರಿಗೆ ಬಂದಿತ್ತು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಸಿಡುಬು ರೋಗಕ್ಕೆ ಲಸಿಕೆ ಹಾಕಿಸಿದ ಹೆಗ್ಗಳಿಕೆಗೆ ಹಳೆ ಮೈಸೂರು ಪಾತ್ರವಾಗಿತ್ತು.
 
ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಇದ್ದ ದೂರದೃಷ್ಟಿಯ ಫಲವಾಗಿ ಕುಟುಂಬ ಕಲ್ಯಾಣ ಕಾರ್ಯಕ್ರಮ 20ನೇ ಶತಮಾನದ ಪೂರ್ವಾರ್ಧದಲ್ಲೇ ಶುರುವಾಯಿತು. ಸರ್ಕಾರ ಸ್ವಾತಂತ್ರ್ಯಾ ನಂತರ ಆರೋಗ್ಯ ಕ್ಷೇತ್ರದಲ್ಲಿ ತ್ವರಿತಗತಿ ಬದಲಾವಣೆಗೆ ಮುಂದಾಗದಿದ್ದರೂ, ಈ ಕ್ಷೇತ್ರದ ಬಗೆಗೆ ಹೊಂದಿದ್ದ ಕಾಳಜಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
 
ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸ್ಥಿತಿಗತಿ ಅಧ್ಯಯನಕ್ಕಾಗಿ ಭಾರತ ಸರ್ಕಾರ 1943ರಲ್ಲಿ ರಚಿಸಿದ್ದ ಡಾ. ಜೆ.ಡಬ್ಲ್ಯು.ಭೋರ್ ಸಮಿತಿಯ ವರದಿ ಆಧಾರದ ಮೇರೆಗೆ, ಸ್ವಾತಂತ್ರ್ಯದ ಬಳಿಕ ಆಧುನಿಕ ಆರೋಗ್ಯ ವ್ಯವಸ್ಥೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿತು.
 
ಹಳ್ಳಿಗಳ ದೇಶದಲ್ಲಿ ಪ್ರಾಥಮಿಕ ಆರೋಗ್ಯ ಘಟಕ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ಪರಿಕಲ್ಪನೆಗೆ ಸ್ಪಷ್ಟ ರೂಪ ಸಿಕ್ಕಿತು. ಅತ್ಯಂತ ಭಯಾನಕ ಕಾಯಿಲೆಗಳೆನಿಸಿದ್ದ ಪ್ಲೇಗ್‌, ಪೋಲಿಯೊ, ನಾಯಿಕೆಮ್ಮು, ಧನುರ್ವಾಯು ಸೇರಿದಂತೆ ಸಾಂಕ್ರಾಮಿಕ ಜಾಡ್ಯಗಳು ಸಂಪೂರ್ಣ ಹತೋಟಿಗೆ ಬಂದವು.
 
ಸರ್ಕಾರದ ಕಾಳಜಿಯಿಂದಾಗಿ ಗರ್ಭಿಣಿಯರು,  ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಿದೆ. ಬಾಣಂತಿ– ನವಜಾತ ಶಿಶು ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಂಗನವಾಡಿ ಮೂಲಕ ನೀಡುವ ಆಹಾರದಿಂದ ಅಪೌಷ್ಟಿಕತೆ ನಿವಾರಣೆಯಾಗುತ್ತಿದೆ.
 
