ADVERTISEMENT

ಭಾಷಾ ಮಾಧ್ಯಮ ವಿವಾದ

ವಿ.ಪಿ.ನಿರಂಜನಾರಾಧ್ಯ
Published 23 ಮೇ 2014, 19:30 IST
Last Updated 23 ಮೇ 2014, 19:30 IST

ಭಾಷಾ ಮಾಧ್ಯಮಕ್ಕೆ ಸಂಬಂಧಿಸಿ­ದಂತೆ ಸರ್ವೋಚ್ಚ ನ್ಯಾಯಾ­ಲಯ ಮೇ 6ರಂದು ನೀಡಿದ  ತೀರ್ಪು ಹಲವರು ಭಾವಿಸಿದಂತೆ  ಅನಿರೀಕ್ಷಿತ ಹಾಗೂ ಆಘಾತ­ಕಾರಿ­ಯೇ­­ನಲ್ಲ. ತೀರ್ಪಿನ ಬಗ್ಗೆ ಆಶ್ಚರ್ಯ­ಪಡ­ಬೇಕಾದ ಅಗತ್ಯವೂ  ಇಲ್ಲ. ಏಕೆಂದರೆ, ಇದೊಂದು ನಿರೀಕ್ಷಿತ ತೀರ್ಪು.

ವ್ಯಾಪಾರವೇ ಸರ್ವಸ್ವ ಮತ್ತು ಲಾಭವೇ ಜೀವನದ ಪರಮಗುರಿ ಎನಿಸಿ­ರುವ  ಮಾರುಕಟ್ಟೆ ಆಧಾರಿತ ಸಾಮಾ­ಜಿಕ ವ್ಯವಸ್ಥೆಯ ಯಜಮಾನಿಕೆ ವಹಿಸಿ­ರುವ ಭಾಷೆಯನ್ನೇ ತನ್ನ ವ್ಯಾವಹಾರಿಕ ಭಾಷೆಯನ್ನಾಗಿ ಅವಲಂಬಿಸಿ ಜನ­ಸಾಮಾನ್ಯ­ರನ್ನು ನ್ಯಾಯದ ಪರಿಧಿ­ಯಿಂದ ಹೊರಗಿಟ್ಟಿರುವ ನ್ಯಾಯಾಂಗ ವ್ಯವಸ್ಥೆಯಿಂದ ಬೇರೇನನ್ನು ತಾನೆ ನಿರೀಕ್ಷಿಸಲು ಸಾಧ್ಯ!.

ಜಾಗತೀಕರಣ, ಖಾಸಗೀಕರಣ ಮತ್ತು ನವ -ಉದಾರೀಕರ­ಣದ ಆಕ್ರಮ­ಣ­ಕಾರಿ ನೀತಿಯ ಸುಳಿಗೆ  ಎಲ್ಲವೂ ಕೊಚ್ಚಿ ಹೋಗು­ತ್ತಿರುವಾಗ, ನ್ಯಾಯಾಂಗ ವ್ಯವಸ್ಥೆ ಈ ಆಕ್ರಮಣಕಾರಿ ಸುಳಿಯಿಂದ ಹೊರಬಂದು ನ್ಯಾಯ ಒದಗಿಸ­ಬೇಕೆಂದು ನಿರೀ­ಕ್ಷಿಸುವುದು ನಮ್ಮ ಮುಗ್ಧತೆ­ಯಲ್ಲದೆ ಬೇರೇನು? ಸಂವಿಧಾನದ  ಮೂಲ ಆಶಯಗಳಾದ ಸಾಮಾಜಿಕ ನ್ಯಾಯ ಮತ್ತು  ಸಮಾ­ನತೆಗೆ ಎರಡೂವರೆ ದಶಕ­ಗಳ ಹಿಂದೆಯೇ ವಿದಾಯ ಹೇಳಿ, ದೇಶದ ಭಾಷೆ-, ನೆಲ,- ಜಲ-, ನೈಸರ್ಗಿಕ ಸಂಪ­ನ್ಮೂಲ ಎಲ್ಲವನ್ನೂ ನವ-ವಸಾಹತು­ಶಾಹಿಯ ತಳಕಾಣದ ಲಾಭದ ಹುಂಡಿಗೆ ಸಮ­ರ್ಪಿಸುವ ಕರಾರಿಗೆ ಸಹಿ ಹಾಕಿದ್ದೇವೆ ನಾವು. ಈಗ  ನಮ್ಮ ಭಾಷೆ, -ಸಂಸ್ಕೃತಿ­ಯನ್ನು  ಕರಾರಿನಿಂದ ಹೊರತಂದು ರಕ್ಷಿ­ಸಲು ದಿಟ್ಟ ರಾಜಕೀಯ ಇಚ್ಛಾಶಕ್ತಿ­ಯನ್ನು ಪ್ರದರ್ಶಿಸದ ಹೊರತು ಅನ್ಯ ಮಾರ್ಗವಿಲ್ಲ.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು, ನ್ಯಾಯಾ­ಲ­ಯದ ದೃಷ್ಟಿಯಲ್ಲಿ ಕಾನೂನಾತ್ಮಕ­ವಾಗಿ ಸರಿಯೆನಿಸಿ­ದರೂ, ಜನ­ಸಾಮಾನ್ಯರ ದೃಷ್ಟಿಯಲ್ಲಿ ನ್ಯಾಯ­ಸಮ್ಮತವಲ್ಲ. ಎಂದಿ­ನಂತೆ, ಕಾನೂನಾತ್ಮಕ­ವಾಗಿರುವುದೆಲ್ಲವೂ ನ್ಯಾಯ­ಸಮ್ಮತ­ವಲ್ಲ ಅಥವಾ ನ್ಯಾಯಸಮ್ಮತವಾಗಿರು­ವುದೆಲ್ಲ ಕಾನೂನಾತ್ಮಕ­ವಾಗಿ­ರಬೇಕಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.

ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಆಧಾ­ರ­ದಲ್ಲಿ ಒಂದು ಸಮ-ಸಮಾಜವನ್ನು ಕಟ್ಟಿ­ಕೊಳ್ಳುವ ಪ್ರಕ್ರಿ­ಯೆ­ಯಲ್ಲಿ, ಉತ್ತಮ ನಾಗರಿಕನಾಗಿ ಮಾನವ ರೂಪು­ಗೊಳ್ಳಲು ಅಗತ್ಯವಾಗಿ ಕಟ್ಟಿಕೊಳ್ಳ­ಬೇಕಾದ ಜ್ಞಾನದ ರಾಚನಿಕ­(Construction of Knowledge ) ಕ್ರಿಯೆಯಲ್ಲಿ ಭಾಷೆಯ ಮಹತ್ವವನ್ನು ಅರಿಯಬೇಕಾದುದು ಅಗತ್ಯ.

ಇದಕ್ಕಾಗಿ ಒಂದು ಹಂತದವರೆಗಾದರೂ ಎಲ್ಲಾ ಮಕ್ಕಳಿಗೆ ಸಮಾನ ಅವಕಾಶಗಳನ್ನು  ಕಲ್ಪಿಸುವ ಅನಿವಾರ್ಯತೆ  ಮತ್ತು ಅಗತ್ಯತೆ­ಯನ್ನು ಅರಿಯಲು ನ್ಯಾಯಾ­ಲಯ ಸೋತಿದೆ. ನಮ್ಮ ಸಂವಿಧಾನ ರಚನಾಕಾರರು ಸಂವಿಧಾನದ ತಳಹದಿ­ಯೆನಿಸಿ­ರುವ ಪ್ರಸ್ತಾವನೆಯಲ್ಲಿ ನ್ಯಾಯ, ಸಮಾನತೆ,  ಸ್ವಾತಂತ್ರ್ಯ ಮತ್ತು ಭ್ರಾತೃತ್ವ­ವನ್ನು ಮೂಲತತ್ವಗಳನ್ನಾಗಿ ಅಳವ­ಡಿಸಿ­ಕೊಂಡಿದ್ದನ್ನು ಅಣಕಿಸುವಂತಾಗಿದೆ.
ಸಾಮಾನ್ಯವಾಗಿ, ನ್ಯಾಯಾಲಯ­ವನ್ನೂ ಒಳ­ಗೊಂಡಂತೆ, ನಾವೆಲ್ಲರೂ ಭಾಷೆಯನ್ನು ಒಂದು ಸರಳ ಸಂವಹನ ಸಾಧನ ಎಂದು ತಿಳಿಯುತ್ತೇವೆ.

