ADVERTISEMENT

‘ರಾಜಕೀಯ ಬುರ್ಖಾ’ ತೊಟ್ಟು ಬೆತ್ತಲಾಗುವವರು!

ಬೊಳುವಾರು ಮಹಮದ್ ಕುಂಞಿ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಬೊಳುವಾರು ಮಹಮ್ಮದ್ ಕುಂಞಿ ಸಾಹಿತಿ
ಬೊಳುವಾರು ಮಹಮ್ಮದ್ ಕುಂಞಿ ಸಾಹಿತಿ   

ಅದು 1978 ಅಥವಾ 1979. ಕಡಲತೀರದ ಭಾರ್ಗವನಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕ ಸಂಭ್ರಮದ ದಿನಗಳು ಅವು. ಕಾರಂತರಿಗೆ ಸನ್ಮಾನವೊಂದು ನೆವ. ನಿಜವಾದ ಆಸೆ ಅವರನ್ನು ನೋಡುವುದು; ಕೇಳುವುದು. ಮಣಿಪಾಲದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮ ಅದು.

ಒಂದಷ್ಟು ಜನರೊಂದಿಗೆ ‘ನಾವೂ’ ಇದ್ದೆವು. ನಾವೂ ಎಂದರೆ, ನಾನು ಮತ್ತು ನನ್ನ ಪತ್ನಿ ಜುಬೇದಾ. ಸ್ವಲ್ಪ ತಡವಾಗಿ ಬಂದಿದ್ದ ಡಾ. ವಿ.ಎಸ್.ಆಚಾರ್ಯರು, ನಾಲ್ಕು ಅಥವಾ ಐದನೇ ಸಾಲಲ್ಲಿ ಕುಳಿತಿದ್ದ ನನ್ನ ಪಕ್ಕದಲ್ಲೇ ಕುಳಿತುಬಿಟ್ಟಾಗ ನನಗೆ ರೋಮಾಂಚನ. ಯಾಕೆಂದರೆ, ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಜೈಲಲ್ಲಿ ಕುಳಿತು ಗೆದ್ದ ಹಾಗೂ ಲೋಕಸಭಾ ಚುನಾವಣೆಗೆ ನಿಂತು ಸೋತ ದಿನಗಳು ಅವು. ಮಾತ್ರವಲ್ಲ, ಮಣಿಪಾಲದ ಆಸುಪಾಸಿನ ಆರು ಮೈಲಿ ಸುತ್ತಳತೆಯಲ್ಲಿ ನಾನು ‘ವರ್ಲ್ಡ್‌ ಫೇಮಸ್’ ಆಗಿದ್ದ ದಿನಗಳೂ ಅವೇ.

ಅವರ ಪಕ್ಕದಲ್ಲಿದ್ದವರೊಬ್ಬರು ನನ್ನನ್ನು ಆಚಾರ್ಯರಿಗೆ ಪರಿಚಯಿಸಿದರು. ಪತ್ನಿಯನ್ನು ನಾನು ಪರಿಚಯಿಸಿದೆ. ಅವರು ಅರಳಿದ ಕಣ್ಣುಗಳಿಂದ ನನ್ನನ್ನು ದಿಟ್ಟಿಸುತ್ತಾ ‘ಇದುವರೆಗೆ ಇಂಥ ಪ್ರೋಗ್ರಾಮ್‌ಗಳಿಗೆ ಮುಸ್ಲಿಮ್ ಹೆಂಗಸ್ರು ಬಂದದ್ದನ್ನು ನೋಡಿದವನಲ್ಲ. ನೀವು ಹೆಂಡತಿಯನ್ನು ಕರೆದುಕೊಂಡು ಬಂದಿದ್ದೀರಿ; ಅದೂ ಬುರ್ಖಾ ಇಲ್ಲದೆ!’ ಎಂದು ಶ್ರೀರಾಮಚಂದ್ರನಂತೆ ನಕ್ಕರು.

