ಡಿಜಿಟಲ್ ಯುಗದ ಹರಿಕಾರರಾದ ಇಂದಿನ ತಲೆಮಾರು ನವೋದ್ಯಮದತ್ತ (ಸ್ಟಾರ್ಟ್ಅಪ್) ತುಡಿಯುತ್ತಿದೆ. ಯುವ ಉದ್ಯಮಿಗಳ ಇಂತಹ ಪ್ರಯೋಗಶೀಲತೆಗೆ ಪೂರಕವಾಗಿ ಕೇಂದ್ರ ಸರ್ಕಾರ ವಿವಿಧ ಉತ್ತೇಜನಕಾರಿ ಕ್ರಮಗಳ ಭರವಸೆ ಇತ್ತಿದೆ. ಆದರೆ, ಪ್ರಸ್ತುತ ಉದ್ಯಮಶೀಲತೆಯ ಹಾದಿಯಲ್ಲಿರುವ ಅಸಂಖ್ಯಾತ ಎಡರುತೊಡರುಗಳ ನಿವಾರಣೆಗೆ ಅದಷ್ಟೇ ಸಾಕೇ ಅಥವಾ ‘ಸ್ಟಾರ್ಟ್ಅಪ್’ಗೆ ಪೂರಕವಾದ ಯೋಜನೆಗಳನ್ನು ಇನ್ನಷ್ಟು ‘ಸ್ಪೀಡ್ಅಪ್’ ಮಾಡಬೇಕೇ?
ಜನವರಿ 16ರಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಟ್‌ಅಪ್‌ಗಳಿಗಾಗಿ (ನವೋದ್ಯಮ) ರೂಪಿಸಿದ ಕ್ರಿಯಾ ಯೋಜನೆಯನ್ನು ಘೋಷಿಸಿದರು. ಆ ಕಾರ್ಯಕ್ರಮ ಅದ್ಭುತವಾಗಿತ್ತು. 1,500ಕ್ಕೂ ಹೆಚ್ಚಿನ ನವೋದ್ಯಮಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲ್ಲಿ ಒಂದು ರೀತಿ ಶಕ್ತಿಯ ಸಂಚಯವಾಗುತ್ತಿದ್ದುದು ಗೊತ್ತಾಗುತ್ತಿತ್ತು. ಭಾರತದ ಮುಂದಿನ ಪೀಳಿಗೆಯ ವಾಣಿಜ್ಯ ನೇತಾರರು ಅಲ್ಲಿದ್ದರು.
ಇವೆಲ್ಲಕ್ಕಿಂತ ಆಶ್ಚರ್ಯದ್ದೆಂದರೆ, ಅವರೆಲ್ಲರೂ ವೇದಿಕೆಯ ಮೇಲೆ ಇದ್ದರು. ಆ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳನ್ನು ಪರಿಚಯಿಸಲಾಯಿತು. ಅವರು ನಮ್ಮಲ್ಲಿ ಹೆಮ್ಮೆ ಮೂಡುವಂತೆ ಮಾಡಿದರು. ನಮ್ಮ ಸುತ್ತಲಿನ ಪರಿಸ್ಥಿತಿ ತುಸು ಕಠಿಣವಾಗಿರುವ ಕಾರಣ ಈಗ ಇಂಥದ್ದೊಂದು ಕ್ರಿಯಾ ಯೋಜನೆ ಬೇಕಿತ್ತು.
ದೇಶದ ಎಂಟು ನವೋದ್ಯಮಗಳ ಪೈಕಿ ಆರು ನವೋದ್ಯಮಗಳು ದೇಶದಿಂದ ಹೊರಹೋಗಿದ್ದವು. ಮುಂಚೂಣಿ ಬಿ2ಬಿ (ಎರಡು ಉದ್ಯಮಗಳ ನಡುವೆ ವ್ಯವಹಾರ ನಡೆಸುವವರು) ವಾಣಿಜ್ಯೋದ್ಯಮ ಕಂಪೆನಿಗಳ ಪೈಕಿ 10 ಕಂಪೆನಿಗಳು ಮುಚ್ಚಿದ್ದವು, 2014ರಲ್ಲಿ ಶೇಕಡ 54ರಷ್ಟು ಪ್ರಮುಖ ನವೋದ್ಯಮಗಳು ಮುಚ್ಚಿದ್ದವು, 2015ರಲ್ಲಿ ಶೇಕಡ 75ರಷ್ಟು ನವೋದ್ಯಮಗಳು ಮುಚ್ಚಿದ್ದವು.