ಶಿಕ್ಷಣ­ದಲ್ಲಿ ಭಾಷೆಯ ಪ್ರಾಮುಖ್ಯ ಅರಿ­ಯ­ಬೇಕಾದರೆ, ನಾವು ಭಾಷೆಯ ಬಗ್ಗೆ ಒಂದು ಸಮಗ್ರ ದೃಷ್ಟಿ ಕೋನವನ್ನು ಬೆಳೆಸಿಕೊಳ್ಳ­ಬೇಕಾಗುತ್ತದೆ. ಭಾಷೆಯ ಮಹತ್ವ­ವನ್ನು ಹಲವು ಬೇರೆಬೇರೆ ಆಯಾಮಗಳಿಂದ, ಅಂದರೆ, ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ,  ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ಮನೋ­ವೈಜ್ಞಾನಿಕ, ಸೌಂದರ್ಯೋ­ಪಾಸನೆ  ಇತ್ಯಾದಿಗಳಿಂದ ಪರಿ­ಶೀಲಿಸ­ಬೇಕಾಗು­ತ್ತದೆ. ಔಪಚಾರಿಕವಾಗಿ ಭಾಷೆಯನ್ನು  ಸೊಲ್ಲು, ಪದ ಮತ್ತು ವಾಕ್ಯಗಳ ಮೂಲಕ  ರಚನೆಗೊಳ್ಳುವ ಪದಕೋಶ ಮತ್ತು ಒಂದಷ್ಟು ವಾಕ್ಯರಚನೆಯ ನಿಯಮಗಳು ಎಂದು ಪರಿಭಾವಿಸಲಾ­ಗುತ್ತದೆ. ಇದು ಸತ್ಯ. ಆದರೆ ಇದು ಭಾಷೆಯ ಒಂದು ಮುಖ ಮಾತ್ರ. 

ಹೀಗಾಗಿ, ಭಾಷೆ ಕೇವಲ ನಿಯಮಗಳಿ­ಗನುಗುಣವಾಗಿ ಸಂವಹ­ನಗೊಳ್ಳುವ ಒಂದು ವ್ಯವಸ್ಥಿತ ಕ್ರಿಯೆ ಮಾತ್ರವಲ್ಲದೆ ನಮ್ಮ ಯೋಚನಾ ಲಹರಿಯನ್ನು ಸಂರಚನೆಗೊಳಿಸುವ ಮತ್ತು ಆ ಮೂಲಕ ನಮ್ಮ  ರಾಜಕೀಯ ಹಾಗೂ ಸಾಮಾಜಿಕ ಸಂಬಂಧ­ಗಳನ್ನು ವ್ಯಾಖ್ಯಾನಿಸುವ ಮತ್ತು ನಿರ್ಧರಿಸುವ ಒಂದು ವಿದ್ಯಮಾನ. ಹೀಗಾಗಿ, ಎಲ್ಲಾ ಭಾಷಾ ವ್ಯಾಸಂಗದ ಬೆಳವಣಿಗೆ­ಗಳು, ನಿಶ್ಚಿತವಾಗಿ ರಾಜಕೀಯ ಮತ್ತು ಸಾಮಾಜಿಕ, -ಸಾಂಸ್ಕೃತಿಕ  ಮಧ್ಯಸ್ಥಿಕೆಯ ಫಲಿತಾಂಶ­ಗಳು ಕೂಡ ಹೌದು ಎಂಬುದನ್ನು ನಾವು ಮರೆಯಬಾರದು.

ಈ ವಿಷಯವಾಗಿ ನಮ್ಮ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಪ್ಯಾರಾ ೩.೧.೧ರಲ್ಲಿ ಹೇಳಿರುವಂತೆ, ಭಾರತದ ಭಾಷಿಕ ವೈವಿಧ್ಯ ಅನೇಕ ಕ್ಲಿಷ್ಟ ಸವಾಲುಗಳನ್ನು ಮುಂದಿಡುವಂತೆಯೇ ಅನೇಕ ಅವಕಾಶ­ಗಳನ್ನೂ   ತೆರೆದಿಡುತ್ತದೆ. ದೇಶದಲ್ಲಿ ಬಳಕೆ­ಯ­ಲ್ಲಿ­ರುವ  ಭಾಷೆಗಳು ಸಂಖ್ಯಾ­ಬಲದ ದೃಷ್ಟಿಯಿಂದ ಮಾತ್ರ­ವಲ್ಲ ಅವು ಪ್ರತಿನಿಧಿಸುವ ಭಾಷಾ ಕುಟುಂಬಗಳ ವೈವಿಧ್ಯದ ದೃಷ್ಟಿಯಿಂದಲೂ ವಿಶಿಷ್ಟವೆನಿಸಿವೆ.

ವಿಶಾಲವಾದ ಸಾಮಾಜಿಕ,- ಸಾಂಸ್ಕೃತಿಕ ತಳಹದಿಯ ಮೇಲೆ ಬಹು­ಭಾಷಾ ಮತ್ತು ಬಹುಸಾಂಸ್ಕೃತಿಕ ಸಮಾಜ ನಿರ್ಮಾಣಕ್ಕೆ ಪೂರಕವಾದ ನ್ಯಾಯಸಮ್ಮತ ತೀರ್ಪನ್ನು ನೀಡುವ ಬದಲು ಆಂಗ್ಲೀಕರಣದ ಮೂಲಕ ಮಾರುಕಟ್ಟೆ ಆಧಾರಿತ ಯಜಮಾ­ನಿಕೆಯ ಏಕಸಂಸ್ಕೃತಿಯ ಹುನ್ನಾರಕ್ಕೆ ನಮ್ಮ ನ್ಯಾಯಾಲಯ ಬಲಿಯಾದದ್ದು  ನಿಜಕ್ಕೂ ವಿಪರ್ಯಾಸ.

ಇದರಿಂದ ಕಲಿತ ಪಾಠವೇನೆಂದರೆ,  ಶಾಸಕಾಂಗ ತೀರ್ಮಾ­ನಿ­ಸ­ಬೇಕಾದ ಗಂಭೀರ­­ವಾದ ವಿಷಯ­ವನ್ನು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಅರ್ಥೈ­ಸಲು ಯತ್ನಿಸಿದರೆ  ಸಂವಿಧಾನ­ದಲ್ಲಿನ ಮೂಲ ಆಶಯ­­ಗಳಾದ   ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮಾನತೆಯ ತತ್ವಗಳಿಗೆ  ತಿಲಾಂಜಲಿಯಿಟ್ಟಂತಾ­ಗುತ್ತದೆ.

ಕುವೆಂಪು ಅವರು ಜನವರಿ ೨೬,೧೯೬೫ರಲ್ಲಿ ‘ರಾಷ್ಟ್ರಕವಿ’ ಪುರಸ್ಕಾರವನ್ನು ಸ್ವೀಕರಿಸಿ ಮಾಡಿದ ಭಾಷಣದಲ್ಲಿ ಹೇಳಿದ ಮಾತು ಈ ಸಂದರ್ಭದಲ್ಲಿ  ಉತ್ಪ್ರೇಕ್ಷೆ­ಯಾಗಲಾರದು ಎಂದು ಭಾವಿಸುತ್ತೇನೆ. ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು           ‘ಮಹನೀಯರೆ, ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹ­ವಾಲು: ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧ­ಪಟ್ಟಿದ್ದು.

ವಿವರಕ್ಕಾಗಲಿ, ವಾದಕ್ಕಾಗಲಿ, ಜಿಜ್ಞಾಸೆ­ಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತ ಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀ­ಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೇ ನನ್ನ ಸದ್ಯದ ಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರು, ನೂರಾರು ಸ್ವದೇಶಿ ಮತ್ತು ವಿದೇಶಿ ವಿದ್ಯಾತಜ್ಞರು ಹೇಳಿದ್ದಾರೆ, ಮಾತ­ನಾಡಿದ್ದಾರೆ, ಬರೆದಿದ್ದಾರೆ.

ಹೊತ್ತಗೆ ಹೊತ್ತಗೆಗಳನ್ನು ಪ್ರಕಟಿ­ಸಿಯೂ ಇದ್ದಾರೆ.ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರಹಿತಾಸಕ್ತ ಪ್ರತಿಗಾಮಿ ಶಕ್ತಿ­ಗಳು, ಮಕ್ಕಳಿಗೆ ಹಾಲುಣಿಸುವ ನೆಪದಲ್ಲಿ ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆ­ಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ, ಸರಿ­ಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆ­ಗಳ ಮೊತ್ತವೇ ಆದರೂ ಆಗಬಹುದೇನೊ!.’

