ADVERTISEMENT

`ಮೂಗಿನ ನೇರಕ್ಕೆ' ವ್ಯಾಖ್ಯಾನ ಬೇಡ

ಸಾಂಸ್ಕೃತಿಕ ನೀತಿ ಹೇಗಿರಬೇಕು?

ಯು.ಆರ್.ಅನಂತಮೂರ್ತಿ
Published 26 ಜುಲೈ 2013, 19:59 IST
Last Updated 26 ಜುಲೈ 2013, 19:59 IST

ರಾಜ್ಯಕ್ಕೆ ಒಂದು ಸಾಂಸ್ಕೃತಿಕ ನೀತಿ ಇರಬೇಕು ಎಂಬ ಮಾತನ್ನು ನಾವು ಬಹಳ ಜಾಗರೂಕತೆಯಿಂದ ಸ್ವೀಕರಿಸಬೇಕು. ಏಕೆಂದರೆ ಒಂದು ಸಾಂಸ್ಕೃತಿಕ ನೀತಿ ಇರಬೇಕೆಂದು ಅದನ್ನು ರೂಪಿಸಿಕೊಂಡ ಸೋವಿಯತ್ ಯೂನಿಯನ್ ತಾನು ರೂಪಿಸಿದ ನೀತಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ಅತ್ಯುತ್ತಮವಾದ ಸಾಹಿತ್ಯವನ್ನು ಬಹಿಷ್ಕರಿಸಿತು. ಪರಿಣಾಮವಾಗಿ ಇಂದು ಸೋವಿಯತ್ ಯೂನಿಯನ್‌ನ ಸಾಂಸ್ಕೃತಿಕ ಸಾಧನೆಯನ್ನು ಹುಡುಕಿದರೆ ನಮಗೆ ಸಿಗುವುದು ಶೂನ್ಯ. ಅಂದಿನ ಸರ್ಕಾರದ ನೀತಿಯನ್ನು ಮೀರಿ ಬರೆದು ಬೇರೆ ಬೇರೆ ದೇಶಗಳಲ್ಲಿ ಪ್ರಕಟಿಸಿದ ಕೃತಿಗಳಷ್ಟೇ ಇಂದು ನಾವು ಓದಬಲ್ಲ ಸೋವಿಯತ್ ಸಾಹಿತ್ಯವಾಗಿ ಉಳಿದುಕೊಂಡಿದೆ.

ಸೋವಿಯತ್ ಯೂನಿಯನ್‌ನ ಸಾಂಸ್ಕೃತಿಕ ನೀತಿಯಡಿಯಲ್ಲಿ ಬಂದ ಎಲ್ಲಾ ಸಾಹಿತ್ಯವೂ ಜೊಳ್ಳಾಗಿತ್ತು. ಅವೆಲ್ಲಾ ತಮ್ಮ ತಮ್ಮ ಸರ್ಕಾರದ ತುತ್ತೂರಿ ಊದುವ ಸಾಹಿತ್ಯವಷ್ಟೇ ಆಗಿತ್ತು. ಇದು ಚೀನಾದಲ್ಲೂ ಆಯಿತು. ಇಂಥ ಅನುಭವಗಳಿಂದಾಗಿ ಸಮಾಜವಾದಿ ಧೋರಣೆ ಇರುವ ಯಾವುದೇ ರಾಜ್ಯ ಒಂದು ಸಾಂಸ್ಕೃತಿಕ ನೀತಿಯನ್ನು ರೂಪಿಸಬೇಕೆಂದು ಹೊರಟಾಗ ಜನ ಅನುಮಾನಪಡುವುದು ಸಹಜ. ಇಂಥದ್ದೊಂದು ಸರ್ಕಾರಿ ನೀತಿ ತನಗೆ ವಿರುದ್ಧವಾಗಿರುವ ಯಾವುದನ್ನೂ ಜನರಿಗೆ ತಲುಪದಂತೆ ನೋಡಿಕೊಳ್ಳುವ ಸಾಧ್ಯತೆ ಯಾವತ್ತೂ ಇದ್ದೇ ಇರುತ್ತದೆ.

ಆಡಳಿತಾತ್ಮಕ ಕಾರಣಗಳಿಗಾಗಿ ಒಂದು ಸಾಂಸ್ಕೃತಿಕ ನೀತಿ ಬೇಕು ಎಂಬ ಮಾತನ್ನು ಒಪ್ಪಿಕೊಳ್ಳಬಹುದು. ಇದು ಆಡಳಿತಾತ್ಮಕವಾದ ನಿರ್ಧಾರಗಳ ಆಚೆಗೆ, ಸೃಜನಶೀಲ ಕ್ರಿಯೆಗೆ ಚೌಕಟ್ಟು ಹಾಕುವ ಕ್ರಿಯೆಯಾಗಬಾರದು. ಸರಳವಾಗಿ ಹೇಳುವುದಾದರೆ ಸರ್ಕಾರ ರೂಪಿಸುವ ಸಾಂಸ್ಕೃತಿಕ ನೀತಿ ಆಡಳಿತಾರೂಢ ಪಕ್ಷದ ರಾಜಕೀಯ ತಾತ್ವಿಕತೆಯ ಆಧಾರದಲ್ಲಿ ರೂಪುಗೊಳ್ಳಬಾರದು. ಹೀಗಾದರೆ ಸರ್ಕಾರ ಬದಲಾಗುವಾಗಲೆಲ್ಲಾ ಸಾಂಸ್ಕೃತಿಕ ನೀತಿಯೂ ಬದಲಾಗುತ್ತದೆ. ಕಾಂಗ್ರೆಸ್ಸಿಗರಿರುವಾಗ ಅವರಿಗೆ ಬೇಕಾದ ನೀತಿ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅದಕ್ಕೆ ಪ್ರಿಯವಾದ ನೀತಿ. ಕಮ್ಯುನಿಸ್ಟರಿದ್ದರೆ ಅವರ ಸಿದ್ಧಾಂತಕ್ಕೆ ಅನುಗುಣವಾದ ನೀತಿಗಳು ಜಾರಿಯಾಗತೊಡಗುತ್ತವೆ. ಇದರ ಪರಿಣಾಮ ನಮ್ಮ ಪಠ್ಯಪುಸ್ತಕಗಳು, ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳನ್ನೆಲ್ಲಾ ಬಾಧಿಸತೊಡಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಪಠ್ಯ ಪುಸ್ತಕಗಳಲ್ಲಿ ಗಾಂಧಿ, ನೆಹರು, ಇಂದಿರಾ, ರಾಜೀವ್‌ರ ಚಿತ್ರಗಳು ತುಂಬಿಕೊಂಡರೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೀನ್‌ದಯಾಳ್ ಉಪಾಧ್ಯಾಯ, ಹೆಡಗೇವಾರ್, ಗೋಲ್ವಾಳ್ಕರ್ ಅವರ ಚಿತ್ರಗಳು ತುಂಬಿಕೊಳ್ಳಬಹುದು.