ನವೋದ್ಯಮಗಳ ಪೈಕಿ ಅತ್ಯಂತ ಆಶಾದಾಯಕ ಕಂಪೆನಿಗಳು ದೇಶದ ಹೊರಗೆ ನೋಂದಾಯಿಸಿಕೊಳ್ಳುವಂತಹ ಸಂದರ್ಭವನ್ನು ನಮ್ಮ ನೀತಿಗಳು, ತೆರಿಗೆ ಕಾನೂನುಗಳೇ ಸೃಷ್ಟಿಸಿಬಿಟ್ಟಿದ್ದವು. ಇನ್ನಷ್ಟು ಉದಾರವಾದ ವಾತಾವರಣ ಜಾಗತಿಕ ಹೂಡಿಕೆದಾರರಿಗೆ ಬೇಕಿತ್ತು. ತೆರಿಗೆ ವ್ಯವಸ್ಥೆ ಸ್ಥಿರವಾಗಿರುವುದು ಅವರಿಗೆ ಬೇಕಿತ್ತು. ಅವರು ದೀರ್ಘಾವಧಿಗೆ ಹೂಡಿಕೆ ಮಾಡುವವರಾದ ಕಾರಣ, ಹಿಂದೆ ಇದ್ದಂತಹ ದುಃಸ್ವಪ್ನ ತರುವ ತೆರಿಗೆ ವ್ಯವಸ್ಥೆ ಅವರಿಗೆ ಬೇಕಿಲ್ಲ. ವಿದೇಶಿ ವಿನಿಮಯ ಕುರಿತ ನಮ್ಮ ನೀತಿಗಳು ಹೂಡಿಕೆದಾರರ ಅಗತ್ಯಗಳಿಗೆ ತಕ್ಕಂತೆ ಇರಲಿಲ್ಲ. ಕಂಪೆನಿಗಳ ವಿಲೀನ, ಒಂದು ಕಂಪೆನಿ ಇನ್ನೊಂದು ಕಂಪೆನಿಯನ್ನು ಖರೀದಿಸುವುದು ಇಲ್ಲಿ ಕಷ್ಟವಾಗುವ, ದೀರ್ಘ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಕಂಪೆನಿಗಳಿಗೆ ಹೊಸ ರೂಪ ಕೊಡುವುದು ಸಂಕೀರ್ಣ ಪ್ರಕ್ರಿಯೆ ಆಗುತ್ತಿತ್ತು.
ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ), ಕಂದಾಯ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆ ಸಾಕಷ್ಟು ಬಾರಿ ಮಾತುಕತೆ ನಡೆದಿತ್ತು. ಮಾತುಕತೆ ವೇಳೆ ಧನಾತ್ಮವಾಗಿ ಮಾತನಾಡಿದ್ದ ಇವುಗಳ ಪ್ರತಿನಿಧಿಗಳು ಒಳ್ಳೆಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸೆಬಿ (ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ನಿಜಕ್ಕೂ ದೊಡ್ಡ ಕೆಲಸ ಮಾಡಿದೆ. ನಿರೀಕ್ಷೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದ್ದವು. ಕ್ರಿಯಾ ಯೋಜನೆ ಆ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ.
ದೇಶದಲ್ಲಿ ನವೋದ್ಯಮಗಳು ಬೆಳೆಯಲು ಪೂರಕವಾದಂತಹ ಪರಿಸ್ಥಿತಿ ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಪ್ರಧಾನಿಯವರ ಕಚೇರಿ, ಪ್ರಧಾನ ಮಂತ್ರಿ, ಹಣಕಾಸು ಸಚಿವರು, ವಾಣಿಜ್ಯ ಸಚಿವರು, ಸರ್ಕಾರದ ಎಲ್ಲ ಕಾರ್ಯದರ್ಶಿಗಳು ಒಕ್ಕೊರಲಿನಿಂದ ಹೇಳಿದರು. ನವೋದ್ಯಮಗಳ ಪಾಲಿಗೆ ಇದು ಅತ್ಯಂತ ಮಹತ್ವದ್ದು. ಇಂಥದ್ದೊಂದು ಬದ್ಧತೆ ಈ ಹಿಂದೆ ಎಂದೂ ಸಾರ್ವಜನಿಕವಾಗಿ ವ್ಯಕ್ತವಾಗಿರಲಿಲ್ಲ. ಹೊಸ ತಲೆಮಾರಿನ ನವೋದ್ಯಮಿಗಳು ದೇಶದ ರೂಪ ಬದಲಿಸಬಲ್ಲರು, ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬಲ್ಲರು, ದೇಶದ ಸವಾಲುಗಳನ್ನು ಪರಿಹರಿಸಬಲ್ಲರು, ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಬಲ್ಲರು.
