ADVERTISEMENT

ಪ್ರಶಸ್ತಿ ವಾಪಸಾತಿ: ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2015, 19:34 IST
Last Updated 16 ಅಕ್ಟೋಬರ್ 2015, 19:34 IST

ಇನ್ನಷ್ಟು ಕಾಯಬಹುದಿತ್ತು
ಪ್ರಶಸ್ತಿ ಹಿಂತಿರುಗಿಸುವುದರಿಂದ ಏನೂ ಆಗಲ್ಲ ಅನಿಸುತ್ತದೆ. ಪೊಲೀಸರು–ಸರ್ಕಾರದವರು ಅವರದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಸ್ವಲ್ಪ ಸಮಯ ಕೊಡಬೇಕು. ಸರ್ಕಾರ ಸುಮ್ಮನೆ ಕೂತಿಲ್ಲ. ಪೊಲೀಸ್‌ ಇಲಾಖೆಯೂ ಸುಮ್ಮನೇ ಕೂತಿಲ್ಲ. ತನಿಖೆ ಕಷ್ಟಕರವಾಗಿದೆ. ಹೀಗೆ ಪ್ರಶಸ್ತಿಗಳನ್ನು ಹಿಂತಿರುಗಿಸಬಾರದಿತ್ತು ಎಂದು ನಾನು ಹೇಳುವುದಿಲ್ಲ. ಆದರೆ ತಾಳ್ಮೆಯಿಂದ ಇನ್ನೊಂದಿಷ್ಟು ದಿನ ಕಾಯಬಹುದಿತ್ತು.
- ಮಾಲತಿ ಪಟ್ಟಣಶೆಟ್ಟಿ,
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
*
ರಾಜೀನಾಮೆಗೆ ಸಹಮತವಿಲ್ಲ
ಈ ಪ್ರತಿಭಟನೆ ಸರ್ಕಾರದ ವಿರುದ್ಧ ಮಾತ್ರವಲ್ಲ, ತಕ್ಕ ಕಾಲದಲ್ಲಿ ಬಾಯಿ ತೆರೆಯದಿರುವ ಸ್ವಾಯತ್ತ ಸಂಸ್ಥೆಯಾದ ಸಾಹಿತ್ಯ ಅಕಾಡೆಮಿಯ ವಿರುದ್ಧವೂ ಆಗಿದೆ. ಹಾಗಿದ್ದೂ, ಅಕಾಡೆಮಿಯ ಕಮಿಟಿಗಳಲ್ಲಿರುವವರಾಗಲೀ ಇತರ ಸ್ಥಾನಗಳಲ್ಲಿರುವವರಾಗಲೀ ಪ್ರತಿಭಟನೆಯ ರೂಪದಲ್ಲಿ ರಾಜೀನಾಮೆ ಕೊಡುವುದಕ್ಕೆ ನನ್ನ ಸಹಮತವಿಲ್ಲ. ಇಂತಹವರು ಒಳಗಿದ್ದುಕೊಂಡೇ ಹೋರಾಟವನ್ನು ಮುಂದುವರಿಸಬೇಕು. ಇಲ್ಲವಾದರೆ ಈ ಕಷ್ಟಕಾಲದಲ್ಲಿ ಅಕಾಡೆಮಿ ಇನ್ನಷ್ಟು ದುರ್ಬಲವಾಗುತ್ತದೆ.

ಒಬ್ಬರು ಪ್ರಶಸ್ತಿಯನ್ನು ಹಿಂತಿರುಗಿಸಿದರೆ ಅದು ಸಾಂಕೇತಿಕತೆ. ಆದರೆ ದೇಶದಾದ್ಯಂತ ಹತ್ತುಹಲವು ಪ್ರಮುಖ ಸಾಹಿತಿಗಳು ಹೀಗೆ ಮಾಡತೊಡಗಿದಾಗ ಅದು ಸಾಂಕೇತಿಕತೆಯನ್ನು ಮೀರಿದ ಚಳವಳಿಯ ಸ್ವರೂಪವನ್ನು ಪಡೆಯತೊಡಗಿದೆಯೆಂದು ಅರ್ಥ. ಈ ಸನ್ನಿವೇಶವನ್ನು ಗ್ರಹಿಸಿ, ಇದನ್ನು ಜನರ ಅರಿವನ್ನು ಜಾಗೃತಗೊಳಿಸುವ ಚಳವಳಿಯಾಗಿ ರೂಪಿಸುವುದರಲ್ಲಿ ಮುಂದಿನ ಹೆಜ್ಜೆಗಳ ಯಶಸ್ಸು ಅಡಗಿದೆ.