ಅಷ್ಟರಲ್ಲಿ ನಮ್ಮ ಬೆನ್ನ ಸಾಲಲ್ಲಿ ಕುಳಿತಿದ್ದ, ನನ್ನನ್ನು ಬಹಳವಾಗಿ ಇಷ್ಟಪಡುತ್ತಿದ್ದ ಬ್ಯಾಂಕಿನ ವರಿಷ್ಠ ಅಧಿಕಾರಿಯೊಬ್ಬರು ಮುಂದಕ್ಕೆ ಬಾಗಿ ಅತಿ ಉತ್ಸಾಹದಿಂದ ‘ನಿಮ್ಗೆ ಗೊತ್ತಿಲ್ಲ ಆಚಾರ್ರೇ, ಇವರನ್ನು ಮುಸ್ಲಿಮ್ ಅಂತ ಹೇಳಿದವರಿಗೆ ಮೆಟ್ಟಿನಲ್ಲಿ ಹೊಡೀಬೇಕು. ಇವರು ಮುಸ್ಲಿಮ್ ಆದರೂ ನಮ್ಮ ಹಾಗೆಯೇ... ಹ್ಹ... ಹ್ಹಾ...’ ಎಂದು ಮಹಿಷಾಸುರನನ್ನೂ ಮೀರಿಸುವಂತೆ ಗಹಗಹಿಸಿದ್ದರು.

ADVERTISEMENT

ಆಚಾರ್ಯರಿಗೆ ಅದೆಲ್ಲಿಂದ ಸಿಟ್ಟು ಬಂದಿತ್ತೋ... ‘ನಮ್ಮ ಹಾಗೆ ಅಂದ್ರೆ ಎಂಥದ್ದು ಶೆಟ್ರೇ, ಹಾಗೆಲ್ಲ ಮಾತಾಡ್ಬಾರ್ದು. ನಿಮ್ಮ ಮಾತಿನ ಒಳಾರ್ಥ ಎಂಥದ್ದು ಅಂತ ನಿಮ್ಗೆ ಗೊತ್ತುಂಟಾ?’ ಎಂದು ಸಿಡುಕಿದ್ದರು. ಅಷ್ಟರಲ್ಲಿ ಕಾರಂತರು ಪ್ರತ್ಯಕ್ಷರಾದ್ದರಿಂದ ಸಭಾಂಗಣ ಸ್ತಬ್ಧವಾಯಿತು.

ಕಾರಂತರಿಗೆ ಅಭಿನಂದನೆಗಳು ಶುರುವಾದವು. ಅಭಿಮಾನಿಯೊಬ್ಬರು ಕಾರಂತರನ್ನು ಸಹಜವಾಗಿ ಆರಾಧಿಸುತ್ತಾ, ‘ಮೊನ್ನೆ ಮೊನ್ನೆಯಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಇವರಿಗೆ ಕಲೆ ರಕ್ತಗತವಾಗಿ ಬಂದಿದೆ’ ಎಂದುಬಿಟ್ಟರು; ಅಷ್ಟೆ. ವೇದಿಕೆಯ ನಡುವೆ ತಲೆತಗ್ಗಿಸಿ, ಕಣ್ಣು ಮುಚ್ಚಿ ಕುಳಿತಿದ್ದ ಕಾರಂತರು ದಢಕ್ಕನೆ ಎದ್ದು ನಿಂತು, ಎಡಗೈಯಾಡಿಸುತ್ತಾ, ‘ರಕ್ತಗತವಾಗಿ ಬರುವುದು ಆಸ್ತಮಾ ರೋಗ, ಕಲೆ ಅಲ್ಲ’ ಎಂದು ಗರ್ಜಿಸಿ, ಎದ್ದಷ್ಟೇ ಸ್ಪೀಡಿನಲ್ಲಿ ಕುಳಿತಾಗ ಇಡೀ ಸಭೆಯ ಉಸಿರು ನಿಂತಿತ್ತು.

‘ಅಲ್ಲಾಹು’ ಒಬ್ಬನನ್ನು ಹೊರತುಪಡಿಸಿ ಬೇರಾರನ್ನೂ, ಬೇರೇನನ್ನೂ ಆರಾಧಿಸಬೇಕಿಲ್ಲದ ಮುಸ್ಲಿಮರಿಗೆ, ಪ್ರವಾದಿ ಮುಹಮ್ಮದರ ಮೂಲಕ ಅಲ್ಲಾಹುವೇ ಅವತೀರ್ಣಗೊಳಿಸಿದ್ದಾನೆಂದು ವಿಶ್ವಾಸವಿರಿಸಲಾಗುವ ಪವಿತ್ರ ಕುರಾನ್ ಗ್ರಂಥವೂ ಆರಾಧ್ಯ ಗ್ರಂಥವಲ್ಲ. ಕುರಾನ್ ಗ್ರಂಥದ ಮೇಲೆ ಕೈಯಿರಿಸಿ ‘ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಎಂದು ಆಣೆ ಮಾಡುವುದನ್ನೂ ‘ಧರ್ಮ’ ಸಮ್ಮತಿಸುವುದಿಲ್ಲ.