ನವೋದ್ಯಮಿಗಳ ಅಂದಾಜು ಶೇಕಡ 60ರಷ್ಟು ಅಗತ್ಯಗಳನ್ನು ಈ ಕ್ರಿಯಾ ಯೋಜನೆ ಪೂರೈಸುತ್ತದೆ. ಕಂಪೆನಿಗಳ ನೋಂದಣಿ ಕಾರ್ಯ ತ್ವರಿತವಾಗಿ ಮತ್ತು ಸುಲಭವಾಗಿ ಆಗುವುದು, ಹಲವು ಕಾನೂನುಗಳಿಗೆ ಸ್ವಯಂ ದೃಢೀಕರಣ ಸಾಕು ಎಂದಿರುವುದು, ಮೂರು ವರ್ಷಗಳವರೆಗೆ ತಪಾಸಣೆ ಇಲ್ಲ ಎಂದಿರುವುದು, ಹಕ್ಕುಸ್ವಾಮ್ಯ ಪಡೆಯಲು ಹಣಕಾಸಿನ ನೆರವು, ಹಕ್ಕುಸ್ವಾಮ್ಯದ ರಕ್ಷಣೆ ಸೇರಿದಂತೆ ಹಲವು ಪೂರಕ ಅಂಶಗಳನ್ನು ಇಲ್ಲಿ ಉಲ್ಲೇಖಿಸಬಹುದು.
ಹೊಸ ದಿವಾಳಿ ಮಸೂದೆಯಲ್ಲಿ, ಕಾನೂನಿಗೆ ತಿದ್ದುಪಡಿ ತಂದು ನಷ್ಟದಲ್ಲಿರುವ ಕಂಪೆನಿಗಳನ್ನು 90 ದಿನಗಳಲ್ಲಿ ಮುಚ್ಚುವ ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿರುವುದು ಅತಿದೊಡ್ಡ ಅನುಕೂಲಕರ ಅಂಶ. ದೇಶದಲ್ಲಿ ಕಂಪೆನಿಗಳು ಬಾಗಿಲು ಮುಚ್ಚುವ ಪ್ರಮಾಣ ದೊಡ್ಡದಾಗಿರುವ ಕಾರಣ, ಉದ್ದಿಮೆಯನ್ನು ಆರಂಭಿಸುವುದು ಮತ್ತು ಅದನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಸುಲಭವಾಗಿರಬೇಕು. ಇದು ತೀರಾ ಅವಶ್ಯಕ.
ಸಾರ್ವಜನಿಕ ರಂಗದ ಉದ್ದಿಮೆಗಳು ಸೇವೆ, ಉತ್ಪನ್ನಗಳನ್ನು ಖರೀದಿಸುವ ಪ್ರಕ್ರಿಯೆ ಸರಳಗೊಳಿಸುವ ಭರವಸೆ ಇದೆ. 500 ವಿಶ್ವವಿದ್ಯಾಲಯಗಳಲ್ಲಿ ನವೋದ್ಯಮಗಳು ಕಾರ್ಯ ನಿರ್ವಹಿಸಲು ಜಾಗ, ನವೋದ್ಯಮಗಳಲ್ಲಿ ಹೊಸತನ ಹುಡುಕಲು ಅಭಿಯಾನದ ರೂಪದಲ್ಲಿ ಕೆಲಸ, ಸಂಶೋಧನಾ ಪಾರ್ಕ್‌ಗಳು ಹಾಗೂ ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣದ ಭರವಸೆ ನೀಡಲಾಗಿದೆ. ದೊಡ್ಡ ಸವಾಲುಗಳನ್ನು ಎದುರಿಸಲು, ಪರಿಹಾರ ಮಾರ್ಗ ಹುಡುಕುವ ವ್ಯವಸ್ಥೆ ರೂಪಿಸಲು ಹಣಕಾಸಿನ ನೆರವು ಒದಗಿಸುವ ವ್ಯವಸ್ಥೆ ಬರಲಿದೆ.
ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡಬೇಕು ಎಂಬ ಕೋರಿಕೆಯೂ ದೊಡ್ಡದಾಗಿತ್ತು. ಆ ಕೋರಿಕೆಗೆ ದೊಡ್ಡದಾಗಿಯೇ ಉತ್ತರ ನೀಡಲಾಗಿದೆ. ಇದಕ್ಕಾಗಿ ₹ 10 ಸಾವಿರ ಕೋಟಿಗಳ ನಿಧಿಯನ್ನು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಸ್ಥಾಪಿಸಲಾಗಿರುವುದು ಮುಂದಿನ ಏಳು ವರ್ಷಗಳ ಅವಧಿಯಲ್ಲಿ ₹ 1 ಲಕ್ಷ ಕೋಟಿ ಹಣ ಹೂಡಿಕೆಯನ್ನು ಉತ್ತೇಜಿಸಲಿದೆ. ಇದು ವಾಣಿಜ್ಯೋದ್ಯಮದ ದಿಕ್ಕು ಬದಲಿಸುವಂಥದ್ದು. ಹೆಚ್ಚಿನ ಲಾಭ ತರುವ ಈ ವಲಯದಲ್ಲಿ ಹೂಡಿಕೆ ಮಾಡಲು ಭಾರತೀಯ ಹೂಡಿಕೆದಾರರಿಗೆ ಇದೊಂದು ಕರೆಯೂ ಹೌದು. ನವೋದ್ಯಮಗಳಿಗೆ ಸಾಲ ನೀಡುವ ಸಂಸ್ಥೆಗಳಿಗೆ ಹಣ ಮರಳಿ ಸಿಗುತ್ತದೆ ಎಂಬ ಖಾತರಿ ನೀಡಿರುವುದು ಬಹಳ ದೊಡ್ಡ ಹೆಜ್ಜೆ. ಇದರಿಂದ ನವೋದ್ಯಮಿಗಳು ಸಾಲ ಪಡೆಯಲು ಅನುಕೂಲ ಆಗುತ್ತದೆ.
ಈ ಉದ್ಯಮಿಗಳಿಗೆ ಕೆಲವು ತೆರಿಗೆ ವಿನಾಯಿತಿಗಳನ್ನೂ ನೀಡಲಾಗಿದೆ. ಇವರಿಗೆ ಮೂರು ವರ್ಷಗಳ ಅವಧಿಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಬಹಳ ದೊಡ್ಡ ಪ್ರಯೋಜನವೇನೂ ಆಗಲಿಕ್ಕಿಲ್ಲ. ಏಕೆಂದರೆ ಉದ್ಯಮ ಆರಂಭಿಸಿದ ಮೊದಲ ಮೂರು ವರ್ಷಗಳ ಅವಧಿಯಲ್ಲಿ ಹೆಳಿಕೊಳ್ಳುವಂಥ ಮೊತ್ತದ ತೆರಿಗೆ ಪಾವತಿಸುವಷ್ಟು ಲಾಭ ಸಿಗುವುದಿಲ್ಲ. ಆದರೆ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಮುಕ್ತಿ ಸಿಗುತ್ತದೆ.