ಪ್ರಶಸ್ತಿ ಹಿಂತಿರುಗಿಸುವುದನ್ನೇ ಒಬ್ಬ ಸಾಹಿತಿಯ ಬದ್ಧತೆಯ ಮಾನದಂಡವನ್ನಾಗಿ ಮಾಡಬಾರದು. ಬೆಂಕಿಕಡ್ಡಿಯ ಅವಶ್ಯಕತೆ ಬೆಂಕಿ ಹಚ್ಚುವುದಷ್ಟೇ. ಒಮ್ಮೆ ಜ್ವಾಲೆ ಭುಗಿಲೆದ್ದು ಬೆಳಗಿದ ಮೇಲೆ ಮತ್ತೆಮತ್ತೆ ಬೆಂಕಿಕಡ್ಡಿ ಗೀರುವುದು ಅರ್ಥಹೀನ. ಇನ್ನು ಮಾಡಬೇಕಾದುದು ಈ ಜ್ವಾಲೆಯನ್ನು ಕಾಪಾಡಿ ಬೆಳೆಸುವುದಷ್ಟೇ. ಆದ್ದರಿಂದ ಯಾವುದೇ ಕಾರಣವಿರಲಿ ಪ್ರಶಸ್ತಿ ಹಿಂದಿರುಗಿಸದವರು ಕೋಮುಹಿಂಸೆಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಪರವಾಗಿದ್ದಾರೆ ಎಂದು ಭಾವಿಸುವುದರಲ್ಲಿ ಈ ಚಳವಳಿಯ ಸೋಲಿದೆ. ಕೆಲವು ಸಾಹಿತಿಗಳಿಗೆ ಪ್ರಶಸ್ತಿಯ ಹಣದ ಮೊತ್ತವನ್ನು ಹಿಂತಿರುಗಿಸುವುದು ಕೂಡ ಕಷ್ಟವಾಗಿರಬಹುದು. ಇದಾವುದನ್ನೂ ಅಗೌರವದಿಂದ ನೋಡಬೇಕಾಗಿಲ್ಲ.
- ವಿವೇಕ ಶಾನಭಾಗ,
ಕಥೆಗಾರ
*
ಹಾದಿ ಹುಡುಕುವ ಕ್ರಿಯೆ
ಜನಸಾಮಾನ್ಯರ ಎದೆಯಲ್ಲಿ ಏಳುವ ಮುಖ್ಯ ಪ್ರಶ್ನೆ ‘ಇಲ್ಲಿ ಯಾರನ್ನು ಯಾರು ಬೇಕಾದರೂ ಕೊಂದು ನಿರಾತಂಕದಿಂದ ಇದ್ದು ಬಿಡಬಹುದೆ?’ ನಮ್ಮ ವರ್ತಮಾನ ಇದನ್ನೇ ಕೇಳುತ್ತಿದೆ ಮತ್ತು ಹಾಗೆಯೇ ಇದೆ. ಪ್ರಶಸ್ತಿ ಹಿಂದಿರುಗಿಸಿದ್ದು ವಿಚಾರವಾದಿಗಳ ಹತ್ಯೆಯ ತನಿಖೆಯಲ್ಲಿ ಆಗುತ್ತಿರುವ ವಿಳಂಬ ಪ್ರಶ್ನಿಸಿ ಮಾತ್ರವಲ್ಲ, ನಮ್ಮ ಇಡೀ ಜೀವಕುಲವನ್ನು ಇಂಥ ಸಂದಿಗ್ಧಕ್ಕೆ ತಳ್ಳಿದ ಆಗಂತುಕರಿಗೆ ತೋರಿದ ಸಣ್ಣ ಪ್ರತಿಕ್ರಿಯೆಯಾಗಿ. ಇಷ್ಟೆಲ್ಲ ನಡೆಯಲು, ನಡೆಯುತ್ತಿರುವಾಗಲೂ ಇದ್ದೂ ಇಲ್ಲದಂತಿರುವ, ನಾವು ನಂಬಿದ್ದ ಸದೃಢ ಮತ್ತು ನಿಷ್ಪಕ್ಷಪಾತ ಪ್ರಜಾಪ್ರಭುತ್ವ ಮತ್ತು ಕಾನೂನು ಹಾಗೆ ಉಳಿಯದೇ ಇದ್ದುದಕ್ಕಾಗಿ. ಈ ಸಣ್ಣ ಕ್ರಿಯೆಯಾಚೆಗೂ ಪ್ರತಿಭಟನೆಯ ಎಲ್ಲ ಸೊಲ್ಲುಗಳು ಒಂದುಗೂಡುವ, ನಿರ್ಭಯದ ನೆಮ್ಮದಿಯ ಸಮಸಮಾಜಕ್ಕೆ ಹಾದಿ ಹುಡುಕುವ ಕ್ರಿಯೆ ಈ ಕತ್ತಲಲ್ಲಿಯೇ ನಡೆದಿದೆ ಮತ್ತು ನಡೆಯುತ್ತದೆ.
