ADVERTISEMENT

ಪ್ಲೇಟೋನ ಗುಹೆ

ಪಿಟಿಐ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ಪ್ಲೇಟೋನ ಗುಹೆ
ಪ್ಲೇಟೋನ ಗುಹೆ   

ಗ್ರೀಕ್‌ ತತ್ತ್ವಜ್ಞಾನಿ ಪ್ಲೇಟೋ ಹೀಗೆ  ಬಳಸಿರುವ ರೂಪಕವೊಂದು ಅತ್ಯಂತ ಪ್ರಸಿದ್ಧವಾಗಿದೆ. ಅದೇ ‘ಪ್ಲೇಟೋನ ಗುಹೆ’ (Plato’s Cave).
ಅದೊಂದು  ಕತ್ತಲೆಯ ಗುಹೆ; ಉದ್ದನೆಯ ಕೊಳವೆಯಾಕಾರದ್ದು. ಅದರ ಒಂದು ತುದಿಗೆ ಗೋಡೆಯಿದೆ; ಇನ್ನೊಂದು ತುದಿಯಲ್ಲಿ ದ್ವಾರವಿದೆ; ಅಲ್ಲಿ ಬೆಂಕಿಯ ಜ್ವಾಲೆಯಿದೆ.  ಇವೆರಡರ ನಡುವೆ ಒಂದಷ್ಟು ಜನರು; ಎಲ್ಲರೂ ಹುಟ್ಟಿನಿಂದಲೇ ಬಂದಿಗಳಾಗಿರುವವರು; ಎಲ್ಲರನ್ನೂ ಸರಪಳಿಯಿಂದ ಬಿಗಿಯಲಾಗಿದೆ. ಅವರನ್ನು ಕಟ್ಟಿಹಾಕಿರುವುದೂ ಗಮನಾರ್ಹ. ಅವರೆಲ್ಲರೂ ಗುಹೆಯ ಗೋಡೆಯನ್ನು ಮಾತ್ರ ನೋಡಬಲ್ಲರೆ ಹೊರತು, ಅದರ ಬಾಗಿಲ ಕಡೆಗೆ ತಿರುಗಲಾರರು, ಅದನ್ನು ನೋಡಲಾರರು. ಎಂದರೆ ಗುಹಾದ್ವಾರದಿಂದ ಬರುವ ಬೆಳಕನ್ನಾಗಲೀ ಉರಿಯನ್ನಾಗಲೀ ಅವರು ನೋಡಲಾರರು. ಆದರೆ ಆ ಬೆಳಕು ಬಂದಿಗಳ ಹಿಂದಿರುವ ಕೆಲವೊಂದು ವಸ್ತುಗಳ ಮೇಲೆ ಬೀಳುತ್ತದೆ ಅಲ್ಲವೆ? ಹಾಗೆ ಅವುಗಳ ಮೇಲೆ ಬಿದ್ದ ಬೆಳಕು ಬಂದಿಗಳ ಎದುರಿನ ಗೋಡೆಯ ಮೇಲೆ ಆ ವಸ್ತುಗಳ ನೆರಳನ್ನು ಮೂಡಿಸುತ್ತವೆ. ಬೆಳಕು ಬಿದ್ದ ಎಲ್ಲ ವಸ್ತುಗಳ ಆಕೃತಿಗಳೂ ಸಿನಿಮಾಪರದೆಯ ಮೇಲೆ ಕಾಣುವಂತೆ ಅವರಿಗೆ ಗೋಚರಿಸುತ್ತವೆ; ಆದರೆ ಚಪ್ಪಟೆಯಾಗಿ, ನೆರಳಿನಂತೆ; ಯಾವ ವಸ್ತು, ವ್ಯಕ್ತಿಗಳೂ ಮೂಲರೂಪದಲ್ಲಿ ಅವರಿಗೆ ಕಾಣುವುದಿಲ್ಲ. ಅವರಿಗೆ ಬೆಳಕೂ ಕಾಣದು; ವಸ್ತುಗಳೂ ಕಾಣುವುದಿಲ್ಲ.


ಈ ರೂಪಕ ಏನನ್ನು ಹೇಳುತ್ತಿದೆ – ಎನ್ನುವುದರ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳು ನಡೆದಿವೆ. ಜ್ಞಾನವನ್ನು ಅಥವಾ ಸತ್ಯವನ್ನು ತಿಳಿಯಲು ಎಷ್ಟು ಕಷ್ಟ ಎನ್ನುವುದರ ಸಾಂಕೇತಿಕತೆಯನ್ನು ಇಲ್ಲಿ ನೋಡಬಹುದು. ನಮ್ಮೆಲ್ಲರ ಪಾಡು ಆ ಬಂದಿಗಳಂತೆ; ನಮಗೆ ಮೂಲ ಆಕೃತಿ ಕಾಣದು; ಕಂಡ ಅಸ್ಪಷ್ಟ ನೆರಳಿನ ಆಕೃತಿಗಳನ್ನೇ ನಿಜವೆಂದು ಭಾವಿಸಿಕೊಳ್ಳುತ್ತೇವೆ. ಹೀಗಾಗಿ ಯಾವುದನ್ನಾದರೂ ನಾವು ’ಇದೇ ಸತ್ಯ’ ಎಂದು ಪ್ರತಿಪಾದಿಸುವ ಮೊದಲು ಸಾಕಷ್ಟು ಯೋಚಿಸಬೇಕಾಗುತ್ತದೆ. ಹಸುವನ್ನೇ ನೋಡದವನು ಅದರ ನೆರಳನ್ನು ಮಾತ್ರವೇ ಕಂಡು ಹಸುವನ್ನು ವರ್ಣಿಸಿದರೆ ಅದು ಹೇಗಿರಬಲ್ಲದು?
ಪ್ಲೇಟೋ ಈ ರೂಪಕದ ಮೂಲಕ ನಮ್ಮ ತಿಳಿವಳಿಕೆಯ ಮಿತಿಯ ಬಗ್ಗೆ ಎಚ್ಚರಿಸುತ್ತಿದ್ದಾನೆ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT