ADVERTISEMENT

ಪುರಾತನ ಸಾಹಿತ್ಯಕ್ಕೆ ಬೇಕಿದೆ ರಕ್ತದಾನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಆಗ ನಾನು ಒಂದು ವಿಶ್ವವಿದ್ಯಾ­ಲಯದ ಸ್ನಾತ­ಕೋ­­ತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾ­ಪಕ­ನಾಗಿ ಕಾರ್ಯ ನಿರ್ವಹಿ­ಸು­ತ್ತಿದ್ದೆ. ಆದಿ­ಕವಿ ಪಂಪನನ್ನು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಷಣ ಮಾಡುವ ಸಂದರ್ಭ ಬಂದಾಗ ಆತನ ‘ವಿಕ್ರಮಾ­ರ್ಜುನ ವಿಜಯಂ’ ಕಾವ್ಯದಲ್ಲಿ ಬರುವ ‘ಕ್ರಮ­ಮುಂ..’ ಎಂದು ಆರಂಭವಾಗುವ ಯುದ್ಧ ಸನ್ನಿ­ವೇಶದ ಪದ್ಯ­ವೊಂದನ್ನು ಉಲ್ಲೇ­ಖಿಸಿ ಹೀಗೆ ಹೇಳಿದೆ: ‘ಸಭೆಯಲ್ಲಿರುವ ಹಿರಿಯ ತಲೆಮಾರಿನ ವಿದ್ವಾಂಸರನ್ನು ಬಿಟ್ಟು ಬೇರೆ ಯಾರಾ­ದರೂ ಈ ಪದ್ಯವನ್ನು ಬಿಡಿಸಿ, ಅರ್ಥ ವಿವರಿಸುವಿರಾ? ಅದರ ಮಹತ್ವ ಕುರಿತು ಹೇಳುವಿರಾ?’

ಆಗ ಸಭೆಯಲ್ಲಿ ನೀರವತೆ ಆವರಿಸಿತು. ಒಂದು ನಿಮಿಷದ ನಂತರ ಮತ್ತೆ ಭಾಷಣ ಮುಂದುವರಿಯಿತು. ರೂಪಕವಾಗಿ ನೋಡಿದರೆ ಈ ಘಟನೆಯ ಹಿಂದೆ ಅನೇಕ ಸಾಂಸ್ಕೃತಿಕ ಸಮಸ್ಯೆಗಳ ಗೊಂಚಲೇ ಇದೆ. ಮೊಬೈಲ್‌ನಲ್ಲಿ ಹೇಗೆ ನಾವು ನಮಗೆ ಇಷ್ಟವಾದ ಮಾಹಿತಿ ಸಂದೇಶಗಳನ್ನು ನಮಗೆ ಬೇಕಾದವರಿಗೆ ಫಾರ್ವರ್ಡ್‌ ಮಾಡು­ವೆವೋ ಹಾಗೇ ಶ್ರೀವಿಜಯನು ಹೇಳಿ­ರುವ ಕಾವ್ಯಮೀಮಾಂಸೆ, ‘ವಡ್ಡಾರಾಧನೆ’ಯ ಕತೆಗಳು ಮತ್ತು ಪಂಪನಿಂದ ಮೊದ­ಲ್ಗೊ­ಳ್ಳುವ ಕನ್ನಡ ಕಾವ್ಯ ಸಾಹಿತ್ಯ ಪರಂಪರೆಯನ್ನು ಹಿರಿಯ ತಲೆಮಾರಿನಿಂದ ಹೊಸ ಪೀಳಿಗೆಗೆ ರವಾನಿಸುವುದು ಹೇಗೆ ಎಂಬುದೇ ಇಂದಿನ ಶಾಸ್ತ್ರೀಯ ಕನ್ನಡ ಸಂದರ್ಭದ ಬಹು ಮುಖ್ಯ ಸವಾಲು.