ಸಾರ್ವಜನಿಕ ಆಸ್ಪತ್ರೆಗಳ ಬಗೆಗೆ ಎಷ್ಟೇ ಟೀಕೆಗಳು ವ್ಯಕ್ತವಾದರೂ ಆರೋಗ್ಯ ಸುಧಾರಣೆ ಕುರಿತು ಸರ್ಕಾರ ತೋರಿದ ಬದ್ಧತೆಯನ್ನು ಮೆಚ್ಚಬೇಕು. ಹೀಗಾಗಿ, ವೈದ್ಯಕೀಯ ಸೇವೆಗಾಗಿ ಸರ್ಕಾರಿ ಆಸ್ಪತ್ರೆಗಳ ಎದುರು ಸಾವಿರಾರು ರೋಗಿಗಳು ನಿತ್ಯ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
 
ಅಭಿವೃದ್ಧಿ ಹೊಂದುತ್ತಿರುವ ಭಾರತ, ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಬಂಡವಾಳ ಹೂಡಿದೆ. ಯುರೋಪ್‌ ದೇಶಗಳು ನೀಡುವಷ್ಟು ಅನುದಾನವನ್ನು ಸೇವಾ ಕ್ಷೇತ್ರಕ್ಕೆ ಭಾರತ ಒದಗಿಸುತ್ತಿಲ್ಲ. ಆದರೂ, ಈ ಹೂಡಿಕೆ ಭವಿಷ್ಯದ ಭಾರತಕ್ಕೆ ಉಪಯುಕ್ತವಾಗಲಿದೆ.
 
ಆರೋಗ್ಯ ವ್ಯವಸ್ಥೆ ವಿಸ್ತಾರಗೊಂಡಿದ್ದು, ರೋಗ ನಿರೋಧಕ ಕಾರ್ಯಕ್ರಮಗಳು ವ್ಯಾಪಕವಾಗಿವೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಇದೇ ಮಾದರಿಯಲ್ಲಿ ಉಳಿಸುವ, ಕಾಲಕ್ಕೆ ತಕ್ಕಂತೆ ಸುಧಾರಣೆ ತರುವ ಜರೂರು ಈಗ ಎದುರಾಗಿದೆ.
 
ಸ್ಟಾರ್‌ ಹೋಟೆಲ್‌ ಮಾದರಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಆಸಕ್ತಿಯನ್ನು ಬಂಡವಾಳಶಾಹಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ತೋರುವುದಿಲ್ಲ. ಕಾರ್ಪೊರೇಟ್‌ ಆಸ್ಪತ್ರೆಗಳು ನಿಗದಿ ಮಾಡಿದ ಶುಲ್ಕವನ್ನು ಪಾವತಿಸಲು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಹೀಗಾಗಿ, ಆರೋಗ್ಯ ಸೇವೆಯನ್ನು ಸರ್ಕಾರವೇ ಒದಗಿಸುವುದು ಅನಿವಾರ್ಯ. ಕಲ್ಯಾಣ ರಾಜ್ಯದಲ್ಲಿ ಇದು ಸರ್ಕಾರದ ಜವಾಬ್ದಾರಿ ಕೂಡ.
 
ಅಲೋಪಥಿ ಚಿಕಿತ್ಸಾ ವಿಧಾನ ಸಾಕಷ್ಟು ಸುಧಾರಿಸಿದೆ. ಆಲ್ಟ್ರಾಸೌಂಡ್‌, ಎಂ.ಆರ್‌.ಐ. ಸ್ಕ್ಯಾನಿಂಗ್‌, ಲೇಸರ್‌, ರೊಬೋಟ್‌ ಥೆರಪಿ ಬಂದಿವೆ. ಆದರೆ, ಜೀವನಶೈಲಿ ಆಧಾರಿತ ಜಾಡ್ಯಗಳು ಕಳವಳಕಾರಿ ರೀತಿಯಲ್ಲಿ ಹೆಚ್ಚಾಗುತ್ತಿವೆ. ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.
 
ಇಂತಹ ಜಾಡ್ಯಗಳನ್ನು ನಿಯಂತ್ರಿಸುವ,  ಗುಣಮುಖ ಮಾಡುವ ದೃಷ್ಟಿಯಿಂದ ಆರೋಗ್ಯ ವ್ಯವಸ್ಥೆಯನ್ನು ಪುನರ್‌ ರೂಪಿಸಬೇಕಾದ ಅಗತ್ಯವಿದೆ. ರೋಗಗಳನ್ನು ತಡೆಗಟ್ಟುವ ಲಸಿಕೆಗಳ ಜತೆಗೆ ಆಹಾರಕ್ರಮ ಬದಲಾವಣೆ ನಿಟ್ಟಿನಲ್ಲೂ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯ ಎದುರಾಗಿದೆ.
 