ಮುಂದುವರಿದು, ‘ಇಂಗ್ಲಿಷ್ ಭಾಷೆ ಬಲತ್ಕಾರದ ಸ್ಥಾನ­ದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ  ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸ­ಬೇಕಾ­ದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ  ಸಾಧಿ­ಸಲಾ­ರದೆ ನಿತ್ಯರೋಗಿಯಂತಿರಬೇಕಾಗುತ್ತದೆ.

ಅಲ್ಲದೆ ಮತ್ತೂ ಒಂದನ್ನು ಕಂಡಂತೆ ಹೇಳುತ್ತೇನೆ  ತಮಗೆ; ನಮ್ಮ ಕಾರ್ಖಾನೆ­ಗಳನ್ನೆಲ್ಲ ನಿಲ್ಲಿಸಿ, ಅಣೆಕಟ್ಟುಗಳನ್ನೆಲ್ಲ ತಡೆಹಿಡಿದು, ಪ್ರಯೋಗ­ಶಾಲೆ  ಸಂಶೋಧನಾಗಾರಗಳನ್ನೆಲ್ಲ  ವಜಾಮಾಡಿ, ಹಲವು ಪಂಚ­ವಾರ್ಷಿಕ  ಯೋಜನೆಗಳ  ಹಣವನ್ನೆಲ್ಲ  ಇಂಗ್ಲಿಷ್ ಸ್ಟಾಂಡರ್ಡ್ ಅನ್ನು ಉತ್ತಮಗೊಳಿಸುವುದಕ್ಕಾಗಿಯೇ ವೆಚ್ಚ­ಮಾಡಿದರೂ, ಇನ್ನೂ ನೂರು ವರ್ಷಗಳ ಅನಂತರವೂ ನಮ್ಮ ಮಕ್ಕಳ ಇಂಗ್ಲಿಷ್‌ನ ಮಟ್ಟ ಈಗಿರುವುದಕ್ಕಿಂತ ಮೇಲಕ್ಕೇರು­ವುದಿಲ್ಲ!’

ಕುವೆಂಪು ಅವರ ಅಂದಿನ ಮಾತು ಅಕ್ಷರಶಃ ಸತ್ಯ. ಈ ವಿಷ ವರ್ತುಲದಿಂದ ಹೊರಬರಬೇಕಾದರೆ ಶಾಸಕಾಂಗ ಇನ್ನಾ­ದರೂ ಕಾರ್ಯ ಪ್ರವೃತ್ತವಾಗಬೇಕಿದೆ. ಜನಮನದ ಭಾಷೆ­ಯಾಗಿರುವ ಕನ್ನಡ ಭಾಷೆ  ಮೊದಲು ಆಡಳಿತದ ಎಲ್ಲಾ ಹಂತದಲ್ಲಿ; ಅಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ­ದಲ್ಲಿ ಪೂರ್ಣ ಪ್ರಮಾಣದಲ್ಲಿ  ಪ್ರಾಮಾಣಿಕ­ವಾಗಿ ಜಾರಿಯಾಗಬೇಕಾಗಿದೆ.

ಈ ಕೆಲಸ ಪರಿಣಾಮಕಾರಿ­ಯಾಗಿ ಆಗಬೇಕಾದರೆ ಅದರ ಮೂಲವೆನಿಸಿರುವ  ಶಾಲಾ ಶಿಕ್ಷಣ ವ್ಯವಸ್ಥೆಗೆ ಹೊಸ ಕಾಯಕಲ್ಪ ಕಲ್ಪಿಸಬೇಕಿದೆ. ಶಿಕ್ಷಣ­ದಲ್ಲಿರುವ ಅಸಮಾನತೆ, ಪ್ರತ್ಯೇಕತೆ ಮತ್ತು ಆಧುನಿಕ ಅಸ್ಪೃಶ್ಯತೆ-ಯ ತಾರತಮ್ಯ ತೊಲಗಿ ಎಲ್ಲಾ ಮಕ್ಕಳಿಗೆ   ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಮಗ್ರ ಶಿಕ್ಷಣ ನೀತಿ ಹಾಗೂ ಭಾಷಾ ನೀತಿಯನ್ನು ರೂಪಿಸಿ ಅನುಷ್ಠಾನ­ಗೊಳಿಸ­ಬೇಕಾಗಿದೆ.