- ವೀರಣ್ಣ ಮಡಿವಾಳರ,
ಕವಿ
*
ಒಡಕು ಮೂಡದಿರಲಿ
ಪ್ರಶಸ್ತಿ ಹಿಂತಿರುಗಿಸುವುದರಿಂದ ವಸ್ತುಸ್ಥಿತಿ ಬದಲಾಗಿ ಬಿಡುತ್ತದೆ ಎಂದೇನಲ್ಲ. ಆದರೆ ಸರ್ಕಾರದ ಮೇಲೊಂದು ನೈತಿಕ ಒತ್ತಡ ಬರುತ್ತದೆ. ಅಲ್ಲದೇ ಸಮಾಜದ ಆತ್ಮಸಾಕ್ಷಿ ಇದರ ಮೂಲಕ ಎಚ್ಚೆತ್ತುಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಇನ್ನೂ ಒಂದು ವಾದವಿದೆ. ಅದೂ ಸರಿಯೇ. ಪ್ರಶಸ್ತಿ ಬಂದಿರುವುದು ಕೃತಿಯ ಯೋಗ್ಯತೆಗೆ, ತಮ್ಮ ಚಿಂತನೆಗೆ ಸಂದಿದ್ದು, ಆದ್ದರಿಂದ ಅದನ್ನು ಹಿಂತಿರುಗಿಸಬೇಕಾಗಿಲ್ಲ, ಬದಲಾಗಿ ರಾಜಕೀಯವಾಗಿ–ಕಾನೂನಿನ ಪ್ರಕಾರ ಹೋರಾಡಬೇಕು ಎಂಬ ವಾದ.   ವಾಸುದೇವನ್‌ ನಾಯರ್‌ ಪ್ರಶಸ್ತಿ ವಾಪಸ್‌ ಮಾಡಲಾರೆ ಎಂದು ಹೇಳಿದ್ದಾರೆ. ಅವರೂ ಆತ್ಮಸಾಕ್ಷಿಗನುಗುಣವಾಗಿಯೇ ಬದುಕಿದವರು. ಪ್ರಶಸ್ತಿಗೂ ಸರ್ಕಾರಕ್ಕೂ ತಾಂತ್ರಿಕವಾದ ಸಂಬಂಧವಿಲ್ಲ, ಅದು ಸರ್ಕಾರದ ಕೃಪೆಯಿಂದಲ್ಲ, ನಾವು ಯಾರಿಗೂ ಋಣಿಯಲ್ಲ ಎಂಬುದು ಅವರ ನಿಲುವು. ಈ ಎರಡು ನಿಲುವುಗಳೂ ಸರಿಯೇ. ಹಾಗೆಂದು ಈ ಎರಡರ ನಡುವೆ ವಿರೋಧ ಕಟ್ಟಬೇಕಾಗಿಲ್ಲ. ಆತ್ಮಸಾಕ್ಷಿಯಿಂದ ಪ್ರಶಸ್ತಿಯನ್ನು ವಾಪಸ್‌ ಕೊಟ್ಟರೂ ಸರಿ. ಇಲ್ಲ ಬೇರೆ ಥರ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರೂ ಸರಿಯೇ. ಇವೆರಡು ದಾರಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಚರ್ಚೆ ಮಾಡುವುದೇ ಸರಿಯಲ್ಲ. ಅವೆರಡೂ ಒಂದೇ ಗುರಿಯ ಬೇರೆ ದಾರಿಗಳಷ್ಟೇ.
- ಎನ್‌.ಮನುಚಕ್ರವರ್ತಿ,
ವಿಮರ್ಶಕ
*
ಜನ ಸಂಘಟಿತರಾಗಬೇಕು
ಪ್ರಶಸ್ತಿ ಹಿಂತಿರುಗಿಸುವ ಚಳವಳಿಯಲ್ಲಿ ನಂಬಿಕೆ ಇರುವವರು ಅದನ್ನು ಬೆಂಬಲಿಸುತ್ತಾರೆ. ಇದು ಬೇಡ, ಹೋರಾಟಕ್ಕೆ ಬೇರೆ ಮಾರ್ಗಗಳೂ ಇವೆ ಎನ್ನುವವರು ತಮಗೆ ಸರಿಕಾಣಿಸಿದ ಮಾರ್ಗಗಳಲ್ಲಿ ಹೋರಾಟ ನಡೆಸಲಿ. ಒಟ್ಟಾರೆಯಾಗಿ  ಹೀನ ಕೆಲಸಗಳನ್ನು ಮಾಡುವಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವುದಕ್ಕಾಗಿ ದೇಶದಾದ್ಯಂತ ಜನ ಸಂಘಟಿತರಾಗಬೇಕಾದ ತುರ್ತು ಇದೆ.   
- ಮುದ್ದು ತೀರ್ಥಹಳ್ಳಿ,
ಲೇಖಕಿ
*
ಹಕ್ಕು ಕಾಪಾಡಿಕೊಳ್ಳುವ ಕ್ರಮ
ಕಲೆಯ ಬಗೆಗೆ ನಮಗೆ ಯಾವಾಗಲೂ ಇರುವ ನಂಬಿಕೆ ಏನೆಂದರೆ ಅದು ಎಷ್ಟೇ ಅಪ್ರಿಯವಾದ ಸತ್ಯಗಳನ್ನೂ ಹೇಳುತ್ತೆ, ಹೇಳುವ ಶಕ್ತಿ ಮತ್ತು ಅಧಿಕಾರ ಎರಡೂ ಅದಕ್ಕಿದೆ ಎಂಬುದು. ಆದ್ದರಿಂದಲೇ ಕಲಬುರ್ಗಿ ಅವರ ಹತ್ಯೆಯಾದ ಹೊತ್ತಿನಲ್ಲಿ ಯಾಕೆ ಪ್ರಶಸ್ತಿ  ಹಿಂತಿರುಗಿಸಬೇಕು ಎಂದರೆ, ಅದು ನಮ್ಮ ಹಕ್ಕನ್ನು ನಾವು ಕಾಪಾಡಿಕೊಳ್ಳುವ ಕ್ರಮ ಅಂತಲೇ ನನಗನಿಸುತ್ತದೆ. ಅದರೊಟ್ಟಿಗೆ ಈ ಬಗೆಯ ಹತ್ಯೆಗಳನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರತಿಭಟಿಸುವ ಕ್ರಮವೂ ಹೌದು.
- ಎಂ.ಎಸ್‌.ಆಶಾದೇವಿ,
ವಿಮರ್ಶಕಿ
*
ಬರಹಗಾರರು ದೊಡ್ಡವರು
ಕೇಂದ್ರ ಸಾಹಿತ್ಯ ಅಕಾಡೆಮಿಯು ಸಾಹಿತಿಗಳ ಹತ್ಯೆಯನ್ನು ಖಂಡಿಸದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡದೇ ಇರುವುದು ಲಜ್ಜೆಗೇಡಿತನ. ಜತೆಗೆ ಸರ್ಕಾರದ ಜತೆ ಅಂಥ ಸಂಘರ್ಷ ಬೇಡ ಎನ್ನುವುದು ಅದರ ಗೋಸುಂಬೆತನ. ಇಂಥ ಧೋರಣೆ ಖಂಡಿಸಿ ಪ್ರಶಸ್ತಿಗಳನ್ನು ಅಕಾಡೆಮಿಯ ಮುಖಕ್ಕೆ ವಾಪಸ್‌ ಮಾಡಿರುವ ಅನೇಕ ಬರಹಗಾರರ ನಿಲುವು ಅತ್ಯಂತ ಆದರ್ಶವಾದುದು. ಇಡೀ ಜಗತ್ತು ಎದುರು ನಿಂತರೂ ಸತ್ಯವನ್ನು ಅನುಸಂಧಾನಿಸುವ ವೈಚಾರಿಕ ಪರಂಪರೆಯನ್ನು ಸಾಹಿತ್ಯ ದಕ್ಕಿಸಿಕೊಡುತ್ತದೆ. ಹಾಗಾಗಿ ನಮ್ಮ ಬರಹಗಾರರು ಅಕಾಡೆಮಿಗಳಿಗಿಂತಲೂ ದೊಡ್ಡವರು.
- ಡಾ. ಬಾಲಗುರುಮೂರ್ತಿ,
ಶಿಕ್ಷಣ ತಜ್ಞ
*
ವಿಚಾರವಾದಕ್ಕಷ್ಟೇ ಧಕ್ಕೆಯೇ?