ಅನುದಾನ, ಕಟ್ಟಡ, ನಿರ್ದೇಶಕರ ನೇಮಕಾತಿ ಎಲ್ಲ ನಡೆದ ಬಳಿಕವೂ ಪಟ್ಟಾಗಿ ಕುಳಿತು ಹಳಗನ್ನಡ ಕ್ಷೇತ್ರದಲ್ಲಿ ಕೆಲಸ ಮಾಡುವ ತರುಣ ವಿದ್ವಾಂಸರ ತಂಡವನ್ನು ಕಟ್ಟುವುದು ಹೇಗೆ ಎಂಬುದು ಸವಾಲಾಗಿದೆ. ಕೆಲವು ವರ್ಷಗಳಿಂದ ಅನೇಕ ವಿ.ವಿ.ಗಳಲ್ಲಿ ಹಳಗನ್ನಡ­ವನ್ನು ಕಡೆ­ಗಣಿಸಿಕೊಂಡು ಬರಲಾಗಿದೆ. ಅಲ್ಲದೆ ಕೆಲವು ವಿ.ವಿ ಗಳ ಬಿ.ಎ. ಕನ್ನಡ ಐಚ್ಛಿಕ  ಹಾಗೂ ಎಂ.ಎ. ಕನ್ನಡದಲ್ಲಿ ಹಳಗನ್ನಡ ಶಾಸ್ತ್ರ ಭಾಗಗಳಾದ ‘ಶಬ್ದಮಣಿದರ್ಪಣಂ’ ಹಾಗೂ ಛಂದಸ್ಸಿನ ಬೋಧನೆ, ವ್ಯಾಖ್ಯಾನ­ಗಳೂ ನಿಂತು ಹೋಗಿವೆ ಅಥವಾ ಅರೆ ಜೀವವಾಗಿವೆ.

ವಿದ್ವಾಂಸರ ನಡುವಿನ ತಲೆಮಾರು ಮತ್ತು ವೈಚಾರಿಕತೆ, ವೈಧಾನಿತೆಯ ಅಂತರಗಳನ್ನು ಮುಖಾಮುಖಿಗಿಂತಲೂ ಸಂವಾ­­ದದ ನೆಲೆಯಲ್ಲಿ ತಂದು ನಿಲ್ಲಿಸಿಕೊಂಡು ಶಾಸ್ತ್ರೀಯ ಅಧ್ಯ­ಯನಕ್ಕೆ ಹೊಸ ತಿರುವು ನೀಡಬೇಕಿದೆ. ಇದರಲ್ಲಿ ಭೇದ­ಭಾವ ಮಾಡದೆ ವಿ.ವಿ ಮತ್ತು ಪದವಿ ಕಾಲೇಜುಗಳ, ಪಿ.ಯು.ಸಿ.­ಯಲ್ಲಿ ಕನ್ನಡ  ಬೋಧಿಸುತ್ತಿದ್ದು ಹಳಗನ್ನಡದಲ್ಲಿ ಆಸಕ್ತಿ ಇರುವ ಯುವ ಅಧ್ಯಾಪಕ– ಅಧ್ಯಾಪಕಿಯರನ್ನು ಸೇರಿಸಿ­ಕೊಳ್ಳಬೇಕು. ಅವರಿಗೆ ಹಿರಿಯ ಹಳಗನ್ನಡ ಪಂಡಿತರು, ವಿದ್ವಾಂಸರು ಮಾರ್ಗ­ದರ್ಶನ ನೀಡಬೇಕು. ತಾವು ರೂಢಿಸಿ­ಕೊಂಡಿರುವ ಭಾಷಾ ಕೌಶಲ, ಶಾಸ್ತ್ರ ವಿಷಯಗಳ ಅಧ್ಯಯನ ಕೌಶಲಗಳನ್ನು ಬಿಡಿಸಿ ಹೇಳಿಕೊಡಬೇಕು.

ಇತ್ತೀಚೆಗೆ ಬೆಂಗಳೂರಿನ ಉದಯಭಾನು ಕಲಾಸಂಘವು ಒಂದು ವರ್ಷದ ಅವಧಿಯ ‘ಶಾಸ್ತ್ರೀಯ ಕನ್ನಡ ಡಿಪ್ಲೊಮಾ’ ಸರ್ಟಿಫಿಕೇಟ್‌ ತರಗತಿಗಳನ್ನು ಆರಂಭಿಸಿರುವುದು ಗಮ­ನಾರ್ಹ ವಿಷಯ. ವಿವಿಧ ವಿ.ವಿ.ಗಳೂ ಇದರ ಕಡೆ ಗಮನ ಹರಿಸಬೇಕಿದೆ. ಅಲ್ಲದೆ ಶಾಸ್ತ್ರೀಯ ಕನ್ನಡದ ಅಧ್ಯಯನ ಸಂಶೋ­ಧನೆ ಎಷ್ಟೇ ಪ್ರಾಚೀನ ಎಂದುಕೊಂಡರೂ ಅದನ್ನು ಓದುವ­ವರು, ವ್ಯಾಖ್ಯಾನಿಸುವವರು ಮತ್ತು ಅದರ ಫಲಾನುಭವಿ­ಗಳಾ­ದವರು 21ನೇ ಶತಮಾನದ ಪ್ರಜೆಗಳು. ಅದರಲ್ಲೂ ಜಾಗತೀ­ಕರಣ ನಂತರದ ಕಾಲಮಾನದವರು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ವಿಷಯದ ಗಂಭೀರತೆ ಮತ್ತು ಅದನ್ನು ಹೇಳಲು ಬಳಸುವ ಭಾಷೆ, ಪರಿಭಾಷೆ  ಮತ್ತು ಭಾಷಾ ನಿರೂಪಣೆಯ ಭಾರ ಇವುಗಳ ನಡುವೆ ಇರುವ ಗೊಂದಲ ನಿವಾರಣೆ ಆಗಬೇಕು.

ಚಿಕ್ಕಮಕ್ಕಳಿಗೆ ಪಂಪ ಬೇಡವೇ? ಕಥೆಯಾಗುವ ಕಾಮಿಕ್ಸ್‌ಗಳ ಮೂಲಕ, ಆಡಿಯೊ  ಪುಸ್ತಕಗಳ ಮೂಲಕ, ವಿಡಿಯೊ, ಡಿ.ವಿ.ಡಿ.­ಗಳ ಮೂಲಕವೂ ಅಭಿಜಾತ ಸಾಹಿತ್ಯ ಜನರನ್ನು ಮುಟ್ಟಬೇಕು. ಭಾಷಾ ಸಾಮರ್ಥ್ಯದ ಜತೆಗೆ ಶಾಸ್ತ್ರೀಯ ಕನ್ನಡದ ಓದು, ಪೂರಕವಾದ ಅನೇಕ ಕೌಶಲಗಳನ್ನು ಬೇಡುತ್ತದೆ. ಉದಾ­ಹರಣೆಗೆ: ಶಾಸನಗಳನ್ನು ಸ್ವತಃ ಓದುವುದು, ಪದಗಳ ಮೂಲ ಹುಡುಕು­ವುದು, ಹಸ್ತಪ್ರತಿಗಳನ್ನು ಬಳಸುವುದು, ಮುದ್ರಣ ಆಗದೇ ಇರುವ ಹಳಗನ್ನಡ ಕೃತಿಗಳನ್ನು ಅಚ್ಚು­ಕಟ್ಟಾಗಿ ಸಂಪಾದಿಸಿ ಘನವಾಗಿ ಮುನ್ನುಡಿ ಬರೆಯು­ವುದು. 