ನೀತಿಯನ್ನು ರೂಪಿಸುವ ಸಾರ್ವಭೌಮ ಅಧಿಕಾರ ಶಾಸಕಾಂಗಕ್ಕಿದ್ದು ಅದನ್ನು ಚಲಾಯಿಸಬೇಕಾಗಿದೆ. ಸಂವಿಧಾ­ನದ ಮೂಲ ತಳಹದಿ ಎನಿಸಿರುವ ಸಮಾನತೆ ಮತ್ತು ಸಾಮಾ­ಜಿಕ ನ್ಯಾಯದ ತತ್ವಗಳಿಗನು­ಸಾರವಾಗಿ ಮಾತೃ ಭಾಷಾ ಮಾಧ್ಯಮದಲ್ಲಿ ಸಮಾನ ಶಾಲಾ ಶಿಕ್ಷಣವನ್ನು ನೀಡಲು ಸಾಧ್ಯವಾಗಬಹುದಾದ ಸಮಗ್ರ ಶಿಕ್ಷಣ ನೀತಿಯೊಂದು ಮಾತ್ರ ಇಂತಹ ಸಂಕೀರ್ಣ ಮತ್ತು ಸೂಕ್ಷ್ಮತೆಯ ವಿಚಾರಗಳಿಗೆ  ಪರಿಹಾರ­ವನ್ನು ಒದಗಿಸಬಲ್ಲದು.

ಈಗ ಸರ್ಕಾರ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಕ್ರಮ ಕೈಗೊಂಡಿದೆ. ಇದಕ್ಕಾಗಿ ತಜ್ಞರ ಸಣ್ಣ ಸಮಿತಿಯೊಂದನ್ನು ರಚಿಸಿ ಕೇವಲ ಕಾನೂನಿನ ಅಂಶಗಳಿಗೆ ಮಾತ್ರ ಒತ್ತು ನೀಡದೆ ಮಾತೃ ಭಾಷಾ ಮಾಧ್ಯಮದ ವಿಷಯ­ದಲ್ಲಿ ರಾಷ್ಟ್ರೀಯ ಮತ್ತು ಅಂತ­ರಾಷ್ಟ್ರೀಯ­ಮಟ್ಟದಲ್ಲಿ ನಡೆದಿ­ರುವ ಎಲ್ಲ ಸಂಶೋಧನೆ­ಗಳ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳಾಗಿ  ಒದಗಿಸುವ ಪ್ರಯತ್ನ ಮಾಡ­ಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಲಾದರೂ ಸರ್ಕಾರ ಭಾಷಾತಜ್ಞರ ಮತ್ತು ಶಿಕ್ಷಣತಜ್ಞರ ನುರಿತ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.

ಮತ್ತೊಂದೆಡೆ, ರಾಷ್ಟ್ರದ ಹೊಸ ಪ್ರಧಾನಿಯವರಿಗೆ ಸವಿಸ್ತಾ­ರ­ವಾದ ಪತ್ರ ಬರೆದು ಈ ವಿಷಯವನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಒಂದು ಒಮ್ಮತದ ನಿರ್ಧಾ­ರಕ್ಕೆ ಬರುವಂತೆ ಒತ್ತಾಯಿಸಬೇಕಿದೆ.

ಜೊತೆಜೊತೆಗೆ ಶಿಕ್ಷಣ ಆಯೋಗದ (೧೯೬೪-–೬೬) ಶಿಫಾರಸ್ಸಿನಂತೆ  ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳಿಗನುಗುಣವಾಗಿ (೧೯೬೮, ೧೯೮೬ ಮತ್ತು ಪರಿಷ್ಕೃತ ೧೯೯೨)ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಪೂರಕವಾದ ಒಂದು ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸಿ ಸಂಸತ್ತಿನಲ್ಲಿ ಮಂಡಿಸುವ ಮೂಲಕ  ಬಹು ವರ್ಷಗಳ ಈ ರಾಷ್ಟ್ರೀಯ
ಸಮ­ಸ್ಯೆಗೆ ವಿದಾಯ ಹೇಳಬೇಕಾಗಿದೆ.

(ಲೇಖಕರು, ಫೆಲೋ ಹಾಗೂ ಮುಖ್ಯಸ್ಥರು. ಸಮಾನ ಗುಣಮಟ್ಟದ  ಶಾಲಾ ಶಿಕ್ಷಣ ಸಾರ್ವತ್ರೀಕರಣ ಕಾರ್ಯಕ್ರಮ, ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT