ರಾಷ್ಟ್ರ ಮಟ್ಟದ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ‘ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್‌ನೊಂದಿಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಂಬಂಧಗಳು ಇನ್ನು ಇರಲಿಕ್ಕಿಲ್ಲ, ಆರೋಗ್ಯ ಸಚಿವಾಲಯದ ಕಟ್ಟಡದಿಂದ ಈ ಫೌಂಡೇಶನ್‌ನ ಕಚೇರಿಯು ಸ್ಥಳಾಂತರಗೊಳ್ಳಲಿದೆ’ ಎಂದು ಸುದ್ದಿಯೊಂದು ಪ್ರಕಟವಾದ ಹಿನ್ನೆಲೆಯಲ್ಲಿಯೇ ಆರೋಗ್ಯ ಮಂತ್ರಾಲಯದ ವಿವರಣೆಯೂ ಪ್ರಕಟವಾಯಿತು, ‘ಇಲ್ಲ, ಹಾಗೇನೂ ಇಲ್ಲ. ಫೌಂಡೇಶನ್ ಈ ಕಟ್ಟಡದಿಂದ ಸ್ಥಳಾಂತರಗೊಳ್ಳುವುದಿಲ್ಲ. ಅದು ಹಿಂದಿನಂತೆಯೇ ಅಲ್ಲಿಯೇ ಇದ್ದು ಕೆಲಸ ಮಾಡುತ್ತದೆ ಮತ್ತು ಆರೋಗ್ಯ ಸಚಿವಾಲಯಕ್ಕೆ ತನ್ನ ಯಾವತ್ತೂ ಬೆಂಬಲವನ್ನು ಕೊಡುತ್ತದೆ’ ಎಂದು.
‘ಇದೇನು ಸುದ್ದಿಯೇ?’ ಎಂದು ಬಹು ಜನರು ಕೇಳಬಹುದು. ಹೌದು, ಸುದ್ದಿಯೇ. ತುಂಬ ಪ್ರಮುಖವಾದ ಸುದ್ದಿ ಇದು. ಮೊದಲ ಸುದ್ದಿ ಪ್ರಕಟವಾದಾಗ, ಸಾರ್ವಜನಿಕರ ಆರೋಗ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಲ್ಲಿದ್ದವರು ಬಹಳೇ ಸಂತೋಷ ಪಟ್ಟರು. ಅದರ ಹಿಂದೆಯೇ ಎರಡನೆಯ ಸುದ್ದಿ ಬರುತ್ತಿದ್ದಂತೆಯೇ ಅವರ ಮುಖ ಪೆಚ್ಚಾಗಿದ್ದು ನಿಜ. ‘ಬಿಲ್ ಗೇಟ್ಸ್ ಮತ್ತು ಮಿಲಿಂಡಾ ಫೌಂಡೇಶನ್’ ಮತ್ತು ವಿವಿಧ ದೇಶಗಳ ಲಸಿಕಾ ಕಾರ್ಯಕ್ರಮಗಳಿಗಿರುವ ಸಂಬಂಧದ ಬಗ್ಗೆ ಹೇಳಿದರೆ ಬಹಳಷ್ಟು ಸುದ್ದಿಗಳ ಹಿಂದಿನ ಗದ್ದಲವು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಲಸಿಕೆ ಮತ್ತು ಲಸಿಕಾ ಕಾರ್ಯಕ್ರಮಕ್ಕಾಗಿ ಇರುವ ಜಾಗತಿಕ ಒಡಂಬಡಿಕೆ (ಗಾವಿ) ಎಂಬುದು ಆರೋಗ್ಯ ಸೇವೆಗಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಭಾಗಿತ್ವದ ಸಂಘಟನೆ. ಅಮೆರಿಕದ ‘ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್’ (ಬಿ.ಎಂ ಫೌಂಡೇಶನ್) ಗಾವಿಯ ಮುಖ್ಯ ಪೋಷಕ ಸಂಸ್ಥೆ.
ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಕಾರ್ಯಕಾರಿ ಸಮಿತಿಯಲ್ಲಿ ಬಿ.ಎಂ ಫೌಂಡೇಶನ್ ಅನ್ನೂ ಒಳಗೊಂಡು ಐದು ಸಂಸ್ಥೆಗಳನ್ನು ಸೇರಿಸಿಕೊಳ್ಳುವ ಪ್ರಸ್ತಾವವನ್ನಿಟ್ಟಿತ್ತು. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಬಿ.ಎಂ ಫೌಂಡೇಷನ್‌ನ ಆಡಳಿತಾತ್ಮಕ ಸಂಬಂಧ ಇರಕೂಡದೆಂದು ಸುಮಾರು ಮೂವತ್ತು ದೇಶಗಳು ಸಂಸ್ಥೆಗೆ ಕಳೆದ ತಿಂಗಳಷ್ಟೇ ಮನವಿ ಮಾಡಿದ್ದವು. ಸ್ವತಃ ಔಷಧ, ಲಸಿಕೆ ತಯಾರಿಕಾ ಕಂಪೆನಿಗಳಲ್ಲಿ ಷೇರುದಾರರಾಗಿರುವ, ಲಸಿಕಾ ಕಾರ್ಯಕ್ರಮಗಳಲ್ಲಿ ದೇಶದೇಶಗಳ ಸರ್ಕಾರಗಳ ಮೇಲೆ ಪ್ರಭಾವ ಬೀರುವಂಥ ಸಂಸ್ಥೆಗಳು ವಿಶ್ವ ಆರೋಗ್ಯ ಸಂಘಟನೆಯ ಆಡಳಿತ ಮಂಡಳಿಯಲ್ಲಿ ಇರುವುದು ಆರೋಗ್ಯಕರವಲ್ಲವೆಂಬುದು ಈ 30 ಸಂಸ್ಥೆಗಳ ವಾದ.
ಹೃದಯ ರೋಗ, ಹೃದಯಾಘಾತ, ಕ್ಯಾನ್ಸರ್, ಮಧುಮೇಹಗಳನ್ನುಂಟು ಮಾಡುವ ಬಹುರಾಷ್ಟ್ರೀಯ ಆಹಾರ ತಯಾರಿಕಾ ಕಂಪೆನಿಗಳು ಹಾಗೂ ಮದ್ಯಪಾನ ತಯಾರಿಕೆ ಕಂಪೆನಿಗಳಲ್ಲಿ ಬಿ.ಎಂ ಫೌಂಡೇಶನ್ ತನ್ನ ಷೇರುಗಳನ್ನು ತೊಡಗಿಸಿದೆ. ಈ ಕಂಪೆನಿಗಳು ತಯಾರಿಸುವ ಆಹಾರ ಮಾರಾಟದಿಂದ ಫೌಂಡೇಶನ್‌ಗೆ ಅಪಾರ ಲಾಭ ಇದ್ದು, ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯಲ್ಲಿ ಅದು ಸೇರಿಕೊಂಡಿತೆಂದರೆ ಇಂಥ ಆಹಾರ ಮತ್ತು ಪಾನೀಯಗಳ ಸೇವನೆಯಿಂದಲೇ ಬರುತ್ತಿರುವ ರೋಗಗಳ ಬಗ್ಗೆ ಸಂಸ್ಥೆ ಏನೂ ಹೇಳಲಾಗದ ಪರಿಸ್ಥಿತಿಯಲ್ಲಿರುತ್ತದೆ. ಆ ಆಹಾರವನ್ನು ಪ್ರತಿಬಂಧಿಸಿ ಎಂದು ಸರ್ಕಾರಗಳಿಗೆ ಸಲಹೆ ಕೊಡಲಾಗದ ಸ್ಥಿತಿಗೆ ಅದು ಬರುತ್ತದೆ.