ಕೈತುಂಬ ಸಂಬಳ ನೀಡಿದರೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ವೈದ್ಯ ಹುದ್ದೆ ಆಕರ್ಷಕವಾಗಿಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಹಳ್ಳಿಗೆ ನಿಯೋಜನೆಗೊಂಡ ವೈದ್ಯರಿಗೆ ವಾಸಕ್ಕೆ ಮನೆ ಸಿಗುವುದಿಲ್ಲ.
 
ವೈದ್ಯರು ಕೆಳಜಾತಿಯವರಾದರಂತೂ ಮನೆ ಬಾಡಿಗೆ ನೀಡಲು ಮಾಲೀಕರು ಹಿಂದೇಟು ಹಾಕುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದ ಬಹುತೇಕ ವೈದ್ಯರು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ಆಸ್ಪತ್ರೆ ಸಮೀಪವೇ ವಸತಿಗೃಹಗಳನ್ನು ನಿರ್ಮಿಸುವಂತೆ ವೈದ್ಯರು ಇಟ್ಟ  ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದೆ.
 
ಹಳ್ಳಿಗಾಡಿನಲ್ಲಿ ಕೆಲಸ ಮಾಡುವ ವೈದ್ಯರಿಗೆ ಪ್ರೋತ್ಸಾಹಧನ, ಸ್ನಾತಕೋತ್ತರ ಪದವಿಯಲ್ಲಿ ಆದ್ಯತೆ ಸಿಗುವಂತಹ ನೀತಿಗಳನ್ನು ರೂಪಿಸಬೇಕು. ಇಲ್ಲವಾದರೆ ಎಷ್ಟೇ ವೇತನ ಪಾವತಿ ಭರವಸೆ ನೀಡಿದರೂ ವೈದ್ಯರ ಸೇವೆ ಗ್ರಾಮೀಣ ಪ್ರದೇಶಕ್ಕೆ ಮರೀಚಿಕೆಯಾಗುವುದು ನಿಶ್ಚಿತ.
 
ತಜ್ಞ ವೈದ್ಯರು ಹಾಗೂ ರೋಗಿಗಳ ನಡುವೆ ಕೊಂಡಿಯಂತಿದ್ದ ಕುಟುಂಬ ವೈದ್ಯರ (ಫ್ಯಾಮಿಲಿ ಡಾಕ್ಟರ್‌) ಸಂಖ್ಯೆ ವಿರಳವಾಗಿದೆ. ಸಣ್ಣ ಕಾಯಿಲೆಗೂ ನರ್ಸಿಂಗ್‌ ಹೋಂ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸಂಪರ್ಕಿಸುವ ವ್ಯವಸ್ಥೆ ರೂಪಿತವಾಗಿದೆ.
 
ಇದರ ಲಾಭ ವೈದ್ಯರಿಗೆ ಲಭಿಸುತ್ತಿರುವ ಪರಿಣಾಮವಾಗಿ ಕುಟುಂಬ ವೈದ್ಯರ ಪಾತ್ರವನ್ನು ಪ್ರಜ್ಞಾಪೂರ್ವಕವಾಗಿ ನಿರ್ಮೂಲನೆ ಮಾಡಲಾಗುತ್ತಿದೆ. ಆರೋಗ್ಯ ವ್ಯವಸ್ಥೆಯ ಮೊದಲ ಮೆಟ್ಟಿಲಂತಿರುವ ಕುಟುಂಬ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೋರ್ಸ್‌ ಶುರು ಮಾಡುವ ಪ್ರಸ್ತಾವ ಮೂಲೆಗುಂಪಾಗಿದೆ.
 
