ADVERTISEMENT

ಭರವಸೆಗಳನ್ನು ಪೊರೆಯುವುದು ಸಾಹಿತಿಯ ಕರ್ತವ್ಯ

ರಾಜಕಾರಣ ಮತ್ತು ಸಾಹಿತ್ಯ

ಯು.ಆರ್.ಅನಂತಮೂರ್ತಿ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ರಾಜನ ಕಣ್ಣಿಗೆ ಬೀಳಬಾರದು– ಇದು ರಾಜರ ಆಡಳಿತವಿದ್ದ ಕಾಲದ ಮಾತು. ಇದು ಪ್ರಜಾಪ್ರಭುತ್ವದ ಕಾಲ. ಇಲ್ಲಿ ಪ್ರಜೆಗಳೇ ಪ್ರಭುಗಳು. ಇಲ್ಲಿ ರಾಜನ ಕಣ್ಣಿಗೆ ಬೀಳದಂತೆ ಇರಲು ಸಾಧ್ಯವೇ ಇಲ್ಲ. ರಾಜನ ಕಾಲದಲ್ಲೂ ರಾಜಕೀಯದ ಆಗು ಹೋಗುಗಳು ಜನಸಾಮಾನ್ಯನ ಮೇಲೆ ಪರಿಣಾಮ ಬೀರುತ್ತಿದ್ದವು. ಆದರೆ ಇದಕ್ಕೆ ಜವಾಬ್ದಾರ ರಾಜ ಮಾತ್ರ ಆಗಿರುತ್ತಿದ್ದ.  ಪ್ರಜಾಪ್ರಭುತ್ವದ ಕಾಲದಲ್ಲಿ ನಮ್ಮ ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುವ ರಾಜಕೀಯ ಆಗುಹೋಗುಗಳ ಜವಾಬ್ದಾರಿ ಪ್ರಜೆಗಳಾದ–ಆ ಕಾರಣದಿಂದಲೇ ಪ್ರಭುಗಳೂ ಆದ–ನಮ್ಮ ಮೇಲಿರುತ್ತದೆ.

ಬಾಲ್ಜಾಕ್ ಎಂಬ ದೊಡ್ಡ ಕಾದಂಬರಿಕಾರ ರಾಜಕೀಯವೆಂದರೆ ಸಂಗೀತ ಕಚೇರಿಯ ಸಂಭ್ರಮದಲ್ಲಿದ್ದಾಗ ಕೇಳಿಸುವ ಗುಂಡಿನ ಸದ್ದು ಎನ್ನುತ್ತಾನೆ. ಇಂಪಾದ ಸಂಗೀತಕ್ಕೆ ಕಿವಿಗೊಟ್ಟು ಅದನ್ನು ಅನುಭವಿಸುವ ಲೇಖಕ ಈ ಗುಂಡಿನ ಸದ್ದನ್ನು ಕೇಳಿಸಿಕೊಳ್ಳದೇ ಇರಲು ಸಾಧ್ಯವೇ? ಒಬ್ಬ ಲೇಖಕ ರಾಜಕೀಯದ ಬಗ್ಗೆ ಆಸ್ಥೆ ವಹಿಸಿದರೆ ಅವನ ಸಾಹಿತ್ಯ ಕೃಷಿಯ ಕಾರಣದಿಂದಾಗಿಯೇ ಸದ್ಯದ ರಾಜಕೀಯಕ್ಕೆ ಒಳಪಡದ ಶಾಶ್ವತ ಸತ್ಯಗಳನ್ನು ಅವನು ಕಾಣಬಲ್ಲವನಾಗುತ್ತಾನೆ. ಆದ್ದರಿಂದಲೇ ಲೇಖಕನಾದವನೊಬ್ಬನ ರಾಜಕೀಯ ಪ್ರಜ್ಞೆ ಕೇವಲ ರಾಜಕಾರಣಿಯ ಪ್ರಜ್ಞೆಗಿಂತ ಕೊಂಚ ಭಿನ್ನವಾಗಿರುತ್ತದೆ. ರಾಜಕಾರಿಣಿ ಚರ್ಚಿಲ್ ಇಂಗ್ಲೆಂಡಿನಲ್ಲಿ ಫ್ಯಾಸಿಸಂ ವಿರೋಧಿಸಿ ಗೆದ್ದ. ಆದರೆ ಇವತ್ತಿಗೂ ಉಳಿದಿರುವುದು ಜಾರ್ಜ್ ಆರ್ವೆಲ್‌ನಂಥ ಸಾಹಿತಿಯ ಫ್ಯಾಸಿಸಂ ವಿರೋಧದ ಮಾತುಗಳು. ಚರ್ಚಿಲ್‌ನ ಮಾತು ಮತ್ತು ಕ್ರಿಯೆಗಳು ಅವನ ಕಾಲಕ್ಕೆ ಸೀಮಿತವಾಗಿ ಉಳಿದಿದ್ದರೆ  ಆರ್ವೆಲ್‌ನ ಮಾತುಗಳು ತ್ರಿಕಾಲಗಳಲ್ಲೂ ನೆಟ್ಟಿದ್ದೇ ಸದ್ಯವನ್ನು ಧ್ವನಿಸುತ್ತಿವೆ.

ಕಾಲದ ಬಂಡಿಯನ್ನೇರಿ ಪ್ರಯಾಣ ಮಾಡುವವನು ಬಂಡಿಯ ಕುಲುಕಾಟದ ಕಷ್ಟವನ್ನೂ ಅನುಭವಿಸಬೇಕಾಗುತ್ತದೆ. ಆತ ತನ್ನನ್ನು ತಾನು ಕಳೆದುಕೊಳ್ಳದಂತೆ ಆತ್ಮವನ್ನು ಬಿಗಿ ಹಿಡಿದೇ ಬಂಡಿಯ ಹೊಯ್ದಾಟವನ್ನು ಅನುಭವಿಸಬೇಕಾಗುತ್ತದೆ. ನನ್ನಂಥ ಲೇಖಕರು ತಳೆಯುತ್ತಿರುವ ರಾಜಕೀಯ ನಿಲುವು ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಈ ದೃಷ್ಟಿಯಲ್ಲಿ ನೋಡಬೇಕು. ವರ್ತಮಾನದ ಇಂಡಿಯಾ ಮೋದಿಯನ್ನು ಒಪ್ಪಿಕೊಂಡಲ್ಲಿ ಅದು ಪಾಲಿಸಿಕೊಂಡು ಬಂದ ನಾಗರಿಕ ಸಂಸ್ಕೃತಿಯಲ್ಲೇ ಒಂದು ದೊಡ್ಡ ಪಲ್ಲಟವನ್ನು ಅನುಭವಿಸಬೇಕಾಗುತ್ತದೆ. ಅಂದರೆ ಭಾರತದ ನಾಗರಿಕತೆಯ ಭಾಗವಾಗಿರುವ ಸಹನೆ, ಸಹಿಷ್ಣುತೆ ಮತ್ತು  ತನಗಿಂತ ಅನ್ಯವಾದ ಚಿಂತನೆಯ ಬಗ್ಗೆ ಇರುವ ಗೌರವಗಳೆಲ್ಲವೂ ಬದಲಾವಣೆಯಾಗಬಹುದು.

ಎ.ಕೆ. ರಾಮಾನುಜನ್ ಅವರ  Three Hundred Ramayanas: Five Examples and Three Thoughts on Translation ಎಂಬ ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗದಂತೆ ತಡೆಯಲಾಯಿತು. ಎಂ.ಎಫ್. ಹುಸೇನರ ಅದ್ಭುತ ಚಿತ್ರಗಳನ್ನು ಸ್ವಾಗತಿಸುವ ಬದಲು ವಯೋವೃದ್ಧನೊಬ್ಬನ ಮನಸ್ಸಿನ ಶಾಂತಿಯನ್ನು ಕಲಕುವಂತೆ ಅವರ ಮೇಲೆ ಹಲವು ಕೇಸುಗಳನ್ನು ಹಾಕಲಾಯಿತು. ಭಾರತದ ಮುಕ್ತಚಿಂತನೆಯ ಪರಂಪರೆಗೇ ಕಳಂಕ ತರುವ ಅಸಹನೆಯ ಸಂಕೇತವೆಂಬಂತೆ ಕಾಣಿಸುವ ಈ ಎರಡಕ್ಕೂ ಕಾರಣವಾದ ಚಿಂತನೆಯ ಮೂಲದಿಂದಲೇ ಮೋದಿ ಎಂಬ ಪ್ರಧಾನಿ ಅಭ್ಯರ್ಥಿ ಸೃಷ್ಟಿಯಾಗಿರುವುದನ್ನು ಒಬ್ಬ ಲೇಖಕನಾಗಿ ಕಾಣದೇ ಇರಲು ನನಗೆ ಸಾಧ್ಯವಿಲ್ಲ. ಅಸಹನೆಯ ರಾಜಕಾರಣದ ಪ್ರತಿನಿಧಿಯಾಗಿರುವ ಈತ ಪ್ರತಿಪಾದಿಸುವುದು ಬಲಿಷ್ಠ ಭಾರತವನ್ನು. ಅದಕ್ಕೆ ಆತ ಸೂಚಿಸುವ ಆರ್ಥಿಕ ಮಾರ್ಗ ಮಾರುಕಟ್ಟೆಯದ್ದು.

ಮಾರುಕಟ್ಟೆಯ ಮೂಲಕ ಬಲಿಷ್ಠ ಭಾರತವನ್ನು ಕಟ್ಟುವವರಿಗೆ ಬಹುತ್ವವೆಂಬುದು ಒಂದು ಅಡ್ಡಿಯಂತೆ ಕಾಣಿಸುತ್ತದೆ. ಏಕೆಂದರೆ ಬಹುಬಗೆಯ ಚಿಂತನೆಗಳು, ಅದರಿಂದ ರೂಪುಗೊಂಡ ಬಹುಬಗೆಯ ರುಚಿಗಳೆಲ್ಲವೂ ದೊಡ್ಡ ಪ್ರಮಾಣದಲ್ಲಿ ನಿರ್ದಿಷ್ಟ ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗುತ್ತವೆ. ಈ ಚಿಂತನೆ ಮತ್ತು ರುಚಿಗಳ ಹಿಂದೆ ಇರುವುದು ಬಹುಸಂಸ್ಕೃತಿ.

ಅದನ್ನು ನಿವಾರಿಸಿಕೊಳ್ಳುವುದಕ್ಕೆ ‘ಒಂದು ಮಾಡುವ’ ಘೋಷಣೆಗಳು ಮತ್ತು ಅದರ ಮರೆಯಲ್ಲಿ ಏಕಸಂಸ್ಕೃತಿಯ ಹೇರಿಕೆ ನಡೆಯುತ್ತದೆ. ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬರು ರಾಗಿಯೆಂಬ ಪುಷ್ಟಿಯಾದ ಪದಾರ್ಥ ಇದೆ ಎಂಬುದನ್ನು ಕಂಡು ಹಿಡಿದರು. ಅಷ್ಟು ಸಣ್ಣಗೆ, ಕಪ್ಪಗೆ ಕಣ್ಣಿಗೆ ಬೀಳದಂತೆ ಇರುವ ಒಂದು ವಸ್ತು ಮನುಷ್ಯನಿಗೆ ವಿಶೇಷವಾದ ಆಹಾರ ಪದಾರ್ಥವಾಯಿತು. ಹೀಗೆ ನಮಗೆ ಬೇಕಾದ್ದನ್ನು ಹುಡುಕಿ ಕೊಳ್ಳುವ ಜಾಣ್ಮೆಯನ್ನು ಮನುಷ್ಯ ಬಂಡವಾಳ ಶಾಹಿಯ ಅತಿಯ ಅವಸ್ಥೆಯಲ್ಲಿ ಕಳೆದುಕೊಳ್ಳಬಹುದು. ಭಾರತ ಈಗಾಗಲೇ ಈ ಮಾರ್ಗದಲ್ಲಿದೆ. ಪುಣ್ಯವಶಾತ್ ಅದಕ್ಕೆ ವಿರೋಧಗಳೂ ನಮ್ಮ ನಾಡಿನಲ್ಲೇ ಉಳಿದಿವೆ.

ಮೋದಿ ಬಯಸುವ ಬಲಿಷ್ಠ ಭಾರತ ವಿಸ್ತಾರವಾದ ಮಾರುಕಟ್ಟೆಯನ್ನು ಅವಲಂಬಿಸಿದೆ. ಆದ್ದರಿಂದ ಮೊದಲು ನಾಶವಾಗುವುದು ನಮ್ಮ ಫೆಡರಲ್ ವ್ಯವಸ್ಥೆ. ಭಾರತದ ತುಂಬಾ ಗುಜರಾತ್‌ಗಳೇ ಹುಟ್ಟಿಕೊಳ್ಳಬಹುದು. ಬೇರೆ ಎಲ್ಲ ದೇಶಗಳಲ್ಲೂ ಮಾರುಕಟ್ಟೆ ಇಂತಹ ಕೆಲಸವನ್ನೇ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋದಿಯ ಭಿನ್ನತೆಯ ಅಸಹನೆ ಅದರಲ್ಲೂ ಮುಖ್ಯವಾಗಿ ಇಸ್ಲಾಂನ ಕುರಿತ ಆತನ ಅಸಹನೆ ಹಲವು ದೇಶಗಳಿಗೆ ಆಪ್ಯಾಯಮಾನವಾಗಿದೆ. ಸರಕು ಸಂಸ್ಕೃತಿಯ ಪರಮಾವಧಿ ಮಟ್ಟವನ್ನು ಮುಟ್ಟಲು ಹೊರಟ ಪಶ್ಚಿಮದ ದೇಶಗಳಿಗೆ ಅರಬ್ಬರ ‘ಆಯಿಲ್’ ಬೇಕು ಆದರೆ ಅವರ ಧರ್ಮ ಬೇಡ. ಮೋದಿ ಇಂತಹ ಒಂದು ಜಾಗತಿಕ ಅಸಹನೆಯನ್ನು ಬಳಸಿಕೊಳ್ಳಬಹುದು ಎನ್ನುವ ಅನುಮಾನ ನನಗಿದೆ.

ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡವನ್ನು ಅಲ್ಲಿ ಮುಖ್ಯಮಂತ್ರಿಯಾಗಿದ್ದ ಮೋದಿ ಹತ್ತಿಕ್ಕದೇ ಇದ್ದದ್ದು ಮುಂದೆ ಆತ ‘ಪ್ರಧಾನಿ ಅಭ್ಯರ್ಥಿ’ ಆಗುವುದಕ್ಕೆ ಬೇಕಿದ್ದ ಕ್ರಮವೇ ಆಗಿತ್ತು ಎನಿಸುತ್ತದೆ. ಈ ಹತ್ಯಾಕಾಂಡದಲ್ಲಿ ಆತನ ನೇರ ಪಾಲುದಾರಿಕೆ ಇದ್ದರೂ ಇಲ್ಲದೇ ಇದ್ದರೂ ಈಗ ಅದು ಆತನಿಗೊಂದು ಆಸ್ತಿ. ಇಂಥದ್ದೊಂದು ರಕ್ತಸಿಕ್ತ ರಾಜಕಾರಣವನ್ನು ಎದುರಿಸುವುದಕ್ಕೆ ಭಾರತದ ಲೇಖಕರಷ್ಟೇ ಅಲ್ಲ ಜಗತ್ತಿನ ಎಲ್ಲ ಬುದ್ಧಿಜೀವಿಗಳೂ ಒಂದಾಗಬೇಕು.

ದುರಂತವೆಂದರೆ ಬಲಪಂಥೀಯರೆಲ್ಲಾ ಒಟ್ಟಾಗಿದ್ದಾರೆ. ಎಡಪಂಥೀಯರು ಒಡೆದು ಹೋಗಿದ್ದಾರೆ. ಇಂತಹ ಕಾಲಗಳಲ್ಲೇ ಇತಿಹಾಸದ ಪಲ್ಲಟಗಳು ಸಂಭವಿಸುವುದು. ಕೆಲವರು ಹೇಳುವಂತೆ ಹಿಟ್ಲರ್‌ನ ಕ್ರೌರ್ಯವನ್ನು ಮೋದಿಯಲ್ಲಿ ಕಾಣಲಾಗದೇ ಇದ್ದರೆ ಅದಕ್ಕೆ ಕಾರಣ ಅಲ್ಪ ಸ್ವಲ್ಪ ಪ್ರಜಾತಂತ್ರದ ಗುಣಗಳನ್ನು ಉಳಿಸಿಕೊಂಡಿರುವ ಬಿಜೆಪಿಯಂಥ ಪಕ್ಷದಿಂದ ಆತ ಆರಿಸಿ ಬರಬೇಕಾಗಿದ್ದ ಅನಿವಾರ್ಯತೆ.

ಆತ ಸುಲಭದಲ್ಲಿ ಆರಿಸಿ ಬಂದಂತೆ ಕಂಡರೂ ಬಿಜೆಪಿಯಲ್ಲಿ ಆತನನ್ನು  ಸಹಿಸದ ನಾಯಕರಿದ್ದಾರೆ ಎಂಬ ಗುಮಾನಿ ಇನ್ನೂ ಉಳಿದಿದೆ. ಸುಮಾರು ಆರುದಶಕಗಳ ಕಾಲ ಸ್ವಾತಂತ್ರ್ಯ ರುಚಿಯನ್ನು ಬೆಳೆಸಿಕೊಂಡು ಬಂದಿರುವ ಭಾರತೀಯರು ಈ  ದೇಶವನ್ನು ಹಿಟ್ಲರನ ಜರ್ಮನಿಯಂತಾಗಿಸುವುದಿಲ್ಲ ಎಂಬುದು ನನ್ನ ಭರವಸೆ. ಭರವಸೆಗಳನ್ನು ಪೊರೆಯುವುದು ರಾಜಕಾರಣಿಗಳಿಗೆ ಕಷ್ಟ. ಆದರೆ ಸಾಹಿತಿಗಳ ಮಟ್ಟಿಗೆ ಭರವಸೆಗಳನ್ನು ಪೊರೆಯುವುದು ಅವರ ಕಾಣ್ಕೆಯ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.