ವಿದೇಶಿ ವಿನಿಮಯದ ವಿಚಾರದಲ್ಲಿ ಗಂಭೀರ ಸವಾಲುಗಳಿವೆ. ಬಂಡವಾಳ ಹೂಡಿಕೆಗೆ ಅಡೆತಡೆ ಒಡ್ಡುವ ಎಲ್ಲ ವಿಚಾರಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಘುರಾಂ ರಾಜನ್ ಭರವಸೆ ನೀಡಿದ್ದಾರೆ. ಅನಗತ್ಯ ದಾಖಲೆಗಳನ್ನು ಹಾಜರುಪಡಿಸುವ ಪ್ರಕ್ರಿಯೆ ಬಗ್ಗೆಯೂ ಮರುನೋಟ ಹರಿಸುವುದಾಗಿ ಅವರು ಹೇಳಿದ್ದಾರೆ. ಆದರೆ ನವೋದ್ಯಮಗಳಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ಬದಲಾವಣೆಗಳು ಇನ್ನಷ್ಟೇ ಕಾಣಬೇಕಿವೆ. ನವೋದ್ಯಮಗಳು ದೇಶದಿಂದ ಹೊರ ಹೋಗಲು ವಿದೇಶಿ ವಿನಿಮಯ ನಿಯಮಗಳೇ ಬಹುಮುಖ್ಯ ಕಾರಣ. ಈ ಕ್ಷೇತ್ರದಲ್ಲಿ ಹೆಚ್ಚು ಮುಕ್ತವಾದ, ಪ್ರಗತಿಪರ ಧೋರಣೆ ಹೊಂದಿರುವ ನಿಯಮಗಳು ನಮಗೆ ಬೇಕು. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಅಂಶಗಳು ಇನ್ನೂ ಹೊರಹೋಗಿಲ್ಲ. ರಾಜನ್ ಅವರು ತಮ್ಮ ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಇದರ ಬಗ್ಗೆ ಕೆಲವು ಮಾತುಗಳಿವೆ. ಬದಲಾವಣೆಗೆ ತೆರೆದುಕೊಳ್ಳುವ ಮಾತುಗಳೂ ಅದರಲ್ಲಿವೆ.
ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ. ಕಂಪೆನಿ ಕಾಯ್ದೆ ಎಂಬುದು ನವೋದ್ಯಮಗಳ ಪಾಲಿಗೆ ದೊಡ್ಡ ತಡೆಗೋಡೆಯಂತೆ ಆಗಿದೆ. ಸಣ್ಣ ನವೋದ್ಯಮಗಳು ಈ ಕಾಯ್ದೆಯ ಅಡಿ ಪಾಲಿಸಬೇಕಾದ ನಿಯಮಗಳು ಒಂದೆರಡಲ್ಲ. ಈ ನಿಯಮಗಳ ಅಡಿ ಹಾಕುವ ದಂಡ ದೊಡ್ಡ ಹೊರೆಯಂತೆ ಇದೆ. ತೆರಿಗೆ ಕಾಯ್ದೆಗಳು ಇನ್ನಷ್ಟು ಸರಳವಾಗಬೇಕು, ಆ ಕಾಯ್ದೆಗಳ ಭಾಷೆ ಇನ್ನಷ್ಟು ಸ್ಪಷ್ಟವಾಗಬೇಕು. ಪರ್ಯಾಯ ಹೂಡಿಕೆ ನಿಧಿ (ಎಐಎಫ್) ಹೊಸ ಉದ್ಯಮಗಳ ಮೇಲಿನ ಹೂಡಿಕೆಗೆ ಸಂಬಂಧಿಸಿದ ತೆರಿಗೆ ನೀತಿಗಳು ಸರಳವಾಗಬೇಕು.
ನವೋದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮಾಡುವ ಹೂಡಿಕೆಗಳ ಬಗ್ಗೆ ಸ್ಪಷ್ಟತೆ ಬೇಕು. ಡಿಜಿಟಲೀಕರಣ ಮತ್ತು ಡಿಜಿಟಲ್ ವ್ಯವಹಾರಗಳ ಬಗೆಗಿನ ನೀತಿ ಸ್ಪಷ್ಟವಾಗಿಲ್ಲ. ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ಬೇಕು. ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ಬೇಕು. ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿಗೆ ಹಣಕಾಸಿನ ನೆರವು ಬೇಕು. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತ್ವರಿತ ಅನುಮತಿ, ಬೌದ್ಧಿಕ ಹಕ್ಕುಸ್ವಾಮ್ಯ ನೀಡುವುದರ ಬಗ್ಗೆ ಇನ್ನಷ್ಟು ವಿವರಣೆ ಬೇಕು.