ಅದಲ್ಲದೆ ಲಸಿಕೆ ತಯಾರಿಕಾ ಕಂಪೆನಿಗಳಾದ ಫೈಸರ್, ನೊವಾರ್ಟಿಸ್, ಗಿಲಿಯಾಡ್ ಸೈನ್ಸಸ್, ಗ್ಲಾಕ್ಸೋ, ಅಬೊಟ್, ಮೆರ್ಕ್ ಮುಂತಾದ ಬಲಾಢ್ಯ ಔಷಧ ಕಂಪೆನಿಗಳಲ್ಲಿ ಬಿಲ್ ಗೇಟ್ಸ್‌ನ ಹೂಡಿಕೆ ಇದೆ. ಸಹಜವಾಗಿಯೇ ಔಷಧ ಕಂಪೆನಿಗಳ ವಿರುದ್ಧವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಎಚ್ಚರಿಕೆಯನ್ನು ಕೊಡಲಾಗದಂತಾಗುತ್ತದೆ. ಈ ಕಾರಣಗಳಿಗಾಗಿ ಸಂಸ್ಥೆಯಲ್ಲಿ ಬಿ.ಎಂ ಫೌಂಡೇಶನ್ ಇರುವುದು ಬೇಡ ಎಂದು ಸಂಘಟನೆಗಳು ಎಚ್ಚರಿಸಿದ್ದವು. ಫೌಂಡೇಶನ್‌ನ ಪ್ರಭಾವ ಅಲ್ಲಿ ವಿಶ್ವ ಆರೋಗ್ಯ ಸಂಸ್ಥೆಗಷ್ಟೇ ಮೀಸಲಾಗಿಲ್ಲ. ನಮ್ಮ ದೇಶದಲ್ಲೂ ಲಸಿಕೆ ತಯಾರಿಸುವ ಅನೇಕ ಕಂಪೆನಿಗಳಲ್ಲಿ ಇದು ಪಾಲುದಾರ.
ಸಾರ್ವಜನಿಕ ಆರೋಗ್ಯದಲ್ಲಿ ರೋಗ ಪ್ರತಿಬಂಧಕ ಲಸಿಕಾ ಕಾರ್ಯಕ್ರಮ ನಿಜಕ್ಕೂ ಅತ್ಯುತ್ತಮ ಮತ್ತು ಕಡಿಮೆ ಖರ್ಚಿನದು. ರೋಗಗಳ ತಡೆಗೆ ಲಸಿಕೆಗಳು ಅತಿ ಅವಶ್ಯ. ಯಾವ ಯಾವ ಲಸಿಕೆಗಳು ಇರಬೇಕೆಂದು ನಿರ್ಧರಿಸುವ ಮತ್ತು ನಿಭಾಯಿಸುವ ಜವಾಬ್ದಾರಿ ಆರೋಗ್ಯ ಇಲಾಖೆಯದ್ದು.
1985- 86ರಲ್ಲಿ ಕ್ಷಯ, ಪೋಲಿಯೊ, ನಾಯಿಕೆಮ್ಮು, ಧನುರ್ವಾಯು, ಗಂಟಲುಮಾರಿ– ಈ ಐದು ರೋಗಗಳ ವಿರುದ್ಧ ಎಲ್ಲಾ ನವಜಾತ ಶಿಶುಗಳಿಗೂ (ಡಿಪಿಟಿ, ಪೊಲಿಯೊ ಮತ್ತು ಬಿಸಿಜಿ) ಲಸಿಕಾ ಕಾರ್ಯಕ್ರಮವನ್ನು ತೆಗೆದುಕೊಳ್ಳಲಾಯಿತು. ಅತ್ಯುತ್ತಮವಾಗಿ ಜನರಿಂದ ಸ್ವೀಕೃತವಾದ ಮತ್ತು ಒಳ್ಳೆಯ ಪರಿಣಾಮವನ್ನು ತೋರಿಸಿದ ಲಸಿಕಾ ಕಾರ್ಯಕ್ರಮವಿದು.
ಮುಂದೆ ಭಾರತ ಸರ್ಕಾರವು ಡಿಪಿಟಿಯ ಜೊತೆಗೆ ಹೆಪಟೈಟಿಸ್ ಬಿ ಮತ್ತು ಹಿಮೋಫಿಲಸ್ ಇನ್‌ಫ್ಲುಯೆಂಜಾಗಳ ಲಸಿಕೆ ಸೇರಿಸಿ ಐದು ರೋಗಗಳ ಪ್ರತಿಬಂಧಕೋಪಾಯಗಳನ್ನು ಒಳಗೊಂಡ ಪೆಂಟಾವಾಲಂಟ್ ಎಂಬ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ತರಲು ನಿರ್ಧರಿಸಿತು. ಮಗು ಹುಟ್ಟಿದ ತಕ್ಷಣ ಕೊಡುವ ಹೆಪಟೈಟಿಸ್ ಬಿ ಮತ್ತು ಆರು ತಿಂಗಳ ನಂತರ ಕೊಡುವ ಡಿಪಿಟಿ ಲಸಿಕೆಗಳನ್ನು ಒಟ್ಟಿಗೆ ಹಾಕುವುದು ಮತ್ತು ಅತಿ ಸುಲಭವಾಗಿ ಕೈಗೆಟಕುತ್ತಿದ್ದ ಲಸಿಕೆಯ ಬೆಲೆ ಒಮ್ಮೆಗೇ ಗಗನಕ್ಕೇರಿದ್ದು ತೀವ್ರ ಪ್ರತಿರೋಧಕ್ಕೆ ಕಾರಣವಾಯಿತು. ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಂಘಟನೆಗಳು ಸರ್ಕಾರದ ಈ ಲಸಿಕಾ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸಿದವು.
ಲಸಿಕೆಯಿಂದ ಸಿಡುಬು ರೋಗವನ್ನು ತಡೆಯುವಲ್ಲಿ ನಾವು ಸಫಲರಾಗಿದ್ದೇವೆ. ಆದರೆ ಕ್ಷಯ ರೋಗಕ್ಕೆ ಬಿಸಿಜಿ ಎಂಬ ಲಸಿಕೆಯನ್ನು ನಾವು ಹಾಕಲಿಕ್ಕೆ ಶುರು ಮಾಡಿ ದಶಕಗಳೇ ಕಳೆದು ಹೋದವು. ಆದಾಗ್ಯೂ ಇನ್ನೂವರೆಗೆ ಕ್ಷಯ ರೋಗವು ನಿಯಂತ್ರಣಕ್ಕೆ ಬಂದಿಲ್ಲ. ಇದಕ್ಕೆ ಕಾರಣವೆಂದರೆ ಆ ಲಸಿಕೆಯು ಮೆದುಳಿನ ಕ್ಷಯ ಮತ್ತು ಮಿಲಿಯರಿ (ಶ್ವಾಸಕೋಶದ) ಕ್ಷಯವನ್ನು ಮಾತ್ರ ತಡೆಗಟ್ಟಬಲ್ಲದು. ಬೇರೆ ಯಾವುದೇ ಅಂಗಕ್ಕೆ ತಗಲುವ ಕ್ಷಯವನ್ನು ತಡೆಗಟ್ಟಲು ಅದು ವಿಫಲವಾಗಿದೆ. ಹಾಗಾಗಿ ಕ್ಷಯ ರೋಗ ಇನ್ನೂವರೆಗೆ ನಮ್ಮ ಜನಸಮುದಾಯವನ್ನು ಆಳುತ್ತಲೇ ಇದೆ. ಒಂದೊಂದು ರೋಗಕ್ಕೂ ತನ್ನದೇ ಆದ ವಿಶಿಷ್ಟ ಗುಣವಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ರೋಗಗಳ ಈ ಗುಣವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ಲಸಿಕೆಯನ್ನು ಜಾರಿಗೆ ತರುವುದು ಅತಿ ಅವಶ್ಯ.
ಯಾವ ರೋಗ ಎಷ್ಟು ಜನರಿಗೆ ತಗುಲಬಹುದು, ಎಷ್ಟು ಹಾನಿಯುಂಟುಮಾಡುತ್ತದೆ, ಅದರಿಂದಾಗುತ್ತಿರುವ ರಾಷ್ಟ್ರೀಯ ನಷ್ಟ ಎಷ್ಟು ಎಂಬುದರ ಅಧ್ಯಯನವನ್ನು ಆಧರಿಸಿ ಆಯಾ ರೋಗವನ್ನು ಪ್ರತಿಬಂಧಿಸುವ ಲಸಿಕೆಗಳನ್ನು ತರಬೇಕು. ಪ್ರತಿಬಂಧಕ ಲಸಿಕೆಗಳ ಪರಿಣಾಮದಿಂದ ಎಷ್ಟು ಪ್ರಮಾಣದಲ್ಲಿ ಸಾಮಾಜಿಕ ಲಾಭ ಆಗಬಹುದು ಎಂದು ಸಾಮಾಜಿಕ ಆರೋಗ್ಯ ತಜ್ಞರು ನಿರ್ಧರಿಸಬೇಕು.
ರುಬೆಲ್ಲಾ ಒಂದು ತನ್ನಿಂದ ತಾನೇ ಗುಣವಾಗುವ ಮತ್ತು ಭಾರತದಲ್ಲಿ ಹೆಚ್ಚು ಪ್ರಮುಖವೆನಿಸದ ರೋಗ. ಗರ್ಭಿಣಿಗೆ ರುಬೆಲ್ಲಾ ಸೋಂಕು ತಗುಲಿತೆಂದರೆ ಮಾತ್ರ ಗರ್ಭದಲ್ಲಿರುವ ಮಗುವಿಗದು ಅಪಾಯ. ಮಗು ಅಂಗವೈಕಲ್ಯದಿಂದ ಹುಟ್ಟುವ ಸಾಧ್ಯತೆ ಇದೆ ಎನ್ನುತ್ತವೆ ಸಂಶೋಧನೆಗಳು. ನಮ್ಮ ದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಅಂಗವಿಕಲರು ಇದ್ದಾರಾದರೂ ಅವರಲ್ಲಿ ತಾಯಿಯ ರುಬೆಲ್ಲಾ ಕಾರಣದಿಂದ ಅಂಗವಿಕಲರಾದವರ ಸಂಖ್ಯೆ ಎಷ್ಟು ಎಂದು ಯಾವುದೇ ಸಂಶೋಧನೆ ನಡೆದಿಲ್ಲ, ಅಂಕಿ ಅಂಶಗಳು ನಮ್ಮ ಕೈಯಲ್ಲಿಲ್ಲ. ರುಬೆಲ್ಲಾ ಬಗ್ಗೆ ಇನ್ನೊಂದು ಮಹತ್ವದ ವಿಷಯವೆಂದರೆ ಚಿಕ್ಕ ವಯಸ್ಸಿನಲ್ಲಿ ರುಬೆಲ್ಲಾ ಸೋಂಕು ತಗುಲಿದ್ದರೆ ಆಕೆಯ ದೇಹ ಹರಯಕ್ಕೆ ಬರುವ ವೇಳೆಗಾಗಲೇ ಪ್ರತಿರೋಧವನ್ನು ಬೆಳೆಸಿಕೊಂಡಿರುತ್ತದೆ. ಕಾರಣ ಆಕೆಗೆ ಮತ್ತೆ ರುಬೆಲ್ಲಾ ಸೋಂಕು ತಗಲುವ ಸಂಭವ ಅತಿ ಕಡಿಮೆ. (ಈ ಕಾರಣಕ್ಕೇ ಹಿಂದೆ ಯಾರಿಗಾದರೂ ರುಬೆಲ್ಲಾ ತಗುಲಿದ್ದರೆ ಅಂಥವರ ಮನೆಗೆ ಹುಡುಗಿಯರನ್ನು ಬಿಟ್ಟುಬರುತ್ತಿದ್ದರಂತೆ!)
ಆರೋಗ್ಯ ಸಚಿವಾಲಯದ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬೇಕಾದ ಎಲ್ಲ ತಾಂತ್ರಿಕ ಸಲಹೆ ನೀಡಲು ವಿಶೇಷ ಸಂಸ್ಥೆಯೊಂದಿದೆ (ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಸಂಸ್ಥೆ). ರೋಗಗಳ ಹರಡುವಿಕೆ, ಲಸಿಕೆಗಳ ಅವಶ್ಯಕತೆ, ಅದರ ಗುಣಮಟ್ಟ, ಕೋಲ್ಡ್ ಚೇನ್, ಪರಿಣಾಮ ಇವೆಲ್ಲವನ್ನೂ ಅಧ್ಯಯನ ಮಾಡಲು ರಚಿಸಿರುವ ಸಂಸ್ಥೆ ಇದು. ಈ ಸಂಸ್ಥೆಗೆ ಬಿ.ಎಂ ಫೌಂಡೇಶನ್‌ನ ಆರ್ಥಿಕ ನೆರವು ಏನೂ ಇಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿಕೊಳ್ಳುತ್ತದೆ. ಆದರೆ ಅದರ ಅತ್ಯಂತ ಪ್ರಭಾವಿ ಸಲಹೆಗಾರ ಬಿಲ್ ಗೇಟ್ಸ್. ಅವರು ಒಬ್ಬ ಆರೋಗ್ಯ ತಜ್ಞ ಅಲ್ಲ, ಲಸಿಕಾ ಉದ್ದಿಮೆಯಲ್ಲಿ ಹಣ ತೊಡಗಿಸಿರುವ ವ್ಯಾಪಾರಸ್ಥ. ನಮ್ಮ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಒಬ್ಬ ವ್ಯಾಪಾರಸ್ಥನ ಇಂಗಿತದ ಮೇಲಿರಬೇಕೆ ಅಥವಾ ಸಾರ್ವತ್ರಿಕ ಆರೋಗ್ಯದ ಅಧ್ಯಯನದ ಆಧಾರದ ಮೇಲೆ ರೂಪುಗೊಂಡಿರಬೇಕೆ?
ಇದೇ ತಿಂಗಳು 6ನೇ ತಾರೀಖಿನಂದು ಕರ್ನಾಟಕ ಸರ್ಕಾರ ದಿಢೀರೆಂದು ದಡಾರ ಮತ್ತು ರುಬೆಲ್ಲಾಗಳಿಗೆ ಲಸಿಕಾ ಕಾರ್ಯಕ್ರಮವನ್ನು ಘೋಷಿಸಿತು. 9 ತಿಂಗಳಿನಿಂದ 15 ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ಈ ಎಂ.ಆರ್ ಲಸಿಕೆ ಕಡ್ಡಾಯವೆಂದು ಸಾರಿದಾಗ ಜನರಿಗೆ ಆಶ್ಚರ್ಯ. ಇದೇಕೆ ಒಮ್ಮಿಂದೊಮ್ಮಿಗೇ? ಎಲ್ಲಿಯಾದರೂ ದಡಾರ ಅಥವಾ ರುಬೆಲ್ಲಾದ ಔಟ್‌ಬ್ರೇಕ್ ಆಗಿದೆಯೇ? ಆಗುವ ಸೂಚನೆ ಸರ್ಕಾರಕ್ಕೆ ಸಿಕ್ಕಿತೇ? ಆ ಬಗ್ಗೆ ಏನೇನೂ ಸುದ್ದಿ ಇಲ್ಲ. ಸಾರ್ವಜನಿಕರಿಗೆ ಮಾಹಿತಿ ಇಲ್ಲ.
ಇಂಥದ್ದೊಂದು ಬಹುಖರ್ಚಿನ ಕಾರ್ಯಕ್ರಮ ಹಾಕುವಾಗ ವೈದ್ಯಕೀಯ, ವೈಜ್ಞಾನಿಕ ಅಂಕಿಅಂಶಗಳ ಆಧಾರ ಬೇಕಲ್ಲವೇ? ಅಂಥ ವೈಜ್ಞಾನಿಕ ಮಾಹಿತಿ ಎಲ್ಲಿದೆ? ಹಾರ್ವರ್ಡ್ ಯೂನಿವರ್ಸಿಟಿಯ ಡೇವಿಡ್ ಸ್ಟಕ್ಲರ್ ಎಂಬುವವರು ತಮ್ಮ ಒಂದು ಅಧ್ಯಯನದಲ್ಲಿ ಹೇಳುವಂತೆ ‘ರೋಗಗಳಿಂದ ಜನರ ನರಳುವಿಕೆ ಮತ್ತು ಸಾವನ್ನು ತಡೆಯಲು ಲಸಿಕಾ ಕಾರ್ಯಕ್ರಮ ಅತಿ ಮುಖ್ಯ ನಿಜ, ಆದರೆ ಮಾರುಕಟ್ಟೆಯ ಶಕ್ತಿಗಳು ಅದನ್ನು ಆಗಗೊಡುತ್ತವೆಯೇ?’
*