ಕುರಾನ್ ಗ್ರಂಥವು ಮುಸ್ಲಿಮರಿಗೆ ಮುಸ್ಲಿಮರಂತೆ ಬದುಕಲು ಕಲಿಸುವ ಒಂದು ‘ರಾಜಮಾರ್ಗ’. ಆದರೆ, ಆ ರಾಜಮಾರ್ಗದ ಯಾವುದೇ ಬದಿಯಲ್ಲೂ ಶಾಲೆಯ ತರಗತಿಗಳಲ್ಲೂ ಹೆಣ್ಣು ಮಕ್ಕಳು ಬುರ್ಖಾ ಧರಿಸಿಯೇ ಕುಳಿತುಕೊಳ್ಳಬೇಕೆಂಬ ಫಲಕ ನೆಟ್ಟಿಲ್ಲ.

ಹೊಸತಿಗೆ ಸುಲಭವಾಗಿ ತೆರೆದುಕೊಳ್ಳಲೊಲ್ಲದ ಸಾಂಪ್ರದಾಯಿಕ ಮನೆಯ ಕಿಟಕಿ ಸಂಧಿಯಿಂದ ಹೊಸ ಬದುಕಿನತ್ತ ಆಸೆಯಿಂದ ದಿಟ್ಟಿಸುವ ‘ಹೆಣ್ಣುಗಳು’ ಎದುರಿಸಬೇಕಾದ ‘ಒಳಗಿನ’ ಅಡೆತಡೆಗಳು ನೂರಲ್ಲ; ಸಾವಿರ. ಆದರೆ, ಆ ಎಲ್ಲ ಒಳಗಿನ ಅಡ್ಡಿ ಆತಂಕಗಳನ್ನೂ ಜಾಣತನದಿಂದ ನಿವಾರಿಸಿಕೊಂಡು, ಹೊಸ ಬದುಕನ್ನು ಓದಬಯಸುವ ಆ ಹೆಣ್ಣುಗಳ ಆಸೆಗಳನ್ನು ಮೊಳಕೆಯಲ್ಲೇ ಚಿವುಟಿದರೆ ನಮ್ಮನ್ನು ಯಾವ ದೇವರೇಕೆ, ಯಾವ ಸೈತಾನನೂ ಕ್ಷಮಿಸಲಾರ. ಸಾಕ್ಷಾತ್ ದೇವರ ಪ್ರತಿರೂಪದಂತಿರುವ ನಮ್ಮ ಗಂಡು ಮಕ್ಕಳನ್ನು ನಮ್ಮ ರಾಜಕೀಯ ಲಾಭಕ್ಕಾಗಿ, ‘ನನ್ನ-ದೇಶ’, ‘ನನ್ನ-ಭಾಷೆ, ನನ್ನ-ಜಾತಿ, ‘ನನ್ನ-ಧರ್ಮ’ಗಳ ನೆವದಲ್ಲಿ ಕೆರಳಿಸಿ ಕುಣಿಸುವುದು ನಮಗೊಂದು ಚಟವಾಗಿಬಿಟ್ಟಿದೆ.

ಈ ಚಟದ ಕಾರಣದಿಂದಾಗಿಯೇ ನಾವಿರಬೇಕಾದ ಜೈಲುಗಳ ಕಂಬಿಗಳನ್ನು ನಮ್ಮ ಗಂಡು ಮಕ್ಕಳು ಎಣಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಓದುವ ಮಕ್ಕಳು ಒಂದು ಬಾರಿ ಪೊಲೀಸ್‌ ಠಾಣೆ, ಕೋರ್ಟ್, ಜೈಲು ಅಂತ ಟೊಪ್ಪಿಯಾಟ ಆಡಲಾರಂಭಿಸಿದರೆ ಅವರ ಬದುಕು ಮುರುಟಿಹೋದಂತೆ. ನಮ್ಮ ತೆವಲಿಗಾಗಿ ನಮ್ಮದೇ ಗಂಡು ಮಕ್ಕಳ ಭವಿಷ್ಯಕ್ಕೆ ಮಸಿ ಬಳಿಯುವ ನಮ್ಮನ್ನು ಯಾವ ದೇವರೇಕೆ, ಯಾವ ಸೈತಾನನೂ ಕ್ಷಮಿಸಲಾರ.