₹ 25 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರದ, 5 ವರ್ಷಕ್ಕಿಂತ ಹೆಚ್ಚು ಹಳೆಯದಲ್ಲದ, ತಂತ್ರಜ್ಞಾನ ಅಥವಾ ಬೌದ್ಧಿಕ ಹಕ್ಕು ಬಳಸಿ ಹೊಸತನಕ್ಕಾಗಿ ಕೆಲಸ ಮಾಡುವ ಉದ್ಯಮಗಳನ್ನು ‘ನವೋದ್ಯಮ’ ಎಂದು ಕರೆಯಲು ಅಂತರ್ ಸಚಿವಾಲಯ ಮಟ್ಟದ ಮಂಡಳಿಯಿಂದ ಪ್ರಮಾಣಪತ್ರ ಬೇಕು ಎಂಬ ವ್ಯಾಖ್ಯಾನ ಸರಿಯಲ್ಲ. ‘ನವೋದ್ಯಮ’ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಭಯದಿಂದ ಇಂಥದ್ದೊಂದು ವ್ಯಾಖ್ಯಾನ ರೂಪಿಸಲಾಗಿದೆ. ಇದು ನವೋದ್ಯಮಗಳ ಬೆಳವಣಿಗೆಗೆ ತಡೆ ಒಡ್ಡಬಹುದು. ಹಾಗಾಗಿ, ಈ ವ್ಯಾಖ್ಯಾನದ ಬಗ್ಗೆ ತ್ವರಿತವಾಗಿ ಮರುಚಿಂತನೆ ಆಗಬೇಕು.
ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದೆಂಬ ಭರವಸೆ ಐಐಟಿಗಳು, ಕೇಂದ್ರ ಸರ್ಕಾರದ ಅನುದಾನದಡಿ ನಡೆಯುವ ಸಂಸ್ಥೆಗಳಿಗೆ ಸೀಮಿತವಾಗಿದೆ. ಅಂದರೆ ಇಲ್ಲಿ ದೇಶದ ಶೇ 97ರಷ್ಟು ಸಂಸ್ಥೆಗಳನ್ನು ನಿರ್ಲಕ್ಷಿಸಲಾಗಿದೆ. ಇದು ಎದ್ದು ಕಾಣುವ ತಾರತಮ್ಯ. ಒಟ್ಟಾರೆಯಾಗಿ ಹೇಳುವುದಾದರೆ, ಇದು ಮಾಡಬೇಕಾಗಿರುವುದು ಸಾಕಷ್ಟಿರುವ ಧನಾತ್ಮಕ ಕಾರ್ಯ.
***
ಸ್ಟಾರ್ಟ್‌ಅಪ್ ಎಂದರೇನು?
ಹೊಸ ಉದ್ಯೋಗಾವಕಾಶ ಸೃಷ್ಟಿಸುವ, ಸಮಾಜದ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಸುವ ಮೊದಲ ತಲೆಮಾರಿನ ಉದ್ಯಮಶೀಲರ ಪ್ರಯತ್ನವೇ ಸ್ಟಾರ್ಟ್‌ಅಪ್
***
ಸ್ಟಾರ್ಟ್‌ಅಪ್‌ನಲ್ಲಿ ತೊಡಗಿರುವವರು
ಪುರುಷರು: 91%
ಮಹಿಳೆಯರು: 9%
***
ಐವರಿಗೆ ಉದ್ಯೋಗ ನೀಡುವ ಚಿಕ್ಕ ಉದ್ಯಮವೂ ಐದು ಮಂದಿಯ ನಿರುದ್ಯೋಗ ಸಮಸ್ಯೆ ಪರಿಹರಿಸುತ್ತದೆ
– ನರೇಂದ್ರ ಮೋದಿ, ಪ್ರಧಾನಿ
***
ನವೋದ್ಯಮಕ್ಕೆ ಕೇಂದ್ರದ ಉತ್ತೇಜನ
* ₹10,000 ಕೋಟಿ ಮೂಲ ಬಂಡವಾಳ ನಿಧಿ ಸ್ಥಾಪನೆ
* ₹500 ಕೋಟಿ ಸಾಲ ಖಾತರಿ ನಿಧಿ
* 3 ವರ್ಷ ಕಾರ್ಮಿಕ, ಪರಿಸರ ಇಲಾಖೆ ತಪಾಸಣೆ ವಿನಾಯಿತಿ
* ಮೊದಲ 3 ವರ್ಷದ ಆದಾಯಕ್ಕೆ ತೆರಿಗೆ ವಿನಾಯಿತಿ
* ತ್ವರಿತ ನೋಂದಣಿ, ಪರವಾನಗಿಗೆ ಪ್ರತ್ಯೇಕ ಪೋರ್ಟಲ್
* ತ್ವರಿತ ಪೇಟೆಂಟ್, ಬೌದ್ಧಿಕ ಆಸ್ತಿ ಹಕ್ಕು ಉಚಿತ ನೋಂದಣಿ
* ಲೈಸನ್ಸ್ ರಾಜ್ ಹಾಗೂ ಇನ್ಸ್‌ಪೆಕ್ಟರ್ ರಾಜ್ ಪದ್ಧತಿಗೆ ಅಂತ್ಯ
***
ನವೋದ್ಯಮಗಳ ಬಗ್ಗೆ ಟಿ.ವಿ.ಮೋಹನದಾಸ್ ಪೈ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಪ್ರಶ್ನೋತ್ತರ:
* ನವೋದ್ಯಮಗಳ ಯಶಸ್ಸಿನ ಪ್ರಮಾಣ ಹೇಗಿದೆ?
ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಸಾಮಾನ್ಯವಾಗಿ ಶೇಕಡ 5ರಷ್ಟು ನವೋದ್ಯಮಗಳು ಅತ್ಯದ್ಭುತ ಸಾಧನೆ ತೋರುತ್ತವೆ, ಶೇಕಡ 10ರಷ್ಟು ಉತ್ತಮ ಸಾಧನೆ ತೋರುತ್ತವೆ. ಶೇಕಡ 10ರಷ್ಟು ಉದ್ದಿಮೆಗಳು ಒಳ್ಳೆಯದು ಎನ್ನಬಹುದಾದ ಸಾಧನೆ ತೋರುತ್ತವೆ. ಒಂದಿಷ್ಟು ಉದ್ದಿಮೆಗಳು ಹಾಕಿದ ಬಂಡವಾಳ ವಾಪಸ್ ತರುತ್ತವೆ. ಇನ್ನುಳಿದ ಉದ್ದಿಮೆಗಳು ಬೆಳವಣಿಗೆ ಕಾಣುವುದಿಲ್ಲ, ಕೆಲವು ಸತ್ತೇ ಹೋಗುತ್ತವೆ.
* ನವೋದ್ಯಮ ಎಂದು ಯಾವುದನ್ನು ಕರೆಯಬಹುದು? ಬೆಂಗಳೂರು ಮತ್ತು ಕರ್ನಾಟಕ ಈ ಉದ್ದಿಮೆಗಳ ಬೆಳವಣಿಗೆಗೆ ಎಷ್ಟರಮಟ್ಟಿಗೆ ಪೂರಕ?
ನವೋದ್ಯಮಗಳ ಬಗ್ಗೆ ಕೇಂದ್ರ ಸರ್ಕಾರ ಒಂದು ವ್ಯಾಖ್ಯಾನ ನೀಡಿದೆ. ತಂತ್ರಜ್ಞಾನ ಅಥವಾ ಬೌದ್ಧಿಕ ಆಸ್ತಿ ಬಳಸಿ ಗ್ರಾಹಕರಿಗೆ ಅನನ್ಯವಾದ ಸೇವೆ, ಉತ್ಪನ್ನ ನೀಡುವ ಉದ್ದಿಮೆಯನ್ನು ನವೋದ್ಯಮ ಎಂದು ನಾನು ಕರೆಯುತ್ತೇನೆ.
ಜಾಗತಿಕ ಮಾರುಕಟ್ಟೆ ತಲುಪಲು ತಂತ್ರಜ್ಞಾನ ನೆರವಾಗುತ್ತದೆ. ಬೌದ್ಧಿಕ ಆಸ್ತಿಯು ಹೊಸದೇನೋ ಒಂದನ್ನು ಗ್ರಾಹಕರಿಗೆ ನೀಡಲು ಸಹಾಯ ಮಾಡುತ್ತದೆ. ನವೋದ್ಯಮಗಳ ಹೃದಯಸ್ಥಾನದಂತೆ ಇದೆ ಬೆಂಗಳೂರು. ಈ ಉದ್ದಿಮೆಗಳಿಗೆ ಕರ್ನಾಟಕದಲ್ಲಿ ಉತ್ತಮವಾದ ಹೊಸ ನೀತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.