ನಾವು ಸಾಂಸ್ಕೃತಿಕವಾಗಿ ಏನನ್ನು ಸಾಧಿಸಿದ್ದೇವೆ ಎಂಬುದು ಜನಮಾನಸದಲ್ಲಿ ಒಂದು ತಾರ್ಕಿಕ ರೂಪ ಪಡೆದು ಸಹಜವಾಗಿ ನೆಲೆಗೊಳ್ಳುವ ತನಕ ಕಾಯಬೇಕೇ ಹೊರತು ಅದನ್ನು ಹೊರಗಿನಿಂದ ಹೇರಬಾರದು. ಭಾರತದ ಸಂಸತ್ ಭವನದಲ್ಲಿ ಸಾವರ್ಕರ್ ಅವರ ಚಿತ್ರವಿದೆ. ಸಾರ್ವಕರ್ ಅವರದ್ದು ಸಾಹಿತಿಯಾಗಿ, ತತ್ವಜ್ಞರಾಗಿ, ಕಾರ್ಯಸಾಧಕರಾಗಿ ಎಂಥ ವ್ಯಕ್ತಿತ್ವ ಎಂಬುದು ಜನರ ಮಧ್ಯೆ ಚರ್ಚೆಯಾಗಿ ಬೆಳೆದು ಮೂಡಬೇಕಿತ್ತು. ಆದರೆ ಅಂಥದ್ದಕ್ಕೆ ಆಸ್ಪದವನ್ನೇ ನೀಡದೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಒಂದು ಚಿತ್ರವನ್ನು ಸಂಸತ್ ಭವನಕ್ಕೆ ತಂದಿಟ್ಟಿತ್ತು. ಭಾರತೀಯ ಚಿಂತನೆಯನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಕೊಂಡೊಯ್ಯುವ ಕ್ರಿಯೆಯಲ್ಲಿ ಅನೇಕರಿದ್ದರು. ಇವರಲ್ಲಿ ಕೆಲವರು ಮಹಾನ್ ಸಾಧಕರೂ ಆಗಿರಬಹುದು. ಇವರಲ್ಲಿ ಯಾರನ್ನೇ ಆದರೂ ಪ್ರಶ್ನಿಸದೇ ಒಪ್ಪಿಕೊಳ್ಳುವುದು ಸರಿಯಲ್ಲ.

ಹಾಗೆಯೇ ಸಾರಾಸಗಟಾಗಿ ತಿರಸ್ಕರಿಸುವುದೂ ಸರಿಯಲ್ಲ. ಇವರ ಚಿಂತನೆಗಳನ್ನು ತಾತ್ವಿಕ ಸಂಘರ್ಷದ ಪ್ರಕ್ರಿಯೆಯೊಂದಕ್ಕೆ ಒಳಪಡಿಸಿ ಉಳಿಸಿಕೊಳ್ಳಬೇಕು. ಇದರ ಬದಲಿಗೆ ಅವರನ್ನು ಪೂಜ್ಯರಾದ ವ್ಯಕ್ತಿಗಳನ್ನಾಗಿಸಿ ಬಿಡುವುದು ನಿರ್ದಿಷ್ಟ ಸಂದರ್ಭದಲ್ಲಿ ಬಹಳ ಸರಿಯೆಂಬಂತೆ ಕಂಡರೂ ಎಲ್ಲಾ ಕಾಲಕ್ಕೂ ಅದು ಸಲ್ಲುವುದಿಲ್ಲ. ತಾತ್ವಿಕ ರಾಜಕಾರಣವನ್ನು ಮಾಡುವ ಯಾರೂ ಇಂಥ ಕೆಲಸ ಮಾಡಬಾರದು. ಇಂಥವುಗಳನ್ನು ಜನ ಸಮುದಾಯಗಳ ಚಿಂತನೆಗೆ ಬಿಟ್ಟು ಬಿಡಬೇಕು. ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಮುಖ್ಯರೆನಿಸುವವರು, ನಾವು ತತ್ವಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ ವಿಷಯಗಳ ಭಾಗವಾಗಿ ಕಲಿಯಬೇಕಾದ, ಚರ್ಚಿಸಬೇಕಾದ ವಿಷಯಗಳಾಗಿ ಪ್ರಸ್ತುತರಾಗಬೇಕು.

ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸಲು ಹೊರಟಿದೆ. ಈ ಸಾಂಸ್ಕೃತಿಕ ನೀತಿಯ ಪ್ರಸ್ತಾಪ ಭಾರತಕ್ಕೆ ಹೊಸತೇನೂ ಅಲ್ಲ. ಎರಡು ದಶಕಗಳ ಹಿಂದೆಯೇ ಕೇಂದ್ರ ಸರ್ಕಾರ ಒಂದು ಸಾಂಸ್ಕೃತಿಕ ನೀತಿಯನ್ನು ರೂಪಿಸಲು ಹೊರಟಿತ್ತು. ಹಿರಿಯ ಐಎಎಸ್ ಅಧಿಕಾರಿ ಪರಮೇಶ್ವರ್ ನಾರಾಯಣ್ ಹಕ್ಸರ್ ಅವರ ನೇತೃತ್ವದ ಸಮಿತಿ ಈ ಕುರಿತಂತೆ ವಿವರವಾದ ವರದಿಯೊಂದನ್ನು ಕೊಟ್ಟಿತ್ತು. ಆ ವರದಿಯ ಆಧಾರದಲ್ಲಿ ಈಗಲೂ ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸುವ ಬಗ್ಗೆ ಸರ್ಕಾರಗಳು ಮಾತನಾಡುತ್ತವೆ. ಈ ವರದಿಯ ಕೆಲವು ಅಂಶಗಳಿಗೆ ಅದರಲ್ಲೂ ಮುಖ್ಯವಾಗಿ ಸಾಂಸ್ಕೃತಿಕ ಸಂಸ್ಥೆಗಳ ಮೇಲಿನ ಸರ್ಕಾರದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿಯೂ ಸರ್ಕಾರ ತನ್ನ ಮಾತು ನೇಮಕಾತಿಯಲ್ಲಿ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಅನುದಾನಕ್ಕೇ ತಡೆಯೊಡ್ಡಿತ್ತು. ಆಗ ಅರ್ಜುನ್ ಸಿಂಗ್ ಮಾನವ ಸಂಪನ್ಮೂಲ ಸಚಿವರಾಗಿದ್ದರು. ಅವರ ಬಳಿ ನೇರವಾಗಿ ಹೋಗಿ ಸಂಪನ್ಮೂಲ ತಡೆ ಹಿಡಿದಿರುವ ಬಗ್ಗೆ ಮಾತನಾಡಿದ್ದೆ. ಪ್ರಜಾಸತ್ತಾತ್ಮಕ ಆಯ್ಕೆಯ ಮಾದರಿಯನ್ನು ಬಿಟ್ಟು ಸರ್ಕಾರವೇ ಅಧ್ಯಕ್ಷರ ನಾಮಕರಣ ಮಾಡುವುದರ ಪರವಾಗಿ ಅವರು ಮಾತನಾಡಿದ್ದರು. ಹೀಗೆ ಮಾಡುವುದು ಮುಂದೆ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಅವರ ಮೂಗಿನ ನೇರಕ್ಕೆ ನೇಮಕಕ್ಕೆ ಕಾರಣವಾಗುತ್ತದೆ ಎಂದು ನಾನು ವಾದಿಸಿದ್ದೆ. ಈಗಿನ ಸ್ಥಿತಿಯಲ್ಲಿ ಉತ್ತರದಾಯಿತ್ವ ಆಯ್ಕೆ ಮಾಡಿರುವವರಿಗೂ ಇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರದನ್ನು ಒಪ್ಪಿ ಅನುದಾನವನ್ನು ಮಂಜೂರು ಮಾಡಿದ್ದರು. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಸಾಂಸ್ಕೃತಿಕ ಸಂಸ್ಥೆಗಳು ಬಹುಮಟ್ಟಿಗಿನ ಸ್ವಾಯತ್ತತೆಯನ್ನು ಹೊಂದಿವೆ.

ಕರ್ನಾಟಕ ಸರ್ಕಾರ ಒಂದು ಸಾಂಸ್ಕೃತಿಕ ನೀತಿಯನ್ನು ಹೊಂದಬಯಸುವುದಾದರೆ ಅದು ಹೇಗಿರಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ. ಮೊದಲೇ ಹೇಳಿದಂತೆ ಈ ನೀತಿ ಎಂಬುದು ಆಡಳಿತಾರೂಢ ಪಕ್ಷ ತಾನು ನಂಬುವ, ಆಚರಿಸುವ ಮತ್ತು ಪ್ರತಿಪಾದಿಸುವ ತಾತ್ವಿಕತೆಯ ಚೌಕಟ್ಟಿನಲ್ಲಿ ಸಂಸ್ಕೃತಿಯನ್ನು ವ್ಯಾಖ್ಯಾನಿಸಬಾರದು. ಬದಲಿಗೆ ಆಡಳಿತಾತ್ಮಕ ಅನುಕೂಲಕ್ಕೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕ್ರಿಯೆಯನ್ನು ಸರಳಗೊಳಿಸುವ ರೀತಿಯಲ್ಲಿರಬೇಕು. ಈ ದೃಷ್ಟಿಯಲ್ಲಿ ನೋಡಿದಾಗ ನಮ್ಮ ಸಾಂಸ್ಕೃತಿಕ ನೀತಿಯಲ್ಲಿ ಇರಲೇಬೇಕಾದ ಕೆಲವು ವಿಚಾರಗಳಿವೆ.

ಮೊದಲನೆಯದಾಗಿ ಎಲ್ಲ ವಿಷಯಗಳ ತಿಳಿದುಕೊಳ್ಳಲು ಅನುಕೂಲವಾಗುವಂಥ ಘನವಾದ ಪುಸ್ತಕಗಳು ಕನ್ನಡದಲ್ಲಿ ಬರಬೇಕು. ಉದಾಹರಣೆಗೆ ತಂದೆ-ತಾಯಿ ಮಗುವೊಂದನ್ನು ಪುಸ್ತಕದ ಅಂಗಡಿಗೆ ಕರೆದುಕೊಂಡು ಹೋದರೆ ಆ ಮಗುವಿಗೆ ಚೆಸ್‌ನಲ್ಲಿ ಆಸಕ್ತಿ ಇದ್ದರೆ ಅದನ್ನು ಮಗು ಕನ್ನಡದಲ್ಲಿಯೇ ತಿಳಿದುಕೊಳ್ಳಲು ಅಗತ್ಯವಿರುವಂಥ ಪುಸ್ತಕ ಲಭ್ಯವಿರಬೇಕು. ಇದು ಕೇವಲ ಒಂದು ವಿಷಯಕ್ಕೆ ಸೀಮಿತವಾಗಿ ನಾನು ಹೇಳುತ್ತಿಲ್ಲ. ಹೊಸತಾಗಿ ವಿದ್ಯಾವಂತರಾಗುತ್ತಿರುವ, ಕನ್ನಡವನ್ನಷ್ಟೇ ಬಲ್ಲ ಒಂದು ದೊಡ್ಡ ವರ್ಗ ಕರ್ನಾಟಕದಲ್ಲಿದೆ. ಅವರಿಗೆ ಕಂಪ್ಯೂಟರ್, ಖಗೋಳ ವಿಜ್ಞಾನ, ಭೌತಶಾಸ್ತ್ರ, ಕ್ರಿಕೆಟ್, ಫುಟ್‌ಬಾಲ್ ಇಂಥ ಅನೇಕ ವಿಷಯಗಳ ಬಗ್ಗೆ ಆಸಕ್ತಿ ಇದ್ದರೂ ಅದನ್ನು ತಿಳಿದುಕೊಳ್ಳಲು ಅಗತ್ಯವಿರುವ ಕನ್ನಡದ ಪುಸ್ತಕಗಳ ಸಂಖ್ಯೆ ಬಹಳ ಕಡಿಮೆ. ಅದೂ ಬೇರೆ ಬೇರೆ ಹಂತದವರಿಗೆ ಬೇಕಾದ ಪುಸ್ತಕಗಳಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕನ್ನಡದಂಥ ಭಾಷೆಗಳ ಸಂದರ್ಭದಲ್ಲಿ ಇದನ್ನು ಮಾರುಕಟ್ಟೆಯೇ ಸೃಷ್ಟಿಸುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ತಾತ್ವಿಕ ಆಯ್ಕೆಗಳಿರಬಾರದು. ಒಂದು ವೇಳೆ ತಾತ್ವಿಕ ಆಯ್ಕೆಯೊಂದಿದ್ದರೆ ಅದು ಜ್ಞಾನದ ವಿಸ್ತರಣೆ ಮಾತ್ರವಾಗಿರಬೇಕು.

ಇನ್ನು ಸಾಂಸ್ಕೃತಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವ ಕ್ರಿಯೆಯಲ್ಲಿ ಸರ್ಕಾರ ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ನಗರವೂ ಈಗ ಅಸಾಧ್ಯ ವೇಗದಲ್ಲಿ ಬೆಳೆಯುತ್ತಿದೆ. ಪ್ರತಿಯೊಂದು ಮೊಹಲ್ಲಾದಲ್ಲಿಯೂ ಸಾಂಸ್ಕೃತಿಕ ಚಟುವಟಿಕೆಗೆ ಮೀಸಲಿರುವ ಒಂದು ಸಾರ್ವಜನಿಕ ಸ್ಥಳವಿರಬೇಕು. ಇದರಲ್ಲಿ ಜನರಿಗೆ ಅಗತ್ಯವಿರುವ ಉದ್ಯಾನವನ, ಗ್ರಂಥಾಲಯ, ನಾಟಕ ಇತ್ಯಾದಿಗಳನ್ನು ಆಡಲು ಅನುಕೂಲವಿರುವ ಸಣ್ಣ ರಂಗಮಂದಿರ ಇಂಥವುಗಳು ಒಳಗೊಂಡಿರಬೇಕು. ಇಲ್ಲಿರುವ ಗ್ರಂಥಾಲಯ ಎಲ್ಲಾ ಆಸಕ್ತರಿಗೂ ತೆರದಿರಬೇಕು. ಅರುಂಧತಿ ನಾಗ್ ಮಾಡಿದ ಕೆಲಸ ಪ್ರತಿಯೊಂದು ಮೊಹಲ್ಲಾದಲ್ಲಿಯೂ ಆಗುವಂಥ ಕೆಲಸ ಸರ್ಕಾರದ ಸಾಂಸ್ಕೃತಿಕ ನೀತಿಯ ಭಾಗವಾಗಬೇಕು. ಇದು ರಂಗ ಸಂಸ್ಕೃತಿ, ಪುಸ್ತಕ ಸಂಸ್ಕೃತಿ ಹಾಗೆಯೇ ಮುಕ್ತ ಜ್ಞಾನದ ಹಂಚಿಕೆಗೂ ಒಂದು ವೇದಿಕೆಯಾಗುತ್ತದೆ.

ಸಾಂಸ್ಕೃತಿಕ ನೀತಿ ಒಳಗೊಂಡಿರಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಸರ್ಕಾರ ಕೈಗೆತ್ತಿಕೊಳ್ಳುವ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳನ್ನೂ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ನೋಡುವುದನ್ನು ಖಾತರಿಪಡಿಸುವುದು. ಆಗ ಸಹಜವಾಗಿಯೇ ಬಡಾವಣೆಯೊಂದರ ಅಭಿವೃದ್ಧಿಯ ಭಾಗವಾಗಿಯೇ ಗ್ರಂಥಾಲಯ, ರಂಗಮಂದಿರ, ಉಪಾಹಾರ ಗೃಹ ಮತ್ತು ಉದ್ಯಾನವನದಂಥ ಯೋಜನೆಗಳೂ ಜಾರಿಯಾಗುತ್ತವೆ. ಅದಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಅಭಿವೃದ್ಧಿ ಚಟುವಟಿಕೆಯೂ ಮಕ್ಕಳು, ಅಂಗವಿಕಲರು ಮತ್ತು ವೃದ್ಧರನ್ನು ಒಳಗೊಳ್ಳುವ, ಕನಿಷ್ಠ ಅವರನ್ನು ಕಡೆಗಣಿಸದೇ ಇರುವ ವ್ಯವಸ್ಥೆಯೊಂದು ರೂಪುಗೊಳ್ಳುತ್ತದೆ. ಅಂಗವಿಕಲರಿಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿರ್ಧಾರವೊಂದನ್ನು ಕೈಗೊಂಡು ಅವರಿಗೆ ಪ್ರವೇಶಾನುಕೂಲ ಇಲ್ಲದ ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು ಪುನರ್‌ನಿರ್ಮಿಸಬೇಕು.

ಅಕಾಡೆಮಿಗಳು ಮತ್ತಿತರ ಸಂಸ್ಥೆಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾವ ಪಕ್ಷದವರನ್ನು ಟೀಕಿಸಿಯೂ ಪ್ರಯೋಜನವಿಲ್ಲ. ಎಲ್ಲರೂ ತಾವು ಅಧಿಕಾರದಲ್ಲಿದ್ದಾಗ ತಮಗೆ ಬೇಕಾದವರೇ ಇಂಥ ಸಂಸ್ಥೆಗಳಲ್ಲಿರಬೇಕೆಂದು ಬಯಸಿ ಮುಂದುವರಿಯುತ್ತಿರುತ್ತಾರೆ. ಆದರೆ ಕೇರಳದಂಥ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಸಾಹಿತ್ಯ ಅಕಾಡೆಮಿಯಂಥ ಸಂಸ್ಥೆಗೆ ಈ ತನಕ ನಿರ್ದಿಷ್ಟ ಪಕ್ಷವನ್ನಷ್ಟೇ ಪ್ರತಿನಿಧಿಸುವ ಒಬ್ಬರು ಮುಖ್ಯಸ್ಥರಾದುದಿಲ್ಲ. ಅಷ್ಟರಮಟ್ಟಿಗೆ ನಮ್ಮ ಸಾಂಸ್ಕೃತಿಕ ಕ್ಷೇತ್ರ ಗಟ್ಟಿಯಾಗಿದೆ. ಇಂಥ ಸಂಸ್ಥೆಗಳಿಗೆ ನೇಮಕ ಮಾಡುವಾಗ ಮತ್ತೊಂದು ಸರ್ಕಾರ ಬಂದಾಗ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾಯಿಸಲೇಬೇಕಾದ ಅನಿವಾರ್ಯತೆ ಎದುರಾಗದಂಥ ವ್ಯಕ್ತಿಗಳನ್ನು ನೇಮಿಸುವ ಪರಿಪಾಠ ಆರಂಭಿಸಬೇಕು.

ಎಲ್ಲದಕ್ಕಿಂತ ಮುಖ್ಯವಾಗಿ ಆಡಳಿತಾರೂಢ ಪಕ್ಷಗಳು ನಂಬುವ ತಾತ್ವಿಕತೆಯನ್ನು ಪ್ರಚಾರ ಮಾಡುವುದಕ್ಕೆ, ಪ್ರತಿಪಾದಿಸುವುದಕ್ಕೆ ಬೇಕಾದ ಸಂಪನ್ಮೂಲ ಮತ್ತು ಸಲಕರಣೆಗಳನ್ನು ಸರ್ಕಾರಿ ಭಂಡಾರ ಮತ್ತು ವ್ಯವಸ್ಥೆಯಿಂದ ಪಡೆಯುವುದನ್ನು ತಡೆಯಬೇಕು. ಎಲ್ಲವನ್ನೂ ಮಾಡಿ ಈ ವಿಷಯದಲ್ಲಿ ಎಚ್ಚರ ವಹಿಸದೇ ಇದ್ದರೆ ಮತ್ತೆ ಆಡಳಿತಾರೂಢರ ಮೂಗಿನ ನೇರಕ್ಕೆ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಕ್ರಿಯೆ ಮುಂದುವರಿಯುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.