ಸರ್ಕಾರಿ ವೈದ್ಯರ ಮೇಲೆ ಹೆಚ್ಚಾದ ಒತ್ತಡವೂ ವೃತ್ತಿಯ ಬಗೆಗೆ ಅನೇಕರಲ್ಲಿ ಬೇಸರ ಮೂಡಿಸಿದೆ. ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವುದು, ಆಡಳಿತ ನಿರ್ವಹಣೆ ಹಾಗೂ ಚಿಕಿತ್ಸೆ ನೀಡುವ ಹೊಣೆ ಆರೋಗ್ಯ ಅಧಿಕಾರಿಗಳ ಹೆಗಲ ಮೇಲೆ ಬಿದ್ದಿದೆ.
 
ಸರ್ಕಾರಿ ವೈದ್ಯರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಳಿತ ನಿರ್ವಹಣೆಯ ಹೊಣೆಯನ್ನು ಮತ್ತೊಬ್ಬರಿಗೆ ನೀಡಬೇಕು ಎಂಬ ಡಾ. ಸುದರ್ಶನ್‌ ಸಮಿತಿಯ ಶಿಫಾರಸು ಹಲವು ವರ್ಷಗಳಿಂದ ಸರ್ಕಾರದಲ್ಲಿ ಕೊಳೆಯುತ್ತಿದೆ.
 
ವೈದ್ಯರ ಖಾಲಿ ಹುದ್ದೆ ಭರ್ತಿ ಮಾಡುವ ಆತುರದಲ್ಲಿ ಸರ್ಕಾರ ವೈದ್ಯಕೀಯ ಪದ್ಧತಿಗಳನ್ನು ಕಲಸುಮೇಲೋಗರ ಮಾಡಲು ಮುಂದಾದಂತೆ ಕಾಣುತ್ತಿದೆ. ಅಲೋಪಥಿ ವೈದ್ಯರ ಹೊಣೆಯನ್ನು ಆಯುರ್ವೇದ ವೈದ್ಯರಿಗೆ ವರ್ಗಾವಣೆ ಮಾಡಿದರೆ ವ್ಯವಸ್ಥೆ ಅಧಃಪತನದತ್ತ ಸಾಗುತ್ತದೆ. ಅಲೋಪಥಿ ವೈದ್ಯರ ಮೇಲಿನ ಒತ್ತಡ ನಿವಾರಿಸಲು ಆಯುರ್ವೇದ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಬದಲು ಅರೆ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಸೂಕ್ತ.
 
ಪ್ರತಿ ಎರಡು ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು ಎಂಬ ನೀತಿ ಇದೆ. ಹಳ್ಳಿ ಪ್ರದೇಶದಲ್ಲಿ ಇದು ಸುಧಾರಣೆ ಆಗಿದೆ. ಆದರೆ, ನಗರದಲ್ಲಿ ಜನಸಾಂದ್ರತೆಗೆ ಅನುಗುಣವಾಗಿ ಸಾರ್ವಜನಿಕ ಆಸ್ಪತ್ರೆಗಳಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿ ಪ್ರಯೋಗಾಲಯ, ಎಕ್ಸ್‌ರೇ, ರಕ್ತನಿಧಿಗಳಿಲ್ಲ.
 
ಸ್ತ್ರೀರೋಗ ತಜ್ಞರು, ಮನೋವೈದ್ಯರು ಹಾಗೂ ಮಕ್ಕಳ ವೈದ್ಯರ ಸಂಖ್ಯೆ ಹೆಚ್ಚಿಸಲು ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಏರಿಕೆ ಮಾಡುವುದು ಸೂಕ್ತ. ವಿವಿಧ ಯೋಜನೆಗಳ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹರಿದು ಹೋಗುತ್ತಿರುವ ಸರ್ಕಾರಿ ಹಣಕ್ಕೆ ಕಡಿವಾಣ ಹಾಕಬೇಕು.
 