ಈ ಪ್ರಶಸ್ತಿಗಳನ್ನು ಕೊಟ್ಟಿರುವುದು ಸರ್ಕಾರ ಅಲ್ಲ. ಒಂದಿಷ್ಟು ಸಾಹಿತಿಗಳು ಸೇರಿಕೊಂಡು ಇದೊಂದು ಉತ್ತಮ ಕೃತಿ ಎಂದು ಪರಿಗಣಿಸಿ ಕೊಟ್ಟಿದ್ದು. ಆ ಪ್ರಶಸ್ತಿಯನ್ನು ಹಿಂತಿರುಗಿಸಿದರೆ ನಿಮ್ಮ ಪರಿಗಣನೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಂತಾಗುತ್ತದೆ. ಸರ್ಕಾರಕ್ಕೆ ಪ್ರಶಸ್ತಿ ಮರಳಿಸುತ್ತೇವೆ ಎಂದು ಹೇಳ ಹೊರಡಲು ಸರ್ಕಾರ ಕೊಲೆ ಮಾಡಿದೆಯೇ? ಯಾವನೋ ಒಬ್ಬ ಮಾಡಿದ್ದು.
ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಹೆಂಗಸರ ಮೇಲೆ ಸಾಮೂಹಿಕ ಅತ್ಯಾಚಾರ ಆಗುತ್ತಲೇ ಇದೆ. ಇವತ್ತಿಗೂ ಬುಡಕಟ್ಟು ಜನಾಂಗದ ಮೇಲೆ, ಪರಿಶಿಷ್ಟರ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ಹಿಂಸೆಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಎಲ್ಲವನ್ನೂ ನಾವು ಸಹಿಸಿಕೊಳ್ಳುತ್ತೇವೆ. ಇದೊಂದು ವಿಷಯದಲ್ಲಿ ವಿಚಾರವಾದಕ್ಕೆ ಧಕ್ಕೆಯಾಗಿದೆ ಎಂದು ಹೊರಡುವುದು ಎಷ್ಟು ಸರಿ?
- ಸುಮತೀಂದ್ರ ನಾಡಿಗ,
ಕವಿ
*
ಕೈಲಾಗದವರ ಮೈಪರಚುವಿಕೆ
ಪ್ರಶಸ್ತಿ ಹಿಂತಿರುಗಿಸುವುದರಿಂದ ಹಂತಕರ ಶಿಕ್ಷೆಯ ಮೇಲೆ, ವಿಚಾರಣೆಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಪ್ರಶಸ್ತಿ ಹಿಂತಿರುಗಿಸಿದವರೆಲ್ಲ ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬೆಂಬಲಿಸುವವರೇ. ಆ ಸಿದ್ಧಾಂತಗಳು, ಅವರ ತಳಮಟ್ಟದ ಚಳವಳಿಗಳ ಹಾಗೆಯೇ ನೆಲಕಚ್ಚಿವೆ. ಈಗಿನ ಪ್ರಶಸ್ತಿ ವಾಪಸು ಚಳವಳಿಯು ಕೈಲಾಗದ ಹೋರಾಟಗಾರರ ಮೈಪರಚುವಿಕೆ ಅಷ್ಟೆ. ಇಂಥವರ ಪ್ರಶಸ್ತಿಗಳ ವಾಪಸಾತಿಗೆ ಅರ್ಥವೂ ಇಲ್ಲ; ಅದಕ್ಕೆ ಸಾಮಾಜಿಕ ಮೌಲ್ಯವೂ ಇಲ್ಲ. ಹೆಚ್ಚೆಂದರೆ ಡಾ. ಶಿವರಾಮ ಕಾರಂತರಂಥವರು ಪ್ರಶಸ್ತಿ ವಾಪಸು ಮಾಡಿದ ನೈಜ ಪ್ರತಿಭಟನೆಯ ಇತಿಹಾಸಕ್ಕೆ ಮಸಿ ಬಳಿಯುವ ವಿಫಲ ಯತ್ನ. ‘ಅಘೋಷಿತ ತುರ್ತುಸ್ಥಿತಿಯೂ ಇದಕ್ಕೆ ಕಾರಣ’ ಎಂಬ ಮಾತಂತೂ ನಮ್ಮ ಕಿಲುಬು ಮಾನಸಿಕತೆಯ ಸಂಕೇತ. 1975ರಲ್ಲಿ ತುರ್ತುಸ್ಥಿತಿ ಹೇರಿದ ಸರ್ವಾಧಿಕಾರಿಗೇ ಈ ಸಿದ್ಧಾಂತವಾದಿಗಳು ಭೋಪರಾಕ್‌ ಹೇಳಿದ್ದರು.
- ಬೇಳೂರು ಸುದರ್ಶನ,
ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.