ಕಾರಂತರು ಹೇಳುವಂತೆ ‘ದ್ವೇಷ’ವೆಂಬುದು ಗುಣವಾಗದ ಆಸ್ತಮಾ ಕಾಯಿಲೆ. ಅರವತ್ತು ವರ್ಷಗಳ ಹಿಂದಿನ ದಿನಗಳಲ್ಲಿ ಉಮ್ಮನ ಆಸ್ತಮಾ ಕಾಯಿಲೆಗೆ ಎರಡಾಣೆಗೆ ನಾಲ್ಕರಂತೆ ಸಿಗುತ್ತಿದ್ದ ‘ಎಫೆಡ್ರಿನ್’ ಮಾತ್ರೆಗಳು ತಾತ್ಕಾಲಿಕ ರಾಮಬಾಣವಾಗಿದ್ದವು. ಆದರೆ ಇಂದು, ಆ  ‘ರಾಮಬಾಣ’ವೇ ಆಸ್ತಮಾ ಕಾಯಿಲೆಯಂತೆ ಉಸಿರುಗಟ್ಟಿಸುತ್ತಿದೆ. ಇದರ ನಿವಾರಣೆಗೆ ಹೊಸ ಮಾತ್ರೆ ತಯಾರಿಸುವ ಹೊಣೆ ನಮ್ಮೆಲ್ಲರದ್ದು.

ಆ ಮಾತ್ರೆಯ ಹುಡುಕಾಟದಲ್ಲಿದ್ದ ಕಾರಣದಿಂದಲೇ ಇರಬಹುದು, ‘ನಾನು-ನಮ್ಮದು’ ಎಂಬ ಶ್ರೇಷ್ಠತೆಯ ವ್ಯಸನಕ್ಕೆ ತುತ್ತಾಗದೆ ಬದುಕುತ್ತಿದ್ದ ವಿ.ಎಸ್.ಆಚಾರ್ಯರು, ‘ಅವರು ನಮ್ಮ ಹಾಗೇ ಅಂದ್ರೆ ಏನು ಶೆಟ್ರೇ...?’ ಅಂತ ಸಿಡುಕಿದ್ದು. ಆದ್ದರಿಂದಲೇ, ಆ ಆಚಾರ್ಯರು ಮುತ್ತುಪ್ಪಾಡಿಯ ಜನಮನದಲ್ಲಿ ಈವತ್ತೂ ಶಾಸಕರಾಗಿ ಬದುಕುತ್ತಿರುವುದು.

ಬರವಣಿಗೆ ಆರಂಭಿಸಿದ್ದ ದಿನಗಳಲ್ಲಿ, ‘ನಿನ್ನ ಕತೆಗಳೆಲ್ಲ ಓಕೆ. ಆದರೆ, ಅವರು ಶಾಲೆಗೆ ಬರುವುದಿಲ್ಲ ಯಾಕೆ?’ ಎಂದು ಪ್ರಶ್ನಿಸುತ್ತಿದ್ದ ಗೆಳೆಯರಲ್ಲೇ ಬದುಕಿರುವ ಕೆಲವರನ್ನು ಈವತ್ತು ಮಾತಿಗೆಳೆದರೆ, ‘ನಿಮ್ಮ ಹುಡುಗಿಯರು ನಮ್ಮ ಕಾಲೇಜ್ನಲ್ಲಿ ನಮ್ಮ ಹುಡುಗಿಯರನ್ನು ಮೀರಿಸಿ ರ್‍ಯಾಂಕ್‌ ಪಡೆಯುತ್ತಿದ್ದಾರೆ ಅಂತ ಹೊಟ್ಟೆಯುರಿಯಿಂದ ಈ ಮಾತು ಹೇಳ್ತಾ ಇಲ್ಲ ಇವ್ನೇ. ನಿಮ್ಮವ್ರು ಯಾರಿಗೂ ಕಾಣಿಸದಂತೆ ಬುರ್ಖಾದೊಳಗೆ ಅಡಗಿ ಕಾಲೇಜಿಗೆ ಬರುವುದು ಸರಿಯಾ? ರೂಲ್ಸ್ ಅಂದ ಮೇಲೆ ಎಲ್ರಿಗೂ ಕಾಮನ್ ಆಗಿರ್ಬೇಕಾ ಬೇಡ್ವಾ?’ ಎಂದು ದುಃಖಿಸುವಾಗ ನಗು ಬರುತ್ತದೆ.

ನಮ್ಮದೇ ಹಂಪಿಯಲ್ಲಿದ್ದ ‘ಸೀತೆಯ ಸೆರಗು’, ‘ಸುಗ್ರೀವ ಅವಿತಿದ್ದ ಜಾಗ’, ನನ್ನೂರ ಹೆದ್ದಾರಿಯ ಪಕ್ಕದಲ್ಲೇ ಇದ್ದ ‘ಹನುಮಂತ ಮೆಟ್ಟಿದ ಕಲ್ಲು’ ಇತ್ಯಾದಿ ಸುಖಬಾಲ್ಯದ ನೆನಪುಗಳನ್ನೇ ಅಳಿಸಿಹಾಕಿ, ಸಾವಿರಾರು ಮೈಲು ದೂರದ ಹೆರಿಗೆ ಮನೆಯೊಂದರಲ್ಲಿ ಶ್ರೀರಾಮಚಂದ್ರನನ್ನು ಬಂಧಿಸಿಟ್ಟಿರುವ ನಮಗೆ ಇವೆಲ್ಲ ಗೊತ್ತಿಲ್ಲವೆಂದೇನೂ ಅಲ್ಲ. ಇವೆಲ್ಲ ಮತ್ತು ಇವೆಲ್ಲದಕ್ಕಿಂತ ಹೆಚ್ಚು ಗೊತ್ತಿರುವುದರಿಂದಲೇ ಮೊನ್ನೆಮೊನ್ನೆಯವರೆಗೂ ನಮ್ಮೆಲ್ಲರ ಮತಪೆಟ್ಟಿಗೆಯಾಗಿದ್ದ ಶ್ರೀರಾಮ, ಕಾಲು ಶತಮಾನದಿಂದಲೂ ಗರ್ಭಗುಡಿಯಿಂದ ಹೊರಗಾಗಿರುವುದು.

ದಶಕಗಳ ಹಿಂದೆಯೆಲ್ಲ ಚುನಾವಣೆಗಳ ಕರಪತ್ರಗಳಲ್ಲಿ ರಾರಾಜಿಸುತ್ತಿದ್ದ ಅಯೋಧ್ಯೆಯ ಮಹಾರಾಜ ಇದೀಗ ಮಾರಾಟವಾಗದುಳಿಯುವ ಹಳೆಯ ಸರಕು. ಆತನೀಗ ನಮ್ಮನ್ನು ಅಧಿಕಾರಕ್ಕೇರಿಸಬಲ್ಲ ಶಕ್ತಿಶಾಲಿ ವಾಸುದೇವನಾಗಿಲ್ಲ: ಪ್ರಣಾಳಿಕೆಗಳ ಸಂಖ್ಯೆಯೊಂದಕ್ಕೆ ಸೀಮಿತವಾದ ‘ಬಿಲ್ ಬೋರ್ಡ್’ ಅಷ್ಟೆ. ಹೊಸ ಹೊಸ ಚುನಾವಣೆಗಳನ್ನು ಗೆಲ್ಲಬೇಕಾದ ನಾವು ಹೊಸ ಹೊಸ ಶ್ರೀರಾಮರ ಹುಡುಕಾಟದಲ್ಲಿದ್ದೇವೆ.

ಆ ಶೋಧದಲ್ಲಿ ಸಿಕ್ಕಿದ ‘ಮಾಯಾಜಿಂಕೆ’ಯೇ ಈ ಕಪ್ಪು ಬುರ್ಖಾ ಯಾನೆ ಕೇಸರಿ ಶಾಲು. ತಮ್ಮ ಬೆರಳ ತುದಿಗೆ ಮೊತ್ತ ಮೊದಲ ಬಾರಿಗೆ ಮಸಿಬಳಿಯಲು ಉತ್ಸುಕತೆಯಿಂದ ಕಾದಿರುವ ನಮ್ಮ ಯುವಮನಸ್ಸುಗಳನ್ನು, ಮತಪೆಟ್ಟಿಗೆಯೊಳಗೆ ದಫನ ಮಾಡಲು ಇದಕ್ಕಿಂತ ಸುಂದರ ಪ್ರಣಾಳಿಕೆಯು ಸದ್ಯಕ್ಕಂತೂ ನಮಗೆ ಕಾಣಿಸುತ್ತಿಲ್ಲ. ಆದ್ದರಿಂದಲೇ ನಾವೆಲ್ಲ ಒಂದಾಗಿ ಕೈಜೋಡಿಸಿದ್ದೇವೆ.

ಇದೀಗ, ವಿದ್ಯಾಸಂಸ್ಥೆಗಳೆಲ್ಲ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆ ಪ್ರಶ್ನೆಪತ್ರಿಕೆಗಳ ತಯಾರಿಯಲ್ಲಿ ‘ಬಿಜಿ’ಯಾಗಿವೆ. ವಿದ್ಯಾರ್ಥಿಗಳೆಲ್ಲ ಕಣ್ಣಿಗೆ ಎಣ್ಣೆಬಿಟ್ಟು ಓದಬೇಕಾದ ದಿನಗಳಿವು. ಆದರೆ, ಶಾಲಾ ಆವರಣಗಳಲ್ಲಿ ಮೊಳಗುವ ಕಪ್ಪು-ಕೇಸರಿ ಗಡಸು ಘೋಷಣೆಗಳ ನಡುವೆ, ತರಗತಿಗಳಲ್ಲಿ ಕೇಳಿಸಬೇಕಾಗಿದ್ದ ಗುರುಧ್ವನಿಗಳು ಕ್ಷೀಣಿಸಿವೆ.

ಯಾವುದೇ ಬಗೆಯ ಪರಿಹಾರವನ್ನೂ ತೀರ್ಮಾನಿಸಲಾಗದ ಆಡಳಿತ ಮಂಡಳಿಗಳು, ‘ಯಾರು ಏನನ್ನು ಧರಿಸಿ ಅಥವಾ ಧರಿಸದೆಯೆ ಬಂದರೂ ನಿಮಗೆ ಸ್ವಾಗತ’ ಎಂದು ಬರೆದ ಶಾಂತಿ ಬಾವುಟಗಳನ್ನು ಹಾರಿಸುತ್ತಿವೆ. ಯಾವ ಪ್ರದೇಶದಲ್ಲಿ ಯಾರ ಪರವಾಗಿ ‘ಬ್ಯಾಟಿಂಗ್’ ಮಾಡಿದರೆ ಎಷ್ಟು ವಿಕೆಟ್‌ ಬೀಳಬಹುದು ಎಂಬ ಲೆಕ್ಕಾಚಾರಗಳಲ್ಲಿ ನಮ್ಮ ಸರ್ಕಾರಗಳು ಮಂಡೆಬಿಸಿ ಮಾಡಿಕೊಳ್ಳುತ್ತಿವೆ.

ಈ ಕಪ್ಪು-ಕೇಸರಿ ಬಣ್ಣಗಳ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವ ನಾವು, ‘ಯು.ಪಿ.ಯಲ್ಲಿ ಯಾರು ಗೆದ್ದಾರು? ಜಯಲಲಿತಾರದ್ದು ಸಾವೇ ಅಥವಾ ಕೊಲೆಯೇ?’ ಎಂಬಿತ್ಯಾದಿ ಆಧ್ಯಾತ್ಮಿಕ ಚರ್ಚೆಗಳಲ್ಲಿ ಬಿಜಿಯಾಗಿದ್ದೇವೆ. ಆದರೂ ನಡುನಡುವೆ ಬಿಡುವು ಮಾಡಿಕೊಂಡು ಮಕ್ಕಳಿಗಾಗಿ ಕಪ್ಪು- ಕೇಸರಿ ವಸ್ತ್ರಗಳ ಶಾಪಿಂಗ್ ನಡೆಸುತ್ತಿದ್ದೇವೆ. ಈ ತಮಾಷೆಯ ಮಾತುಗಳಿಗೆ ಗಂಭೀರವಾದ ಭಾಷ್ಯ ಬಯಸುವವರು, ಗಂಡು ಮಕ್ಕಳಿಲ್ಲದ, ಬರೇ ಹೆಣ್ಣು ಮಕ್ಕಳನ್ನು ಹೆತ್ತಿರುವ ತಾಯಂದಿರಲ್ಲಿ ಗುಟ್ಟಾಗಿ ಚರ್ಚಿಸಬಹುದು.

