ನೂತನವಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ಸಾಂಸ್ಕೃತಿಕ ನೀತಿಯನ್ನು ತರಲು ಹೊರಟಿದ್ದನ್ನು ನೋಡಿದರೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ನೀತಿ ಇರಲಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ಹಾಗೆ ಅನ್ನಲು ಕಾರಣವಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನವೇ ಇರಲಿಲ್ಲ. ರೂ 20ರಿಂದ 30 ಕೋಟಿ ಬಿಡುಗಡೆಯಾದರೆ ಅದೇ ಹೆಚ್ಚು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಇಲಾಖೆಯ ಅನುದಾನವನ್ನು ರೂ 200 ಕೋಟಿಗೆ ಏರಿಸಿದರು. ಅಲ್ಲಿಯವರೆಗೆ ಕಡಿಮೆ ಅನುದಾನದಲ್ಲೇ ಕಾರ್ಯಕಲಾಪ ನಡೆಸುತ್ತಿದ್ದ ಅಧಿಕಾರಿಗಳಿಗೆ ಇಷ್ಟೊಂದು ಬೃಹತ್ ಪ್ರಮಾಣದ ಹಣವನ್ನು ಏನು ಮಾಡಬೇಕೆಂದೇ ತೋಚಿರಲಿಕ್ಕಿಲ್ಲ.
ಇಷ್ಟೊಂದು ಹಣವನ್ನು ಪಡೆಯಲು ನಾಯಿಕೊಡೆಗಳಂತೆ ಹಲವು ಸಂಸ್ಥೆಗಳೂ ತಲೆ ಎತ್ತಿದವು. ನೋಂದಣಿಯಾಗಿ ಮೂರು ವರ್ಷ ಪೂರೈಸಿದ ಸಂಸ್ಥೆಗಳಿಗೆ ವಾರ್ಷಿಕ ಅನುದಾನವನ್ನು ನಿಗದಿ ಮಾಡುವ ಕ್ರಮವೇ (ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ವೈಯಕ್ತಿಕ ಹಿತಾಸಕ್ತಿಗಳೂ ಪ್ರಭಾವ ಬೀರುತ್ತವೆ) ಸರಿ ಇಲ್ಲ. ಆ ಸಂಸ್ಥೆಯು ಕೈಗೊಳ್ಳುವ ಕಾರ್ಯಕ್ರಮದ ಗುಣಮಟ್ಟವನ್ನು ನೋಡಿಯೇ ಅನುದಾನವನ್ನು ನೀಡುವ ಕ್ರಮ ಜಾರಿಗೆ ಬರಬೇಕು. ಬೆಂಗಳೂರು, ಧಾರವಾಡ ಸೇರಿದಂತೆ ಹಲವು ನಗರಗಳಲ್ಲಿರುವ ಸಂಸ್ಥೆಗಳು ಕಾಗದದಲ್ಲಿ ಮಾತ್ರ ಕಾರ್ಯಕ್ರಮ ಆಯೋಜಿಸಿದ್ದನ್ನು ತೋರಿಸುತ್ತವೆ. ವಾಸ್ತವವಾಗಿ ಇಲಾಖೆಯಿಂದ ಹಣ ಪಡೆಯುವುದನ್ನೇ ಮುಖ್ಯ ಧ್ಯೇಯ ಮಾಡಿಕೊಂಡ ಇಂತಹ ಲೆಟರ್‌ಹೆಡ್ ಸಂಸ್ಥೆಗಳಿಂದ ಸಂಸ್ಕೃತಿ ಬೆಳವಣಿಗೆ ಸಾಧ್ಯವಿಲ್ಲ.
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯಗಳು ವಿವಿಧ ಬಗೆಯ ಪುಸ್ತಕಗಳನ್ನು ಪ್ರಕಟಿಸುತ್ತವೆ. ಇದು ಸರಿಯಲ್ಲ. ಒಂದೇ ಸಂಸ್ಥೆ ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನು ಹೊರಬೇಕು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂಬ ಸಂಸ್ಥೆ ಇದೆ. ಕನ್ನಡದ ಬೆಳವಣಿಗೆಗೆಂದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಹಾಗಾಗಿ ಈಗಲಾದರೂ ನಿರ್ದೇಶನಾಲಯದ ಹೆಸರಿನಲ್ಲಿ `ಕನ್ನಡ' ಶಬ್ದವನ್ನು ತೆಗೆದು `ಸಂಸ್ಕೃತಿ ನಿರ್ದೇಶನಾಲಯ' ಎಂದು ಮರುನಾಮಕರಣ ಮಾಡಬಹುದು.
ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ನಡೆಸುವ ಕಾರ್ಯಕ್ರಮಗಳಲ್ಲಿ ಹಾಡುವ, ನೃತ್ಯ ಮಾಡುವ ಅಥವಾ ಕಲಾಕೃತಿಗಳನ್ನು ರಚಿಸುವ ಕಲಾವಿದರಿಗೆ ಲಕ್ಷಾಂತರ ರೂಪಾಯಿ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ. ಇಲಾಖೆ ಇಂತಹ ದುಂದುವೆಚ್ಚದ ಕ್ರಮಗಳನ್ನು ಬೆಂಬಲಿಸಬಾರದು. ಇನ್ನು, ಸರ್ಕಾರ ನೀಡುವ ಬಸವ, ಪಂಪ ಮತ್ತಿತರ ಪ್ರಶಸ್ತಿಗಳನ್ನು 3-4 ವರ್ಷಗಳಿಗೊಮ್ಮೆ ನೀಡುತ್ತದೆ. ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡುವ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಇದಕ್ಕಾಗಿ ಇಲಾಖೆಯು ಆ ವರ್ಷದಲ್ಲಿ ಮಾಡಲೇಬೇಕಾದ ಸಭೆಗಳು, ಪ್ರಕಟಣೆಗಳು ಹಾಗೂ ಸಮಾರಂಭಗಳನ್ನು ಮಾಡಲು ವೇಳಾಪಟ್ಟಿಯನ್ನು ರಚಿಸಿ ಅದರಂತೆ ನಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.