ಡಿ.ಎಲ್‌.­ನರಸಿಂಹಾ­ಚಾರ್‌ ಮತ್ತು ಡಾ.ಆ.ನೇ.­ಉಪಾಧ್ಯೆ­ಯವರು ಈ ನಿಟ್ಟಿನಲ್ಲಿ ಮಾಡಿರುವ ಕೆಲಸ ಸ್ಮರಣೀಯ. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಬಂದ ಕೆಲವೇ ವರ್ಷ­ಗಳಲ್ಲಿ ಕನ್ನಡವೂ ಆ ಗೌರವಕ್ಕೆ ಪಾತ್ರವಾಯಿತು. ಆದರೆ ಅಲ್ಲಿಂದ ಮುಂದೆ ನಡೆದ ಘಟನೆಗಳು ಬಹಳ ಉತ್ತೇಜಕ­ವೇನಲ್ಲ. ಉದಾಹರಣೆಗೆ: ಶಾಸ್ತ್ರೀಯ ಕನ್ನಡದ  ಅಧ್ಯಯನ ಕೇಂದ್ರವನ್ನು ಯಾವ ಊರಿನಲ್ಲಿ ಉಳಿಸಿಕೊಳ್ಳ­ಬೇಕು? ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂಬುದರಲ್ಲೇ ಸಾಕಷ್ಟು ಕಾಲ­ಹರಣ­ವಾಗಿದೆ.

ತಮಿಳು, ಸಂಸ್ಕೃತವಲ್ಲದೇ ಗ್ರೀಕ್‌, ಲ್ಯಾಟಿನ್‌ ಭಾಷೆಗಳ ಪುರಾತನ ಸಾಹಿತ್ಯವನ್ನು ಸಾಂಪ್ರದಾ­ಯಿಕ ಮತ್ತು ಹೊಸ ಸಂವೇದನೆಯ ಓದುಗಳಿಗೆ ಒಳಪಡಿಸಿ ಜನರಿಗೆ ಅವುಗಳ ಬಗ್ಗೆ ಇರುವ ಮುಜು­ಗರ, ಭಯ ಮತ್ತು  ಪರಕೀ­ಯತೆ ದೂರ ಮಾಡುವ ಕೆಲಸ ನಡೆಯುತ್ತಿದೆ.
ಅಭಿಜಾತ ಕನ್ನಡ ಭಾಷೆ ಮತ್ತು ಅದರ ಸಾಹಿತ್ಯವು ಶಾಸನ, ತಾಳೆಗರಿಗಳಲ್ಲಿ  ಕೊನರಿತು, ಮುದ್ರಣ ಗ್ರಂಥಗಳ ಮೂಲಕ ಜನರಿಗೆ ತಲುಪಿತು. ಈಗ ಡಿಜಿಟಲೀಕರಣದ ಕಾಲ­ದಲ್ಲಿ ಮತ್ತೆ ತನ್ನ ಒಗರು ಮತ್ತು ಹೊಸತನದ ಒನಪು ಸೇರಿ­ಕೊಂಡು ತರುಣ ವಿದ್ವಾಂಸರ ಮೂಲಕ ಮೂಲ ಶಿಕ್ಷಣದ ಹಂತದಲ್ಲೇ ಬಸವಳಿಯುತ್ತಿರುವ ಕನ್ನಡಕ್ಕೆ ಹೊಸ ರಕ್ತದಾನ ಮಾಡ­ಬೇಕಿದೆ.

ಮೈಸೂರಲ್ಲೇ ಉಳಿಯಲಿ
ಕನ್ನಡ ಶಾಸ್ತ್ರೀಯ ಅತ್ಯುನ್ನತ ಕೇಂದ್ರ ಮೈಸೂರಿ­ನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲೇ (ಭಾಷಾ ಸಂಸ್ಥಾನ) ಇರಲಿ. ಇಲ್ಲವೇ ಮೈಸೂರಿನಲ್ಲಿಯೇ ಪ್ರತ್ಯೇಕ ಕಟ್ಟಡ ಕಟ್ಟಿ ಮೂಲ­ಸೌಲಭ್ಯ ಒದಗಿ­ಸಲಿ. ಇದಕ್ಕೆ ಬೇಕಾದ ಸಂಪ­­ನ್ಮೂಲ ಅಂದರೆ ವಿದ್ವಾಂಸರ ನೆರವು ಸಿಗ­ಲಿದೆ.
 – ಟಿ.ವಿ. ವೆಂಕಟಾಚಲಶಾಸ್ತ್ರೀ, ಭಾಷಾ ವಿದ್ವಾಂಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.