ಯಾಕೆಂದರೆ, ISI Mark ಹೊಂದಿದವನೊಬ್ಬ ಏನು ಹೇಳಿದರೂ ನಾವು ಕೇಳಿಸಿಕೊಳ್ಳುವುದು ನಮ್ಮ ಮಾತುಗಳನ್ನು ಮಾತ್ರ. ಅವನು ಏನನ್ನು ಬರೆದರೂ ಅದರಲ್ಲಿ ನಾವು ಓದುವುದು ನಮ್ಮ ಮಾತುಗಳನ್ನು ಮಾತ್ರ. ಒಂದು ವೇಳೆ, ಒಂದು ಬಾರಿ ಓದಿದ್ದು ಸಾಲದೆನ್ನಿಸಿ ಎರಡನೆಯ ಬಾರಿ ಓದಿದ್ದಿದ್ದರೆ, ಅದು ಬರೆದವನನ್ನು ಪ್ರಶ್ನಿಸಲು ಮಾತ್ರ.

ಯಾವುದಾದರೊಂದು ಸಾಂಪ್ರದಾಯಿಕ ಅಥವಾ ಧಾರ್ಮಿಕ ಸಮಸ್ಯೆ ಎದುರಾದಾಗ ಪರಿಹಾರ ಬಯಸಿ ಒಬ್ಬರು ಅಥವಾ ಒಂದು ಗುಂಪು, ಮತಪಂಡಿತರೊಬ್ಬರನ್ನು ಭೇಟಿಯಾಗಿ ಸಮಸ್ಯೆಗಳನ್ನು ನಿವೇದಿಸಿಕೊಂಡಾಗ, ಆ ಮತಪಂಡಿತರು ಸೂಚಿಸುವ ಅಭಿಪ್ರಾಯವನ್ನು ‘ಫತ್ವಾ’ ಎಂದು ಕರೆಯುತ್ತಾರೆ. ಯಾವುದಾದರೊಂದು ಜಮಾತಿನ ಮತಪಂಡಿತರು, ‘ಬುರ್ಖಾ ಧರಿಸದೆ ಶಾಲೆಗೆ ಹೋಗುವುದು ಹರಾಮ್’ ಎಂಬುದಾಗಿ ‘ಫತ್ವಾ’ ನೀಡಿದರೆ ಆ ‘ಫತ್ವಾ’ ಜಗತ್ತಿನ ಮುಸ್ಲಿಮರೆಲ್ಲರಿಗೂ ಅನ್ವಯವಾಗಬೇಕಾಗಿಲ್ಲ.

ಬದಲಾಗಿ, ‘ಬುರ್ಖಾ ಧರಿಸದೆ ಶಾಲೆಗೆ ಹೋಗುವುದು ಸರಿಯೇ?’ ಎಂಬ ನಿರ್ದಿಷ್ಟ ಪ್ರಶ್ನೆಯನ್ನು ಹೊತ್ತು ತಂದವರಿಗಷ್ಟೇ ಆ ‘ಫತ್ವಾ’ ಅನ್ವಯವಾಗುತ್ತದೆ (ವಿವರಗಳಿಗೆ ‘ಓದಿರಿ’- ‘ಸ್ವಾತಂತ್ರ್ಯದ ಓಟ’). ಒಟ್ಟಿನಲ್ಲಿ ‘ಫತ್ವಾ’ ಎಂದರೆ ಒಂದು ‘ಒಪೀನಿಯನ್’ (ಅಭಿಪ್ರಾಯ) ಅಷ್ಟೆ.

ಅದುವೇ ಅಂತಿಮ ಸತ್ಯವಲ್ಲ. ಅಂತೆಯೇ, ನಮ್ಮ ನಾಡಿನ ಜನಮಾನಸದಲ್ಲಿ ಇದ್ದ ಶ್ರೀರಾಮನನ್ನು ಕಸಿದುಕೊಂಡು ಹೋದ ದಿನಗಳಿಂದಲೂ ಸುದ್ದಿ ಮಾಧ್ಯಮದ ‘ಅನ್ನ’ವಾಗಿರುವ ‘ಬುರ್ಖಾ-ಶಾಲು’ಗಳಿಗೂ, ನಲವತ್ತು ವರ್ಷಗಳ ಹಿಂದಿನ ಕಾರಂತರ ಗರ್ಜನೆ ಮತ್ತು ವಿ.ಎಸ್. ಆಚಾರ್ಯರ ಸಿಟ್ಟಿಗೂ ಸಂಬಂಧಗಳಿಲ್ಲದಿಲ್ಲ. ಇವೆಲ್ಲ ಗೊತ್ತಿದ್ದೂ ನಮಗಿಷ್ಟದ ಬಣ್ಣಗಳ ‘ರಾಜಕೀಯ ಬುರ್ಖಾ’ ಧರಿಸಿ ಬೆತ್ತಲಾಗಲು ನಮಗೇಕೆ ಸ್ವಲ್ಪವೂ ನಾಚಿಕೆಯೆನ್ನಿಸುವುದಿಲ್ಲ? 

‘ಬುರ್ಖಾ-ಶಾಲು’ ಸಮರದಲ್ಲಿ ಯಾರದು ಸರಿ ಯಾರದು ಸರಿಯಲ್ಲ ಎಂಬುದರ ಬಗ್ಗೆ ಸಾವಿರಾರು ಫತ್ವಾಗಳನ್ನು ನಾವು ಈಗಾಗಲೇ ಓದಿ ಆನಂದಿಸಿದ್ದೇವೆ. ಅಂಥವುಗಳಿಗೆ ಹೊಸದಾಗಿ ಮೂರು ‘ಫತ್ವಾ’ಗಳನ್ನು ಜೋಡಿಸಿಕೊಂಡರೆ ನಮ್ಮ ಆನಂದ ಹೆಚ್ಚಾಗಬಹುದು. ಆದ್ದರಿಂದ ‘ಓದಿರಿ’.

ಫತ್ವಾ- 1
ಇದೀಗ ಅಂತಿಮ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ನಮ್ಮದೇ ಗಂಡು ಮತ್ತು ಹೆಣ್ಣು ಮಕ್ಕಳನ್ನು, ‘ಕಪ್ಪು-ಕೇಸರಿ’ ಬಣ್ಣಗಳ ಯುದ್ಧದಲ್ಲಿ ಸೈನಿಕರಂತೆ ಬಳಸಿಕೊಳ್ಳುವ ನಮ್ಮ ರಾಕ್ಷಸಿ ಪ್ರವೃತ್ತಿಗೆ, ಕನಿಷ್ಠ ಮೂರು ತಿಂಗಳ ಕಾಲದ ‘ಸಮರ ವಿರಾಮ’ವನ್ನು ನಮಗೆ ನಾವೇ ತಕ್ಷಣ ಘೋಷಿಸಿಕೊಳ್ಳಬೇಕು.

ಫತ್ವಾ- 2
ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಸಾಕಷ್ಟು ಮುನ್ನವೇ, ನಮ್ಮೆಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಶಿಕ್ಷಣ ಸಂಸ್ಥೆಗಳು, ತಮ್ಮೆಲ್ಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಕೇಸರಿ- ಹಸಿರು ಬಣ್ಣಗಳಿಗೆ ಹೊರತಾದ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸಾರ್ವಜನಿಕ ಪ್ರಕಟಣೆಗಳನ್ನು ನೀಡಬೇಕು.

ಫತ್ವಾ- 3
ಶಾಲಾ ತರಗತಿಗಳ ಒಳಗೆ (ಗಮನಿಸಿ: ಶಾಲಾ ತರಗತಿಗಳ ಒಳಗೆ) ನಿಗದಿತ ಶಾಲಾ ಸಮವಸ್ತ್ರವನ್ನು ಧರಿಸುವ ಕರಾರುಗಳಿಗೆ ಲಿಖಿತವಾಗಿ ಸಮ್ಮತಿಸದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶಾಲಾ ಪ್ರವೇಶವನ್ನು ಹಾಗೂ ಹಾಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶಾಲಾ ಕಲಿಕೆಯ ಮುಂದುವರಿಕೆಯ ಅವಕಾಶಗಳನ್ನು ಶಿಕ್ಷಣ ಸಂಸ್ಥೆಗಳು ನಿರ್ದಾಕ್ಷಿಣ್ಯವಾಗಿ ನಿರಾಕರಿಸಬೇಕು.

ಫತ್ವಾ- 4
ದಯವಿಟ್ಟು ಯಾರೂ ಸಿಟ್ಟು ಮಾಡಿಕೊಳ್ಳಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.