‘ನರ್ಸ್‌ ಪ್ರಾಕ್ಟೀಷನರ್‌್’ ಪರಿಕಲ್ಪನೆ ಮುಂದುವರಿದ ದೇಶಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ಮನೆಮನೆಗೆ ಭೇಟಿ ನೀಡುವ ಶುಶ್ರೂಷಕಿಯರು ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾರೆ.
 
ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಸೇವೆ ಒದಗಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಇದು ಉಪಯುಕ್ತ ಮಾದರಿ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ ಎದುರು ಈ ಪ್ರಸ್ತಾವ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
 
ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಕೂಲಂಕಷವಾಗಿ ಪರೀಕ್ಷಿಸಲು ಸಮಯ ಇರುವುದಿಲ್ಲ. ನಾಡಿಮಿಡಿತ ಪರೀಕ್ಷೆಗೂ ಕಾಲಾವಕಾಶ ಸಿಗುವುದಿಲ್ಲ. ಹೀಗಾಗಿ, ರೋಗ ಪತ್ತೆ ಮತ್ತು ಚಿಕಿತ್ಸೆ ವಿಧಾನದಲ್ಲಿಯೂ ಬದಲಾವಣೆ ತರಬೇಕಾದ ಅಗತ್ಯವಿದೆ.
 
ಜಾಡ್ಯ ನಿರ್ಧರಿಸುವುದು ಮಾತ್ರ ವೈದ್ಯರ ಕೆಲಸವಾಗಬೇಕು. ರೋಗಿಯ ಆರೈಕೆ ಸೇರಿದಂತೆ ಚಿಕಿತ್ಸೆಯ ಹೊಣೆಯನ್ನು ನರ್ಸ್‌ಗಳಿಗೆ ಬಿಡಬೇಕು. ಆಸ್ಟ್ರೇಲಿಯ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ಈ ವ್ಯವಸ್ಥೆ ಇದೆ. ವೈದ್ಯರ ಸೇವೆಗಿಂತಲೂ ಔಷಧ ಹೆಚ್ಚು ದುಬಾರಿಯಾಗುತ್ತಿದೆ.
 
ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಟಿಯಲ್ಲಿ ಔಷಧ ಉದ್ಯಮ ಸಿಕ್ಕಿಕೊಂಡಿದ್ದು, ಬಡ ರೋಗಿಗಳು ನರಳುವಂತೆ ಮಾಡುತ್ತಿದೆ. ಔಷಧ ತಯಾರಿಕಾ ಕಂಪೆನಿಗಳು ತಮ್ಮ ಲಾಭದಲ್ಲಿ ವೈದ್ಯರಿಗೂ ಪಾಲು ನೀಡಲು ಆರಂಭಿಸಿವೆ. ವೈದ್ಯರಿಗೆ ಕಾರು, ಫ್ಲಾಟ್‌, ವಿದೇಶಿ ಪ್ರವಾಸದ ಆಮಿಷ ತೋರಿಸಿ ರೋಗಿಗಳನ್ನು ವಂಚಿಸುವಂತೆ ಪ್ರಚೋದನೆ ನೀಡುತ್ತಿವೆ.
 
ಔಷಧಗಳ ವಿಚಾರದಲ್ಲಿ ಸರ್ಕಾರ ಜನಪರ ನೀತಿಯನ್ನು ಜಾರಿಗೆ ತರಬೇಕು. ಔಷಧ ಉತ್ಪಾದನೆ ಹಾಗೂ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಬೇಕು. ಪ್ರತಿಯೊಬ್ಬರಿಗೂ ಆರೋಗ್ಯದ ಭದ್ರತೆ ಲಭಿಸುವಂತೆ ಆಗಬೇಕು.
 
**
-ಡಾ. ವಿ.ಲಕ್ಷ್ಮಿನಾರಾಯಣ, ಚರ್ಮರೋಗ ತಜ್ಞ
-ನಿರೂಪಣೆ: ಜಿ.ಬಿ.ನಾಗರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.